ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳದಲ್ಲಿ ಭರವಸೆಯ ಹೆಜ್ಜೆ...

Last Updated 4 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಈಚೆಗೆ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಈಜುಕೊಳದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜು ಈಜು ಕೂಟ ನಡೆದಿತ್ತು. ಎಲ್ಲ ಸ್ಪರ್ಧೆಗಳು ಮುಗಿದಾಗ ಈಜುಪಟುಗಳಿಗೆ ಹಾಗೂ ಕೋಚ್‌ಗಳಿಗೆ ನಿರಾಸೆ ಕಾಡಿತ್ತು. ಯಾಕೆಂದರೆ ಅಂತರ ವಿವಿ ಕೂಟದಲ್ಲಿ ಪಾಲ್ಗೊಳ್ಳುವ ತಂಡದ ಆಯ್ಕೆಗೆ ನಿಗದಿ ಮಾಡಿದ ‘ಗುರಿ’ ತಲುಪಲು ಬಹುತೇಕ ಈಜುಪಟುಗಳು ವಿಫಲರಾಗಿದ್ದರು. ಆದರೆ ಮತ್ತೊಂದು ಕಡೆ ಭರವಸೆಯ ಆಶಾಕಿರಣ ಮೂಡಿಸಿದ್ದರು ಈ ಭಾಗದ ಎಳೆಯ ಈಜುಪಟುಗಳು.

ಶಾಲಾ ವಿದ್ಯಾರ್ಥಿಗಳ ಅಂತರ ಜಿಲ್ಲಾ ಈಜುಕೂಟಕ್ಕೆ ಸಜ್ಜಾಗುತ್ತಿರುವ ಇಲ್ಲಿನ ಎಳೆಯ ಈಜುಪಟುಗಳು ಕೆಲವು ತಿಂಗಳಿಂದ ಉತ್ತಮ ಸಾಧನೆ ತೋರುತ್ತಿರುವುದು ಅವರ ಕೋಚ್‌ಗಳಲ್ಲಿ ಭರವಸೆ ಮೂಡಿಸಿದೆ. ಬೆಂಗಳೂರು, ಮೈಸೂರಿನ ಆಧಿಪತ್ಯ ಹೊಂದಿರುವ ಈಜಿನಲ್ಲಿ ಉತ್ತರ ಕರ್ನಾಟಕಕ್ಕೆ ಇಲ್ಲಿಯವರೆಗೆ ಗೌರವ ತಂದುಕೊಟ್ಟಿರುವುದು ಬೆಳಗಾವಿ ಜಿಲ್ಲೆ. ಈ ದಾಖಲೆಯನ್ನು ಮುರಿದು ಈಜು ಕ್ಷೇತ್ರದಲ್ಲಿ ಹೊಸ ಹೆಜ್ಜೆ ಗುರುತು ಮೂಡಿಸಲು ಇತರ ಜಿಲ್ಲೆಗಳು ಕೂಡ ಈಗ ಪೈಪೋಟಿಗೆ ಬಿದ್ದಿವೆ. ಈ ಭಾಗದ ಕೆಲವು ಜಿಲ್ಲೆಗಳಲ್ಲಿ ಹೊಸದಾಗಿ ಸುಸಜ್ಜಿತ ಈಜುಕೊಳ ನಿರ್ಮಾಣಗೊಂಡಿರುವುದು ಅವರ ನಿರೀಕ್ಷೆಯನ್ನು ಹೆಚ್ಚಿಸಿದೆ.

ರಾಜ್ಯಮಟ್ಟದ ಅಂತರ ಶಾಲಾ ಈಜುಕೂಟಗಳಲ್ಲಿ ಬೆಂಗಳೂರು–ಮೈಸೂರು ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯ ಮಕ್ಕಳು ಸಾಧನೆ ಮಾಡುತ್ತಾರೆ. ರಾಜ್ಯ ತಂಡಕ್ಕೆ ಆಯ್ಕೆಯೂ ಆಗುತ್ತಾರೆ. ಹುಬ್ಬಳ್ಳಿಯಿಂದ ಕಳೆದ ಬಾರಿ ನಿವೇದಿತಾ ದಯಾನಂದ ಕೋಟಿ ಮತ್ತು ಋತ್ವಿಕಾ ಹುಲ್ಲೂರ ಅವರನ್ನು ಬಿಟ್ಟರೆ ರಾಜ್ಯ ತಂಡಕ್ಕೆ ಈ ಭಾಗದಿಂದ ಬೇರೆ ಯಾರೂ ಆಯ್ಕೆಯಾಗಲಿಲ್ಲ. ಈ ಬಾರಿ ಧಾರವಾಡ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದವರ ಪೈಕಿ ಹುಬ್ಬಳ್ಳಿಯವರದೇ ಬಹುಪಾಲು. ಇವರಿಗೆ ಈಗ ನಿರಂತರ ತರಬೇತಿ ನೀಡಲಾಗುತ್ತಿದೆ.

ಉತ್ತರ ಕರ್ನಾಟಕದಲ್ಲಿ ಸುಸಜ್ಜಿತ, 50 ಮೀಟರ್ಸ್ ಉದ್ದದ ಲೇನ್‌ ಒಳಗೊಂಡ ಈಜುಕೊಳ ಇರುವುದು ಹುಬ್ಬಳ್ಳಿ, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಮಾತ್ರ. ಹಾವೇರಿ ಜಿಲ್ಲೆಯ ಹಾನಗಲ್‌ ಮತ್ತು ರಾಣೆಬೆನ್ನೂರು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮುಂತಾದ ಪಟ್ಟಣಗಳಲ್ಲೂ ಈಚೆಗೆ ಈಜುಕೊಳಗಳು ನಿರ್ಮಾಣವಾಗಿವೆ. ಇದರಿಂದ ಭರವಸೆ ಮೂಡಿದೆ. ಬೆಳಗಾವಿಯ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಸುಸಜ್ಜಿತ ಈಜುಕೊಳಗಳನ್ನು ಹೊಂದಿವೆ. ಆ ನಗರದಲ್ಲಿ ಒಟ್ಟು ಎಂಟು ಈಜುಕೊಳಗಳು ಇವೆ.

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಮಹಾನಗರ ಪಾಲಿಕೆಯ ತಲಾ ಒಂದೊಂದು ಈಜುಕೊಳ ಇದ್ದರೂ ಹುಬ್ಬಳ್ಳಿಯದಷ್ಟೇ ಸುಸ್ಥಿತಿಯಲ್ಲಿದೆ. ಖಾಸಗಿ ಸಂಸ್ಥೆ ನಡೆಸುವ ಕೊಳವೊಂದು ಎಪಿಎಂಸಿ ಬಳಿ ಇದೆ. ಇದರ ಸದುಪಯೋಗ ಪಡೆದುಕೊಳ್ಳುವ ಇರಾದೆಯಲ್ಲಿ ಕೋಚ್‌ಗಳು ಮಕ್ಕಳಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದ್ದಾರೆ.

‘ಪಾಲಿಕೆ ಈಜುಕೊಳದಲ್ಲಿ ಇಲ್ಲಿಯವರೆಗೆ ಸಮಸ್ಯೆ ಇತ್ತು. ಈಗ ಇದು ಸುಸ್ಥಿತಿಗೆ ಬಂದಿದೆ. ಸಾರ್ವಜನಿಕರು ಕೂಡ ಬರುವುದರಿಂದ ಸ್ವಲ್ಪ ತೊಂದರೆಯಾಗುತ್ತಿದ್ದರೂ ಸಮಯ ಹೊಂದಿಸಿಕೊಂಡು ಕಠಿಣ ಅಭ್ಯಾಸ ಮಾಡಿಸಲಾಗುತ್ತಿದೆ. ಇದಕ್ಕೆ ಫಲ ಸಿಕ್ಕಿದ್ದು ಎರಡು ತಿಂಗಳಿಂದ ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಗುರಿ ತಲುಪುತ್ತಿದ್ದಾರೆ’ ಎಂದು ಹೇಳುತ್ತಾರೆ ಕೋಚ್‌ ನಿತಿನ್ ದೇಸಾಯಿ.

‘ಈಜು ಕ್ರೀಡೆ ಈ ಭಾಗದಲ್ಲಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಹೀಗಾಗಿ ಸ್ಪರ್ಧೆಯೂ ಹೆಚ್ಚುತ್ತಿದೆ. ಒಂದೆರಡು ವರ್ಷಗಳಲ್ಲಿ ಆಗಿರುವ ಬೆಳವಣಿಗೆಗಳ ಫಲ ಈ ವರ್ಷದ ರಾಜ್ಯ ಕೂಟದಲ್ಲಿ ಕಂಡುಬರಲಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸುತ್ತಾರೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT