ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯ ಮೊದಲ ಹೆಜ್ಜೆ...

Last Updated 4 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಹಾಕ್‌ ಐ ತಂತ್ರಜ್ಞಾನ ಬಳಕೆ ಕೈ ಬಿಟ್ಟರೆ ಅಂಪೈರ್ ತೀರ್ಪು ಪರಿಶೀಲನಾ ನಿಯಮವನ್ನು ಒಪ್ಪಿಕೊಳ್ಳಲು ನಮಗೆ ಅಡ್ಡಿಯೇನಿಲ್ಲ..’ ಹೋದ ವಾರ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಅನುರಾಗ್‌ ಠಾಕೂರ್‌ ಅವರು ಹೀಗೊಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.

ಏಕೆಂದರೆ ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಎನಿಸಿರುವ ಬಿಸಿಸಿಐ ತನಗೆ ಅನ್ನಿಸಿದ್ದನ್ನು ನಿರ್ಭೀತಿಯಿಂದ ಮಾಡುತ್ತದೆ. ತಾನು ಮಾಡಿದ್ದನ್ನು ವಿಶ್ವದ ಎಲ್ಲಾ ಕ್ರಿಕೆಟ್‌ ಮಂಡಳಿಗಳು ಒಪ್ಪಿಕೊಳ್ಳ ಬೇಕೆಂದು ಬಯಸುತ್ತದೆ. ಹಿಂದೆ ಶರದ್‌ ಪವಾರ್‌ ಹಾಗೂ ಎನ್‌. ಶ್ರೀನಿವಾಸನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮುಖ್ಯಸ್ಥ ಸ್ಥಾನದ ಹುದ್ದೆಗಳಲ್ಲಿದ್ದಾಗ ಭಾರತದ ಕ್ರಿಕೆಟ್‌ ಮಂಡಳಿ ಆನೆ ನಡೆದದ್ದೇ ದಾರಿ ಎನ್ನುವಂತೆ ಸಾಗುತ್ತಿತ್ತು. ಅಷ್ಟರ ಮಟ್ಟಕ್ಕೆ ವಿಶ್ವ ಕ್ರಿಕೆಟ್‌ನ ದೊಡ್ಡಣ್ಣ ಭಾರತ ಐಸಿಸಿಯಲ್ಲೂ ಅಧಿಪತ್ಯ ಸಾಧಿಸಿದೆ.

ಆದರೆ ಠಾಕೂರ್ ಅವರ ಈ ಹೇಳಿಕೆ ಮತ್ತು ಒಂದು ವರ್ಷದಿಂದ ಬಿಸಿಸಿಐ ಆಡಳಿತದಲ್ಲಿ ಆಗುತ್ತಿರುವ ಬದಲಾವಣೆ ಗಳನ್ನು ಗಮನಿಸಿದರೆ ಭಾರತದ ಕ್ರಿಕೆಟ್‌ ಆಡಳಿತದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎನ್ನುವುದು ಸ್ಪಷ್ಟ. ಇದರ ಹಿಂದೆ ಲೋಧಾ ಸಮಿತಿಯ ಬ್ರಹ್ಮಾಸ್ತ್ರವಿದೆ.

ಭಾರತದ ಮೇಲೆಯೇ ಮೊದಲ ಪ್ರಯೋಗ
ಟೆಸ್ಟ್ ಮಾದರಿಯ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಡಿಆರ್‌ಎಸ್‌ ನಿಯಮವನ್ನು ಜಾರಿಗೆ ತರುವ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದ ದಿನಗಳವು. 2008ರಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಣ  ಟೆಸ್ಟ್‌ನಲ್ಲಿ ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಡಿಆರ್‌ಎಸ್‌ ಬಳಕೆ ಮಾಡಲಾಯಿತು. ನಂತರದ ವರ್ಷದಲ್ಲಿಯೇ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಣ  ಟೆಸ್ಟ್ ವೇಳೆ ಹೊಸ ನಿಯಮ ಅಳವಡಿಸಲಾಯಿತು.

ಈ ಟೆಸ್ಟ್ ವೇಳೆ ಹಲವು ಗೊಂದಲಗಳು ಉಂಟಾದ ಕಾರಣ ಐಸಿಸಿ 2012 ಮತ್ತು 2013ರಲ್ಲಿ ಕೆಲ ಬದಲಾವಣೆಗಳನ್ನೂ ಮಾಡಿತ್ತು. ಆದರೂ ಈ ನಿಯಮ ಒಪ್ಪಿಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಮಹೇಂದ್ರ ಸಿಂಗ್ ದೋನಿ ಅವರು ಟೆಸ್ಟ್ ತಂಡದ ನಾಯಕರಾಗಿದ್ದಾಗ ‘ಡಿಆರ್‌ಎಸ್‌ನಲ್ಲಿ ಸಾಕಷ್ಟು ದೋಷಗಳಿವೆ’ ಎಂದು ಹೇಳಿ ಒಂದೇ ಮಾತಿನಲ್ಲಿ ಹೊಸ ನಿಯಮ ತಿರಸ್ಕರಿಸಿದ್ದರು. ಅಷ್ಟೇ ಅಲ್ಲ, ‘ಮನುಷ್ಯರ ಯೋಚನೆಗಳ ಜೊತೆ ತಂತ್ರಜ್ಞಾನವನ್ನು ಕಲಬೆರಕೆ ಮಾಡುವುದು ಕೆಟ್ಟದ್ದು’ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಟೆಸ್ಟ್‌ನಿಂದ ನಿವೃತ್ತಿಯಾಗುವ ಕೆಲ ದಿನಗಳ ಮೊದಲೂ ದೋನಿ ಹೊಸ ನಿಯಮದ ವಿರುದ್ಧವೇ ಮಾತನಾಡಿದ್ದರು.

ನಾಯಕನ ಮಾತಿಗೆ ‘ಬೆಲೆ’ ಕೊಟ್ಟ ಆಗಿನ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಕಿಂಚಿತ್ತೂ ಯೋಚನೆ ಮಾಡದೇ ‘ದೋನಿ ಹೇಳಿದ್ದೇ ಸರಿ’ ಎಂದರು. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್‌ ಅವರು ‘ಡಿಆರ್‌ಎಸ್‌ ಜಾರಿಗೆ ಬರುವುದಾದರೆ ಅಂಪೈರ್‌ಗಳು ಏಕೆ ಬೇಕು. ಇದು ಅಂಪೈರ್‌ಗಳಿಗೆ ಮಾಡುತ್ತಿರುವ ಅವಮಾನ’ ಎಂದು ಷರಾ ಬರೆದುಬಿಟ್ಟರು. ಡಿಆರ್‌ಎಸ್‌ ಎನ್ನುವುದು ಐಸಿಸಿಯ ದೊಡ್ಡ ಜೋಕ್ ಎಂದು ಅನೇಕ ಕ್ರಿಕೆಟಿಗರು ವ್ಯಂಗವಾಡಿದ್ದರು.

ಕ್ರಿಕೆಟ್‌ ಜಗತ್ತಿನ ದೊಡ್ಡಣ್ಣ ಬೇಡವೆಂದ ಮೇಲೆ ಬೇರೆ ದೇಶಗಳ ಕ್ರಿಕೆಟ್‌ ಮಂಡಳಿಗಳೂ ಇದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದ್ದರಿಂದ ಡಿಆರ್‌ಎಸ್‌ ಬಗ್ಗೆ ಜನರಿಗೆ ಹೆಚ್ಚಾಗಿ ಗೊತ್ತಾಗಲೇ ಇಲ್ಲ. ಆದರೆ ಈಗ ಬಿಸಿಸಿಐ ಅಷ್ಟೇನು ಮಹತ್ವವಲ್ಲದ ಷರತ್ತನ್ನು ಮುಂದಿಟ್ಟು ಹೊಸ ನಿಯಮ ಅಳವಡಿಸಿಕೊಳ್ಳಲು ಆಸಕ್ತಿ ತೋರಿದ್ದು ಮಹತ್ವದ ಬೆಳವಣಿಗೆ.

ವಿರಾಟ್‌ ಕೊಹ್ಲಿ ಮುನ್ನುಡಿ
2014ರಲ್ಲಿ ವಿರಾಟ್‌ ಕೊಹ್ಲಿ ಟೆಸ್ಟ್ ತಂಡದ ನಾಯಕರಾದ ಬಳಿಕ ಮೊದಲು ಹೇಳಿದ ಮಾತೇನು  ಗೊತ್ತೇ? ‘ಡಿಆರ್‌ಎಸ್‌ ಇರಲಿ’ ಎಂದಿದ್ದರು. ನಂತರದ ವರ್ಷದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಅವರು ಹೊಸ ನಿಯಮದ ಪರ ಒಲವು ತೋರಿದ್ದರು. ಆದ್ದರಿಂದ ಅನುರಾಗ್‌ ಠಾಕೂರ್ ಕೂಡ ಈಗ ಇದರತ್ತ ಆಸಕ್ತಿ ತೋರುತ್ತಿದ್ದಾರೆ.

ಲೋಧಾ ಬ್ರಹ್ಮಾಸ್ತ್ರ
ಒಂದು ವರ್ಷದ ಹಿಂದೆಯಷ್ಟೇ ಬಿಸಿಸಿಐ ಮತ್ತು ಐಸಿಸಿ ಎರಡಕ್ಕೂ ಮುಖ್ಯಸ್ಥರಾಗಿದ್ದ ಶಶಾಂಕ್‌ ಮನೋಹರ್ ಅವರು ಭಾರತದ ಕ್ರಿಕೆಟ್‌್ ಆಡಳಿತದಲ್ಲಿ ಬದಲಾವಣೆಯ ಮುನ್ನುಡಿ ಬರೆದಿದ್ದಾರೆ.

ಸುಪ್ರೀಂಕೋರ್ಟ್‌ ರಚಿಸಿದ್ದ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಒಬ್ಬರೇ ಎರಡು ಕಡೆ ಒಂದೇ ಬಾರಿ ಕ್ರಿಕೆಟ್‌ ಆಡಳಿತದಲ್ಲಿ ಇರುವಂತಿಲ್ಲ ಎನ್ನುವ ನಿಯಮವಿದೆ.ಎಲ್ಲಾ ಪ್ರತಿಭಾವಂತ ಕ್ರಿಕೆಟಿಗನಿಗೂ ಅವಕಾಶ ಲಭಿಸಬೇಕು. ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೂ ಸಮನಾಗಿ ಅನುದಾನ ಹಂಚಿಕೆಯಾಗಬೇಕು. ಬಿಸಿಸಿಐನ ದೊಡ್ಡ ಆದಾಯ ಮೂಲವಾಗಿರುವ ಜಾಹೀರಾತು ಮತ್ತು ಕ್ರಿಕೆಟ್‌ ಪಂದ್ಯಗಳ ಪ್ರಸಾರದ ಹಕ್ಕಿನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಲೋಧಾ ಸಮಿತಿ ಹೇಳಿದೆ.

ಆದ್ದರಿಂದ ಶಶಾಂಕ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಐಸಿಸಿ ಮುಖ್ಯಸ್ಥರಾಗಿ ಮುಂದುವರಿದಿದ್ದಾರೆ. ವಿಶ್ವ ಕ್ರಿಕೆಟ್‌ನ ಮುಖ್ಯಸ್ಥ ಸ್ಥಾನದಲ್ಲಿರುವ ಶಶಾಂಕ್ ಅವರು ಅನುದಾನ ಮತ್ತು ಕ್ರಿಕೆಟ್ ಟೂರ್ನಿಗಳು ಎಲ್ಲಾ ದೇಶಗಳಿಗೂ ಸಮನಾಗಿ ಹಂಚಿಕೆಯಾಗಬೇಕು ಎಂದು ತಾಕೀತು ಮಾಡಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿರುವ ಹಾಂಕಾಂಗ್‌, ಕೆನ್ಯಾ, ಆಫ್ಘಾನಿಸ್ತಾನ, ನಮೀಬಿಯಾಗಳಂಥ ಹೊಸ ತಂಡಗಳ ಮೇಲೂ ಬಲಿಷ್ಠ ತಂಡಗಳು ಪಂದ್ಯಗಳನ್ನಾಡಬೇಕೆಂದು ಐಸಿಸಿ ಹೇಳಿದೆ. ಅಮೆರಿಕದಲ್ಲಿಯೂ ಕ್ರಿಕೆಟ್ ಗಟ್ಟಿನೆಲೆ ಕಂಡುಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ ಮಾಸ್ಟರ್ಸ್‌ ಕ್ರಿಕೆಟ್‌ ಲೀಗ್ ನಡೆದಿತ್ತು. ಹೋದ ವಾರ ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಣ ಎರಡು ಟ್ವೆಂಟಿ–20 ಪಂದ್ಯಗಳನ್ನು ಫ್ಲಾರಿಡಾದಲ್ಲಿ ಇದೇ ಕಾರಣಕ್ಕಾಗಿ ಆಯೋಜಿಸಲಾಗಿತ್ತು.ಈ ಹೊಸ ಬದಲಾವಣೆಗಳಿಗೆ ಬಿಸಿಸಿಐ ಕೂಡ ಒಗ್ಗಿಕೊಳ್ಳುತ್ತಿದೆ. ಈಗ ಗ್ರೇಟರ್‌ ನೊಯ್ಡಾದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ ಕೂಡ ಇದಕ್ಕೆ ಸಾಕ್ಷಿ.

ಹೊಸ ಪ್ರಯೋಗಕ್ಕೆ ಮೊದಲ ಪರೀಕ್ಷೆ
ಟೆಸ್ಟ್‌ ಪಂದ್ಯಗಳು ಹೆಚ್ಚು ಆಕರ್ಷಕವಾಗಿ ಕಾಣಲು ಮತ್ತು ಅಭಿಮಾನಿಗಳನ್ನು ಸೆಳೆಯುವ ಸಲುವಾಗಿ ಐಸಿಸಿ ಗುಲಾಬಿ ಬಣ್ಣದ ಚೆಂಡಿನಲ್ಲಿ ಹೊನಲು ಬೆಳಕಿನಲ್ಲಿ ಟೆಸ್ಟ್‌ ನಡೆಸಲು ಯೋಜನೆ ರೂಪಿಸಿತ್ತು.

ಹೋದ ವರ್ಷ ಅಡಿಲೇಡ್‌ ಓವಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ನಡುವೆ ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಟೆಸ್ಟ್ ನಡೆಸಲಾಗಿತ್ತು. ಇದಕ್ಕೂ ಮೊದಲು ಅನೇಕ ಪ್ರಥಮ ದರ್ಜೆ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆದಿವೆ. ಆದರೆ ಟೆಸ್ಟ್‌ ನಡೆದಿರಲಿಲ್ಲ.

ಇದೇ ತಿಂಗಳ 22ರಿಂದ ಅಕ್ಟೋಬರ್‌ 12ರ ವರಗೆ ಕಾನ್ಪುರ, ಕೋಲ್ಕತ್ತ ಮತ್ತು ಇಂದೋರ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಒಂದು ಪಂದ್ಯವನ್ನು ಹೊನಲು ಬೆಳಕಿನಲ್ಲಿ ನಡೆಸಲು ಬಿಸಿಸಿಐ ಮೊದಲು ಯೋಜಿಸಿತ್ತಾದರೂ ನಂತರ ಕೈಬಿಟ್ಟಿದೆ.

ಆದರೆ ಮುಂದಿನ ದಿನಗಳಲ್ಲಿ ಹೊನಲು ಬೆಳಕಿನಲ್ಲಿ ಟೆಸ್ಟ್ ಪಂದ್ಯ ನಡೆಸಲು ಬಿಸಿಸಿಐ ಒಲವು ತೋರಿದೆ. ಇದಕ್ಕೆ ಪೂರಕವಾಗಿ ಮೊದಲ ಬಾರಿಗೆ ದುಲೀಪ್‌ ಟ್ರೋಫಿಯನ್ನು ಗುಲಾಬಿ ಬಣ್ಣದ ಚೆಂಡಿನಲ್ಲಿ ಹೊನಲು ಬೆಳಕಿನಲ್ಲಿ ನಡೆಸುತ್ತಿದೆ.

2016–17ರ ದುಲೀಪ್‌ ಟ್ರೋಫಿ ಮಾದರಿಯಲ್ಲಿಯೂ ಬದಲಾವಣೆ ಮಾಡಿದೆ. ಪ್ರತಿವರ್ಷ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ವಲಯದ ತಂಡಗಳು ಟೂರ್ನಿಯಲ್ಲಿ ಆಡುತ್ತಿದ್ದವು. ಈ ಬಾರಿ ಇಂಡಿಯಾ ಬ್ಲ್ಯೂ, ಇಂಡಿಯಾ ರೆಡ್‌ ಮತ್ತು ಇಂಡಿಯಾ ಗ್ರೀನ್ ತಂಡಗಳು (ಎನ್‌ಕೆಪಿ ಸಾಳ್ವೆ ಚಾಲೆಂಜರ್‌ ಟ್ರೋಫಿಯಲ್ಲಿ ಆಡುತ್ತಿದ್ದ ತಂಡಗಳು) ಮೊದಲ ಬಾರಿಗೆ ದುಲೀಪ್‌ ಟ್ರೋಫಿಯಲ್ಲಿ ಕಾಣಿಸಿಕೊಂಡಿವೆ. ಫಾರ್ಮುಲಾ ಒನ್ ರ್‍ಯಾಲಿಯ ಚುಟುವಟಿಕೆ ಗಳಿಗೆ ಹೆಸರಾಗಿರುವ ಗ್ರೇಟರ್ ನೊಯ್ಡಾದಲ್ಲಿ ಈ ಟೂರ್ನಿ ಆಯೋಜಿಸಿರುವುದು ಮತ್ತೊಂದು ವಿಶೇಷ.

ದುಲೀಪ್‌ ಟ್ರೋಫಿಯಲ್ಲಿ ಬದಲಾವಣೆ ಮಾಡುವ ಮೂಲಕ ಬಿಸಿಸಿಐ ಹೊಸ ಆಟ ಗಾರರಿಗೆ ಹೆಚ್ಚು ಅವಕಾಶ ಕೊಟ್ಟಿದೆ. ಕಿವೀಸ್‌ ವಿರುದ್ಧದ ಸರಣಿಗೆ ಆಟಗಾರರನ್ನು ಆಯ್ಕೆ ಮಾಡಲು ಈ ಟೂರ್ನಿ ವೇದಿಕೆಯೂ ಆಗಿದೆ. ಹೀಗೆ ಹೊಸ ಪ್ರಯೋಗ ಮತ್ತು ಬದಲಾವಣೆಗೆ ಒಗ್ಗಿಕೊಳ್ಳುವ ಹಾದಿಯಲ್ಲಿ ‘ವಿಶ್ವದ ದೊಡ್ಡಣ್ಣ’ ಹೊಸ ಹೆಜ್ಜೆಗಳನ್ನು ಇಟ್ಟಿದೆ.

ವಿದೇಶಿ ತಂಡಗಳೂ ಆಡಿದ್ದವು
ದುಲೀಪ್ ಟ್ರೋಫಿಯಲ್ಲಿ ಇದುವರೆಗೂ ಐದು ವಿದೇಶಿ ತಂಡಗಳು ಆಡಿವೆ. 2003–04 ರ ಋತುವಿನಲ್ಲಿ ಇಂಗ್ಲೆಂಡ್ ‘ಎ’ ತಂಡ ಈ ಟೂರ್ನಿಯಲ್ಲಿ ಆಡಿತ್ತು. ಈ ಮೂಲಕ ದುಲೀಪ್ ಟ್ರೋಫಿಯಲ್ಲಿ ಪಾಲ್ಗೊಂಡಿದ್ದ ಮೊದಲ ವಿದೇಶಿ ತಂಡ ಎನ್ನುವ ಹೆಗ್ಗಳಿಕೆ ಇಂಗ್ಲೆಂಡ್ ಪಡೆದಿದೆ.

ನಂತರ ಬಾಂಗ್ಲಾದೇಶ (2004–05), ಜಿಂಬಾಬ್ವೆ ಕ್ರಿಕೆಟ್‌್ ಅಧ್ಯಕ್ಷರ ಯೂನಿಯನ್‌ ಇಲೆವೆನ್‌ (2005–06), ಶ್ರೀಲಂಕಾ ‘ಎ’ (2006–07) ಮತ್ತು ಇಂಗ್ಲೆಂಡ್‌ ಲಯನ್ಸ್‌ (2007–08) ಆಡಿವೆ. ಆದರೆ ಇದುವರೆಗೂ ಯಾವ ವಿದೇಶಿ ತಂಡವೂ ಫೈನಲ್ ಪ್ರವೇಶಿಸಿಲ್ಲ.

ಹೊಸಬರಿಗೇ ಸಿಗಲಿ ಅವಕಾಶ
ವರ್ಷಪೂರ್ತಿ ಕ್ರಿಕೆಟ್‌ ಚಟುವಟಿಕೆಗಳು ನಡೆಯುತ್ತಲೇ ಇರುವುದರಿಂದ ದುಲೀಪ್ ಟ್ರೋಫಿಗೆ ಮೊದಲಿನ ಮಹತ್ವ ಈಗ ಉಳಿದಿಲ್ಲ. ಈ ಬಾರಿಯ ಟೂರ್ನಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿರುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯುವರಾಜ್‌ ಸಿಂಗ್, ಗೌತಮ್ ಗಂಭೀರ್ ಮತ್ತು ಸುರೇಶ್ ರೈನಾ ಅವರಂಥ ಅನುಭವಿಗಳು ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಆದ್ದರಿಂದ ಹೊಸ ಆಟಗಾರರಿಗೆ  ಅವಕಾಶ ಸಿಗುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಬಿಸಿಸಿಐ ದುಲೀಪ್‌ ಟ್ರೋಫಿಯಲ್ಲಿ ಕೆಲ ಬದಲಾವಣೆ ಮಾಡುವ ಅಗತ್ಯವಿದೆ.

ರಣಜಿ, ಇರಾನಿ, ವಿಜಯ್‌ ಹಜಾರೆ ಮತ್ತು ಮುಷ್ತಾಕ್‌ ಅಲಿ ಅಂಥ ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ದುಲೀಪ್‌ ಟ್ರೋಫಿಗೆ ಆಯ್ಕೆ ಮಾಡಿದರೆ ಹೊಸಬರ ನಡುವೆ ಹೆಚ್ಚು ಪೈಪೋಟಿ ಏರ್ಪಡುತ್ತದೆ. ಮುಂದೆ ರಾಷ್ಟ್ರೀಯ ತಂಡಕ್ಕೆ ಆಟಗಾರರ ಆಯ್ಕೆಯೂ ಸುಗಮವಾಗುತ್ತದೆ.

ಇದರ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ ರಾಜ್ಯ ತಂಡದ ಮಾಜಿ ಆಟಗಾರ ಆನಂದ್‌ ಕಟ್ಟಿ ‘ಎಲ್ಲಾ ವಲಯಗಳ ಆಟಗಾರರು ಒಂದಾಗಿ ಆಡಲು ದುಲೀಪ್ ಟ್ರೋಫಿಯಲ್ಲಿ ಉತ್ತಮ ಅವಕಾಶ ಸಿಗುತ್ತಿತ್ತು. ಹತ್ತು ವರ್ಷಗಳ ಹಿಂದೆ ಈ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯುವುದೇ ಪ್ರತಿಷ್ಠೆಯಾಗಿತ್ತು. ಆದರೆ ಈಗ ಮೊದಲಿನ ಮಹತ್ವ ಉಳಿದಿಲ್ಲ’ ಎಂದು ಹೇಳುತ್ತಾರೆ.

ಆರಂಭವಾಗಿದ್ದು ಹೀಗೆ...
ಪ್ರಥಮ ದರ್ಜೆ ಮಾದರಿಯ ದುಲೀಪ್‌ ಟ್ರೋಫಿ 1961–62ರಲ್ಲಿ ಮೊದಲ ಬಾರಿಗೆ ನಡೆದಿತ್ತು. ಕುಮಾರ್ ದುಲೀಪ್‌ ಸಿನ್ಹಾ ಅವರ ನೆನಪಿನಲ್ಲಿ ಪ್ರತಿವರ್ಷ ಟೂರ್ನಿ ನಡೆಸಲಾಗುತ್ತದೆ. ಉತ್ತರ ವಲಯ ಮತ್ತು ಪಶ್ಚಿಮ ವಲಯ ತಂಡಗಳು ತಲಾ 17 ಸಲ ಪ್ರಶಸ್ತಿ ಜಯಿಸಿದ್ದು ಟೂರ್ನಿಯ ಯಶಸ್ವಿ ತಂಡಗಳು ಎನಿಸಿವೆ.

ಮುಂಬೈನ ವಾಸೀಂ ಜಾಫರ್‌  30 ಪಂದ್ಯಗಳನ್ನಾಡಿದ್ದು ಒಟ್ಟು 2545 ರನ್ ಕಲೆ ಹಾಕಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಉತ್ತರ ಪ್ರದೇಶದ ನರೇಂದ್ರ ಹಿರ್ವಾನಿ 29 ಪಂದ್ಯಗಳಿಂದ 126 ವಿಕೆಟ್‌ ಕಬಳಿಸಿ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 1987–88ರ   ಟೂರ್ನಿಯ ದಕ್ಷಿಣ ವಲಯ ವಿರುದ್ಧದ ಪಂದ್ಯದಲ್ಲಿ ಉತ್ತರ ವಲಯ ತಂಡ ಗಳಿಸಿದ್ದ 868 ರನ್‌ಗಳು ಟೂರ್ನಿಯ ಇದುವರೆಗಿನ ಗರಿಷ್ಠ ಮೊತ್ತದ ದಾಖಲೆ.
   

     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT