ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿನ ಕೋಲಿನ ಬೆಳಕಿನಲ್ಲಿ ದಾರಿ ಅರಸುತ್ತಾ ....

Last Updated 6 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಆಂಗ್ಲಭಾಷೆಯಲ್ಲಿನ  ಪ್ರಸಿದ್ಧವಾದ ನಾಣ್ಣುಡಿ  ‘show me your friends and I'll tell you who you are’. ಒಬ್ಬ ವ್ಯಕ್ತಿಯು ಎಂಥ ಸ್ನೇಹಿತರನ್ನು ಸಂಪಾದಿಸಿದ್ದಾನೆ ಎಂಬುದರಿಂದ ಅವನ ವ್ಯಕ್ತಿತ್ವತಿಳಿಯುತ್ತದೆ. ಹಾಗಾದರೆ ಈ ವ್ಯಕ್ತಿತ್ವ ಎಂದರೇನು? ಒಬ್ಬನ ವ್ಯಕ್ತಿತ್ವ  ಅಷ್ಟು ಸುಲಭವಾಗಿ ಇತರರಿಗೆ  ತಿಳಿದುಬಿಡುತ್ತದೆಯೇ?  ವ್ಯಕ್ತಿತ್ವದ ವಿಕಸನ ಸಾಧ್ಯವೇ? - ಹೀಗೆ ಹತ್ತು ಹಲವು ಪ್ರಶ್ನೆಗಳು ವ್ಯಕ್ತಿತ್ವದ ಬಗ್ಗೆ ಹುಟ್ಟಿಕೊಳ್ಳುತ್ತವೆ.

ಆಸ್ಟ್ರಿಯಾದ ನರಕೋಶತಜ್ಞ ಹಾಗೂ ಸೈಕೋ ಅನಾಲಿಸಿಸ್‌ನ ಜನಕ ಸಿಗ್ಮನ್ಡ್  ಫ್ರಾಯ್ಡ್, ವ್ಯಕ್ತಿತ್ವವನ್ನು ನೀರಿನಲ್ಲಿ ತೇಲುವ ಹಿಮಪರ್ವತಕ್ಕೆ ಹೋಲಿಸುತ್ತಾನೆ. ಹಿಮಪರ್ವತ ನೀರಿನಲ್ಲಿ ತೇಲುವಾಗ, ನೀರಿನ ಮೇಲ್ಭಾಗದಲ್ಲಿ  ತನ್ನ  ಹತ್ತನೇ ಒಂದರಷ್ಟು ಭಾಗವನ್ನು ಮಾತ್ರ ತೋರಿಸಿ, ಉಳಿದ ಹತ್ತು ಪಟ್ಟು ಗಾತ್ರ ನೀರಿನಲ್ಲಿ ಮುಳುಗಿಸಿಟ್ಟಿರುವಂತೆ ಮಾನವನ ವ್ಯಕ್ತಿತ್ವ ಎಂಬುದು ಅವನ ಅಭಿಪ್ರಾಯ. ಹೀಗೆ ಬಹುಭಾಗ ಅಂತರ್ಗತವಾಗಿರುವ ವ್ಯಕ್ತಿತ್ವವು ಅರಿವಿಗೆ ಬರುವುದು ವ್ಯಕ್ತಿಯ ನಡವಳಿಕೆಯಿಂದ.

ಯುವಕರ ನಡವಳಿಕೆಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಮನಸ್ಸನ್ನು ತಿದ್ದಿ, ವ್ಯಕ್ತಿತ್ವವು ಅರಳಿ ಸಮಾಜಮುಖಿಯಾಗುವ ಅಗತ್ಯವನ್ನು ಮೊದಲು ಮನಗಂಡವರು ಸ್ವಾಮಿ ವಿವೇಕಾನಂದರು. ತಮ್ಮ ಸಿಂಹವಾಣಿಯಿಂದ ವಿಶ್ವದ ಜನರನ್ನು ಭಾರತದತ್ತ ನೋಡುವಂತೆ ಮಾಡಿದ ವಿವೇಕಾ ನಂದರು, ಅಷ್ಟೇ ಆಕರ್ಷಕ ಸರಳ ಸೂತ್ರಗಳಿಂದ ಯುವಕರ ಮನಸ್ಸನ್ನು ತಮ್ಮೆಡೆಗೆ ಸೆಳೆದುಕೊಂಡರು. ಅಪಾರವಾದ ಬುದ್ಧಿ ಮತ್ತು ದೈಹಿಕಶಕ್ತಿ ಹ್ರಾಸವಾಗಲು ಬಿಡಬೇಡಿ - ನಿರ್ಭಯರಾಗಿ, ದೃಢರಾಗಿ, ಸಬಲರಾಗಿ, ನೀವು ಕುರಿಗಳು ಎಂಬ ಭ್ರಾಂತಿಯನ್ನು ಕೊಡಹಿ, ಸಿಂಹದಂತೆ ಗರ್ಜಿಸಿ ಎಂದು ಕರೆ ನೀಡಿದರು.

ಮಾತುಗಾರಿಕೆಯಲ್ಲಿ ಆಯಸ್ಕಾಂತೀಯ ಶಕ್ತಿ ಹೊಂದಿದ್ದ ವಿವೇಕಾನಂದರು, ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಕೆಲವು ಸರಳ ಸೂತ್ರಗಳನ್ನು ನೀಡಿದ್ದಾರೆ. ಅವುಗಳ ಅನುಸರಣೆಯಿಂದ ಬಾಳು ಹಸನಾಗಿ ದೇಶೋದ್ಧಾರಕ್ಕೆ ದಾರಿಯಾಗುತ್ತದೆ ಎಂಬುದು ಸ್ವಾಮೀಜಿಯವರ ಅಭಿಪ್ರಾಯ.

ನಿಯಂತ್ರಣ ಸಾಧಿಸಿ
ವಿವೇಕಾನಂದರು ಸಮಾಜೋದ್ಧಾರಕ್ಕೆ ಮೊದಲು ಆತ್ಮೋದ್ಧಾರದ ಕಡೆಗೆ ಮುಖಮಾಡಬೇಕು ಎಂದು ಅಭಿಪ್ರಾಯಪಡುತ್ತಾರೆ. ಭೌತಿಕ, ಮಾನಸಿಕ, ಆಧ್ಯಾತ್ಮಿಕ ಎಂಬ ಜಗತ್ತಿನ ವಿಂಗಡಣೆಯಲ್ಲಿ ಅವರಿಗೆ ನಂಬಿಕೆ ಇಲ್ಲ. ದೃಢವಾಗಿ ಉಬ್ಬಿದ ಮಾಂಸಖಂಡಕ್ಕೆ ಹೇಗೆ ಕಣ್ಣಿಗೆ ಕಾಣದ ಕಣಗಳು ಶಕ್ತಿ ನೀಡುತ್ತವೂ ಹಾಗೆ ಮಾನವನ ನಡವಳಿಕೆಗಳಿಗೆ ಅವನ ಮನಸ್ಸಿನಲ್ಲಿ  ಹುಟ್ಟುವ ಯೋಚನೆಗಳೇ ಕಾರಣ. ಈ ಯೋಚನೆಗಳ ಮೂಲವನ್ನು ಶೋಧಿಸಿ, ಅದರ ಮೇಲೆ ನಮ್ಮ ಹಿಡಿತ ಸಾಧಿಸಿದರೆ, ಅದರಿಂದ ನಮ್ಮ ನಡವಳಿಕೆ ಶುದ್ಧವಾಗಿ, ವ್ಯಕ್ತಿತ್ವ ಪಕ್ವವಾಗುತ್ತದೆ. ಮಣ್ಣಿನ ಮುದ್ದೆಯನ್ನು ಅರಿತವನು ಮಡಿಕೆಯನ್ನು ಅರಿತಂತೆ , ತನ್ನ ಮನಸ್ಸನ್ನು ನಿಯಂತ್ರಿಸಿದವನು ಜಗತ್ತಿನ ಮೇಲೂ ನಿಯಂತ್ರಣ ಸಾಧಿಸುತ್ತಾನೆ ಎನ್ನುತ್ತಾರೆ ವಿವೇಕಾನಂದರು. 

ಮನುಷ್ಯನ ಪಾವಿತ್ರ್ಯ 
ತಾನು ಪಾಪಿ, ಪಾಪ ಕೂಪದಲ್ಲೇ ಹುಟ್ಟಿ ಸಾಯುವುದು ಮನುಷ್ಯನಿಗೆ ಅನಿವಾರ್ಯ ಎಂದು ಬೋಧಿಸುವ ಸೆಮೆಟಿಕ್‌ಮತಗಳ ವಾದವನ್ನು ತಿರಸ್ಕರಿಸುವ ವಿವೇಕಾನಂದರು, ಮನುಷ್ಯನು ಪವಿತ್ರ, ಪರಮಾತ್ಮನನ್ನು ಪ್ರತಿಫಲಿಸುವ ಪರಿಶುದ್ಧ ಗಾಜಿನಂತೆ, ಈ ಗಾಜಿನ ಗಾತ್ರ ಬೇರೆ ಬೇರೆಯಾಗಿರುವ ಕಾರಣ ಅವನು ಪ್ರತಿಫಲಿಸುವ ಬೆಳಕಿನ ಬಣ್ಣದಲ್ಲಿ ವ್ಯತ್ಯಾಸವಿರಬಹುದು; ಆದರೆ, ಆ ಮೂಲ ಬೆಳಕು ಒಂದೇ ಎಂದು ಹೇಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಂತರ್ಗತವಾಗಿರುವ ಪಾವಿತ್ರ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಆ ಪಾವಿತ್ರ್ಯವನ್ನು ಕಂಡುಕೊಂಡು ಅದನ್ನು ಅನುಭವಿಸಿದರೆ ಮಾನವನು ದೈವಕ್ಕೆ ಹತ್ತಿರವಾಗುತ್ತಾನೆ ಎಂಬುದು ಸ್ವಾಮೀಜಿಯವರ ಸ್ಪಷ್ಟ ಅಭಿಪ್ರಾಯ.

ಅಭ್ಯಾಸಗಳು
ಉಪಯೋಗಿಸದಿದ್ದರೂ ಮನೆಯಲ್ಲಿನ ದೀಪಗಳನ್ನು ಉರಿಸುವುದು, ತೊಟ್ಟಿಕ್ಕುವ ಕೊಳಾಯಿಯನ್ನು ಗಮನಿಸದಿರುವುದು, ಸಿಗ್ನಲ್ ದೀಪದಲ್ಲಿ ವಾಹನದ ಎಂಜಿನ್ನನ್ನು ಚಾಲನೆಯಲ್ಲಿಡುವುದು – ಇವೆಲ್ಲಾ ನಾವು ಸಾಧಾರಣವಾಗಿ ಮಾಡುವ ಅಶಿಸ್ತಿನ ಕೆಲಸಗಳು. ಈ ಪುಟ್ಟ ವಿಷಯಗಳ ಬಗ್ಗೆ ನಮ್ಮ ಗಮನ ಹರಿಯುವುದು ತೀರಾ ಕಡಿಮೆ. ಆದರೆ ವಿವೇಕಾನಂದರು ಹೇಳುವಂತೆ, ಈ ಅಭ್ಯಾಸಗಳು ರೂಢಿಯಾಗಿ ಬೆಳೆದು, ಅಶಿಸ್ತು ಎಲ್ಲ ವಿಷಯಗಳಿಗೂ ಹರಡುತ್ತದೆ. ಅದು ಕೊನೆಗೆ ನಮ್ಮ ವ್ಯಕ್ತಿತ್ವದ ಭಾಗವೇ ಆಗುತ್ತದೆ.

ಅದಕ್ಕೆ ವಿವೇಕಾನಂದರ ಸರಳಸೂತ್ರ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಗಮನ ಹರಿಸುವುದು. ನಮ್ಮ ಯೋಚನೆ, ವಿಷಯ, ಕೆಲಸ ಎಲ್ಲದರಲ್ಲೂ ಒಳ್ಳೆಯದನ್ನು ತುಂಬಿಕೊಳ್ಳುವುದು. ಹಾಗೆ ಮಾಡಿದಾಗ ವ್ಯಕ್ತಿತ್ವಕ್ಕೆ ಆ ಒಳ್ಳೆಯತನ ಬಂದು ಅದರಲ್ಲಿ ಕಾಣಬಹುದಾದ ಬದಲಾವಣೆ ಮೂಡುತ್ತದೆ. ಈ ಪುಟ್ಟ ವಿಚಾರಗಳು ಮನಸ್ಸಿನ ಮೇಲೆ ಎಂಥ ಪ್ರಭಾವ ಬೀರುತ್ತವೆ ಎಂದರೆ ಮನಸ್ಸು ಎಲ್ಲ ಕೆಲಸಗಳನ್ನು ಮಾಡುವಾಗಲೂ ಶಿಸ್ತಿಗಾಗಿ, ಒಳ್ಳೆಯತನಕ್ಕಾಗಿ ಪ್ರೇರೇಪಿಸುತ್ತದೆ.

ನಿನ್ನುದ್ಧಾರಾವೆಷ್ಟಾಯ್ತೋ?
ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿಧ್ಧನಾಗುತಿಹೆ l
ಉದ್ಧರಿಸುವೆನು ಜಗವನೇನ್ನುತಿಹ ಸಖನೇ 
ನಿನ್ನುದ್ಧಾರಾವೆಷ್ಟಾಯ್ತೋ –  ಮಂಕುತಿಮ್ಮ ll


ಡಿ. ವಿ. ಗುಂಡಪ್ಪನವರ ಕಗ್ಗದ ಈ ಪದ್ಯದಲ್ಲಿ ಪ್ರತಿಫಲಿತವಾಗಿರುವುದು ವಿವೇಕಾನಂದರ ಆಶಯ. ಸಾಧಾರಣವಾಗಿ ದೊಡ್ಡದೇನಾದರೂ ಸಾಧಿಸಬೇಕು ಎಂಬ ಇರಾದೆ ಇರುವ ಎಲ್ಲರಿಗೂ ಲೋಕವನ್ನು ಬದಲಾಯಿಸಬೇಕೂ ಎಂಬ ಹಂಬಲ ತೀವ್ರವಾಗಿರುತ್ತದೆ. ಸಮಾಜೋದ್ಧಾರ ಮಾಡಬೇಕೆಂಬ ಬಯಕೆ ಇರುತ್ತದೆ. ಆದರೆ ಅನುಭವಿಗಳ ಮಾತುಗಳು ಅದಕ್ಕೆ ವ್ಯತಿರಿಕ್ತವಾದವು.

ವಿವೇಕಾನಂದರು ಹೇಳುತ್ತಾರೆ: ‘ಯಾರಿಗೆ ಸ್ವನಿಯಂತ್ರಣ ಇದೆಯೋ ಅವರನ್ನು ಹೊರಗಿನ ಪ್ರಪಂಚ ಬಾಧಿಸಲಾಗದು. ಅವನ ಮನಸ್ಸು ಮುಕ್ತವಾಗಿರುತ್ತದೆ. ಅದರಿಂದ ಸಮಾಜದಲ್ಲಿ ಎಲ್ಲವೂ ಸುಂದರವಾಗಿ, ನಿರ್ಮಲವಾಗಿ ಕಾಣುತ್ತದೆ. ಆದರೆ ಅದೇ ನಿರಾಶಾವಾದಿಗೆ ಜಗತ್ತೆಲ್ಲವೂ ದುಷ್ಟವೇ, ಅವನಿಗೆ ಕಾಣುವುದೆಲ್ಲವೂ ದುಃಖಗಳೇ ಹೊರತು ಸುಖಗಳಲ್ಲ. ಹೀಗಾಗಿ ನಾವು ಪ್ರೀತಿ ಮತ್ತು ಶೀಲಗಳನ್ನು ಬೆಳೆಸಿಕೊಂಡಂತೆಲ್ಲ ನಮಗೆ ಹೊರ ಪ್ರಪಂಚದಲ್ಲೂ ಅವು ಕಾಣಲು ಪ್ರಾರಂಭಿಸುತ್ತವೆ. ಆಗ ಜಗತ್ತೇ ಸುಂದರವಾಗಿ ತೋರುತ್ತದೆ.’ ಈ ವಿವೇಕವಾಣಿಯು ಆತ್ಮೋನ್ನತಿಯ ಮಾರ್ಗಕ್ಕೆ ಬಹು ಮುಖ್ಯವಾದ ಮೆಟ್ಟಿಲು.

ನಿಃಸ್ವಾರ್ಥತೆಯೇ ಯಶಸ್ಸಿನ ಗುಟ್ಟು
ನಮ್ಮ ದಿನನಿತ್ಯದ ಮಾತುಗಳನ್ನು ಗಮನಿಸಿ. ನಾವು ಅತಿ ಹೆಚ್ಚು ಉಪಯೋಗಿಸುವ ಪದ 'ನಾನು'. ನಮಗೆ ತಿಳಿಯದೇ ಸ್ವಾರ್ಥ ನಮ್ಮ ಮನಸ್ಸಿನಲ್ಲಿ ನೆಲೆಯಾಗಿರುತ್ತದೆ.ನಮ್ಮ ಶಕ್ತಿಯೆಲ್ಲಾ ಈ ಸ್ವಾರ್ಥದ ಪೋಷಣೆಗೇ ಖಾಲಿಯಾದರೆ ಬೇರೆ ಕಾರ್ಯಗಳಿಗೆ ಉಳಿಯುವುದಾದರೂ ಏನು? ಅದಕ್ಕಾಗಿಯೇ ತ್ಯಾಗ ಎಂಬ ಮೌಲ್ಯಕ್ಕೆ ಭಾರತೀಯರು ನೀಡಿರುವ ಸ್ಥಾನ ತಿಳಿಯುತ್ತದೆ. ನಿಃಸ್ವಾರ್ಥ ಸೇವೆಯನ್ನು ಪ್ರತಿಪಾದಿಸುವ ವಿವೇಕಾನಂದರು, ತನ್ನ ಹೊಟ್ಟೆ ತುಂಬಿದ ಮೇಲೆ ಇನ್ನೊಬ್ಬರ ಊಟದ ಬಗ್ಗೆ ಯೋಚಿಸುವೆ ಎಂಬುವವನು ಪರಮಪಾಪಿ ಎಂದು ಹೇಳಿದ್ದಾರೆ. ನಮ್ಮ ವ್ಯಕ್ತಿತ್ವದ ವಿಕಸನದಲ್ಲಿ ನಿಃಸ್ವಾರ್ಥ ಸೇವೆಯ ಪಾತ್ರ ಅತ್ಯಂತ ಹಿರಿದಾದುದು ಎಂಬುದು ಸ್ವಾಮೀಜಿಯವರ ಸ್ಪಷ್ಟ ಅಭಿಪ್ರಾಯ.  

ಶಕ್ತಿ-ಧೈರ್ಯ ಶ್ರದ್ಧೆ
ಸಂನ್ಯಾಸಿಗಳ ಮಾತಿನಲ್ಲಿ  ಶಾಂತಿ ಮತ್ತು ಸಮಾಧಾನಗಳಿರುವುದು ಸಹಜ; ಅವರ ಪ್ರವಚನಗಳಲ್ಲಿ ವೀರರಸಕ್ಕೆ ಸ್ಥಾನವಿಲ್ಲ. ಇದಕ್ಕೆ ಅಪವಾದ ಎಂಬಂತೆ ಬೋಧಿಸಿದ ವೀರಸನ್ಯಾಸಿ ಸ್ವಾಮಿ ವಿವೇಕಾನಂದ. ತಮ್ಮ ಜೀವನದುದ್ದಕ್ಕೂ ಅವರು ಯುವಕರನ್ನು ಕುರಿತು ಆಡಿದ ಮಾತುಗಳಲ್ಲಿ ಎಲ್ಲೆಡೆಯೂ ಧೈರ್ಯ ಮತ್ತು ವೀರತ್ವವನ್ನೇ ಪ್ರತಿಪಾದಿಸಿದ್ದಾರೆ. A coward dies a thousand times before his death – ಎಂಬ ನುಡಿ ಅವರ ಸ್ಪಷ್ಟ ನಿಲುವು. ಅವರು ಮತ್ತೆ ಮತ್ತೆ ಸಾರಿದ ಮಾತು, ದುರ್ಬಲರಿಗೆ ಇಲ್ಲಿ ಸ್ಥಳವಿಲ್ಲ.

ಬಲಹೀನತೆಯಿಂದ ದಾಸ್ಯವೇ ದೊರಕುವುದು. ಬಲಹೀನತೆ ಎಲ್ಲ ರೀತಿಯ ದೈಹಿಕ ಮತ್ತು ಬೌದ್ಧಿಕ ನೋವುಗಳಿಗೆ ಕಾರಣ. ಅದಕ್ಕೇ ಯುವಕರು ಉಕ್ಕಿನ ನರಗಳು ಮತ್ತು ಕಬ್ಬಿಣದ ಮಾಂಸಖಂಡಗಳನ್ನು ಹೊಂದಬೇಕು. ಬೇಡನಿಗೆ ಹೆದರಿ ಓದುವ ಮೊಲಗಳಂತಿರುವ ನಾವು ಎಂದಿಗೂ ಯಾವ ಕಾರ್ಯಸಾಧನೆ ಮಾಡಲೂ ಸಾಧ್ಯವಿಲ್ಲ, ಧೈರ್ಯವೇ ಎಲ್ಲೆಡೆ ಉಪಯೋಗಕ್ಕೆ ಬರುವ ಸಾಧನ ಎಂದರು ವಿವೇಕಾನಂದರು. ಹಾಗಾದರೆ ನಮ್ಮ ಕೆಲಸಗಳಿಗೆ, ಜೀವನಕ್ಕೆ ಕೇವಲ ಶಕ್ತಿ-ಧೈರ್ಯಗಳಷ್ಟೆ ಸಾಕೆ? ಇಲ್ಲ ಎನ್ನುತ್ತಾರೆ ವಿವೇಕಾನಂದರು. ಅವರ ಅಭಿಪ್ರಾಯದಲ್ಲಿ  ಶಕ್ತಿ-ಧೈರ್ಯಗಳೊಂದಿಗೆ ಇರಬೇಕಾದ ಮತ್ತೊಂದು ಮುಖ್ಯವಾದ ಗುಣ ಶ್ರದ್ಧೆ; ಅದರಲ್ಲೂ ಆತ್ಮಶ್ರದ್ಧೆ.

ನಾವು ಕೈಗೊಂಡ ಕೆಲಸಕ್ಕೆ ಸಾಧನವಿದು. ನಾವು ಏನನ್ನು ಯೋಚಿಸುತ್ತೇವೋ ಅದೇ ಆಗುತ್ತೀವಿ. ನಮ್ಮ ಮನಸ್ಸು ನಮ್ಮ ಕ್ರಿಯೆಗಳನ್ನು ತೀವ್ರವಾಗಿ ಪ್ರಭಾವಿಸುವ ಕಾರಣ ನಾನು ಅಶಕ್ತ ಎಂಬ ನಮ್ಮ ನಂಬಿಕೆ ನಮ್ಮನ್ನು ಅಶಕ್ತರನ್ನಾಗಿಸುತ್ತದೆ. ಹೀಗಾಗಿ ಋಣಾತ್ಮಕ ಚಿಂತನೆಗಳು ಎಂದಿಗೂ ಆತ್ಮೋನ್ನತಿಯ ಹಾದಿಗೆ ನಮ್ಮನ್ನು ಒಯ್ಯುವುದಿಲ್ಲ.

ಪ್ರಗತಿಯ ಹಾದಿಯಲ್ಲಿನ ತಡೆಗೋಡೆಗಳು ಅವು. ಆತ್ಮಶ್ರದ್ಧೆಯಿಂದ ಮುನ್ನಡೆದರೆ ನಾವು ಊಹಿಸಲೂ ಸಾಧ್ಯವಾಗದ್ದನ್ನು ಸಾಧಿಸಬಹುದು ಎಂಬುದು ಸ್ವಾಮೀಜಿಯವರ ಅತ್ಯಮೂಲ್ಯ ಸಂದೇಶ.

ಹೀಗೆ 123 ವರ್ಷಗಳ ಹಿಂದೆ, ಸೆಪ್ಟೆಂಬರ್ ಹನ್ನೊಂದರಂದು ಪಾರ್ಲಿಮೆಂಟ್ ಆಫ್  ವರ್ಲ್ಡ್ ರಿಲಿಜನ್ಸ್‌ನಲ್ಲಿ ಗರ್ಜಿಸಿ ವಿಶ್ವವಿಖ್ಯಾತರಾದ  ವಿವೇಕಾನಂದರು, ತಮ್ಮ ಜೀವನದುದ್ದಕ್ಕೂ  ಯುವಜನರ ಶಕ್ತಿಯನ್ನು ಕೇಂದ್ರೀಕರಿಸುವುದರ ಬಗ್ಗೆ ತೀವ್ರವಾಗಿ ಆಲೋಚಿಸಿ ಕಾರ್ಯಪ್ರವೃತ್ತರಾದವರು. ಯುವಜನತೆಗೆ ಸದಾ ದಾರಿದೀಪವಾಗಬಲ್ಲ ಅವರ ನುಡಿಗಳನ್ನು ನೆನೆಯುತ್ತಾ ಆ ಮಹಾಚೇತನಕ್ಕೆ ನಮ್ಮ ನಮನ ಸಲ್ಲಿಸೋಣ.  

ಸಂಪೂರ್ಣ ಜವಾಬ್ದಾರಿ ನಿನ್ನದು
ಸಾಧಾರಣವಾಗಿ ಕಷ್ಟಗಳು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಅದರ ಪ್ರತಿಫಲವಾದ ಸುಖ ಮಾತ್ರ ಯಾರಿಗೂ ವರ್ಜ್ಯವಲ್ಲ. ಈ ಸುಖವನ್ನು ಉಣ್ಣಬೇಕಾದರೆ ಅದರ ಹಿಂದಿರುವ ಕಷ್ಟದ ಅರಿವು ನಮಗಾಗಬೇಕು.

ಆ ಕಷ್ಟವನ್ನು ಎದುರಿಸಲು ನಾವು ಯಾವಾಗಲೂ ಸನ್ನದ್ಧರಾಗಿರಬೇಕು. ಇದು ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊರುವವನಿಗೆ ಇರಬೇಕಾದ ಮನಃಸ್ಥಿತಿ. ಹೀಗೆ ಸಂಪೂರ್ಣ ಜವಾಬ್ದಾರಿಯನ್ನು ಹೊರುವುದು ಎಂದರೇನು ಎಂಬುದನ್ನು ವಿವರಿಸಲು ಒಂದು ಸುಂದರ ಉದಾಹರಣೆಯನ್ನು ವಿವೇಕಾನಂದರು ಕೊಡುತ್ತಾರೆ. ಪುಟ್ಟ ಮಕ್ಕಳ ನಗು, ಆಟ ಯಾರಿಗೆ ಇಷ್ಟವಾಗುವುದಿಲ್ಲ ? ಈಗ ಅದೇ ಮಗುವನ್ನು ಯಾರಾದರೂ ನಿಮ್ಮ ಕೈಗೆ ಕೊಟ್ಟರೂ ಎಂದು ತಿಳಿದುಕೊಳ್ಳಿ. ಆ ಕ್ಷಣ ನಿಮ್ಮ ಜೀವನವೇ ಬದಲಾಗುತ್ತದೆ.

ನಿಮ್ಮ ಮೈಯೆಲ್ಲಾ ಕಣ್ಣಾಗಿ ಆ ಮಗುವಿನ ಪಾಲನೆಗೆ ತೊಡಗುತ್ತೀರಿ. ಆ ಕ್ಷಣಕ್ಕೆ ನಿಮ್ಮಲ್ಲಿ ಯಾವ ಸ್ವಾರ್ಥದ ಆಲೋಚನೆಯೂ ಮೂಡುವುದಿಲ್ಲ. ಆ ಮಗುವಿನ ಸುರಕ್ಷತೆಯೇ ನಿಮ್ಮ ಪರಮೋದ್ದೇಶ. ಇದು ಸಂಪೂರ್ಣ ಜವಾಬ್ದಾರಿಯನ್ನು ಹೊರುವ ರೀತಿ. ಹೀಗೆ ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಬಾಧ್ಯತೆಯನ್ನು ತಂದುಕೊಳ್ಳಬೇಕು. ನಮ್ಮ ತಪ್ಪುಗಳಿಗೆ ಇತರರನ್ನು ದೂಷಿಸುವ ಚಟವನ್ನು ಕೊನೆಮಾಡಿ, ಜವಾಬ್ದಾರಿಯನ್ನು ಸಂಪೂರ್ಣವಾಗಿ ತನ್ನ ಹೆಗಲ ಮೇಲೆ ಹೊತ್ತು ಭವಿಷ್ಯದ ಒಳಿತನ್ನೇ ನೋಡಬೇಕು.

ಇದರಿಂದ ನಮ್ಮ ಬದುಕಿನ ನಿಯಂತ್ರಕರು ಸ್ವತಃ ನಾವೇ ಎಂಬ ಅರಿವು ಮೂಡುತ್ತದೆ. ಹೀಗೆ ಒಂದು ಕ್ರಿಯೆಯ ಜವಾಬ್ದಾರಿಯನ್ನು  ಸಂಪೂರ್ಣವಾಗಿ ನಮ್ಮ ಬೆನ್ನ ಮೇಲೆ ಹೊತ್ತುಕೊಂಡ ನಂತರ, ನಾವು ಗುಲಾಮರಾಗಿ ದುಡಿಯಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಅದಕ್ಕೆ ವಿವೇಕಾನಂದರು ಹೇಳುವುದು – ಒಡೆಯನಂತೆ ದುಡಿ. ಹೀಗೆ ದುಡಿಯಬೇಕಾದರೆ ನಮ್ಮ ಮನಃಸ್ಥಿತಿ ಹೀಗಿರಬೇಕು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಅದಕ್ಕೆ ಸ್ವಾಮೀಜಿಯವರಲ್ಲಿ ಉತ್ತರವಿದೆ. ನಮ್ಮ ಮನಸ್ಸು ಇಂದಿಗೂ ಶಾಂತವಾಗಿರಬೇಕು.

ಶಾಂತವಾಗಿರುವವನ ಮನಸ್ಸು ದುಡಿಯುವಷ್ಟು ಕೋಪಾವೇಶಗಳಿಂದ ತುಂಬಿರುವ ಮನಸ್ಸು ದುಡಿಯಲು ಸಾಧ್ಯವಿಲ್ಲ. ಇದಕ್ಕೆ ಕಾರಣವಿಷ್ಟೇ. ಮನಸ್ಸು ನಿರ್ಮಲವಾದಾಗ, ನಮ್ಮ ಶಕ್ತಿಯೆಲ್ಲಾ ಒಳ್ಳೆಯ ವಿಚಾರಗಳಿಗೆ ವ್ಯಯವಾಗುತ್ತದೆ, ಅದೇ ಕೋಪಾವೇಶ ತುಂಬಿದ ಮನಸ್ಸು ತನ್ನ ಶಕ್ತಿಯನ್ನೆಲ್ಲಾ ಲೋಕವ್ಯವಹಾರಗಳಿಗೆ ಖರ್ಚು ಮಾಡಿ ಅನಗತ್ಯವಾದ ಚಿಂತೆಗೀಡಾಗುತ್ತದೆ. ಮನಸ್ಸಿನ ಸ್ಥಿಮಿತವನ್ನು ಕಾಪಾಡಿಕೊಳ್ಳುವಲ್ಲಿ ಅತ್ಯಂತ ಸಹಕಾರಿಯಾಗಬಲ್ಲ ವಿವೇಕಾನಂದರ ಮಾತುಗಳು ಇವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT