ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ 6 ದಶಕಗಳ ಯಶೋಗಾಥೆ

Last Updated 6 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶದ ಮೇರು ಆರ್ಥಿಕ ಸಂಸ್ಥೆ ಭಾರತೀಯ ಜೀವವಿಮಾ ನಿಗಮಕ್ಕೀಗ (ಎಲ್‌ಐಸಿ) ವಜ್ರ ಮಹೋತ್ಸವದ ಸಂಭ್ರಮ. ಅದು ಈಗ  ಅರವತ್ತು ವರ್ಷಗಳನ್ನು ಪೂರೈಸಿ 61ನೆಯ ವರ್ಷಕ್ಕೆ ಕಾಲಿಡುತ್ತಿದೆ. ಈ 6 ದಶಕಗಳಲ್ಲಿ ಅದು ದೇಶದ ಜನತೆಗೆ ವಿಮೆಯ ಭದ್ರತೆಯೊದಗಿಸುತ್ತಲೇ ದೇಶ ನಿರ್ಮಾಣಕ್ಕೆ ನೀಡಿರುವ ಕೊಡುಗೆ ಅದ್ವಿತೀಯವಾಗಿದೆ.

ಅನಿಶ್ಚಿತತೆಯ ಪ್ರಶ್ನೆ ಎದುರಿಸಲು ಮೂಡಿದ ವಿಮೆಯ ಪರಿಕಲ್ಪನೆ  ಬ್ರಿಟಿಷರ ಆಳ್ವಿಕೆ ಇರುವಾಗಲೇ ದೇಶದಲ್ಲಿ ಜಾರಿಗೆ ಬಂದಿತ್ತು.  ಆರಂಭದಲ್ಲಿ ಬ್ರಿಟಿಷ್‌ ವಿಮಾ ಕಂಪನಿಗಳು ಮತ್ತು ನಂತರ ಹಲವಾರು ದೇಶೀಯ ವಿಮಾ ಸಂಸ್ಥೆಗಳೂ ವ್ಯವಹಾರ ಆರಂಭಿಸಿದ್ದವು. ಉದ್ಯಮಪತಿಗಳಿಗೆ ಬಂಡವಾಳ ಕ್ರೋಡೀಕರಿಸಲು ಬ್ಯಾಂಕ್ ಮತ್ತು ವಿಮಾ ವ್ಯವಹಾರಗಳು ಸುಲಭದ ಮೂಲಗಳಾಗಿದ್ದವು. ದೇಶ ಸ್ವತಂತ್ರವಾದಾಗ 245 ಖಾಸಗಿ ವಿಮಾಕಂಪನಿಗಳು ದೇಶದಲ್ಲಿ ವ್ಯವಹಾರ ನಡೆಸುತ್ತಿದ್ದವು.

ಅಂದಿನ ಕಾಲಘಟ್ಟದಲ್ಲಿ ವಿಮಾ ಉದ್ದಿಮೆ ಅವ್ಯವಹಾರದ ನೆಲೆವೀಡಾಗಿತ್ತು. ಅಂದಿನ ದೊಡ್ಡ ಬಂಡವಾಳಗಾರರು ಮತ್ತು ಉದ್ದಿಮೆದಾರರಿಗೆ ವಿಮೆ ತಮ್ಮ ಇತರ ವ್ಯವಹಾರಗಳಿಗೆ ಸುಲಭ ಬಂಡವಾಳ ಹೊಂದಿಸಲು ಅಡ್ಡದಾರಿಯಾಗಿತ್ತು.

ವಿಮದಾರರ ದಾವೆಗಳನ್ನು ಇತ್ಯರ್ಥ ಮಾಡುವಲ್ಲಿ ಅವ್ಯವಹಾರಗಳ ಕಾರಣದಿಂದ ದೇಶದ ಜನರ ಉಳಿತಾಯಕ್ಕೆ ಯಾವುದೇ ಭದ್ರತೆಯಿರದ ಪರಿಸ್ಥಿತಿಯಿತ್ತು. ಅದೇ ವೇಳೆಗೆ ಜನ್ಮ ತಳೆದ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ವಿಮಾ ನೌಕರರ ಸಂಘವೂ ವಿಮಾ ಉದ್ದಿಮೆಯ ರಾಷ್ಟ್ರೀಕರಣದ ಬೇಡಿಕೆಯೊಂದಿಗೆ ತನ್ನ ಹೋರಾಟ ಆರಂಭಿಸಿತ್ತು.  1953ರಲ್ಲಿ  ಜಯಪ್ರಕಾಶ್ ನಾರಾಯಣ್ ನೆಹರೂರವರಿಗೆ ಪತ್ರ ಬರೆದು ಬ್ಯಾಂಕ್, ವಿಮೆ ಮತ್ತು ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಆಗ್ರಹಿಸಿದ್ದರು.

ದೇಶದ ನಿರ್ಮಾಣಕ್ಕೆ ಅಗತ್ಯವಾದ ಬಂಡವಾಳ ಕ್ರೋಡೀಕರಿಸಲು ಜನತೆಯ ಅಮೂಲ್ಯ ಉಳಿತಾಯದ ಅಗತ್ಯವಿದೆ. ವಿಮೆಯನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಇಂತಹ ಕ್ರೋಡೀಕರಣ ಸುಲಭವಾಗುತ್ತದೆ. ಸಂಪತ್ತನ್ನು ಹೀಗೆ ಕ್ರೋಡೀಕರಣಗೊಳಿಸುವ ಮೂಲಕ ಅದನ್ನು  ನಿರ್ಮಾಣ ಯೋಜನೆಗಳಲ್ಲಿ ತೊಡಗಿಸುವುದು ಸಾಧ್ಯವಾಗುತ್ತದೆಯೆಂದು ಸರ್ಕಾರ 1955ರಲ್ಲಿ ಅಂದಿನ ಇಂಪೀರಿಯಲ್ ಬ್ಯಾಂಕನ್ನು ತನ್ನ ಒಡೆತನಕ್ಕೆ ತೆಗೆದುಕೊಳ್ಳುವ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕನ್ನಾಗಿ ಪರಿವರ್ತಿಸಿತು.

1956ರಲ್ಲಿ ಸರ್ಕಾರ ದೇಶದಲ್ಲಿದ್ದ 245 ಖಾಸಗಿ ವಿಮಾ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುವ ಸುಗ್ರೀವಾಜ್ಞೆ ಹೊರಡಿಸಿತು. ಅಂದಿನ ವಿತ್ತ ಸಚಿವರಾದ ಸಿ.ಡಿ. ದೇಶಮುಖ್‌ ಅವರು ಜೀವ ವಿಮಾ ವ್ಯವಹಾರ ರಾಷ್ಟ್ರೀಕರಣ ಮಸೂದೆಯನ್ನು ಮಂಡಿಸಿದ್ದರು. ‘ಜೀವವಿಮೆಯ ರಾಷ್ಟ್ರೀಕರಣವು ಸಾರ್ವಜನಿಕರ ಹಿತರಕ್ಷಣೆಗಾಗಿ ಅಗತ್ಯವಾಗಿದೆ. ಅದೊಂದು ಸಾಮಾಜಿಕ ಸೇವೆಯಾಗಿದೆ. ಕಲ್ಯಾಣ ರಾಜ್ಯದ (welfare) ಆಶಯಗಳಿಗೆ ಅನುಸಾರವಾಗಿದೆ. ರಾಷ್ಟ್ರ ನಿರ್ಮಾಣ ಯೋಜನೆಗಳಿಗೆ ಅಗತ್ಯ ಬಂಡವಾಳ ಒದಗಿಸಲು ಅನಿವಾರ್ಯವಾಗಿದೆ. ವಿಮಾದಾರರ ಹಿತರಕ್ಷಣೆ ಮತ್ತು ದೇಶ ನಿರ್ಮಾಣಕ್ಕಾಗಿ ಬಂಡವಾಳ ಕ್ರೋಡೀಕರಿಸಲು  ರಾಷ್ಟ್ರೀಕರಣವು ಅಗತ್ಯವಾಗಿದೆ’ ಎಂದಿದ್ದರು.

ಹೀಗೆ ಬಂಡವಾಳ ಕ್ರೋಡೀಕರಣ ಮತ್ತು ವಿಮೆ ಸುರಕ್ಷೆಯ ಉದ್ದೇಶದೊಂದಿಗೆ 1956ರ ಸೆಪ್ಟೆಂಬರ್ 1 ರಂದು ಭಾರತೀಯ ಜೀವವಿಮಾ ನಿಗಮ ಉದಯವಾಯಿತು.ಅಂದಿನಿಂದ ಇಂದಿನವರೆಗೆ ಈ ಸರ್ಕಾರಿ ವಲಯದ ವಿಮಾ ಸಂಸ್ಥೆ ನಿರ್ಮಿಸಿರುವ ದಾಖಲೆಗಳು ವಿಸ್ಮಯಕಾರಿಯಾಗಿವೆ.

ಆರಂಭದಲ್ಲಿ ಸಂಸ್ಥೆ ಹೊಂದಿದ್ದ ಪಾಲಿಸಿದಾರರ ಸಂಖ್ಯೆ 54.17 ಲಕ್ಷ. 60 ವರ್ಷಗಳ ನಂತರ  2016ರ ಮಾರ್ಚ್‌ ಅಂತ್ಯಕ್ಕೆ ಅದು ಹೊಂದಿರುವ ಒಟ್ಟು ಪಾಲಿಸಿದಾರರ ಸಂಖ್ಯೆ 30 ಕೋಟಿ. ವೈಯಕ್ತಿಕ ವಿಮೆಯಲ್ಲದೆ ಗುಂಪು ವಿಮೆಯ ಮೂಲಕ ವಿಮಾ ಸೌಲಭ್ಯ ಪಡೆದಿರುವ ಪಾಲಿಸಿದಾರರ ಸಂಖ್ಯೆ 12 ಕೋಟಿ. ಎರಡೂ ಒಂದಾಗಿ ಇರುವ ಒಟ್ಟು ಪಾಲಿಸಿದಾರರು 42 ಕೋಟಿ. ದೇಶದ ಜನ ಸಂಖ್ಯೆಯ ಶೇಕಡ 32ರಷ್ಟು !

ಕಾರ್ಯಾರಂಭ ಮಾಡಿದಾಗ ಎಲ್ಐಸಿ ಸಂಗ್ರಹಿಸಿದ ಪ್ರೀಮಿಯಂನ ಮೊತ್ತ ₹ 81.7 ಕೋಟಿಗಳು. 2016ರ ಮಾರ್ಚ್‌ ತಿಂಗಳ ಅಂತ್ಯಕ್ಕೆ ಸಂಗ್ರಹಿಸಿದ ಪ್ರೀಮಿಯಂನ ಮೊತ್ತ ₹ 2,66,225 ಕೋಟಿಗಳು.  ಅಂದು ₹ 378 ಕೋಟಿಗಳ ಜೀವನಿಧಿ ಹೊಂದಿದ್ದರೆ ಇಂದು ಜೀವನಿಧಿಯ ಮೊತ್ತ  ₹20.57 ಲಕ್ಷ ಕೋಟಿ. 1951ರಲ್ಲಿ ಎಲ್ಐಸಿ ಹೊಂದಿದ್ದ ಆಸ್ತಿಯ ಮೊತ್ತ ₹ 348 ಕೋಟಿಗಳು.  ಇಂದು ಹೊಂದಿರುವ ಆಸ್ತಿಯ ಮೊತ್ತ ₹ 22.1 ಲಕ್ಷ ಕೋಟಿಗಳು. 

ಪಾಲಿಸಿದಾರರ ಸೇವೆಯಲ್ಲಿ ಎಲ್ಐಸಿ ಅತ್ಯುತ್ಕೃಷ್ಟ ಮಟ್ಟ ತಲುಪಿದೆ. ಜನತೆಯ ವಿಶ್ವಾಸದ ಪ್ರತೀಕವಾದ ಅದು ದಾವೆ ಇತ್ಯರ್ಥದ (Claim settlement)  ವಿಚಾರದಲ್ಲಿ ವಿಶ್ವ ದಾಖಲೆ ಹೊಂದಿದೆ. ಅವಧಿ ಪೂರ್ಣಗೊಂಡ ನಂತರ ಮತ್ತು ಸಾವಿನ ನಂತರದ ಎರಡೂ ದಾವೆ ಇತ್ಯರ್ಥದಲ್ಲಿ ಎಲ್ಐಸಿಯು ಶೇಕಡ 99ಕ್ಕೂ ಹೆಚ್ಚಿನ ಇತ್ಯರ್ಥ ದರ ಹೊಂದಿದೆ. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ  ಇತ್ಯರ್ಥ ಮಾಡಿದ ಒಟ್ಟು ದಾವೆಗಳ ಸಂಖ್ಯೆ 215.17 ಲಕ್ಷ. ಇತ್ಯರ್ಥ ಮಾಡಿದ ದಾವೆಯ ಮೊತ್ತ ₹ 1.01 ಲಕ್ಷ ಕೋಟಿಗಳು.

ಜನರ ಹಣ ಜನಕಲ್ಯಾಣಕ್ಕಾಗಿ ಎಂಬ ತತ್ವದೊಂದಿಗೆ ದೇಶ ನಿರ್ಮಾಣ ಯೋಜನೆಗಳಿಗಾಗಿ ಬಂಡವಾಳ ಕ್ರೋಡೀಕರಿಸುವಲ್ಲಿ ಎಲ್ಐಸಿಯ ಕೊಡುಗೆಯೂ ಅಪಾರವಾಗಿದೆ.

ದೇಶದ ಪಂಚವಾರ್ಷಿಕ ಯೋಜನೆಗಳಲ್ಲೂ ಎಲ್ಐಸಿ ಅಗಾಧವಾದ ಮೊತ್ತ ತೊಡಗಿಸಿದೆ. 1956ರಿಂದ 1961ರ ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೇವಲ ₹ 184 ಕೋಟಿ ಹಣ ಹೂಡಿದ್ದ ಎಲ್ಐಸಿಯು 12ನೆಯ ಪಂಚವಾರ್ಷಿಕ ಯೋಜನೆಯಲ್ಲಿ ತೊಡಗಿಸಿರುವ ಮೊತ್ತ ₹ 10,86,720 ಕೋಟಿಗಳು. ದೇಶ ನಿರ್ಮಾಣದಲ್ಲಿ ಎಲ್ಐಸಿಯ ಪಾತ್ರದ ಮಹತ್ವವೇನು ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ.

ಎಲ್ಐಸಿಯು ವಿವಿಧ ಜನ ವಿಭಾಗಗಳ ಅಗತ್ಯಕ್ಕನುಸಾರವಾಗಿ ಹಲವು ವಿಮಾ ಯೋಜನೆಗಳು ಮಕ್ಕಳಿಗಾಗಿ, ನಿವೃತ್ತಿ ವೇತನ ಮತ್ತು ಆರೋಗ್ಯ ಯೋಜನೆಗಳನ್ನೊಳಗೊಂಡಿದೆ. ಸಮಾಜದ ತೀರಾ ಕೆಳಸ್ತರದ ಬಡತನದ ರೇಖೆಯಡಿ ಬದುಕುವವರಿಗಾಗಿ ಸೂಕ್ಷ್ಮ ವಿಮಾ ಯೋಜನೆ, (Micro Insurance) ಪ್ರಧಾನ ಮಂತ್ರಿ ಜನಧನ ಯೋಜನೆ, ಜೀವನ ಜ್ಯೋತಿ ಬೀಮಾ ಯೋಜನೆ, ಆಮ್ ಆದ್ಮಿ ಬೀಮಾ ಯೋಜನೆಗಳನ್ನು ನಿರ್ವಹಿಸುವ ಮೂಲಕ ತನ್ನ ಸಾಮಾಜಿಕ ಬದ್ಧತೆ ತೋರುತ್ತಿದೆ.

ಎಲ್‌ಐಸಿ ತನ್ನ ಸ್ವರ್ಣ ಮಹೋತ್ಸವ ನಿಧಿಯನ್ನು ಬಳಸಿ ₹ 77.19 ಕೋಟಿ ರೂಪಾಯಿ ವೆಚ್ಚದ ಶಾಲೆ, ಗ್ರಂಥಾಲಯ, ವೃದ್ಧಾಶ್ರಮ, ಆಸ್ಪತ್ರೆಗಳಂತಹ 356 ಯೋಜನೆಗಳನ್ನು ನಿರ್ಮಿಸಿದೆ.

ಚೆನ್ನೈನಲ್ಲಿ ಇತ್ತೀಚಿಗೆ ಪ್ರವಾಹವುಂಟಾದಾಗ ಸಂತ್ರಸ್ತರಿಗೆ ಅಗಾಧ ಪ್ರಮಾಣದಲ್ಲಿ ನೆರವು ನೀಡಿದೆ. 285 ಹಳ್ಳಿಗಳನ್ನು ಬೀಮಾ ಗ್ರಾಮವೆಂದು ಗುರುತಿಸಿ ಹಲವಾರು ಸೌಲಭ್ಯಗಳನ್ನು ನೀಡಿದೆ. ಎಲ್ಐಸಿ ತನ್ನ ವಿಮಾ ವ್ಯವಹಾರವನ್ನು ಸಾಗರದಾಚೆಗೂ ವಿಸ್ತರಿಸಿದೆ.   ಫಿಜಿ, ಮಾರಿಷಸ್‌  ಮತ್ತು ಬ್ರಿಟನ್‌ಗಳಲ್ಲಿಯೂ ತನ್ನ ಶಾಖೆಗಳನ್ನು ಹೊಂದಿದೆ. ಸಿಂಗಪುರ, ಬಹರೇನ್, ಶ್ರೀಲಂಕಾ, ಕೀನ್ಯಾ, ಸೌದಿ ಅರೇಬಿಯ ಮತ್ತು ಬಾಂಗ್ಲಾ ದೇಶಗಳಿಗೂ ತನ್ನ ವ್ಯವಹಾರ ವಿಸ್ತರಿಸಿದೆ. 

8 ವಲಯ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 2048 ಶಾಖೆಗಳು, 1240 ಕಿರಿ ಕಚೇರಿಗಳು (Mini offices) 1401 ಉಪ ಕಚೇರಿಗಳನ್ನು ಹೊಂದಿರುವ ಎಲ್ಐಸಿಯಡಿಯಲ್ಲಿ 1.41 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 10,61,580 ಪ್ರತಿನಿಧಿಗಳಿದ್ದಾರೆ. ಈ ಮೂಲಕ ಎಲ್ಐಸಿಯು   ದೇಶದ ಮೂಲೆ ಮೂಲೆಗೂ ಜೀವವಿಮೆಯ ಸಂದೇಶವನ್ನು ತಲುಪಿಸಿ ಬಹು ದೊಡ್ಡ ಸೇವೆ ಸಲ್ಲಿಸುತ್ತಿದೆ.

ಕೊನೆಗೊಂಡ ಏಕಸ್ವಾಮ್ಯ
90ರ ದಶಕದಲ್ಲಿ ಆರ್ಥಿಕ ಸುಧಾರಣೆಯ ಹೆಸರಿನ ಬಹು ದೊಡ್ಡ ಅಲೆಯೆದ್ದಾಗ ಅದು ರಾಷ್ಟ್ರೀಕೃತ ವಿಮಾ ಉದ್ದಿಮೆಯನ್ನೂ ತಟ್ಟಿತು. ವಿಮಾ ಉದ್ದಿಮೆಯಲ್ಲಿ ಸುಧಾರಣೆ ತರಲು ಸರ್ಕಾರವು ಆರ್.ಎನ್. ಮಲ್ಹೋತ್ರಾ ಅವರ ನೇತೃತ್ವದಲ್ಲಿ 1993ರಲ್ಲಿ ಸಮಿತಿಯನ್ನು ರಚಿಸಿತು. ಮಲ್ಹೋತ್ರಾ ಸಮಿತಿ ಕೂಡ ಎಲ್ಐಸಿಯ ಸಾಧನೆಯನ್ನು ಗುರುತಿಸಿತು.

ಆದರೂ ವಿಮಾ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡುವ ಶಿಫಾರಸ್ಸು ನೀಡಿತ್ತು. ಈ ಶಿಫಾರಸ್ಸಿನ ಆಧಾರದಲ್ಲಿ 1999ರಲ್ಲಿ ಸರ್ಕಾರವು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಸ್ವೀಕರಿಸಿತು. ಇದರಿಂದಾಗಿ 43 ವರ್ಷಗಳಿಂದ ಎಲ್ಐಸಿಗೆ ಇದ್ದ ಏಕಸ್ವಾಮ್ಯ ಕೊನೆಗೊಂಡು ಖಾಸಗಿ ವಿಮಾ ಸಂಸ್ಥೆಗಳೊಂದಿಗೆ ಸ್ಪರ್ಧಿಸುವಂತಾಯ್ತು. ನಂತರ ವಿಮಾ ರಂಗದಲ್ಲಿ ಶೇ 49ರ ವರೆಗೆ ವಿದೇಶಿ ನೇರ ಹೂಡಿಕೆಗಳಿಗೂ ಅವಕಾಶ ನೀಡಲಾಗಿದೆ.

ಇದು 1956ರಲ್ಲಿ ಜೀವ ವಿಮೆಯ ರಾಷ್ಟ್ರೀಕರಣದ ಪ್ರಕ್ರಿಯೆಯನ್ನು ತಿರುಗು ಮುರುಗುಗೊಳಿಸಿದ ಬೆಳವಣಿಗೆಯಾಗಿತ್ತು. ಎಲ್ಐಸಿ ಸ್ಥಾಪಿಸುವಾಗ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರು, ‘ಸಮಾನತೆಯ ಸಮಾಜದತ್ತ ಭಾರತದ ಮುನ್ನಡೆಯಲ್ಲೊಂದು ಮಹತ್ವದ ಹೆಜ್ಜೆ’ ಎಂದಿದ್ದರು. ವ್ಯಕ್ತಿಗಳ ಮತ್ತು ಪ್ರಭುತ್ವದ ಸೇವೆ ಇದರ ಉದ್ದೇಶವಾಗುತ್ತದೆ. ಲಾಭದ ಗುರಿ ಹೊರಹೋಗುತ್ತದೆ, ಸೇವೆಯ ಗುರಿ ಮುಖ್ಯವಾಗುತ್ತದೆ ಎಂದಿದ್ದರು.

ಲಾಭದ ಗುರಿ ಹೊರಹೋಗುತ್ತದೆ, ಸೇವೆಯ ಗುರಿಯೇ ಮುಖ್ಯವಾಗುತ್ತದೆ ಎಂದರೆ ಅದು ಅದಕ್ಷವೇನೂ ಆಗಬೇಕಿಲ್ಲ ಎಂಬುದನ್ನು ಒಂದು ಯಶಸ್ವೀ ಸರ್ಕಾರಿ  ವಲಯದ ಉದ್ಯಮವಾಗಿ ಎಲ್ಐಸಿಯ ಸಾಧನೆ ಆಗಲೇ ತೋರಿಸಿಕೊಟ್ಟಿತ್ತು. ಸಹಜವಾಗಿಯೇ ರಾಷ್ಟ್ರೀಕರಣಕ್ಕಾಗಿ ಹೋರಾಡಿದ್ದ ಅಖಿಲಭಾರತ ವಿಮಾ ನೌಕರರ ಸಂಘ ಸಾಮಾಜಿಕ ಬದ್ಧತೆಯ ಗುರಿಯನ್ನು ಈಡೇರಿಸುತ್ತಲೇ ಒಂದು ಯಶಸ್ವೀ ಉದ್ಯಮವಾಗಿ ಬೆಳೆದಿರುವ ಎಲ್ಐಸಿ ಯನ್ನು ಸರ್ಕಾರಿ ರಂಗದಲ್ಲಿ ಉಳಿಸಿಕೊಳ್ಳಲು ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದು ಇದುವರೆಗೆ ಯಶಸ್ವಿಯಾಗಿದೆ.

ಎಲ್ಐಸಿ ಕೂಡ ಇದನ್ನು ಸವಾಲಾಗಿ ತೆಗೆದುಕೊಂಡು, ದೇಶಿ-ವಿದೇಶಿ ಖಾಸಗಿ ಕಂಪನಿಗಳಿಂದ ಸ್ಪರ್ಧೆಯನ್ನು ಯಶಸ್ವಿಯಾಗಿ ಎದುರಿಸಿಕೊಂಡು ಮಾರುಕಟ್ಟೆಯ ನಾಯಕನಾಗಿ ಮುಂದುವರೆದಿದೆ, ವಿಶ್ವದ 500 ಫಾರ್ಚೂನ್‌ ಕಂಪನಿಗಳಲ್ಲಿ (Fortune Company) ಒಂದು ಎಂದು ಮಾನ್ಯತೆ ಗಳಿಸಿದೆ.

ವಿಶ್ವದ ಅಗ್ರಶ್ರೇಣಿಯ ಆರು ಜೀವವಿಮಾ ಸಂಸ್ಥೆಗಳಲ್ಲಿ ಎಲ್ಐಸಿಗೆ ಸ್ಥಾನವಿದೆ. ಅತ್ಯಂತ ಹೆಚ್ಚು ವಿಮೆ ವ್ಯವಹಾರ ನಡೆಸುವ ಪ್ರತಿನಿಧಿಗಳಿಗೆ ನೀಡುವ ಗೌರವವಾದ   (Million Dollar Round Table- MDRT) ಪ್ರತಿನಿಧಿಗಳ ಸಂಖ್ಯೆಯಲ್ಲಿ ಎಲ್ಐಸಿ ವಿಶ್ವದ ಮೊದಲ ಸ್ಥಾನದಲ್ಲಿದೆ. ಸ್ಪರ್ಧೆಯ ವಾತಾವರಣದಲ್ಲೂ ಎಲ್ಐಸಿ ಇಂತಹ ಸಾಧನೆ ಮಾಡಿರುವುದು ಅದು ಗಳಿಸಿರುವ ಜನತೆಯ ವಿಶ್ವಾಸಕ್ಕೆ ದ್ಯೋತಕ. ಎಲ್ಐಸಿಯನ್ನು ‘ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್’ ಎನ್ನುವ ವಿಶ್ವಾಸಕ್ಕೆ ಪಾತ್ರವಾಗಿದೆ.

ಎಲ್ಐಸಿಯ ಈ ಸಾಧನೆಯ ಹಿಂದೆ ಸಂಸ್ಥೆಯ ಪ್ರತಿನಿಧಿ ಮತ್ತು ನೌಕರರ ಕೊಡುಗೆ ದೊಡ್ಡದಿದೆ. ಆದರೆ ಅದಕ್ಕಿಂತ ದೊಡ್ಡದು ಈ ದೇಶದ ಜನತೆ ಎಲ್ಐಸಿಯ ಮೇಲಿಟ್ಟಿರುವ ವಿಶ್ವಾಸ. ಎಲ್ಐಸಿಯಿಂದ ವಿಮಾ ಪಾಲಿಸಿ ಕೊಂಡರೆ ಅದು ಕೇವಲ ವೈಯಕ್ತಿಕ ಆಯ್ಕೆ ಮಾತ್ರವಲ್ಲ. ಈ ದೇಶದ ನಿರ್ಮಾಣಕ್ಕೆ ಕೊಡುವ ಕೊಡುಗೆಯೂ ಹೌದು.  ಅದಕ್ಕಾಗಿ ಎಲ್ಐಸಿ ಮತ್ತು ಪಾಲಿಸಿದಾರರಿಬ್ಬರೂ ಅಭಿನಂದನಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT