ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಔಷಧ ಉದ್ಯಮ ಹಳ್ಳಿ ಯುವಕನ ಸಾಹಸ

Last Updated 6 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಓದು ಮುಗಿದ ತಕ್ಷಣ ಯಾವುದಾದರೂ ಉದ್ಯೋಗದ ಕಡೆ ಮುಖಮಾಡದೆ ಸ್ವಂತ ಕಂಪೆನಿ ಯೊಂದನ್ನು ಆರಂಭಿಸಿದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಯುವ ಉದ್ಯಮಿಯೊಬ್ಬರು ಮಾದರಿಯಾಗಿದ್ದಾರೆ.ಮುದುಗುಣಿ ಎಂಬ ಪುಟ್ಟ ಹಳ್ಳಿಯಲ್ಲಿ ನವೀನ್‌ ಮಿಸ್ಕಿತ್‌ ಅವರು ಎಂಟು ವರ್ಷಗಳ ಹಿಂದೆ ಸಾವಯವ ಔಷಧ ಘಟಕ ಆರಂಭಿಸಿದರು. ಇದರಲ್ಲಿ ತಯಾರಾದ ಉತ್ಪನ್ನಗಳು ಇಂದು ದೇಶ ವಿದೇಶಕ್ಕೆ ಮಾರಾಟವಾಗುತ್ತಿವೆ.

ಇವರ ತಂದೆಗೆ ಅಲ್ಪಸ್ವಲ್ಪ ಜಮೀ ನಿತ್ತು. ಆದರೆ ಪುತ್ರನಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರು. ಈ ಶಿಕ್ಷಣವೇ ಇವರಿಗೆ ಸ್ವಂತ ಕಂಪೆನಿಯೊಂದನ್ನು ಆರಂಭಿಸುವ ಧೈರ್ಯ ತುಂಬಿತು. 

ಹಳ್ಳಿಯಲ್ಲಿ ಆರಂಭದ ಸಾಹಸ
ಜಿಲ್ಲಾ ಕೇಂದ್ರ ಇಲ್ಲವೇ ದೊಡ್ಡ ನಗರದಲ್ಲಿ ಕಂಪೆನಿ ಆರಂಭಿಸುವುದು ಬಿಟ್ಟು ಹಳ್ಳಿಯಲ್ಲಿ ಉದ್ಯಮ ತೆರೆದು ನಷ್ಟ ಮಾಡಿಕೊಳ್ಳುತ್ತಾನೆ ಎಂದು ಆರಂಭದಲ್ಲಿ ಕೆಲವರು ಗೇಲಿ ಮಾಡಿದ್ದರು. ಆದರೆ, ಹಿಡಿದ ಛಲ ಬಿಡದ ಇವರು ಎಲ್ಲ ಸವಾಲುಗಳನ್ನು  ಎದುರಿಸಿದರು. ಉದ್ಯೋಗಕ್ಕಾಗಿ  ಅಲೆಯುವ  ಬದಲು  ತಾವೇ ಉದ್ಯೋಗಿ ನೀಡಿದರು.

ಶೃಂಗೇರಿಯಲ್ಲಿ ಬಿಎಸ್‌ಸಿ ಓದಿದ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಎಂಎಸ್‌ಸಿ ಪಡೆದ ನವೀನ್‌ ಅವರು ವಿವಿಗೆ ಮೂರನೇ ರ್‍್ಯಾಂಕ್‌ ಗಳಿಸಿದರು. ಆನಂತರ ಯಾವುದಾದರೂ ಕಂಪೆನಿ ಯಲ್ಲಿ ಉದ್ಯೋಗಕ್ಕೆ ಸೇರಿ ಬದುಕು ಕಂಡುಕೊಳ್ಳಬಹುದಿತ್ತು. ಆದರೆ ಏನಾದರೂ ಸ್ವತಃ ಕಂಪೆನಿ ಮಾಡಬೇಕು ಎಂಬ ಆಸೆಯೊಂದು ಅವರಲ್ಲಿ ಮೊಳಕೆಯೊಡೆದಿತ್ತು. ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ  ಕಿರಿಯ ಸಂಶೋಧನಾ ಸಹಾ ಯಕನಾಗಿ ಸೇರಿಕೊಂಡರೂ  ಅಲ್ಲಿ ಕೆಲಸ ಮುಂದುವರಿಸಲು ಇಷ್ಟವಾಗಲಿಲ್ಲ.

ಆಗ ಇವರಿಗೆ ಮಾದರಿಯಾಗಿ ಕಂಡದ್ದು ಬಯೋಕಾನ್‌. ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಈ ಸಂಸ್ಥೆಯ ರೀತಿಯೇ ತಾನೂ ಕಂಪೆನಿಯೊಂದನ್ನು ಆರಂಭಿಸಬೇಕು ಎಂಬ ಆಲೋಚನೆ ಮನದಲ್ಲಿ ಮೂಡಿತು. ಗ್ರಾಮೀಣ ಭಾಗದ ರೈತರಿಗೆ ನೆರವಾಗಲು, ಅವರ ಆರ್ಥಿಕ ಸದೃಢತೆಗೆ ಕೈಜೋಡಿಸಬೇಕು ಎಂಬ ಆಲೋಚನೆ ಹೊಳೆಯಿತು.

2004ರಲ್ಲಿ ಒಎಲ್‌ವಿ ಅಗ್ರಿ ಕ್ಲಿನಿಕ್‌ ಎಂಬ ಹೆಸರಿನ ಗೊಬ್ಬರ ಮಾರಾಟದ ಅಂಗಡಿಯನ್ನು ಬಾಳೆಹೊನ್ನೂರು ಪಟ್ಟಣದಲ್ಲಿ  ಆರಂಭಿಸಿದರು. ಆದರೆ ಇಷ್ಟಕ್ಕೆ ಸುಮ್ಮನಾಗದೆ  2008ರಲ್ಲಿ  ‘ಗ್ರೀನ್‌ ಬಯೋಟೆಕ್‌’ ಎಂಬ ಸಾವಯವ ಗೊಬ್ಬರ ತಯಾರಿಕಾ ಸಂಸ್ಥೆ ತೆರೆದರು. ಕೇವಲ ಮೂರು ಗೊಬ್ಬರ ಉತ್ಪನ್ನಗಳಿಂದ ಆರಂಭವಾದ ಸಂಸ್ಥೆ  ಇಂದು 71 ಸಾವಯವ ಔಷಧ ಉತ್ಪನ್ನಗಳನ್ನು ತಯಾರಿಸುತ್ತಿದೆ.  ಇನ್ನೂ ಹಲವು ಉತ್ಪನ್ನಗಳ ಪರೀಕ್ಷೆ ನಡೆಯುತ್ತಿದೆ. ಆರಂಭದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಸದ್ಯ ಅಲ್ಲಿ ₹ 2.5 ಕೋಟಿ ವಹಿವಾಟು ನಡೆಸುತ್ತಿದೆ.

ದಕ್ಷಿಣ ಭಾರತ, ಶ್ರೀಲಂಕಾ, ಚೀನಾ, ಬೆಲ್ಜಿಯಂ, ವಿಯೆಟ್ನಾಂ, ಗ್ರೀಸ್‌, ಇಸ್ರೇಲ್‌ ಗಳಲ್ಲಿ ತನ್ನ ವ್ಯಾಪಾರದ ಜಾಲ ಚಾಚಿದೆ. ಸಂಸ್ಥೆಯ ಎಲ್ಲ ಉತ್ಪನ್ನಗಳನ್ನು ತಯಾರಿಸಿದ ನಂತರ ಕನಿಷ್ಠ ಎರಡು ವರ್ಷ ಕಂಪೆನಿಯ ಜಮೀನಿನಲ್ಲಿ ಪ್ರಯೋಗಿಸಿ ಅದರ ಸಾಧಕ ಬಾಧಕಗಳನ್ನು  ಅರಿತ ನಂತರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ತಾಂತ್ರಿಕ ಸಹಾಯ
ಫಾರ್ಮುಲಾ ಸಿದ್ಧಪಡಿಸುವುದರಿಂದ ಹಿಡಿದು  ಔಷಧಗಳ ತಯಾರಿಯ  ಎಲ್ಲ ಹಂತಗಳನ್ನು ಸ್ವತಃ ನವೀನ್‌ ಅವರೇ  ಖುದ್ದು ನಿರ್ವಹಣೆ ಮಾಡುತ್ತಾರೆ. ‘ಇಂಪ್ಯಾಕ್ಟ್‌ ಆಫ್‌ ಮೈಕ್ರೊ ನ್ಯೂಟ್ರಿಯಂಟ್ಸ್‌ ಅನ್‌ ಮಲಬಾರಿ ಪ್ಲ್ಯಾಂಟ್‌್’ ಎಂಬ  ವಿಷಯದ ಮೇಲೆ ಇವರು ಪಿಎಚ್‌.ಡಿ ಮಾಡಿರುವುದು ಇದಕ್ಕೆ ಸಹಕಾರಿಯಾಗಿದೆ. 

ಮುದುಗುಣಿಯಲ್ಲಿರುವ ಪ್ರಯೋಗಾಲಯದಲ್ಲಿ ಸದ್ಯ ನಾಲ್ಕು ಮಂದಿ ಕೆಲಸ ಮಾಡುತ್ತಾರೆ. ಒಟ್ಟು ಆರು ಸಿಬ್ಬಂದಿ ಇಲ್ಲಿ ಇದ್ದಾರೆ.  ರಾಜ್ಯದಲ್ಲಿ  ಬೆಳಗಾವಿ ಮತ್ತು ಬಾಗಲಕೋಟೆ ಹೊರತುಪಡಿಸಿ ಉಳಿದ ಜಿಲ್ಲೆಗೆ ಒಬ್ಬರು ಮಾರಾಟ ಪ್ರತಿನಿಧಿಗಳನ್ನು ನೇಮಿಸಿ ಕೊಳ್ಳಲಾಗಿದೆ. ಅವರ ನೆರವಿಗೆ  ವಾಹನಗಳನ್ನು ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ತಿಂಗಳ ಹಿಂದೆ ಮಾರಾಟ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದ್ದು, ಮುಂದೆ ಅಲ್ಲಿಯೂ ವ್ಯಾಪಾರ ವಹಿವಾಟು ನಡೆಯಲಿದೆ.

ಅಂತರರಾಷ್ಟ್ರೀಯ ಗುಣಮಟ್ಟ
ಗ್ರೀನ್‌ ಬಯೋಟೆಕ್‌ನ ಎಲ್ಲ ಸಾವಯವ ಔಷಧಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆ ಗುಣಮಟ್ಟಕ್ಕೆ ಸರಿಹೊಂದು ವಂತೆ ತಯಾರಿಸಲಾಗುತ್ತದೆ.  ಶ್ರೀಲಂಕಾ ದಲ್ಲಿ ಟೀ ಬೆಳೆಗೆ ತಲುಲಿದ ರೆಡ್‌ಮೈಟ್ ಎನ್ನುವ ರಸ ಹೀರುವ ಕೀಟಕ್ಕೆ ಗ್ರೀನ್‌ ಬಯೋಟೆಕ್‌ ತಯಾರಿಸಿದ ‘ನಿಯೋ ಮೈಟ್‌’ ಎಂಬ ಔಷಧ ಯಶಸ್ವಿಯಾಗಿದೆ. ವಿಯೆಟ್ನಾಂಗೆ ಕಳೆದ ವರ್ಷದಿಂದ ಔಷಧ ಪೂರೈಸಲಾಗುತ್ತಿದೆ.

ಭಾರತದಲ್ಲಿ ಭತ್ತ, ತರಕಾರಿ, ಕಾಫಿ, ಮೆಣಸು, ಟೀ ಬೆಳೆಗೆ ಗ್ರೀನ್‌ ಬಯೋ ಟೆಕ್‌ನ  ಔಷಧಗಳು ಬಳಕೆಯಲ್ಲಿವೆ. ವಿದೇಶಗಳಿಂದಲೂ ಪ್ರತಿನಿಧಿಗಳು ಕಂಪೆನಿಗೆ ಭೇಟಿ ನೀಡಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಪೂರೈಕೆ ಸಮಸ್ಯೆ
ಬಾಳೆಹೊನ್ನೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಕಂಪೆನಿ ನಡೆಯುತ್ತಿರುವ ಕಾರಣ ಔಷಧ ಉತ್ನನ್ನಗಳನ್ನು ವಿದೇಶ ಗಳಿಗೆ ಸೂಕ್ತ ಸಮಯದಲ್ಲಿ ಪೂರೈಸು ವುದು ಸ್ವಲ್ಪ ಸಮಸ್ಯೆಯಾಗುತ್ತಿದೆ. ಆದರೂ ಹಳ್ಳಿಯಲ್ಲೇ ಹುಟ್ಟಿದ ಕಂಪೆನಿ ಬೆಳೆಯಬೇಕು ಎನ್ನುತ್ತಾರೆ ನವೀನ್‌. ಇನ್ನುಳಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕಣ್ಣಾ ಮುಚ್ಚಾಲೆಯು ತಯಾರಿಕೆಗೆ ಸ್ವಲ್ಪ ತೊಡಕಾಗಿದೆ.

ಭವಿಷ್ಯದ ಆಲೋಚನೆ
ಇನ್ನಷ್ಟು ದೇಶಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಸಿದ್ಧತೆಯಲ್ಲಿದ್ದಾರೆ ನವೀನ್‌. ಕಳೆದ ತಿಂಗಳು ದುಬೈಗೆ ಭೇಟಿ ನೀಡಿದ್ದ ಇವರು, ಅಲ್ಲಿ ದ್ರಾಕ್ಷಿ ಮತ್ತು ಸೇಬಿನ ಕಾಯಿಲೆಗಳಿಗೆ ತಮ್ಮ ಸಂಸ್ಥೆಯ ಜೈವಿಕ ಔಷಧ ಬಳಕೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎನ್ನುವುದನ್ನು  ವಿವರಿಸಿದ್ದಾರೆ. ಇನ್ನು ಒಂದು ವರ್ಷದಲ್ಲಿ ದುಬೈಗೆ ಗ್ರೀನ್‌ ಬಯೋಟೆಕ್ ಉತ್ಪನ್ನಗಳು ರಫ್ತಾಗಲಿವೆ.

‘ರಾಸಾಯನಿಕಗಳಿಗೆ ಕೆಲವು ದೇಶಗಳು ನಿಷೇಧ ಹೇರುತ್ತಿವೆ. ಅಂತಹ ಸಂದರ್ಭದಲ್ಲಿ ಜೈವಿಕ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಲಿದೆ’ ಎಂಬ ಆತ್ಮವಿಶ್ವಾಸ ನವೀನ್ ಅವರದು.

ರೈತರ ಸಹಾಯವಾಣಿ
ಸಂಸ್ಥೆ ವತಿಯಿಂದ ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ರೈತರು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ಒಳಗೆ 9448754855 ಗೆ ಕರೆ  ಮಾಡಿ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು. 

ಗ್ರೀನ್‌ ಲೀಫ್‌ ಇಂಟರ್‌ನ್ಯಾಷನಲ್‌ 2015ರಲ್ಲಿ ಗ್ರೀನ್‌ ಲೀಫ್‌ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆಯನ್ನು ಆರಂಭಿಸಲಾಗಿದ್ದು, ಇದರ ಮೂಲಕ ಸಾವಯವ ಗೊಬ್ಬರಗಳನ್ನು ಹನಿ ನೀರಾವರಿ ಪದ್ಧತಿಯಲ್ಲಿ ಜಮೀನುಗಳಿಗೆ ಪೂರೈಸುವ ವಿನೂತನ ವಿಧಾನವನ್ನು ಕೈಗೊಂಡಿದೆ.

ತಂದೆಯಿಂದ ಉದ್ಯಮಕ್ಕೆ ಸಾಲ
ಮೊದಲಿಗೆ ಔಷಧ ಘಟಕ ಆರಂಭಿಸಲು ತಂದೆಯಿಂದಲೇ ನವೀನ್ ಅವರು  ₹75 ಸಾವಿರ ಸಾಲ ಪಡೆದಿದ್ದರು.  ಇವರ ತಂದೆ ಕೇವಲ 8ನೇ ತರಗತಿ ಓದಿದ್ದವರು. ಒಂದಷ್ಟು  ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು.  ಬ್ಯಾಂಕ್‌ನಿಂದ ಸಾಲ ಪಡೆದು ತಂದೆಯ ಸಾಲವನ್ನು ವಾಪಸ್‌ ಮಾಡಿದ ನವೀನ್‌ ಸ್ವಾವಲಂಬಿಯಾಗಿ ಬೆಳೆದರು. ಈಗ ಸಂಸ್ಥೆಯ  ಮೇಲೆ ಯಾವುದೇ ಬ್ಯಾಂಕ್‌ಗಳ  ಸಾಲವಿಲ್ಲ. ಬ್ಯಾಂಕ್‌ಗಳೇ ಸಾಲಕೊಡಲು ಮುಂದೆ ಬರುತ್ತಿವೆ.  

ಉಚಿತ ಮಣ್ಣು ಪರೀಕ್ಷೆ
2014ರಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಅಗ್ರಿಕಲ್ಚರ್‌ ಟೆಕ್ನಾಲಜಿ ಎಂಬ ಮಣ್ಣು ಪರೀಕ್ಷಾ ಕೇಂದ್ರವನ್ನು ನವೀನ್ ಅವರು ಆರಂಭಿಸಿದ್ದು, ರೈತರಿಗೆ ಕಡಿಮೆ ದರದಲ್ಲಿ ಮಣ್ಣು, ನೀರು, ಎಲೆಗಳನ್ನು ಪರೀಕ್ಷಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ವರ್ಷಕ್ಕೆ 15 ರಿಂದ 20 ಸಾವಿರ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡಿಕೊಡ ಲಾಗುತ್ತದೆ.  ಎನ್‌ಪಿಕೆ, ಪಿಎಚ್‌ಗೆ ಪರೀಕ್ಷೆಗೆ ಶುಲ್ಕ ವಿಧಿಸುವುದಿಲ್ಲ.  ಮೈಕ್ರೊ ನ್ಯೂಟ್ರಿಯಂಟ್ಸ್‌ ಪರೀಕ್ಷೆ ಬೇಕಾದರೆ ಅಲ್ಪ ಮೊತ್ತ ಪಾವತಿಸಬೇಕು. ಕಡು ಬಡ ರೈತರಿಗೆ ಎಲ್ಲವನ್ನೂ ಉಚಿತವಾಗಿ ಪರೀಕ್ಷೆ ಮಾಡಿಕೊಡಲಾಗುತ್ತದೆ.

ಮಾಹಿತಿಗೆ: www. greenbiotech.co.in
ದೂರವಾಣಿ: 96119 43119

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT