ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವುಂಡು ನಕ್ಕವರು

Last Updated 7 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬಿ.ಕಾಂ ಕಲಿಯುತ್ತಿರುವ ಶ್ರೀದೇವಿ ಪೂಜಾರ ನಿತ್ಯ ಕಾಲೇಜಿಗೆ ಹೋಗುವಾಗ ಆಕೆಯೊಂದಿಗೆ ತಾಯಿ– ತಂದೆ ಇಬ್ಬರೂ ಇರಬೇಕು. ಕಾಲೇಜು ಅಂಗಳಕ್ಕೆ ಬರುವುದಷ್ಟೇ ಅಲ್ಲ, ಶ್ರೀದೇವಿ ಕುಳಿತು ಪಾಠ ಕೇಳುವ ಡೆಸ್ಕ್‌ವರೆಗೂ ಪೋಷಕರು ಬರಬೇಕು. ಕಾರಣವಿಷ್ಟೆ; ಶ್ರೀದೇವಿಯ ಎರಡೂ ಕಾಲುಗಳಿಗೆ ಸ್ವಾಧೀನ ಇಲ್ಲ!

ಮನೆಯಲ್ಲಿ ಪುಟಾಣಿ ಮಗುವಿನಂತೆ ತೆವಳುವ ಶ್ರೀದೇವಿಯನ್ನು ಪೋಷಕರು ಶಾಲಾ– ಕಾಲೇಜುಗಳಲ್ಲಿ ತೆವಳಲು ಬಿಡಲಿಲ್ಲ. ಆಕೆಯನ್ನು ವ್ಹೀಲ್‌ಚೇರ್‌ ಮೇಲೆ ಕೂರಿಸಿಯೂ ಕಾಲೇಜಿಗೆ ಕಳುಹಿಸಲಿಲ್ಲ. ಶ್ರೀದೇವಿಯನ್ನು ಮಗುವಿನಂತೆ ಎತ್ತಿಕೊಂಡು ಹೋಗಿ ಆಕೆಯ ಸೀಟ್‌ನಲ್ಲಿ ಕೂರಿಸಿ ಬರುವ ಅವರು ಮಗಳಿಗಾಗಿ ಜೀವ ತೇಯ್ದಿದ್ದಾರೆ. ಹುಬ್ಬಳ್ಳಿಯ ಕೆ.ಎಚ್‌. ಪಾಟೀಲ ವಾಣಿಜ್ಯ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್‌ ಕಲಿಯುತ್ತಿರುವ ಶ್ರೀದೇವಿ, ಕಾಲೇಜಿಗೆ ಹೋಗಲು ತಯಾರಾದರೆ ತಂದೆ–ತಾಯಿಯೂ ತಯಾರಾಗಬೇಕು.  

ತಾಯಿ ಸಾವಿತ್ರಿ ಒಂದು ಕೈಯಲ್ಲಿ ಬ್ಯಾಗ್‌ ಹಿಡಿದು ಮತ್ತೊಂದು ಕೈಯಲ್ಲಿ 21 ವರ್ಷದ ಮಗಳನ್ನು ಅಪ್ಪಿಕೊಂಡು ಹೊರಗೆ ಬರುತ್ತಾರೆ. ಹೊರಗೆ ಶ್ರೀದೇವಿ ತಂದೆ ಮಹಾಂತಪ್ಪ ಬೈಕ್‌ ಸ್ಟಾರ್ಟ್‌ ಮಾಡಿಕೊಂಡು ನಿಂತಿರುತ್ತಾರೆ. ತಂದೆ–ತಾಯಿ ಶ್ರೀದೇವಿಯನ್ನು ಮಗುವಿನಂತೆ ಮಧ್ಯದಲ್ಲಿ ಕೂರಿಸಿಕೊಂಡು ಕಾಲೇಜಿಗೆ ಕರೆತರುತ್ತಾರೆ. ಅಲ್ಲಿಂದ ತಾಯಿ ಶ್ರೀದೇವಿಯನ್ನು ಎತ್ತಿಕೊಂಡು ತರಗತಿಯೊಳಗಿನ ಶ್ರೀದೇವಿ ಕುಳಿತುಕೊಳ್ಳುವ ಜಾಗದಲ್ಲಿ ಕೂರಿಸಿ ಬರುತ್ತಾರೆ.

ಮತ್ತೆ ಮಧ್ಯಾಹ್ನ ಕಾಲೇಜು ಬಿಡುವ ವೇಳೆಗೆ ತಂದೆ– ತಾಯಿ ಇಬ್ಬರೂ ಕಾಲೇಜಿಗೆ ಬಂದು ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮನೆಗೆ ಹೋಗುತ್ತಾರೆ. ಇದು 10 ವರ್ಷಗಳಿಂದ ನಡೆಯುತ್ತಿರುವ ದಿನಚರಿಯಾಗಿದ್ದು, ಯಾವುದೇ ಅಳುಕಿಲ್ಲದೆ ಮಗಳಿಗಾಗಿ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಶ್ರೀದೇವಿಯೂ ಅಷ್ಟೆ, ಸ್ಫೂರ್ತಿಯ ಚಿಲುಮೆ. ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಮುಂದಿರುವ ಆಕೆ ಮನೆ– ಕಾಲೇಜಿನಲ್ಲಿ ಎಲ್ಲರ ಪ್ರೀತಿಯ ಶ್ರೀದೇವಿ ಆಗಿದ್ದಾರೆ.

ನೋವುಂಡ ನಗುಮೊಗದ ಶ್ರೀದೇವಿ...
ಶ್ರೀದೇವಿ ಹುಟ್ಟಿದಾಗ ಕಾಲುಗಳು ಚೆನ್ನಾಗೇ ಇದ್ದವು. ಆದರೆ ಆಕೆಯ ದೇಹ ಸಹಜವಾಗಿ ಇರಲಿಲ್ಲ. ಬೆನ್ನುಮೂಳೆ ಹಾವಿನಂತೆ ಡೊಂಕಾಗಿತ್ತು. ಎರಡು ಕಡೆಯ ಪಕ್ಕೆಲುಬುಗಳು ನೇರವಾಗಿ ಇರಲಿಲ್ಲ. ಭುಜಗಳು ಮೇಲೊಂದು ಕೆಳಗೊಂದರಂತೆ ಇದ್ದವು.

ಮಗುವಿಗೆ ಶ್ವಾಸಕೋಶದ ತೊಂದರೆಯೂ ಇತ್ತು. ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗು ನಾಲ್ಕು ದಿನಗಳ ಕಾಲ ಐಸಿಯುನಲ್ಲಿ ಜೀವ ಹಿಡಿದು ಹೋರಾಡಿ ಗೆದ್ದು ಬಂದಿತ್ತು. ಮೊದಲ ಒಂದು ವರ್ಷ ಅನಾರೋಗ್ಯದಿಂದ ಒದ್ದಾಡಿದ್ದ  ಶ್ರೀದೇವಿ ನಂತರ ಆರೋಗ್ಯದಿಂದ ಎಲ್ಲ ಮಕ್ಕಳಂತೆ ಅಂಬೆಗಾಲಿಟ್ಟಿದ್ದಳು. ದೇಹ ಅಸಹಜವಾಗಿದ್ದರೂ ಶ್ರೀದೇವಿ ಬುದ್ಧಿಯಲ್ಲಿ ಚುರುಕಾಗಿದ್ದಳು. ಅಸಹಜ ದೇಹದಲ್ಲೇ ಶಾಲೆಗೆ ಹೋದ ಶ್ರೀದೇವಿ ನೃತ್ಯ ಮಾಡುತ್ತಿದ್ದಳು, ಕ್ರೀಡಾ ಚಟುವಟಿಕೆಯಲ್ಲೂ ಭಾಗವಹಿಸುತ್ತಿದ್ದಳು.

ಆದರೆ ಪೋಷಕರು ಮಗಳ ಅಸಹಜ ದೇಹ ಕಂಡು ಮರುಗುತ್ತಿದ್ದರು. ಶ್ರೀದೇವಿಯನ್ನು ಕಂಡವರೆಲ್ಲ ಆಪರೇಷನ್‌ ಮೂಲಕ ದೇಹವನ್ನು ಸರಿ ಮಾಡಿಸುವಂತೆ ಸಲಹೆ ಕೊಡುತ್ತಿದ್ದರು. ವೈದ್ಯರು ಕೂಡ ದೇಹವನ್ನು ಸಹಜವಾಗಿಸುವ ಅವಕಾಶಗಳ ಬಗ್ಗೆ ಹೇಳುತ್ತಿದ್ದರು. ಎಲ್ಲ ಮಕ್ಕಳಂತೆ ತಮ್ಮ ಮಗಳೂ ಸಹಜವಾಗಿರಬೇಕು ಎಂಬ ಕನಸು ಕಟ್ಟಿದ ತಂದೆ ಮಹಾಂತಪ್ಪ ಮಣಿಪಾಲ್‌ ಆಸ್ಪತ್ರೆಯಲ್ಲಿ ಮಗಳ ಬೆನ್ನು ಮೂಳೆಗೆ ಶಸ್ತ್ರಚಿಕಿತ್ಸೆ ಮಾಡಿಸಿದರು. ಬೆನ್ನಿಗೆ ರಾಡ್‌ ಸೇರಿಸಿ ಹಾವಿನಂತೆ ಡೊಂಕಾಗಿದ್ದ ಬೆನ್ನುಮೂಳೆಯನ್ನು ನೇರ ಮಾಡಲಾಯಿತು. ಮೂರು ತಿಂಗಳು ಆಸ್ಪತ್ರೆಯಲ್ಲಿದ್ದ  ಶ್ರೀದೇವಿ ನಂತರ ಶಾಲೆಗೆ ಹೋದರು. ಅಪಾರ ನೋವುಂಡ ಶ್ರೀದೇವಿ ನೋವಿನಲ್ಲೂ  ಶಾಲೆಗೆ ಹೋಗುತ್ತಿದ್ದರು.

ಎಲ್ಲ ಮಕ್ಕಳಂತೆ ಓಡಾಡಿಕೊಂಡಿದ್ದ ಶ್ರೀದೇವಿ ಆರನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಇದ್ದಕ್ಕಿದ್ದಂತೆ ಡೆಸ್ಕ್‌ ಮೇಲಿಂದ ಕೆಳಗೆ ಬಿದ್ದರು. ಬಿದ್ದ ರಭಸಕ್ಕೆ ಬೆನ್ನು ಮೂಳೆಗೆ ಕೊಟ್ಟಿದ್ದ ರಾಡ್‌ ಕೆಳಗಿದ್ದ ನರಗಳು ತುಂಡಾದವು. ಪ್ರಜ್ಞೆ ತಪ್ಪಿದ ಶ್ರೀದೇವಿಯನ್ನು ಶಿಕ್ಷಕರು ಸಂತೈಸಿದರು. ಶ್ರೀದೇವಿಗೆ ಪ್ರಜ್ಞೆ ಮರಳಿ ಬಂದಾಗ ಕಾಲುಗಳ ಪ್ರಜ್ಞೆ ಇಲ್ಲದಂತಾಗಿತ್ತು. ಮಣಿಪಾಲ್‌ ಆಸ್ಪತ್ರೆಗೆ ಹೋಗಿ ಮತ್ತೆ ಆಪರೇಷನ್‌ ಮಾಡಿಸಿದರು. ಬೆನ್ನುಮೂಳೆ ನೇರವಾಗೇ ಇತ್ತು. ಆದರೆ ನರಗಳು ತುಂಡಾಗಿ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಅಲ್ಲಿಂದ ಇಲ್ಲಿಯವರೆಗೂ ಕಾಲುಗಳು ಬೆಳವಣಿಗೆ ಹೊಂದಲೇ ಇಲ್ಲ.  ಓಡಾಡಿಕೊಂಡಿದ್ದ ಶ್ರೀದೇವಿ ಸಂಪೂರ್ಣವಾಗಿ ತೆವಳುವಂತಾಯಿತು.

ಮಗಳ ಸ್ಥಿತಿ ಕಂಡು ಮರುಗಿದ ಮಹಾಂತಪ್ಪ ಮಗಳನ್ನು ತೋರಿಸದ ಆಸ್ಪತ್ರೆಯೇ ಇಲ್ಲವಾಯಿತು. ಜನ ಹೇಳುವ ಆಸ್ಪತ್ರೆಗಳೆಲ್ಲೆಲ್ಲಾ  ಮಗಳನ್ನು ಹೊತ್ತು ತಿರುಗಿದರು.ಮಹಾರಾಷ್ಟ್ರದ ಹಲವು ಆಸ್ಪತ್ರೆಗಳಿಗೆ ಹೋಗಿ ಬಂದರು. ಆದರೆ ಶ್ರೀದೇವಿ ಸ್ಥಿತಿ ಬದಲಾಗಲಿಲ್ಲ.  ಶಸ್ತ್ರಚಿಕಿತ್ಸೆಗಳ ನೋವಿನಲ್ಲಿ ನರಳುತ್ತಿದ್ದರೂ ಶ್ರೀದೇವಿ ಓದಿನಲ್ಲಿ ಹಿಂದೆ ಉಳಿಯಲಿಲ್ಲ. ಕೆ.ಎಲ್‌.ಇ ಸಂಸ್ಥೆಯ ಎಫ್‌.ಎಚ್‌. ಕಟ್ಟಿಮನಿ ಶಾಲೆಯಲ್ಲಿ ಪ್ರಾಥಮಿಕ ಹೌಗೂ ಪ್ರೌಢ ಶಿಕ್ಷಣ ಮುಗಿಸಿದರು. ತಾಸುಗಟ್ಟಲೇ ಕುಳಿತೇ ಓದುತ್ತಿದ್ದ ಶ್ರೀದೇವಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 72ರಷ್ಟು ಅಂಕ ಗಳಿಸಿದರು.

ಹುಬ್ಬಳ್ಳಿಯ ವೇಮನ ವಿದ್ಯಾವರ್ಧಕ ಸಂಘದ ವಿಶ್ವಭಾರತಿ ಕಾಲೇಜಿನಲ್ಲಿ ಪಿ.ಯು.ಸಿ(ವಾಣಿಜ್ಯ)ಯನ್ನೂ ಮುಗಿಸಿದರು. ಇದೇ ಸಂಸ್ಥೆಯ ಕೆ.ಎಚ್‌. ಪಾಟೀಲ ವಾಣಿಜ್ಯ ಕಾಲೇಜು, ಶ್ರೀದೇವಿಗೆ  ಶುಲ್ಕ ರಿಯಾಯಿತಿ ನೀಡಿ ಬಿ.ಕಾಂಗೆ ಪ್ರವೇಶ ನೀಡಿತು.  ಸದ್ಯ ನಾಲ್ಕನೆ ಸೆಮಿಸ್ಟರ್‌ನಲ್ಲಿರುವ ಶ್ರೀದೇವಿಯನ್ನು ಪ್ರೊ. ಎಚ್‌.ಎಸ್‌. ಚವಡಾಪುರ ಅವರು ಮಗಳಂತೆ ನೋಡಿಕೊಳ್ಳುತ್ತಿದ್ದು ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ.

‘ಶ್ರೀದೇವಿಯ ನಗುಮುಖ ಎಲ್ಲರ ಗಮನ ಸೆಳೆಯುತ್ತದೆ. ಆಕೆ ಕಾಲೇಜು ಅಂಗಳಕ್ಕೆ ಬಂದರೆ ಸ್ಫೂರ್ತಿ ಬಂದಂತಾಗುತ್ತದೆ. ಆಕೆ ಅಂಗವಿಕಲರಿಗೆ ಪ್ರೇರಣಾ ಶಕ್ತಿಯಾಗಿ ನಿಲ್ಲುತ್ತಾಳೆ’ ಎಂದು ಪ್ರೊ. ಎಚ್‌.ಎಸ್‌. ಚವಡಾಪುರ ಶ್ರೀದೇವಿ ಬಗ್ಗೆ ಹೇಳುತ್ತಾರೆ.

ಶ್ರೀದೇವಿ ಭಾಗ್ಯ...
ಶ್ರೀದೇವಿಗೆ ಕಾಲೇಜಿನಲ್ಲಿ ಭಾಗ್ಯಶ್ರೀ ಜವಳಿ ಎಂಬ ಗೆಳತಿ ಸಿಕ್ಕಿದ್ದಾಳೆ. ತಾಯಿಯನ್ನು ಕಳೆದುಕೊಂಡಿರುವ ಭಾಗ್ಯಶ್ರೀ, ಶ್ರೀದೇವಿಯಲ್ಲಿ ಅಪಾರ ಪ್ರೀತಿ ಕಂಡಿದ್ದಾಳೆ. ಪ್ರಾಯೋಗಿಕ ತರಗತಿ ಇದ್ದಾಗ ಕೊಠಡಿ ಬದಲಾಗುತ್ತವೆ. ಆ ವೇಳೆಯಲ್ಲಿ ಭಾಗ್ಯಶ್ರೀ, ಗೆಳತಿಯನ್ನು ತೆವಳಲು ಬಿಡುವುದಿಲ್ಲ. ತಾನೇ ಎತ್ತಿಕೊಂಡು ಹೋಗಿ ಬೇರೆ ಕೊಠಡಿಯಲ್ಲಿ ಕೂರಿಸುತ್ತಾಳೆ.

ಕಾಲೇಜು ಬೇಗ ಮುಗಿದರೆ ಶ್ರೀದೇವಿಯ ತಂದೆಗೆ ಕರೆ ಮಾಡಿ ಕರೆದುಕೊಂಡು ಹೋಗುವಂತೆ ತಿಳಿಸಿ, ಶ್ರೀದೇವಿ ಮನೆಗೆ ಹೋದ ಮೇಲೆ ಭಾಗ್ಯಶ್ರೀ ಹೋಗುತ್ತಾಳೆ. ಪ್ರತಿನಿತ್ಯ ಶ್ರೀದೇವಿ ಹೆಸರಲ್ಲಿ ಅರ್ಚನೆ ಮಾಡಿಸಿ ಕೈಗೆ ಕಂಕಣ ತಂದು ಕಟ್ಟುವ ಭಾಗ್ಯಶ್ರೀ, ಶ್ರೀದೇವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾಳೆ. ಪ್ರತಿನಿತ್ಯ ಬಾಕ್‌್ಸ ತಂದು ಹಂಚಿ ತಿನ್ನುವ ಇವರು ಆತ್ಮೀಯ ಗೆಳತಿಯರಾಗಿದ್ದಾರೆ.

ಶ್ರೀದೇವಿಗೆ ಇಬ್ಬರು ತಮ್ಮಂದಿರಿದ್ದಾರೆ. ಬಸವರಾಜ ಎಂಜಿನಿಯರಿಂಗ್‌ ಕಲಿಯುತ್ತಿದ್ದರೆ, ವಿನಾಯಕ ಪಿಯುಸಿ ಓದುತ್ತಿದ್ದಾರೆ. ಈ ಇಬ್ಬರು ತಮ್ಮಂದಿರು ಅಕ್ಕನ ಕಾಲಿನಂತಿದ್ದಾರೆ. ಮನೆಯಲ್ಲಿ ವ್ಹೀಲ್‌ಚೇರ್‌ ಇದ್ದರೂ ಅದನ್ನು ಬಳಸುವುದಿಲ್ಲ. ತಂಗಿಯನ್ನು ಎತ್ತಿಕೊಂಡೇ ತಿರುಗುತ್ತಾರೆ. ಶ್ರೀದೇವಿ ಮನೆಯ ಎಲ್ಲ ಜವಾಬ್ದಾರಿ ನಿರ್ವಹಿಸುತ್ತಾರೆ. ತಮ್ಮಂದಿರಿಗೆ ಸಲಹೆ, ಸೂಚನೆ ಕೊಡುತ್ತಾರೆ. ಮನೆಯಲ್ಲಿ ಇದ್ದಾಗ ಕುಶಲಗಾರಿಕೆ ಕೆಲಸ ಮಾಡುವ ಶ್ರೀದೇವಿ, ಮನೆಯ ಆಲಂಕಾರಿಕ ವಸ್ತುಗಳನ್ನು ತಯಾರಿಸುವ ಕೌಶಲ ಸಿದ್ಧಿಸಿಕೊಂಡಿದ್ದಾರೆ.

‘ಅಪ್ಪ– ಅಮ್ಮನಿಗೆ ಭಾರವಾಗಿ ಇರಲು ಇಷ್ಟವಿಲ್ಲ. ನಾನು ಒಳ್ಳೆಯ ಕೆಲಸ ಹಿಡಿದು ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎನ್ನುವ ಶ್ರೀದೇವಿ ಪದವಿ ಪೂರೈಸಿ ಎ.ಕಾಂ. ಮಾಡುವ ಕನಸಿನಲ್ಲಿದ್ದಾರೆ. ಶ್ರೀದೇವಿ ಅವರನ್ನು 8147206653ರಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT