ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜಾರಿಗೆ ಆದ್ಯತೆ

Last Updated 7 ಸೆಪ್ಟೆಂಬರ್ 2016, 19:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವುದು ಸದ್ಯಕ್ಕೆ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಸೂಲಾಗದ ಸಾಲದ ಸಮಸ್ಯೆಯಿಂದ (ಎನ್‌ಪಿಎ) ಹೊರಬಂದು ಮತ್ತೆ ಲಾಭದ ಹಾದಿಗೆ ಮರಳುವಂತೆ ಮಾಡುವುದು, ಸ್ಥಗಿತಗೊಂಡಿರುವ ಮೂಲ ಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸರ್ಕಾರದ ಆದ್ಯತಾ ಪಟ್ಟಿಯಲ್ಲಿ ಇವೆ’ ಎಂದು ಹೇಳಿದ್ದಾರೆ.

‘ದ ಇಕನಾಮಿಸ್ಟ್‌’ ನಿಯತಕಾಲಿಕೆಯು ಬುಧವಾರ ಇಲ್ಲಿ  ಏರ್ಪಡಿಸಿದ್ದ ಭಾರತ ಶೃಂಗಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 
‘ಮುಂದಿನ ವರ್ಷದ ಏಪ್ರಿಲ್‌ 1ರಿಂದ ‘ಜಿಎಸ್‌ಟಿ’ ಜಾರಿಗೆ ತರುವ ಕಠಿಣ ಗುರಿ ನಿಗದಿಪಡಿಸಲಾಗಿದೆ. ನಾವು ಕಾಲದ ವಿರುದ್ಧ ಓಡುತ್ತಿದ್ದೇವೆ. 

ಗುರಿ ತಲುಪಲು ಸಾಕಷ್ಟು ಪರಿಶ್ರಮ ಪಡಲಾಗುತ್ತಿದ್ದರೂ ಸಾಕಷ್ಟು ಸವಾಲುಗಳಿವೆ. ಈ ವ್ಯವಸ್ಥೆಯು ಸೋರಿಕೆಗಳಿಗೆ ಕಡಿವಾಣ ಹಾಕಲಿದೆ.  ದೀರ್ಘಾವಧಿಯಲ್ಲಿ ತೆರಿಗೆ ದರಗಳನ್ನು ಸ್ಥಿರಗೊಳಿಸಲಿದೆ. ಪರಿಣಾಮಕಾರಿಯಾಗಿ ಜಾರಿಗೆ ತಂದರೆ ತೆರಿಗೆ ದರಗಳು ಇಳಿಯಲು ನೆರವಾಗಲಿದೆ’ ಎಂದರು.

‘ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿ ಒಪ್ಪಿಗೆಗೆ ಕಳಿಸಲು ಸಿದ್ಧತೆ ಮಾಡಲಾಗುತ್ತಿದೆ.  ರಾಷ್ಟ್ರಪತಿ ಅಂಕಿತ ದೊರೆತ ಕೂಡಲೇ  ಅಧಿಸೂಚನೆ ಹೊರಡಿಸಲಾಗುವುದು ಜಿಎಸ್‌ಟಿ ಮಂಡಳಿ ರಚಿಸಲಾಗುವುದು. ಇತ್ಯರ್ಥಗೊಳ್ಳದ ಕೆಲ ಸಂಗತಿಗಳನ್ನು ಈ ಮಂಡಳಿಯು ಬಗೆಹರಿಸಲಿದೆ’ ಎಂದರು.

ಬ್ಯಾಂಕ್‌ಗಳ ಖಾಸಗೀಕರಣ ಇಲ್ಲ: ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ದೇಶದಲ್ಲಿ ಕಾಲ ಇನ್ನೂ ಪಕ್ವವಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದರಿಂದ ಸರ್ಕಾರವು ಕೆಲ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ.

ಐಡಿಬಿಐ ಬ್ಯಾಂಕ್‌ನಲ್ಲಿ ಮಾತ್ರ ಸರ್ಕಾರದ ಪಾಲು ಬಂಡವಾಳವನ್ನು ಶೇ 49ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಉಳಿದಂತೆ ಇತರ ಬ್ಯಾಂಕ್‌ಗಳ ಸ್ವರೂಪ ಈಗ ಇರುವಂತೆಯೇ ಮುಂದುವರೆಯಲಿದೆ.

ತೀವ್ರ ಸ್ಪರ್ಧೆಯ ಹೊರತಾಗಿಯೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ದೇಶಿ ಅರ್ಥ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡುತ್ತಿವೆ. ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲ ನಿರ್ದಿಷ್ಟ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕ್‌ಗಳಲ್ಲಿನ ಸರ್ಕಾರದ ಪಾಲು ಬಂಡವಾಳವನ್ನು  ಹಂತ ಹಂತವಾಗಿ ಶೇ 52ರಷ್ಟಕ್ಕೆ ಇಳಿಸಲು ಉದ್ದೇಶಿಸಲಾಗಿದೆ’ ಎಂದು ಜೇಟ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT