ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಮ್ಮನ ಕೋರ್ಟ್ ಕೇಸಲ್ಲಿ ಹೊಣೆಗಾರಿಕೆ ಹುಡುಕಾಟ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕೋರ್ಟ್‌ಗೆ ಹೋಗ್ಬೇಡ್ರಪ್ಪಾ. ಸುಮ್ನೆ ಎಳೀತಾರೆ. ಹಾಗೇ ಸೆಟ್ಲ್ ಮಾಡ್ಕೊಳ್ಳಿ – ವ್ಯಾಜ್ಯ ಹೊತ್ತು ಮನೆಗೆ ಬರುತ್ತಿದ್ದವರಿಗೆ ವಕೀಲಿಕೆ ಮಾಡುತ್ತಿದ್ದ ಅಪ್ಪ ಹೇಳುತ್ತಿದ್ದ ಮಾತಿದು. ಅವರು ಹಾಗೆ ಹೇಳುವಾಗ ನನ್ನ ತಲೆಯೊಳಗೆ ಏನೋ ಮೊಳೆಯುತ್ತಿತ್ತು. ಅದೀಗ ‘ಕೆಂಪಮ್ಮನ ಕೋರ್ಟ್‌ ಕೇಸು’ ಚಿತ್ರದ ರೂಪದಲ್ಲಿ ಬೆಳೆದಿದೆ’. - ‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಕೂದುವಳ್ಳಿ ಚಂದ್ರಶೇಖರ್ ತಾವು ತೆರೆಗೆ ತಂದಿರುವ ಕೆಂಪಮ್ಮನ ಕಥೆಯ ಹಿಂದಿರುವ ಎಳೆಯನ್ನು ಬಿಚ್ಚಿಟ್ಟ ಬಗೆ.

ರೈತ, ಮಾರುಕಟ್ಟೆ ಮಾಫಿಯಾ, ನ್ಯಾಯಲಯ– ಅನ್ನದಾತನ ಕುರಿತು ತಾವು ಹೆಣೆದಿರುವ ಕಥಾಹಂದರದಲ್ಲಿ ಈ ಮೂರರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಚಂದ್ರಶೇಖರ್. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಅರಳಿದ ಪ್ರತಿಭೆ ಇವರು ಎಂಬುದು ವಿಶೇಷ.

‘ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ್ದು ಪುಟ್ಟಣ್ಣ. ಅವರ ಜತೆ ಕೆಲಸ ಮಾಡುವಾಗಲೇ ನಿರ್ದೇಶನದ ಕನಸು ಚಿಗುರೊಡೆದಿತ್ತು. ಕೆನಡಾದಲ್ಲಿದ್ದಾಗ ಅದು ಸಾಕಾರಗೊಂಡಿತು. ಮೊದಲಿಗೆ ಪುಟ್ಟಣ ಅವರ ಕುರಿತ ಸಾಕ್ಷ್ಯಚಿತ್ರ ತಯಾರಿಸಿದೆ. ಕೆನಡಾದ ಟೆಲಿವಿಷನ್‌ಗಾಗಿ ‘ತ್ರಿಬಂಧ’ ಎಂಬ ಚಿತ್ರವನ್ನು  ಮಾಡಿಕೊಟ್ಟೆ. ಬಳಿಕ, ಎಂ.ಕೆ. ಇಂದಿರಾ ಅವರ ಕಾದಂಬರಿ ಆಧರಿಸಿ ‘ಪೂರ್ವಾಪರ’ ಎಂಬ ಚಿತ್ರ ಮಾಡಿದೆ. ಇದೆಲ್ಲದರ ಸ್ಫೂರ್ತಿ ಪುಟ್ಟಣ್ಣ’ ಎಂದು ಚಂದ್ರಶೇಖರ್ ಕೃತಜ್ಞತೆ ಸಲ್ಲಿಸುತ್ತಾರೆ.

‘ನನ್ನ ಚಿತ್ರಗಳಲ್ಲಿರುವ ಭಾವನಾತ್ಮಕ ಮತ್ತು ಭಾವುಕ ದೃಶ್ಯಗಳು ಗುರುವಿನ ಬಳುವಳಿ. ಕಥೆಯೊಳಗೆ ಎಮೋಷನ್ ಇರಬೇಕು ಮರಿ. ಆಗಲೇ ಅದು ಪ್ರೇಕ್ಷಕನನ್ನು ತಟ್ಟುವುದು ಎಂದು ಅವರು ಆಗಾಗ ಹೇಳುತ್ತಿದ್ದರು’ ಎಂದು ನೆನೆಯುವ ಅವರು, ‘ಕೆಂಪಮ್ಮನ ಕೋರ್ಟ್ ಕೇಸು ನೈಜ ಘಟನೆಯೊಂದನ್ನು ಹೇಳಿದಂತಿರುವ ಚಿತ್ರ’ ಎನ್ನುತ್ತಾರೆ.

‘ಬೆಲೆ’ ಇಲ್ಲದ ರೈತ
‘ಪ್ಯಾಂಟು, ಶರ್ಟು, ಶೂ... ಹೀಗೆ ಮನುಷ್ಯ ಬಳಸುವ ಪ್ರತಿ ವಸ್ತುವಿಗೂ ಆಯಾ ಕಂಪೆನಿಯವರು ಬೆಲೆ ನಿಗದಿಪಡಿಸುತ್ತಾರೆ. ಆದರೆ, ರೈತನ ವಿಷಯದಲ್ಲಿ ಇದು ತದ್ವಿರುದ್ಧ. ಅದೆಷ್ಟೆ ಬೆವರು ಹರಿಸಿರಲಿ, ಸಾಲ ಹೊತ್ತಿರಲಿ – ಬೆಳೆ ಕೈಗೆ ಬಂದಾಗ ಅದಕ್ಕೆ ಬೆಲೆ ನಿಗದಿಪಡಿಸಲಾಗದ ಸ್ಥಿತಿ ಅವನದು. ಸಾಲಗಾರರು, ಮಾರುಕಟ್ಟೆ, ಔಷಧ ಮತ್ತು ಗೊಬ್ಬರ ಕಂಪೆನಿಗಳು ಕೋಟೆಯಂತೆ ಆತನನ್ನು ಸುತ್ತವರೆದಿವೆ. ಅವನ ಆತ್ಮಹತ್ಯೆ ಯಾರಿಗೂ ಪಾಪಪ್ರಜ್ಞೆ ಮೂಡಿಸುತ್ತಿಲ್ಲ. ಕೆಂಪಮ್ಮನ ಮೂಲಕ ಇವೆಲ್ಲವುಗಳ ಬಗ್ಗೆ ಗಮನ ಸೆಳೆಯಲು ಯತ್ನಿಸಿದ್ದೇನೆ’ ಎಂದು ಚಿತ್ರದ ತಿರುಳನ್ನು ಬಿಚ್ಚಿಡುತ್ತಾರೆ.

‘ಜೈ ಜವಾನ್, ಜೈ ಕಿಸಾನ್ ಎಂದ ದೇಶ ನಮ್ಮದು. ಆದರೆ, ಅದು ಘೋಷಣೆಯಾಗಷ್ಟೆ ಉಳಿದಿದೆ. ಕಾರ್ಯದಲ್ಲಿಲ್ಲ. ಇದಕ್ಕೆ ಹೊಣೆಗೇಡಿತನವೇ ಕಾರಣ. ಕುಟುಂಬದಲ್ಲಿ ತಂದೆ– ತಾಯಿ ಮಕ್ಕಳ ಬಗ್ಗೆ ತೋರುವ ಹೊಣೆಗಾರಿಕೆಯನ್ನು, ಸರ್ಕಾರ ರೈತರ ಬಗ್ಗೆ ತೋರಿದರೆ ನಮ್ಮ ರೈತರು ಸಾಯುವುದರ ಬಗ್ಗೆ ಯೋಚಿಸುವುದೇ ಇಲ್ಲ. ಅಲ್ಲದೆ, ಅನ್ಯಾಯಕ್ಕೊಳಗಾಗಿ ನ್ಯಾಯಾಲಯದ ಮೆಟ್ಟಿಲೇರಿದರೂ ಆತನಿಗೆ ನ್ಯಾಯ ಬಹುತೇಕ ಮರೀಚಿಕೆ. ಕೆಲವೊಮ್ಮೆ ನ್ಯಾಯ ಸಿಗುವ ಹೊತ್ತಿಗೆ ಆತ ಬದುಕಿರುವುದೇ ಇಲ್ಲ’ ಎನ್ನುವ ಅಸಮಾಧಾನ ಅವರದು.

‘Justice delayed is justice denied’ (ನ್ಯಾಯದಾನದ ವಿಳಂಬ ಕೂಡ ನ್ಯಾಯದಾನ  ನಿರಾಕರಿಸಿದಂತೆ) ಎಂಬ ಮಾತು ರೈತರ ವಿಷಯದಲ್ಲಿ ಬಹುತೇಕ ಸತ್ಯವಾಗುತ್ತದೆ. ಇಡೀ ಚಿತ್ರ ಅದನ್ನು ಪ್ರತಿಬಿಂಬಿಸುತ್ತದೆ. ಶಿವರಾಜ್‌ಕುಮಾರ್ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಸತ್ಯ ತಿಳಿಬೇಕು. ನ್ಯಾಯ ಕಾಣ್ಬೇಕು. ನಮಗೆ ಕಾಣೋ ನ್ಯಾಯ ಎಲ್ಲರಿಗೂ ಕಾಣಬೇಕು – ಇದೇ ನಮ್ಮ ಚಿತ್ರದ ಆಶಯ’ ಎಂದು ಚಂದ್ರಶೇಖರ್ ಹೇಳುತ್ತಾರೆ.

ವಿದೇಶದಲ್ಲೂ ಪ್ರದರ್ಶನ
ನಮ್ಮದು ಕಲಾತ್ಮಕವೂ ಅಲ್ಲದ, ಕರ್ಮಷಿಯಲ್ ಅಂಶಗಳೂ ಹೆಚ್ಚಿಲ್ಲದ ‘ಸೇತು ಸಿನಿಮಾ’ ಎಂದು ಹೇಳಿಕೊಳ್ಳುವ ಚಂದ್ರಶೇಖರ್, ತಮ್ಮ ಚಿತ್ರವನ್ನು ವಿದೇಶಗಳಲ್ಲೂ ಪ್ರದರ್ಶಿಸಲು ಯೋಜನೆ ಹಾಕಿಕೊಂಡಿದ್ದಾರೆ. ‘ಕೆನಡಾದ ಟೊರಾಂಟೊದಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿ ಅಲ್ಲಿರುವ ಭಾರತೀಯರು ಹಾಗೂ ವಿದೇಶಿ ಗಣ್ಯರಿಗೂ ತೋರಿಸಿದೆ. ಎಲ್ಲರೂ ಮೆಚ್ಚಿಕೊಂಡರು. ಈ ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಭಾಷೆ ಬೇಕಿಲ್ಲ ಎಂದು ಪ್ರತಿಕ್ರಿಯಿಸಿದರು’ ಎಂದು ಸಂತೋಷ ಹಂಚಿಕೊಳ್ಳುತ್ತಾರೆ.

‘ಇಂಟರ್‌ನೆಟ್ ಇಲ್ಲದ ಕಾಲದಲ್ಲಿ ನಿರ್ದೇಶಿಸಿದ ‘ಪೂರ್ವಾಪರ’ ಚಿತ್ರವನ್ನು ವಿದೇಶಗಳಲ್ಲೂ ಪ್ರದರ್ಶಿಸಿದ್ದೇನೆ. ಈಗ ತಂತ್ರಜ್ಞಾನ ಮುಂದುವರೆದಿರುವುದು ಚಿತ್ರಗಳನ್ನು ಕೊಂಡೊಯ್ಯಲು ಅನುಕೂಲಕರವಾಗಿದೆ. ಆಸ್ಟ್ರೇಲಿಯಾ, ಅಮೆರಿಕಾ, ಬ್ರಿಟನ್‌ನಲ್ಲಿ ನನ್ನ ಸ್ನೇಹಿತರು ನೆಲೆಸಿದ್ದಾರೆ. ಅವರ ನೆರವಿನಿಂದ ಆ ದೇಶಗಳಲ್ಲಿ ಚಿತ್ರವನ್ನು ಪ್ರದರ್ಶಿಸಲಿದ್ದೇನೆ. ಸದ್ಯ ರಾಜ್ಯದ ಕೆಲ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಬಳಿಕ ಜಿಲ್ಲೆಗಳಿಗೆ ಪ್ರವಾಸ ಮಾಡಿ ರೈತರಿಗೆ ತೋರಿಸುವ ಆಲೋಚನೆ ಇದೆ’ ಎನ್ನುತ್ತಾರೆ.

ಕಥೆ ಇಲ್ಲದಿದ್ದರೆ ಸೋಲು
‘ಕಥೆ ಇದ್ದಾಗಷ್ಟೆ ಚಿತ್ರಗಳು ಗೆಲ್ಲುವುದು. ಹಿಂದಿನ ಚಿತ್ರಗಳಲ್ಲಿ ಕಥೆ ಇರುತ್ತಿತ್ತು. ಹಾಗಾಗಿ ಗೆಲ್ಲುತ್ತಿದ್ದವು. ಜನರ ಮನಸ್ಸಿನಲ್ಲಿ ಅಚ್ಚೊತ್ತುತ್ತಿದ್ದವು. ಆ ಮೂಲಕ ನಟನೊಬ್ಬ ತನ್ನ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸ್ವೀಕೃತನಾಗುತ್ತಿದ್ದ. ‘ವಂಶವೃಕ್ಷ’ ಚಿತ್ರ ಆಗಿನ ಕಾಲದಲ್ಲೇ 25 ವಾರ ಓಡಿತ್ತು. ನಂತರ ಒಂದೇ ರೀತಿಯ ಕಥೆಗಳು ಬರತೊಡಗಿದವು. ಇದು ಪ್ರೇಕ್ಷಕನಿಗೂ ಬೋರ್ ಹೊಡೆಸಿತು. ಆಗ, ಹೊಸ ಅಲೆಯ ಚಿತ್ರಗಳು  ಬಂದವು. ಕಥೆ ಹೇಳುತ್ತಿದ್ದ ಪರಿಯೂ ವಿಭಿನ್ನವಾಗಿತ್ತು. ಆದರೆ, ಇಂದಿನ ಚಿತ್ರಗಳಲ್ಲಿ ಕಥೆಗೆ ಮಹತ್ವ ಸಿಗುತ್ತಿಲ್ಲ. ಅದೇ ಸೋಲಿಗೆ ಕಾರಣ’ ಎಂದು ಇಂದಿನ ಚಿತ್ರಗಳ ಸೋಲಿಗೆ ಚಂದ್ರಶೇಖರ್ ಕಾರಣ ಹುಡುಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT