ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಥ್ಯಕ್ಕೆ ಸರಿದ ಬೆಂಗಳೂರು ಸೇಬು

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಒಳ್ಳೆ ಆರೋಗ್ಯಕ್ಕೆ ವೈದ್ಯರು ಸೂಚಿಸುವ ಹಣ್ಣುಗಳಲ್ಲಿ ಸೇಬಿಗೆ ಮೊದಲ ಸ್ಥಾನ. ನಮ್ಮ ದೇಶದಲ್ಲಿ ಸೇಬನ್ನು ಉಲ್ಲೇಖಿಸುವಾಗ ಕಾಶ್ಮೀರಿ ಆ್ಯಪಲ್‌–ಸಿಮ್ಲಾ ಸೇಬು ಎನ್ನುವುದು ಸಾಮಾನ್ಯ. ಆದರೆ ಒಂದೊಮ್ಮೆ ಬೆಂಗ್ಲೂರ್‌ ಸೇಬು ಕೂಡ ದೇಶದಲ್ಲಿ ಪ್ರಸಿದ್ಧವಾಗಿತ್ತು. ಉದ್ಯಾನ ನಗರಿಯಲ್ಲಿ ಸೇಬು ಬೆಳೆಯೇ! ಸೋಜಿಗ ಎನಿಸಿದರೂ ಇದು ಸತ್ಯ.

ಬೆಂಗಳೂರಿನಲ್ಲಿ ಸೇಬು ಹಣ್ಣು ಬೆಳೆಯಲು ಆರಂಭಿಸಿದ್ದಕ್ಕೆ ದೊಡ್ಡ ವೃತ್ತಾಂತವೇ ಇದೆ. ಸೇಬಿಗೂ ಕೆಂಪು ತೋಟಕ್ಕೂ ಸಂಬಂಧವಿದೆ. ಹಾಗೆಯೇ ಸದಾ ಹರಿಯುವ ನದಿ ನಾಲೆಗಳಿಲ್ಲದ ಬೆಂಗಳೂರು ಹಿಂದೆ ತಂಪು ನಗರ ಎನ್ನಿಸಿಕೊಳ್ಳಲು ಕಾರಣವಾದ ಹಸಿರು ಸಿರಿಯ ಕಾರಣವೂ ಇದೆ.
ಅದು ಈ ನೆಲವನ್ನು ಬಿಳಿಯರು ತೆಕ್ಕೆಗೆ ತೆಗೆದುಕೊಂಡ ಸಮಯ. ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ರಾಜಧಾನಿ ಸ್ಥಳಾಂತರ ಮಾಡಿದ ಬ್ರಿಟಿಷರಿಗೆ ಬೆಂಗಳೂರಿನಲ್ಲಿ ಬಹಳ ಹಿಡಿಸಿದ ಜಾಗ ಲಾಲ್‌ಬಾಗ್‌. ಹೈದರಾಲಿ, ಟಿಪ್ಪು ಸುಲ್ತಾನ್‌ ಬೆಳೆಸಿದ್ದ ಉದ್ಯಾನಕ್ಕೆ ಹೊಸ ಮೆರುಗು ತರಲು ಯತ್ನ ಶುರು ಮಾಡಿದರು.

ಆಗಿನ ಮೈಸೂರು ಪ್ರಾಂತ್ಯದ ರೆಸಿಡೆಂಟರಾಗಿದ್ದ ಆರ್ಥರ್‌ ಹೋಪ್‌ ಅವರಿಗೆ ತಮ್ಮೂರಿನ ವಾತಾವರಣ ನೆನಪಾಗಿರಬೇಕು. ಸಹಜವಾಗಿದ್ದ ತಂಪನೆಯ ವಾತಾವರಣದ ಬೆಂಗಳೂರಿಗೆ ಬೇರೆ ಕಡೆಗಳಿಂದ ಗಿಡ ಮರಗಳು ಬಂದವು. ಹಣ್ಣು ಹಂಪಲುಗಳು ಬಂದವು. ಕಣ್ಮನ ಸೆಳೆಯುವ ವಿವಿಧ ಬಗೆಯ ಹೂಗಳೂ ತುಂಬಿಹೋದವು.

ಇವೆಲ್ಲಕ್ಕೂ ಪ್ರಯೋಗ ಶಾಲೆ ನಮ್ಮ ಕೆಂಪು ತೋಟ. ಆ ವೇಳೆಗಾಗಲೇ ಗಿರಿಧಾಮಗಳಿಗೆ ಬ್ರಿಟಿಷರು ಲಗ್ಗೆ ಹಾಕಿದ್ದರು. ಭಾರತದಲ್ಲಿ ಬ್ರಿಟನ್‌ ಕಾಣಲು ಬಯಸಿದ್ದರು. ನೀಲಗಿರಿ ಬೆಟ್ಟ ಸಾಲಿನಲ್ಲಿ ಉದಕ ಮಂಡಲ (ಊಟಿ) ತಾಣವನ್ನು ಪತ್ತೆ ಹಚ್ಚಿದ್ದ ಜಾನ್‌ ಸುಲ್ಲಿವಾನ್‌ ಬಿಳಿಯರ ಹೊಸ ವಸಾ ಹತು ಬೆಂಗಳೂರಿಗೆ ಒಂದೆರಡು ಬಾರಿ ಬಂದು ಹೋದರು.

ಬೇಸಿಗೆ–ಚಳಿಗಾಲ ಎರಡೂ ಋತುಗಳಲ್ಲೂ ಹೆಚ್ಚು ವ್ಯತ್ಯಾಸವಿಲ್ಲದ ಕೆಂಪೇಗೌಡರ ಬೆಂಗಳೂರು ಅವರಿಗೆ ಹಿಡಿದಿತ್ತು. ಇಲ್ಲಿಯ ವಾತಾವರಣದಲ್ಲಿ ಬೆಳೆಯುವ ಹೂ ಹಣ್ಣುಗಳಿಗಾಗಿ ತಲಾಶ್‌ ಶುರು ಮಾಡಿದರು. ಇಲ್ಲಿನ ಅಧಿಕಾರಿಗಳೂ ಅದಕ್ಕೆ ಕೈ ಜೋಡಿಸಿದ್ದರು. ಆಗ ಹತ್ತೊಂಬತ್ತನೆ ಶತಮಾನದ ಆರಂಭ ಕಾಲ. 1820ರ ಸುಮಾರಿಗೆ ಬೆಂಗಳೂರಿಗೆ ಬಂದವು ನೋಡಿ ಸೇಬಿನ ಗಿಡಗಳು. ಅದೂ ಆಸ್ಟ್ರೇಲಿಯಾದಿಂದ ಇದನ್ನು ಬೆಳೆಯಲು ಹೇಳಿ ಮಾಡಿಸಿದಂತಿದ್ದ ಜಾಗ ಕೆಂಪು ತೋಟ ಅಲ್ಲಿಯೇ ಸೇಬು ಫಲ ಬಿಡತೊಡಗಿತು. ಈ ಹಣ್ಣುಗಳ ಉಪಯೋಗ ಕೂಡ ಬಿಳಿಯರೇ ಮಾಡುತ್ತಿದ್ದರು. ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಸೇಬು ಈ ಆವರಣದಿಂದ ಹೊರಕ್ಕೆ ಹೋದ ದಾಖಲೆಗಳಿಲ್ಲ. ದೂರದ ಇಂಗ್ಲೆಂಡ್‌ನಿಂದ ಬರಬೇಕಿದ್ದ ಸೇಬು ಬೆಂಗಳೂರಿನಲ್ಲಿಯೇ ಸಿಗಲು ಆರಂಭವಾಗಿತ್ತು.

ಜಾನ್‌ ಕ್ಯಾಮರಾನ್‌ ಕನ್ನಡ ನಾಡಿನ ತೋಟಗಳಿಗೆ ತೋಟದ ಬೆಳೆಗಳಿಗೆ ಹೊಸ ಜಾಡು ತೋರಿಸಿದ ಬ್ರಿಟಿಷ್‌ ಅಧಿಕಾರಿ. ಲಾಲ್‌ಬಾಗ್‌ ವಿಖ್ಯಾತಿಗೆ ಕ್ಯಾಮರಾನ್‌ ಕಾಣಿಕೆಯೂ ಅಪಾರ. 1874ರಲ್ಲಿ ಸರ್ಕಾರಿ ಉದ್ಯಾನಗಳ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ನಂತರ ಆಲಂಕಾರಿಕ ಹೂ ಗಿಡಗಳ ಬಗ್ಗೆ ಆಸಕ್ತಿ ವಹಿಸಿದ್ದರು. ಉದ್ಯಾನಗಳಿಗೆ ರಂಗು ಕೊಡಲು ಯೋಜನೆಗಳನ್ನು ರೂಪಿಸಿದರು. ಲಾಲ್‌ಬಾಗ್‌ನಿಂದ ಹೊರಗೆ ತೋಟಗಾರಿಕೆ ಅಭಿವೃದ್ಧಿಪಡಿಸಲು ಮೊದಲಿಗೆ ಗಮನಹರಿಸಿದ್ದೇ ಕ್ಯಾಮರಾನ್‌.

ಅಷ್ಟೊತ್ತಿಗೆ ಕೆಂಪುತೋಟದಲ್ಲಿ ಕಾಣ ಸಿಗುತ್ತಿದ್ದ ಸೇಬು ಹಣ್ಣು ಬೆಳೆಗಳನ್ನು ಬೆಂಗಳೂರು ಸುತ್ತಮುತ್ತ ಹಬ್ಬಿಸಲು ಬಯಸಿದ ಕ್ಯಾಮರಾನ್‌ 17 ಬಗೆಯ ಸೇಬು ತಳಿಗಳನ್ನು ವಿದೇಶಗಳಿಂದ ತರಿಸಿಕೊಂಡರು. ಎಲ್ಲವನ್ನು ನಮ್ಮ ಭೂಮಿಯಲ್ಲಿ ನೆಟ್ಟರು. ಇದು ಆಗಿದ್ದು 1887–88ರ ಅವಧಿಯಲ್ಲಿ.
ಆಗಿನ ಬೆಂಗಳೂರು ವಾತಾವರಣ ಹಿತಕರವಾಗಿತ್ತು. ಆಗ ಇಲ್ಲಿ ಚಿಗುರೊಡೆದ ಬಹುತೇಕ ಎಲ್ಲಾ ಸೇಬು ತಳಿಗಳೂ ಚೆನ್ನಾಗಿ ಬೆಳೆದವು.

ಇಳುವರಿಯೂ ಚೆನ್ನಾಗಿತ್ತು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕ್ಯಾಮರಾನ್‌ ಸೇಬು ಬೆಳೆಗೆ ವಾಣಿಜ್ಯ ರೂಪ ಕೊಡಲು ಯೋಚಿಸಿದರು. ಆ ವೇಳೆಗಾಗಲೇ ಬೆಂಗಳೂರು ಆಸುಪಾಸಿನಲ್ಲಿ ಬೇಸಾಯವನ್ನೂ ಆರಂಭಿಸಿದ್ದ ಬ್ರಿಟಿಷರು ಸೇಬು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಲು ನಿರ್ಧರಿಸಿದರು. ಸೇಬು ಬೆಳೆ ಸ್ಥಳೀಯ ವಾತಾವರಣಕ್ಕೆ ಒಗ್ಗಿಕೊಳ್ಳುವ ಲಕ್ಷಣಗಳನ್ನು ತೋರಿಸಿದ್ದು ಇದಕ್ಕೆ ಮುಖ್ಯ ಕಾರಣ.

ಕೀಟದ ಕಾಟ
ಬಿಳಿ ರೈತರಿಗೆ ಬೇಕಾದ ನೆರವೂ ಉದ್ಯಾನ ಇಲಾಖೆಯಿಂದ ಸಿಗುತ್ತಿತ್ತು. ಬಿಳಿಯರಲ್ಲದೆ ಬೇರೆ ರೈತರೂ ಸೇಬು ಬೆಳೆಯಲ್ಲಿ ಉತ್ಸುಕರಾದರು. ಸಣ್ಣ ಪ್ರಮಾಣದಲ್ಲಿ ಆರಂಭವಾದ ಸೇಬು ಬೆಳೆ ಬೆಳೆಯುವ ಭೂಮಿಯ ವಿಸ್ತೀರ್ಣ ನಿಧಾನವಾಗಿ ಹೆಚ್ಚುತ್ತಿತ್ತು. ಸುಮಾರು ಒಂದು ದಶಕ ಬೆಂಗಳೂರಿನಲ್ಲಿ ಸೇಬು ಬೆಳೆ ಉತ್ತಮ ಇಳುವರಿಯನ್ನು ಕೊಟ್ಟಿತು. ಬಿಳಿಯರಲ್ಲದೆ ಭಾರತೀಯರಿಗೂ ಸೇಬು ಇಷ್ಟವಾಯಿತು.

1897 ಬೆಂಗಳೂರು ಸೇಬಿಗೆ ಮರ್ಮಾಘಾತ ಕೊಟ್ಟ ವರ್ಷ. ‘ವೋಲೇ ಆಫೀಸ್‌’ ಎಂಬ ಕೀಟ – ಸೇಬು ಬೆಳೆಗೆ ಹಬ್ಬಿತು. ಆಗ ಅದನ್ನು ಹತೋಟಿಗೆ ತರುವ ಯಾವುದೇ ಔಷಧಗಳೂ ಲಭ್ಯವಿರಲಿಲ್ಲ. ಅದೊಂದು ಸಾಂಕ್ರಾಮಿಕ ಮಾರಿಯಂತೆ ಹಬ್ಬಿತು. ನೋಡ ನೋಡುತ್ತಿದ್ದಂತೆ ಸೇಬು ಗಿಡಗಳನ್ನು ಒಣಗಿಸಿ ನೆಲಕಚ್ಚುವಂತೆ ಮಾಡಿದವು. ಈ ಕೀಟಗಳಿಂದಾಗಿ ಎಲ್ಲರೂ ಅಸಹಾಯಕರಾಗಿ ಕೈಚೆಲ್ಲಿ ಕೂತರು. ಅಲ್ಲಿಗೆ ಬೆಂಗಳೂರು ನೆಲದ ಸೇಬು ಬೆಳೆಯ ಮೊದಲ ಅಧ್ಯಾಯ ಮುಗಿದು ಹೋಯಿತು.

ಮುಂದಿನ ಒಂದು ದಶಕದಲ್ಲಿ ಬೆಂಗಳೂರಿನ ತೋಟಗಾರರು ಸೇಬು ಬೆಳೆಯನ್ನು ಮರೆತೇ ಹೋದರು. ಹೊಸದಾಗಿ ಸೇಬು ಬೆಳೆಯನ್ನು ಆರಂಭಿಸಲು ಧೈರ್ಯ ಮಾಡಲಿಲ್ಲ. ಎಲ್ಲರಿಗೂ ‘ವೋಲೇ ಆಫೀಸ್‌’ ಕೀಟ ಭಯವಿತ್ತು. ಇಲಾಖೆಯೂ ಈ ಭೀತಿ ಹೋಗಲಾಡಿಸುವ ಕೆಲಸ ಮಾಡಲಿಲ್ಲ.

ಹೊಸ ಶತಮಾನ ಬಂದರೂ ಬೆಂಗಳೂರಿನಲ್ಲಿ ಸೇಬು ಕಾಣಸಿಗಲಿಲ್ಲ. ಜಿ.ಎಚ್‌.ಕೃಂಬಿಗಲ್‌ 1908ರಲ್ಲಿ ಸರ್ಕಾರಿ ಉದ್ಯಾನ ಇಲಾಖೆ ಅಧೀಕ್ಷಕರಾಗಿ ಬಂದರು. ಮುಂದೆ ಭೂಗೋಳದಲ್ಲಿ ಬೆಂಗಳೂರನ್ನು ತನ್ನ ಹಸಿರ ಸೌಂದರ್ಯದಿಂದ ಶಾಶ್ವತವಾಗಿ ನಿಲ್ಲುವಂತೆ ಮಾಡಿದ ಕೃಂಬಿಗಲ್‌ ಅವರು ನೆಲಮಟ್ಟದಿಂದಲೇ ಎಲ್ಲವನ್ನೂ ನೋಡುವ ವ್ಯಕ್ತಿಯಾಗಿದ್ದರು. ಬೆಂಗಳೂರು ಸೇಬು ಬೆಳೆ ಮುರುಟಿ ಹೋದ ಕಥೆಯೂ ಅವರ ಗಮನಕ್ಕೆ ಬಂತು.
ಸೇಬು ಬೆಳೆ ಪರಿಣಿತರನ್ನು ಸಂಪರ್ಕಿಸಿದ ಕೃಂಬಿಗಲ್‌ ಬೆಂಗಳೂರು ತಂಪು ಹವೆಯಲ್ಲಿ ಸೇಬು ಬೆಳೆ ಮತ್ತೆ ಕಾಣುವ ಹಾದಿ ಕಂಡು ಹಿಡಿದರು.

ರೋಗ ನಿರೋಧಕ ಸೇಬನ್ನು ಇಲ್ಲಿ ಬಿತ್ತಿ ಬೆಳೆಯಲು ಮುಂದಾದರು. 70ಕ್ಕೂ ಹೆಚ್ಚು ತಳಿಗಳನ್ನು ಪರಿಶೀಲಿಸಿ ಕೊನೆಗೆ ‘ರೋಮ್‌ ಬ್ಯೂಟಿ’ ತಳಿಯನ್ನು ಆಮದು ಮಾಡಿಕೊಂಡರು. ಆಸಕ್ತಿ  ಇರುವ ತೋಟಗಾರರಿಗೆ ಬೆಳೆಯಲು ನೀಡಿದರು. ಅದಕ್ಕೆ ಅಗತ್ಯವಾದ ನೆರವು ಕೊಡಲು ಇಲಾಖೆಯನ್ನು ಸನ್ನದ್ಧವಾಗಿಟ್ಟರು.

ದುಂಡನೆಯ ರುಚಿಕರವಾದ ರೋಮ್‌ ಬ್ಯೂಟಿ
ಶೀಘ್ರವಾಗಿ ಹಾಗೂ ಹೆಚ್ಚು ಇಳುವರಿ ಕೊಡುವ ‘ರೋಮ್‌ ಬ್ಯೂಟಿ’ ಬಹುಬೇಗ ಪ್ರಸಿದ್ಧವಾಯಿತು. ಹಳದಿ ಛಾಯೆಯ ಕೆಂಪು ಚುಕ್ಕೆಗಳಿಂದ ಕೂಡಿದ ದುಂಡನೆಯ ರುಚಿಕರವಾದ ‘ರೋಮ್‌ ಬ್ಯೂಟಿ’ ವರ್ಷಕ್ಕೆ ಎರಡು ಬೆಳೆ ಕೊಡುವ ಹಣ್ಣು. ಹಿಮ ಸುರಿಯುವ ಪ್ರದೇಶಗಳು ಸೇಬು ಬೆಳೆಗೆ ಪೂರಕ ಎಂಬುದು ಖಾತ್ರಿಯಾಗಿದ್ದ ಆ ದಿನಗಳಲ್ಲಿ ಹಿಮಾಲಯದಲ್ಲಿ ವಿವಿಧ ಸೇಬು ತಳಿಗಳನ್ನು ಬೆಳೆಯಲು ಆರಂಭಿಸಿ ಯಶಕಂಡಿದ್ದರು. ಆಗ ಸೇಬು ಲಾಭದಾಯಕ ಬೆಳೆಯೂ ಆಗಿತ್ತು.

ಇತ್ತ ಬೆಂಗಳೂರು ಕೂಡ ಸೇಬು ಬೆಳೆಗೆ ಸೂಕ್ತವೆನಿಸಿಕೊಂಡಿತ್ತು. ಇದನ್ನೆಲ್ಲ ಅಧ್ಯಯನ ಮಾಡಲು ಬೆಂಗಳೂರು ಹೆಸರಘಟ್ಟ ಸೇರಿದಂತೆ ಇಂಪೀರಿಯಲ್‌ ಕೃಷಿ ಸಂಸ್ಥೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿತು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಬೆಂಗಳೂರು ನೆರೆಹೊರೆಯ ಅನೇಕ ತೋಟಗಳಲ್ಲಿ ‘ಸೇಬು’ ಸಮೃದ್ಧವಾಗಿ ತೊನೆದಾಡಿತು. ಇದೊಂದು ಲಾಭದಾಯಕ ಬೆಳೆ ಎಂಬುದೂ ಸಾಬೀತಾಯಿತು. ತೋಟಗಾರಿಕೆ ತಜ್ಞರಾದ ಜಿ.ಎಚ್‌.ಕೃಂಬಿಗಲ್‌, ಎಚ್‌.ಸಿ.ಜವರಾಯ ಅವರು ಇದಕ್ಕೆ ಒತ್ತಾಸೆ ಕೊಟ್ಟರು. ಅನೇಕ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವ ಮೂಲಕ ಸೇಬು ಬೆಳೆಯ ವಿಸ್ತೀರ್ಣ ಹೆಚ್ಚಲು ಕಾರಣರಾದು. ಮಾರುಕಟ್ಟೆಯಲ್ಲಿ ‘ರೋಮ್‌ ಬ್ಯೂಟಿ’ಗೆ ಕಿಮ್ಮತ್ತು ಬಂತು. ಗ್ರಾಹಕರ ಸಂಖ್ಯೆಯೂ ಬೆಳೆಯಿತು.
ಮರೆತೇ ಹೋಯಿತೇ

ಧಾವಂತ ತುಂಬಿದ ಇಂದಿನ ಬದುಕಿನಲ್ಲಿ ಬೆಂಗಳೂರಿನ ವಾತಾವರಣಕ್ಕೆ ಒಗ್ಗಿಕೊಂಡು ಒಳ್ಳೆಯ ಹಣ್ಣುಗಳನ್ನು ಈ ನೆಲದಿಂದ ನೀಡುತ್ತಿದ್ದ ‘ರೋಮ್‌ ಬ್ಯೂಟಿ’ ಸೇಬು ನೇಪಥ್ಯಕ್ಕೆ ಸರಿದದ್ದು ಯಾರ ಗಮನಕ್ಕೂ ಬರುತ್ತಿಲ್ಲ. ಹೊಸ ತಲೆಮಾರು ಹಾಗಿರಲಿ ಹಳೆಯ ತಲೆಮಾರಿನ ಜನರಿಗೂ ಬೆಂಗಳೂರು ಸೇಬು ಇದ್ದ ಚಹರೆ ತಿಳಿದಿಲ್ಲ. ಬೆಂಗಳೂರಿಗೆ ಮೊಟ್ಟ ಮೊದಲಿಗೆ ‘ಸೇಬು’ ತೋರಿದ ಲಾಲ್‌ಬಾಗ್‌ನಲ್ಲಿಯೇ ಈಗಲೂ ಕೆಲವು ಸೇಬುಗಿಡಗಳಿವೆ. ಸೇಬುಗಳೂ ಬಿಡುತ್ತಿವೆ. ಆದರೆ ಅದನ್ನು ನೋಡಿದ ನಂತರವೂ ಯಾಗೂ ‘ರೋಮ್‌ ಬ್ಯೂಟಿ’ಯನ್ನು ನೆನಪಿಸಿಕೊಳ್ಳುತ್ತಿಲ್ಲ ಅಷ್ಟೇ.

ಮರೆಯಾಯ್ತು ಏಕೆ?
1940ರ ದಶಕದ ಆರಂಭದಲ್ಲಿ ಬೆಂಗಳೂರು ಭೂಮಿಗೆ ಹೊಂದಿಕೊಂಡಿದ್ದ ‘ರೋಮ್‌ ಬ್ಯೂಟಿ’ ದಿನ ಕಳೆದಂತೆ ಕಳೆಗುಂದಿದ್ದಕ್ಕೆ ಮಾತ್ರ ಕಾರಣಗಳು ಈಗಲೂ ನಿಗೂಢ. ಬೆಂಗಳೂರು ಸುತ್ತಲಿನ ಮಾಗಡಿ, ಕೆಂಗೇರಿ, ಉತ್ತರಹಳ್ಳಿ, ವಿಭೂತಿಪುರ ಅಷ್ಟೇಕೆ ಬನಶಂಕರಿಯಲ್ಲೂ ನಳನಳಿಸುತ್ತಿದ್ದ ಸೇಬಿನ ತೋಟಗಳು ಕ್ರಮೇಣ ಕಣ್ಮರೆಯಾಗಿದ್ದಕ್ಕೆ ನಿರ್ದಿಷ್ಟ ಕಾರಣಗಳೇನೆಂಬುದು ಅಸ್ಪಷ್ಟ.

ಇದನ್ನು ಅಧ್ಯಯನ ಮಾಡಿದ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಡಾ.ಎಸ್‌.ಎ.ಹಿತ್ತಲಮನಿ ಹಾಗೂ ಡಾ.ಸಂತೆ ನಾರಾಯಣ ಸ್ವಾಮಿ ಅವರು ಕೆಲ ಕಾರಣಗಳನ್ನು  ಕಂಡುಕೊಂಡರು. ಹಿಮಾಲಯ ಮಡಿಲಿನ ರಾಜ್ಯಗಳಾದ ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಸೇಬು ತಳಿಗಳಲ್ಲಿ ಹೆಚ್ಚಿನ ಅನ್ವೇಷಣೆಗಳು ನಡೆದವು.

ಬ್ರಿಟಿಷರ ಆಡಳಿತ ಅವಧಿಯಲ್ಲಿ ದೇಶದುದ್ದಕ್ಕೂ ಸಂಪರ್ಕ ಸಾಧನೆಗಳು ಉತ್ತಮಗೊಂಡವು. ಬೆಂಗಳೂರಿಗೂ ಹೊಸ ರೈಲು ಮಾರ್ಗ ಬಂತು. ಸಾಗಣೆ ವ್ಯವಸ್ಥೆ ಸುಲಲಿತವಾಗಿದ್ದರಿಂದ ಶಿಮ್ಲಾ ಸೇರಿದಂತೆ ಹಲವೆಡೆಯಿಂದ ಸೇಬು ಬೆಂಗಳೂರು ತಲುಪಲಾರಂಭಿಸಿತು. ಕಡಿಮೆ ಬೆಲೆಯ ಉತ್ತಮ ಗುಣಮಟ್ಟ ಸೇಬಿಗೆ ಜನ ಒಲಿದರು. ಈ ಅವಧಿಯಲ್ಲಿ ಬೆಂಗಳೂರಿನ ‘ರೋಮ್‌ ಬ್ಯೂಟಿ’ಗೆ ಬೇಡಿಕೆ ಕುಗ್ಗಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಲಾಭ ತರದ ಸೇಬು ಬೆಳೆಯನ್ನು ಬೆಂಗಳೂರು ತೋಟಗಾರರು ಕೈಬಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT