ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌರವನಿಗೆ ದಾನಶೂರನ ಹುಸಿಪಟ್ಟದ ಭಾರ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನೆನೆವೊಡೆ ಕರ್ಣನಂ ನೆನೆಯ’ ಎನ್ನುತ್ತಾನೆ ಪಂಪ. ಅಸಹಾಯ ಶೂರನಾದರೂ; ಜಾತಿ, ಅಂತಸ್ತಿನ ಸಂಕೋಲೆಯೊಳಗೆ ನರಳಿದ ಕರ್ಣ ಒಬ್ಬ ನತದೃಷ್ಟ. ಎಲ್ಲ ಕಾಲದ ಶೋಷಿತರ ಪ್ರತಿನಿಧಿಯಂತೆ ಅವನು ಕಂಡುಬರುತ್ತಾನೆ.

ಸಮಕಾಲೀನ ಸಂದರ್ಭದ ಅಸಹಾಯಕರ ಕುರಿತ ಕತೆ, ಕಾವ್ಯ, ನಾಟಕ ರಚನೆಯ ಸಂದರ್ಭದಲ್ಲಿ ಕರ್ಣನನ್ನು ತಮ್ಮ ಪ್ರತಿನಿಧಿಯಂತೆ ಚಿತ್ರಿಸುವ ಪರಿಪಾಠ ಇದ್ದೇ ಇದೆ. ಶಿಶು ಹತ್ಯೆಯ ಕರಾಳಮುಖದ ಚಿತ್ರಣಕ್ಕೆ ಕರ್ಣನನ್ನು ವಸ್ತುವಾಗಿಸಿ ಡಾ.ಎಂ.ಬೈರೇಗೌಡ ಅವರು ರಚಿಸಿ- ನಿರ್ದೇಶಿಸಿದ ಹೊಸ ನಾಟಕ ‘ಕರ್ಣಹತ್ಯೆ’. ಈ ನಾಟಕ ಮತ್ತಿಕೆರೆ ಸಮೀಪದ ಬಿಇಎಲ್ ಕಲಾಕೇಂದ್ರದಲ್ಲಿ ಇತ್ತೀಚೆಗೆ ಪ್ರಯೋಗ ಕಂಡಿತು.

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಸೇಂಟ್ ಜೋಸೆಫ್ ಕಾಲೇಜಿನ ರಂಗಬೆಡಗು ಸಂಸ್ಥೆಗಳು ಈ ನಾಟಕವನ್ನು ಸಾದರಪಡಿಸಿತು. ಪಾತ್ರಧಾರಿಗಳಲ್ಲಿ ಬಹುತೇಕರು ಕಾಲೇಜಿನ ವಿದ್ಯಾರ್ಥಿಗಳು. ಗಂಡು ಮಗುವಾದರೆ ಮನೆಯನ್ನು ಬೆಳಗುವ ಕುಲದೀಪ, ಹೆಣ್ಣು ಮಗು ಒಂದು ಅನಿಷ್ಟ ಎಂದು ಭಾವಿಸಿ ಶಿಶುವಿದ್ದಾಗಲೇ ಕೊಂದುಹಾಕಿದ ಪ್ರಸಂಗಗಳು ಸಾಕಷ್ಟು ನಡೆದಿವೆ.

ಶೋಷಿತ ಲಂಬಾಣಿ ಜನಾಂಗದಲ್ಲಿ ಒಂದೊಮ್ಮೆ ಇಂತಹ ಹತ್ಯೆಗಳು ಸರಣಿಯ ಹಾಗೆ ನಡೆದದ್ದು ವಿಪರ್ಯಾಸ. ಬಡವರಾಗಲಿ, ಸಿರಿವಂತರಾಗಲಿ ಹೆಣ್ಣಿನ ಕುರಿತ ತಾರತಮ್ಯ ಇದಕ್ಕೆ ಕಾರಣ. ವಿವಾಹ ಪೂರ್ವದಲ್ಲಿ ಕರ್ಣನಿಗೆ ಜನ್ಮಕೊಟ್ಟೆ ಎಂದು ಕುಂತಿಯೇನು ಕರ್ಣನನ್ನು ಕೊಲ್ಲಲಿಲ್ಲ. ಹಾಗೆಯೇ ಯಾರೂ ಮಕ್ಕಳನ್ನು ಕೊಲ್ಲಬಾರದು ಎಂಬ ಸಂಭಾಷಣೆಯೊಂದಿಗೆ ನಾಟಕ ಆರಂಭವಾಗುತ್ತದೆ.

ಬಿಲ್ವಿದ್ಯೆ ಕಲಿಕೆಯನ್ನು ಕರ್ಣನಿಗೆ ನಿರಾಕರಿಸಿದ್ದು, ಪರಶುರಾಮ ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆದರೂ ಅನ್ಯ ಕುಲದವನೆಂಬ ಕಾರಣಕ್ಕೆ ಅದನ್ನೆಲ್ಲ ವಾಪಸ್ ಪಡೆದದ್ದು ಸೇರಿದಂತೆ ಅನೇಕ ದೃಶ್ಯಗಳಲ್ಲಿ ಕರ್ಣ ಹೇಗೆ ಅವಕಾಶ ವಂಚಿತನಾದ ಎಂಬುದನ್ನು ಚಿತ್ರಿಸುವ ನಾಟಕಕಾರ ಬೈರೇಗೌಡರು ಜಾನಪದ ಮಹಾಭಾರತದಲ್ಲಿ ಒಂದೆಡೆ ಪ್ರಸ್ತಾಪವಾಗಿರುವ ವಿಷಯಕ್ಕೆ ತಮ್ಮ ಕಲ್ಪನೆ ಸೇರಿಸಿ ಈ ಕೆಳಗಿನ ಪ್ರಸಂಗವನ್ನು ಹೆಣೆದಿದ್ದಾರೆ...
ಕುರುಕುಲದ ಚಕ್ರವರ್ತಿಗೆ ಇಲ್ಲದ ‘ದಾನಶೂರ’ ಎಂಬ ಬಿರುದು, ದಾಸಿಪುತ್ರ ಕರ್ಣನಿಗೇಕೆ ಬೇಕು? ಅದು ಎಂದಿದ್ದರೂ ಕೌರವನಿಗೆ ಸಲ್ಲಬೇಕು ಎಂದು ಶಕುನಿಯು ಕೌರವನ ಕಿವಿಯೂದುತ್ತಾನೆ.

ಕೌರವನ ಭಟ್ಟಂಗಿಗಳೂ ಅದಕ್ಕೆ ದನಿಗೂಡಿಸುತ್ತಾರೆ. ಹೌದಲ್ಲವೆ? ಆಶ್ರಯವಿತ್ತ ನನಗೇ ಆ ಪಟ್ಟ ದೊರೆಯಬೇಕು ಎಂದು ಕೌರವನೂ ಭ್ರಮೆಗೊಳಗಾಗುತ್ತಾನೆ. ‘ದಾನಶೂರ ಕೌರವ’ ಎಂಬ ಫಲಕ ತೂಗುಹಾಕಿ, ಎಲ್ಲರೂ ದೊರೆಯನ್ನು ಹಾಗೆ ಕರೆಯಬೇಕು ಎಂದು ರಾಜಾಜ್ಞೆ ವಿಧಿಸುತ್ತಾನೆ. ಪರಾಕುಗಳು ಮೊಳಗುತ್ತವೆ.

ಒಮ್ಮೆ ರಾಜ್ಯದ ತುಂಬೆಲ್ಲ ಜಡಿ ಮಳೆ ಹಿಡಿದಿರುತ್ತದೆ. ಪ್ರಜೆಯೊಬ್ಬನ ತಾಯಿ ತೀರಿದ್ದಾಳೆ. ಸುಡಲು ಅವನಿಗೆ ಒಣಸೌದೆ ಸಿಗುವುದಿಲ್ಲ. ಕೌರವ ಕೊಡುಗೈ ದೊರೆಯಲ್ಲವೆ ಎಂದು ಹೇಗೂ ಡಂಗೂರ ಸಾರಲಾಗಿದೆಯಲ್ಲ. ಅವನೇ ಪರಿಹರಿಸಲಿ ಎಂದು ಆ ಪ್ರಜೆ ರಾಜನಲ್ಲಿಗೆ ಬಂದು ಒಣ ಸೌದೆ ನೀಡಬೇಕು ಎಂದು ಪ್ರಾರ್ಥಿಸುತ್ತಾನೆ. ಇಂತಹ ಮಳೆಯಲ್ಲಿ ಒಣ ಸೌದೆ ಎಲ್ಲಿ ದೊರೆಯುತ್ತದೆ, ಸಾಧ್ಯವಿಲ್ಲ ಎಂದು ಕೌರವನ ಭಟ್ಟಂಗಿಗಳು ನಿರಾಕರಿಸುತ್ತಾರೆ. ವಿಷಯ ತಿಳಿದ ಕರ್ಣ ತನ್ನ ಮನೆಯ ತೊಲೆ, ಕಂಬಗಳನ್ನೇ ಕಿತ್ತು ಆ ಪ್ರಜೆಗೆ ಕೊಡುತ್ತಾನೆ.

ದಾನಗುಣ ಕರ್ಣನಿಗೆ ಸಹಜವಾಗಿ ಬಂದದ್ದು. ಜೀವನಾನುಭವದಿಂದ ಅದು ಪಕ್ವವಾಗುತ್ತ ಹೋದದ್ದು. ಅದು ಕರ್ಣನ ಅನನ್ಯ ಗುಣ. ಕರ್ಣ ಸಾಧಿಸಿದ್ದನ್ನು ಇತರರು ತಮ್ಮದೆಂದು ಹೇಳಿಕೊಳ್ಳಲು ಹೋದರೆ ಹೇಗೆ? ಒಬ್ಬನ ಸೃಜನಶೀಲ ಗುಣವನ್ನು, ಕ್ರಿಯಾಶೀಲತೆಯನ್ನು ಮತ್ತೊಬ್ಬರು ತಮ್ಮದೆಂದು ಕದಿಯಲು ಸಾಧ್ಯವಿಲ್ಲ ಎಂಬುದನ್ನು ನಾಟಕಕಾರರು ಒಂದೇ ದೃಶ್ಯದಲ್ಲಿ ಅನನ್ಯವಾಗಿ ಕಟ್ಟಿಕೊಟ್ಟಿದ್ದಾರೆ.

ನಾಟಕಕ್ಕೆ ಅಗತ್ಯವಿದ್ದ ವಿಷಾದ ಭಾವ ಸೂಸುವ ಹಾಡುಗಳ ರಾಗ ಸಂಯೋಜನೆ ಗಂಧರ್ವ ಅವರದು. ಹಿನ್ನೆಲೆ ಸಂಗೀತ ಹಾಡಿದ್ದು- ನುಡಿಸಿದ್ದು ವಿವೇಕ್ ಮತ್ತು ಗೌತಮ್. ಕೀಬೋರ್ಡ್‌ನಲ್ಲಿ ಹಾರ್ಮೋನಿಯಂ ವಾದ್ಯದ ನಾದ ಹೊರಡಿಸಿ, ಪೌರಾಣಿಕ ದಾಟಿಯಲ್ಲಿ ಹಾಡಿದ್ದು ನಾಟಕಕ್ಕೆ ಪೂರಕವಾಗಿತ್ತು. ವಸ್ತ್ರವಿನ್ಯಾಸ ರೇಣುಕಾ ರೆಡ್ಡಿ, ಪ್ರಸಾದನ ರಾಮಕೃಷ್ಣ ಬೆಳತೂರು. ಬೆಳಕು ಮಹದೇವಸ್ವಾಮಿ. ಸಹನಿರ್ದೇಶನ ಸತೀಶ ಕುಮಾರ್.

ಕರ್ಣನ ಮನೋಭಾವವನ್ನು ನಾಲ್ಕು ಪಾತ್ರಗಳಲ್ಲಿ ನಾಟಕಕಾರರು ಕಟ್ಟಿಕೊಟ್ಟಿದ್ದಾರೆ. ಗಾನ, ಮೇಘನಾ, ನವೀನ್, ಪುನೀತ್ ಈ ನಾಲ್ಕು ಪಾತ್ರಗಳನ್ನು ಅನಾವರಣಗೊಳಿಸಿದರು.

ಕೌರವನ ಪಾತ್ರಧಾರಿ ಅಭಿಷೇಕನ ಮಾತುಗಾರಿಕೆ ತುಸು ವೇಗವಾದರೂ, ನಟನೆ ಪರವಾಗಿಲ್ಲ ಎನ್ನುವಂತಿತ್ತು. ಮುಖ್ಯಪಾತ್ರದಲ್ಲಿ ಪವಿತ್ರಾ ನಟನೆ ಮತ್ತು ಮಾತಿನ ಉಚ್ಛಾರ ಉತ್ತಮವಾಗಿತ್ತು. ಮತ್ತಷ್ಟು ತಾಲೀಮು ನಡೆಸಬೇಕಾದ ಅವಶ್ಯಕತೆ ಎಲ್ಲ ಕಲಾವಿದರಿಗೆ ಇದೆ.
ನಿಧಿರಾವ್, ಹರೀಶ್, ರಶ್ಮಿ ಜಿ., ನಾಗರಾಜ ಮುಂತಾದ ನಾಟಕಕ್ಕೆ ಹೊಸಬರೆನಿಸಿದ ವಿದ್ಯಾರ್ಥಿಗಳನ್ನು ನಾಟಕಕ್ಕೆ ತೊಡಗಿಸಿ ನಿರ್ವಹಿಸಿದವರು ರಂಗಬೆಡಗು ಸಂಚಾಲಕ ಎಸ್.ಎನ್.ಅರುಣ.

ಶಂಕರಪ್ಪ ಅವರ ನಿರ್ವಹಣೆಯಲ್ಲಿರುವ ಬಿಇಎಲ್ ಕಲಾಕೇಂದ್ರ ಹಾಲಿ ರವೀಂದ್ರ ಕಲಾಕ್ಷೇತ್ರಕ್ಕಿಂತ ಉತ್ತಮವಾದ, ಸುಸಜ್ಜಿತ ರಂಗಮಂದಿರ. ಆದರೆ ಅದು ಕಾರ್ಖಾನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಮೀಸಲು. ಬಿಇಎಲ್‌ನೊಂದಿಗೆ ಕೈಜೋಡಿಸಿದವರಿಗೆ ಮಾತ್ರ ಆಗೊಮ್ಮೆ ಈಗೊಮ್ಮೆ ಲಭ್ಯ. ಹಾಗಾಗಿ ಇಂತಹ ಸುಸಜ್ಜಿತ ರಂಗಮಂದಿರದಲ್ಲಿ ನಾಟಕ ನೋಡುವ ಅವಕಾಶ ನಗರದ ರಂಗಾಸಕ್ತರಿಗೆ ಅಪರೂಪಕ್ಕೊಮ್ಮೆ ಮಾತ್ರ ದೊರಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT