ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜು ಬಳಸುವ ರಿವಾಜು

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಗಾಜಿನ ಬಳಕೆ ಇಂದು ನಿನ್ನೆಯದ್ದಲ್ಲ. ಅದರಲ್ಲೂ ಕಟ್ಟಡ ನಿರ್ಮಾಣಕ್ಕೆ ಗಾಜನ್ನು ಒಗ್ಗಿಸಿಕೊಂಡು ಸಾಕಷ್ಟು ವರ್ಷಗಳೇ ಕಳೆದುಹೋಗಿವೆ. ಅಲಂಕಾರಕ್ಕೆ, ಒಳಾಂಗಣ ವಿನ್ಯಾಸಕ್ಕೆ ಗಾಜು ಪ್ರಶಸ್ತ ಆಯ್ಕೆ ಎನ್ನಿಸಿತ್ತು.


ಪೀಠೋಪಕರಣಗಳಿಗೆ, ಫಿಕ್ಸ್‌ಚರ್‌ಗಳಲ್ಲೂ ಗಾಜಿನ ಬಳಕೆ ಇಮ್ಮಡಿಯಾಯಿತು. ಆದರೆ ಕೆಲವೇ ವರ್ಷಗಳಿಂದ ಗಾಜಿನ ಬಳಕೆ ಇನ್ನಷ್ಟು ಹಿಗ್ಗಿದೆ. ಗಾಜನ್ನು ‘ವಿಷುವಲ್ ಕನೆಕ್ಟಿವಿಟಿ’ಯ ಮಾಧ್ಯಮವಾಗಿಸಿಕೊಂಡು ಕಟ್ಟಡದ ಹೊರಗಿನ ಗೋಡೆಗಳಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ಹಸಿರು ಪರಿಕಲ್ಪನೆಯ ಹೆಸರಲ್ಲೂ ಗಾಜು ಹೆಚ್ಚು ಬಳಕೆಯಾಗುತ್ತಿದೆ. ಗಾಜಿನ ಬಳಕೆಯಿಂದ ಜಾಗ ವಿಶಾಲವಾಗಿ ಕಾಣುತ್ತದೆ.

ನೈಸರ್ಗಿಕ ಬೆಳಕಿನ ಹರವು ಉತ್ತಮವಾಗಿರುತ್ತದೆ ಹೊರಗಿನ ಮಾಲಿನ್ಯ ತಡೆಯುತ್ತದೆ, ಕೃತಕ ದೀಪಗಳ ಬಳಕೆ ತಪ್ಪುವುದರಿಂದ ಶಕ್ತಿ ಉಳಿತಾಯವಾಗುತ್ತದೆ. ಹೀಗೆ ಉಪಯೋಗಗಳ ಪಟ್ಟಿಯನ್ನೇ ಮುಂದಿಟ್ಟುಕೊಂಡು   ಗಾಜಿನ ಬಳಕೆ ಒಳ್ಳೆಯದು ಎಂಬ ವಾದವೂ ಇದೆ.  ಆದರೆ  ಗಾಜನ್ನು ಅಧಿಕ ವಾಗಿ ಬಳಸುವುದು ಎಷ್ಟು ಸೂಕ್ತ?

ಗಾಜಿನ ಬಳಕೆ ಮೂಲತಃ ಪಾಶ್ಚಾತ್ಯ ಶೈಲಿ. ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಗಾಜನ್ನು ಗೋಡೆಗಳಂತೆ ಬಳಸಲಾಗಿತ್ತು.

ತೀರಾ ಥಂಡಿ ವಾತಾವರಣವಿರುವ ಕಡೆ, ಸೂರ್ಯನ ಕಿರಣವನ್ನು ಹೀರಿಕೊಂಡು ಒಳಗೆ ಶಾಖವಿಡಲು ಗಾಜು ಸಹಕಾರಿ. ಹೀಗಾಗಿ ಪಾಶ್ಚಾತ್ಯ ದೇಶಗಳಲ್ಲಿ ಮನೆಗಳಿಗೆ, ಕಚೇರಿಗಳಿಗೆ ಗಾಜನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಕೇವಲ ಅಂದ ಚೆಂದವನ್ನು ಗಮನದಲ್ಲಿಟ್ಟುಕೊಂಡು ಯಥಾವತ್ತಾಗಿ ಭಾರತದಲ್ಲಿ ಕಟ್ಟಡಗಳಿಗೆ ಹೆಚ್ಚು ಗಾಜನ್ನು ಬಳಸಿಕೊಳ್ಳಲಾಗುತ್ತಿದೆ.

ಅನುಕೂಲತೆಯ ದೃಷ್ಟಿಯಲ್ಲಿ ನೋಡಿದರೆ ಇಲ್ಲಿನ ವಾತಾವರಣಕ್ಕೆ ಗಾಜನ್ನು ಗೋಡೆಗಳಂತೆ ಬಳಸುವ ಅಗತ್ಯವೇ ಇಲ್ಲ.

ಗಾಜಿನ ಬಳಕೆ ಪರಿಸರದ ಮೇಲೆ  ತೀವ್ರ ಪರಿಣಾಮ ಉಂಟು ಮಾಡುತ್ತದೆ ಎನ್ನುತ್ತಾರೆ ಪರಿಸರಸ್ನೇಹಿ ಕಟ್ಟಡ ವಿನ್ಯಾಸದಲ್ಲಿ ತೊಡಗಿಕೊಂಡಿರುವ ಸರೋಜಿನಿ.

ಗಾಜು ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಅವರು ವಿವರಿಸುವುದು ಹೀಗೆ...
‘ಗಾಜಿನ ಉತ್ಪಾದನೆಯ ಹಂತದಲ್ಲೇ ಹೆಚ್ಚು ರಾಸಾಯನಿಕಗಳು ಅಡಗಿರುತ್ತವೆ.  ಜೊತೆಗೆ ಉತ್ಪಾದನೆ ಹಂತದಲ್ಲಿ ಶಕ್ತಿಯ ಬಳಕೆಯೂ ಅಧಿಕ. ಗಾಜನ್ನು ಎಷ್ಟು ಕಡಿಮೆ ಉತ್ಪಾದಿಸುತ್ತೇವೋ ಅಷ್ಟೂ ಒಳ್ಳೆಯದು. ಮೊದಲೆಲ್ಲಾ ಚೆಂದಕ್ಕೆ ಎಷ್ಟು ಅವಶ್ಯಕವೋ ಅಷ್ಟನ್ನು ಬಳಸುತ್ತಿದ್ದರು. ಆದರೆ ಈಗ ನೆಲದಿಂದ ತಾರಸಿವರೆಗೆ ಗಾಜು ಬಳಕೆಯಾಗುತ್ತಿದೆ. ಇದು ಒಳ್ಳೆಯ ಲಕ್ಷಣವಲ್ಲ’.

ಅರ್ಬನ್ ಹೀಟ್ ಐಲೆಂಡ್ ಎಫೆಕ್ಟ್‌
ಗಾಜು ಶಾಖವನ್ನು ಹೆಚ್ಚು ಸೆಳೆದುಕೊಳ್ಳುತ್ತದೆ. ಭಾರತದಲ್ಲಿ ಮೊದಲೇ ಶಾಖ ಹೆಚ್ಚಿದೆ. ಹೀಗಿರುವಾಗ ಗಾಜು ಅದನ್ನು ಇನ್ನಷ್ಟು ಹೆಚ್ಚುಗೊಳಿಸಲಿದೆ. ಶಾಖವನ್ನು ಹೀರಿ ಮತ್ತೆ ವಾತಾವರಣಕ್ಕೆ ಶಾಖವನ್ನು ಉಗುಳುತ್ತದೆ. ಗಾಜಿನ ಸುತ್ತಮುತ್ತ ಸುಮಾರು 17 ಡಿಗ್ರಿ ಸೆಲ್ಸಿಯಸ್ ಶಾಖ ಹೆಚ್ಚಿರುತ್ತದೆ. ಈ ಶಾಖ ತಗ್ಗಿಸಲು ಒಳಗೆ ಏರ್ ಕಂಡೀಷನರ್ ಹಾಕಿಸಿಕೊಳ್ಳುತ್ತಾರೆ. ಇದು ಯಾವ ರೀತಿ ಶಕ್ತಿ ಉಳಿತಾಯವಾಗುತ್ತದೆ?

ಇವು ‘ಅರ್ಬನ್ ಹೀಟ್ ಐಲೆಂಡ್ ಎಫೆಕ್ಟ್’ಗೆ ಕಾರಣವಾಗುತ್ತಿವೆ. ಬೇಸಿಗೆಯಲ್ಲಿ ಮಿತಿ ಮೀರಿದ ಬಿಸಿ, ಚಳಿಗಾಲದಲ್ಲಿ ಅತಿಯಾದ ಚಳಿ, ಇವೆಲ್ಲಕ್ಕೂ ನಾವು ಮಾಡುತ್ತಿರುವ ಇಂಥ ಕೆಲಸಗಳೇ ಕಾರಣ ಎಂಬುದು ಸರೋಜಿನಿ ಅವರ ಅಭಿಪ್ರಾಯ.

ಆದರೆ ಗಾಜನ್ನು ಬಳಸಲೇಬೇಕು ಎನ್ನುವವರಿಗೆ ಅವರು ಒಂದು ಸಲಹೆಯನ್ನೂ ಕೊಡುತ್ತಾರೆ.

ಗಾಜನ್ನು ಶೇಕಡಾ 100ರಷ್ಟು ಪುನರ್ ಬಳಕೆ ಮಾಡಬಹುದು. ಆದರೆ ಅದನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಭೂಮಿಗೆ ಸೇರಿ ವ್ಯರ್ಥವಾಗುತ್ತಿದೆ. ಗಾಜನ್ನು ಸಮರ್ಪಕವಾಗಿ ಪುನರ್ ಬಳಕೆ ಮಾಡಿಕೊಳ್ಳುವುದರೊಂದಿಗೆ ಫೋಟೊವೋಲ್ಟಿಕ್ ಮಾಡ್ಯೂಲ್‌ನಂತೆ (ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಗಾಜು) ಉಪಯೋಗಿಸಬಹುದು. ಗಾಜನ್ನು ಸೋಲಾರ್ ಶಕ್ತಿ ಉತ್ಪಾದನೆಗೂ ಬಳಸಬಹುದು. ಇಂಥ ವ್ಯವಸ್ಥೆ ಬೇರೆ ದೇಶಗಳಲ್ಲಿವೆ. ಆದರೆ ಭಾರತದಲ್ಲಿ ಈ ಕುರಿತು ಇನ್ನೂ ಚಿಂತನೆ ನಡೆಸಿಲ್ಲ. ಅದನ್ನು ಅಳವಡಿಸಿಕೊಳ್ಳಲು ನಾವು ಇನ್ನೂ ಒಂದು ಹೆಜ್ಜೆ ಮುಂದೆ ಬರಬೇಕಷ್ಟೆ.

ಆಯ್ಕೆ ಸರಿಯಿರಬೇಕು
‘ಸಾಮಾನ್ಯವಾಗಿ ಬಾಡಿಗೆಗೆ ಕೊಡುವ ಉದ್ದೇಶದಿಂದ ಕಚೇರಿ ಕಟ್ಟಡ ಕಟ್ಟುವಾಗ ಕಚೇರಿಯ ಆದ್ಯತೆ ತಿಳಿದಿರುವುದಿಲ್ಲ. ಯಾವ ರೀತಿಯ ಕಚೇರಿ ಬಾಡಿಗೆಗೆ ಬರುತ್ತದೆ ಎಂದು ಮೊದಲೇ ತಿಳಿಯದ ಕಾರಣ ಗಾಜನ್ನು ಹಾಕಿದರೆ ಎಲ್ಲಾ ಉದ್ದೇಶಗಳಿಗೂ ಸುಲಭವಾದೀತು ಎಂದು ಗಾಜಿನ ಗೋಡೆ ನಿರ್ಮಿಸಿಬಿಡುವುದು ರೂಢಿ. ಇದು ಗಾಜಿನ ಬಳಕೆ ದುಪ್ಪಟ್ಟಾಗಲು ಮುಖ್ಯ ಕಾರಣ’ ಎನ್ನುತ್ತಾರೆ ಐಡಿಯಾ ಅಂಡ್ ಡಿಸೈನ್‌ನ ವಿನ್ಯಾಸಕ ಮೈತ್ರಿ.

ಆದರೆ ಗಾಜನ್ನು ವಿನ್ಯಾಸದ ಭಾಗವಾಗಿ ಆರಿಸಿಕೊಳ್ಳುವುದಾದರೆ, ಕಟ್ಟಡದ ಸ್ಥಳ, ಉಪಯೋಗ ಹಾಗೂ ಬಳಕೆದಾರರ ಅವಶ್ಯಕತೆಗಳಿಗೆ ಅನುಗುಣವಾಗಿ ಆರಿಸಿಕೊಳ್ಳುವುದು ಅತಿ ಮುಖ್ಯ ಎನ್ನುವುದು ಅವರ ಅಭಿಪ್ರಾಯ.

‘ವಿನ್ಯಾಸಕ್ಕೆ ಗಾಜು ಸೂಕ್ತ ಸಾಮಗ್ರಿ. ಆದರೆ ಗಾಜನ್ನು ಒಳಾಂಗಣ ವಿನ್ಯಾಸಕ್ಕೆ ಹೆಚ್ಚಾಗಿ ಬಳಸಿಕೊಂಡರೆ ಒಳ್ಳೆಯದು.  ಹೊರಗಾದರೆ, ಉತ್ತರದ ಭಾಗಕ್ಕೆ ಅಥವಾ ದಕ್ಷಿಣದ ದಿಕ್ಕಿಗೆ ಗಾಜನ್ನು ಬಳಸಬಹುದು. ಹೊರಗೆ ಬಳಸುವುದಾದರೆ ಅದಕ್ಕೆಂದೇ ಹಲವು ನಮೂನೆಯ ಗಾಜುಗಳು ಲಭ್ಯವಿವೆ. ವಿಶೇಷ ಕೋಟಿಂಗ್ ಇರುವ ಈ ಗಾಜನ್ನು ಬಳಸಿದರೆ ಅಧಿಕ ಶಾಖವನ್ನು ತಡೆಯಬಹುದು. ಡಬಲ್, ಟ್ರಿಪಲ್ ಗೇಜ್‌ನ ಗಾಜುಗಳು ಈ ಉದ್ದೇಶಕ್ಕೆ ಹೇಳಿಮಾಡಿಸಿದ್ದು. ಪ್ಲೇನ್ ಗಾಜುಗಳು ಹೊರಗಿನ ವಿನ್ಯಾಸಕ್ಕೆ ಯೋಗ್ಯವಲ್ಲ. ಇದಕ್ಕೆ ಇನ್ನೂ ಉತ್ತಮ ಆಯ್ಕೆ ಎಂದರೆ ಲ್ಯಾಮಿನೇಟೆಡ್ ಬುಲೆಟ್ ಪ್ರೂಫ್ ಗ್ಲಾಸ್. ಇವು ಒಡೆಯುವುದಿಲ್ಲ. ಒಡೆದರೂ ಮತ್ತೆ ಬಳಸಿಕೊಳ್ಳಬಹುದು. ದೊಡ್ಡ ಮಟ್ಟದಲ್ಲಿ ಬಳಸುವುದಾದರೆ ಪೈರೋಸ್ಟಾಪ್ ಗ್ಲಾಸ್‌ಗಳು ಉತ್ತಮ’ ಎಂದು ಸಲಹೆ ನೀಡುತ್ತಾರೆ ಅವರು.

ಗಾಜನ್ನು ಹೆಚ್ಚು ಬಳಸುತ್ತಿರುವ ಕಾರಣಗಳಲ್ಲಿ ಅತಿ ಬೇಗನೆ ನಿರ್ಮಾಣ  ಕಾರ್ಯ ಸಾಧ್ಯವಾಗುವುದೂ ಒಂದು. ಬೇಗನೆ ಅಳವಡಿಸಿ ಕಟ್ಟಿ ಮುಗಿಸಬಹುದು ಎಂಬ ಒಂದೇ ಕಾರಣಕ್ಕೆ ಗಾಜನ್ನೇ ಕಚೇರಿ ನಿರ್ಮಾಣಕ್ಕೆ ಹೆಚ್ಚು ಉಪಯೋಗಿಸಿಕೊಳ್ಳಲಾಗುತ್ತಿದೆ. ಆದರೆ ಇದಕ್ಕೆ ವ್ಯಯಿಸಬಹುದಾದ ಹಣ, ಇಟ್ಟಿಗೆಗೆ ಹೋಲಿಸಿದರೆ ಮೂರ್ನಾಲ್ಕು ಪಟ್ಟು ಹೆಚ್ಚಿರುತ್ತದೆ. ಜೊತೆಗೆ ಕಾರ್ಬನ್ ಪ್ರಿಂಟ್ ಅನ್ನೂ ಹೆಚ್ಚು ಉಳಿಸುತ್ತದೆ ಎಂದು ಎಚ್ಚರಿಸುತ್ತಾರೆ ಅವರು.

ಗಾಜು ವಿನ್ಯಾಸಕ್ಕೆ ಹೇಳಿ ಮಾಡಿಸಿದ ವಸ್ತು ಎಂಬ ಒಂದೇ ಕಾರಣಕ್ಕೆ ಅದನ್ನು ಬಳಸುವ ರೀತಿ ರಿವಾಜು ಅರಿಯದೆ  ಅವಶ್ಯಕತೆ ಇಲ್ಲದಿದ್ದರೂ ಸುಖಾ ಸುಮ್ಮನೆ ಉಪಯೋಗಿಸುವ ಮಂದಿ ಹೆಚ್ಚುತ್ತಿದ್ದಾರೆ. ಸದ್ಯಕ್ಕೆ ಗಾಜನ್ನು ಸಮರ್ಪಕವಾಗಿ ಬಳಸುವ, ಬಳಕೆಯ ಮಟ್ಟವನ್ನು ಆದಷ್ಟೂ ಕಡಿಮೆ ಮಾಡುವ, ಸೂಕ್ತವಾಗಿ ಮರುಬಳಕೆ ಮಾಡುವ ಈ ಮೂಲಕ ಗಾಜಿನಿಂದ ಪರಿಸರದ ಮೇಲಾಗುವ ಕೆಟ್ಟ ಪರಿಣಾಮಗಳನ್ನು ತಗ್ಗಿಸುವ ಮಾರ್ಗವೊಂದೇ ನಮ್ಮ ಎದುರಿಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT