ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಲಿ ಕೇರಳ ಸವಿಯ ‘ಓಣಂ ಸದ್ಯ’

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬಾಳೆಎಲೆಯಲ್ಲಿ ಒಪ್ಪ– ಓರಣವಾಗಿ  ಬಡಿಸಿಟ್ಟ ಭಕ್ಷ್ಯ–ಖಾದ್ಯಗಳನ್ನು ಎಡದಿಂದ ಬಲಕ್ಕೆ, ನಾಲ್ಕು ಬಗೆಯ ಪಾಯಸಗಳನ್ನು ಬಲದಿಂದ ಎಡಕ್ಕೆ ಖಾಲಿ ಮಾಡುತ್ತಾ ಬರಬೇಕು ಎಂದು ಮಲಯಾಳಂನಲ್ಲೇ ಹೇಳಿದ ಶೆಫ್‌ ರೇಗಿ ಮ್ಯಾಥ್ಯೂ, ಇಂಗ್ಲಿಷ್‌ನಲ್ಲಿ ಮತ್ತೆ ವಿವರಿಸಿದರು.

ಬಾಳೆಎಲೆಯಲ್ಲಿ ನಾವು ಬಡಿಸುವ 20ಕ್ಕೂ ಹೆಚ್ಚು ಬಗೆಯ ಐಟಂಗಳನ್ನು ಕೈಯಿಂದಲೇ ಸೇವಿಸಬೇಕು ಎಂದು ಹೇಳುತ್ತಿದ್ದಂತೆ ವಿದೇಶಿ ಪತ್ರಕರ್ತೆ ಕೈಯನ್ನೊಮ್ಮೆ ಎಲೆಯನ್ನೊಮ್ಮೆ ನೋಡಿಕೊಂಡಳು.

ಅದು ಕೇರಳಿಯರ ‘ಓಣಂ ಸದ್ಯ’. ಮಾರತ್‌ಹಳ್ಳಿಯ ಹೊರವರ್ತುಲ ರಸ್ತೆಯಲ್ಲಿರುವ ‘ಕಪ್ಪ ಚಕ್ಕ ಕಾಂದಾರಿ’ ಎಂಬ ತಂಡ ಓಣಂಗಾಗಿ ಆಯೋಜಿಸಿರುವ    ಹಬ್ಬದೂಟದ ಉತ್ಸವದ ಪೂರ್ವ ಪ್ರದರ್ಶನದ  ನೋಟ.

ಮ್ಯೂಸಿಯಂ ರಸ್ತೆಯಲ್ಲಿರುವ ಕೆಥೊಲಿಕ್‌ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆಂದೇ ಏರ್ಪಡಿಸಿದ್ದ ಈ ಪೂರ್ವ ಪ್ರದರ್ಶನದಲ್ಲಿ ‘ಓಣಂ ಸದ್ಯ’ದ ಥಾಲಿಯನ್ನು ರೇಗಿ ಮ್ಯಾಥ್ಯೂ ಅವರು ಉಣಬಡಿಸಿದರು.

ಶ್ರಾವಣದಲ್ಲಿ ಬರುವ ಹಬ್ಬಗಳ ಮೆರವಣಿಗೆಯಲ್ಲಿ ಕೇರಳಿಯರ ಸಡಗರ ಕಾಣುವುದು ಓಣಂನಲ್ಲಿ.  ಈ ಹಬ್ಬದಲ್ಲಿ ಹೂವು, ತರಕಾರಿ, ಹಣ್ಣುಗಳದ್ದೇ ಕಾರುಬಾರು.

ಓಣಂಗೆಂದು ಅಷ್ಟು ದೂರದ ತವರಿಗೆ ಹೋಗುವುದು ಸಾಧ್ಯವಾಗದವರಿಗೆಂದೇ ಸಿಲಿಕಾನ್‌  ಸಿಟಿಯಲ್ಲಿ ‘ಓಣಂ ಸದ್ಯ’ ಉಣಬಡಿಸುವ ತಂಡಗಳ ಸಾಲಿಗೆ ‘ಕಪ್ಪ ಚಕ್ಕ ಕಾಂದಾರಿ’ ಹೊಸ ಸೇರ್ಪಡೆ.

‘ಮಾರತ್‌ಹಳ್ಳಿ ಮೈದಾನದಲ್ಲಿ ಸೆಪ್ಟೆಂಬರ್‌ 10ರಿಂದ 14ರವರೆಗೆ ಐದು ದಿನಗಳ ಕಾಲ ಪಕ್ಕಾ ಕೇರಳದ ಊಟೋಪಹಾರದ ಉತ್ಸವವನ್ನು ಏರ್ಪಡಿಸಿದ್ದೇವೆ. ಕೇರಳದ ಪರಂಪರಾಗತ ಖಾದ್ಯಗಳಾದ ಸದ್ಯ, ಒಣಚಂಡ, ಪಾಲಡ (ಪಾಯಸ) ಪ್ರದಾಮನ್‌, ಎರಿಸೆರಿ, ತರಾವರಿ ಉಪ್ಪಿನಕಾಯಿ, ಪಚಡಿ, ಕಿಚಡಿ ಮುಂತಾದುವುಗಳನ್ನು ಕೇರಳದ ಅಸಲಿ ಸ್ವಾದದೊಂದಿಗೆ ಉಣಬಡಿಸುತ್ತೇವೆ. ನಮ್ಮೂರಿನ ಬಾಣಸಿಗರೇ ಇವುಗಳನ್ನು ಸಿದ್ಧಪಡಿಸಲಿದ್ದಾರೆ’ ಎಂದು ‘ಕಪ್ಪ ಚಕ್ಕ ಕಾಂದಾರಿ’ ತಂಡದ ಮುಖ್ಯಸ್ಥ ಜಾನ್‌ ಪೌಲ್‌ ಅವರು ವಿವರಿಸಿದರು.

‘ಕಪ್ಪ’ ಅಂದರೆ ಗೆಣಸು, ಚಕ್ಕ ಅಂದರೆ  ಹಲಸಿನ ಹಣ್ಣು, ಕಾಂದಾರಿ ಅಂದರೆ ಕೇರಳದ ಹೆಸರಾಂತ ಕಟು ಮೆಣಸು.

ರೇಗಿ ಮ್ಯಾಥ್ಯೂ ಹೇಳಿದಂತೆ ಬಾಳೆಎಲೆಯ ಎಡ ತುದಿಯಲ್ಲಿ ಬಡಿಸಿದ್ದ ನಾಲ್ಕು ಬಗೆಯ ಬಾಳೆಕಾಯಿ ಚಿಪ್ಸ್‌ಗಳು, ಐದು ಬಗೆಯ ಉಪ್ಪಿನಕಾಯಿಯಿಂದ ಶುರು ಮಾಡಿ, ಕಿಚಡಿ, ಪಚಡಿ, ಎರಡು ಬಗೆಯ ಚಟ್ನಿ, ಮಿಕ್ಸೆಡ್ ತರಕಾರಿ ಪಲ್ಯಗಳನ್ನು ಸವಿಯುತ್ತಾ  ಬಲ ತುದಿ ತಲುಪುವಷ್ಟರಲ್ಲಿ ಎರಿಸೆರಿ ಎಂಬ ಕಾಯಿ ಹಾಕಿದ ಸುವರ್ಣಗಡ್ಡೆ ಪಲ್ಯ ಸಿಗುತ್ತದೆ. ಕೊನೆಯದಾಗಿ ಹೆಸರುಬೇಳೆಯನ್ನು ಪೇಸ್ಟ್‌ನಂತೆ ಬೇಯಿಸಿ ತುಪ್ಪ, ಬೆಲ್ಲ ಸೇರಿಸಿ ಮಾಡಿದ ಸಿಹಿಯೂ ಇರುತ್ತದೆ.
ಬೆಳ್ತಿಗೆ ಅಥವಾ ಕುಚಲಕ್ಕಿಯ ಅನ್ನದೊಂದಿಗೆ ತರಕಾರಿ ಸಾಂಬಾರ್‌ ಬೆರೆಸಿ... ಇಷ್ಟೂ ಐಟಂಗಳನ್ನು ಸವಿಯುವಲ್ಲಿಗೆ ಮೊದಲ ಸುತ್ತಿನ ಊಟ ಮುಗಿಯುತ್ತದೆ. 

ಎರಡನೇ ಸುತ್ತಿನಲ್ಲಿ ತಿಳಿಸಾರು ಅನ್ನ. ಮೂರನೇ ಸುತ್ತು ಪಾಯಸಗಳ ಸರಣಿ. ಬಲದಿಂದ ಎಡಕ್ಕೆ ಸಾಗಬೇಕು ಎಂಬ ರೇಗಿ ಸಲಹೆಯಂತೆ ತಿಳಿಯಾದ ಸಿಹಿಯಿಂದ ಶುರು ಮಾಡಿ ಪ್ರಖರ ಸಿಹಿ ಪಾಯಸವನ್ನು ಸವಿದು ನಾಲ್ಕನೆ ಸುತ್ತಿನ ಮಜ್ಜಿಗೆ ಅನ್ನ ಬಡಿಸಿಕೊಂಡು ಬಾಳೆಹಣ್ಣನ್ನೂ ತಿಂದರೆ ಸದ್ಯ ಸೇವನೆ ಮುಗಿದಂತೆ.

ಅಂದ ಹಾಗೆ, ಹಬ್ಬದೂಟದ ಥಾಲಿ ಮಧ್ಯಾಹ್ನ ಮತ್ತು ರಾತ್ರಿಯೂ ಲಭ್ಯ. ಥಾಲಿಯೊಂದರ ಬೆಲೆ ₹ 450.

ಒಂದು ಬಾರಿಗೆ ಬರೋಬ್ಬರಿ 600 ಮಂದಿ ಕೂರುವಷ್ಟು ವಿಶಾಲವಾದ ಭೋಜನಗೃಹವನ್ನು ಮೈದಾನದಲ್ಲಿ ನಿರ್ಮಿಸಲಾಗಿದೆ.

‘ಪ್ರತಿದಿನ 1500 ಮಂದಿ ಹಬ್ಬದೂಟ ಮಾಡುತ್ತಾರೆ ಎಂಬ ನಿರೀಕ್ಷೆ ನಮ್ಮದು. ಉತ್ಸವದಲ್ಲಿ ಕೇರಳದ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಉತ್ಪನ್ನಗಳ ಮಳಿಗೆಗಳಿರುತ್ತವೆ. ಒಟ್ಟಾರೆ ಉತ್ಸವದಲ್ಲಿನ ಗಳಿಕೆಯ ಅಲ್ಪಾಂಶವನ್ನು  ನಗರದ ‘ಘರ್‌ಶೋಮ್‌’ ಎಂಬ ಅವಕಾಶ ವಂಚಿತರ ಸೇವಾ ಸಂಸ್ಥೆಗೆ ನೀಡಲಾಗುತ್ತದೆ’ ಎಂದು ವಿವರಿಸಿದರು ಆಯೋಜಕರ ತಂಡದ ಆಗಸ್ಟಿನ್‌ ಕೆ.ವಿ.

ಇಷ್ಟವಾಯಿತೇ, ಮಾರತ್‌ಹಳ್ಳಿ ಮೈದಾನಕ್ಕೆ ಹೋಗಿ ಓಣಂ ಸದ್ಯ ಸವಿಯಿರಿ. www.onam.asiaದಲ್ಲಿಯೂ ಈ ಕುರಿತು ಬಗ್ಗೆ ಮಾಹಿತಿ ಲಭ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT