ವಿಯೆಟ್ನಾಂ ಜತೆ ಮೈತ್ರಿ ಮರು ಸ್ಥಾಪನೆ

ಕಳೆದ ಒಂದು ವಾರದಲ್ಲಿ ಭಾರತ, ರಾಜತಾಂತ್ರಿಕವಾಗಿ ಎರಡು ಮಹತ್ವದ ಹೆಜ್ಜೆಗಳನ್ನು ಇರಿಸಿತು. ಒಂದು, ಅಮೆರಿಕದೊಂದಿಗಿನ ಮೈತ್ರಿಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದು. ಇನ್ನೊಂದು, ವಿಯೆಟ್ನಾಂ ಸ್ನೇಹವನ್ನು ನವೀಕರಿಸಿ ಚೀನಾಕ್ಕೆ ತಿರುಗೇಟು ನೀಡಲು ಪ್ರಯತ್ನಿಸಿದ್ದು.

ವಿಯೆಟ್ನಾಂ ಜತೆ ಮೈತ್ರಿ ಮರು ಸ್ಥಾಪನೆ

ಕಳೆದ ಒಂದು ವಾರದಲ್ಲಿ ಭಾರತ, ರಾಜತಾಂತ್ರಿಕವಾಗಿ ಎರಡು ಮಹತ್ವದ ಹೆಜ್ಜೆಗಳನ್ನು ಇರಿಸಿತು. ಒಂದು, ಅಮೆರಿಕದೊಂದಿಗಿನ ಮೈತ್ರಿಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದು. ಇನ್ನೊಂದು, ವಿಯೆಟ್ನಾಂ ಸ್ನೇಹವನ್ನು ನವೀಕರಿಸಿ ಚೀನಾಕ್ಕೆ ತಿರುಗೇಟು ನೀಡಲು ಪ್ರಯತ್ನಿಸಿದ್ದು.

ಜಿ-20 ಶೃಂಗಸಭೆಗೆ ತೆರಳುವ ಮುನ್ನ ಭಾರತಕ್ಕೆ ಆಗಮಿಸಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ದೆಹಲಿಯಲ್ಲಿ ಮಾತುಕತೆ ನಡೆಸಿದರೆ, ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅಮೆರಿಕದ ಪೆಂಟಗನ್ ಭೇಟಿ ಸಂದರ್ಭದಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕಾರ್ಟರ್ ಅವರೊಂದಿಗೆ, ಪರಸ್ಪರ ಸೇನಾ ನೆಲೆ ಬಳಕೆಗೆ ಅವಕಾಶ ನೀಡಬಲ್ಲ ಮಿಲಿಟರಿ ಒಡಂಬಡಿಕೆಯನ್ನು ಅಂತಿಮಗೊಳಿಸಿದರು.

ಆ ಬಗ್ಗೆ ಕಾರ್ಟರ್ ಮತ್ತು ಪರಿಕ್ಕರ್ ಜಂಟಿ ಹೇಳಿಕೆ ನೀಡಿದರು. ಈ ಮೂಲಕ ಭಾರತ ತಾನು ಹಲವು ದಶಕಗಳಿಂದ ಪ್ರತಿಪಾದಿಸಿಕೊಂಡು ಬಂದಿದ್ದ ಅಲಿಪ್ತ ನೀತಿಯಿಂದ ಕದಲಿದಂತಾಯಿತು. ಬಿಡಿ, ಅಮೆರಿಕದೊಂದಿಗಿನ ನಿಕಟ ಸ್ನೇಹದಿಂದಾಗುವ ಲಾಭ ನಷ್ಟಗಳ ತುಲಾಭಾರವನ್ನು ಇನ್ನೊಮ್ಮೆ ಮಾಡೋಣ.

ಮುಖ್ಯವಾಗಿ, ಪ್ರಧಾನಿ ಮೋದಿ ವಿಯೆಟ್ನಾಂಗೆ ಭೇಟಿ ಇತ್ತಿದ್ದು ಹಲವು ಕಾರಣಗಳಿಂದಾಗಿ ಜಗತ್ತಿನ ಗಮನ ಸೆಳೆಯಿತು. ಹಾಗೆ ನೋಡಿದರೆ, ಭಾರತ ಮತ್ತು ವಿಯೆಟ್ನಾಂ ಸಂಬಂಧ ಇಂದು ನಿನ್ನೆಯದಲ್ಲ. ಆದರೆ ಭಾರತದ ಪ್ರಧಾನಿಯೊಬ್ಬರು ವಿಯೆಟ್ನಾಂಗೆ ದ್ವಿಪಕ್ಷೀಯ ಮಾತುಕತೆಗೆಂದು ತೆರಳಿ 15 ವರ್ಷಗಳೇ ಆಗಿದ್ದವು! ಜೊತೆಗೆ ಭಾರತ ಮತ್ತು ಚೀನಾ ನಡುವಿನ ಸಂಬಂಧ ಅಷ್ಟೇನೂ ಉತ್ತಮವಾಗಿರದ ಸಂದರ್ಭ ಇದು.

ನಿಮಗೆ ನೆನಪಿರಬಹುದು, ಕೆಲ ತಿಂಗಳ ಹಿಂದೆ ಎನ್ಎಸ್‌ಜಿ ಸದಸ್ಯತ್ವವನ್ನು ಭಾರತ ಎದುರು ನೋಡುತ್ತಿದ್ದಾಗ ಚೀನಾ ಅಡ್ಡಗಾಲು ಹಾಕಿತ್ತು. ಪಾಕಿಸ್ತಾನದ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನಾಯಕ ಅಜರ್ ಮಸೂದ್‌ನನ್ನು ನಿಷೇಧಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹಿಸಿದಾಗ, ಪಾಕಿಸ್ತಾನವನ್ನು ಖುಷಿಪಡಿಸುವ ಏಕೈಕ ಕಾರಣದಿಂದ ಚೀನಾ ಅದನ್ನು ವಿರೋಧಿಸಿತ್ತು.

ಅಷ್ಟೇ ಅಲ್ಲ,  ಕಾಶ್ಮೀರದ ವಿಷಯದಲ್ಲೂ ಪಾಕಿಸ್ತಾನದ ಬೆನ್ನಿಗೆ ಚೀನಾ ನಿಂತಿರುವುದು, ಪಾಕಿಸ್ತಾನವನ್ನು ಪ್ರಚೋದಿಸಿ ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರಯತ್ನಿಸುವುದು ಗುಟ್ಟಾಗಿಯೇನೂ ಉಳಿದಿಲ್ಲ. ಗಡಿ ತಂಟೆಯಂತೂ ನಡೆದೇ ಇದೆ. ಹಾಗಾಗಿ ಭಾರತದ ಪ್ರಧಾನಿಯ ವಿಯೆಟ್ನಾಂ ಭೇಟಿಯನ್ನು ಚೀನಾಕ್ಕೆ ತಿರುಗೇಟು ನೀಡುವ ಕ್ರಮ ಎಂದೇ ವ್ಯಾಖ್ಯಾನಿಸಲಾಯಿತು. ಅದು ನಿಜವೂ ಹೌದು.

‘ಭಯೋತ್ಪಾದನೆಗೆ ನಮ್ಮ ಪ್ರತಿಕ್ರಿಯೆ ರಾಜಕೀಯವನ್ನು ಮೀರಿದ್ದಾಗಿರಬೇಕು’ ಎಂದು ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸುಮ್ಮನೆ ಹೇಳಿದ್ದಲ್ಲ. ಅದು ಚೀನಾಕ್ಕೆ ನೇರವಾಗಿ ಅನ್ವಯವಾಗುವ ಮಾತು. ಜೊತೆಗೆ ಮೋದಿ ಅವರು ವಿಯೆಟ್ನಾಂಗೆ ಭೇಟಿ ಕೊಟ್ಟದ್ದು ಸೆಪ್ಟೆಂಬರ್ 2ರಂದು. ಅದು ವಿಯೆಟ್ನಾಂನ ಸ್ವಾತಂತ್ರ್ಯ ದಿನ. ಸ್ವತಂತ್ರ, ಶಕ್ತಿಶಾಲಿ ವಿಯೆಟ್ನಾಂ ಭಾರತದ ಅಗತ್ಯ ಎಂಬುದನ್ನು ಇಂತಹ ನಡೆಗಳಿಂದ ಹೇಳಿದರೂ ಸಾಕು. ಅದಿರಲಿ, ವಿಯೆಟ್ನಾಂ ಭಾರತಕ್ಕೆ ಏಕೆ ಮುಖ್ಯ ಎನ್ನುವುದು ಪ್ರಶ್ನೆ. ಕೊಂಚ ಇತಿಹಾಸದ ಪುಟಗಳನ್ನು ತಿರುವಿದರೆ ಅದಕ್ಕೆ ಉತ್ತರ ದೊರೆತೀತು.

ವಿಯೆಟ್ನಾಂ ಇತಿಹಾಸ ಬಹಳ ರೋಚಕವಾಗಿದೆ. ಜಟ್ಟಿಗಳು ಎನಿಸಿಕೊಂಡ ಚೀನಾದೊಂದಿಗೆ ಮೂರು ಬಾರಿ, ಅಮೆರಿಕದೊಂದಿಗೆ ಒಂದು ಬಾರಿ ವಿಯೆಟ್ನಾಂ ಸೆಣಸಿದೆ. ಮೊದಲಿಗೆ ಫ್ರೆಂಚ್ ವಸಾಹತು ಆಗಿದ್ದ ದೇಶ, ನಂತರ ಜಪಾನ್ ತೆಕ್ಕೆಗೆ ಬಂತು. ಎರಡನೇ ವಿಶ್ವಯುದ್ಧದ ಅವಧಿಯಲ್ಲಿ ಗೆರಿಲ್ಲಾ ಯುದ್ಧನೀತಿ ಬಳಸಿ ಸ್ವಾತಂತ್ರ್ಯ ಪಡೆದುಕೊಂಡಿತು. ತದನಂತರ ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಆಗಿ ಹೋಳಾಯಿತು.

ಉತ್ತರ ವಿಯೆಟ್ನಾಂ ರಷ್ಯಾ ಪ್ರಭಾವಕ್ಕೊಳಗಾಗಿ ಕಮ್ಯುನಿಸಂ ನೆಚ್ಚಿಕೊಂಡಿತು. ಶೀತಲ ಸಮರದ ದಿನಗಳಲ್ಲಿ ಕಮ್ಯುನಿಸಂ ವಿಸ್ತರಣೆಯನ್ನು ತಡೆಯುವ ಏಕೈಕ ಗುರಿ ಹೊಂದಿದ್ದ ಅಮೆರಿಕ, ದಕ್ಷಿಣ ವಿಯೆಟ್ನಾಂ ಪರ ನಿಂತಿತು. ಅಮೆರಿಕ ರಂಗ ಪ್ರವೇಶಿಸುತ್ತಿದ್ದಂತೇ, ಸೋವಿಯತ್ ರಷ್ಯಾ ಮತ್ತು ಚೀನಾ, ಉತ್ತರ ವಿಯೆಟ್ನಾಂ ಬೆನ್ನಿಗೆ ನಿಂತು ಕದನಕ್ಕೆ ಹುರುಪು ತುಂಬಿದವು.

ಅತಿ ಹೆಚ್ಚು ಅವಧಿಗೆ ಅಂದರೆ 19 ವರ್ಷ ನಡೆದ ಯುದ್ಧದಲ್ಲಿ ಅಸಂಖ್ಯ ಜನ ಪ್ರಾಣ ತೆತ್ತರು. ಅಪಾರ ಹಣ ಆಹುತಿಯಾಯಿತು. ಆ ದಿನಗಳಲ್ಲಿ ಭಾರತ, ಅಮೆರಿಕವನ್ನು ವಿರೋಧಿಸಿ, ವಿಯೆಟ್ನಾಂ ಪರ ನೈತಿಕ, ರಾಜಕೀಯ ಮತ್ತು ರಾಜತಾಂತ್ರಿಕ ಬೆಂಬಲ ಸೂಚಿಸಿ ದಿಟ್ಟ ನಿಲುವು ತಳೆದಿತ್ತು. ಭಾರತದ ರಸ್ತೆಗಳಲ್ಲಿ  ‘ಹಮಾರಾ ನಾಮ್, ತುಮಾರಾ ನಾಮ್, ವಿಯೆಟ್ನಾಂ, ವಿಯೆಟ್ನಾಂ’ ಘೋಷಣೆಗಳು ಮೊಳಗಿದ್ದವು.

ಯುದ್ಧದ ತರುವಾಯ ತುಂಡಾಗಿದ್ದ ಎರಡು ದೇಶಗಳು ಒಂದಾದವು. ಆದರೆ ಚೀನಾದೊಂದಿಗಿನ ವೈಮನಸ್ಯ ಆರಲಿಲ್ಲ. ವಿಯೆಟ್ನಾಂ-ಕಾಂಬೋಡಿಯ ತಿಕ್ಕಾಟ ತಾರಕಕ್ಕೇರಿ, ಕಾಂಬೋಡಿಯದ ಮೇಲೆ ವಿಯೆಟ್ನಾಂ ಯುದ್ಧ ಸಾರಿದಾಗ, ತನ್ನ ಪ್ರಭಾವಲಯವನ್ನು ವಿಯೆಟ್ನಾಂ ಅತಿಕ್ರಮಿಸುತ್ತಿದೆ ಎಂದರಿತ ಚೀನಾ, ಯುದ್ಧಕ್ಕೆ ಸನ್ನದ್ಧವಾಯಿತು. ಅದು ಚೀನಾದೊಂದಿಗೆ ಭಾರತ ತನ್ನ ಸ್ನೇಹ ಉತ್ತಮ ಪಡಿಸಿಕೊಳ್ಳಲು ತುಡಿಯುತ್ತಿದ್ದ ದಿನಗಳು.

1979ರ ಫೆಬ್ರುವರಿಯಲ್ಲಿ ಭಾರತದ ಅಂದಿನ ವಿದೇಶಾಂಗ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ದ್ವಿಪಕ್ಷೀಯ ಮಾತುಕತೆಗೆಂದು ಚೀನಾಕ್ಕೆ ತೆರಳಿದ್ದರು. ಮಾತುಕತೆ ಇನ್ನೂ ಆರಂಭವಾಗಬೇಕಿತ್ತಷ್ಟೆ. ಆ ಸಂದರ್ಭದಲ್ಲೇ ಚೀನಾದ ನಾಯಕ ಡೆಂಗ್ ಜಿಯೋಪಿಂಗ್ ವಿಯೆಟ್ನಾಂಗೆ ‘ಪಾಠ ಕಲಿಸುವ’ ಮಾತನಾಡಿದ್ದರು.

ಜಿಯೋಪಿಂಗ್ ಮಾತಿನಲ್ಲಿ, ತನ್ನ ವಿರುದ್ಧ ಯಾರೇ ತಿರುಗಿ ಬಿದ್ದರೂ ಪಾಠ ಕಲಿಯಬೇಕಾಗುತ್ತದೆ ಎಂಬ ದಾರ್ಷ್ಟ್ಯವಿತ್ತು. 1962ರಲ್ಲಿ ಭಾರತ, ಚೀನಾಕ್ಕೆ ಸೋತ ಹಿನ್ನೆಲೆಯನ್ನು ಭಾರತಕ್ಕೆ ನೆನಪಿಸುವ ಮಾತೂ ಅದಾಗಿತ್ತು. ಜಿಯೋಪಿಂಗ್ ಮಾತನ್ನು ಸುಮ್ಮನೆ ಕೇಳಿಸಿಕೊಳ್ಳಲು ವಾಜಪೇಯಿ ಸಿದ್ಧರಿರಲಿಲ್ಲ. ಮಾತುಕತೆ ತುಂಡರಿಸಿ, ಭಾರತಕ್ಕೆ ವಾಪಸ್‌ ಬಂದುಬಿಟ್ಟರು.

ಡೆಂಗ್ ಜಿಯೋಪಿಂಗ್, ಸುಮಾರು 80 ಸಾವಿರ ಚೀನೀ ಸೈನಿಕರನ್ನು ವಿಯೆಟ್ನಾಂನತ್ತ ನುಗ್ಗಿಸಿದರು. ಏಳು ದಿನಗಳಲ್ಲಿ ವಿಯೆಟ್ನಾಂ ರಾಜಧಾನಿಯನ್ನು ವಶಪಡಿಸಿಕೊಳ್ಳುವ ಯೋಜನೆ ಅದಾಗಿತ್ತು. ಆದರೆ ಚೀನಾ ಯೋಧರು ಯುದ್ಧಕ್ಕೆ ಸಿದ್ಧರಾಗಿರಲಿಲ್ಲ. ವಿಯೆಟ್ನಾಂ ತೀವ್ರ ಪ್ರತಿರೋಧ ತೋರಿತು. ಆರು ವಾರಗಳ ಬಳಿಕ ಚೀನಾ, ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡಿತು.

ಪಾಠ ಕಲಿಸಲು ಹೋದ ಚೀನಾ ತಾನೇ ಪಾಠ ಕಲಿತಿತ್ತು! ಚೀನಾ ಯುದ್ಧದ ಸಂದರ್ಭದಲ್ಲಿ ಮತ್ತು ನಂತರ ವಿಶ್ವಸಂಸ್ಥೆಯಲ್ಲಿ ವಿಯೆಟ್ನಾಂ- ಕಾಂಬೋಡಿಯ ವಿಷಯ ಚರ್ಚೆಗೆ ಬಂದಾಗ ಭಾರತ ವಿಯೆಟ್ನಾಂ ಪರ ನಿಂತಿತ್ತು!

ಆ ಯುದ್ಧದ ಬಳಿಕ ಕೆಲಕಾಲ ಚೀನಾ ಮತ್ತು ವಿಯೆಟ್ನಾಂ ನಡುವೆ ಎಲ್ಲವೂ ಸರಿಯಿತ್ತು. ಆದರೆ ನಂತರ ಚೀನಾ, ತನ್ನ ವಾಣಿಜ್ಯಿಕ ಆಸಕ್ತಿ ಪೂರೈಸಿಕೊಳ್ಳಲು ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ವಿಯೆಟ್ನಾಂ ಜೊತೆ ತಕರಾರು ತೆಗೆಯಿತು. ಚೀನಾವನ್ನು ಎದುರಿಸಲು ವಿಯೆಟ್ನಾಂಗೆ ಮೂರು ಆಯ್ಕೆಗಳಿದ್ದವು.

ಒಂದು, ತನಗಿಂತಲೂ ಆರ್ಥಿಕವಾಗಿ ಮತ್ತು ಸಾಮರಿಕವಾಗಿ ಶಕ್ತಿಶಾಲಿಯಾಗಿರುವ ಚೀನಾಕ್ಕೆ ಮಣಿದು, ಮಾತುಕತೆಯ ಮೂಲಕ ಕೊಡುಕೊಳ್ಳುವ ಒಪ್ಪಂದ ಮಾಡಿಕೊಳ್ಳುವುದು. ಆದರೆ ಈ ಪ್ರಕ್ರಿಯೆಯಲ್ಲಿ ವಿಯೆಟ್ನಾಂ, ಹೈಡ್ರೋಕಾರ್ಬನ್ ಮತ್ತು ಮೀನುಗಾರಿಕೆ ಉದ್ದಿಮೆಯ ಲಾಭಾಂಶವನ್ನು ಚೀನಾದೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಬೇಕಿತ್ತು. ವಿಯೆಟ್ನಾಂ ಮನಸ್ಸು ಮಾಡಲಿಲ್ಲ.

ಎರಡನೆಯದು, ಇತರ ದೇಶಗಳೊಂದಿಗೆ ಅದರಲ್ಲೂ ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಜೊತೆ ಸಂಬಂಧ ವೃದ್ಧಿಸಿಕೊಂಡು, ಚೀನಾಕ್ಕೆ ಸಡ್ಡು ಹೊಡೆಯುವುದು. ಆದರೆ ಈ ದೇಶಗಳು ಮತ್ತೊಂದು ರೀತಿಯ ಒತ್ತಡವನ್ನು ಹೇರುತ್ತವೆ ಎನ್ನುವುದು ವಿಯೆಟ್ನಾಂ ನಾಯಕರಿಗೆ ತಿಳಿದಿತ್ತು. ಹಾಗಾಗಿ, ಮೂರನೆಯ ಆಯ್ಕೆಯಾದ ತನ್ನ ಮಿಲಿಟರಿ ಶಕ್ತಿಯನ್ನು ವೃದ್ಧಿಸಿಕೊಳ್ಳುವ, ಆ ನಿಟ್ಟಿನಲ್ಲಿ ಚೀನಾ ವಿರೋಧಿ ದೇಶಗಳ ಸಹಾಯ ಪಡೆಯುವ ಕೆಲಸಕ್ಕೆ ವಿಯೆಟ್ನಾಂ ಮುಂದಾಯಿತು. ರಷ್ಯಾದಿಂದ ಜಲಾಂತರ್ಗಾಮಿ ನೌಕೆ ಖರೀದಿಸಿತು. ಭಾರತದಿಂದ ತಂತ್ರಜ್ಞಾನದ ನೆರವು ಪಡೆಯಲು ಮುಂದಾಯಿತು. ಅಮೆರಿಕದ ದೋಸ್ತಿ ಕುದುರಿತು.

ಇದೇ ಹೊತ್ತಿಗೆ ಅಮೆರಿಕ, ತನ್ನ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತಿರುವ ಚೀನಾದ ಪ್ರಾಬಲ್ಯವನ್ನು ಕುಗ್ಗಿಸಲು ಎದುರು ನೋಡುತ್ತಿತ್ತು. ಖುದ್ದು ಒಬಾಮ ವಿಯೆಟ್ನಾಂಗೆ ಭೇಟಿ ನೀಡಿದರು, ಅಮೆರಿಕ ವಿಧಿಸಿದ್ದ ಶಸ್ತ್ರಾಸ್ತ್ರ ನಿರ್ಬಂಧ ತೆರವಿನ ಘೋಷಣೆ ಮಾಡಿದರು. ಅದಾಗುತ್ತಲೇ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ವಿಯೆಟ್ನಾಂ ಅಪೇಕ್ಷಿಸಿತು.

ವಿಯೆಟ್ನಾಂನ ಸೇನೆಗೆ ಭಾರತ, 660 ಕೋಟಿ ರೂಪಾಯಿ  ಆರ್ಥಿಕ ನೆರವು ನೀಡಿತು. ಮೊನ್ನೆ ಹೆಚ್ಚುವರಿಯಾಗಿ 3300 ಕೋಟಿ ರೂಪಾಯಿ ನೀಡುವುದಾಗಿ ಪ್ರಧಾನಿ ಘೋಷಿಸಿದರು. ಅದಲ್ಲದೆ ನಾಲ್ಕು ಗಸ್ತು ನೌಕೆಗಳನ್ನು ಅಲ್ಲಿನ ನೌಕಾಪಡೆಗೆ ಭಾರತ ನೀಡುವ ಬಗ್ಗೆ, ಉಭಯ ಸೇನೆಗಳಿಗೆ ಅನುಕೂಲವಾಗುವಂತೆ ಮಾಹಿತಿ ತಂತ್ರಜ್ಞಾನ ವಿನಿಮಯ, ಸೈಬರ್ ಸೆಕ್ಯುರಿಟಿ, ಇಂಗ್ಲಿಷ್ ಭಾಷಾ ತರಬೇತಿ ಕುರಿತಂತೆಯೂ ಒಪ್ಪಂದ ಏರ್ಪಟ್ಟಿತು.

ಹೀಗೆ ಸತತವಾಗಿ ವಿಯೆಟ್ನಾಂ ಬೆಂಬಲಿಸಲು ಭಾರತಕ್ಕೆ ಕಾರಣಗಳಿವೆಯೇ? 2000ನೇ ಇಸವಿಯಲ್ಲಿ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ‘ವಿಯೆಟ್ನಾಂ ಭಾರತದ ನಂಬಿಕಸ್ಥ ಸ್ನೇಹಿತ’ ಎಂಬ ಮಾತನ್ನಾಡಿದ್ದರು. ವಿಯೆಟ್ನಾಂ ಕೂಡ ಭಾರತದ ವಿಷಯದಲ್ಲಿ ಅಂತೆಯೇ ನಡೆದುಕೊಂಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಕಾಯಂ ಸದಸ್ಯತ್ವ ಹೊಂದಬೇಕು ಎಂಬುದನ್ನು ವಿಯೆಟ್ನಾಂ ಬೆಂಬಲಿಸುತ್ತದೆ. ಮೇಲಾಗಿ, ದಕ್ಷಿಣ ಚೀನಾ ಕರಾವಳಿಯ ಹಿಡಿತ ವಿಯೆಟ್ನಾಂ ಬಳಿಯಲ್ಲೇ ಇರುವುದು ಭಾರತಕ್ಕೆ ಅತ್ಯಗತ್ಯ. ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಹಕ್ಕು ಸ್ಥಾಪಿಸಲು ಚೀನಾ ಪ್ರಯತ್ನಿಸುತ್ತಲೇ ಇದೆ. ಈ ಬಗ್ಗೆ ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್‌ ವಿಶ್ವಸಂಸ್ಥೆಯ ಗಮನ ಸೆಳೆದರೂ, ಅಂತರರಾಷ್ಟ್ರಿಯ ನ್ಯಾಯಾಧಿಕರಣ, ಚೀನಾ ವಿರುದ್ಧ ತೀರ್ಪು ನೀಡಿದರೂ ಚೀನಾ ತನ್ನ ಹಟ ಬಿಟ್ಟಿಲ್ಲ.

2011ರಲ್ಲಿ  ದಕ್ಷಿಣ ಚೀನಾ ಸಮುದ್ರ ತೀರದಲ್ಲಿ ತೈಲ ಶೋಧ ನಡೆಸುವ ಬಗ್ಗೆ ವಿಯೆಟ್ನಾಂನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಾಗ, ‘ಭಾರತ-ವಿಯೆಟ್ನಾಂ ಒಪ್ಪಂದ ಕಾನೂನು ಬಾಹಿರ, ಭಾರತ ತನ್ನ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು’ ಎಂದು ಚೀನಾ ತಕರಾರು ತೆಗೆದಿತ್ತು. ಆದರೆ ಚೀನಾ ಮಾತಿಗೆ ಭಾರತ ಮಹತ್ವ ನೀಡಲಿಲ್ಲ. ಬದಲಾಗಿ, ವಿಯೆಟ್ನಾಂ ಹೆಗಲ ಮೇಲೆ ಕೈ ಹಾಕಿತು. ಕಾರಣವಿಷ್ಟೆ, ಭಾರತದ ಶೇಕಡ 55ರಷ್ಟು ವಾಣಿಜ್ಯ ಸರಕುಗಳು ಹಾದು ಹೋಗುವುದು ದಕ್ಷಿಣ ಚೀನಾ ಸಮುದ್ರದ ಮೂಲಕವೆ. ಜೊತೆಗೆ ಭಾರತ ಇದಾಗಲೇ ವಿಯೆಟ್ನಾಂ ಇಂಧನ ಕ್ಷೇತ್ರದಲ್ಲಿ ಅಪಾರ ಹೂಡಿಕೆ ಮಾಡಿದೆ. ಹಾಗಾಗಿ ವಿಯೆಟ್ನಾಂ ಹಿತಾಸಕ್ತಿ ಭಾರತದ ಹಿತಾಸಕ್ತಿಯಾಗಿಯೂ ಬದಲಾಗಿದೆ.

ಈ ಲಾಭಗಳೊಟ್ಟಿಗೆ, ಏಷ್ಯಾದಲ್ಲಿ ರಾಜಕೀಯವಾಗಿ ಮೇಲುಗೈ ಸಾಧಿಸುವ ಲೆಕ್ಕಾಚಾರ ಭಾರತದ ನಡೆಯಲ್ಲಿದೆ. 1962ರ ಯುದ್ಧದ ತರುವಾಯ ದಕ್ಷಿಣ ಮತ್ತು ಪೂರ್ವ ಏಷ್ಯಾದ ಮಟ್ಟಿಗೆ ಚೀನಾ ಮತ್ತು ಭಾರತ ಪ್ರತಿಸ್ಪರ್ಧಿಗಳಾಗಿ ಬದಲಾಗಿವೆ. ಚೀನಾ, ದಕ್ಷಿಣ ಏಷ್ಯಾ ಮತ್ತು ಇಂಡಿಯನ್ ಓಷನ್ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ವೃದ್ಧಿಸಿಕೊಳ್ಳಲು ’ಸ್ಟ್ರಿಂಗ್ ಆಫ್ ಪರ್ಲ್ಸ್’ ಕಾರ್ಯನೀತಿಯ ಮೂಲಕ, ಭಾರತದ ನೆರೆ ರಾಷ್ಟ್ರಗಳೊಂದಿಗೆ ವಾಣಿಜ್ಯ ಮತ್ತು ಮಿಲಿಟರಿ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಾ ಬಂದಿದೆ. ನಮ್ಮ ನೆರೆಯ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಇತ್ತೀಚೆಗೆ ಶ್ರೀಲಂಕಾಕ್ಕೂ ಚೀನಾ ಗಾಳ ಹಾಕಿದೆ.

ಹಾಗಂತ ಭಾರತವೇನೂ ಕೈಕಟ್ಟಿ ಕುಳಿತಿಲ್ಲ, ಪಿ.ವಿ.ನರಸಿಂಹ ರಾಯರ ಅವಧಿಯಲ್ಲೇ ಭಾರತ ‘ಲುಕ್ ಈಸ್ಟ್‌’ ಕಾರ್ಯನೀತಿಯನ್ನು ಜಾರಿಗೆ ತಂದಿತ್ತು. ಅದರನ್ವಯ ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ ಮುಂತಾದ ದೇಶಗಳೊಂದಿಗೆ ಸ್ನೇಹ ಬೆಳೆಸಿತ್ತು. ವಾಜಪೇಯಿ ಸರ್ಕಾರ ಅದನ್ನು ಮುಂದುವರೆಸಿತು. ಇದೀಗ, ಪ್ರಸ್ತುತ ಸರ್ಕಾರ ‘Look East’ನ ನಂತರದ ಹೆಜ್ಜೆಯಾಗಿ ‘Act East’ ಕಾರ್ಯನೀತಿಯನ್ನು ಅನುಷ್ಠಾನಗೊಳಿಸುತ್ತಿದೆ.

ಆ ಕಾರ್ಯನೀತಿಯ ಪ್ರಮುಖ ದಾಳ ವಿಯೆಟ್ನಾಂ ಆಗಲಿದೆ. ‘ಹಮಾರಾ ನಾಮ್ ತುಮಾರಾ ನಾಮ್, ವಿಯೆಟ್ನಾಂ ವಿಯೆಟ್ನಾಂ’ ಘೋಷಣೆಗೆ ಹೊಸ ಅರ್ಥ ಬಂದಿದೆ. ಬಿಡಿ, ರಾಜತಾಂತ್ರಿಕತೆ ಎನ್ನುವುದೇ ಹಾಗೆ, ಇಟ್ಟ ತಪ್ಪು ಹೆಜ್ಜೆಯಿಂದ ಪಾಠ ಕಲಿಯುವ, ಹೊಸ ಹೆಜ್ಜೆಯಿಟ್ಟು ಎದುರಾಳಿಗೆ ಪಾಠ ಕಲಿಸುವ ನಿರಂತರ ಪ್ರಕ್ರಿಯೆ. ಒಟ್ಟಿನಲ್ಲಿ, ಭಾರತ ಎದೆಸೆಟೆಸಿ ನಿಂತಿರುವುದನ್ನು ಜಗತ್ತು ಅಚ್ಚರಿಯಿಂದ ನೋಡುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

ಸೀಮೋಲ್ಲಂಘನ
ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

9 Mar, 2018
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

ಸೀಮೋಲ್ಲಂಘನ
ಸಮರೋತ್ಸಾಹದ ನಡುವೆ ಸಂಧಾನ ಅರ್ಥಹೀನ

23 Feb, 2018
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

ಸೀಮೋಲ್ಲಂಘನ
ಪೆಡಸು ಮೇಲ್ದುಟಿ ಜನರ ಒಂಟಿತನದ ಸಂಕಟ

9 Feb, 2018
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

ಸೀಮೋಲ್ಲಂಘನ
ಎಂದೂ ಮುಗಿಯದ ಕದನ, ಏನೀ ಮೂರ್ಖತನ?

26 Jan, 2018
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

ಸೀಮೋಲ್ಲಂಘನ
ವೇಲ್ಸ್ ರಾಜಕುಮಾರನಿಗೆ ಸಿಕ್ಕಳಲ್ಲ ಸಿಂಡ್ರೆಲಾ!

29 Dec, 2017