ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದೀಯ ಕಾರ್ಯದರ್ಶಿಗಳ ನೇಮಕ ರದ್ದು

ಹೈಕೋರ್ಟ್‌ನಲ್ಲಿ ಕೇಜ್ರಿವಾಲ್‌ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ
Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು 21 ಸಂಸದೀಯ ಕಾರ್ಯದರ್ಶಿಗಳ ನೇಮಕವನ್ನು ಹೈಕೋರ್ಟ್‌ ರದ್ದು  ಮಾಡಿದೆ.

ಲೆಫ್ಟಿನೆಂಟ್‌ ಗವರ್ನರ್‌ ಅವರ ಒಪ್ಪಿಗೆ ಅಥವಾ ಅಭಿಪ್ರಾಯ ಪಡೆಯದೆಯೇ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸುವ ಆದೇಶವನ್ನು 2015ರ ಮಾರ್ಚ್‌ 13ರಂದು ಕೈಗೊಳ್ಳಲಾಗಿತ್ತು ಎಂಬುದನ್ನು ದೆಹಲಿ ಸರ್ಕಾರದ ಪರ ವಕೀಲ ಸುಧೀರ್‌ ನಂದರ್‌ಜೋಗ್‌ ಹೈಕೋರ್ಟ್‌ನಲ್ಲಿ ಒಪ್ಪಿಕೊಂಡರು.

ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್‌ ಅವರನ್ನೊಳಗೊಂಡ ಪೀಠ ಆದೇಶವನ್ನು ರದ್ದು ಮಾಡಿತು.
ಲೆಫ್ಟಿನೆಂಟ್‌ ಗವರ್ನರ್‌ ಅವರ ಒಪ್ಪಿಗೆ ಇಲ್ಲದೆ ದೆಹಲಿ ಸರ್ಕಾರ ಕೈಗೊಂಡ ಹಲವು ನಿರ್ಧಾರಗಳನ್ನು ಆಗಸ್ಟ್‌ 4ರಂದು ದೆಹಲಿ ಹೈಕೋರ್ಟ್‌ ವಜಾ ಮಾಡಿರುವುದನ್ನು ನಂದರ್‌ಜೋಗ್‌ ಉಲ್ಲೇಖಿಸಿದರು.

ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಲೆಫ್ಟಿನೆಂಟ್‌ ಜನರಲ್‌ ಅವರೇ ಇಲ್ಲಿನ ಆಡಳಿತದ ಮುಖ್ಯಸ್ಥರು ಎಂದು ಆಗಸ್ಟ್‌ 4ರಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿತ್ತು.

21 ಸಂಸದೀಯ ಕಾರ್ಯದರ್ಶಿಗಳ ನೇಮಕದ ಬಗ್ಗೆ ಚುನಾವಣಾ ಆಯೋಗವೂ ಪರಿಶೀಲನೆ ನಡೆಸುತ್ತಿದೆ ಎಂಬುದನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸಂಜಯ್‌ ಜೈನ್ ಪೀಠದ ಗಮನಕ್ಕೆ ತಂದರು.

ಸಂಸದೀಯ ಕಾರ್ಯದರ್ಶಿಗಳ ನೇಮಕವನ್ನು ಜುಲೈ 13ರಂದು ಕೇಂದ್ರ ಸರ್ಕಾರ ವಿರೋಧಿಸಿತ್ತು. ಇಂತಹ ನೇಮಕಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಅಲ್ಲದೆ, ದೆಹಲಿ ವಿಧಾನಸಭೆ ಸದಸ್ಯರ (ಅನರ್ಹತೆ ಮೂಲಕ ವಜಾ) ಕಾಯ್ದೆ 1997ರಲ್ಲಿಯೂ ಇದಕ್ಕೆ ಅವಕಾಶ ಇಲ್ಲ. ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯಾಗಿ ಒಬ್ಬರನ್ನು ಮಾತ್ರ ನೇಮಿಸಲು ಅವಕಾಶ ಇದೆ ಎಂದು ಕೇಂದ್ರ ಹೇಳಿತ್ತು.

ಕೇಜ್ರಿವಾಲ್‌ಗೆ ಪ್ರತಿಭಟನಾಕಾರರ ಮುತ್ತಿಗೆನವದೆಹಲಿ/ಲೂಧಿಯಾನ: ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಪಂಜಾಬ್‌ಗೆ ನಾಲ್ಕು ದಿನಗಳ ಪ್ರವಾಸಕ್ಕೆ ಹೊರಟ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾಕಾರರು ಗುರುವಾರ ಅಡ್ಡಿಪಡಿಸಿದ ಘಟನೆ ನಡೆಯಿತು.

ಇತ್ತೀಚೆಗೆ ಕೆಲವು ಎಎಪಿ ಶಾಸಕರು ತೋರಿದ ಕೆಟ್ಟ ನಡವಳಿಕೆ ಖಂಡಿಸಿ ಬಿಜೆಪಿ, ಅಕಾಲಿದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ದೆಹಲಿ ಮಹಿಳಾ ಘಟಕದ  ಅಧ್ಯಕ್ಷೆ ಕಮಲ್‌ಜೀತ್ ಸೆರಾವತ್ ಹಾಗೂ ಪಕ್ಷದ ವಕ್ತಾರ ಪ್ರವೀಣ್ ಕಪೂರ್ ನೇತೃತ್ವದ ತಂಡವು ಬೆಳಗ್ಗೆ 7 ಗಂಟೆಗೆ ಪ್ಲಾಟ್‌ ಫಾರಂ 1ಕ್ಕೆ ಬಂದ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಿ, ಬಳೆಗಳನ್ನು ಪ್ರದರ್ಶಿಸಿತು.

ಪೊಲೀಸರ ಜತೆ ಪ್ರತಿಭಟನಾಕಾರರು ಸಂಘರ್ಷಕ್ಕೆ ಇಳಿದರು. ಇದರಿಂದ ಕೇಜ್ರಿವಾಲ್ ಕೆಲಕಾಲ ಗೊಂದಲಕ್ಕೆ ಈಡಾದರು. ಕಳಂಕಿತ ಎಎಪಿ ಶಾಸಕರ ಕುರಿತು ಕೇಜ್ರಿವಾಲ್ ಮಾತಾಡಬೇಕು ಎಂಬುದು ಪ್ರತಿಭಟನಾಕಾರರ ಬೇಡಿಕೆಯಾಗಿತ್ತು. ಲೈಂಗಿಕ ಹಗರಣ ಆರೋಪದಡಿ ವಜಾಗೊಂಡಿರುವ ಮಾಜಿ ಸಚಿವ ಸಂದೀಪ್ ಕುಮಾರ್ ಅವರನ್ನು ಬೆಂಬಲಿಸಿರುವ ಅಶುತೋಷ್ ಅವರ ಉಚ್ಚಾಟನೆಗೂ ಆಗ್ರಹಿಸಲಾಯಿತು.

ಹಲ್ಲೆ ಆರೋಪ: ಪ್ರತಿಭಟನೆ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರು ಮುಖ್ಯಮಂತ್ರಿ ಮೇಲೆ ಹಲ್ಲೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಪೊಲೀಸರ ಕುಮ್ಮಕ್ಕು ಕಾರಣ ಎಂದು ಎಎಪಿ ಆರೋಪಿಸಿದೆ. ಪೂರ್ವ ನಿಯೋಜಿತವಾದ ಈ ಘಟನೆಯಲ್ಲಿ ಕಾನೂನು ಜಾರಿ ಘಟಕವು ಮೂಕ ಪ್ರೇಕ್ಷಕವಾಗಿತ್ತು ಎಂದಿದೆ.

ಹಲ್ಲೆ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಇದೊಂದು ರಾಜಕೀಯ ಪ್ರತಿಭಟನೆ ಎಂದು ಸ್ಪಷ್ಟಪಡಿಸಿದೆ. ‘ಪ್ರತಿಭಟನೆಗಳನ್ನು ದಾಳಿ ಎಂಬುದಾಗಿ ಅರ್ಥೈಸುವುದು ನಾಚಿಕೆಗೇಡು’ ಎಂದು ಕಪೂರ್ ಹೇಳಿದರು.

ಲೂಧಿಯಾನದಲ್ಲೂ  ಪ್ರತಿಭಟನೆ  ಬಿಸಿ: ದೆಹಲಿ–ಲೂಧಿಯಾನ–ಅಮೃತಸರ ಮಾರ್ಗದ ಶತಾಬ್ದಿ ರೈಲಿನಲ್ಲಿ ಲೂಧಿಯಾನಕ್ಕೆ ಬಂದಿಳಿದ ಕೇಜ್ರಿವಾಲ್ ಅವರಿಗೆ ಇಲ್ಲಿಯೂ ಪ್ರತಿಭಟನೆ ಎದುರಾಯಿತು. ಶಿರೋಮಣಿ ಅಕಾಲಿದಳದ ಯುವ ಘಟಕ ಹಾಗೂ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಎಎಪಿ ಸರ್ಕಾರವು ಎಲ್ಲ ರಂಗದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅಕಾಲಿದಳ ಕಾರ್ಯಕರ್ತರು ಕೇಜ್ರಿವಾಲ್ ಅವರಿಗೆ ಬಳೆಗಳನ್ನು ನೀಡಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT