ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಜಲ ಮಾರ್ಗ: ಭಾರತ ಬೆಂಬಲ

ಮುಕ್ತ ಜಲ ಮಾರ್ಗ: ಭಾರತ ಬೆಂಬಲ
Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ವಿಯೆಂಟಿಯಾನ್‌: ದಕ್ಷಿಣ ಚೀನಾ ಸಮುದ್ರವನ್ನು ಹಾದು ಹೋಗುವ ಜಲ ಮಾರ್ಗಗಳು ಜಾಗತಿಕ ವ್ಯಾಪಾರದ ರಕ್ತ ನಾಳಗಳಿದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಈ ಪ್ರದೇಶದಲ್ಲಿ ಮುಕ್ತ ಸಂಚಾರ ಅವಕಾಶವನ್ನು ಭಾರತ ಬೆಂಬಲಿಸುತ್ತದೆ ಎಂದಿರುವ ಪ್ರಧಾನಿ, ಅಂತರರಾಷ್ಟ್ರೀಯ ಕಾನೂನಿಗೆ ಎಲ್ಲರೂ ಪರಮೋಚ್ಚ ಗೌರವ ನೀಡಬೇಕು ಎಂದು ಹೇಳಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾಕ್ಕೆ ಚಾರಿತ್ರಿಕ ಅಧಿಕಾರ ಇಲ್ಲ ಎಂದು ವಿಶ್ವಸಂಸ್ಥೆಯ ಮಧ್ಯಸ್ಥಿಕೆ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿದೆ. ಆದರೆ ಈ ತೀರ್ಪನ್ನು ಚೀನಾ ತಿರಸ್ಕರಿಸಿದೆ.

11ನೇ ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ ಮೋದಿ ಅವರು ದಕ್ಷಿಣ ಚೀನಾ ಸಮುದ್ರ ವಿವಾದದ ಬಗ್ಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು. ಸಮಸ್ಯೆಯನ್ನು ಪರಿಹರಿಸಲು ಬಲಪ್ರಯೋಗ ನಡೆಸಿದರೆ ಅದು ಶಾಂತಿ ಮತ್ತು ಸ್ಥಿರತೆಯನ್ನು ಸಂಕೀರ್ಣಗೊಳಿಸುತ್ತದೆ ಎಂದು ಅವರು ಎಚ್ಚರಿಸಿದರು.

ಅದಕ್ಕೂ ಮೊದಲು ಮೋದಿ ಅವರು ಲಾವೋಸ್‌ ಪ್ರಧಾನಿ ತೊಂಗುಲನ್‌ ಸಿಸಿಲಿತ್‌ ಜತೆ ನಡೆಸಿದ ಮಾತುಕತೆಯಲ್ಲಿಯೂ ದಕ್ಷಿಣ ಚೀನಾ ಸಮುದ್ರ ವಿವಾದ ಪ್ರಸ್ತಾಪವಾಗಿತ್ತು. ಈ ಸಂದರ್ಭದಲ್ಲಿಯೂ ಭಾರತದ ನಿಲುವನ್ನು ಮೋದಿ ಅವರು ತಿಳಿಸಿದ್ದರು.

ಸಮುದ್ರ ಕಾನೂನಿಗೆ ಸಂಬಂಧಿಸಿ ವಿಶ್ವಸಂಸ್ಥೆಯ 1982ರ ಒಪ್ಪಂದದಲ್ಲಿ ವಿವರಿಸಿರುವ ಅಂತರರಾಷ್ಟ್ರೀಯ ಕಾನೂನು ಪ್ರಕಾರ ಸಮುದ್ರ ಮಾರ್ಗದಲ್ಲಿ ಮುಕ್ತ ಸಂಚಾರವನ್ನು ಭಾರತ ಬೆಂಬಲಿಸುತ್ತದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ನೆರೆಯ ಬಾಂಗ್ಲಾ ದೇಶದ ಜತೆ ಭಾರತ ನಿರ್ವಹಿಸಿಕೊಂಡು ಬಂದಿರುವ ಜಲಗಡಿ ಒಂದು ಅತ್ಯುತ್ತಮ ನಿದರ್ಶನ ಎಂದೂ ಮೋದಿ ತಿಳಿಸಿದ್ದಾರೆ.

ದಕ್ಷಿಣ ಚೀನಾ ಸಮುದ್ರದ ಅಧಿಪತ್ಯಕ್ಕೆ ಸಂಬಂಧಿಸಿ ಫಿಲಿಪ್ಪೀನ್ಸ್‌, ವಿಯೆಟ್ನಾಂ, ತೈವಾನ್‌, ಮಲೇಷ್ಯಾ ಮತ್ತು ಬ್ರೂನೆ ಜತೆ ಚೀನಾ ಸಂಘರ್ಷಕ್ಕಿಳಿದಿದೆ. ಭಾರಿ ಪ್ರಮಾಣದಲ್ಲಿ ಹಡಗು ಸಂಚಾರ ಇರುವ ಈ ಪ್ರದೇಶದ ಮೂಲಕವೇ ಭಾರತದ ಶೇ 50ರಷ್ಟು ಸಮುದ್ರ ವ್ಯಾಪಾರ ನಡೆಯುತ್ತಿದೆ.

ವಿಯೆಟ್ನಾಂ ಆಹ್ವಾನದ ಪ್ರಕಾರ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಭಾರತದ ಆಯಿಲ್‌ ಎಂಡ್‌ ನ್ಯಾಚುರಲ್‌ ಗ್ಯಾಸ್‌ ಕಮಿಷನ್‌ (ಒಎನ್‌ಜಿಸಿ) ತೈಲ ಶೋಧಕ್ಕೆ ಮುಂದಾಗಿದ್ದನ್ನು ಚೀನಾ ಆಕ್ಷೇಪಿಸಿತ್ತು. ಈ ಪ್ರದೇಶದಲ್ಲಿ ಸಮುದ್ರದಾಳದಲ್ಲಿ ಭಾರಿ ಪ್ರಮಾಣದ ತೈಲ ಮತ್ತು ಅನಿಲ ನಿಕ್ಷೇಪ ಇದೆ.

ಅಂತರರಾಷ್ಟ್ರೀಯ ಜಲ ಪ್ರದೇಶಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಇರಬೇಕು ಎಂದು ಭಾರತ ಮತ್ತು ಅಮೆರಿಕ ಹಿಂದಿನಿಂದಲೂ ಹೇಳುತ್ತಾ ಬಂದಿವೆ.

ಮೋದಿ–ಒಬಾಮ ಎಂಟನೇ ಭೇಟಿ: ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನೂ ಭೇಟಿಯಾಗಿದ್ದಾರೆ. ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ) ಸದಸ್ಯತ್ವ ಪಡೆಯಲು ಭಾರತದ ಪ್ರಯತ್ನಕ್ಕೆ ಇನ್ನಷ್ಟು ಗಟ್ಟಿ ಬೆಂಬಲ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಒಬಾಮ ಭರವಸೆ ನೀಡಿದ್ದಾರೆ.

ನಾಗರಿಕ ಪರಮಾಣ ಸಹಕಾರ ಹೆಚ್ಚಿಸುವ ಬಗ್ಗೆಯೂ ಮಾತುಕತೆ ನಡೆದಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಮೋದಿ ಮತ್ತು ಒಬಾಮ ನಡುವಣ ಎಂಟನೇ ಭೇಟಿಯಾಗಿದೆ.

‘ನೆರೆ ದೇಶದಿಂದ ಉಗ್ರವಾದ  ರಫ್ತು’
ಭಾರತ ಮತ್ತು ಏಷ್ಯಾದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನವನ್ನು ಪರೋಕ್ಷವಾಗಿ ಹೊಣೆಯಾಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿಯೂ ಮುಂದುವರಿಸಿದ್ದಾರೆ.

‘ನಮ್ಮ ನೆರೆಯ ಒಂದು ದೇಶ ಭಯೋತ್ಪಾದನೆಯನ್ನು ಉತ್ಪಾದಿಸಿ ರಫ್ತು ಮಾಡುತ್ತಿದೆ. ಉಗ್ರವಾದಕ್ಕೆ ‘ಕುಮ್ಮಕ್ಕು’ ನೀಡುವ ಈ ದೇಶವನ್ನು ಅಂತರರಾಷ್ಟ್ರೀಯ ಸಮುದಾಯ ದೂರ ಇರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಪಾಕಿಸ್ತಾನದ ಹೆಸರನ್ನು ಅವರು ಎಲ್ಲಿಯೂ ಉಲ್ಲೇಖಿಸಿಲ್ಲ.

‘ಭಯೋತ್ಪಾದನೆಯ ಜಾಗತಿಕ ರಫ್ತುದಾರನನ್ನು ತಡೆಯುವ ಕಾಲ ಸನ್ನಿಹಿತವಾಗಿದೆ’ ಎಂದು ಮೋದಿ ಹೇಳಿದರು.

14ನೇ ಆಸಿಯಾನ್‌ ಶೃಂಗವನ್ನು ಉದ್ದೇಶಿಸಿ ಮಾತನಾಡಿದ್ದ ಅವರು ‘ಭಯೋತ್ಪಾದನೆಯ ರಫ್ತು’ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಇಡೀ ಪ್ರದೇಶಕ್ಕೆ ಇದೊಂದು ಸಮಾನ ಬೆದರಿಕೆಯಾಗಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಉಲ್ಲೇಖಿಸಿ ಮೋದಿ ಹೇಳಿದ್ದರು.

ದ್ವೇಷ ಸಿದ್ಧಾಂತದ ಮೂಲಕ ಮೂಲಭೂತವಾದದ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ಹಿಂಸಾಚಾರ ಇತರ ಭದ್ರತಾ ಬೆದರಿಕೆಗಳು ಎಂದು ಮೋದಿ ವಿವರಿಸಿದ್ದಾರೆ.

ಒಬಾಮ–ಡಟೆರ್ಟೆ ಭೇಟಿ
(ಎಎಫ್‌ಪಿ):
ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಫಿಲಿಪ್ಪೀನ್ಸ್ ಅಧ್ಯಕ್ಷ ರೋಡ್ರಿಗೊ ಡಟೆರ್ಟೆ ಗುರುವಾರ ಲಾವೋಸ್‌ನಲ್ಲಿ ಭೇಟಿಯಾಗಿ ಮಾತು ಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಒಬಾಮ ಅವರನ್ನು ‘ಹಾದರಕ್ಕೆ ಹುಟ್ಟಿದವ’ ಎಂದು ಡಟೆರ್ಟೆ ನಿಂದಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಉಭಯ ನಾಯಕರ ನಡುವೆ ಮಂಗಳವಾರ ನಡೆಯಬೇಕಿದ್ದ ಮಾತುಕತೆಯೂ ರದ್ದಾಗಿತ್ತು.

ಲಾವೊಸ್‌ನಲ್ಲಿ ನಡೆದ ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಶೃಂಗಸಭೆ ಸಂದರ್ಭ ಇಬ್ಬರು ನಾಯಕರ ನಡುವೆ ಮಾತುಕತೆ ನಡೆದಿದೆ. ಈ ಕುರಿತು ಫಿಲಿಪ್ಪೀನ್ಸ್ ವಿದೇಶಾಂಗ ಸಚಿವ ಪರ್ಫೆಕ್ಟೊ ಯಾಸೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT