ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಕ್ಕೂ ಉಂಟು ದಿಕ್ಕುಗಳು

Last Updated 9 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಪರಿಚಿತರು ಯಾರು? ಸ್ನೇಹಿತರು ಯಾರು? ಈ ಎರಡು ಪದಗಳ ಬಳಕೆಯ ಬಗ್ಗೆ ನಾವು ಸೂಕ್ಷ್ಮವಾಗಿ ಯೋಚಿಸಬೇಕಾಗಿದೆ. ಸಾಮಾನ್ಯವಾಗಿ ಇಂದಿನ ಇಂಟರ್‌ನೆಟ್ ಯುಗದಲ್ಲಿ ಫೇಸ್‌ಬುಕ್‌ನ ಫ್ರೆಂಡ್ ಲಿಸ್ಟಿನಲ್ಲಿ ಇರುವವರೆಲ್ಲರೂ ನಮ್ಮ ಫ್ರೆಂಡ್ಸ್ ಎಂದು ಹೇಳಿಕೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ. ಅಷ್ಟೇ ಏಕೆ, ನೆನ್ನೆ ಮೊನ್ನೆ ಪರಿಚಿತರಾದವರನ್ನೂ ನಾವು ‘ಫ್ರೆಂಡ್ಸ್ ’ ಎಂದೇ ಸಂಬೋಧಿಸುತ್ತೇವೆ.

ಹಾಗಾಗಿ, ಪರಿಚಿತರು ಯಾರು ಮತ್ತು ಸ್ನೇಹಿತರು ಯಾರು ಎಂಬುದರಲ್ಲಿ ಈಗ ವ್ಯತ್ಯಾಸವೇ ಉಳಿದಿಲ್ಲದಂತಾಗಿದೆ. ಹೀಗೆ ಬೆಳೆಯುವ ಅವಸರದ ಸ್ನೇಹ, ಕೆಲವೊಮ್ಮೆ ಪ್ರೇಮವಾಗಿ ಪರಿವರ್ತನೆಗೊಂಡಿದೆಯೆಂಬ ಭ್ರಮೆಯಲ್ಲಿರುತ್ತೇವೆ. ವಿವೇಕಯುಕ್ತ ನಡೆಗಿಂತ ಭಾವನೆಗಳ ಲೋಕದಲ್ಲೇ ಮುಳುಗಿ ತೇಲಲು ಮಾನವನಿಗೆ ಎಲ್ಲೋ ಒಂದು ಕಡೆ ಇಷ್ಟವೆಂದೇ ತೋರುತ್ತದೆ.

ಬದುಕಿನ ಹಾದಿಯಲ್ಲಿ ನಾವು ಎಷ್ಟೋ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಕೆಲವರು ಭೇಟಿ ಆದ ಕ್ಷಣದಿಂದಲೇ ನಮಗೆ ಇಷ್ಟವಾಗುತ್ತಾರೆ. ನಮ್ಮ ಯೋಚನಾಲಹರಿಗೆ ಹೊಂದುತ್ತಾರೆ ಎಂದೋ, ಹದಿಹರೆಯದ ಹುಡುಗರಲ್ಲಿ ಹುಟ್ಟುವ ಆಕರ್ಷಣೆಯಿಂದಲೋ ಕೆಲವರು ಪರಿಚಯವಾದ ಕ್ಷಣದಿಂದಲೇ ಹತ್ತಿರವಾದಂತೆ ಅನಿಸುತ್ತದೆ. ಹಾಗಾದರೆ, ಅವರನ್ನು ಸ್ನೇಹಿತರು ಅಂದುಕೊಳ್ಳುವುದರಲ್ಲಿ ತಪ್ಪೇನು ಎಂಬ ಪ್ರಶ್ನೆ ಮೂಡುವುದು ಸಹಜ.

ಸ್ನೇಹಿತರು ಎಂದರೆ ಯಾರು ಎಂಬ ಪ್ರಶ್ನೆಯನ್ನು ಒಮ್ಮೆ ಪರಾಮರ್ಶಿಸೋಣ. ಪರಿಚಿತರೆಲ್ಲರೂ ಸ್ನೇಹಿತರಾಗಲು ಸಾಧ್ಯವಿಲ್ಲವಾದರೂ, ಸ್ನೇಹಿತರೆಲ್ಲರೂ ಪರಿಚಿತರೇ. ಸ್ನೇಹವೆಂಬುದು ಒಂದು ತಿಳಿಯಾದ ನಿಷ್ಕಲ್ಮಷ ಮಧುರ ಸಂಬಂಧವೆಂಬುದು ನಮಗೆಲ್ಲರಿಗೂ ಅನುಭವಕ್ಕೆ ಬಂದಿರುವ ಭಾವನೆ. ಸ್ನೇಹವು ಜಾತಿ ಧರ್ಮ ಭಾಷೆಗಳಾಚೆಗಿನ ಗಟ್ಟಿ ಸಂಬಂಧ. ಇದರಲ್ಲಿ ಸ್ವಾರ್ಥಕ್ಕೆ ಜಾಗವಿಲ್ಲ. ಇದೆಲ್ಲ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಈ ರೀತಿಯ ಭಾವನೆಗಳ ಬೆಸುಗೆಗೆ ಎಷ್ಟೋ ವರ್ಷಗಳ ಒಡನಾಟವಿರುತ್ತದೆ.

ಒಬ್ಬರನ್ನೊಬ್ಬರು ತಿಳಿಯುವ, ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಆಗುವ ಸಂದರ್ಭವಿರುತ್ತದೆ. ಹೀಗೆ, ಸ್ನೇಹವನ್ನು ಒರೆಹಚ್ಚಿ ಗಟ್ಟಿಗೊಳ್ಳುವ ಪ್ರಕ್ರಿಯೆಗೆ ನಾವು ಒಡ್ಡಿಕೊಂಡಿರುತ್ತೇವೆ. ನಿಜವಾದ ಸ್ನೇಹಿತರು ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಅವರವರ ಅಭಿಪ್ರಾಯ, ನಂಬಿಕೆಗಳಿಗೆ ಅಡ್ಡಿಬರದೆ, ಕೇವಲ ಪ್ರೀತಿ ವಿಶ್ವಾಸಗಳಿಂದ ನಡೆದುಕೊಳ್ಳುವುದನ್ನು ಸ್ನೇಹಿತರಲ್ಲಿ ಕಾಣುತ್ತೇವೆ. ಸ್ನೇಹಿತರ ಇನ್ನೊಂದು ವೈಶಿಷ್ಯ್ಟವೆಂದರೆ, ನಮ್ಮ ಜೀವನದ ಕಡುರಹಸ್ಯಗಳನ್ನು ಕಾಪಾಡುವುದು. ಸ್ನೇಹಿತರು ಒಬ್ಬರನ್ನೊಬ್ಬರು ಸಂಪೂರ್ಣ ನಂಬುತ್ತಾರೆ. ಈ ನಂಬಿಕೆ ಕೂಡ ಬಹಳ ವರ್ಷಗಳ ಒಡನಾಟ ಮತ್ತು ಕಾಲದ ಪರೀಕ್ಷೆಯಲ್ಲಿ ತನ್ನ ನಿಸ್ವಾರ್ಥತತೆಯನ್ನು ಉಳಿಸಿಕೊಂಡಿರುತ್ತದೆ.

ಹೀಗೆ, ವಿವರಣೆಗೆ ಒಳಪಡುವ ಸ್ನೇಹವು ಗಟ್ಟಿಯಾಗಿರಲೇಬೇಕು. ಇವೆಲ್ಲ ಗುಣಗಳನ್ನು ಕೇವಲ ಪರಿಚಿತರಲ್ಲಿ ಹೇಗೆ ಕಾಣಲು ಸಾಧ್ಯ? ಕೇವಲ, ಕ್ಷಣದ ಆಕರ್ಷಣೆ, ಹೊಂದಾಣಿಕೆ, ಕೆಲವು ದಿನಗಳ ಒಡನಾಟ ಸ್ನೇಹವನ್ನು ನಿರ್ಧರಿಸಿಬಿಡುತ್ತದೆಯೇ? ಕೇವಲ ಸಲುಗೆಯೇ ಮೇಲುಗೈ ತೋರುವ ಪರಿಚಯಕ್ಕೆ ಸ್ನೇಹವೆಂಬ ಹಣೆಪಟ್ಟಿಯಿಡುವುದು ಸರಿಯೇ? ಆ ವ್ಯಕ್ತಿ ನನಗೆ ಪರಿಚಯವೆಂದು, ಸಲುಗೆಯಿಂದ ವರ್ತಿಸುವುದು, ಅವರನ್ನು ಏಕವಚನದಲ್ಲಿ ಸಂಬೋಧಿಸುವುದು, ನಮ್ಮ ಸಂಬಂಧಕ್ಕೆ ಒಳಪಟ್ಟಿದ್ದಾರೆಂದು ನಾವೇ ನಿರ್ಧರಿಸಿಬಿಡುವುದು.

ಹೀಗೆ ಭಾವನೆಗಳಲ್ಲೇ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅಗೌರವ ಸೂಚಿಸಿದಂತೆ. ಎಲ್ಲರೂ ಸ್ನೇಹಿತರೇ, ಕೆಲವರು ಮಾತ್ರ ಆತ್ಮೀಯ ಸ್ನೇಹಿತರು, ಪ್ರಾಣಸ್ನೇಹಿತರು ಎಂದು ನಾವು ಅಂದುಕೊಳ್ಳಬಹುದು. ಹೀಗೆ, ನಮ್ಮ ಪರಿಚಿತರೆಲ್ಲರನ್ನೂ ಸ್ನೇಹಿತರೆಂದೇ ಕರೆದರೆ, ನಿಜಕ್ಕೂ ಸ್ನೇಹಕ್ಕೆ ಯೋಗ್ಯವೆನಿಸಿಕೊಂಡಿರುವ ನಮ್ಮ ಪ್ರಾಣ/ ಆತ್ಮೀಯ ಸ್ನೇಹಿತರಿಗೆ ಮಾಡುವ ಅವಮಾನವಾಗುತ್ತದೆ.

ಹಾಗೆಯೇ, ನಮಗೆ ಕೆಲವು ಸಂದರ್ಭಗಳಲ್ಲಿ ಪರಿಚಯವಾಗುವ ಗಣ್ಯವ್ಯಕ್ತಿಗಳನ್ನು ಕೇವಲ ಗೌರವ ವಿಶ್ವಾಸದಿಂದ ನಡೆಸಿಕೊಳ್ಳುವುದು ಸೂಕ್ತ. ಎಲ್ಲರನ್ನೂ ಗೌರವದಿಂದ ಕಾಣುವುದೇ ಸಂಸ್ಕೃತಿ ಮತ್ತು ಸಂಸ್ಕಾರ.

ಫೇಸ್‌ಬುಕ್‌ನಲ್ಲಿ ಫ್ರೆಂಡ್ ಎಂದೋ, ಅವರೊಡನೆ ಲೈಕ್ಸ್ ಮತ್ತು ಕಾಮೆಂಟ್ಸ್ ಹಂಚಿಕೊಂಡಿದ್ದೇವೆ ಎಂದೋ ಅಥವಾ ಕೆಲವು ದಿನಗಳ ಮೆಸ್ಸೇಜ್‌ಗಳ ಒಡನಾಟವಿದೆ ಎಂದೋ ಅವರನ್ನು ಸ್ನೇಹಿತರು ಎಂದು ಭಾವಿಸುವುದು ತಪ್ಪಾಗುತ್ತದೆ.

ಎಲ್ಲ ಸಂಬಂಧಗಳನ್ನೂ ಸಲೀಸಾಗಿ ತೆಗೆದುಕೊಳ್ಳುವ, ಅತಿ ಶೀಘ್ರವಾಗಿ ಸಲುಗೆ ವ್ಯಕ್ತ ಪಡಿಸುವ ಪರಿ ಆಶ್ಚರ್ಯ ಮೂಡಿಸುತ್ತದೆ. ಈ ರೀತಿಯ ಬೆಳವಣಿಗೆಗೆ ತಂತ್ರಜ್ಞಾನ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ತಂತ್ರಜ್ಞಾನ ಎಷ್ಟೇ ವೇಗವಾಗಿ ನಮ್ಮ ಜೀವನದ ಹಾದಿಯನ್ನು ನಡೆಸುತ್ತಿದ್ದರೂ, ನಾವು ಮನುಷ್ಯರು ಎಂಬುದನ್ನು ಮರೆಯುವಂತಿಲ್ಲ. ನಮ್ಮ ನಡೆ ನುಡಿಗಳು ತಂತ್ರಜ್ಞಾನದ ಮೂಲಕ ವ್ಯಕ್ತವಾಗುತ್ತಿದೆಯಾದರೂ ಅದು ಕೇವಲ ಸಾಧನವಷ್ಟೆ; ಆದರ ಸಾಧಕರು ನಾವೇ.

ಇನ್ನು, ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಸಹೋದ್ಯೋಗಿಗಳನ್ನೂ ಸ್ನೇಹಿತರೆಂದೇ ಸಂಬೋಧಿಸುತ್ತೇವೆ; ಅವರಿಂದ ಸ್ನೇಹವನ್ನು ಬಯಸುತ್ತಿರುತ್ತೇವೆ. ಸಹೋದ್ಯೋಗಿಗಳ ನಡುವಣ ಸಂಬಂಧ ವಿಚಿತ್ರವೇ ಸರಿ. ನಮ್ಮ ಸಹೋದ್ಯೋಗಿಗಳ ನಡುವಿನ ಒಡನಾಟ ಮತ್ತು ನಡವಳಿಕೆ ನಿಃಸ್ವಾರ್ಥದಿಂದ ಕೂಡಿರಲು ಸಾಧ್ಯವಿಲ್ಲ. ಇದು ಒಪ್ಪಿಕೊಳ್ಳಲು ಕಷ್ಟವಾದರೂ ಸತ್ಯ.

ಉದ್ಯೋಗಸ್ಥಳದ ಸಂಬಂಧಗಳು ನಿಂತಿರುವುದೇ ನಾವು ಕೆಲಸ ಮಾಡುವ ಸಂಸ್ಥೆಯ ಆಶಯ, ಉದ್ದೇಶ ಮತ್ತು ಗುರಿಯ ಮೇಲೆ. ನಾವು ದಿನವೂ ಕೆಲಸಕ್ಕೆ ಹಾಜರಾಗಿ, ನಮಗೆ ವಹಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸುವುದು, ಸಂಸ್ಥೆಯ ಆಶಯ ಮತ್ತು ಗುರಿಗಳನ್ನು ಪೂರೈಸುವುದಕ್ಕಾಗಿಯೇ. ಇದಕ್ಕೆ ಪ್ರತಿಯಾಗಿ ನಮ್ಮ ಪ್ರತಿಭೆ ಮತ್ತು ಸ್ಥಾನಕ್ಕೆ ತಕ್ಕಂತೆ ಸಂಬಳ ಸಿಗುತ್ತದೆ.

ಇಲ್ಲಿ ಸ್ವಾರ್ಥವಿಲ್ಲದೇ ಇರುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ಸಹೋದ್ಯೋಗಿಗಳಲ್ಲಿ ಹುಟ್ಟುವ ಸ್ನೇಹವೂ ಕೂಡ ನಮ್ಮ ಕೆಲಸದ ಆಶಯ ಮತ್ತು ಉದ್ದೇಶಗಳ ಸಲುವಾಗಿಯೇ ಇರುತ್ತದೆ ಎಂಬುದನ್ನು ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಸ್ನೇಹಕ್ಕೆ ಉದ್ಯೋಗದ ತಳಹದಿ ಮುರಿದುಬಿದ್ದರೆ ನಿಲ್ಲುವ ಸಾಮರ್ಥ್ಯ ಕಡಿಮೆ.

ನಮ್ಮ ಸಹೋದ್ಯೋಗಿಗಳನ್ನು ಸ್ನೇಹಿತರೆಂದು ಕರೆದರೂ, ನಾವು ಯಾವಾಗಲೂ ಅವರ ಬಗ್ಗೆ ಎಚ್ಚರದಿಂದಲೇ ಇರುತ್ತೇವೆ. ನಮ್ಮ ಕೆಲಸದ ಜವಾಬ್ದಾರಿಗಳನ್ನು ಸುಲಭವಾಗಿ ಪೂರೈಸಲು ಅನಿವಾರ್ಯವಾಗಿ ಬೇಕಾಗುವ ಪರಸ್ಪರ ಸಹಕಾರ ಈ ಸ್ನೇಹದಿಂದ ದೊರೆಯಬಹುದು. ಸ್ನೇಹಿತರೇ ಆದರೂ, ಅವರವರ ಉದ್ಯೋಗಾವಕಾಶಗಳ ಸಮಯದಲ್ಲಿ ಒಬ್ಬರನ್ನೊಬ್ಬರನ್ನು ತುಳಿಯುವ ಪ್ರಯತ್ನಗಳನ್ನು ಯಾವುದೇ ಮುಲಾಜಿಲ್ಲದೆ ಮಾಡುವುದನ್ನು ನಾವು ನೋಡುತ್ತೇವೆ. ಹಾಗಾದರೆ, ಇಲ್ಲಿ ಸ್ನೇಹ ಇದ್ದದ್ದು ಸುಳ್ಳೆ? ಔದ್ಯೋಗಿಕ ಸಂಬಂಧವಿದ್ದದ್ದು ನಿಜವೇ ಆದರೂ, ನಿಃಸ್ವಾರ್ಥ ಸ್ನೇಹವಿರುವುದು ಉದ್ಯೋಗದ ಜಾಗದಲ್ಲಿ ಕಷ್ಟಸಾಧ್ಯವೇ. ಕೆಲವೊಮ್ಮೆ ಮಧುರಸಂಬಂಧದ ನಾಟಕವಾಡುವ ಪ್ರತಿಭೆಯನ್ನೂ ಕೆಲವರು ಪಡೆದಿರುತ್ತಾರೆ ಎಂಬುದಂತು ಕಾಲಕಳೆದಂತೆ ಗೋಚರಿಸಿರುತ್ತದೆ.

ಬ್ರಿಟಿಷ್ ಪತ್ರಕರ್ತ ಮಾರ್ಕ್ ವರ್ನನ್ ತನ್ನ ‘ದಿ ಮೀನಿಂಗ್ ಆಫ್ ಫ್ರೆಂಡ್‌ಷಿಪ್’ ಎನ್ನುವ ಪುಸ್ತಕದಲ್ಲಿ ಔದ್ಯೋಗಿಕ ಸ್ನೇಹದ ಮೇಲೆ ನಡೆಸಿರುವ ವೈಜ್ಞಾನಿಕ ಅಧ್ಯಯನಗಳನ್ನು ಉಲ್ಲೇಖಿಸುತ್ತಾ, ಸ್ನೇಹವೆಂಬ ಮಧುರಸಂಬಂಧ ಉದ್ಯೋಗಿಗಳಲ್ಲಿ ಸಿಕ್ಕರೆ ಅವರಿಗೆ ಹೆಚ್ಚು ಸಂತೋಷ ಮತ್ತು ಚಟುವಟಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾನೆ. ಅಧ್ಯಯನಗಳು ತಿಳಿಸುವಂತೆ, ಔದ್ಯೋಗಿಕ ಸ್ನೇಹವು ಸಂಸ್ಥೆಯ ಒಟ್ಟಾರೆ ಗುರಿಯನ್ನು ಸಾಧಿಸಲು ಮುಖ್ಯವಾಗಿ ಬೇಕಾಗುವ ಒಗ್ಗಟ್ಟಿಗಾಗಿಯೇ ರೂಪಗೊಂಡಿದೆ.

ಒಟ್ಟಾರೆ, ಸಹೋದ್ಯೋಗಿಗಳ ನಡುವೆ ಸ್ನೇಹ ಭಾವನೆಗಳು ಮೂಡಲು ಮೂಲ ಕಾರಣ ಅವರು ಹಂಚಿಕೊಂಡು ಮಾಡುವ ಕೆಲಸದ ರಚನೆಯ ಸ್ವರೂಪ. ನಾವು ಮಾಡುವ ಕೆಲಸದ ಉದ್ದೇಶವನ್ನು ತೆಗೆದುಹಾಕಿದರೆ ನಮ್ಮ ಸಹೋದ್ಯೋಗಿಗಳ ನಡುವೆ ಸ್ನೇಹ ಉಳಿಯುವುದೇ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಕೆಲವು ಸಂಸ್ಥೆಗಳು ತಮ್ಮ ಉದ್ಯೋಗ ಸ್ಥಳಗಳಲ್ಲಿ ಸ್ನೇಹ ವಾತಾವರಣ ಸೃಷ್ಟಿಸಲು ಹಲವಾರು ಬದಲಾವಣೆಗಳನ್ನು ತರುತ್ತವೆ. ಮನೋರಂಜನೆಯಂಥ ಹಲವು ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತವೆ. 

ಈ ರೀತಿಯ ಪ್ರಯತ್ನಗಳು ಆ ಸಂಸ್ಥೆಯ ಏಳಿಗೆಗಾಗಿ ಎನ್ನುವುದನ್ನು ಮತ್ತೆ ನೆನಪಿಸಬೇಕಾಗಿಲ್ಲ. ಕೆಲಸ ಮಾಡುವ ಸಂಸ್ಥೆಗೆ ಬದ್ಧತೆ ತೋರಿಸಬಾರದು ಎಂದು ಇದರ ಅರ್ಥವಲ್ಲ. ಇಲ್ಲಿ ಕೇವಲ ಔದ್ಯೋಗಿಕ ಸಂಬಂಧ ಮತ್ತು ಕೆಲವೊಮ್ಮೆ ಸ್ನೇಹದ ಮುಖವಾಡ ಹಾಕಿಕೊಳ್ಳುವ ಸಂಬಂಧಗಳನ್ನು ಚರ್ಚಿಸಲಾಗಿದೆ.

ನಿಃಸ್ವಾರ್ಥ ಸ್ನೇಹದ ಯಾವುದೇ ಗುಣಲಕ್ಷಣ ಅಥವಾ ಅವಕಾಶಗಳನ್ನಾಗಲೀ ಉದ್ಯೋಗ ದೊರಕಿಸಿಕೊಡಲಾಗದೇ ಇರುವುದರಿಂದ ಸಹೋದ್ಯೋಗಿಗಳ ನಡುವೆ ಒಳ್ಳೆಯ ಔದ್ಯೋಗಿಕ ಸಂಬಂಧವನ್ನು ಉಳಿಸಿಕೊಳ್ಳಬಹುದೇ ಹೊರತು, ಸ್ನೇಹವನ್ನಲ್ಲ. ಒಳ್ಳೆಯ ಔದ್ಯೋಗಿಕ ಸಂಬಂಧವೆಂದರೆ ಅವರವರ ಕೆಲಸದ ಮಿತಿಗಳನ್ನು ಅರಿತು ನಡೆದುಕೊಳ್ಳುವುದು. ತಮ್ಮ ಸಹೋದ್ಯೋಗಿಗಳನ್ನು ಓಲೈಸಿಕೊಂಡು ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು.

ಇಷ್ಟನ್ನು ಔದ್ಯೋಗಿಕ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದು ನಮ್ಮ ವ್ಯಕ್ತಿತ್ವದ ಬೆಳವಣಿಗೆಯ ಒಂದು ಭಾಗವೇ ಆಗಿರುತ್ತದೆ. ಇದು ಅಷ್ಟು ಸುಲಭಸಾಧ್ಯವಲ್ಲವೆಂಬುದು ನಾವು ಗಮನಿಸಿಬೇಕಾದ ಅಂಶ. ಮನುಷ್ಯಸಹಜವಾದ ಗುಣಗಳು ನಮ್ಮೆಲ್ಲರಲ್ಲೂ ಇರುತ್ತವೆ. ಮನುಷ್ಯ ಸ್ವಾಭಾವಿಕವಾಗಿ ಸ್ವಾರ್ಥಿ. ಉದ್ಯೋಗಕ್ಕೆ ಬೇಕಾಗಿರುವ ಔದ್ಯೋಗಿಕ ಸಂಸ್ಕಾರವನ್ನು ನಾವು ಪ್ರಜ್ಞಾಪೂರ್ವಕವಾಗಿಯೇ ಕಲಿಯಬೇಕಾಗುತ್ತದೆ. ಅದಕ್ಕಾಗಿ ಕಾಲಕಾಲಕ್ಕೆ ನಮ್ಮನ್ನು ನಾವು ತಿದ್ದಿಕೊಳ್ಳಲು ಶ್ರಮಿಸಬೇಕಾಗುತ್ತದೆ. ನಿಃಸ್ವಾರ್ಥ ಸ್ನೇಹ ಅಪರೂಪಕ್ಕೆ ಕೆಲವು ಸಹೋದ್ಯೋಗಿಗಳಲ್ಲಿ ಮೂಡುವುದು ಸುಳ್ಳಲ್ಲ. ಆದರೆ, ಅದು ಮೇಲೆ ಹೇಳಿದ ಎಲ್ಲ ಪರೀಕ್ಷೆಗಳಿಗೆ ಒಳಪಟ್ಟೇ ರೂಪುಗೊಂಡಿರುತ್ತದೆ.
 
ಇನ್ನು ಉದ್ಯೋಗಸ್ಥಳದಲ್ಲಿ ನಮ್ಮ ಮೇಲಿನ ನಾಯಕನ ಸ್ಥಾನದಲ್ಲಿರುವವರ ಜೊತೆಗಿನ ಸಂಬಂಧವೂ ವಿಶಿಷ್ಟವಾದದ್ದೇ. ಈ ಸಂಬಂಧ ಸಾಮಾನ್ಯವಾಗಿ ನಾಯಕ/ನಾಯಕಿಯ ಮೂಲಸ್ವಭಾವದ ಮೇಲೆಯೇ ನಿಂತಿರುತ್ತದೆ. ಅಧಿಕಾರವನ್ನು ಅವರು ಬಳಸುವ ರೀತಿಯ ಮೇಲೆ ಅವರ ಕೈಕೆಳಗೆ ಕೆಲಸ ಮಾಡುವವರ ಕಾರ್ಯಕ್ಷಮತೆ, ಹಕ್ಕುಗಳು ಮತ್ತು ಕ್ಷೇಮ ನಿಂತಿರುತ್ತದೆ. ಹೀಗಿರುವಾಗ ಒಂದು ಸಂಸ್ಥೆಯ ಸ್ವಾಸ್ಥ್ಯ ಮುಖ್ಯವಾಗಿ ಅಧಿಕಾರ ಯಾರ ಕೈಯಲ್ಲಿರುತ್ತದೆಯೊ ಅವರ ಮೇಲೆಯೆ ನಿಂತಿರುತ್ತದೆ.

ಈ ಮುಖ್ಯಸ್ಥ/ಮುಖ್ಯಸ್ಥೆ ಮತ್ತು ಕೈ ಕೆಳಗಿನ ಉದ್ಯೋಗಿಗಳ ಸಂಬಂಧದಲ್ಲಿ ಸ್ನೇಹಕ್ಕೆ ಜಾಗ ಬಹಳ ಕಡಿಮೆ. ಕೆಲವರು ತಮ್ಮ ಸ್ವಾರ್ಥಕ್ಕೆ ಮುಖ್ಯಸ್ಥರನ್ನು ಒಲೈಸಿಕೊಂಡರೂ, ಅದರಲ್ಲಿ ಮುಖ್ಯಸ್ಥರಿಗೂ ಒಲೈಸಿಕೊಂಡ ಉದ್ಯೋಗಿಗೂ ಲಾಭ–ನಷ್ಟಗಳ ಲೆಕ್ಕಾಚಾರವೇ ತಳಹದಿ. ಇದು ಉದ್ಯೋಗದ ಸ್ವಾಭಾವಿಕ ಲಕ್ಷಣ ಕೂಡ. ಇವನ್ನೆಲ್ಲ ಮೀರಿ ಮಾನವೀಯ ಸಂಬಂಧಗಳನ್ನು ಉದ್ಯೋಗಿಗಳ ನಡುವೆ ಮೂಡಿಸುವಂತಹ ಮತ್ತು ಇಂತಹ ಆರೋಗ್ಯಕರ ಸಂಬಂಧಗಳ ಮೂಲಕ ಪೈಪೋಟಿಯ ಚಟುವಟಿಕೆಗಳನ್ನು ಸಂಸ್ಥೆಯ ಏಳಿಗೆಗೆ ಪೂರಕವಾಗಿ ಬಳಸಿಕೊಳ್ಳುವ ಮುಖ್ಯಸ್ಥರೂ ಅಪರೂಪಕ್ಕೆ ಸಿಗುತ್ತಾರೆ. ಅಂಥವರಿಂದ ಆ ಸಂಸ್ಥೆಗಷ್ಟೇ ಅಲ್ಲದೆ, ಇಡಿಯ ಸಮಾಜಕ್ಕೂ ಒಳಿತಾಗುತ್ತದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT