ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ತಿನಿಸುಗಳ ಸೊಗಡು

Last Updated 9 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸೌತ್‌ ಇಂಡೀಸ್ ಹೋಟೆಲ್‌ನಲ್ಲಿ ಮುಖ್ಯ ಬಾಣಸಿಗರಾದ ಮನು ನಾಯರ್‌ ಸಸ್ಯಾಹಾರ  ತಯಾರಿಸುವಲ್ಲಿ ನಿಪುಣರು. ವಿವಿಧ ರಾಜ್ಯದ ವಿವಿಧ ಖಾದ್ಯಗಳನ್ನು ತಯಾರಿಸುವ  ಇವರು ಕೇರಳದ ವಿವಿಧ ಖಾದ್ಯಗಳನ್ನು ತಯಾರಿಸುವ ವಿಧಾನಗಳನ್ನು ಇಲ್ಲಿ ವಿವರಿಸಿದ್ದಾರೆ.

ಅಪ್ಪಂ
ಬೇಕಾಗುವ ಸಾಮಗ್ರಿಗಳು
ಅಕ್ಕಿ 2 ಕಪ್‌
ಕುಚ್ಚಲಕ್ಕಿ ಅಥವಾ ಇಡ್ಲಿ ಅಕ್ಕಿ 1 ಕಪ್‌
ಅವಲಕ್ಕಿ ಅಥವಾ ಬೇಯಿಸಿದ ಅನ್ನ
ತೆಂಗಿನ ತುರಿ ಅಥವಾ ತೆಂಗಿನ ಹಾಲು
ಯೀಸ್ಟ್‌ 1/2 ಚಮಚ
2 ಟೇಬಲ್ ಚಮಚ ಸಕ್ಕರೆ
ನೀರು ರುಬ್ಬಲು

ಮಾಡುವ ವಿಧಾನ
ಎರಡು ಬಗೆಯ ಅಕ್ಕಿಯನ್ನು ತೊಳೆದು  ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನೆನೆಸಿಡಿ. ನಂತರ ಅಕ್ಕಿಯನ್ನು ತೊಳೆದು ಎರಡು ಬಗೆಯ ಅಕ್ಕಿ, ತೆಂಗಿನ ತುರಿ, ಅವಲಕ್ಕಿ ಅಥವಾ ಅನ್ನ, ಯೀಸ್ಟ್‌ ಸಕ್ಕರೆ, ಉಪ್ಪು ಹಾಗೂ ನೀರು ಸೇರಿಸಿ ನುಣ್ಣಗಾಗುವವರೆಗೂ ರುಬ್ಬಿ. ನಂತರ ಈ ಹಿಟ್ಟನ್ನು 8ರಿಂದ 12 ಗಂಟೆಗಳ ಕಾಲ ಇಡಿ.  ಮರುದಿನ ಹಿಟ್ಟು ಉಬ್ಬಿ ಹಿಟ್ಟಿನ ಪ್ರಮಾಣವೂ ಹೆಚ್ಚಾಗಿರುತ್ತದೆ.

ಗ್ಯಾಸ್‌ನ ಮೇಲೆ ಕಡಾಯಿ ಅಥವಾ ಅಪ್ಪಂ ಪಾನ್‌ ಅನ್ನು ಬಿಸಿ ಮಾಡಿ. ನಂತರ ಸ್ವಲ್ಪ ಎಣ್ಣೆ ಹಾಕಿ ಆ ಪಾತ್ರೆಯ ಪೂರ್ತಿ ಭಾಗ ತಾಕುವಂತೆ ನೋಡಿಕೊಳ್ಳಿ. ನಂತರ ತೆಗೆದುಕೊಂಡು ಪೂರ್ತಿ ಕಡಾಯಿ ಹಿಡಿಸುವಂತೆ ಹಿಟ್ಟನ್ನು ಹುಯ್ಯಿರಿ. ಹೀಗೆ ಸಲ್ಪ ಹೊತ್ತು ಅಪ್ಪಂ ಕಾಯಲು ಬಿಟ್ಟ ನಂತರ ನಿಧಾನವಾಗಿ ಅಪ್ಪಂನ ಅಡಿ ಭಾಗ ಕಾದು ತಿಳಿ ಹಳದಿಬಣ್ಣಕ್ಕೆ ತಿರುಗುತ್ತಿರುವಂತೆ ನಿಧಾನವಾಗಿ ಪಾತ್ರೆಯಿಂದ ಎಬ್ಬಿಸಿ. ಅಪ್ಪಂ ಅನ್ನು ತರಕಾರಿ ಸಾರು ಅಥವಾ ತೆಂಗಿನ ಹಾಲಿನೊಂದಿಗೆ ಸೇವಿಸಿದರೆ ಉತ್ತಮ.

ಹಸಿರು ಮಾವಿನ ಚಟ್ನಿ
ಬೇಕಾಗುವ ಸಾಮಗ್ರಿಗಳು

2 ಸಣ್ಣ ಗಾತ್ರದ ಮಾವಿನ ಹಣ್ಣು
1ಕಪ್‌ ತೆಂಗಿನ ಹೋಳು
2 ಹಸಿರು ಮೆಣಸಿನಕಾಯಿ
1 ಅಥವಾ 2 ಬೆಳ್ಳುಳ್ಳಿ ಮತ್ತು ಲವಂಗ (ಬೇಕಾದಲ್ಲಿ)
ಉಪ್ಪು ರುಚಿಗೆ

ಮಾಡುವ ವಿಧಾನ
ಮೇಲಿನ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿ. ಈ ಚಟ್ನಿಯನ್ನು ದಾಲ್‌, ಅನ್ನ ಹಾಗೂ ಗಂಜಿಯೊಂದಿಗೆ ಸೇವಿಸಲು ನೀಡಿದರೆ ಉತ್ತಮ.

ತರಕಾರಿ ಸ್ಟಿವ್
ಬೇಕಾಗುವ ಸಾಮಗ್ರಿಗಳು

2 ಚಿಕ್ಕ ಅಥವಾ ಮಧ್ಯಮ ಗಾತ್ರದ ಕ್ಯಾರೆಟ್‌ (ಸುಲಿದ ಕತ್ತರಿಸಿಬೇಕು).
2 ಆಲೂಗಡ್ಡೆ  (ಸುಲಿದು ಕತ್ತರಿಸಿರಬೇಕು, ಇದು ಸುಮಾರು 150 ಗ್ರಾಂ), ಮುಕ್ಕಾಲರಿಂದ 1ಕಪ್‌ ಆಗುವಷ್ಟು ಅವರೆಕಾಳು, 70 ರಿಂದ 80 ಗ್ರಾಂ ಬೀನ್ಸ್‌, ಒಂದು ದೊಡ್ಡ ಹೆಚ್ಚಿದ ಈರುಳ್ಳಿ, ಮೂರರಿಂದ ನಾಲ್ಕು ಜಜ್ಜಿದ ಬೆಳುಳ್ಳಿ, ಒಂದು ಸಣ್ಣ ತುಂಡು ಶುಂಠಿ, 2ರಿಂದ 3 ಸೀಳಿದ ಹಸಿ ಮೆಣಸಿನಕಾಯಿ, ಸ್ವಲ್ಪ ದಾಲ್ಚಿನಿ, ಜಜ್ಜಿದ ಲವಂಗ ನಾಲ್ಕರಿಂದ ಐದು, ಕರಿಮೆಣಸಿನ ಪುಡಿ 1 ಟೇಬಲ್ ಸ್ಪೂನ್‌, ಎರಡೂವರೆ ತೆಳು ಕಪ್‌ ತೆಂಗಿನಹಾಲು ಅಥವಾ ನೀರು, 1ಕಪ್‌ ದಪ್ಪ ತೆಂಗಿನಹಾಲು, 12ರಿಂದ 12 ಎಸಳು ಕರಿಬೇವು, 2ರಿಂದ 3  ಟೇಬಲ್‌ ಚಮಚ ತೆಂಗಿನ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ದಾಲ್ಚಿನಿ, ಏಲಕ್ಕಿ, ಲವಂಗ, ಕರಿಮೆಣಸಿನ ಪುಡಿ ಹಾಕಿ ಪರಿಮಳಬರುವವರೆಗೂ ಹುರಿಯಿರಿ. ನಂತರ ಶುಂಠಿ, ಬೆಳುಳ್ಳಿ, ಹಸಿಮೆಣಸು, ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಹಾಕಿ ಈರುಳ್ಳಿ ಕೆಂಬಣ್ಣ ಬರುವವರೆಗೂ ಹುರಿಯಿರಿ. ನಂತರ ಕತ್ತರಿಸಿ ಇಟ್ಟುಕೊಂಡ ತರಕಾರಿ ಸೇರಿಸಿ ಎಲ್ಲವನ್ನೂ ಮಿಕ್ಸ್‌ ಮಾಡಿ ಸ್ವಲ್ಪ ಬೇಯಿಸಿ. ನಂತರ ತೆಂಗಿನಹಾಲು ಅಥವಾ ನೀರು ಸೇರಿಸಿ. ನಂತರ ಆ ಪಾತ್ರೆಯ ಬಾಯಿ ಮುಚ್ಚಿ ತರಕಾರಿಯನ್ನು ಬೇಯಿಸಿ.  ತರಕಾರಿ ಚೆನ್ನಾಗಿ ಬೆಂದ ನಂತರ ತೆಳುವಾದ ತೆಂಗಿನ ಹಾಲು ಹಾಕಿ ಕುದಿಸಿ. ನಂತರ ಇದಕ್ಕೆ ಒಗ್ಗರಣೆ ಹಾಕಿ. ಇದನ್ನು ಕೇರಳ ಶೈಲಿಯ ಅಪ್ಪಂ ಅಥವಾ ಕುಚ್ಚಲಕ್ಕಿ ಊಟದ ಜೊತೆ ತಿನ್ನಲು ಹಿತವಾಗಿರುತ್ತದೆ.

ಚೆಟ್ಟಿನಾಡ್‌ ಕುಝಿ ಪನಿಯಾರಂ
ಬೇಕಾಗುವ ಸಾಮಗ್ರಿ

ರುಬ್ಬಲು
1 ಕಪ್ ಅಕ್ಕಿ, 1 ಕಪ್‌ ಕುಚ್ಚಲಕ್ಕಿ, 1/2 ಕಪ್‌ ಉದ್ದಿನ ಬೇಳೆ, 1 ಟೇಬಲ್ ಚಮಚ ಮಂತ್ಯೆ, ಉಪ್ಪು ರುಚಿಗೆ, ರುಬ್ಬಿದ ಹಿಟ್ಟಿಗೆ ಸೇರಿಸಲು, 2 ಟೇಬಲ್ ಚಮಚ ಚೆನ್ನಾ ದಾಲ್‌, 4ರಿಂದ 5 ಹಸಿಮೆಣಸಿನ ಕಾಯಿ (ಸಣ್ಣಗೆ ಕತ್ತರಿಸಿ), 2 ಟೇಬಲ್ ಚಮಚ ಚೆನ್ನಾಗಿ ಹೆಚ್ಚಿದ ತೆಂಗಿನಕಾಯಿ ಹೋಳು, ಚಿಕ್ಕ ಈರುಳ್ಳಿ 15ರಿಂದ 20, 1/4 ಕಪ್ ಹುಳಿ ಮೊಸರು, 1/4 ಟೇಬಲ್ ಚಮಚ ಅಡುಗೆಸೋಡಾ, 1 ಟೇಬಲ್ ಚಮಚ ಸಾಸಿವೆ, 1 ಟೇಬಲ್ ಸ್ಪೂನ್ ಉದ್ದಿನ ಬೇಳೆ, 1, 1/2 ಟೇಬಲ್ ಸ್ಪೂನ್ ಎಣ್ಣೆ.

ಮಾಡುವ ವಿಧಾನ
ಅಕ್ಕಿ, ಕುಚ್ಚುಲಕ್ಕಿ, ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಬೇರೆ ಬೇರೆ ಪಾತ್ರೆಯಲ್ಲಿ 3ರಿಂದ 4 ಗಂಟೆಗಳ ಕಾಲ ನೆನೆಸಿಡಿ. ಮೊದಲು ನೆನೆಸಿದ ಉದ್ದಿನಬೇಳೆಯನ್ನು ನುಣ್ಣಗಾಗುವರೆಗೂ ರುಬ್ಬಿ. ಅಕ್ಕಿಯನ್ನು ರವೆಯ ಹದಕ್ಕೆ ತರಿ ತರಿಯಾಗಿ ರುಬ್ಬಿಕೊಳ್ಳಿ. ಇವೆಲ್ಲವನ್ನೂ ಸೇರಿಸಿ ಸುಮಾರು 10ರಿಂದ 12 ಗಂಟೆಗಳ ಕಾಲ ಇಡಿ.
ಪಾತ್ರೆಯನ್ನು ಬಿಸಿ ಮಾಡಲು ಇಟ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಸಿಡಿಸಿ ನಂತರ ಅದಕ್ಕೆ ಉದ್ದಿನಬೇಳೆ ಹಾಕಿ ಹುರಿಯಿರಿ.

ಇದಕ್ಕೆ ಕರಿಬೇವು ಹಸಿಮೆಣಸು ಹಾಗೂ  ಕತ್ತರಿಸಿದ ಚಿಕ್ಕ ಈರುಳ್ಳಿ ಹಾಕಿ  ಬಾಡಿಸಿ. ನಂತರ ಹೆಚ್ಚಿದ ತೆಂಗಿನಕಾಯಿ ಚೂರುಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಕಾಯಲು ಬಿಡಿ.ರುಬ್ಬಿಟ್ಟುಕೊಂಡು ಹಿಟ್ಟಿಗೆ ಹುಳಿ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಒಗ್ಗರಣೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಅಡುಗೆ ಸೋಡಾ ಹಾಗೂ 1 ಟೇಬಲ್ ಚಮಚ ನೀರು ಸೇರಿಸಿ ಚೆನ್ನಾಗಿ ಕಲಿಸಿ.

ನಂತರ ಪನಿಯರಂ ಪಾನ್ ಅನ್ನು ಬಿಸಿ ಮಾಡಿ 1/2 ಟೇಬಲ್ ಸ್ಪೂನ್ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಉರಿ ಕಡಿಮೆ ಮಾಡಿ 3/4 ಭಾಗ ಪಾತ್ರೆ ಕವರ್ ಆಗುವಂತೆ ಹಿಟ್ಟನ್ನು ಹುಯ್ಯಿರಿ. ನಂತರ ಇದರ ಮೇಲೆ ಸ್ಪಲ್ವ ಎಣ್ಣೆ ಹಾಕಿ. ನಂತರ ಇದು ಮದ್ಯ ಉರಿಯಲ್ಲಿ ಹಳದಿ ಬಣ್ಣ ಬರುವವರೆಗೂ ಕಾಯಿಸಿ, ನಂತರ ಅದನ್ನು ಎಬ್ಬಿಸಿ ಇನ್ನೊಂದು ಬದಿಯನ್ನು ಹೀಗೆ ಕಾಯಿಸಿ. ಈಗ ಬಿಸಿ ಬಿಸಿ ಪನಿಯಾರಂ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT