ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಕೋಟಿಯ ಕಥನ ಮತ್ತು ಸಮಸ್ಥಿತಿ

ಜೀವಜಾಲವನ್ನು ಪೊರೆಯುವ ಮತ್ತು ಆಹಾರವಾಗಿಸುವುದರ ನಡುವಣ ಸಮಸ್ಥಿತಿಯ ಚಿಂತನೆ ಕಳಚುತ್ತಿದೆ
Last Updated 9 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಆಹಾರ ಪದ್ಧತಿ, ಶಿಕ್ಷಣ ನೀತಿ, ವ್ಯವಸಾಯ ಸ್ಥಿತಿ ಇವೆಲ್ಲವೂ ಇದೀಗ ಅತಿ ಭಾವುಕ ಅಥವಾ ಅತಿ ಲೌಕಿಕ ರೀತಿಯ ಚರ್ಚೆಗೆ ಒಳಗಾಗಿವೆ. ಒಂದು ಬಗೆಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಈ ಮೂಲಭೂತ ಮುಖ್ಯ ಸಂಗತಿಗಳೆಲ್ಲ ಪರ- ವಿರುದ್ಧ ವಾಗ್ವಾದಕ್ಕೆ ಬಿದ್ದು, ಜೀವಹತ್ಯೆಯ ಗತಿಗೆ ಕಾರಣವಾಗಿ ಬಿಟ್ಟಿವೆ.

ಶಾಲೆ, ಕಾಲೇಜುಗಳಲ್ಲಿ ಮಾತೃಭಾಷೆ, ಕಲಾನಿಕಾಯ ವಿಷಯಗಳ ಕಲಿಕೆ ಅಂದರೆ ಅದರಿಂದ ಅನ್ನ ಹುಟ್ಟುವುದೇ ಎಂಬ ಪ್ರಶ್ನೆ ಎದುರಾಗುತ್ತದೆ. ವ್ಯವಸಾಯ ಪದ್ಧತಿಯಲ್ಲಿ ಅಷ್ಟೆಲ್ಲ ಯಂತ್ರೋಪಕರಣಗಳು ಭೂಮಿಗೆ ಕಾಲಿಟ್ಟ ಮೇಲೆ ಇನ್ನು ಎತ್ತಿನ ಬಾಲ ತಿರುವಿಕೊಂಡು, ಮೇಟಿ ಹಿಡಿದು ತಲೆ ಬಗ್ಗಿಸಿ ದಿನಗಟ್ಟಲೆ ಉಳುಮೆ ಮಾಡುವುದೆಲ್ಲಿಂದ ಬಂತು? ಕೊಟ್ಟಿಗೆಯಲ್ಲಿ ಎತ್ತು, ಎಮ್ಮೆ, ನಾಡಹಸು ಕಟ್ಟಿಕೊಂಡು ಬದುಕು ನೀಸುವುದು ಹೇಗೆಂಬ ಕಷ್ಟ ಎದುರಾಗಿದೆ.

ಅತಿವೃಷ್ಟಿಯಿಂ ದಲೋ ಅನಾವೃಷ್ಟಿಯಿಂದಲೋ  ರೈತಾಪಿಗಳು ದನಕರು ಗಳನ್ನು ಕಸಾಯಿಖಾನೆಗೆ ಮಾರುತ್ತಿದ್ದೇವೆಂದು ಕೊಳ್ಳದೆ ಯಾರೋ ಏಜೆಂಟರಿಗೆ ಇಲ್ಲಾ ಗೋಮಾಳಕ್ಕೆ ಕಳುಹಿಸುತ್ತಿ ದ್ದೇವೆಂದುಕೊಂಡಿದ್ದಾರೆ. ಕೊಟ್ಟಿಗೆಯಲ್ಲಿ ಕಟ್ಟಿಕೊಳ್ಳಲಾಗದ ಅವು ಲಾರಿ ಹತ್ತಿ ಊರು ಬಿಟ್ಟು ಪಟ್ಟಣ, ತಾಲ್ಲೂಕಿನ ಟೋಲ್‌ಗೇಟಿಗೆ ಬರುವಲ್ಲಿ ಮಾತ್ರ ಅದು ಪಡೆದುಕೊಳ್ಳುವ ರಾಜಕಾರಣದ ಗತಿ ಬೇರೆ ಸ್ವರೂಪದ್ದು.

ದನದ ಮಾಂಸ ಮನೆಯಲ್ಲಿತ್ತೆಂತಲೋ, ಚರ್ಮ ಸುಲಿಯುತ್ತಿದ್ದರೆಂತಲೋ, ಲಾರಿಯಲ್ಲಿ ದನ ಸಾಗಿಸುತ್ತಿದ್ದವರನ್ನು ಗೋರಕ್ಷಕರು ಹಿಡಿದರೆಂದೋ, ಅದರ ನೆಪದಲ್ಲಿ ಕಾಸು ವಸೂಲಿ ಮಾಡಿದರೆಂಬ ಸುದ್ದಿ ಹಬ್ಬಿ ಯಾವ ಪ್ರಾಣಿಗೂ ಇಲ್ಲದ ಭಾವುಕತೆ ದನಕರುಗಳ ಬೆನ್ನಿಗೆ ಹತ್ತಿಕೊಂಡಿದೆ. ಭಾರತದ ಮಟ್ಟಿಗಂತೂ ಒಂದೊಂದು ಬಗೆಯ ಪ್ರಾಣಿ ಪಕ್ಷಿಗೂ ಒಂದೊಂದು ಕಥನ, ನಂಬಿಕೆ ಹುಟ್ಟಿಕೊಂಡಿದೆ. ಇದರ ನಡುವೆ ಗೋವನ್ನು ಕುರಿತ ಕಥನಗಳು ಅಸಂಖ್ಯ.

ಕರ್ನಾಟಕದಾದ್ಯಂತ ಪ್ರಸಿದ್ಧವಿರುವ ಪುಣ್ಯಕೋಟಿಯ ಕಥನ, ಭಾರತದ ಯಾವತ್ತೂ ಪಶುಪಾಲನೆಯ ಮತ್ತು ಮನುಷ್ಯ ಸಂಬಂಧ ಮೂಲದ ಮುಖ್ಯಸಂಗತಿಯನ್ನು ಹೇಳುವ ಪ್ರಸಂಗ. ‘ಹಿಂದೆ ಬಂದರೆ ಹಾಯಬೇಡಿ, ಮುಂದೆ ಬಂದರೆ ಒದೆಯಬೇಡಿ’ ಎಂಬ ಕೋರಿಕೆಯೊಂದಿಗೆ, ಸತ್ಯವೆಂಬುದೇ ದೈವ ಎನ್ನುವ ಕಟುಸತ್ಯವನ್ನು ನುಡಿಯುವುದಲ್ಲದೆ, ಅನಾಥ ಮಕ್ಕಳನ್ನು ನಿಮ್ಮ ಕಂದನೆಂದು ಕಾಣಿರೆಂಬ ಆಶಯದಿಂದ ಒಂದು ಹಸು ಹೇಳುವ ಈ ಭಾವುಕ ವಿವರದ ಕಥೆ ಮಂಡ್ಯ, ಮದ್ದೂರು ಸುತ್ತಿನದೇ ಎಂದರೆ ಹಾಗೇನಿಲ್ಲ.

ಇದು ಬ್ರಹ್ಮಪುರಾಣದ 18ನೇ ಅಧ್ಯಾಯದ ದೀರ್ಘ, ಸುಂದರ ಕಥಾನಕ. ಉತ್ತರ ಭಾರತದ ಸರಸ್ವತಿ ನದಿ ದಂಡೆಯಲ್ಲಿ ನಡೆಯುವ ಪ್ರಸಂಗ. ಅಲ್ಲಿಯ ವ್ಯಾಘ್ರ ಶಾಪಗ್ರಸ್ತ ಪ್ರಭಂಜನನೆಂಬ ರಾಜ. ಅವನು ಯಾಕೆ ಹುಲಿಯ ಜನ್ಮ ತಾಳಿದನೆಂದರೆ, ಮರಿಗಳಿಗೆ ಹಾಲೂಡಿಸುತ್ತಿದ್ದ ತಾಯಿ ಜಿಂಕೆಯನ್ನು ಕೊಂದದ್ದಕ್ಕಾಗಿ. ಆದರೆ ಅಲ್ಲಿ ಹುಲಿ ಸಾಯದೆ ಶಾಪ ವಿಮೋಚನೆಯಾಗಿ ಹೋಗುತ್ತದೆ. ಪುಣ್ಯಕೋಟಿ ಕಥೆ ಯಲ್ಲಿ ಗೊಲ್ಲ ಗೌಡನು ‘ಗಂಗೆ ಬಾರೆ, ಗೌರಿ ಬಾರೆ, ತುಂಗ ಭದ್ರೆ ನೀನು ಬಾರೆ’ ಎಂದರೆ ಬ್ರಹ್ಮಪುರಾಣದಲ್ಲಿ ಅವುಗಳ ಹೆಸರು ಸುರಭಿಮಾಲಿನಿ, ಚಂಪಕಭದ್ರೆ ಹೀಗೆ.

ಮಧ್ಯ ಕರ್ನಾಟಕದ ಜುಂಜಪ್ಪನ ಜನಪದ ಗದ್ಯಪದ್ಯ ಕಾವ್ಯವಂತೂ ದನಕರುಗಳ ನಿಮಿತ್ತವೇ ಹುಟ್ಟಿಕೊಂಡಿದೆ. ಈ ಭಾಗದಲ್ಲಿ ದೊರೆಯವ ಎಲ್ಲಾ ಕಥನಗಳೂ ಒಂದಲ್ಲಾ ಒಂದು ಕ್ರಮದಲ್ಲಿ ಪಶುಪಾಲನೆಯ ವಿವರಗಳನ್ನೇ ಒಳಗೊಂಡಿರುತ್ತವೆ. ಅದರ ಕಾರಣವಾಗಿ ಸಾಮಾಜಿಕ ಘರ್ಷಣೆಗಳೂ ನಡೆದದ್ದಿದೆ. ‘ತುರುಗೋಳ್’ ಎಂಬ ಪದವು ಕರ್ನಾಟಕದ ಶಾಸನಗಳಲ್ಲಿ ಅದೆಷ್ಟು ಪುನರಾವರ್ತನೆ ಮತ್ತು ಪ್ರಾಮುಖ್ಯತೆಯಿಂದ ಕೂಡಿದೆಯೋ ಅದರ ಭಿತ್ತಿಯಲ್ಲೆ ಜುಂಜಪ್ಪನ ದೀರ್ಘ ಕಥನವಿದೆ.

ಮಧ್ಯ ಕರ್ನಾಟಕ ಮ್ಯಾಸಬೇಡ, ಕಾಡುಗೊಲ್ಲ ಬುಡಕಟ್ಟು ಸಮೂಹಕ್ಕೆ ದನಕರುಗಳೇ ದೇವರು. ಮ್ಯಾಸಬೇಡರ ಕಂಪಳ ರಂಗನ ಹಟ್ಟಿಯಲ್ಲಿ ದೇವರೆತ್ತುಗಳದೇ ಮುಖ್ಯ ಜಾತ್ರೆ. ಈ ದೇವರೆತ್ತುಗಳನ್ನು ಕಾಯುವವರು ಕಿಲಾರಿಗಳೆನಿಸಿ ದೀಕ್ಷೆ ತೆಗೆದುಕೊಳ್ಳಬೇಕು. ಹೀಗೆ ಆರಾಧನೆಯ ಕ್ರಮವಾಗಿ ದನಕರುಗಳನ್ನು ಒಂದು ಸಮೂಹ ನೋಡಿದರೆ, ಇನ್ನೊಂದು ಗುಂಪು ವ್ಯಾವಹಾರಿಕ ಕ್ರಮದಲ್ಲೇ ಅರಣ್ಯಗಳಲ್ಲಿ ಅವನ್ನು ಸಾಕುವುದಿದೆ.

ಈ ಆಧುನಿಕ ತಳಿಯ ಅಮೃತ ಮಹಲ್ ದನಕರುಗಳನ್ನು ಕಾಯುವ ಚರವಾಯಿಗಳು ವರ್ಷಕ್ಕೊಮ್ಮೆ ಅವನ್ನು ಹರಾಜು ಹಾಕಿ ಮಾರುವುದಿದೆ. ಇಷ್ಟಾಗಿಯೂ ಈ ತಳಿಯ ದನಕರುಗಳನ್ನು ಕಾಯುವವರಿಗೆ ಇರುವ ನಂಬಿಕೆಗಳೂ ಅಪಾರ. ಇವುಗಳ ಸನಿಹದಲ್ಲಿದ್ದರೆ ಹಾವು, ಚೇಳು, ಪೀಡೆ ಯಾವುದೂ ಹತ್ತಿರ ಸುಳಿಯುವುದಿಲ್ಲವೆನ್ನುತ್ತಾರೆ. ಆ ದನಕರುಗಳ ಹೆಸರಂತೂ ಆಕರ್ಷಕ. ಚಿಕ್ಕರಂಬೆ, ದೊಡ್ಡ ರಂಬೆ, ಚುಂಚನಕೋಟೆ, ಬಿನ್ನಾಣಿ, ಕಸ್ತೂರಿ, ಕೆಂಪುಲಕ್ಕಿ, ಮಳೆದೇವಿ, ತುಂಬೇಸರ, ಸಂಪಿಗೆ ರಾಮ, ಚನ್ನಬಸವ, ಪಾರ್ವತಿ, ಬುರುಡೆರಂಗಿ ಹೀಗೆ ನೂರಾರು ನಾಮಧೇಯ.

ದೇವರಾಜ ಅರಸು 70ರ ದಶಕದಲ್ಲಿ ಪಶುಸಂಗೋ ಪನಾ ಸಚಿವರಾಗಿದ್ದ ವೇಳೆ ಚಿತ್ರದುರ್ಗ ಸೀಮೆಯ ಹೊಳ ಲ್ಕೆರೆಯ ರಾಮಗಿರಿ ಕಾವಲಿನ ಈ ಅಮೃತ ಮಹಲ್ ತಳಿಯ ವೀಕ್ಷಣೆಗೆ ಎತ್ತಿನ ಗಾಡಿಯಲ್ಲಿ ಕೂತು ಹೊರಟಿದ್ದರ ಚಿತ್ರ ವೊಂದನ್ನು ಚರವಾಯಿಗಳ ಮನೆಯಲ್ಲಿ ನೋಡಿದ ನೆನಪು. ವ್ಯವಸಾಯ ಕ್ರಮ ಏರುಪೇರಾಗುತ್ತ, ಈ ದನಕರುಗಳ ಪಡಿಪಾಟಲು ಬಲವಾಗುತ್ತ ಅದು ದಿಕ್ಕು ತಪ್ಪಿ ಹೋಯಿತು.

ಬದಲಾದ ಜೀವನ ಕ್ರಮವೆಂತೆಂದರೆ ಅದೆಲ್ಲೋ ಏಳು ಸಮುದ್ರದಾಚೆ ಅಡ್ಡಾಡುತ್ತಿದ್ದ ಬಣ್ಣಬಣ್ಣದ, ರಂಗುರಂಗಿನ ಪಟ್ಟೆಯ ಹುಲಿಯನ್ನು ನಾವೇ ಬಾಗಿಲು ತೆರೆದು ಒಳಗೆ ಬಿಟ್ಟುಕೊಂಡಂತಿದೆ. ಆಮೇಲೆ ಅದು ನಮ್ಮೆಲ್ಲರ ಎದೆಯ ಮೋಹವ್ಯಾಘ್ರವೇ ಆಗಿ ಸಕಲರನ್ನೂ, ಪ್ರಾಣಿಪಕ್ಷಿ ಸಂಕುಲವನ್ನೂ ನುಂಗಿ ನೀರು ಕುಡಿದು ಲೋಕವನ್ನು ಬರಿದು ಮಾಡುತ್ತೇನೆಂದು ಅಬ್ಬರಿಸುತ್ತಿದೆ.

ದನಕರುಗಳ ಬಗೆಗೆ ಮಾತ್ರವಲ್ಲದೆ ಭಾರತದಾದ್ಯಂತ ಇನ್ನಿತರ ಪ್ರಾಣಿ ಪಕ್ಷಿಗಳ ಕುರಿತಾಗಿ ಬುಡಕಟ್ಟು, ಗ್ರಾಮಸ್ಥರಿಗಿರುವ ನಂಬಿಕೆಗಳನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಅಸ್ಸಾಂನ ಬ್ರಹ್ಮಪುತ್ರಾ ನದಿಗೆ ಸೇರುವ ಉಪನದಿಗಳ ತಟದಲ್ಲಿ ದನಕರುಗಳನ್ನು ತಂದು ಪೂಜಿಸುತ್ತ ಅದರ ಪಕ್ಕದಲ್ಲೇ ಹರಿವ ನದಿಗೆ ಆಡು, ಮೇಕೆ ಬಲಿಕೊಡುತ್ತಿದ್ದರು.

ಕೇಳಿದರೆ ಮಳೆ ಬೆಳೆಯಾಗಿ ನಮ್ಮ ವ್ಯವಸಾಯ ಬದುಕು ಹೆಚ್ಚಲಿ ಎಂದು ಆಡಿನ ಬಲಿಯೊಡನೆ ಜಲಪೂಜೆ ನೆರವೇರಿಸುತ್ತಿದ್ದೇವೆಂದರು. ಇಲ್ಲಿ ಹೀಗೆ ಆಡು, ಮೇಕೆ ಬಲಿ ಕೊಟ್ಟರೆ ತಮಿಳುನಾಡಿನ ಪರಮಲೆಯ ಭಾಗದ ಒಂದು ಆದಿವಾಸಿ ಸಮೂಹ ತಾವು ಆಡು ಮೇಕೆ ಬಲಿ ಕೊಡುವುದಿಲ್ಲ, ಅದೇ ನಮಗೆ ಪವಿತ್ರ, ಮೇಲಾಗಿ ತಿನ್ನುವುದಿಲ್ಲವೆಂದರು. ನೀಲಗಿರಿಯ ತೋಡಾ ಬುಡಕಟ್ಟು ಸಮೂಹದವರು ಎಮ್ಮೆಯನ್ನು ಕುಲಚಿಹ್ನೆಯಾಗಿ ಮಾಡಿಕೊಂಡು ಪವಿತ್ರ ಎನ್ನುತ್ತಾರೆ.

ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಶಿಲೇರು ಅರಣ್ಯ ಭಾಗದಲ್ಲಿಯ ಜನ ಹುಲಿಯೇ ನಮಗೆ ದೇವರು ಅವನ್ನು ಬಿಲ್‌ಕುಲ್ ಬೇಟೆಯಾಡುವುದಿಲ್ಲವೆಂದರು. ಆದರೆ ಆ ಅರಣ್ಯದಲ್ಲಿ ಹುಲಿ ಚಿರತೆಗಳ ಸಂತತಿಯೇ ಇದ್ದಂತೆ ತೋರಲಿಲ್ಲ. ಉತ್ತರ ಕನ್ನಡದ ಮರಾಠಿಕುಂಬ್ರಿಯವರೂ ಮಧ್ಯಪ್ರದೇಶದ ಆದಿವಾಸಿ ಸಮೂಹದಂತೆ ಹುಲಿ ಬೇಟೆಯೊಡನೆ ಅವನ್ನು ಆರಾಧಿಸುತ್ತಾರೆ. ಹಾಗೆಯೇ ಇನ್ನೊಂದು ಸಮೂಹ ಮೊಲ ತಿನ್ನುವುದಿಲ್ಲ.

ಇದಕ್ಕಿಂತಲೂ ವಿಚಿತ್ರ ನಂಬಿಕೆಯೆಂದರೆ ವಿಶಾಖಪಟ್ಟಣದಲ್ಲಿದ್ದ ದಿಗಂಬರ ಪಂಥದ ಬಂಡಿಗೋಪಾಲ ರೆಡ್ಡಿ (ಬಂಗೋರೆ) ಅವರನ್ನು ಕಾಣಲು ಹೋಗಿ ಅಲ್ಲೇ ಸಮುದ್ರತೀರದಲ್ಲಿ ಅಡ್ಡಾಡುವಲ್ಲಿ ಒಬ್ಬ ಬೆಸ್ತನೂ, ಅವನ ಹೆಂಡತಿಯೂ ಪುಟ್ಟಿಯಿಂದ ಆಯ್ದ ಕೆಲಬಗೆಯ ಮೀನುಗಳನ್ನು ನೀರಿಗೇ ಎಸೆಯುತ್ತಿದ್ದರು. ಕೇಳಿದರೆ ಆ ಜಾತಿಯ ಮೀನು ನಮಗೆ ಪವಿತ್ರ, ಅದು ಸಮುದ್ರ ದೇವತೆಗೇ ಸೇರಬೇಕಾದದ್ದೆಂದರು.

ಆಮೇಲಾಮೇಲೆ ಬಂಗಾಳಕೊಲ್ಲಿಯ ಪೂರ್ವ ಕರಾವಳಿ, ಅರಬ್ಬಿ ಸಮುದ್ರದ ಪಶ್ಚಿಮ ಕರಾವಳಿಯ ಭಾಗಗಳಲ್ಲಿ ತಿಳಿದುಬಂದದ್ದು, ಒಂದೊಂದೂ ಬೆಸ್ತರ ಗುಂಪು ಒಂದೊಂದು ಬಗೆಯ ಮೀನಿನ ಆಹಾರವನ್ನು ನಿಷೇಧವಾಗಿರಿಸಿಕೊಂಡಿರುತ್ತದೆ. ಆದರೆ ಇತ್ತೀಚೆಗೆ ಬೆಸ್ತರು ದೋಣಿ ಓನರುಗಳಾಗಿ, ಮೀನು ಹಿಡಿಯಲು ಬಿಹಾರ, ಒಡಿಶಾದ ವಲಸೆ ಹುಡುಗರನ್ನು ನೇಮಿಸಿಕೊಂಡಿರುವುದರಿಂದ ಈ ಬಗೆಯ ನಂಬಿಕೆಗಳು ಕಳೆದುಹೋಗುತ್ತಲಿವೆ.

ಬೆಸ್ತರಿಗೆ ಮೀನಿನ ಎತ್ತುವಳಿಯಷ್ಟೇ ಮುಖ್ಯವಾಗಿದೆ. ಇದೀಗ ಪ್ರಸ್ತಾಪಿಸಿದ ಮಧ್ಯ ಕರ್ನಾಟಕದ ಮ್ಯಾಸಬೇಡ ಬುಡಕಟ್ಟಿನವರು ಕೋಳಿಯನ್ನು ಆಹಾರವಾಗಿ ಉಪಯೋಗಿಸುವುದಿಲ್ಲ. ಜಗತ್ತಿನಾದ್ಯಂತ ಈ ಬಗೆಯ ಪ್ರಾಣಿ ಪಕ್ಷಿ ಸಂಬಂಧ ನಿಷೇಧಾಚರಣೆಗಳನ್ನು ಮಾನವಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಗುರುತಿಸುತ್ತಾರೆ.

ಇದೇ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡಕಂಡ ಕಡೆಗಳಲ್ಲೆಲ್ಲ ನಾಗಬನಗಳಿದ್ದು, ಹಣವುಳ್ಳವರೆಲ್ಲ ನಾಗಾರಾಧನೆ, ನಾಗಮಂಡಲ ಮಾಡಿಸುವುದು ಇದ್ದೇ ಇದೆ. ಈ ಸರ್ಪದ ಸ್ಥಾನಮಾನ ದನಕರುಗಳಿಗಿಂತ ಹಿರಿದು, ವ್ಯಾಪಕವಾದುದು. ದೈವ ಸಂಬಂಧಿ ಜಂತುವಾದ ಇದನ್ನು ಕೊಲ್ಲುವಂತಿಲ್ಲ. ಗೃಹಪ್ರವೇಶದ ವೇಳೆ ಪುರೋಹಿತರು ಹೇಳುವ ಮಂತ್ರಗಳಲ್ಲಿ ಗೃಹ ನಿರ್ಮಾಣದ ನಿವೇಶನದಲ್ಲಿ ವೃಕ್ಷಜಾತಿ, ಪಕ್ಷಿ ಸಂಕುಲದ ನಾಶಕ್ಕಾಗಿ, ಅವನ್ನು ಒಕ್ಕಲೆಬ್ಬಿಸಿದ್ದಕ್ಕಾಗಿ ಕ್ಷಮೆ ಕೇಳುವ ಶ್ಲೋಕಗಳಿವೆ.

ತಳವರ್ಗಗಳಲ್ಲಿ ಅವರವರ ಕುಲ, ಬೆಡಗು ಗಳು ಪ್ರಾಣಿಪಕ್ಷಿಯ ಹೆಸರಲ್ಲಿದ್ದು ಅಂಥವುಗಳನ್ನು ಆಯಾ ಕುಲದವರು ಮಾಂಸಾಹಾರವಾಗಿ ಉಪಯೋಗಿಸುವುದಿಲ್ಲ. ಒಂದೊಂದು ಕುಲ ಮೂಲದ ಕಥೆಯೂ ನಾನಾ ಬಗೆಯ ಲ್ಲಿದೆ. ಅವು ಹೂ, ಗಿಡ, ಮರ, ಪ್ರಾಣಿ ಪಕ್ಷಿಯ ಹೆಸರಿನಿಂ ದಲೇ ಕೂಡಿರುತ್ತವೆ. ಈ ಕುಲನಾಮಧೇಯವನ್ನು ಹಿಡಿದೇ ಬುಡಕಟ್ಟು, ಗ್ರಾಮಸಮೂಹಗಳು ತಮ್ಮ ಲಗ್ನ ಸಂಬಂಧ ಗಳನ್ನು ಏರ್ಪಡಿಸಿಕೊಳ್ಳುವುದಿದೆ.

ಎರಡು ಬಣದವರು ಸಂಪಿಗೆ ಕುಲದವರೋ, ಮಲ್ಲಿಗೆ ಕುಲದವರೋ, ಎತ್ತು, ಎಮ್ಮೆ, ಮೇಕೆ ಕುಲದವರೋ ಆಗಿಬಿಟ್ಟರೆ ಅವರು ಸಹೋ ದರ ಸಂಬಂಧಿಗಳು. ಆಗ ಮದುವೆ ಬೇರೆ ಕುಲಸಂಬಂಧ ಗಳಲ್ಲಿ ಆಗಬೇಕು. ಇಲ್ಲಿ ಕಾಣಿಸುತ್ತಿರುವ ಎಲ್ಲ ನಂಬಿಕೆ, ಆಚರಣೆಗಳೂ ಜೀವಜಾಲವನ್ನು ಪೊರೆಯುವುದರ, ಅಗತ್ಯಬಿದ್ದಲ್ಲಿ ಆಹಾರವಾಗಿಸುವುದರ ಹಿನ್ನೆಲೆಯಲ್ಲಿ ಸಮ ತೋಲನ ಕಾಯ್ದುಕೊಂಡು ಬರಲಾಗಿದೆ. ಆದರೆ ಕಥನ ವ್ಯಾಪ್ತಿ, ನಂಬಿಕೆ, ಆರಾಧನೆ, ಜಾತಿ ಪ್ರಾಬಲ್ಯದ ಅತಿಗಳು ಬಲವಾಗಿಬಿಟ್ಟದ್ದರಿಂದ ಸಮಸ್ಥಿತಿಯ ಚಿಂತನೆ ಕಳಚುತ್ತಿದೆ.

ವಾಹನ ಡ್ರೈವ್ ಮಾಡುತ್ತಿದ್ದ ಮಿತ್ರ ಕೊಂಚ ನಿಧಾನ ಮಾಡಿದ. ಯಾಕೆಂದರೆ ‘ತಾಳಯ್ಯ ರವಷ್ಟು ದನಕರು, ಕುರಿಮೇಕೆ, ಕೋಳಿಪಿಳ್ಳೆ ಅಡ್ಡ ಬತ್ತಾವೆ’ ಎನ್ನುವ ಕರುಣೆಯ ಮಾತಾಡಿದ. ಪುಸ್ತಕದ ಓದಿನಿಂದಲೋ, ನಡುಮುರಿದ ಮೇಲಿನ ಯೋಗಾಭ್ಯಾಸದಿಂದಲೋ ಕಷ್ಟಪಟ್ಟು ಗಳಿಸುವ ಅಧ್ಯಾತ್ಮವು ದನಕರು, ಪ್ರಾಣಿಪಕ್ಷಿಗಳಿಗೆ ಪ್ರಕೃತಿಯ ಸಾನ್ನಿಧ್ಯದಿಂದಲೇ ಒದಗಿಬಂದು ಅವುಗಳ ಕಣ್ಣಲ್ಲೂ ಒಂದು ಬಗೆಯ ಅಧ್ಯಾತ್ಮದ, ಅದಕ್ಕೂ ಮಿಗಿಲಾಗಿರುವ ಕೃತಜ್ಞತಾಭಾವ ಇದ್ದೇ ಇದೆ.

ಇದು ದಾರಿ ಹಾಯುವ ಆ ಜೀವಗಳ ಕಣ್ಣಲ್ಲಿ ಕಾಣಿಸಿಯೇ ಗೆಳೆಯ ಕರುಣೆಯ ಮಾತಾಡಿದನೇ? ಇರಬಹುದು. ಆತ ಮಾಂಸಾಹಾರಿ!
ಲೋಕಗ್ರಾಹಿ ವ್ಯಾಸ ಮಹರ್ಷಿಯು ಮಹಾಭಾರತದ ವನಪರ್ವದಲ್ಲಿ ಹೇಳುವ ಧರ್ಮವ್ಯಾಧನ ಕಥೆಯೂ ಮೇಲಿನ ಸಂಗತಿಗೆ ಸಂಬಂಧಪಟ್ಟದ್ದು.

ಮುನಿಯೊಬ್ಬ ತಪಸ್ಸು ಮಾಡುತ್ತಿದ್ದವನು ಶಿರದ ಮೇಲೆ ಬಿದ್ದ ವಿಷ್ಠ ಕಾರಣಕ್ಕಾಗಿ ಉರಿಗಣ್ಣಿಂದ ಮರದ ಮೇಲಿನ ಆ ಹಕ್ಕಿ ಯನ್ನು ಕೊಂದುಬಿಟ್ಟ. ತದನಂತರ ಬೇಟೆಯ ಕಾಯಕದ ಮಾಂಸ ಮಾರಾಟದ ಧರ್ಮವ್ಯಾಧನಿಂದ ಅರಿವಿನ ಬೆಳ ಕನ್ನು ಪಡೆಯುತ್ತಾನೆ. ಗದುಗಿನ ಗುಡಿಯಲ್ಲಿ ಒದ್ದೆಯ ವಸ್ತ್ರ ಹೊದ್ದು, ಆರ್ದ್ರ ಭಾವದಲ್ಲಿ ಭಾರತ ಕಥಾ ಮಂಜರಿಯನ್ನು ಬರೆದ ಕುಮಾರವ್ಯಾಸನೂ ಧರ್ಮವ್ಯಾಧನ ಕಥೆಯನ್ನು ಒಪ್ಪಿ ಅರಣ್ಯಪರ್ವದ 15ನೇ ಸಂಧಿಯಲ್ಲಿ ಸೇರಿಸಿದ್ದಾನೆ.

ಕವಿಯ ಮಾಂಸದಂಗಡಿಯ ವರ್ಣನೆ ಓದುಗರ ಕಣ್ಣಿಗೆ ಕಾಣಿಸುವಂತಿದೆ. ಸುಲಿದ ಚರ್ಮದ, ರಕ್ತದಪಸೆಯ, ಒಳಗರುಳತೊರಳೆಯ, ಚೆಲ್ಲಿದೆಲುಬಿನ, ಮೀನುತೋರಣದ ದಾರಿಯಲ್ಲಿ ಧರ್ಮವ್ಯಾಧನ ಮನೆಗೆ ದ್ವಿಜಮುನಿ ಹಾಯುತ್ತಾ ಬಂದನಂತೆ. ವಿರಾಟನರಮನೆಯಲ್ಲಿ ದ್ರೌಪ ದಿಯು ಭೀಮನನ್ನು ಕೀಚಕನ ಉಪಟಳದಿಂದ ತನ್ನ ರಕ್ಷಿಸು ವಂತೆ ಕೇಳುವಲ್ಲಿಯೂ ಇದೇ ಮಾಂಸಪಸರದ ವಿವರವಿದೆ.

ಅಹಿಂಸೆಯೇ ಧರ್ಮವೆನ್ನುವ ನಮ್ಮ ಪರಂಪರೆ ಕಾಯು ವುದರ, ದಯೆ ತೋರಿಸುವುದರ, ಆಹಾರವಾಗಿಸುವು ದರ ನಡುವೆ ಇರಬೇಕಾದ ಸಮಚಿತ್ತವನ್ನು ಹೇಳುತ್ತದೆ. ತತ್ವ ಪದಕಾರರು ಏಕತಾರಿ ಹಿಡಿದು, ‘ಧರಣಿ ಶಕ್ತಿ, ಸಲಿಲ ಶಕ್ತಿ, ಬೀಜಶಕ್ತಿ, ಪ್ರಾಣಶಕ್ತಿ ಎನಿಸಿ ಧರೆಯ ಜೀವಗಳನು ಪೊರೆವ ಲೋಕ ಜನನಿಯೇ’ ಎಂದು ಹಾಡುವುದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT