ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಉತ್ಸಾಹದ ಬಂಡವಾಳ!

Last Updated 10 ಸೆಪ್ಟೆಂಬರ್ 2016, 11:54 IST
ಅಕ್ಷರ ಗಾತ್ರ

ಚಿತ್ರ: ಗೋಲಿಸೋಡ
ನಿರ್ದೇಶಕ: ರಘುಜಯ
ನಿರ್ಮಾಪಕರು: ಕೊಲ್ಲ ಪ್ರವೀಣ್, ಹೇಮಂತ್‌ಕುಮಾರ್
ತಾರಾಗಣ: ಚಂದನ್, ಹೇಮಂತ್, ಮಂಜು, ವಿಕ್ರಂ, ದಿವ್ಯಾ, ಪ್ರಿಯಾಂಕ

ಕಸುಗಾಯಿಯ ಒಗರು ಹಾಗೂ ತಾಜಾತನ ಗೋಲಿಸೋಡದ ಗುಣ. ಈ ಪಾನೀಯವನ್ನು ಕುಡಿದಾಗ ಒಂದು ರೀತಿಯ ಚೈತನ್ಯದ ಅನುಭವವಾಗುತ್ತದೆ. ‘ಗೋಲಿಸೋಡ’ ಚಿತ್ರದಲ್ಲೂ ‘ರಾ’ ಎನ್ನಬಹುದಾದ ಈ ತಾಜಾತನವಿದೆ. ಕಥೆಯಲ್ಲೂ ಚೈತನ್ಯವಿದೆ. ತಮಿಳಿನ ಯಶಸ್ವಿ ಚಿತ್ರ ‘ಗೋಲಿಸೋಡ’ವನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ ನಿರ್ದೇಶಕ ರಘುಜಯ.

ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಮೂಟೆ ಹೊತ್ತು ದಿನದ ಅನ್ನ ದುಡಿಯುವ ದುಬ್ಬ, ಮಂಜ, ಕ್ಯಾತ, ಚಿಕ್ಕ ಎಂಬ ನಾಲ್ಕು ಹುಡುಗರ ಕಥೆ ‘ಗೋಲಿಸೋಡ’ದಲ್ಲಿದೆ. ಹದಿನಾಲ್ಕು–ಹದಿನಾರು ವರ್ಷಗಳ ಈ ಅನಾಥ ಮಕ್ಕಳು ಮೂಟೆ ಹೊರುವುದರ ಹೊರತಾಗಿಯೂ ಇನ್ನೇನಾದರೂ ಮಾಡಬೇಕು ಎಂದುಕೊಳ್ಳುವಲ್ಲಿಂದ ಕಥೆ ಚುರುಕು ಪಡೆದುಕೊಳ್ಳುತ್ತದೆ.

ಮಾರುಕಟ್ಟೆಯ ಮುಖಂಡನಿಂದ ಚಿಕ್ಕ ಜಾಗ ಪಡೆದು ಅಲ್ಲಿ ‘ಪುಟ್ಟಕ್ಕ ಹೋಟೆಲ್’ ಶುರು ಮಾಡಿ, ಅದರಲ್ಲಿ ಹೊಸ ಬದುಕು ಕಂಡುಕೊಳ್ಳುವ ಜೊತೆಗೆ ಆವರೆಗೆ ಇರದ ಸಮಸ್ಯೆಗಳ ಮೂಟೆಗಳನ್ನೇ ಹುಡುಗರು ಮೈಮೇಲೆ ಎಳೆದುಕೊಳ್ಳುತ್ತಾರೆ. ಮುಖಂಡನ ಬಾಲಬಡುಕರಿಂದ ಹೋಟೆಲ್ ಅಧ್ವಾನವಾಗುತ್ತದೆ. ಹಲ್ಲುಕಚ್ಚಿ ಸಹಿಸಿಕೊಳ್ಳುವ ಮಕ್ಕಳ ತಾಳ್ಮೆಯೂ ಮೀರುತ್ತದೆ. ಆಗ ಆ ಮುಖಂಡ ಮತ್ತು ಮಕ್ಕಳ ನಡುವೆ ನೇರವಾಗಿಯೇ ಗುದ್ದಾಟಗಳು ಶುರುವಾಗುತ್ತವೆ. ‘ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲೇ ಹುಡುಕಬೇಕು’ ಎಂದು ಪಣ ತೊಡುವ ಈ ಹುಡುಗರು ಯಾವ ದಾರಿ ಕಂಡುಕೊಳ್ಳುತ್ತಾರೆ ಎಂಬುದು ಚಿತ್ರದಲ್ಲಿರುವ ಕೌತುಕ.

ದಿಕ್ಕುದೆಸೆ ಇಲ್ಲದ ಈ ಮಕ್ಕಳು ಸಣ್ಣ ಖುಷಿಯನ್ನೂ ಅನುಭವಿಸುವ, ತಮ್ಮವರಿಗಾಗಿ ಬದುಕುವ ಕ್ಷಣಗಳು ಪ್ರೇಕ್ಷಕನಿಗೆ ಖುಷಿಕೊಡಬಲ್ಲವು. ಹಾಗೆಯೇ ಚಿತ್ರದಲ್ಲಿ ಆಗಿಂದಾಗ ಬರುವ ಹೊಡೆದಾಟದ ದೃಶ್ಯಗಳು ಮನಸನ್ನು ಕದಡುತ್ತವೆ. ಕಥೆಯೇ ಮುಖ್ಯವಾಗಿರುವ ಚಿತ್ರಕಥೆಗೆ ವೇಗವಿದ್ದರೂ ಕಮರ್ಷಿಯಲ್ ಅಂಶವನ್ನು ತುರುಕಲೇಬೇಕು ಎಂದು ಮಾರುಕಟ್ಟೆಯಲ್ಲಿ ಚಿತ್ರೀಕರಿಸಿದ ರಾಗಿಣಿ–ಸಾಧುಕೋಕಿಲ ಅವರ ‘ವಿಶೇಷ’ ಹಾಡು ಬ್ರೇಕ್ ಹಾಕಿಬಿಡುತ್ತದೆ.

ಪುಟ್ಟಕ್ಕನಾಗಿ ತಾರಾ ಅನಾಥ ಮಕ್ಕಳನ್ನು ಪೊರೆಯುವಂತೆ ಚಿತ್ರವನ್ನೂ ಪೋಷಿಸಿದ್ದಾರೆ. ಚಂದನ್, ಹೇಮಂತ್, ಮಂಜು, ವಿಕ್ರಂ, ದಿವ್ಯಾ, ಪ್ರಿಯಾಂಕ ನಟನೆ ಭರವಸೆ ಮೂಡಿಸುತ್ತಾದೆ. ನಂದು ಅವರ ಸಾಹಸ ನಿರ್ದೇಶನದಲ್ಲಿ ವೈಭವೀಕರಿಸಿದ ಹೊಡೆದಾಟಗಳು ಇಲ್ಲದಿರುವುದು ಕುತೂಹಲಕರವಾಗಿದೆ. ಧಾಮು ನರವಲು ಛಾಯಾಗ್ರಹಣ ಚೆನ್ನಾಗಿದೆ. ಹಿನ್ನೆಲೆ ಸಂಗೀತ (ಸಾಧುಕೋಕಿಲ) ಹಾಗೂ ಹಾಡುಗಳಲ್ಲಿ (ಸಂಗೀತ ನಿರ್ದೇಶನ ರಾಜೇಶ ರಾಮನಾಥ್) ವಿಶೇಷವೇನಿಲ್ಲ. ಒಟ್ಟಿನಲ್ಲಿ ಮೂಲ ಚಿತ್ರಕ್ಕೆ ಚ್ಯುತಿ ಬಾರದಂತೆ ಹೆಚ್ಚು ಬದಲಾವಣೆ ಇಲ್ಲದೆ ಕನ್ನಡಕ್ಕೆ ತಂದ ನಿರ್ದೇಶಕರಿಗೆ ಎಷ್ಟು ಪ್ರಶಂಸೆ ಸಲ್ಲಬೇಕು ಎಂಬುದು ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT