ಬಂದ್ ಎನ್ನುವ ಮುದಿ ಪ್ರತಿಭಟನಾಸ್ತ್ರ

ಇದು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಸಾಲು ಸಾಲು ಬಂದ್ ಗಳ ಸರಿ-ತಪ್ಪುಗಳ ವಿಮರ್ಶೆಯಲ್ಲ.  ಈ ಕಾಲಘಟ್ಟದಲ್ಲಿ ನಿಂತು ಬಂದ್ ಎನ್ನುವ ಪರಿಕಲ್ಪನೆಯನ್ನು ಪ್ರತಿಭಟನೆಯ ಒಂದು ಅಸ್ತ್ರವಾಗಿ  ಹೀಗೂ ನೋಡಬೇಕು ಎನ್ನುವ ಒತ್ತಾಸೆ ಈ ಲೇಖನ.

ಬಂದ್ ಎನ್ನುವ ಮುದಿ ಪ್ರತಿಭಟನಾಸ್ತ್ರ

ಇದು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಸಾಲು ಸಾಲು ಬಂದ್ ಗಳ ಸರಿ-ತಪ್ಪುಗಳ ವಿಮರ್ಶೆಯಲ್ಲ.  ಈ ಕಾಲಘಟ್ಟದಲ್ಲಿ ನಿಂತು ಬಂದ್ ಎನ್ನುವ ಪರಿಕಲ್ಪನೆಯನ್ನು ಪ್ರತಿಭಟನೆಯ ಒಂದು ಅಸ್ತ್ರವಾಗಿ  ಹೀಗೂ ನೋಡಬೇಕು ಎನ್ನುವ ಒತ್ತಾಸೆ ಈ ಲೇಖನ. 

ದೇಶದಲ್ಲಿ ಮತ್ತೆ ಮತ್ತೆ ಬಂದ್‌ಗೆ ಕರೆ ನೀಡುವವರೆಲ್ಲಾ ಬಂದ್ ಎನ್ನುವುದು ಒಂದು ಮಹಾನ್ ಪ್ರತಿಭಟನಾಸ್ತ್ರ ಎಂದುಕೊಂಡಿರಬಹುದು ಅಥವಾ ಹಾಗೆಂದು ಜನರನ್ನು ನಂಬಿಸುವ ಪ್ರಯತ್ನದಲ್ಲಿರಬಹುದು. ವಾಸ್ತವ ಬೇರೆ. ಸ್ವಲ್ಪ ಆಳಕ್ಕಿಳಿದು ನೋಡಿದರೆ ಬಂದ್ ಎನ್ನುವುದು ಅನಪೇಕ್ಷಣೀಯ, ಅನುಚಿತ, ಅಪಕ್ವ, ಅರ್ಥಹೀನ ಹಾಗೂ ಅಶಕ್ತವಾದ ಪ್ರತಿಭಟನಾ ಮಾರ್ಗ. ಹೀಗೆ ಹೇಳಲು ಕಾರಣ ಇಷ್ಟೇ.

ಯಾವ ಉದ್ದೇಶಕ್ಕಾಗಿ ಬಂದ್ ಹಮ್ಮಿಕೊಳ್ಳಲಾಗುತ್ತದೋ ಆ ಉದ್ದೇಶ ಈಡೇರುವ ಸಾಧ್ಯತೆ ಬಂದ್‌ನಿಂದಾಗಿ ದುರ್ಬಲವಾಗುತ್ತದೆ. ಮಾತ್ರವಲ್ಲ, ಹೋರಾಟ ಯಾವುದೇ ಇರಲಿ, ಅದರ ಅಂಗವಾಗಿ ಬಂದ್‌ನ ಪ್ರವೇಶ ಆದ ತಕ್ಷಣ ಆ ಹೋರಾಟವೇ ಸತ್ವ ಕಳೆದುಕೊಳ್ಳುತ್ತದೆ. ಬಂದ್‌ನ ಸ್ವರೂಪವೇ ಹಾಗೆ. ಅದು ಹೀಗೆಲ್ಲಾ ಆಗುವಂತೆ ಮಾಡುತ್ತದೆ.

ಬಂದ್ ನಡೆಸುವುದರ ಮೂಲಕ ಯಾವುದೇ ಬೇಡಿಕೆ ಈಡೇರಿಸಿಕೊಳ್ಳುವುದು ಕಷ್ಟ ಯಾಕೆಂದರೆ, ಬಂದ್ ಹೋರಾಟದ ಅಂತಿಮ ಘಟ್ಟ. ಇದರಿಂದಾಚೆಗೆ ಏನೂ ಮಾಡಲಾಗುವುದಿಲ್ಲ ಎನ್ನುವುದು ಸರ್ಕಾರಗಳಿಗೆ ತಿಳಿದಿರುವ ಕಾರಣ ಒಮ್ಮೆ ಬಂದ್ ನಡೆಸಿಬಿಡಲಿ, ಆ ನಂತರ ಎಲ್ಲವೂ ತಣ್ಣಗಾಗುತ್ತದೆ ಎಂದು ಸರ್ಕಾರಗಳು ಭಾವಿಸುತ್ತವೆ.

ಹಾಗೆಯೇ, ಯಾವುದೇ ಹೋರಾಟ ಯಶಸ್ವಿಯಾಗಬೇಕಾದರೆ ಅದಕ್ಕೆ ಬೇಕಿರುವುದು ಸಾರ್ವಜನಿಕ ಬೆಂಬಲ. ಒಮ್ಮೆ ಹೋರಾಟ ಬಂದ್‌ನ ಸ್ವರೂಪ ಪಡೆದುಕೊಂಡಾಕ್ಷಣ ಅದು ಸಂಪೂರ್ಣವಾಗಿ ಸಾರ್ವಜನಿಕ ಬೆಂಬಲ ಮತ್ತು ವಿಶ್ವಾಸವನ್ನು ಕಳೆದುಕೊಂಡು ಬಿಡುತ್ತದೆ. ಬಂದ್‌ಗೆ ಕರೆ ಕೊಡುವ ಯಾವ ಹೋರಾಟಗಾರರೂ ಜನರ ಕಣ್ಣಲ್ಲಿ ಹೋರಾಟಗಾರರಾಗಿ ಕಾಣುವುದಿಲ್ಲ. ಬಂದ್ ಜನರಲ್ಲಿ ಭಯ ಹುಟ್ಟಿಸುತ್ತದೆ. ಜನ ಈ ಭಯದ ಸೃಷ್ಟಿಯ ಮೂಲವನ್ನು ಹೋರಾಟಗಾರರಲ್ಲಿ ಮತ್ತು ಹೋರಾಟದಲ್ಲಿ ಕಾಣತೊಡಗುತ್ತಾರೆ. ಅಲ್ಲಿಗೆ ಹೋರಾಟ ದುರ್ಬಲವಾದಂತೆ.

ಬಂದ್‌ನಲ್ಲಿ ಜನ ಸ್ವಯಂ ಸ್ಫೂರ್ತಿಯಿಂದ ಪಾಲ್ಗೊಂಡರು ಎ೦ದು ಟಿವಿ ಚಾನೆಲ್‌ಗಳು ಹೇಳುವುದು ಅಪ್ಪಟ ಸುಳ್ಳು. ಜನ ಬಂದ್‌ನಲ್ಲಿ ಪಾಲ್ಗೊಳ್ಳುವುದು ಭಯದಿಂದ.ಭಯದಿಂದಾಗಿ ‘ಸಂಪೂರ್ಣ’ವಾಗುವ ಬಂದ್ ಅನ್ನು ಮಾಧ್ಯಮಗಳು ‘ಯಶಸ್ವೀ ಬಂದ್’ ಎಂದು ಹೊಗಳುತ್ತವೆ. ಅದು ಮಾಧ್ಯಮಗಳ ಯೋಚನಾಶೂನ್ಯತೆಯನ್ನು ತೋರಿಸುತ್ತದೆ. ಇನ್ನು ಹೋರಾಟಗಾರರಿಗೆ ಬಂದ್ ಎನ್ನುವುದು ಸುಲಭವಾಗಿ ಎಟಕುವ ಸಾಧನ. ಜನ ಹೇಗೂ ಭಯಗ್ರಸ್ತರಾಗಿ ಬಂದ್‌ನಲ್ಲಿ ‘ಪಾಲ್ಗೊಳ್ಳುವ’ ಕಾರಣ ಹೋರಾಟಗಾರರು ಹೋರಾಟದ ಹೆಸರಲ್ಲಿ ಹೆಚ್ಚಿಗೆ ಶ್ರಮ ಪಡುವ ಅಗತ್ಯ ಇರುವುದಿಲ್ಲ. ಹೋರಾಟದ ಉದ್ದೇಶವನ್ನು ಜನರಿಗೆ ಮಾನವರಿಕೆ ಮಾಡುವ ಕಷ್ಟ ಅಲ್ಲಿ ಇರುವುದಿಲ್ಲ.

ಯಾವುದು ನ್ಯಾಯ, ಯಾವುದು ಅನ್ಯಾಯ, ಯಾರಿಂದ, ಯಾವ ಕಾರಣಕ್ಕೆ ಅನ್ಯಾಯ ಇತ್ಯಾದಿಗಳನ್ನು ಜನರಿಗೆ ತಿಳಿ ಹೇಳಿ ಅವರನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಅಗತ್ಯವೇನೂ ಇರುವುದಿಲ್ಲ. ಅದಕ್ಕೆ ಬಂದ್‌ಗೆ ಕರೆ ನೀಡಲು ಈ ರೀತಿಯ ಪೈಪೋಟಿಯನ್ನು ನಾವು ಕಾಣುತ್ತಿರುವುದು.

ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಲು ಬಂದ್ ಬಿಟ್ಟರೆ ಬೇರೆ ಮಾರ್ಗವಿಲ್ಲ ಎನ್ನುವ ಕಾರಣಕ್ಕೆ ಬಂದ್ ಅನಿವಾರ್ಯ ಎಂದು  ಪ್ರಾಮಾಣಿಕವಾಗಿ ನಂಬಿರುವ ಇನ್ನು ಕೆಲವರು ಮನಸ್ಸಿಲ್ಲದ ಮನಸ್ಸಿನಿಂದ ಅದಕ್ಕೆ ಬೆಂಬಲ ನೀಡುತ್ತಾರೆ.  ಅಂತಹವರು ತಮ್ಮ ನಿಲುವನ್ನೊಮ್ಮೆ ಪುನರ್ ಪರಿಶೀಲಿಸುವ ಅಗತ್ಯವಿದೆ. ಯಾಕೆಂದರೆ ಬಂದ್ ಎನ್ನುವುದು ಅಹಿಂಸಾತ್ಮಕವೂ ಅಲ್ಲ ಅನಿವಾರ್ಯವೂ ಅಲ್ಲ.

ಈಗಾಗಲೇ ಮೇಲೆ ಹೇಳಿದಂತೆ ಬಂದ್ ಕರೆಯಲ್ಲೇ ಒತ್ತಾಯ ಮತ್ತು ಬೆದರಿಕೆ ಅಂತರ್ಗತವಾಗಿರುವ ಕಾರಣ ಅತ್ಯಂತ ಶಾಂತಿಯುತವಾದ ಬಂದ್ ಕೂಡಾ ಹಿಂಸೆಯ ತಳಹದಿಯಲ್ಲೇ ಕಟ್ಟಲ್ಪಟ್ಟಿರುತ್ತದೆ. ಇನ್ನು ಬಂದ್ ಅನಿವಾರ್ಯವಲ್ಲ. ಯಾಕೆಂದರೆ, ಬಂದ್‌ನಿಂದ ಯಾವ ಪರಿಣಾಮವನ್ನು, ಒತ್ತಡವನ್ನು ಹೇರಬಹುದೋ ಅದನ್ನು ಪ್ರತಿಭಟನೆಯ ಇತರ ಹಾದಿಗಳನ್ನು ಅನುಸರಿಸುವುದರ ಮೂಲಕವೂ ಮಾಡಬಹುದಾಗಿದೆ.

ಆದರೆ ಅಂತಹ ಮಾರ್ಗಗಳನ್ನು ಕಾಲಕಾಲಕ್ಕೆ ಆವಿಷ್ಕರಿಸಬೇಕಾಗುತ್ತದೆ, ಅದರ ಬಗ್ಗೆ ಯೋಚಿಸಬೇಕಾಗುತ್ತದೆ, ಜನರನ್ನು ಅದಕ್ಕೆ ಒಪ್ಪಿಸಬೇಕಾಗುತ್ತದೆ. ಅದನ್ನೆಲ್ಲಾ ಮಾಡುವ ಹೋರಾಟಗಾರರು ಇಲ್ಲದ ಕಾರಣಕ್ಕೆ ಬಂದ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಬಂದ್ ಹೇರುವುದು ಸಂವಿಧಾನಬಾಹಿರ ಎಂದು ಕೇರಳ ಹೈಕೋರ್ಟು 1997 ರಲ್ಲಿಯೇ ತೀರ್ಪು ನೀಡಿತ್ತು. ಮುಂದೆ ಅದನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿಯಿತು.

ಇದಲ್ಲದೆ ಕಲ್ಕತ್ತಾ ಹೈಕೋರ್ಟು, ಗುವಾಹಟಿ  ಹೈಕೋರ್ಟುಗಳು ಕೂಡಾ ಬಂದ್ ನಡೆಸುವುದಕ್ಕೆ ಸಾಂವಿಧಾನಿಕವಾಗಿ ಯಾರಿಗೂ ಹಕ್ಕಿಲ್ಲ ಎನ್ನುವ ಅಂಶವನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಎತ್ತಿಹಿಡಿದಿವೆ. ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಕೇರಳ ಹೈಕೋರ್ಟು ತೀರ್ಪಿನಲ್ಲಿ ಬಂದ್ ಮತ್ತು ಮುಷ್ಕರಗಳು ಬೇರೆ ಬೇರೆ ಎಂದೂ, ಮುಷ್ಕರ ನಡೆಸುವುದಕ್ಕೆ ಸಾಂವಿಧಾನಿಕವಾಗಿ ಇರುವ ಹಕ್ಕುಗಳನ್ನು ಬಳಸಿಕೊಂಡು ಬಂದ್ ಹೇರುವಂತಿಲ್ಲ ಎಂದೂ ಹೇಳಿದೆ.

ಮುಷ್ಕರ ಯಾವುದೊ ಒಂದು ಸಂಸ್ಥೆಯ, ಯಾವುದೋ ಒಂದು ಉದ್ದಿಮೆಯ ಅಥವಾ ಸರ್ಕಾರದ ಯಾವುದೋ ನಿರ್ದಿಷ್ಟ ನೀತಿಯನ್ನು ಪ್ರತಿಭಟಿಸಲು ಜನರಿಗೆ ಇರುವ ಹಕ್ಕು.ಇದನ್ನು ಬಳಸಿಕೊಂಡು ನಾಡಿನ ಜನಜೀವನವೇ ಸ್ತಬ್ಧವಾಗುವಂತೆ ಬಂದ್ ಹೇರುವುದು ಇನ್ನೊಬ್ಬರ ಸ್ವಾತಂತ್ರ್ಯ ಹರಣಕ್ಕೆ ಹಾದಿ ಮಾಡಿಕೂಡುವ ಕಾರಣ ಅದು ಸಾಂವಿಧಾನಿಕವಾಗಿ ಸಮ್ಮತವಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಕೇರಳ ಹೈಕೋರ್ಟ್ ಈ ತೀರ್ಪು ನೀಡಿದಾಗ ಅದನ್ನು ಆ ರಾಜ್ಯದ ಕಮ್ಯುನಿಸ್ಟರಷ್ಟೇ ವಿರೋಧಿಸಿದ್ದಲ್ಲ; ಅಲ್ಲಿನ ಕಾಂಗ್ರೆಸ್ ನಾಯಕರು ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದರು.ಕೇರಳದ ಇಡೀ ರಾಜಕೀಯವೇ ನಿಂತಿರುವುದು ಬಂದ್ ಮತ್ತು ಹರತಾಳಗಳಲ್ಲಿ. ಇದು ತಪ್ಪು ಎ೦ದು ನ್ಯಾಯಾಲಯಗಳು  ಸಾರಿ ಹೇಳಿದ ನಂತರ ಅಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂದಿತ್ತು.

ಈ ಮಧ್ಯೆ ಸುಪ್ರೀಂ ಕೋರ್ಟ್ ಉಲ್ಟಾ ಹೊಡೆಯಿತು. 2009ರಲ್ಲಿ ತಮಿಳುನಾಡಿನ  ಪ್ರಕರಣವೊಂದನ್ನು ಇತ್ಯರ್ಥಪಡಿಸುವಾಗ ಪ್ರಜಾತಂತ್ರದಲ್ಲಿ ಈ ರೀತಿಯ ಪ್ರತಿಭಟನೆಗಳಿಗೂ ಆಸ್ಪದವಿದೆ ಎಂದು ಬಿಟ್ಟಿತು. ‘ಹಾಗಾದರೆ ಈ ನ್ಯಾಯಾಲಯ ಹಿಂದೆ ನೀಡಿದ ತೀರ್ಪಿನ ತರ್ಕ ಈಗ ಏನಾಯಿತು ಸ್ವಾಮೀ’ ಎಂದು  ವಕೀಲರು ಕೇಳಿದ್ದನ್ನು ಸುಪ್ರೀಂ ಕೋರ್ಟು ಕಿವಿಗೆ ಹಾಕಿಕೊಳ್ಳಲಿಲ್ಲ.

ವಿಚಿತ್ರ ಎಂದರೆ ಈ ಉಲ್ಟಾ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠದ ಮುಖ್ಯಸ್ಥರಾಗಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿಗಳು,  ಬಂದ್ ಸಂವಿಧಾನಬಾಹಿರ ಎಂಬ ತೀರ್ಪು ನೀಡಿದ ಕೇರಳ ಹೈಕೋರ್ಟಿನ ನ್ಯಾಯಪೀಠದಲ್ಲಿಯೂ ಇದ್ದವರು! ಸುಪ್ರೀಂ ಕೋರ್ಟ್ ತೀರ್ಪುಗಳು ಸರಿಯಾಗಿರಬೇಕೆಂದೇನೂ ಇಲ್ಲ, ಆದರೂ ಅವು ಅಂತಿಮ ಅಂತ ಒಪ್ಪಿಕೊಳ್ಳಬೇಕಲ್ಲಾ? ಮೊನ್ನೆ ಕರ್ನಾಟಕದಲ್ಲಿ ಕಂಡಂತೆ ಈಗ ತೀರ್ಪಿನ ಪರಿಣಾಮ  ಸುಪ್ರೀಂ ಕೋರ್ಟ್ ನ ಬುಡಕ್ಕೆ ಬಂದಿದೆ.

ಬಂದ್‌ನ ದುಷ್ಪರಿಣಾಮಗಳು ಏನೇನು ಎನ್ನುವುದಕ್ಕೆ ಕೇರಳ ಒಳ್ಳೆಯ ಉದಾಹರಣೆ. ಒಂದು ಕಾಲಕ್ಕೆ ಇಡೀ ದೇಶಕ್ಕೆ ಸಾಮಾಜಿಕ-ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ಕೇರಳ ಈಗ ಮಾದರಿಯಾಗಿ ಉಳಿದಿಲ್ಲ. ಮಾದರಿಯಾಗಿದ್ದ ಕಾಲಕ್ಕೂ ಆ ರಾಜ್ಯದಲ್ಲಿ ಇದ್ದದ್ದು ‘ಮನಿ ಆರ್ಡರ್ ಆರ್ಥಿಕತೆ’. ದಿನ ಬೆಳಗಾದರೆ ಹರತಾಳ ಘೋಷಣೆಯಾಗುವ ಸ್ಥಿತಿಯಲ್ಲಿ ಅಲ್ಲಿ ಉದ್ಯಮಗಳು ಬೆಳೆಯಲಿಲ್ಲ.

ವಿದ್ಯಾವಂತ ಯುವಕ-ಯುವತಿಯರೆಲ್ಲಾ ವಲಸೆ ಹೋದರು. ಕೇರಳ ರಾಜ್ಯದ ಯಾವುದೇ ರಸ್ತೆಯಲ್ಲಿ ಸಂಚರಿಸಿದರೂ ಇಕ್ಕೆಲಗಳಲ್ಲಿ ಸುಂದರವಾದ ಆರ್‌ಸಿಸಿ ಮನೆಗಳು ಕಾಣುತ್ತವೆ. ಅ೦ತಹ ಅರ್ಧಕ್ಕರ್ಧ ಮನೆಗಳಲ್ಲಿ ಇರುವುದು ಅರೆ ಸಂಸಾರಗಳು. ಯಾಕೆಂದರೆ ಅಲ್ಲಿನ ದುಡಿಯುವ ಪ್ರಾಯದ ಗಂಡಸರೆಲ್ಲಾ ಗಲ್ಫ್ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರು ಹೆಂಡತಿ ಮಕ್ಕಳ ಮುಖ ನೋಡುವುದು ಎರಡೋ-ಮೂರೋ ವರ್ಷಗಳಿಗೊಮ್ಮೆ.

ರಾಜ್ಯದಲ್ಲಿ ದುಡಿಯುವ ವರ್ಗಗಳ ಶೋಷಣೆಯ ವಿರುದ್ಧ ಮುಷ್ಕರ, ಹರತಾಳ, ಬಂದ್ ಇತ್ಯಾದಿ ದಿನಂಪ್ರತಿ ನಡೆದು ಉದ್ಯಮಗಳು ತಲೆಯೆತ್ತದಂತಾದ ಸ್ಥಿತಿಯಲ್ಲಿ ಗಲ್ಫ್ ಸೇರಿದ ಕೇರಳಿಗರ ಪೈಕಿ ಬಹುತೇಕ ಮಂದಿ ಆ ಮರಳುಗಾಡು ದೇಶಗಳಲ್ಲಿ ಊಹಿಸಲೂ ಸಾಧ್ಯವಾಗದ ದಯನೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಕೇರಳದಲ್ಲಿ ಬಂದ್ ಆಚರಿಸುತ್ತಾ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಯುವ ನಾಯಕರಿಗೆ ಮರೆತೇ ಹೋಗುತ್ತದೆ.

ಕೊಲ್ಲಿ ರಾಷ್ಟ್ರಗಳಲ್ಲಿ ಕೇರಳದ ದುಡಿಯುವ ವರ್ಗ  ಅನುಭವಿಸುತ್ತಿರುವ ಕಷ್ಟಕೋಟಲೆಗಳ ಬಗ್ಗೆ ಮಲಯಾಳಿಗಳು ‘ಗಲ್ಫ್ ಸ್ಟೋರಿ’ಯಂತಹ ಅದ್ಭುತ ಸಿನಿಮಾ ಮಾಡಿದ್ದಾರೆ; ‘ಆಡು ಜೀವಿತಂ’ನಂತಹ ಮನಮುಟ್ಟುವ ಕಾದಂಬರಿ (ಲೇಖಕ ಬೆನ್ಯಾಮಿನ್) ಸೃಷ್ಟಿಸಿದ್ದಾರೆ; ‘ಮಿಥುನಮ್’ ಎನ್ನುವ ಸಾಂಸಾರಿಕ ಕಥಾವಸ್ತುವುಳ್ಳ  ಸಿನಿಮಾದ ಕ್ಲೈಮಾಕ್ಸ್ ನಲ್ಲಿ ನಟ  ಮೋಹನ್ ಲಾಲ್  ಹೇಳುವ ಒಂದು ಸುದೀರ್ಘ ಡೈಲಾಗ್ ಕೇರಳೀಯರ ಮುಷ್ಕರ ಸಂಸ್ಕೃತಿಯಿಂದಾಗಿ ಉದ್ಯಮಗಳು ಸೊರಗಿದ ಬಗ್ಗೆ ಬರೆಯಬಹುದಾದ ಒಂದು ಮಹಾಪ್ರಬಂಧಕ್ಕೆ ಸಮ.

ಬಂದ್ ಸರಮಾಲೆ ಕೇರಳದಲ್ಲಿ ಉದ್ಯಮಗಳ ಬೆಳವಣಿಗೆಯನ್ನು ತಡೆಯಿತು ಎನ್ನುವುದಕ್ಕಿಂತಲೂ ಮುಖ್ಯವಾದ ವಿಚಾರ ಅದು ಅಲ್ಲಿನ ಜನಸಾಮಾನ್ಯರ ದೈನಂದಿನ ಬದುಕನ್ನು ದುರ್ಬರಗೊಳಿಸುತ್ತದೆ ಎನ್ನುವುದು. ಯಾವ ದಿನ, ಯಾವ ಕ್ಷಣದಲ್ಲಾದರೂ ಅಲ್ಲಿ ಹರತಾಳ ಅಥವಾ ಬಂದ್ ಘೋಷಣೆಯಾಗಿ ಜೀವನ ಅಸ್ತವ್ಯಸ್ತವಾಗಬಹುದು. ಬಂದ್ ಯಾವಾಗಲೂ ಹಾಗೆ. ಯಾವ ವರ್ಗಗಳ ಹಿತರಕ್ಷಣೆಯ ಹೆಸರಲ್ಲಿ ಅದನ್ನು ನಡೆಸಲಾಗುತ್ತದೆಯೋ, ಅದೇ ವರ್ಗಗಳನ್ನು ಅದು ಕ್ರೂರವಾಗಿ ಬಾಧಿಸುವುದು.  ಬಂದ್ ಸಂಸ್ಕೃತಿಯ ಆಕರ್ಷಣೆಗೆ ಪರವಶರಾಗುವ ಹೋರಾಟಗಾರರು ಕೇರಳದಿಂದ ಕಲಿಯುವುದು ಬಹಳಷ್ಟಿದೆ.

ಇಲ್ಲಿ ಕೇರಳದ ಹೋಲಿಕೆಗೆ ಆಕ್ಷೇಪಗಳು ಬರಬಹುದು. ಎದ್ದರೆ ಬಿದ್ದರೆ ಬಂದ್ ನಡೆಯುವ ಕೇರಳಕ್ಕೂ ಎಂದೋ ಒಮ್ಮೆ ಮತ್ತೆ ಮತ್ತೆ ಬಂದ್ ಆಚರಿಸುವಂತಾಗಿ ಬಂದ  ಮತ್ಯಾವುದೋ ರಾಜ್ಯಕ್ಕೂ ಏನು ಹೋಲಿಕೆ ಎಂದು ಕೇಳಬಹುದು. ಅಂತಹ ಪ್ರಶ್ನೆಗಳಿಗೆ ಇಷ್ಟೇ ಉತ್ತರ: ಈ ಕಾಲಕ್ಕೆ ಅಪ್ರಸ್ತುತವೂ, ಜೀವ ವಿರೋಧಿಯೂ ಆದ ಬಂದ್‌ನಂತಹ ಹೋರಾಟದ ಅಸ್ತ್ರವನ್ನು ದಿನಾ ಪ್ರಯೋಗಿಸಿದರೂ ತಪ್ಪು, ಶತಮಾನಕ್ಕೊಮ್ಮೆ ಬಳಸಿದರೂ ತಪ್ಪು.

ಹಿಂದೊಮ್ಮೆ ಟಿವಿ ಚರ್ಚೆಯಲ್ಲಿ ಪಾಲ್ಗೊ೦ಡ ಬಿಜೆಪಿಯ ಮಹಿಳಾ ವಕ್ತಾರರೊಬ್ಬರು ಬ೦ದ್ ಅನ್ನು ವಿರೋಧಿಸುತ್ತಿರುವವರು ಸ್ವಾತ೦ತ್ರ್ಯ ಸ೦ಗ್ರಾಮವನ್ನೊಮ್ಮೆ ಓದಲಿ ಎ೦ದು ಹೇಳಿದ್ದಾರೆ. ಹೌದು ಸ್ವಾತ೦ತ್ರ್ಯ ಸ೦ಗ್ರಾಮವನ್ನು ಓದಬೇಕು. ಓದಿದರೆ ಸಾಲದು.

ಅದನ್ನು ಆ ಕಾಲದ ಸ್ಥಿತಿಯಲ್ಲಿ ಅರ್ಥೈಸಬೇಕು ಕೂಡಾ. ಬ್ರಿಟಿಷರ ಆಳ್ವಿಕೆಯಲ್ಲಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತುವುದಕ್ಕೆ ಸ೦ವಿಧಾನಬದ್ಧ ಹಕ್ಕುಗಳೂ ಇರಲಿಲ್ಲ, ಸ೦ಸತ್ತೂ ಇರಲಿಲ್ಲ. ಆದುದರಿ೦ದ ‘ನಾವು ನಿಮ್ಮೊ೦ದಿಗೆ ಸಹಕರಿಸುವುದಿಲ್ಲ’  ಎನ್ನುವ ಸ೦ದೇಶವನ್ನು ಸರ್ಕಾರಕ್ಕೆ ನೀಡಲು ಗಾ೦ಧೀಜಿ ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಕೆಲವೊಮ್ಮೆ  ‘ಏನೂ ಮಾಡಬೇಡಿ, ಸುಮ್ಮನಿದ್ದುಬಿಡಿ’ ಅ೦ತ  ಜನರಿಗೆ ಕರೆ ನೀಡುತಿದ್ದರು. ಅದು ಬ೦ದ್ ಆಗುತ್ತಿತ್ತು. ಈಗ ಬ೦ದ್ ಮೂಲಕವೇ ಹೋರಾಡಬೇಕಿಲ್ಲ.

ಸಮಸ್ಯೆಗಳು ನಿರ೦ತರವಾಗಿದ್ದಲ್ಲಿ ಪ್ರತಿಭಟನೆ, ಹೋರಾಟ ಇತ್ಯಾದಿಗಳೂ ನಿರ೦ತರವಾಗಿರಬೇಕು. ಬ೦ದ್ ಹೇರುವುದು ಹೋರಾಟವಾಗುವುದಿಲ್ಲ. ಅದು ಹೋರಾಟವನ್ನು ಕೊಲ್ಲುವ ಮಾರ್ಗ. ಅದು ಹೋರಾಟಗಾರರ ಯೋಚನಾ ದಾರಿದ್ರ್ಯದ ಮತ್ತು ಪಲಯನವಾದದ ಸಂಕೇತ. ಮತ್ತೆ ಮತ್ತೆ ಬಂದ್‌ನ ವಿಷಯ ಬಂದಾಗ ಎಡ-ನಡು-ಬಲ ಭೇದವಿಲ್ಲದೆ, ಈ ದೇಶದ ಸಾಹಿತಿಗಳು, ಚಿಂತಕರು; ರಾಜಕೀಯೋದ್ಯಮಿಗಳು, ಚಿತ್ರೋದ್ಯಮಿಗಳು, ಧರ್ಮೋದ್ಯಮಿಗಳು, ಹೋರಾಟೋದ್ಯಮಿಗಳು, ಪತ್ರಿಕೋದ್ಯಮಿಗಳು, ಹೀಗೆ ಸರ್ವರೂ ‘ಮಂದೆಯಲಿ ಒಂದಾಗಿ, ಸ್ವಂತತೆಯೇ ಬಂದಾಗಿ’  ಬೆಂಬಲಿಸುವುದನ್ನು ನೋಡುತ್ತಿದ್ದರೆ ನಾಡು ಅಪಾಯದಲ್ಲಿದೆ ಎನಿಸುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ನಲಪಾಡ್‌ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು

ಅನುರಣನ
ನಲಪಾಡ್‌ ಪ್ರಕರಣ: ಪ್ರಶ್ನಿಸಬೇಕಾದವರೆಲ್ಲಾ ಪ್ರಶ್ನಾರ್ಹರು

27 Feb, 2018
ಪ್ರಶ್ನಿಸಬೇಕಾದೆಡೆ ಪ್ರಶಂಸೆಗಿಳಿಯುವ ಪತ್ರಿಕೋದ್ಯಮ

ಅನುರಣನ
ಪ್ರಶ್ನಿಸಬೇಕಾದೆಡೆ ಪ್ರಶಂಸೆಗಿಳಿಯುವ ಪತ್ರಿಕೋದ್ಯಮ

13 Feb, 2018
ದಿನಾ ಕೊಂದರೂ ಸಾಯದ ಗಾಂಧಿ

ಅನುರಣನ
ದಿನಾ ಕೊಂದರೂ ಸಾಯದ ಗಾಂಧಿ

30 Jan, 2018
ಮೈ ಲಾರ್ಡ್ಸ್! ಸತ್ಯ ಇಷ್ಟೇನಾ?

ಅನುರಣನ
ಮೈ ಲಾರ್ಡ್ಸ್! ಸತ್ಯ ಇಷ್ಟೇನಾ?

16 Jan, 2018
ಯಾರಿಗೋ ಜ್ವರ, ಸೆಕ್ಯುಲರಿಸಂಗೆ ಬರೆ

ಅನುರಣನ
ಯಾರಿಗೋ ಜ್ವರ, ಸೆಕ್ಯುಲರಿಸಂಗೆ ಬರೆ

2 Jan, 2018