ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.20ರ ವರೆಗೆ ತಮಿಳುನಾಡಿಗೆ 12,000 ಕ್ಯೂಸೆಕ್ ನೀರು ಹರಿಯಬಿಡಲು ಸುಪ್ರೀಂ ಆದೇಶ

Last Updated 12 ಸೆಪ್ಟೆಂಬರ್ 2016, 8:30 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಇದೇ 5ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಲಾಗಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠವು ಉಭಯ ರಾಜ್ಯಗಳ ವಕೀಲರ ವಾದವನ್ನು ಆಲಿಸಿದೆ. ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇದೆ. ಒಮ್ಮೆ ನೀರು ಬಿಟ್ಟರೆ ಮತ್ತೆ ಬರುವುದಿಲ್ಲ ಎಂದು ಕರ್ನಾಟಕದ ಪರ ಫಾಲಿ ನಾರಿಮನ್ ವಾದ ಮಂಡಿಸಿದ್ದಾರೆ.

ತಮಿಳುನಾಡು ಪರ ವಾದ ಮಂಡಿಸಿದ ನ್ಯಾಯವಾದಿ ಶೇಖರ್ ನಫಡೆ ಅವರು, ನ್ಯಾಯಪೀಠವು ಏಕ ಪಕ್ಷೀಯ ನಿರ್ಧಾರ ಕೈಗೊಂಡಿದೆ. ಎರಡೂ ರಾಜ್ಯಗಳಿಗೆ ಸಮಾನವಾಗಿ ನೀರು ಹಂಚಬೇಕು. ತಮಿಳುನಾಡಿನಲ್ಲಿ ಕೃಷಿಗೆ ಮತ್ತು ಕುಡಿಯಲು ನೀರಿಲ್ಲ ಎಂದು ವಾದಿಸಿದ್ದಾರೆ.

ಆದಾಗ್ಯೂ, ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಖಂಡಿಸಿದ ನ್ಯಾಯಪೀಠವು, ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಬದ್ಧವಾಗಿರಬೇಕು. ಕೋರ್ಟ್ ತೀರ್ಪು ಪಾಲಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೇಳಿದೆ.

ವಾದಗಳನ್ನು ಆಲಿಸಿದ ನಂತರ ಆದೇಶ ನೀಡಿದ ನ್ಯಾಯಾಲಯವು ಕರ್ನಾಟಕ  ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್  ನೀರನ್ನು ಸೆಪ್ಟೆಂಬರ್ 20ರವರೆಗೆ ಹರಿಯಬಿಡಬೇಕೆಂದು ಆದೇಶಿಸಿದೆ.

ಸೆ.5 ರಂದು ನೀಡಿದ ತೀರ್ಪಿನಲ್ಲಿ ಕರ್ನಾಟಕ 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ ನೀರು ಹರಿ ಬಿಡುವಂತೆ ಹೇಳಲಾಗಿತ್ತು. ಆದರೆ ಇವತ್ತು ನೀಡಿದ ತೀರ್ಪಿನ ಪ್ರಕಾರ ಸೆ. 20ರ ವರೆಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ ನೀರು ಬಿಡಬೇಕಾಗಿದೆ.

ಕಾವೇರಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಸೆ. 20ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT