ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಸ್ತುವಾರಿ ಸಮಿತಿ ಸಭೆ ಸೆ. 19ಕ್ಕೆ ಮುಂದೂಡಿಕೆ...

Last Updated 12 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಯಥೇಚ್ಛವಾಗಿ ನೀರಿನ ಸಂಗ್ರಹವಿದ್ದರೂ ತನ್ನ ಜಲಾಶಯಗಳಲ್ಲಿ ನೀರೇ ಇಲ್ಲ ಎಂದು ತೋರಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕವು ಲಭ್ಯ ನೀರನ್ನು ನೀರಾವರಿ ಸೇರಿದಂತೆ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ತಮಿಳುನಾಡು ದೂರಿದೆ.

ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್‌ ನೇತೃತ್ವದಲ್ಲಿ ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಪಿ.ರಾಮಮೋಹನ ರಾವ್‌ ಈ ರೀತಿಯ ಆರೋಪ ಮಾಡಿದರು.
ಇದರಿಂದಾಗಿ, ನೀರಿನ ಕುರಿತ ಸಮಗ್ರ ಮಾಹಿತಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಕಾವೇರಿ ಕಣಿವೆ ಪ್ರದೇಶ ವ್ಯಾಪ್ತಿಯ ಎಲ್ಲ ನಾಲ್ಕೂ ರಾಜ್ಯಗಳಿಗೆ ಸೂಚಿಸಿದ ಸಮಿತಿಯು ಸೆ. 19ಕ್ಕೆ ಸಭೆಯನ್ನು ಮುಂದೂಡಿತು.

ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಯ ಪ್ರಮಾಣ, ಜಲಾಶಯಗಳ ಒಳಹರಿವು, ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಇದುವರೆಗೆ ಬಳಕೆಯಾದ ನೀರಿನ ಪ್ರಮಾಣ, ಕಾವೇರಿ ನದಿ ಪಾತ್ರದ ಕೆಳ ಭಾಗದ ರಾಜ್ಯಗಳಿಗೆ ಹರಿಬಿಡಲಾದ ನೀರಿನ ಪ್ರಮಾಣ,  ಮಳೆಯ ಸಾಧ್ಯಾಸಾಧ್ಯತೆ, ಇನ್ನೂ ಲಭ್ಯವಾಗಲಿರುವ ನೀರಿನ ಪ್ರಮಾಣ, ಕುಡಿಯಲು ಮತ್ತು ನೀರಾವರಿಗೆ ಅಗತ್ಯದ ಪ್ರಮಾಣ, ಮಳೆಯ ಕೊರತೆ, ಸಂಕಷ್ಟದ ಸ್ಥಿತಿಗತಿ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡ ಮಾಹಿತಿಯನ್ನು ನಾಲ್ಕು  ದಿನಗಳಲ್ಲಿ ನೀಡುವಂತೆ ಸೂಚಿಸಲಾಯಿತು.

ಎಲ್ಲ ರಾಜ್ಯಗಳಿಂದ ಸೆ. 15ರೊಳಗೆ ಮಾಹಿತಿ ದೊರೆತಲ್ಲಿ, ಸೆ. 17 ಮತ್ತು 18ರಂದು ಸಮಿತಿಯು ಆ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಲಿದೆ. ಈ ಮೂಲಕವೇ ವಸ್ತುಸ್ಥಿತಿ ಅರಿಯಲು ಮುಂದಾಗಿರುವ ಸಮಿತಿಯು ಕರ್ನಾಟಕ ಮತ್ತು ತಮಿಳುನಾಡಿನ ಜಲಾಶಯಗಳಿಗೆ ಅಧ್ಯಯನ ತಂಡವನ್ನು ಕಳುಹಿಸಿಕೊಡುವ ತೀರ್ಮಾನ ಕೈಗೊಳ್ಳಲಿಲ್ಲ.

ವೈಜ್ಞಾನಿಕ ಹಿನ್ನೆಲೆ ನೀರು ಬಿಡುಗಡೆ ಮಾಡುವಂತೆ ಸಮಿತಿ ಸೂಚಿಸಿತಾದರೂ, ಬಿಡುಗಡೆ ಮಾಡಬೇಕಿರುವ ನೀರಿನ ಪ್ರಮಾಣ ಕುರಿತು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಒಪ್ಪಿಗೆ ಸೂಚಿಸಲಿಲ್ಲ.

ಅಲ್ಲದೆ, ನೀರು ಬಿಡುಗಡೆಗೆ ಸಂಬಂಧಿಸಿದಂತೆ ಆದೇಶ ಮಾರ್ಪಾಡು ಮಾಡುವಂತೆ ಕರ್ನಾಟಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸಭೆ ನಡೆದ ವೇಳೆಯಲ್ಲೇ ಮಧ್ಯಂತರ ಆದೇಶ ನೀಡಿದ್ದರಿಂದ ಸಮಿತಿಯು ನೀರಿನ ಹಂಚಿಕೆಗೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಸೆ. 19ರಂದು ನಡೆಯಲಿರುವ ಸಭೆಯಲ್ಲಿ ಮುಖ್ಯವಾಗಿ ಸುಪ್ರೀಂ ಕೋರ್ಟ್‌ ಆದೇಶದ ಕುರಿತು ಚರ್ಚಿಸುವ ಸಾಧ್ಯತೆಗಳು ಇವೆ. ಸೆ. 20ರ ನಂತರವೂ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸಲು ಅಥವಾ ಹರಿಸದಿರುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT