ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಮಾರಕವಾದ ಆದೇಶ

42,000 ಕ್ಯೂಸೆಕ್‌ ಹೆಚ್ಚುವರಿ ನೀರು ಬಿಡುವ ಹೊಸ ಹೊರೆ
Last Updated 12 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯ ಹೊರೆಯನ್ನು ಇಳಿಸಬೇಕೆಂದು ಶನಿವಾರ ರಾತ್ರಿ ಸುಪ್ರೀಂಕೋರ್ಟ್‌ಗೆ ಧಾವಿಸಿದ್ದ ಕರ್ನಾಟಕ ಸೋಮವಾರ ಮಧ್ಯಾಹ್ನ ವಿಚಾರಣೆಯ ನಂತರ ಭಾರಿ ಹಿನ್ನಡೆ ಎದುರಿಸಬೇಕಾಯಿತು.

ಒಂದೆಡೆ ಹೆಚ್ಚುವರಿ ನೀರು ಬಿಡುವ ಹೊಸ ಹೊರೆಯಡಿ ಕುಸಿದ ಕರ್ನಾಟಕ, ಇನ್ನೊಂದೆಡೆ ತುರ್ತು ಅರ್ಜಿಯಲ್ಲಿ ಕಾನೂನು ಮತ್ತು ಶಾಂತಿ ಪಾಲನೆ ಕೈ ಮೀರಿ ಹೋದೀತೆಂದು ವ್ಯಕ್ತಪಡಿಸಿದ ಶಂಕೆಗಾಗಿ ನ್ಯಾಯಾಲಯದ ಸುಡು ಸುಡು ಆಕ್ರೋಶಕ್ಕೆ ಗುರಿಯಾಯಿತು.

ಬಕ್ರೀದ್ ಹಬ್ಬದ ಪ್ರಯುಕ್ತ ರಜಾದಿನವಾಗಿದ್ದರೂ ಸೋಮವಾರ ರಾಜ್ಯದ ತುರ್ತು ಅರ್ಜಿಯ ವಿಶೇಷ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕರ್ನಾಟಕವನ್ನು ಕೆಂಡದ ಹೊಂಡದ ಮೇಲೆ ಹಾಯಿಸಿತು.

ಹೆಗಲೇರಿದ ಹೊಸ ಹೊರೆಯಿಂದ ಕಂಗಾಲಾದ ಕರ್ನಾಟಕವು ನ್ಯಾಯಾಲಯದ ಕಲಾಪ ಮುಗಿದ ನಂತರ ನ್ಯಾಯಮೂರ್ತಿಯವರನ್ನು ಅವರ ಛೇಂಬರಿನಲ್ಲಿ ಕಂಡು ನಿವೇದಿಸಿಕೊಂಡ ನಾಟಕೀಯ ವಿದ್ಯಮಾನವೂ ನಡೆಯಿತು.

‘ಕರ್ನಾಟಕದ ಹೊರೆಯನ್ನು ತಗ್ಗಿಸುವ ಬದಲು ಅಧಿಕಗೊಳಿಸಲಾಗಿದೆ’ ಎಂಬುದಾಗಿ ಮಾಡಿಕೊಂಡ ಮನವಿ ಯಾವುದೇ ಫಲ ನೀಡಲಿಲ್ಲ. ‘ಹೌದು ಹೆಚ್ಚಿಸಿದ್ದೇವೆ ಮತ್ತು ಹೆಚ್ಚಿಸಿದ್ದೇವೆಂದು ನಮಗೆ ತಿಳಿದಿದೆ’ ಎಂಬ ಖಡಕ್ ಉತ್ತರವನ್ನು ಪಡೆದ ಕರ್ನಾಟಕದ ಕಾನೂನು ತಂಡ ನಿಸ್ತೇಜವಾಗಿ ಹೊರಬಿದ್ದಿತು.
‘ಕಾನೂನು ಮತ್ತು ಶಾಂತಿ ವ್ಯವಸ್ಥೆಯನ್ನು ಗೌರವಿಸುವಂತೆ ತಮಿಳುನಾಡು ಮತ್ತು  ಕರ್ನಾಟಕದ ಪ್ರಜೆಗಳು ನಡೆದುಕೊಳ್ಳಬೇಕು. ಕಾನೂನು ಮತ್ತು ಶಾಂತಿ ವ್ಯವಸ್ಥೆ ಕದಡದಂತೆ ಕಾಪಾಡಬೇಕಾದದ್ದು ಉಭಯ ರಾಜ್ಯಗಳ ಸರ್ಕಾರಗಳ ಸಾಂವಿಧಾನಿಕ ಕರ್ತವ್ಯ’ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ತನ್ನ ಈ ಆಣತಿಯನ್ನು ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಿಳಿಯಪಡಿಸಬೇಕು ಎಂದು ನ್ಯಾಯಪೀಠ ನಾರಿಮನ್ ಮತ್ತು ತಮಿಳುನಾಡಿನ ಪರ ನ್ಯಾಯವಾದಿ ಶೇಖರ್ ನಾಫಡೆ ಅವರಿಗೆ  ತಾಕೀತು ಮಾಡಿತು.

ತುರ್ತು ಅರ್ಜಿಯಲ್ಲಿ ಕಾನೂನು ಮತ್ತು ಶಾಂತಿ ವ್ಯವಸ್ಥೆ ಕದಡೀತೆಂದು ಬಳಸಲಾದ ಭಾಷೆಯ ದನಿ ಧೋರಣೆ ಮತ್ತು ಧಾಟಿಯ ಕುರಿತು ನ್ಯಾಯಾಲಯ ಪದೇ ಪದೇ ಕೆಂಡ ಕಾರಿತು. ತುರ್ತು ಅರ್ಜಿಯ ಒಕ್ಕಣೆ ಮತ್ತು ಸಾರ್ವಜನಿಕ ಪ್ರತಿಭಟನೆ, ಬಂದ್ ಆಚರಣೆಯ ವಿದ್ಯಮಾನಗಳು ರಾಜ್ಯದ ಪಾಲಿಗೆ ಮಾರಕವಾಗಿ ಪರಿಣಮಿಸಿದವು.

ತನ್ನ ಆದೇಶ ಜಾರಿಗೆ ಅಡ್ಡಿಪಡಿಸಿ ಕಾನೂನನ್ನು ಕೈಗೆತ್ತಿಕೊಳ್ಳುವ ಸಾರ್ವಜನಿಕ ಪ್ರತಿಭಟನಾಕಾರರನ್ನು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಉದಯ್‌ ಲಲಿತ್ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠವು ತೀವ್ರ ತರಾಟೆಗೆ ತೆಗೆದುಕೊಂಡಿತು.

ಉಗ್ರಸ್ವರೂಪದ ಸಾರ್ವಜನಿಕ ಪ್ರತಿಭಟನೆಯ ಪರಿಣಾಮವಾಗಿ ಕಾನೂನು ಮತ್ತು ಶಾಂತಿ ವ್ಯವಸ್ಥೆ ಕೈ ಮೀರಲಿದೆ ಎಂಬ ಕಾರಣವನ್ನು ಮುಂದೆ ಮಾಡಿದ ತುರ್ತು ಅರ್ಜಿಯ ಒಕ್ಕಣೆ ಅತ್ಯಂತ ಆಕ್ಷೇಪಾರ್ಹ ಎಂದೂ ನ್ಯಾಯಪೀಠ ಹಿಗ್ಗಾಮುಗ್ಗಾ ಜಾಡಿಸಿತು.

ನ್ಯಾಯಾಲಯ ಒಂದು ಕೈಯಲ್ಲಿ ನೀಡಿದ ಪರಿಹಾರವನ್ನು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಿತು. ಸುಮಾರು 33 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಬಿಡುವ ಹೊಸ ಹೊರೆಯನ್ನು ಕರ್ನಾಟಕದ ಹೆಗಲಿಗೆ ಹೊರಿಸಿತು.

ಭಾರೀ ಸಾರ್ವಜನಿಕ ಆಕ್ರೋಶವನ್ನು ಎದುರಿಸಿದ್ದ ರಾಜ್ಯ ಸರ್ಕಾರ, ಆದೇಶ ಮಾರ್ಪಾಡಿಗೆ ತುರ್ತು ಅರ್ಜಿ ಸಲ್ಲಿಸಿದರೆ ಪರಿಹಾರ ದೊರೆತೀತು ಎಂದು ನಿರೀಕ್ಷಿಸಿತ್ತು. ಈ ನಿರೀಕ್ಷೆ ಹುಸಿಯಾಗಿದ್ದೇ ಅಲ್ಲದೆ, ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಹಳಹಳಿಕೆಯನ್ನು ಅನುಭವಿಸುವಂತಾಯಿತು.

ಒಟ್ಟು ಒಂದೂವರೆ ಲಕ್ಷ ಕ್ಯೂಸೆಕ್ ಹಳೆಯ ಹೊರೆಯಲ್ಲಿ ಹನ್ನೆರಡು ಸಾವಿರ ಕ್ಯೂಸೆಕ್‌ಗಳನ್ನು ತಗ್ಗಿಸಲಾಗಿದೆ. ಆದರೆ, ಸೆ. 16ಕ್ಕೆ ಮುಗಿಯಬೇಕಿದ್ದ ನೀರು ಬಿಡುಗಡೆ ಅವಧಿಯನ್ನು ಸೆ. 20ಕ್ಕೆ ಹಿಗ್ಗಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿತು. ಬಿಡುಗಡೆಯ ಅವಧಿ ಇನ್ನೂ ನಾಲ್ಕು ದಿನಗಳ ಕಾಲ ಹೆಚ್ಚಿದ ಪರಿಣಾಮವಾಗಿ ಕರ್ನಾಟಕವು, ತಮಿಳುನಾಡಿಗೆ ಸುಮಾರು 42 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದೆ.
ರಾಜ್ಯದ ಅರ್ಜಿಯಲ್ಲಿ ಮುಖ್ಯ ಕಾರ್ಯದರ್ಶಿಯವರ ಪ್ರಮಾಣಪತ್ರದಲ್ಲಿನ ಒಕ್ಕಣೆ ಮತ್ತು ಅದರ ಧಾಟಿ ಧೋರಣೆಗಳ ಕುರಿತು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ವಿಚಾರಣೆಯ ಆರಂಭದಲ್ಲೇ ಕೆಂಡ ಕಾರಿದರು.

ವಿಚಾರಣೆ ಮುಂದುವರೆದು ಮುಕ್ತಾಯ ಹಂತ ತಲುಪುವ ಹೊತ್ತಿಗೆ, ನ್ಯಾಯಪೀಠವು ಒಕ್ಕಣೆ  ಕುರಿತು ದಂಡಿಸಿದರೂ, ನೀರಿನ ಪ್ರಮಾಣವನ್ನು ತಗ್ಗಿಸಬಹುದು ಎಂಬ ನಿರೀಕ್ಷೆ ಒಡಮೂಡಿತ್ತು. ನ್ಯಾಯಮೂರ್ತಿ ಮಿಶ್ರಾ ಅವರು ಸಿಬ್ಬಂದಿಯೊಬ್ಬರಿಗೆ ಆದೇಶದ ಉಕ್ತಲೇಖನ ನೀಡಲು ಆರಂಭಿಸಿದರು. ಉಕ್ತಲೇಖನ ಕಡೆಯ ಭಾಗ ಸಮೀಪಿಸಿತು. ನ್ಯಾಯಾಲಯದಲ್ಲಿದ್ದ ಕರ್ನಾಟಕದವರಿಗೆ ಅನಿರೀಕ್ಷಿತ ಸಿಡಿಲಿನ ಆಘಾತ ಆದದ್ದು ಇದೇ ಹಂತದಲ್ಲಿ. ಕರ್ನಾಟಕ ಇದೇ 20ರ ತನಕ ನಿತ್ಯ ಹತ್ತು ಸಾವಿರ ಕ್ಯೂಸೆಕ್ ಬಿಡಬೇಕೆಂದು ನ್ಯಾಯಮೂರ್ತಿ ಮಿಶ್ರಾ ಆದೇಶ ನೀಡಿದ್ದರು. ಈ ಹಂತದಲ್ಲಿ ತಮಿಳುನಾಡಿನ ಪರ ಹಿರಿಯ ವಕೀಲ ಶೇಖರ್ ನಾಫಡೆ  ಎದ್ದು ನಿಂತು ಸಾಲದು ಎಂದು ಪ್ರತಿಭಟಿಸಿದರು.

ಪ್ರತಿಭಟನೆಯನ್ನು ಪರಿಗಣಿಸಿದ ನ್ಯಾಯಮೂರ್ತಿಯವರು, ‘ಆಗಲಿ ಆಗಲಿ... ಹನ್ನೆರಡು ಸಾವಿರವಾದರೆ ಸಾಕಲ್ಲವೇ’ ಎಂದು ಕರ್ನಾಟಕ ಬಿಡಬೇಕಾದ ನೀರಿನ ಪ್ರಮಾಣವನ್ನು ಹನ್ನೆರಡು ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಿದರು.

ಈ ಹಂತದಲ್ಲಿ ರಾಜ್ಯದ ಕಾನೂನು ತಂಡ ಆಘಾತದಿಂದ ಮಾತು ಕಳೆದುಕೊಂಡಿದೆಯೇನೋ ಎಂಬಂತೆ ತೋರಿ ಬಂತು. ಕಲಾಪ ಬರ್ಖಾಸ್ತಾದ ನಂತರ ನಾರಿಮನ್ ನೇತೃತ್ವದ ಕರ್ನಾಟಕದ ಕಾನೂನು ತಂಡ ಸಾವರಿಸಿಕೊಂಡು ನ್ಯಾಯಮೂರ್ತಿಗಳ ಛೇಂಬರಿಗೇ ಹೋಗಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಲಿಲ್ಲ.

‘ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಸೆಪ್ಟಂಬರ್ ತಿಂಗಳಿನಲ್ಲಿ ಕರ್ನಾಟಕ ತಮಿಳುನಾಡಿಗೆ ಬಿಡಬೇಕಿರುವ ನೀರಿನ ಪ್ರಮಾಣ 40 ಟಿಎಂಸಿ ಅಡಿಗಳು. ಮಳೆಯ ಅಭಾವದ ಲೆಕ್ಕ ಹಿಡಿದು ಈ ಪ್ರಮಾಣವನ್ನು 20 ಟಿಎಂಸಿ ಅಡಿಗಳಿಗೆ ತಗ್ಗಿಸಬಹುದು. ನಾವು (ನ್ಯಾಯಾಲಯ) ಇಂದು ನೀಡಿದ ಆದೇಶ ಪಾಲಿಸಿದರೂ ನೀವು ತಮಿಳುನಾಡಿಗೆ ಕೊಟ್ಟಂತಾಗುವ ನೀರು ಹದಿನೈದು ಟಿಎಂಸಿ ಅಡಿಗಳು ಮಾತ್ರ. ಇನ್ನೂ ಐದರ ಬಾಕಿ ನಿಮ್ಮ ಮೇಲೆಯೇ ಉಳಿಯುತ್ತದೆ’ ಎಂಬುದಾಗಿ ನ್ಯಾಯಮೂರ್ತಿಗಳು ಛೇಂಬರಿನಲ್ಲಿ ನಿಷ್ಠುರವಾಗಿ ಹೇಳಿದ್ದಾರೆ.

ನ್ಯಾಯಾಲಯದ ಆದೇಶದ ವಿರುದ್ಧ ತೀವ್ರ ಸ್ವರೂಪದ ಸಾರ್ವಜನಿಕ ಆಂದೋಲನ ಮತ್ತು ಕಾನೂನು, ಸುವ್ಯವಸ್ಥೆಯ ಸಮಸ್ಯೆಯ ನೆಪವನ್ನು ಕರ್ನಾಟಕ ಮುಂದೆ ಮಾಡಿರುವುದು ‘ಕ್ಷೋಭೆ ಉಂಟು ಮಾಡುವ ಮತ್ತು ಖಂಡನೀಯ ಸಂಗತಿ’ ಎಂದು ನ್ಯಾಯಾಲಯ ತನ್ನ ಹನ್ನೆರಡು ಪುಟಗಳ ಆದೇಶದಲ್ಲಿ ಹೇಳಿದೆ.
‘ನಾಗರಿಕರು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನ್ಯಾಯಾಲಯ ಹೊರಡಿಸುವ ಆದೇಶವನ್ನು ಪಾಲಿಸಬೇಕಾದದ್ದು ನಾಗರಿಕರ ಕರ್ತವ್ಯ. ಆದೇಶ ಕುರಿತು ಏನಾದರೂ ದೂರು ದುಮ್ಮಾನವಿದ್ದರೆ ಕಾನೂನಿನ ಪ್ರಕಾರ ಪರಿಹಾರ ಕೋರುವ ಸ್ವಾತಂತ್ರ್ಯ ಅವರಿಗೆ ಇದ್ದೇ ಇದೆ. ನ್ಯಾಯಾಲಯದ ಆದೇಶವನ್ನು ಸಂಬಂಧಪಟ್ಟವರೆಲ್ಲ ಚಾಚೂ ತಪ್ಪದೆ ಪಾಲಿಸಬೇಕು. ಅಡ್ಡದಾರಿ ಹಿಡಿಯುವುದಾಗಲೀ, ಅವಿಧೇಯತೆ ತೋರುವುದಾಕ್ಕಾಗಲಿ ಆಸ್ಪದ ಇಲ್ಲ. ಸ್ವಯಂ ಪ್ರೇರಿತ ಇಲ್ಲವೇ ಪ್ರೇರಿತ ಜನಾಂದೋಲನವನ್ನು ಆದೇಶ ಬದಲಾವಣೆ ಕೋರಿಕೆಗೆ  ಸಮರ್ಥನೆಯಾಗಿ ಇಲ್ಲವೇ ಆಧಾರವಾಗಿ ಬಳಸುವುದು ತರವಲ್ಲ’ ಎಂದು ನ್ಯಾಯಪೀಠ ಸಾರಿತು.

ರಾಜ್ಯದ ಪರವಾಗಿ ವಾದ ಮಂಡಿಸಿದ ಫಾಲಿ ನಾರಿಮನ್ ಅವರು ಕರ್ನಾಟಕದ ಪ್ರಮಾಣಪತ್ರದಲ್ಲಿ ಬಳಸಲಾಗಿರುವ ಒಕ್ಕಣೆಗೆ ವಿಷಾದ ವ್ಯಕ್ತಪಡಿಸಿದರು. ಆಕ್ಷೇಪಾರ್ಹ ಒಕ್ಕಣೆಯ ನೈತಿಕ ಹೊಣೆಯನ್ನು ತಾವೇ ಹೊರುವುದಾಗಿಯೂ, ಅದನ್ನು ಇನ್ಯಾರ ಮೇಲೆಯೂ ಹೊರಿಸಿ ದಂಡಿಸಬಾರದು ಎಂದೂ ನ್ಯಾಯಪೀಠವನ್ನು ಕೋರಿದರು.

‘ನ್ಯಾಯಾಲಯ ಇದೇ ಐದರಂದು ನೀಡಿದ್ದ ಆದೇಶವನ್ನು ಪಾಲಿಸಿರುವ ರಾಜ್ಯ ಸರ್ಕಾರ ಸೋಮವಾರ (ಸೆ.12) ಮುಂಜಾನೆಯ ತನಕ 84,168 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಿದೆ. ಖುದ್ದು ನೀರಿನ ಕೊರತೆ ಮತ್ತು ಕಾನೂನು ಸುವ್ಯವಸ್ಥೆಯ ಭಾರಿ ಸಂಕಟವನ್ನು ಎದುರಿಸಿದ್ದರೂ ನ್ಯಾಯಾಲಯದ ಆದೇಶವನ್ನು ಪಾಲಿಸಿದೆ. ರಾಜ್ಯದ ಈ ಸಂಕಟವನ್ನು ಪರಿಗಣಿಸಿ ಹತ್ತು ದಿನಗಳ ಕಾಲ ನಿತ್ಯ 15 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಬೇಕೆಂಬ ತನ್ನ ಆದೇಶವನ್ನು ಹಂಗಾಮಿಯಾಗಿ ಒಂದು ವಾರದ ಕಾಲ ಸ್ಥಗಿತಗೊಳಿಸಬೇಕು’ ಎಂದು ನಾರಿಮನ್ ಮನವಿ ಮಾಡಿದರು.

‘ಕರ್ನಾಟಕದಿಂದ ನಿತ್ಯ 20,000 ಕ್ಯೂಸೆಕ್  ನೀರು ಬಿಡಿಸುವಂತೆ ತಮಿಳುನಾಡು ನ್ಯಾಯಾಲಯವನ್ನು ಆಗ್ರಹಿಸಿತ್ತು. ನ್ಯಾಯಾಲಯ 15,000 ಕ್ಯೂಸೆಕ್ ಬಿಡಲು ಹೇಳಿತು. ಸಾಂಬಾ ಬೆಳೆಗೆ ನೀರಿನ ಹಾಹಾಕಾರ ಇದೆ ಎಂದು ನ್ಯಾಯಾಲಯಕ್ಕೆ ಹೇಳಿತ್ತು. ತನ್ನ ಸಂಕಟವನ್ನು ಹೀಗೆ ಪರಿಪರಿಯಾಗಿ ಬಣ್ಣಿಸಿಕೊಂಡಿದ್ದ ತಮಿಳುನಾಡು ಈಗ ತನ್ನ ಮೆಟ್ಟೂರು ಜಲಾಶಯದಿಂದ ಸಾಂಬಾ ಬೆಳೆಗೆ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣ 1,250 ಕ್ಯೂಸೆಕ್ ಮಾತ್ರ. ನ್ಯಾಯಾಲಯದ ಆದೇಶ ಜಾರಿ ಮಾಡಿದ ಕಾರಣ ಕರ್ನಾಟಕದ ಕಾವೇರಿ ಜಲಾಶಯಗಳ ನೀರಿನ ಸಂಗ್ರಹ 34 ಟಿಎಂಸಿ ಅಡಿಗಳಿಗೆ ಕುಸಿದಿದೆ. ತಮಿಳುನಾಡಿನ ಮೆಟ್ಟೂರಿನ ನೀರಿನ ಸಂಗ್ರಹ 35 ಟಿಎಂಸಿ ಅಡಿಗಳಿಂದ ಇಂದು ಮುಂಜಾನೆಯ ಹೊತ್ತಿಗೆ 42.43 ಟಿಎಂಸಿ ಅಡಿಗಳಿಗೆ ಹೆಚ್ಚಿದೆ.

ತಮಿಳುನಾಡಿಗೆ ಅಕ್ಟೋಬರ್ 15ರಿಂದ ಈಶಾನ್ಯ ಮಳೆಯ ಮಾರುತ ಮಳೆ ಸುರಿಸಲಿದೆ. ಕರ್ನಾಟಕಕ್ಕೆ ಅಂತಹ ಸದವಕಾಶ ಇಲ್ಲ. ಹೀಗಾಗಿ ಕರ್ನಾಟಕ ಬಿಟ್ಟ ನೀರು ವಾಪಸ್‌ ಬರುವುದಿಲ್ಲ. ನೀರಾವರಿಯ ಮಾತಿರಲಿ, ಕುಡಿಯುವ ನೀರಿಗೂ ಹಾಹಾಕಾರ ಏಳುವ ಸಾಧ್ಯತೆ ಇದೆ’ ಎಂದು ನಾರಿಮನ್ ವಾದಿಸಿದರು.

ತಮಿಳುನಾಡಿಗೆ ನ್ಯಾಯವಾಗಿ ಬಿಡಬೇಕಾದ ನೀರನ್ನು ನಿರಾಕರಿಸುವ ಪ್ರಯತ್ನವನ್ನು ಕರ್ನಾಟಕ ನಡೆಸಿದೆ ಎಂದು ತಮಿಳುನಾಡಿನ ಪರ ವಕೀಲ ಶೇಖರ್ ನಾಫಡೆ ಪ್ರತಿವಾದ ಮಂಡಿಸಿದರು.

‘ಕಾವೇರಿ ನ್ಯಾಯಮಂಡಳಿಯ ಆದೇಶದ ಪ್ರಕಾರ ಮಳೆಯ ಕೊರತೆ ಉಂಟಾಗಿದ್ದರೆ, ಆ ಕೊರತೆಯನ್ನು ಉಭಯ ರಾಜ್ಯಗಳು ತಮ್ಮ ಪಾಲಿನ ಅನುಪಾತಕ್ಕೆ ಅನುಗುಣವಾಗಿ ಹಂಚಿಕೊಳ್ಳಬೇಕು. ಆದರೆ ಕರ್ನಾಟಕ ಏಕಪಕ್ಷೀಯವಾಗಿ ನೀರನ್ನು ತಾನೇ ಬಳಸಿಕೊಳ್ಳಲು ಹೊರಟಿದೆ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಕರ್ನಾಟಕ ಬಿಡಲೇ ಇಲ್ಲ. ತಾನೇ ಅಕ್ರಮವಾಗಿ ಬಳಸಿಕೊಂಡುಬಿಟ್ಟಿದೆ. ಸಾಂಬಾ ಬೆಳೆಗೆ ನೀರು ಬಿಡುಗಡೆ ಮಾಡಲು ಮೆಟ್ಟೂರು ಜಲಾಶಯದಲ್ಲಿ ಕನಿಷ್ಠ ಪಕ್ಷ 50 ಟಿಎಂಸಿ ಅಡಿ ನೀರಿನ ಸಂಗ್ರಹ ಇರಲೇಬೇಕು. ನಾವು ಮುಂದಿನ ದಿನಗಳಿಗಾಗಿ ಸಂಗ್ರಹಿಸಿಕೊಂಡರೆ ಕರ್ನಾಟಕ ಯಾಕೆ ಆಕ್ಷೇಪ ಎತ್ತಬೇಕು’ ಎಂದು ಅವರು ವಾದಿಸಿದರು.
*
ಕಳೆಗುಂದಿತು ಸಚಿವ ಪಾಟೀಲ್‌ ಮುಖ!
ನವದೆಹಲಿ:
ಕಾವೇರಿ ನೀರು ಬಿಡುಗಡೆ ಕುರಿತ ಆದೇಶ ಮಾರ್ಪಾಡು ಮಾಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಕಲಾಪದಲ್ಲಿ ಖುದ್ದಾಗಿ ಹಾಜರಾಗಿದ್ದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರ ಮುಖ ಹೆಚ್ಚುವರಿಯಾಗಿ ನೀರು ಬಿಡುಗಡೆ ಆದೇಶ ಹೊರಬಿದ್ದ ಕೂಡಲೇ ಕಳೆಗುಂದಿತು.

ಸೆ. 5ರ ಆದೇಶ ಮಾರ್ಪಾಡು ಮಾಡಲು ಮುಂದಾದ ನ್ಯಾಯ­ಮೂರ್ತಿಗಳು, ಮೊದಲಿನ ಆದೇಶದಲ್ಲಿ ಸೂಚಿಸಿದ್ದ ಪ್ರಮಾಣಕ್ಕಿಂತಲೂ ಮಾರ್ಪಾಡು ಆದೇಶದ ಪ್ರಕಾರ ಅಧಿಕ ಪ್ರಮಾಣದ ನೀರನ್ನು ಹರಿಸುವ ಅನಿವಾರ್ಯತೆಗೆ ಕರ್ನಾಟಕ ಒಳಗಾಯಿತು.

ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದಂತಾಯಿತಲ್ಲದೇ ಕರ್ನಾಟಕ ಪರ ವಾದ ಮಂಡಿಸಿದ ಕಾನೂನು ತಂಡದ ಸದಸ್ಯರು ಮತ್ತು ಸಚಿವರ ದಿಕ್ಕು ತೋಚದಂತೆ ಮಾಡಿತು.

ಕಲಾಪ ಮುಗಿಸಿ ಹೊರಬಂದ ಹಿರಿಯ ವಕೀಲ ಫಾಲಿ ನಾರಿಮನ್‌ ಅವರೊಂದಿಗೆ ಕೋರ್ಟ್‌ ಹಾಲ್‌ ಹೊರಗೆ ಕೆಲ ಹೊತ್ತು ಚರ್ಚೆ ನಡೆಸಿದ ಪಾಟೀಲ್‌, ಆದೇಶ ಪುನರ್‌ ಪರಿಶೀಲಿಸಲು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಕೋರಿದರೂ, ಕಾನೂನು ತಂಡ ಸಫಲವಾಗದೆ ಮರಳಿದ್ದರಿಂದ ಮತ್ತಷ್ಟು ಕಳಾಹೀನರಾದರು.

ಇದೇ ವೇಳೆ ಅನಿರೀಕ್ಷಿತ ವರ ಪಡೆದಂತಾದ ತಮಿಳುನಾಡು ಪರ ವಕೀಲರು ಮತ್ತು ಅಧಿಕಾರಿಗಳ ಮುಖದಲ್ಲಿ ಸಂತಸ ಉಕ್ಕುತ್ತಿದ್ದುದು ಗೋಚರಿಸಿತು.
*
19ಕ್ಕೆ ಮೇಲುಸ್ತುವಾರಿ ಸಮಿತಿ ಸಭೆ
ನವದೆಹಲಿ: ನೀರಿನ ಲಭ್ಯತೆ ಕುರಿತು ಸಮಗ್ರ ಮಾಹಿತಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಕಾವೇರಿ ಕಣಿವೆ ಪ್ರದೇಶದ ನಾಲ್ಕೂ ರಾಜ್ಯಗಳಿಗೆ ಸೂಚಿಸಿರುವ ಕಾವೇರಿ ಮೇಲುಸ್ತುವಾರಿ ಸಮಿತಿಯು, ಸಭೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಿದೆ. ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಆದೇಶ ಮಾರ್ಪಾಡು ಮಾಡುವಂತೆ ಕರ್ನಾಟಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಮಧ್ಯಂತರ ಆದೇಶ ನೀಡಿದ್ದರಿಂದ ಸಮಿತಿಯು ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.
*
ಸೆಪ್ಟೆಂಬರ್  5 ರ ಆದೇಶ
* ಕೇಳಿದ್ದು.. ಕೊಟ್ಟಿದ್ದು... (ಕ್ಯೂಸೆಕ್‌ಗಳಲ್ಲಿ)
* ತಮಿಳುನಾಡು ಕೇಳಿದ್ದು 20,000
* ಕರ್ನಾಟಕ ಒಪ್ಪಿದ್ದು 10,000 (ಐದು ದಿನ)
* ಕೋರ್ಟ್ ಆದೇಶಿಸಿದ್ದು 15,000 (10 ದಿನ)

ಸೆಪ್ಟೆಂಬರ್  12 ರ ಆದೇಶ
* ಸೆ. 20ಕ್ಕೆ ವಿಚಾರಣೆ ಮುಂದೂಡಿ ಅಲ್ಲಿಯವರೆಗೆ ನೀರು ಹರಿಸಲು ನಿರ್ದೇಶನ
* ಮೊದಲು 10,000ಕ್ಕೆ ಒಪ್ಪಿಗೆ ನಂತರ 12,000ಕ್ಕೆ ಹೆಚ್ಚಳ
ರಾಜ್ಯಗಳ ಮನವಿ: ಆದೇಶ ಮಾರ್ಪಾಡಿಗೆ ಕರ್ನಾಟಕ ಮನವಿ. ಮಾರ್ಪಾಡು ಮಾಡದಿರಲು ತಮಿಳುನಾಡು ಕೋರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT