ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕುಗಳ ಮಾರಾಟಕ್ಕೆ ‘ಸೆಲ್ಫಿ’ ವೇದಿಕೆ

Last Updated 13 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಚಾರಣಕ್ಕೆ ತೆರಳುವವರ ಬಳಕೆಗೆಂದೇ ಪೋಷಕಾಂಶಗಳನ್ನು ಒಳಗೊಂಡ ತಿನಿಸನ್ನು ಸಿದ್ಧಪಡಿಸಿರುವ ಗೃಹಿಣಿ ಹುದಾ (huda),   ಸಿಎ ಓದುವ ವಿದ್ಯಾರ್ಥಿ ಲಕನ್‌ (19), ವಿಶಿಷ್ಟ ಬಗೆಯ ಕೇಕ್‌ ಮಾರಾಟ ಮಾಡಲು ಫೇಸ್‌ಬುಕ್‌ ಅನ್ನೇ ಮಾರಾಟ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. 

ಇಂತಹ ಲಕ್ಷಾಂತರ ಸಣ್ಣ ಉದ್ಯಮಿಗಳು ಸಾಮಾಜಿಕ ಜಾಲ ತಾಣಗಳ ಮೂಲಕವೇ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ತಂತ್ರಜ್ಞಾನ, ಮೊಬೈಲ್‌ ಆ್ಯಪ್‌ ಮತ್ತು ಸಾಮಾಜಿಕ ಸಂವಹನ ತಾಣಗಳು, ಸಾಮಾಜಿಕ ಬದುಕಿಗೆ ಹೊಸ ವ್ಯಾಖ್ಯೆ ನೀಡುವುದರ ಜತೆಗೆ ವಾಣಿಜ್ಯ ಅವಕಾಶಗಳನ್ನೂ ವಿಸ್ತರಿಸಲು ನೆರವಾಗುತ್ತಿವೆ.

ಉದ್ಯಮವನ್ನು ಹವ್ಯಾಸವಾಗಿ ಪರಿಗಣಿಸಿರುವ ಗೃಹಿಣಿಯರು, ಸಣ್ಣ ಪುಟ್ಟ ಕರಕುಶಲ ಕಲಾವಿದರು, ವಿಶಿಷ್ಟ ಬಗೆಯ ಫ್ಯಾಷನ್‌  ಉತ್ಪನ್ನ, ಆಭರಣ, ಉಡುಪುಗಳನ್ನು ತಯಾರಿಸುವ ಸಣ್ಣ ಪುಟ್ಟ ಉದ್ಯಮಿಗಳು ತಮ್ಮ  ಉತ್ಪನ್ನಗಳನ್ನು ನಿರ್ದಿಷ್ಟಪಡಿಸಿದ ಗ್ರಾಹಕರಿಗೆ ತಲುಪಿಸಲು ಬಹು ಜನಪ್ರಿಯ ಸಾಮಾಜಿಕ ತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂ  ಮೊರೆ ಹೋಗುತ್ತಿದ್ದಾರೆ.

ಈ ತಾಣಗಳಲ್ಲಿ ಬಿಕರಿಗೆ ಇಟ್ಟ ಸರಕುಗಳ  ಖರೀದಿದಾರರಿಂದ ಹಣ  ವಸೂಲಿ ಮಾಡುವುದನ್ನು ಸುಲಭಗೊಳಿಸಲು ಮೊಬೈಲ್‌ ಆ್ಯಪ್‌ ‘ಸೆಲ್ಫಿ’ ನೆರವಿಗೆ ಬರುತ್ತಿದೆ.

ಈ ಮೊಬೈಲ್‌ ಆ್ಯಪ್‌ನಿಂದಲೇ  ವಿಶಿಷ್ಟ ಸರಕಿನ ಚಿತ್ರ, ಅದರ ಬೆಲೆ, ಮನೆ ಅಥವಾ ಕಚೇರಿಗೆ ತಲುಪಿಸುವ ವಿಧಾನಗಳ ವಿವರಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಲು ಬಿಟ್ಟು ಹೊಸ ಗ್ರಾಹಕರನ್ನು ಸೆಳೆಯಲು, ಮಾರುಕಟ್ಟೆ ವಿಸ್ತರಿಸಲು ಮತ್ತು ಖರೀದಿದಾರರು ಸುಲಭವಾಗಿ ಹಣ ಪಾವತಿಸಲು ಈ  ಹೊಸ ಸ್ಟಾರ್ಟ್‌ಅಪ್‌ ಸೆಲ್ಫಿ’ (Sellfie) ಆ್ಯಪ್‌ ನೆರವಾಗುತ್ತಿದೆ.

ಇ–ಕಾಮರ್ಸ್‌ ಖರೀದಿಗೆ ಮತ್ತು ನಾಗರಿಕ ಸೇವೆಗಳ ಶುಲ್ಕವನ್ನು ಆನ್‌ಲೈನ್‌ನಲ್ಲಿ  ಪಾವತಿ ವ್ಯವಸ್ಥೆಗೆ ನೆರವಾಗುತ್ತಿರುವ   ಹಣಕಾಸು ತಂತ್ರಜ್ಞಾನ ಸಂಸ್ಥೆ ಸಿಟ್ರಸ್‌ ಪೇ (Citrus Pay) ಸಂಸ್ಥೆಯು ಈ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಸಾಮಾಜಿಕ ತಾಣಗಳಲ್ಲಿ ಮಾರಾಟಕ್ಕೆ ಇರುವ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಮುಂದೆ ಬಂದಾಗ, ಆನ್‌ಲೈನ್‌ನಲ್ಲಿಯೇ ಹಣ ಪಾವತಿಸಿ ಸರಕು ಖರೀದಿಸಲು ಈ ಆ್ಯಪ್‌ ನೆರವಾಗಲಿದೆ.  ಲಕ್ಷಾಂತರ ಸಣ್ಣ ಉದ್ಯಮಿಗಳು ‘ಸಾಮಾಜಿಕ ವಾಣಿಜ್ಯ’ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲೂ ಇದರಿಂದ ಸಾಧ್ಯವಾಗಲಿದೆ.

‘ಸಣ್ಣ ಉದ್ಯಮಿಗಳು    ತಯಾರಿಸಿದ ವಿಶಿಷ್ಟ ಉತ್ಪನ್ನಗಳ ಹಿಂದೆ ಅವರ ವೈಯಕ್ತಿಕ ಸಾಧನೆ ಇರುವುದರಿಂದ ಅವರು ತಮ್ಮ ಉತ್ಪನ್ನಗಳ ಚಿತ್ರಗಳೊಂದಿಗೆ  ತಮ್ಮ ಕತೆ ಹೇಳಿಕೊಳ್ಳಲು ‘ಸೆಲ್ಫಿ’ ಆ್ಯಪ್‌ ಹೊಸ ವೇದಿಕೆಯಾಗಿರಲಿದೆ.

‘ಸದ್ಯಕ್ಕೆ ದೇಶದಲ್ಲಿ 3 ಕೋಟಿಗಳಷ್ಟು ಸಣ್ಣ ಉದ್ಯಮಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತಮ್ಮ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ಈ ವಹಿವಾಟಿನ ಹಣ ಪಾವತಿಯು ಬಹುತೇಕ ಆಫ್‌ಲೈನ್‌ನಲ್ಲಿ ನಡೆಯುತ್ತಿದೆ. ಇದಕ್ಕೆ ಡಿಜಿಟಲ್‌ ಸ್ವರೂಪ ನೀಡಲು ‘ಸೆಲ್ಫಿ’ ನೆರವಾಗುತ್ತಿದೆ. ಈ ಆ್ಯಪ್‌ ಮೂಲಕ ಮಾರಾಟಗಾರರು ಕೆಲವೇ ಸೆಕೆಂಡುಗಳಲ್ಲಿ  ಆನ್‌ಲೈನ್‌ನಲ್ಲಿ ತಮ್ಮ ವಹಿವಾಟಿನ ಮಳಿಗೆಯನ್ನೂ ತೆರೆಯಬಹುದು.

‘ಇದೊಂದು ಭವಿಷ್ಯದ ಖರೀದಿ ವಹಿವಾಟು. ‘ಸೆಲ್ಫಿ’ ಆ್ಯಪ್‌ನಲ್ಲಿ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ, ತಮಗೆ ಬರಬೇಕಾದ ಹಣವನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದೆ.  ಖರೀದಿದಾರರಿಗೆ ಸರಕು ಕೈಸೇರಿದ ನಂತರವೇ ಇಲ್ಲಿ ಮಾರಾಟಗಾರರ ಖಾತೆಗೆ  ಹಣ ಜಮಾ ಆಗಲಿರುವುದರಿಂದ ಗ್ರಾಹಕರು ಚಿಂತಿತರಾಗಬೇಕಾಗಿಲ್ಲ.

ಮುಂದಿನ ಮೂರು ವರ್ಷಗಳಲ್ಲಿ  10 ಲಕ್ಷದಷ್ಟು ಸಣ್ಣ ಉದ್ದಿಮೆದಾರರು ಇದರ   ಪ್ರಯೋಜನ ಪಡೆಯಲಿದ್ದಾರೆ’ ಎಂದು ಸಿಟ್ರಸ್‌ ಪೇ– ಸೆಲ್ಫಿಯ   ಹಿರಿಯ ಉಪಾಧ್ಯಕ್ಷ ಅನಿಶ್‌ ಅಚುತನ್‌ ಹೇಳುತ್ತಾರೆ. ಸದ್ಯಕ್ಕೆ ದೇಶದಲ್ಲಿ 10 ಲಕ್ಷ ಜನರು  ಫೇಸ್‌ಬುಕ್‌ನಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಸರಕು ಮಾರಾಟದಲ್ಲಿ  ಶೇ 2ರಷ್ಟು ಶುಲ್ಕ ವಸೂಲಿ ಮಾಡುವುದರಿಂದ ‘ಸೆಲ್ಫಿ’  ವರಮಾನ ಗಳಿಸಲಿದೆ. ಈ ಬಗೆಯ ಸಾಮಾಜಿಕ ಜಾಲ ತಾಣಗಳಲ್ಲಿ ಸುಲಭವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಬೆಂಗಳೂರು ಅತಿದೊಡ್ಡ ಮಾರುಕಟ್ಟೆಯಾಗಿದೆ.

ನಂತರದ ಸ್ಥಾನಗಳಲ್ಲಿ ಮುಂಬೈ, ದೆಹಲಿ ಬರಲಿವೆ. ಕೊಯಿಮತ್ತೂರು, ಸೂರತ್‌ ನಗರಗಳಲ್ಲಿಯೂ ಫ್ಯಾಷನ್‌  ವಿನ್ಯಾಸದ ಹವ್ಯಾಸವು  ವೃತ್ತಿಯಾಗಿ ಬದಲಾಗುತ್ತಿದೆ. ಅವರಿಗೆಲ್ಲ ಈ ‘ಆ್ಯಪ್‌’ ನೆರವಿಗೆ ಬರಲಿದೆ. ಮಾರಾಟಗಾರರು ಇಲ್ಲಿ ಯಾವುದೇ ಶುಲ್ಕ ಪಾವತಿಸದೆ ಸುಲಭವಾಗಿ ನೋಂದಣಿ ಮಾಡಿಕೊಂಡು ವಹಿವಾಟು ನಡೆಸಬಹುದು.

ಈ ಬಗೆಯ ವಹಿವಾಟಿನಲ್ಲಿ ಮಾರಾಟಗಾರರು ಅಥವಾ ಖರೀದಿದಾರರೇ ವಂಚನೆ ಎಸಗುವ ಸಾಧ್ಯತೆ ಇದ್ದೇ ಇದೆ. ಅದನ್ನು ತಡೆಗಟ್ಟಲೂ ಈ ಆ್ಯಪ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾರಾಟ ಮಾಡುವ ಸರಕಿನ ಚಿತ್ರವು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್‌ ಆಗುತ್ತಿದ್ದಂತೆ ಅದು ನಿಷೇಧಿತ ಸರಕಾಗಿದ್ದರೆ, ಆ್ಯಪ್‌ನಲ್ಲಿನ ಸ್ವಯಂಚಾಲಿತ ವ್ಯವಸ್ಥೆಯು ಆ ಸರಕನ್ನು ನಿರ್ಮೂಲನೆ ಮಾಡುತ್ತದೆ.  ಐಸಿಐಸಿಐ ಬ್ಯಾಂಕ್‌ ಮತ್ತು ಫಸ್ಟ್‌ ಡೇಟಾ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಜಿತೇಂದ್ರ ಗುಪ್ತ ಮತ್ತು ಅಮರೀಶ್‌ ರಾವ್‌  ಈ ಸ್ಟಾರ್ಟ್‌ಅಪ್‌ ಸ್ಥಾಪಿಸಿದ್ದಾರೆ.

‘ಸದ್ಯಕ್ಕೆ ಸಂಸ್ಥೆಯಲ್ಲಿ 350 ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ‘ಮಹಿಳಾ ಉದ್ಯಮಿಗಳ ಸಬಲೀಕರಣವೇ ‘ಸೆಲ್ಫಿ’ಯ ಮುಖ್ಯ ಉದ್ದೇಶವಾಗಿದೆ.   ತಿಂಗಳಿಗೆ ₹ 10 ಸಾವಿರಕ್ಕಿಂತ ಹೆಚ್ವು ವಹಿವಾಟು ನಡೆಸುವವರಿಂದ ವಿಳಾಸ ಧ್ರುಢೀಕರಣ ವಿವರಗಳನ್ನು ಸಂಗ್ರಹಿಸಲಾಗುವುದು.

ಇದರಿಂದ ಇಲ್ಲಿ ಯಾವುದೇ ವಂಚನೆಗೆ ಅವಕಾಶ ಇರಲಾರದು’ ಎಂದೂ ಅನೀಶ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT