ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜನಾ ಮತ್ತು ಆಕಸ್ಮಿಕ!

Last Updated 15 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ನಾಲ್ಕು ಭಾಷೆಗಳ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜನಾ, ಕೆಲವು ಸಿನಿಮಾಗಳಲ್ಲಿ ತೀರಾ ‘ಬೋಲ್ಡ್‌’ ಆಗಿ ಅಭಿನಯಿಸಿರುವುದೂ ಇದೆ. ಆ ಬಗ್ಗೆ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗಳಾಗುತ್ತವೆ.

‘ಅದೇನಿದ್ದರೂ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕಾಗಿ ಮಾತ್ರ. ನನ್ನ ಪಾತ್ರ ಏನನ್ನು ಕೇಳುತ್ತದೋ ಅದನ್ನು ನ್ಯಾಯಯುತವಾಗಿ ಕೊಡುತ್ತೇನೆ’ ಎಂಬುದು ಅವರ ಖಡಕ್ ನುಡಿ.

ಸಂಜನಾ ಚಿತ್ರರಂಗಕ್ಕೆ ಬಂದು ಹತ್ತು ವರ್ಷದ ಮೇಲಾಯಿತು. ಈ ಅವಧಿಯಲ್ಲಿ ಅವರು ಹೆಚ್ಚು ಸುದ್ದಿ ಮಾಡಿದ್ದು ಪಾತ್ರಗಳಿಂದಾಗಿಯೇ! ಅದರಲ್ಲೂ ತಿಲಕ್ ಜತೆಗಿನ ‘ಗಂಡ ಹೆಂಡತಿ’ ಚಿತ್ರದ ಹಸಿಬಿಸಿ ದೃಶ್ಯಗಳು ಪಡ್ಡೆಹುಡುಗರನ್ನು ಇನ್ನೂ ಕಾಡುತ್ತಿವೆ.

ಮತ್ತೆ ಅಂಥ ಚಿತ್ರಗಳಾಗಲೀ ಸನ್ನಿವೇಶಗಳಾಗಲೀ ಅವರನ್ನು ಸೆಳೆಯಲಿಲ್ಲ. ‘ಅದೊಂಥರ ಎಂಥದೋ ಸಿನಿಮಾ. ಆ ಸಮಯದಲ್ಲಿ ಬಂತು. ಪ್ರೇಕ್ಷಕರು ನೋಡಿದರು. ಅಷ್ಟೇ’ ಎಂದು ಸಂಜನಾ ತಣ್ಣನೆ ಪ್ರತಿಕ್ರಿಯೆ ನೀಡುತ್ತಾರೆ.

ಅದೇನೇ ಇದ್ದರೂ ಸ್ಪರ್ಧಾತ್ಮಕ ಕಾಲದಲ್ಲಿ ಈಗ ಸವಾಲು ಎನಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂಬುದು ಅವರ ನಿಲುವು. ಈ ವಾರ ತೆರೆ ಕಾಣುತ್ತಿರುವ ‘ಜಸ್ಟ್ ಆಕಸ್ಮಿಕ’ದಲ್ಲಿ ಪ್ರೇಕ್ಷಕರು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಪಾತ್ರ ಸಿಕ್ಕಿದೆ ಎಂದವರು ಖುಷಿಯಿಂದ ಹೇಳುತ್ತಾರೆ.

ತಿಲಕ್ ಜತೆ ಸಂಜನಾ ಅವರಿಗೆ ಇದು ಎರಡನೇ ಚಿತ್ರ. ಹಾಗೆ ನೋಡಿದರೆ ‘ಜಸ್ಟ್ ಆಕಸ್ಮಿಕ’ದಲ್ಲಿ ಅವರಿಗಿದು ಆಕಸ್ಮಿಕವಾಗಿಯೇ ಸಿಕ್ಕ ಅವಕಾಶ. ನಿರ್ದೇಶಕ ಹಿಮಾಯತ್ ಖಾನ್ ಈ ಮೊದಲು ಒಂದು ಸಿನಿಮಾ ನಿರ್ದೇಶಿಸಿದ್ದರು.

ಎರಡನೇ ಸಿನಿಮಾಕ್ಕೆ ಸಂಜನಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿ, ಕಥೆಯ ಸಾರವನ್ನು ಹೇಳಿದರು. ಅದರಲ್ಲಿನ ಒಂದು ಪಾತ್ರಕ್ಕೆ ತಿಲಕ್ ಸರಿಯಾಗಿ ಹೊಂದಿಕೆಯಾಗುತ್ತಾರೆ ಎಂದು ಸೂಚಿಸಿದ್ದೇ ಸಂಜನಾ ಅವರಂತೆ.

‘ಹೊಸ ಪ್ರತಿಭೆಗೆ ಅವಕಾಶ ಕೊಡುವ ಉದ್ದೇಶದಿಂದ ಓರ್ವ ನಾಯಕನ ಪಾತ್ರಕ್ಕೆ ವಿನೋದ್ ಪಾಟೀಲ ಅವರನ್ನು ಆಯ್ಕೆ ಮಾಡಿದರು. ಇನ್ನೊಬ್ಬ ನಾಯಕನ ಆಯ್ಕೆಗೆ ನಾನು ಸಲಹೆ ಮಾಡಿದ್ದನ್ನು ಪರಿಗಣಿಸಿದರು.

ಬಾಂಬೆ ವಿಲನ್ ಪಾತ್ರಕ್ಕೆ ಜೆ.ಕೆ ಕೂಡ ಹೊಂದಿಕೆಯಾಗುತ್ತಿದ್ದರು. ಆದರೆ ಅವರು ಬೇರೊಂದು ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದರು. ಹೀಗಾಗಿ ಅಂತಿಮವಾಗಿ ತಿಲಕ್ ಆಯ್ಕೆಯಾದರು’ ಎಂದು ನೆನಪಿಸಿಕೊಳ್ಳುತ್ತಾರೆ ಸಂಜನಾ.

ಬಾಂಬೆ ವಿಲನ್ ಎಂದಾಕ್ಷಣ ಭೂಗತ ಲೋಕದ ಚಿತ್ರವೇ ಎಂಬ ಪ್ರಶ್ನೆಗೆ ಸಂಜನಾ ಸ್ಪಷ್ಟ ಉತ್ತರವನ್ನೇನೂ ಕೊಡುವುದಿಲ್ಲ. ಆದರೆ ಅದೇ ಮಾದರಿಯ ಸಿನಿಮಾ ಇದು ಎಂದಷ್ಟೇ ಸುಳಿವು ಬಿಟ್ಟು ಕೊಡುತ್ತಾರೆ.

ಇಬ್ಬರು ಹೀರೊಗಳು ಇರುವ ‘...ಆಕಸ್ಮಿಕ’ದಲ್ಲಿ ಸಾಕಷ್ಟು ಕುತೂಹಲದ ಅಂಶಗಳಂತೂ ಇವೆ ಎನ್ನುತ್ತಾರೆ. ‘ಭೂಗತ ಲೋಕ ಅಂತೇನಿಲ್ಲ. ನಾಯಕನನ್ನು ವೈಭವೀಕರಿಸುವ ಸನ್ನಿವೇಶಗಳಾಗಲೀ ಸಾಹಸಗಳಾಗಲೀ ಇದರಲ್ಲಿ ಖಂಡಿತಾ ಇಲ್ಲ. ಇದು ಸ್ಟೈಲಿಶ್ ಸಿನಿಮಾ.

ಒಂದಷ್ಟು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಇದೆ. ಕಥೆಗೆ ಮಹತ್ವದ ತಿರುವು ಕೊಡುವ ಚಿಕ್ಕ ಚೊಕ್ಕ ಸನ್ನಿವೇಶಗಳೂ ಇವೆ. ಒಟ್ಟಾರೆ ನೋಡಿದರೆ ಪ್ರೇಕ್ಷಕನಿಗೆ ಬೇಸರ ಅನಿಸದಂತೆ ರೂಪಿಸಿರುವ ಸಿನಿಮಾ ಇದು’ ಎಂಬ ವಿವರ ಕೊಡುತ್ತಾರೆ.

‘ಆಕಸ್ಮಿಕ’ದ್ದು ಮಾಡರ್ನ್ ಏಜ್‌ ಲವ್‌ಸ್ಟೋರಿ. ಸಂಜನಾ ರೊಮ್ಯಾಂಟಿಕ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗುವಂತೆ ಅವರು ಒಂದಷ್ಟು ತೂಕ ಇಳಿಸಿಕೊಳ್ಳಬೇಕಾಯಿತಂತೆ.

‘ತನ್ನ ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡುವಂಥ ಹುಡುಗಿ. ಭಾವನೆಗಳೇ ಆಕೆಯ ಬದುಕು. ಆಕೆಯ ಜೀವನದಲ್ಲಿ ಪ್ರೇಮದ ಕನಸುಗಳು ಮೂಡಿದಾಗ ಬದುಕು ಬದಲಾಗುತ್ತದೆ. ಆದರೆ ಆಗ ಎದುರಾಗುವ ಅಡ್ಡಿ ಆತಂಕಗಳನ್ನೆಲ್ಲ ಹೇಗೆ ಎದುರಿಸುತ್ತಾಳೆ? ಇದು ನನ್ನ ಪಾತ್ರದ ಮಹತ್ವದ ಭಾಗ’ ಎನ್ನುತ್ತಾರೆ ಸಂಜನಾ.

ತಮ್ಮ ಪಾತ್ರದ ಸುತ್ತ ತಿರುಗುವ ಕಥೆ ಇದಾಗಿರುವುದರಿಂದ, ಯಾವತ್ತೂ ತಾವು ಅಭಿನಯದಲ್ಲಿ ಹಿಂದೆ ಬೀಳಬಾರದು ಎಂದು ಒಂದಷ್ಟು ಹೆಚ್ಚಿನ ತಯಾರಿಯನ್ನು ಅವರು ಮಾಡಿಕೊಂಡಿದ್ದಾರೆ. ನಿರ್ದೇಶಕ ಹಿಮಾಯತ್ ಖಾನ್ ಅವರದು ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು.

ಅವರು ಜಾಹೀರಾತುಗಳಷ್ಟೇ ಚೆಂದದಿಂದ ಸಿನಿಮಾವನ್ನು ಕಟ್ಟಿಕೊಡುತ್ತಾರೆ ಎಂದು ಬಣ್ಣಿಸುವ ಸಂಜನಾ, ಪ್ರತಿ ದೃಶ್ಯವನ್ನೂ ಅವರು ಸಂಯೋಜಿಸಿರುವ ಪರಿ ಗಮನ ಸೆಳೆಯುವಂತಿದೆ ಎನ್ನುತ್ತಾರೆ.

*
ಯೋಗ–ಬ್ಯಾಂಡ್ಮಿಂಟನ್

ಸಿನಿಮಾದ ಜೊತೆಜೊತೆಗೇ ಯೋಗದಲ್ಲೂ ಸಂಜನಾ ಕಾರ್ಯನಿರತರು. ಬೆಂಗಳೂರಿನ ಕೋರಮಂಗಲದಲ್ಲಿ ಏಳು ತಿಂಗಳ ಹಿಂದೆ ‘ಅಕ್ಷರ ಪವರ್ ಯೋಗ ಸೆಂಟರ್’ ಶುರು ಮಾಡಿರುವ ಅವರು, ಪ್ರತಿನಿತ್ಯ ಆಸಕ್ತರಿಗೆ ಯೋಗಪಾಠ ಹೇಳಿಕೊಡುತ್ತಾರೆ.

ಈ ಕೇಂದ್ರಕ್ಕೆ ಈಗಾಗಲೇ ಚಿತ್ರರಂಗದ ಹಲವಾರು ತಂತ್ರಜ್ಞರು ಹಾಗೂ ಕಲಾವಿದರು ಭೇಟಿ ನೀಡಿ, ಅಲ್ಪಾವಧಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇನ್ನೊಂದೆಡೆ, ಶೀಘ್ರವೇ ನಡೆಯಲಿರುವ ‘ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್‌’ನಲ್ಲಿ ತೆಲುಗು ತಂಡದ ಪರವಾಗಿ ಸಂಜನಾ ಆಟವಾಡಲಿದ್ದಾರೆ.

ಈ ಹಿಂದೆ ಬಿಡುಗಡೆಯಾದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ಒಂದು ಹಾಡಿನಲ್ಲಿ ಕಥಕ್ ನೃತ್ಯಕ್ಕೆಂದು ಹೆಜ್ಜೆ ಹಾಕಿರುವ ಸಂಜನಾ, ಇನ್ನೂ ಅದರ ಗುಂಗಿನಿಂದ ಹೊರಬಂದಿಲ್ಲ. ಈಗ ‘ಜಸ್ಟ್ ಆಕಸ್ಮಿಕ’ ತೆರೆ ಕಾಣುತ್ತಿದೆ.

ಮುಂದಿನ ತಿಂಗಳು ‘ಮಂಡ್ಯ ಟು ಮುಂಬೈ’ ಬಿಡುಗಡೆಯಾಗಲಿದೆ. ತಂಗಿ ನಿಕ್ಕಿ ಜತೆ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಕನಸು ಅವರಲ್ಲಿ ಬಹುದಿನಗಳಿಂದಲೂ ಇದೆ. ಅದಕ್ಕೆ ಇನ್ನೂ ಸಮಯ ಕೂಡಿ ಬರಬೇಕಿದೆ.

‘ನಿಕ್ಕಿ ಈಗ ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅಷ್ಟಕ್ಕೂ ನಾವಿಬ್ಬರೂ ಒಂದೇ ಚಿತ್ರದಲ್ಲಿ ನಟಿಸಬೇಕೆಂದರೆ ಸಾಕಷ್ಟು ತೂಕ ಇರುವ ಪ್ರಾಜೆಕ್ಟ್ ಸಿಗಬೇಕು’ ಎಂದು ಬಯಸುವ ಅವರು ಅದಕ್ಕಾಗಿ ಕುತೂಹಲದಿಂದ ಕಾಯುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT