ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯಪ್ರಜ್ಞೆಯ ನೆಚ್ಚಿ...

Last Updated 15 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಟರಾಗುವ ಆಸೆ ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟ ರಾಜ್‌, ಆದದ್ದು ಸಹ ನಿರ್ದೇಶಕ. ಸುಮಾರು ಹತ್ತು ವರ್ಷದ ದುಡಿಮೆಯ ಬಳಿಕ ಅವರು ನಿರ್ದೇಶಕನ ಪಟ್ಟ ಧರಿಸಿದ್ದಾರೆ. ‘ಪಾಸಿಬಲ್‌’ ಬಿಡುಗಡೆಯಾಗುತ್ತಿರುವ ಅವರ ಮೊದಲ ಸಿನಿಮಾವಾದರೂ, ಅವರು ಮೊದಲು ಆ್ಯಕ್ಷನ್ ಕಟ್‌ ಹೇಳಿದ್ದು ‘ಒನ್‌ ಟೈಮ್‌’ ಚಿತ್ರಕ್ಕೆ.

‘ಪಾಸಿಬಲ್’ ಚಿತ್ರದಲ್ಲಿ ಎರಡು ಕಥೆಗಳಿವೆ. ಮೊದಲರ್ಧ ನಾಯಕ–ನಾಯಕಿಯ ಪ್ರೇಮ ಪ್ರಸಂಗಗಳನ್ನು ಹೇಳಿದರೆ, ದ್ವಿತೀಯಾರ್ಧ ಸಂಪೂರ್ಣ ತಿರುವು ಪಡೆದುಕೊಳ್ಳುತ್ತದೆ. ಇಲ್ಲಿನ ನಾಯಕ ಪೊಲೀಸ್‌ ಅಧಿಕಾರಿಯಾಗುವ ಕನಸು ಕಾಣುವಾತ. ಆದರೆ ಆತನ ಸುತ್ತಲೇ ಕೊಲೆಯ ಆರೋಪ ಸುತ್ತಿಕೊಳ್ಳುತ್ತದೆ.

ಅದರಿಂದ ಹೊರಬರುವ ಆತ ತನ್ನಂತೆಯೇ ಅದೇ ಆರೋಪದಲ್ಲಿ ಸಿಲುಕಬಹುದಾದ ಇತರರನ್ನೂ ತನ್ನ ಸಮಯಪ್ರಜ್ಞೆಯಿಂದ ಕಾಪಾಡುತ್ತಾನೆ. ಪ್ರೀತಿಯನ್ನು ಉಳಿಸಿಕೊಳ್ಳುವ ಜತೆಗೆ ತನ್ನ ಕನಸನ್ನೂ ನನಸಾಗಿಸಿಕೊಳ್ಳುತ್ತಾನೆ ಎಂದು ಕಥಾಎಳೆಯನ್ನು ತುಸು ವಿವರಿಸುತ್ತಾರೆ ರಾಜ್‌.

ಬದುಕಿನಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರದ ಸಾಧ್ಯತೆ ಇರುತ್ತದೆ. ಅದು ಬಗೆಹರಿದ ಮಾತ್ರಕ್ಕೆ ಅಂತ್ಯವಾಗುವುದಿಲ್ಲ. ಯಾವುದಕ್ಕೂ ಅಂತ್ಯವಿಲ್ಲ. ಅದು ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ ಎಂದು ‘ಪಾಸಿಬಲ್‌’ ಶೀರ್ಷಿಕೆಯ ಹಿನ್ನೆಲೆಯನ್ನು ಅವರು ವಿವರಿಸುತ್ತಾರೆ.

ನಾಯಕ–ನಾಯಕಿಯ ಆರು ವರ್ಷದ ಪ್ರೀತಿಯನ್ನು ಒಂದೇ ಹಾಡಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ ಎನ್ನುವ ರಾಜ್‌, ನಾಯಕನ ಪರಿಚಯದ ಹಾಡನ್ನು 600 ಅಡಿ ಎತ್ತರದ ಕಟ್ಟಡದಲ್ಲಿ ಚಿತ್ರೀಕರಿಸಿದ ಸಾಹಸವನ್ನು ಹಂಚಿಕೊಳ್ಳುತ್ತಾರೆ.

ಉತ್ತರಾರ್ಧದಲ್ಲಿ ಸಸ್ಪೆನ್ಸ್‌ ಪ್ರೇಕ್ಷಕರನ್ನು ತೀವ್ರವಾಗಿ ಹಿಡಿದಿಡುತ್ತದೆ. ಆದರೆ ಸನ್ನಿವೇಶಗಳನ್ನು ತೀರಾ ಗಂಭೀರವಾಗಿ ಚಿತ್ರಿಸಲು ಹೋಗಿಲ್ಲ. ಚಿತ್ರದುದ್ದಕ್ಕೂ ದ್ವಂದ್ವಾರ್ಥವಿಲ್ಲದ ಪರಿಶುದ್ಧ ಹಾಸ್ಯವಿದೆ ಎನ್ನುತ್ತಾರೆ ಅವರು.

ಕಿರುತೆರೆಯ ನಟ ಸೂರ್ಯ ಅವರಿಗೆ ಇದು ನಾಯಕರಾಗಿ ಮೊದಲ ಅನುಭವ. ಸಿನಿಮಾಕ್ಕೆ ಅಗತ್ಯವಾದ ಒಂದಷ್ಟು ತರಬೇತಿಯನ್ನು ಅವರಿಗೆ ನೀಡಲಾಗಿದೆ. ನಾಯಕಿ ಶ್ರಾವ್ಯ ಅವರ ಮಾಗಿದ ಅಭಿನಯ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು.

ಜಹಾಂಗೀರ್‌, ಪವನ್ ಕುಮಾರ್‌, ಮನ್‌ದೀಪ್‌ ರಾಯ್‌, ಶ್ವೇತಾ, ಮೋಹನ್ ಜುನೇಜಾ ಮುಂತಾದ ಹಾಸ್ಯ ಕಲಾವಿದರ ದಂಡೇ ಚಿತ್ರಕ್ಕೆ ಕೆಲಸ ಮಾಡಿದೆ. ಜತೆಗೆ ರಾಮಕೃಷ್ಣ, ಶೋಭರಾಜ್‌, ಪದ್ಮಾ ವಾಸಂತಿ ಅವರಂತಹ ಹಿರಿಯ ಕಲಾವಿದರ ಅಭಿನಯವೂ ಇದೆ.

ತಾಂತ್ರಿಕ ವರ್ಗದ ಬಳಗದವರೆಲ್ಲರೂ ಇದುವರೆಗೆ ಸಹಾಯಕರಾಗಿ ಕೆಲಸ ಮಾಡಿದವರು. ಹೀಗಾಗಿ ಅನುಭವಿ ಕಲಾವಿದರು ಮತ್ತು ತಂತ್ರಜ್ಞರ ನೆರವು ದೊರಕಿದೆ ಎಂಬ ಖುಷಿ ಅವರದು. ನಿರ್ಮಾಪಕರು ಆಸ್ಟ್ರೇಲಿಯಾದಲ್ಲಿ ಇರುವುದರಿಂದ ನಿರ್ದೇಶಕರಿಗೆ ಹೆಚ್ಚು ಸ್ವಾತಂತ್ರ್ಯ ದೊರಕಿದೆಯಂತೆ. ತಾವು ಅಂದುಕೊಂಡಂತೆ ಸಿನಿಮಾ ಬಂದಿದೆ ಎಂಬ ನೆಮ್ಮದಿ ಅವರಲ್ಲಿದೆ.

ಅವರ ಪದಾರ್ಪಣೆಯ ‘ಒನ್‌ ಟೈಂ’ ಚಿತ್ರ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. 15 ನಿರ್ದೇಶಕರು ನಟಿಸಿರುವ ಈ ಚಿತ್ರದಲ್ಲಿ ‘ಪ್ರೀತಿಸಿದವರು ಮನೆಬಿಟ್ಟು ಹೋಗುವುದು ಸರಿಯಲ್ಲ’ ಎಂಬ ಸಂದೇಶವಿದೆಯಂತೆ.

ಸ್ವಂತ ಉದ್ಯೋಗದಿಂದ ಸಿನಿಮಾದೆಡೆ
ತುಮಕೂರಿನ ಕುಣಿಗಲ್‌ ಮೂಲದವರಾದ ರಾಜ್‌, ಮೈಸೂರಿನಲ್ಲಿ ಎಂಜಿನಿಯರಿಂಗ್‌ ಮುಗಿಸಿದವರು. ಬಾಲ್ಯದಿಂದಲೂ ನಿರೂಪಣೆಯ ಒಲವು. ಸುಮಾರು 300 ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಅನುಭವ ಗಿಟ್ಟಿಸಿಕೊಂಡ ಅವರಲ್ಲಿ ಕ್ರಮೇಣ ನಟನೆಯ ಹಂಬಲ ಮೂಡಿತು.

ಆದರೆ ಆದದ್ದು ನಿರ್ದೇಶಕ. ಸ್ವಂತ ಉದ್ಯೋಗಕ್ಕೆ ಕೈಹಾಕಿದ್ದ ಅವರದು ಪ್ರೇಮ ವಿವಾಹ. ಅವರಲ್ಲಿನ ಸಿನಿಮಾ ಆಸಕ್ತಿಗೆ ನೀರೆರೆದವರು ಅವರ ಪತ್ನಿ. ಬದುಕಿಗೆ ಆಸರೆಯಾದ ಉದ್ಯೋಗವನ್ನು ಪತ್ನಿಗೆ ವಹಿಸಿರುವ ಅವರೀಗ ಮೊದಲ ಸಿನಿಮಾ ಬಿಡುಗಡೆಯ ಪುಳಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT