ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಸಂಜೆಯ ಮರೆವು ಮುಳ್ಳಾಗದಿರಲಿ

Last Updated 16 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಜ್ಞಾಪಕಶಕ್ತಿ ಕ್ಷೀಣತೆಯ ಕಾಯಿಲೆ ‘ಅಲ್ಜೀಮರ್’ ಬಗೆಗಿನ ಚಲನಚಿತ್ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನೋಡಲು ಪತ್ನಿ ಜೊತೆ ಹೋಗಿದ್ದೆ. ಚಿತ್ರ ನೋಡಿ ಮನೆಗೆ ಬಂದಾಗ ನನ್ನವಳು ‘ನಿಮಗೂ ಅರವತ್ತು ವರ್ಷವಾಯ್ತು. ಅಂಗಡಿಯಿಂದ ಐದು ಸಾಮಾನು ತರಲು ಹೇಳದರೆ, ಎರಡನ್ನು ಮರೆತು ಬರುತ್ತೀರಿ. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತೀರಿ, ಬಾಳೆಹಣ್ಣಿಗೆ ಮೊಸಂಬಿ ಎನ್ನುತ್ತೀದ್ದೀರಿ’ ಎಂದಳು.

ನಾನು ‘ಇದೆಲ್ಲಾ ಈ ವಯಸ್ಸಿನಲ್ಲಿ ಸ್ವಾಭಾವಿಕ; ಏಕೆ ಕೆಟ್ಟದ್ದನ್ನು ವಿಚಾರ ಮಾಡಬೇಕು?’ ಎಂದಾಗ ‘ಮೊದಲು ವೈದ್ಯರನ್ನು ಸಂಪರ್ಕಿಸಿ ನಾರ್ಮಲ್ ಆಗಿದ್ದರೀರೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಿ’ ಎಂದಳು ನನ್ನ ಹೆಂಡತಿ. ಇಂಥ ಆತಂಕ  ವೃದ್ಧರಿರುವ ಮನೆಯಲ್ಲಿ ಸಾಮಾನ್ಯ.

ಎಳೆಯ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನ ಕೊನೆಯ ದಿನದವರೆಗೂ ಮರೆವು ಯಾರನ್ನು ಬಿಟ್ಟಿಲ್ಲ. ಇಳಿ ವಯಸ್ಸಿನ ಸ್ವಾಭಾವಿಕ ಅರಳು ಮರುಳುವಿನ ಸಂಭವ 65 ವರ್ಷದ ನಂತರ ಶೇ.40ರಷ್ಟು.

ಹಾಗೆಯೇ 60 ವರ್ಷದ ನಂತರ ಮರೆವಿನ ಕಾಯಿಲೆಯ ಸಂಭವ ಶೇ.8ರಷ್ಟು. ಇವುಗಳ ವ್ಯತ್ಯಾಸದ ಅರಿವು ಅತಿ ಮುಖ್ಯ. ಏಕೆಂದರೆ ಅಸಹಜ ಮರೆವಿನ ಅನೇಕ ಕಾಯಿಲೆಗಳಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇದನ್ನು ಬೇಗ ಗುರುತಿಸಿ ಮುಂಜಾಗ್ರತೆ ವಹಿಸಿದರೆ ರೋಗಿ ಮತ್ತು ಕುಟುಂಬಕ್ಕೆ ಮುಂದೆ ಎದುರಾಗುವ ಅನಾಹುತವನ್ನು ತಪ್ಪಿಸಬಹುದು.

ಹಾಗಾದರೆ ಇಳಿ ವಯಸ್ಸಿನ ಸಹಜ ಮರೆವು (ವಾರ್ಧಕ್ಯ ಜನ್ಯ) ಮತ್ತು ಅಸಹಜ ಮರೆವನ್ನು ಹೇಗೆ  ಗುರುತಿಸುವುದು?

ಸಹಜ ಮರೆವಿನಲ್ಲಿ ಕೇವಲ ಜ್ಞಾಪಕಶಕ್ತಿ ಮಾತ್ರ ಕ್ಷೀಣಿಸುತ್ತದೆ; ರೋಗಸೂಚಕ ಮರೆವಿನಲ್ಲಿ ಜ್ಞಾಪಕಶಕ್ತಿಯಲ್ಲದೆ, ವಿವೇಚನೆ, ಲೆಕ್ಕಾಚಾರ, ಭಾಷಾಸಾಮರ್ಥ್ಯ, ಸಮಸ್ಯೆಯನ್ನು ವಿಶ್ಲೇಷಿಸುವ, ಸರಿನಿರ್ಧಾರದ ಚಾತುರ್ಯ, ತನ್ನ ಬೇಕು–ಬೇಡಗಳನ್ನು ನಿರ್ಧರಿಸುವ ಶಕ್ತಿ ಕುಂದಿರುತ್ತದೆ.

ಸಹಜ ಮರೆವು ವ್ಯಕ್ತಿಗೆ ಮಾತ್ರ ಸಮಸ್ಯೆ ಆಗಿರುತ್ತದೆ. ಆದರೆ ಅಸ್ವಾಭಾವಿಕ ಮರೆವು ಸಂಬಂಧಿಗಳಿಗೆ, ಜೊತೆಗಿರುವವರಿಗೂ ಚಿಂತೆಯಾಗಿರುತ್ತದೆ. ರೋಗಿಗೆ ತನ್ನ ಸಮಸ್ಯೆಯ ಅರಿವು ಇರದು.

ಮದುವೆಯ ಕಾರ್ಯಕ್ರಮದಂಥ ಗದ್ದಲದಲ್ಲಿ ಪರಿಚಯವಾದ ವ್ಯಕ್ತಿ ಹೆಸರು ಮರೆಯುವುದು ಸಹಜ. ಆದರೆ ಅಸಹಜ ಮರೆವಿನವರು 30–40 ವರ್ಷಗಳ  ಜೀವನಸಂಗಾತಿಯಾದ ಪತಿ/ಪತ್ನಿಯ ಹೆಸರನ್ನೂ ಮರೆಯುತ್ತಾರೆ.

ಕಚೇರಿ ಕೆಲಸ, ಮಕ್ಕಳು, ಅತ್ತೆ ಮಾವಂದಿರ ಕಾಳಜಿ - ಹೀಗೆ ಹಲವಾರು ಜವಾಬ್ದಾರಿ ನಿರ್ವಹಿಸುವ ವ್ಯಕ್ತಿ ಬೈಕ್ ಅಥವಾ ಕಾರ್‌ನ ಬೀಗದ ಕೈ ಇಟ್ಟಿರುವ ಜಾಗವನ್ನು ಅಪರೂಪಕ್ಕೆ ಮರೆಯುವುದು ಸಾಮಾನ್ಯ. ಕಾರ್, ಬೈಕ್ ಇದ್ದರೂ ನನ್ನ ಹತ್ತಿರ ಅವು ಇಲ್ಲ  ಎನ್ನುತ್ತಿದ್ದರೆ ಅಂಥ ವ್ಯಕ್ತಿಗೆ ವೈದ್ಯರ ಸಲಹೆ ಅವಶ್ಯ.

ಕಾಯಿಲೆ ಸೂಚಕದ ಇತರ ಲಕ್ಷಣಗಳೆಂದರೆ ಪ್ರಶ್ನೆ, ಹೇಳಿಕೆ, ಕಥೆಗಳನ್ನು ಪುನರಾವರ್ತಿಸುವುದು; ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ವಸ್ತುವನ್ನು ಇಟ್ಟ ಸ್ಥಳವನ್ನು ಮರೆಯುವುದು ಮತ್ತು ಇಟ್ಟ ಸ್ಥಳವನ್ನು ನೆನಪಿಸಿಕೊಳ್ಳಲು ಸಾಧ್ಯವಾಗದಿರುವುದು; ದಿನಾಂಕ, ದಿನ, ತಿಂಗಳು, ಸಮಯವನ್ನು ಗುರುತಿಸಲು ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಕಷ್ಟಪಡುವುದು.

ಕನ್ನಡಿಯಲ್ಲಿನ ತಮ್ಮ ಮುಖವನ್ನು ಗುರುತಿಸಲು ವಿಫಲರಾಗಿ, ಅಲ್ಲಿರುವ ವ್ಯಕ್ತಿ ಬೇರೆಯವರೆಂದು ಅವರ ಹೆಸರು ಕೇಳುವುದು, ತಮ್ಮ ಚಿತ್ರದ ಜೊತೆಯೇ ಮಾತು, ವಾಗ್ವಾದ ಮಾಡುವುದೂ ಉಂಟು.

ಹಣಕಾಸು ವ್ಯವಹಾರದಲ್ಲಿ ತೊಂದರೆ - ಹಣ ಎಣಿಸಲು, ಸರಿ ಚಲ್ಲರೆ ವಾಪಸ್‌ ಕೊಡಲು ತೊಂದರೆ ಅಥವಾ ಮರೆತು ಬಿಡುವುದು. ಈ ಮೊದಲು ಹಣದ ವಿಚಾರದಲ್ಲಿ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದ ವ್ಯಕ್ತಿ ಈಗ ಉದಾರಿಯಾಗಿ, ಪೂರ್ವಾಪರ ಯೋಚಿಸದೆ ಖರ್ಚು ಮಾಡಲು ತೊಡಗಬಹುದು! ಸೀರೆ ತೊಡಲು, ಅಡುಗೆ ಮಾಡಲು ಮುಂಚೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುತ್ತಾರೆ.

ಹೆಸರನ್ನು ಅದಲು ಬದಲು ಮಾಡುವುದು, ಟೇಬಲ್‌ಗೆ ಹಾಸಿಗೆ ಎನ್ನುವುದು, ಸಕಾರಣವಿಲ್ಲದೆ ಮನಸ್ಸು–ನಡವಳಿಕೆ ಬದಲಾಗುವುದು. ವಾಹನ ಚಲಾಯಿಸಲು, ರಿಮೋಟ್ ಕಂಟ್ರೋಲ್, ದೂರವಾಣಿ, ಗಡಿಯಾರ ಮುಂತಾದವುಗಳನ್ನು ಬಳಸಲು ತೊಂದರೆ ಕಾಣಿಸಿಕೊಳ್ಳಬಹುದು.

ಈ ಮುಂಚಿನ ಹವ್ಯಾಸಗಳನ್ನು (ಉದಾ: ಬರವಣಿಗೆ, ವಾಕಿಂಗ್) ಮರೆತು ಬಿಡುವುದು, ಪರಿಚಿತರನ್ನು ಗುರುತಿಸಲು ಆಗದಿರುವುದು. ಈ ಮೊದಲು ಏಕಪತ್ನಿ ವ್ರತಸ್ಥರಾಗಿದ್ದವರು ಈಗ ಹೆಂಗಸರೊಂದಿಗೆ ಚೆಲ್ಲು ಚೆಲ್ಲಾಗಿ ವರ್ತಿಸಲು ತೊಡಗಬಹುದು!

ಮರೆವಿನ ಕಾಯಿಲೆ ತಪ್ಪಿಸಲು ಕೆಲವು ಉಪಾಯಗಳು:
ಮೆದುಳಿಗೆ ವ್ಯಾಯಾಮವಿದ್ದರೆ ಮನಸ್ಸು ನೆಮ್ಮದಿಯಾಗಿ ನೆನಪು ಹೆಚ್ಚುತ್ತದೆ. ಕೆಲವು ಮೆದುಳು ವ್ಯಾಯಾಮ ಹೀಗಿವೆ: ಚೆಸ್, ಬ್ರಿಡ್ಜ, ಸ್ಕ್ರಾಬಲ್, ಕ್ರಾಸ್ ವರ್ಡ, ವರ್ಡ್‌ ಪಜಲ್, ನಂಬರ್ ಪಜಲ್, ಸೂಡೊಕೊ ಆಟಗಳನ್ನು ಆಡಬಹುದು.

ಮೆದುಳಿಗೆ ಚೈತನ್ಯ ನಿಡುವಂಥ  ಬರಹ–ಪುಸ್ತಕಗಳನ್ನು ಓದಿರಿ. ದೈಹಿಕ ವ್ಯಾಯಾಮದಲ್ಲಿ ಹಿನ್ನೆಲೆಯಲ್ಲಿ ಸಂಗಿತವಿರಲಿ. ಒತ್ತಡದಿಂದ ದೂರವಿರಿ. ಲೈಂಗಿಕ ಕಿರುಕುಳ, ಕ್ರೌರ್ಯ, ಸಾಮಾಜಿಕ ಒತ್ತಡಗಳಿಂದ ಮೆದುಳಿನ ನೆನಪಿನ ಶಕ್ತಿಕೇಂದ್ರಗಳಾದ ಹಿಪ್ಪೋಕ್ಯಾಂಪಸ್ ಮತ್ತು ಅಮ್ಯಾಗಡಲ್‌ಗೆ ಅಳಿಸಲಾಗದ ಹಾನಿಯಾಗಿ, ಶಾಶ್ವತವಾಗಿ ಜ್ಞಾಪಕ ಶಕ್ತಿ ಕಳೆದುಕೊಳ್ಳುವ ಅಪಾಯವಿದೆ.

ಆಹಾರದ ಮೇಲೆ ಕಣ್ಣಿರಲಿ: ಗ್ರೀನ್ ಚಹ, ವಾಲ್‌ನಟ್, ಹಣ್ಣು–ಹಸಿರು ತರಕಾರಿಗಳು ಮೆದುಳಿನ ನರಕೋಶವೃದ್ಧಿಗೆ ಉತ್ತಮ. ರಕ್ತದೊತ್ತಡ, ಸಕ್ಕರೆಕಾಯಿಲೆಯಿಂದ ಮೆದುಳಿಗೆ ರಕ್ತಚಲನೆಯ ತಡೆಯಾಗುವುದರಿಂದ ಇವುಗಳಿಗೆ ಶೀಘ್ರ ಚಿಕಿಕ್ಸೆ ಅವಶ್ಯ. ಸಕ್ಕರೆ ಅಂಶಗಳಿರುವ ಆಹಾರಸೇವನೆಯಿಂದ ನೆನಪಿನ ಕ್ಷೀಣತೆ ಸಾಧ್ಯ. ಆದ್ದರಿಂದ ಅವುಗಳ ಸೇವನೆಯಲ್ಲಿ ಹಿಡಿತವಿರಲಿ.

ಗುಂಪು ಚಟುವಟಿಕೆ ಮತ್ತು ಆಟಗಳಲ್ಲಿ ಭಾಗವಹಿಸಿರಿ. ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ದಿನಕ್ಕೆ ಕನಿಷ್ಠ 6ರಿಂದ  8 ಗಂಟೆ ನಿದ್ದೆ ಮಾಡಿರಿ. ನೆನಪಿನ ಘನೀಕರಣ ಮತ್ತು ಶೇಖರಣೆ ನಿದ್ರೆಯಲ್ಲೇ ಆಗುವುದು.

***
ಆಲ್ಜೀಮರ್

ಪಿಕ್, ಹಂಟಿಂಗ್‌ಟನ್, ಲೆವಿಬಾಡಿ ಎಂಬ ಹಲವಾರು ನೆನಪಿನ ಕಾಯಿಲೆಗಳಿದ್ದು ಮುಖ್ಯವಾದುದು ಆಲ್ಜೀಮರ್. ಇದೊಂದು ಸ್ಪಷ್ಟ ಕಾರಣಗೊತ್ತಿಲ್ಲದ, ಮೆದುಳು ಸವೆತದ, ಇಳಿ ವಯಸ್ಸಿನರಲ್ಲಿ ಕಂಡುಬರುವ ಸಾಮಾನ್ಯವಾದ ಕಾಯಿಲೆ.

ಈ ಸಮಸ್ಯೆ ಇರುವವರಲ್ಲಿ ದಿನ ನಿತ್ಯದ ಕೆಲಸ ಕಾರ್ಯ, ಮಾನಸಿಕ ಬೌದ್ಧಿಕ ಸಾಮರ್ಥ್ಯ ಕಡಿಮೆಯಾಗಿ ಜೀವನಶೈಲಿ ಅಸ್ವಸ್ಥವಾಗುತ್ತದೆ. ರೋಗಿಯ ಸಾವು ರೋಗ ಲಕ್ಷಣಗಳಿಂದಾಗದು.

ಆದರೆ ಅಪಘಾತ, ತಲೆಗೆ ಪೆಟ್ಟು,ಸೊಂಕಿನ ಕಾಯಿಲೆ, ಸಕ್ಕರೆ ಅಥವಾ ರಕ್ತದೊತ್ತಡದ ಉಲ್ಬಣತೆಯಿಂದ ಸಾಧ್ಯ. ರೋಗವನ್ನು ನಿರ್ಧರಿಸಲು ನೆನಪಿನ ಪರೀಕ್ಷೆ ಅತ್ಯಾವಶ್ಯ. ಮೆದುಳಿನ ಸಿಟಿ, ಎಮ್.ಆರ್,ಐ. ತಪಾಸಣೆ ಅತ್ಯಾವಶ್ಯ.

ಕಾಯಿಲೆ ಬರುವ ಸಂಭವವನ್ನು ರಕ್ತಪರಿಕ್ಷೆಯಿಂದ ಮೂರು ಗಂಟೆಯಲ್ಲಿ ಗುರುತಿಸುವ ವಿಧಾನವನ್ನು ಲಂಡನ್ನಿನ ದ್ಯಾನ್‌ಡಾಕ್ಸ್ ಪ್ರಯೋಗಾಲಯ ಸಂಶೋಧಿಸಿದೆ. ಇದೊಂದು ಡಿ.ಎನ್.ಎ. ಪರೀಕ್ಷೆಯಾಗಿದ್ದು ರಕ್ತದಲ್ಲಿನ ಅಪೊಲಿಪೊಪ್ರೋಟಿನ ಗುರುತಿಸುವುದಾಗಿದೆ.

***
ಮರೆವಿನ ಕಾಯಿಲೆಯ ಲಕ್ಷಣಗಳಿದ್ದಾಗ ನರರೋಗ ತಜ್ಞ, ಮನೋತಜ್ಞ ಅಥವಾ ವೃದ್ಧರರೋಗ ತಜ್ಞ(ಜೆರಿಯಾಟ್ರಿಷಿಯನ್)ರನ್ನು ಸಂಪರ್ಕಿಸಿರಿ.
ಚಿಕಿಕ್ಸೆ/ಆರೈಕೆ: ಈ ಕಾಯಿಲೆಗೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದ್ದರಿಂದ ವ್ಯಯಕ್ತಿಕ ಕಾಳಜಿ ಮತ್ತು ಮುಂಜಾಗ್ರತೆಗಳೇ ಅತಿ ಮುಖ್ಯ.

ಈ ಸಮಸ್ಯೆಯಿಂದ ಬಳಲುವವರನ್ನು ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳಿ. ಇವರ ವಸ್ತು, ಬಟ್ಟೆ, ಸಾಮಾನುಗಳನ್ನು ಅವರ ಸಮೀಪದಲ್ಲಿಟ್ಟು ಇವುಗಳಿಗಾಗಿ ದೂರ ಹುಡುಕಿಕೊಂಡು ಹೋಗದಂತೆ ನೋಡಿಕೊಳ್ಳಿರಿ. ಮನೆ ಹೊರಗೆ ಒಂಟಿಯಾಗಿ ಹೋಗಲು ಬಿಡಬೇಡಿ. ಸದಾ ಯಾರಾದರೂ ಇವರ ಜೊತೆಗಿರಲಿ. ಕೈ ಅಥವಾ ಕೊರಳಲ್ಲಿ ಗುರುತಿನ ಚಿಟಿ ಇರಲಿ.

ಅವರ ನೆನಪನ್ನು ಕೆದಕಬೇಡಿ, ನೆಂಟರು, ಸ್ನೇಹಿತನನ್ನು ನೀವೇ ಪರಿಚಯ ಮಾಡಿರಿ. ಹಣಕಾಸು ವ್ಯವಹಾರವನ್ನು ಬೇರೆಯವರಿಗೆ ವಹಿಸಿಕೊಡಿ. ಸಕ್ಕರೆ ಅಥವಾ ರಕ್ತದೊತ್ತಡಂತಹ ಕಾಯಿಲೆಗಳಿದ್ದರೆ ಚಿಕಿತ್ಸೆ ಕೊಡಿಸಿ.
ಹೆಚ್ಚಿನ ಮಾಹಿತಿಗೆ: 9448579390 (ಲೇಖಕರು  ಮಕ್ಕಳ ತಜ್ಞರು)
–ಡಾ. ಎಮ್.ಡಿ. ಸೂರ್ಯಕಾಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT