ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡದ ಕೂದಲಿಗೆ ಬೇಕಾದ ಚಿಕಿತ್ಸೆ

ಅಂಕುರ
Last Updated 16 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕೆಲವು ಮಹಿಳೆಯರಲ್ಲಿ ಮಾತ್ರ ಬೇಡದ ಸ್ಥಳದಲ್ಲಿ ಕೂದಲು ಬೆಳೆಯುತ್ತದೆ ಏಕೆ?

ಕೆಲವು ಮಹಿಳೆಯರಲ್ಲಿ ಪುರುಷ ಹಾರ್ಮೋನ್ ಸ್ರವಿಸುವಿಕೆಯ ಪ್ರಮಾಣ ಹೆಚ್ಚಿರುತ್ತದೆ. ಇದರಿಂದಾಗಿ ಚರ್ಮ ಅತಿಸೂಕ್ಷ್ಮವಾಗುತ್ತದೆ. ಬೇಡದ ಭಾಗದಲ್ಲಿ ಕೂದಲು ಬೆಳೆಯಲು ಇದು ಮುಖ್ಯ ಕಾರಣ.

ಬೇಡದ ಕೂದಲು ಬೆಳೆಯುವಷ್ಟು ಅಧಿಕ ಟೆಸ್ಟೋಸ್ಟೆರನ್ ಎಲ್ಲ ಮಹಿಳೆಯರಲ್ಲಿ ಸ್ರವಿಸುವುದಿಲ್ಲ. ಸೂಕ್ಷ್ಮ ಚರ್ಮ ಇಡೀ ಜೀವನ ನಿಮ್ಮೊಂದಿಗೆ ಇದ್ದರೂ, ಚರ್ಮದ ಮೇಲೆ ಪುರುಷ ಹಾರ್ಮೋನ್‌ಗಳ ಪ್ರಭಾವ ಕುಂಠಿತಗೊಳಿಸುವ ಚಿಕಿತ್ಸೆ ಲಭ್ಯವಿದೆ.

ಹಿರುಟಿಸಂ; ನಿಮ್ಮೊಬ್ಬರ ಸಮಸ್ಯೆಯಲ್ಲ
ಅಸಹಜ ಕೂದಲು ಬೆಳವಣಿಗೆ ನಿಮ್ಮೊಬ್ಬರ ಸಮಸ್ಯೆಯಲ್ಲ. ನಿಮ್ಮಂತೆಯೇ ಇಂಥ ಸಮಸ್ಯೆ ಎದುರಿಸುತ್ತಿರುವ ಅಸಂಖ್ಯಾತ ಮಹಿಳೆಯರು ಇದ್ದಾರೆ. ನಿಮ್ಮ ದೇಹಸ್ಥಿತಿ ಸಹಜವಾಗಿಯೇ ಇದೆ, ಗಾಬರಿಯಾಗಬೇಡಿ.

ಕೆಲವು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಹಾರ್ಮೋನ್‌ ವೈಪರಿತ್ಯ ಗಂಭೀರ ಸ್ಥಿತಿಗೆ ಮುಟ್ಟಿದ್ದನ್ನು ಹಿರುಟಿಸಂ ಸಂಕೇತಿಸಬಹುದು. ಇದನ್ನು ಪತ್ತೆ ಹಚ್ಚಲು ಹೆಚ್ಚಿನ ತಪಾಸಣೆ ಅಗತ್ಯ.

ಕೆಲವು ಪ್ರಕರಣಗಳಲ್ಲಿ ಜನನಾಂಗದ ಬದಲಾವಣೆಗಳೂ ಕಂಡು ಬರುತ್ತವೆ. ಭಗಾಂಕುರ ಹಿಗ್ಗುವಿಕೆ, ಸ್ತನಗಳ ಕುಗ್ಗುವಿಕೆ, ಕಪೋಲ ಭಾಗದಲ್ಲಿ ಕೂದಲು ಉದುರುವಿಕೆಯ ಅನುಭವವಾಗುತ್ತದೆ.

ಹಿರುಟಿಸಂ ವಿಧಗಳು
ಹಿರುಟಿಸಂ ಸಾಧಾರಣದಿಂದ ತೀವ್ರ ಹಂತದವರೆಗೆ ಹಲವು ರೀತಿಯಲ್ಲಿ ಪರಿಣಾಮ ತೋರುತ್ತದೆ. ಕೆಲವು ಮಹಿಳೆಯರಲ್ಲಿ ಸಾಮಾನ್ಯ ಮಟ್ಟದ ಪುರುಷ ಹಾರ್ಮೋನ್‌ಗಳು ಇರುತ್ತವೆ. ಇದನ್ನು ಇಡಿಯೋಪತಿಕ್ ಹಿರುಟಿಸಮ್ ಎನ್ನುತ್ತಾರೆ. ಇದಕ್ಕೆ ಏನು ಕಾರಣ ಎಂಬುದು ತಿಳಿದಿಲ್ಲ.

ಕೆಲವರಲ್ಲಿ ಪುರುಷ ಹಾರ್ಮೋನ್‌ಗಳ ಪ್ರಮಾಣ ತುಸು ಹೆಚ್ಚಾಗಿರುತ್ತದೆ. ಇದಕ್ಕೆ ಒಂದು ಕಾರಣವೆಂದರೆ ಈಸ್ಟ್ರೊಜನ್ ಮತ್ತು ಪ್ರೊಗೆಸ್ಟ್ರೋನ್ ಹಾರ್ಮೋನ್‌ಗಳ ಸ್ರವಿಸುವಿಕೆ ಹೆಚ್ಚಾಗುವುದು.

ಕೆಲವು ಅಪರೂಪದ ಪ್ರಕರಣಗಳಲ್ಲಿ ಇವು ಪುರುಷರಲ್ಲಿ ಇರುವಷ್ಟೇ ಪ್ರಮಾಣ ಮುಟ್ಟುತ್ತದೆ. ಆಗ ಮಹಿಳೆಯರ ಅಂಡಾಶಯ ಮತ್ತು ಅಡ್ರಿನಲ್‌ ಗ್ರಂಥಿಗಳಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ.

ಬೇಡದ ಕೂದಲ ಪತ್ತೆ ಹೇಗೆ?
ಹಿರುಟಿಸಂ ಸಮಸ್ಯೆ ಹೊಸದಾಗಿ ಕಾಣಿಸಿಕೊಂಡಿದ್ದರೆ, ವೈದ್ಯರು ರಕ್ತ ಪರೀಕ್ಷೆಗೆ ಶಿಫಾರಸು ಮಾಡುತ್ತಾರೆ. ಟೆಸ್ಟೊಸ್ಟ್‌ರೋನ್ ಪ್ರಮಾಣ ಪರಿಶೀಲಿಸುತ್ತಾರೆ.
* ಇದು ಸಾಮಾನ್ಯ ಸ್ಥಿತಿಯಲ್ಲಿದ್ದರೆ ಹೆಚ್ಚುವರಿ ಪರೀಕ್ಷೆಯ ಅಗತ್ಯವೇ ಇರುವುದಿಲ್ಲ.

* ಟೆಸ್ಟೊಸ್ಟ್‌ರೋನ್ ಪ್ರಮಾಣ ಕೊಂಚ ಹೆಚ್ಚಾಗಿರುವುದು ಗಮನಕ್ಕೆ ಬಂದರೆ, ವೈದ್ಯರು ಅಂಡಾಶಯದ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗೆ ಸೂಚಿಸಬಹುದು.
(ಅಲ್ಟ್ರಾಸೌಂಡ್‌ ಸ್ಕ್ಯಾನ್‌ ಧ್ವನಿ ತರಂಗಗಳನ್ನು ಬಳಸಿ ಹೊಟ್ಟೆಯ ಒಳಭಾಗದ ಚಿತ್ರವನ್ನು ಮೂಡಿಸುತ್ತದೆ. ಈ ತಂತ್ರವು ಸಾಮಾನ್ಯವಾಗಿ ತಾಯಿಯ ಗರ್ಭದಲ್ಲಿರುವ ಮಗುವಿನ ಸ್ಥಿತಿ ಪರಿಶೀಲಿಸಲು ಬಳಕೆಯಾಗುತ್ತದೆ)

* ನಿಮ್ಮ ದೇಹದಲ್ಲಿ ಟೆಸ್ಟೊಸ್ಟ್‌ರೋನ್ ಪ್ರಮಾಣ ವಿಪರೀತ ಹೆಚ್ಚಾಗಿದ್ದರೆ, ಹಿರುಟಿಸಂ ಈಚೆಗಷ್ಟೇ ಕಾಣಿಸಿಕೊಂಡಿದ್ದರೆ, ಜನನಾಂಗದಲ್ಲಿ ಬದಲಾವಣೆ ಗೋಚರಿಸಿದರೆ ವೈದ್ಯರು ‘ಕ್ಯಾಥೆಟರ್ (catheter) ಪರೀಕ್ಷೆ’ಗೆ ಶಿಫಾರಸು ಮಾಡಬಹುದು.

ಸೂಕ್ಷ್ಮ ಪ್ಲಾಸ್ಟಿಕ್ ಟ್ಯೂಬ್‌ (catheter) ಒಂದನ್ನು ತೊಡೆಸಂದಿನ ರಕ್ತನಾಳದಲ್ಲಿ ಸೇರಿಸಿ ಅಂಡಾಶಯ ಮತ್ತು ಅಡ್ರಿನಲ್‌ ಗ್ರಂಥಿಗಳಿಂದ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಾರೆ.

ಹುಣ್ಣಿನ ಸಮಸ್ಯೆ ಇರುವ ಬಗ್ಗೆ ಪರಿಶೀಲಿಸುತ್ತಾರೆ. ಇಂಥ ಹುಣ್ಣು ಕಂಡು ಬರುವುದು ಅಪರೂಪ. ಇಂಥ ಪ್ರಕರಣಗಳಲ್ಲಿ ವೈದ್ಯರು ಈ ಬಗ್ಗೆ ರೋಗಿಗಳಿಗೆ ವಿವರವಾಗಿ ತಿಳಿ ಹೇಳುತ್ತಾರೆ.

ಬೇಡದ ಕೂದಲಿನ ಚಿಕಿತ್ಸೆ ಹೇಗೆ?
ಹಿರುಟಿಸಂ ಸಮಸ್ಯೆ ಗಂಭೀರವಾಗಿಲ್ಲ – ಹಾರ್ಮೋನ್‌ ವೈಪರಿತ್ಯ ಗೋಚರಿಸದಿದ್ದರೆ ಚಿಕಿತ್ಸೆ ಬೇಡ, ಶೇವಿಂಗ್‌ ಅಥವಾ ಎಲೆಕ್ಟ್ರೋಲಿಸಿಸ್‌ನಂಥ ತಾತ್ಕಾಲಿಕ ಸ್ಥಳೀಯ ಉಪಶಮನ ಸಾಕು ಎನಿಸಬಹುದು.

ಶೇವಿಂಗ್‌ನಿಂದ ಕೂದಲು ಬೆಳೆಯುವ ಪ್ರಮಾಣ ಹೆಚ್ಚುತ್ತದೆ ಎಂಬುದನ್ನು ಪುಷ್ಟೀಕರಿಸಲು ಯಾವುದೇ ಆಧಾರವಿಲ್ಲ. ಆದರೆ ಕೂದಲು ಕಿತ್ತುಕೊಳ್ಳುವುದನ್ನು ಮಾತ್ರ ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ಕೂದಲು ಬೆಳವಣಿಗೆಯ ಹೊಸ ಆವೃತ್ತಿಗೆ ಚಾಲನೆ ಸಿಕ್ಕಂತೆ ಆಗುತ್ತದೆ.

ಇಂಥ ಕೆಲವು ಸಾಧ್ಯತೆಗಳನ್ನು ಪರಿಶೀಲಿಸಿದ ನಂತರವೂ ನಿಮಗೆ ನೆಮ್ಮದಿ ಸಿಗದಿದ್ದರೆ ಔಷಧ ತೆಗೆದುಕೊಳ್ಳಲು ಮನಸ್ಸುಮಾಡಬಹುದು. ಆದರೆ, ಇಂಥ ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ಅದರಿಂದ ನಿಮಗೆ ಆಗುವ ಲಾಭ ಮತ್ತು ಎದುರಿಸಬೇಕಾದ ಆಪತ್ತಿನ ಲೆಕ್ಕಾಚಾರ ಹಾಕಬೇಕಾಗುತ್ತದೆ.

ಹಿರುಟಿಸಂ ಸಮಸ್ಯೆ ಮೇಲೆ ಯಾವುದೇ ಔಷಧಿ ಪರಿಣಾಮ ತೋರಲು ಕನಿಷ್ಠ ಮೂರು ತಿಂಗಳು ಬೇಕು. ಇದು ಕೂದಲಿನ ಸಾಮಾನ್ಯ ಅವೃತ್ತಿ. ಔಷಧಿ ತೆಗೆದುಕೊಳ್ಳುವುದು ನಿಲ್ಲಿಸಿದ ತಕ್ಷಣ ಹಿರುಟಿಸಂ ಮರುಕಳಿಸುತ್ತದೆ. ಹೀಗಾಗಿ ವೈದ್ಯರು ಸೂಚಿಸುವವರೆಗೆ ಔಷಧಸೇವನೆ ನಿಲ್ಲಿಸಬಾರದು.

ಇಂಥ ಸಂದರ್ಭದಲ್ಲಿ ಟೆಸ್ಟೊಸ್ಟ್‌ರೋನ್ ಚಟುವಟಿಕೆ ಸ್ಥಗಿತಗೊಳಿಸುವ ಎರಡು ವಿಧದ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಸೈಪ್ರೊಟೆರೋನ್ ಅಕ್ಟೇಟ್‌ (Cyproterone acetate) ಅಥವಾ ಸ್ಪೈರೊನೊಲ್ಯಾಕ್ಟೋನ್ (Spirono*actone) ಬಳಕೆ ಶೇ. 80ರಷ್ಟು ರೋಗಿಗಳಲ್ಲಿ ಯಶಸ್ವಿಯಾಗಿದೆ. ಈ ಔಷಧಗಳ ಅಡ್ಡಪರಿಣಾಮಗಳು ಕಡಿಮೆ.

ಇಂಥ ಚಿಕಿತ್ಸೆ ತೆಗೆದುಕೊಳ್ಳುವಾಗ ನೀವು ಗರ್ಭ ಧರಿಸದಂತೆ ಎಚ್ಚರ ವಹಿಸಬೇಕು. ಏಕೆಂದರೆ ಈ ಔಷಧಗಳು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ.

ಹೊಸ ಕಾಲದ ಸೌಂದರ್ಯವರ್ಧಕ ಚಿಕಿತ್ಸೆಯು ಕೂದಲಿನ ಕೋಶವನ್ನೇ ಕೊಲ್ಲುವ ತಂತ್ರ ಅನುಸರಿಸುತ್ತದೆ. ಈಚೆಗೆ ಇದು ಹೆಚ್ಚು ಜನಪ್ರಿಯವೂ ಆಗುತ್ತಿದೆ. ಲೇಸರ್‌ ಕೇಶಹರಣವು ಕ್ಷಿಪ್ರ, ನೋವುರಹಿತ, ಪರಿಣಾಮಕಾರಿ ಮತ್ತು (ಅನೇಕ ಸಂದರ್ಭಗಳಲ್ಲಿ) ಶಾಶ್ವತ ಪರಿಹಾರ.

ರೂಬಿ ಲೇಸರ್‌ ಕೆಂಪುಕಿರಣಗಳನ್ನು ಉತ್ಪತ್ತಿ ಮಾಡುತ್ತದೆ. ಇದನ್ನು ಕೂಲಿನ ಮೆಲನಿನ್‌ ಹೀರಿಕೊಳ್ಳುತ್ತದೆ. ಸ್ವಲ್ಪ ಪ್ರಮಾಣ ಚರ್ಮಕ್ಕೂ ಸೇರುತ್ತದೆ. ಕಿರಣಗಳು ಕೂದಲನ್ನು ನಿರ್ದಿಷ್ಟವಾಗಿ ಕೇಂದ್ರೀಕರಿಸುತ್ತವೆ. ಕೇಶಕೋಶದ ಸುತ್ತಲಿನ ಚರ್ಮಕ್ಕೆ ಘಾಸಿ ಮಾಡದೇ ಕೂದಲನ್ನು ನಾಶಪಡಿಸುತ್ತವೆ.
ಹಿರುಟಿಸಂ ಗರ್ಭಧಾರಣ ಸಾಮರ್ಥ್ಯವನ್ನು ಕುಂದಿಸುವುದೇ?

ಇಡಿಯೋಪತಿಕ್ ಹಿರುಟಿಸಂ ಇರುವ ರೋಗಿಗಳಲ್ಲಿ ಗರ್ಭಧಾರಣ ಸಾಮರ್ಥ್ಯ ಸಾಮಾನ್ಯ ಮಟ್ಟದಲ್ಲಿಯೇ ಇರುತ್ತದೆ. ಪುರುಷ ಹಾರ್ಮೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸುತ್ತಿದ್ದರೆ, ಮುಖ್ಯವಾಗಿ ಮುಟ್ಟು ಅನಿಯಮಿತವಾಗಿದ್ದರೆ; ಅದು ಗರ್ಭಧಾರಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಮೇಲೆ ಉಲ್ಲೇಖಿಸಿದ ಎರಡು ಔಷಧಿಗಳ ಪೈಕಿ ಯಾವುದನ್ನು ತೆಗೆದುಕೊಳ್ಳುತ್ತಿದ್ದರೂ ಗರ್ಭಧರಿಸುವ ಆಸೆಯನ್ನು ಮುಂದಕ್ಕೆ ಹಾಕಬೇಕು ಅಥವಾ ಔಷಧ ಸೇವನೆಯನ್ನು ನಿಲ್ಲಿಸಬೇಕು.

ಪುರುಷ ಹಾರ್ಮೋನ್‌ಗಳ ವಿಪರೀತ ಸ್ರವಿಸುವಿಕೆ (Po*ycystic ovarian syndrome)
ಸ್ತ್ರೀದೇಹದಲ್ಲಿ ಪುರುಷರ ಶರೀರದಲ್ಲಿ ಸ್ರವಿಸುವಷ್ಟೇ ಪ್ರಮಾಣದಲ್ಲಿ ಪುರುಷ ಹಾರ್ಮೋನ್‌ಗಳು ಸ್ರವಿಸುವುದನ್ನು ಪಾಲಿಸೈಸ್ಟಿಕ್‌ ಓವರಿಯನ್ ಸಿಡ್ರೋಮ್‌ (ಪಿಸಿಒಎಸ್) ಎನ್ನುತ್ತಾರೆ.

ತಾಯಿಯಾಗುವ ಆಸೆಗೆ ಅಡ್ಡಿಯಾಗುವ ಅತಿಮುಖ್ಯ ಅಂಶ ಇದು. ಇದರಿಂದ ಅಂಡಾಶಯದಲ್ಲಿ ಸಣ್ಣಸಣ್ಣ ಕೋಶಗಳು ಬೆಳೆಯುತ್ತವೆ. ಇವು ಪುರುಷ ಹಾರ್ಮೋನ್‌ಗಳ ವಿಪರೀತ ಸ್ರವಿಸುವಿಕೆಗೆ ಕಾರಣವಾಗುತ್ತವೆ.

ಹಾರ್ಮೋನ್ ವೈಪರಿತ್ಯದಿಂದಾಗಿ ಶೇ. 5ರಿಂದ 10ರಷ್ಟು ಮಹಿಳೆಯರಲ್ಲಿ ತೊಂದರೆ ಕಂಡು ಬರುತ್ತದೆ. ಮಹಿಳೆಯರಲ್ಲಿ ಕೆಳಗೆ ವಿವರಿಸಿದ ಮೂರು ಲಕ್ಷಣಗಳ ಪೈಕಿ ಯಾವುದೇ ಎರಡು ಲಕ್ಷಣಗಳು ಕಾಣಿಸಿಕೊಂಡರೆ ಪಿಸಿಒಎಸ್‌ ಸಮಸ್ಯೆ ಇದೆ ಎಂದು ವೈದ್ಯರು ನಿರ್ಧರಿಸುತ್ತಾರೆ.

1) ನಿಯಮಿತವಾಗಿ (ಪ್ರತಿ ತಿಂಗಳು) ಅಂಡಾಶಯದಿಂದ ಅಂಡವನ್ನು ಬಿಡುಗಡೆ ಮಾಡುವ ಸಾಮರ್ಥ್ಯ ಕಳೆದುಕೊಳ್ಳುವುದು.

2) ದೇಹದ ಮಧ್ಯಭಾಗದಲ್ಲಿ ಕೂದಲು ಬೆಳೆಯುವುದು ಅಥವಾ ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚಾಗುವುದು.

3) ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ವರದಿಯಲ್ಲಿ ಅಂಡಾಶಯದ ಸುತ್ತ ಹುಣ್ಣುಗಳು ಗೋಚರಿಸುವುದು.

ಪಿಸಿಒಎಸ್‌ ಕಾಯಿಲೆಯನ್ನು ನಿರ್ದಿಷ್ಟವಾಗಿ ಪತ್ತೆ ಹಚ್ಚಲು ಕ್ಲಿನಿಕಲ್, ಅಲ್ಟ್ರಾಸೌಂಡ್ ಮತ್ತು ಪ್ರಯೋಗಾಲಯ ಪರೀಕ್ಷೆಗಳು ಅಗತ್ಯ.

ಅಂಡಾಶಯವು ಆ್ಯಂಡ್ರೋಜೀನ್‌ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಕಾರಣವಾಗುವ ಹಾರ್ಮೋನ್ ವೈಪರಿತ್ಯದ ಸ್ಥಿತಿಗೆ ಪಿಸಿಒಎಸ್ ಕಾರಣವಾಗುತ್ತದೆ. ಹಿರುಟಿಸಂಗೂ ಇದು ಸಾಮಾನ್ಯ ಕಾರಣ ಎನಿಸಿದೆ.

ಪಿಸಿಒಎಸ್‌ನಿಂದ ಬಳಲುವ ರೋಗಿಗಳಲ್ಲಿ ಹೆಚ್ಚುವರಿ ಸಣ್ಣ ಕೋಶಗಳು ಅಂಡಾಶಯದಲ್ಲಿ ಬೆಳೆಯುತ್ತವೆ. ಹೀಗಾಗಿಯೇ ಇದನ್ನು ‘ಪಾಲಿಸಿಸ್ಟಿಕ್’ (ಹಲವು ಗಂಟುಗಳು) ಎನ್ನುತ್ತಾರೆ. ಈ ಸಣ್ಣ ಗಂಟುಗಳು ವಾಸ್ತವವಾಗಿ ಅಂಡಾಶಯದ ಪ್ರೌಢಾವಸ್ಥೆಗೆ ತಲುಪದ ಕೋಶಗಳೇ ಆಗಿವೆ. ಇವು ಪ್ರೌಢಾವಸ್ಥೆ ತಲುಪಿ ಅಂಡಾಶಯದಿಂದ ಹೊರಗೆ ಬಂದಿರುವುದಿಲ್ಲ.

ಅನೇಕ ಸಣ್ಣ ಕೋಶಗಳು ಗಂಟುಗಳಾಗುವ ಕಾರಣ ಅಂಡಾಶಯ ಹಿಗ್ಗಿದಂತೆ ಕಾಣಬಹುದು. ಋತುಚಕ್ರದ ಸಂದರ್ಭ ವಿಪರೀತ ಅಥವಾ ಅತಿ ಕಡಿಮೆ ಸ್ರಾವವೂ ಪಿಸಿಒಎಸ್‌ನ ಲಕ್ಷಣ ಇರಬಹುದು.

ಅಂಡಾಣು ಬಿಡುಗಡೆಯಾಗದಿರುವುದು ಮತ್ತು ಗರ್ಭ ಕಟ್ಟದಿರುವುದಕ್ಕೆ ಪಿಸಿಒಎಸ್‌ ಕಾರಣವಾಗಬಹುದು. ಶೇ. 50ರಷ್ಟು ಪಿಸಿಒಎಸ್ ರೋಗಿಗಳು ವಿಪರೀತ ತೂಕದಿಂದ ಬಳಲುತ್ತಾರೆ. ಆದರೆ ಅದು ಈ ವಿವರಣೆಯ ವ್ಯಾಪ್ತಿಯಲ್ಲಿ ಸೇರಿಲ್ಲ.

ತೂಕ ಕಡಿಮೆ ಮಾಡಿಕೊಳ್ಳುವುದು, ಹಾರ್ಮೋನ್‌ ಚಿಕಿತ್ಸೆ, ಚಯಾಪಚಯ ಬದಲಾವಣೆಯನ್ನು ಗುರುತಿಸುವುದು ಮತ್ತು ಸರಿಪಡಿಸುವುದು, ಗರ್ಭಸ್ರಾವ ಸರಿಪಡಿಸುವ ಮೂಲಕ ಪಿಸಿಒಎಸ್‌ಗೆ ಚಿಕಿತ್ಸೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT