ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟ್ಯ: ದೇಹ ಮನಸ್ಸು ಭಾವಗಳ ಅನನ್ಯ ಸಂಗಮ

Last Updated 16 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನುರಿತ ಕಲಾವಿದನೊಬ್ಬ ಕುಂಚದಿಂದ ಗೀರಿದಂತೆ ಬಾಗಿದ ಹುಬ್ಬುಗಳ ನಡುವೆ ದೀಪದ ಕುಡಿಯಂಥ ಚೂಪು ತಿಲಕ. ಹೊಳೆಯುವ ನತ್ತು, ರೆಪ್ಪೆಯ ಅಂಚಿನ ಗುಂಟ ದಪ್ಪಗೆ ಬಳಿದ ಕಾಡಿಗೆ, ಮೊದಲ ನೋಟದಲ್ಲಿಯೇ ಮನಸ್ಸಿನಾಳಕ್ಕೆ ಇಳಿದು ಪರವಶಗೊಳಿಸುವಂಥ ತೀಕ್ಷ್ಣ ನೋಟ, ಮಾತಿನ ಭಾವಕ್ಕನುಗುಣವಾಗಿ ಮೆಲ್ಲನೇ ಓಲಾಡುವ ಆಲದೆಲೆ ಆಕಾರದ ಕಿವಿಯೋಲೆಗಳು...

ತಮ್ಮ ಉಪಸ್ಥಿತಿಯಿಂದಲೇ ಸುತ್ತಲಿನ ಪರಿಸರಕ್ಕೂ ಮೆರುಗು ತರಬಲ್ಲ ಕಲಾವಿದೆ ಮಾಳವಿಕಾ ಸರುಕ್ಕೈ.

ತಮಿಳುನಾಡು ಮೂಲದ ಮಾಳವಿಕಾ, ಭರತನಾಟ್ಯದಲ್ಲಿ ಗೈದ ಸಾಧನೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಕಲಾವಿದೆ. ಏಳನೇ ವಯಸ್ಸಿಗೇ ನಾಟ್ಯಕಲೆಯ ಧ್ಯಾನದಲ್ಲಿ ತೊಡಗಿಕೊಂಡ ಇವರ ಪ್ರತಿಭೆಗೆ ಪದ್ಮಶ್ರೀ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ.

ಇತ್ತೀಚೆಗೆ ತಮ್ಮ ಹೊಸ ನೃತ್ಯಕೃತಿ ‘ವಾಮತಾರಾ – ಟು ದ ಲೈಟ್‌’ ಪ್ರದರ್ಶನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು ಬಿಡುವಿನ ಸಂಜೆ ಮಾತಿಗೆ ಸಿಕ್ಕರು. ನಾಟ್ಯದ ಲಾಲಿತ್ಯವನ್ನು ಮಾತಿನಲ್ಲಿಯೂ ಸಿದ್ಧಿಸಿಕೊಂಡಿರುವ ಮಾಳವಿಕಾ ಅವರೊಂದಿಗಿನ ಸಂದರ್ಶನದ ಅಕ್ಷರರೂಪ ಇಲ್ಲಿದೆ.

*
* ಭರತನಾಟ್ಯದೊಂದಿಗೆ ನಿಮ್ಮ ಸಖ್ಯದ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳಿ.

ನನ್ನ ಅಮ್ಮ ಕೂಡ ಭರತನಾಟ್ಯ ಕಲಾವಿದೆ. ಆದ್ದರಿಂದ ಸಹಜವಾಗಿಯೇ ನನಗೂ ಅದರ ಆರಂಭಿಕ ಸಂಸ್ಕಾರಗಳು ಮನೆಯಲ್ಲಿಯೇ ದೊರೆತವು. ಅಮ್ಮನಿಗೆ ನಾನೂ ಭರತನಾಟ್ಯ ಕಲಾವಿದೆಯಾಗಬೇಕು ಎಂಬ ಆಸೆ ಇತ್ತು.

ಇವೆಲ್ಲವುಗಳಿಂದ ನಾನು ಏಳನೇ ವಯಸ್ಸಿಗೆ ಭರತನಾಟ್ಯ ಕಲಿಯಲು ಆರಂಭಿಸಿದೆ. ಒಳ್ಳೆಯ ಗುರುಗಳೂ ಸಿಕ್ಕರು. ಹೀಗೆ ನನ್ನ ನಾಟ್ಯಪಯಣ ಆರಂಭವಾಯಿತು.

*
* ನೀವು ಕವಿಗಳು, ಚಿತ್ರಕಾರರು, ಸಂಗೀತಗಾರರು – ಹೀಗೆ ಹಲವು ಭಿನ್ನ ಕಲಾಪ್ರಕಾರಗಳ ಕಲಾವಿದರ ಜೊತೆ ಕೆಲಸ ಮಾಡಿದ್ದೀರಿ. ಇದು ನಿಮ್ಮ ನೃತ್ಯಜೀವನಕ್ಕೆ ಯಾವ ರೀತಿ ಸಹಾಯಕವಾಯಿತು?

ಶಾಸ್ತ್ರೀಯ ನೃತ್ಯವು ವಿಸ್ತರಣೆಯನ್ನು ಬಯಸುತ್ತದೆ. ಬಹಳ ವರ್ಷಗಳ ಹಿಂದೆ ನಾನು ‘ಮಾರ್ಗಂ’ ಮಾತ್ರ ಮಾಡುತ್ತಿದ್ದೆ.  ನಂತರ ಬೇರೆ ಬೇರೆ ರೀತಿಯಲ್ಲಿ ಆ ಮಿತಿಯನ್ನು ವಿಸ್ತರಿಸಿಕೊಂಡೆ.

ಶಾಸ್ತ್ರೀಯ ಕಲೆಗಳಲ್ಲಿ ಸಿದ್ಧರಚನೆ (ಸ್ಕ್ರಕ್ಚರ್‌) ಮತ್ತು ಅದನ್ನು ವಿಸ್ತರಿಸುವ ಸ್ವಾತಂತ್ರ್ಯ ಎರಡೂ ಇರುತ್ತದೆ. ಶಾಸ್ತ್ರೀಯ ಸಂಗೀತವನ್ನೇ ನೋಡಿ. ಭೈರವಿರಾಗ ಎಂಬುದು ಒಂದು ಸಿದ್ಧರಚನೆ. ಆದರೆ ಪ್ರತಿಯೊಬ್ಬ ಸಂಗೀತಗಾರನೂ ಅದನ್ನು ಭಿನ್ನವಾಗಿಯೇ ಹಾಡುತ್ತಾನೆ.

ತನ್ನ ಪ್ರತಿಭೆ, ಸಾಮರ್ಥ್ಯಕ್ಕನುಗುಣವಾಗಿ ಅದನ್ನು ವಿಸ್ತರಿಸುತ್ತಾನೆ. ಶಾಸ್ತ್ರೀಯ ನೃತ್ಯವೂ ಹಾಗೆಯೇ. ನಮಗೆ ಇಲ್ಲಿ ಕೆಲವು ಮೂಲಾಕ್ಷರಗಳಿರುತ್ತವೆ. ಅವು ಅಕ್ಷರಮಾಧ್ಯಮದಲ್ಲಿ ವರ್ಣಮಾಲೆ ಇದ್ದಂತೆ. ಅವುಗಳನ್ನು ಬಳಸಿಕೊಂಡು ನಾವು ಏನಾದರೂ ಕಟ್ಟಬಹುದು. ನಾವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಮತ್ತು ಅವುಗಳ ಮೂಲಕ ಏನನ್ನು ಕಟ್ಟಿಕೊಡುತ್ತೇವೆ ಎನ್ನುವುದು ಮುಖ್ಯ.

ಕೆಲವು ಬಾರಿ ನಮಗೇನೋ ಹೇಳಬೇಕಿರುತ್ತದೆ. ಆದರೆ ಅದನ್ನು ಈಗ ಇರುವ ಮೂಲಾಕ್ಷರಗಳನ್ನು ಬಳಸಿಕೊಂಡು ಹೇಳಲು ಸಾಧ್ಯವಿರುವುದಿಲ್ಲ. ಆಗ ಹೊಸದೇ ಒಂದು ಅಕ್ಷರವನ್ನು ನಾವು ಸೃಷ್ಟಿಸಬೇಕಾಗುತ್ತದೆ.

ಆದರೆ ಹಾಗೆ ನಾವು ಸೃಷ್ಟಿಸಿದ ಮೂಲಾಕ್ಷರವು ಶಾಸ್ತ್ರೀಯ ತಳಹದಿಯ ಮೇಲೆ ರೂಪುಗೊಂಡಿರಬೇಕು. ಅದಕ್ಕೆ ಸಾಕಷ್ಟು ಅನುಭವ, ಶ್ರಮ, ತಿಳಿವಳಿಕೆ, ತನ್ಮಯತೆ ಎಲ್ಲವೂ ಬೇಕು. ಅದು ಕಲಾವಿದನಿಗೆ ಯಾವಾಗಲೂ ಸವಾಲು.

*
* ಹಲವು ಕಲಾಪ್ರಕಾರಗಳ ಜೊತೆ ಭರತನಾಟ್ಯವನ್ನು ಬೆಸೆದಿದ್ದೀರಿ. ಈ ಎಲ್ಲ ಭಿನ್ನ ಕಲಾಪ್ರಕಾರಗಳ ನಡುವೆ ಯಾವುದಾದರೂ ಸಾಮ್ಯತೆ ಕಂಡಿದೆಯೇ?

ಎಲ್ಲ ಕಲೆಗಳೂ ಪರಸ್ಪರ ಅಂತರ್ಗತ ಸಂಬಂಧ ಹೊಂದಿರುತ್ತವೆ. ನಾವು ಈ ಕಲೆಗಳ ನಡುವೆ ಗೆರೆ ಎಳೆದುಬಿಟ್ಟಿದ್ದೇವೆ. ನೃತ್ಯ, ಚಿತ್ರ, ಸಂಗೀತ, ಸಾಹಿತ್ಯ – ಹೀಗೆ ವಿಭಾಗಿಸಿಕೊಂಡಿದ್ದೇವೆ.

ಆದರೆ ಆಳದಲ್ಲಿ ಅವೆಲ್ಲವೂ ಒಂದೇ ಆಗಿರುತ್ತವೆ. ಅದರಲ್ಲಿಯೂ ಭಾರತೀಯ ಸಂದರ್ಭದಲ್ಲಿಯಂತೂ ಇದು ಇನ್ನೂ ನಿಜ. ನನ್ನ ಇತ್ತೀಚೆಗಿನ ನೃತ್ಯಕೃತಿ ‘ವಾಮತಾರಾ’ದ ಒಂದು ಭಾಗವು ರಾಜಸ್ತಾನದ ಶ್ರೀನಾಥ್‌ಜಿ ನಾಥ್‌ದ್ವಾರಾ ದೇವಾಲಯದ ಮಿನಿಯೇಚರ್‌ ಪೇಂಟಿಂಗ್‌ನಿಂದ ಸ್ಫೂರ್ತಿ ಪಡೆದುಕೊಂಡದ್ದು.

ನೃತ್ಯ ಉಳಿದ ಎಲ್ಲ ಕಲಾಪ್ರಕಾರಗಳಿಂದಲೂ ಒಳ್ಳೆಯ ಅಂಶಗಳನ್ನು ತೆಗೆದುಕೊಳ್ಳುತ್ತದೆ. ಸಂಗೀತ, ಸಾಹಿತ್ಯ, ಅಧ್ಯಾತ್ಮ, ತತ್ವಶಾಸ್ತ್ರ – ಹೀಗೆ ಹಲವು ಭಿನ್ನ ಕಲಾಮೂಲಗಳಿಂದ ಸ್ಫೂರ್ತಿ ಪಡೆದುಕೊಂಡು ಅವುಗಳನ್ನು ಭಿನ್ನವಾಗಿ ಅಭಿವ್ಯಕ್ತಿಸುತ್ತದೆ.

*
* ಆದರೆ ಶಾಸ್ತ್ರೀಯ ನೃತ್ಯ ಬದಲಾಯಿಸಬಾರದು. ಬದಲಾಯಿಸುವುದರಂದ ಅದರ ಪಾವಿತ್ರ್ಯತೆ ಹಾಳಾಗುತ್ತದೆ ಎಂದು ಹೇಳುವವರೂ ಸಾಕಷ್ಟಿದ್ದಾರಲ್ಲವೇ?

ಶಾಸ್ತ್ರೀಯ ನೃತ್ಯ ಸ್ಪಷ್ಟ ಚೌಕಟ್ಟನ್ನು ಹೊಂದಿದೆ. ಅದೇ ಸಮಯದಲ್ಲಿ ಅದು ಸಾಕಷ್ಟು ನಮ್ಯವೂ ಆಗಿದೆ.

ಹೊಸದೇನಾದರೂ ಮಾಡಬೇಕು ಎಂದಾಗ ನಾವು ಸಾಕಷ್ಟು ಎಚ್ಚರದಿಂದಿರಬೇಕು. ಹೊಸದೇನೇ ಕಟ್ಟುವುದಿದ್ದರೂ ಶಾಸ್ತ್ರೀಯತೆಯ ತಳಹದಿಯ ಮೇಲೆಯೇ ಕಟ್ಟಬೇಕು ಮತ್ತು ಆ ತಳಹದಿ ಸಾಕಷ್ಟು ಗಟ್ಟಿಯಾಗಿರಬೇಕು.

ಅಡಿಪಾಯವೇ ಗಟ್ಟಿಯಾಗಿರದಿದ್ದರೆ ಮೇಲೆ ಎಷ್ಟು ಕಟ್ಟಿದರೂ ಅದು ಜೀವಂತವಾಗಿರುವುದಿಲ್ಲ. ಶಾಸ್ತ್ರೀಯ ತಿಳಿವಳಿಕೆಯ ಜೊತೆಗೆ ಹೊಸದನ್ನು ಮಾಡುವ ತಹತಹ ಮತ್ತು ನೃತ್ಯಪ್ರೀತಿ ಕೂಡ ಅಷ್ಟೇ ಅವಶ್ಯ.

ಸಂಪ್ರದಾಯವನ್ನು ಅಂಧವಾಗಿ ಅನುಸರಿಸುವುದರಲ್ಲಿಯೂ ಅರ್ಥವಿಲ್ಲ. ಬದಲಾಯಿಸಿದ ಮಾತ್ರಕ್ಕೆ ಸಂಪ್ರದಾಯ ಹಾಳಾಗಿಬಿಡುತ್ತದೆ ಎನ್ನುವವರಿಗೆ ನನ್ನದೊಂದು ಪ್ರಶ್ನೆ ಇದೆ.

ಭರತನಾಟ್ಯಕ್ಕೆ ಸುಮಾರು ಇನ್ನೂರು ಮುನ್ನೂರು ವರ್ಷಗಳ ಇತಿಹಾಸವಷ್ಟೇ ಇದೆ. ಅದಕ್ಕೂ ಹಿಂದೆ ಏನಿತ್ತು? ಬೇರಾವುದೋ ರೂಪದಲ್ಲಿ ಈ ನೃತ್ಯಪ್ರಕಾರದ ಬೇರುಗಳು ಇದ್ದಿರಲೇ ಬೇಕಲ್ಲವೇ? ಅದು ಬದಲಾಗಿಯೇ ಭರತನಾಟ್ಯ ರೂಪುಗೊಂಡಿದ್ದಲ್ಲವೇ?

ಸಂಪ್ರದಾಯವೆಂದರೆ ಏನು? ಅದೊಂದು ಸಿದ್ಧಕೃತಿಯೇ? ಅಥವಾ ತನ್ನನ್ನು ಬಳಸಿಕೊಂಡು ಹೊಸದನ್ನು ಕಟ್ಟಲು ಪ್ರೇರೇಪಿಸುವ ಮೂಲಾಕ್ಷರವೇ? ಇವನ್ನು ನಾವು ಸ್ಪಷ್ಟಪಡಿಸಿಕೊಳ್ಳಬೇಕು.

*
* ಶಾಸ್ತ್ರೀಯ ಕಲೆಗಳ ವಿಷಯಕ್ಕೆ ಬಂದಾಗ ಯಾವಾಗಲೂ ಸಂಪ್ರದಾಯ ಮತ್ತು ಸಮಕಾಲೀನ ಇವೆರಡೂ ವಿರುದ್ಧ ಎಂಬಂತೆ ಬಿಂಬಿತವಾಗುವುದೇ ಹೆಚ್ಚು. ನೀವು ಈ ಎರಡು ಅಂಶಗಳನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಮನಸ್ಸು, ದೇಹ, ಭಾವ – ಈ ಮೂರು ಅಂಶಗಳನ್ನೂ ಸಂಪೂರ್ಣವಾಗಿ ಅರ್ಪಿಸಿಕೊಂಡು ನೃತ್ಯ ಮಾಡಿದಾಗ ಅದಕ್ಕೊಂದು ಜೀವಂತಿಕೆ ಬರುತ್ತದೆ. ಅದು ಆ ಕ್ಷಣದಲ್ಲಿ ಜೀವಿಸುತ್ತಿರುತ್ತದೆ.

ಕೃಷ್ಣ ಗೋವರ್ಧನಗಿರಿಯನ್ನು ಎತ್ತಿಹಿಡಿದ ಕಥೆ ಎಲ್ಲರಿಗೂ ಗೊತ್ತು. ಆದರೆ ನಾನು ಅದನ್ನು ನೃತ್ಯದ ಮೂಲಕ ಅಭಿನಯಿಸುವಾಗ ನಾನು ಆ ಕಥೆಯಲ್ಲಿಯೇ ಜೀವಿಸುತ್ತಿರಬೇಕಾಗುತ್ತದೆ. ಆ ಕಥೆಯೇ ಆಗಬೇಕಾಗುತ್ತದೆ.

ಆ ಕ್ಷಣದಲ್ಲಿ ವೇದಿಕೆಯ ಮೇಲೆ ಸೃಷ್ಟಿಗೊಳ್ಳುವ ನರ್ತನಕ್ಕೆ ನನ್ನನ್ನು ನಾನು ಪೂರ್ತಿಯಾಗಿ ಕೊಟ್ಟುಕೊಳ್ಳಬೇಕು. ಆಗಲೇ ಅದಕ್ಕೊಂದು ಅಧಿಕೃತತೆ ಬರುತ್ತದೆ. ನಾನು ಆ ಕಥೆಯೇ ಆಗಿಬಿಟ್ಟಾಗ ನಾನು ಹೇಳುವುದು ಸತ್ಯವೇ ಆಗಿರುತ್ತದೆ. ಅದು ಕೃಷ್ಣನ ಕಥೆ ಇರಬಹುದು, ಪುರಾಣ ಆಗಿರಬಹುದು.

ಆದರೆ ಬೇರೆಯವರಿಗೆ ಹೇಳುತ್ತಿರುವಾಗ ನಾನೂ ಅದನ್ನು ಕಾಣುತ್ತಿರುತ್ತೇನೆ. ಕೃಷ್ಣ–ಗೋವರ್ಧನವ–ಇಂದ್ರ ಎಲ್ಲರನ್ನೂ ನಾನು ಕಾಣುತ್ತಿರುತ್ತೇನೆ. ಹಾಗೆ ನಾನು ಕಾಣದೆ ಇನ್ನೊಬ್ಬರಿಗೆ ಕಾಣಿಸಲು ಸಾಧ್ಯವೇ ಇಲ್ಲ.

ಈ ನಿಟ್ಟಿನಲ್ಲಿ ಆ ಕಥನ ಸತ್ಯ ಆಗಿರುತ್ತದೆ. ಆಗ ಅದು ಅತ್ಯಂತ ಸಮಕಾಲೀನವೂ ಆಗುತ್ತದೆ. ಇದು ತುಂಬ ಕಷ್ಟದ ಸಾಧನೆ. ಕಠಿಣ ಪರಿಶ್ರಮ ಮತ್ತು ಆಳವಾದ ಅನುಭವದಿಂದ ಮಾತ್ರ ಸಾಧಿತವಾಗುವ ಸಾಧನೆ.

*
* ನೀವೊಮ್ಮೆ ‘ನನ್ನ ಸ್ವಾತಂತ್ರ್ಯ ನನ್ನ ನೃತ್ಯದಲ್ಲಿದೆ’ ಎಂದು ಹೇಳಿದ್ದೀರಿ, ಕೊಂಚ ವಿವರಿಸುತ್ತೀರಾ?

ಶಾಸ್ತ್ರೀಯ ನೃತ್ಯ ಒಂದು ಸ್ಟ್ರಕ್ಚರ್‌. ನೃತ್ಯ ಕಲಿಕೆಯ ಆರಂಭದಲ್ಲಿ ಅದರಿಂದ ಆಚೆ ಯೋಚಿಸುವುದು ತುಂಬ ಕಷ್ಟ. ಆ ಕಡೆ ಈ ಕಡೆ ಅಲುಗಾಡಲು ಸಾಧ್ಯವಿಲ್ಲದ ಹಾಗೆ ಆ ರಚನೆ ಬಿಗಿಯಾಗಿರುತ್ತದೆ.

ಆದರೆ ಹತ್ತಿಪ್ಪತ್ತು ವರ್ಷ ನೃತ್ಯದಲ್ಲಿಯೇ ಸಾಧನೆ ಮಾಡಿದಾಗ ಆ ರಚನೆಯ ಬಿಗಿ ಕೊಂಚ ಸಡಿಲವಾಗುತ್ತದೆ. ಮತ್ತಿಷ್ಟು ವರ್ಷಗಳ ಸಾಧನೆಯ ನಂತರ ಅಲ್ಲಿ ಇನ್ನಷ್ಟು ಅವಕಾಶಗಳು ಗೋಚರವಾಗುತ್ತದೆ. ಹೀಗೆ ಮೊದಲು ಬಿಗಿಯಾಗಿದ್ದ ಸ್ಟ್ರಕ್ಚರ್‌ನಲ್ಲಿಯೇ ಸ್ವಾತಂತ್ರ್ಯ ಕಾಣುತ್ತ ಹೋಗುತ್ತದೆ. ಅದೇ ಶಾಸ್ತ್ರೀಯ ಕಲೆಗಳ ಸೊಬಗು.

ಆದರೆ ಆ ಸ್ವಾತಂತ್ರ್ಯ ತಂತಾನೆಯೇ ಸಿಕ್ಕಿಬಿಡುವುದಲ್ಲ. ಶೋಧನೆ ಮೂಲಕ ನಾವು ಕಂಡುಕೊಳ್ಳಬೇಕಾಗಿರುವುದು.  ನಿರಂತರ ಹುಡುಕುವಿಕೆಯ ಯಾವುದೋ ಒಂದು ತಿರುವಿನಲ್ಲಿ ಆ ಸ್ವಾತಂತ್ರ್ಯ ಸಿಕ್ಕುಬಿಡುತ್ತದಲ್ಲ, ಅದು ಕಲಾವಿದನ ಸಾರ್ಥಕ ಘಳಿಗೆ.

*
* ಶಾಸ್ತ್ರೀಯ ನೃತ್ಯದಲ್ಲಿ ಬುದ್ಧಿ ಮತ್ತು ಭಾವದ ಪಾತ್ರವೇನು?

ನಮ್ಮ ದೇಹ ಮತ್ತು ಮನಸ್ಸಿನ ನಡುವೆ ಒಂದು ಅಂತರವಿರುತ್ತದೆ. ಶಾಸ್ತ್ರೀಯ ನೃತ್ಯ ಈ ಎರಡನ್ನೂ ಹತ್ತಿರಕ್ಕೆ ತರುತ್ತದೆ. ನೃತ್ಯದ ಮೂಲಕ ದೇಹ ಮತ್ತು ಮನಸ್ಸನ್ನು ಏಕತ್ರಗೊಳ್ಳುವ ಘಳಿಗೆಯೇ ಸಾಕ್ಷಾತ್ಕಾರದ ಘಳಿಗೆಯೂ ಆಗಿರುತ್ತದೆ.

*
* ಹೊಸದೊಂದು ನಾಟ್ಯಕೃತಿಯನ್ನು ಸಂಯೋಜಿಸುವಾಗ ನೀವು ಯಾವ ರೀತಿ ಅದರಲ್ಲಿ ತೊಡಗಿಕೊಳ್ಳುತ್ತೀರಿ?

ನೃತ್ಯವೆಂಬುದು ನಮ್ಮೊಳಗೆ ಸಂಚಲನ ಹುಟ್ಟಿಸಬೇಕು. ರಸೋತ್ಪತ್ತಿ ಮಾಡಬೇಕು. ಅದು ನೃತ್ಯದ ಆತ್ಯಂತಿಕ ಉದ್ದೇಶ. ಯಾವುದೇ ಹೊಸ ನೃತ್ಯಕೃತಿಯನ್ನು ಕಟ್ಟುವಾಗಲೂ ಅದು ಶಾಸ್ತ್ರೀಯ ಸತ್ವವನ್ನು ಒಳಗೊಂಡಿರಬೇಕು.

ಆಗ ಮಾತ್ರ ರಸದ ಉತ್ಪತ್ತಿ ಸಾಧ್ಯ. ಶಾಸ್ತ್ರೀಯ ನೃತ್ಯದ ರೂಪಗಳು ಬದಲಾಗುತ್ತಿರಬಹುದು. ಅದು ಬದಲಾಗಬೇಕು ಸಹ. ಆದರೆ ಈ ಬದಲಾವಣೆ ಯಾವಾಗಲೂ ಶಾಸ್ತ್ರೀಯ ಅಡಿಗಲ್ಲಿನ ಮೇಲೆಯೇ ನಡೆಯಬೇಕು.

ಎಲ್ಲವನ್ನೂ ಮುರಿಯಬೇಕು ಎಂಬ ಉತ್ಸಾಹದಲ್ಲಿ ನಮ್ಮ ಪರಂಪರೆಯ ಬೇರುಗಳನ್ನು ಮರೆಯುವುದು ಸರಿಯಲ್ಲ. ಹಾಗೆಂದು ಸಂಪ್ರದಾಯವನ್ನು ಇದ್ದಹಾಗೆಯೇ ಇರಿಸಿಕೊಳ್ಳಬೇಕಿಲ್ಲ.

ಸಂಪ್ರದಾಯಕ್ಕೇ ಅಂಟಿಕೊಂಡಿರಬೇಕು ಎನ್ನುವುದು ಅಥವಾ ಸಂಪ್ರದಾಯವನ್ನೆಲ್ಲ ಮರೆತು ಬೇರೇನೋ ಸೃಷ್ಟಿಸಿಬಿಡುತ್ತೇನೆ ಎಂದು ಹೊರಡುವುದು ಎರಡೂ ಅತಿರೇಕಗಳೇ. ಈ ಎರಡರ ನಡುವಿನ ದಾರಿಯನ್ನು ನಾನು ನಂಬುತ್ತೇನೆ. ನಾನು ಸಂಪ್ರದಾಯವನ್ನು ಪ್ರೀತಿಸುತ್ತೇನೆ. ಅದರ ಸತ್ವಗಳನ್ನು ಬಿಟ್ಟುಕೊಡದೇ ಹೊಸದನ್ನು ಕಟ್ಟುತ್ತೇನೆ.

*
* ಕಲಾವಿದೆಯಾಗಿ ಈ ಸುದೀರ್ಘ ಪಯಣದ ಬಗ್ಗೆ ಏನನಿಸುತ್ತದೆ? ಇದು ಬದುಕಿನ ಕುರಿತಾದ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿದೆಯೇ?

ಖಂಡಿತ. ನೃತ್ಯ ಬದುಕಿನ ಕುರಿತಾದ ನನ್ನ ದೃಷ್ಟಿಕೋನವನ್ನಷ್ಟೇ ಅಲ್ಲ, ನನ್ನ ವ್ಯಕ್ತಿತ್ವವನ್ನೇ ಬದಲಿಸಿದೆ. ಅದರಲ್ಲಿ ಪೂರ್ತಿಯಾಗಿ ಮುಳುಗಿದ ಮೇಲೆ ನೀವು ಮೊದಲಿನಂತೇ ಇರುವುದು ಸಾಧ್ಯವೇ ಇಲ್ಲ. ಇಷ್ಟು ವರ್ಷಗಳಲ್ಲಿ ನಾನು ಇನ್ನೂ ಆಳಕ್ಕೆ ಇಳಿಯುತ್ತಲೇ ಇದ್ದೇನೆ. ಬದಲಾಗುತ್ತಲೇ ಇದ್ದೇನೆ.

ನೃತ್ಯದ ಮೂಲಕ ಆಳದಲ್ಲಿ ನನ್ನನ್ನು ನಾನೇ ಮುಟ್ಟಿಕೊಳ್ಳಲು ಸಾಧ್ಯವಾಗಿದೆ. ಈ ಲೌಕಿಕದ ಆಚೆಗೆ ಜಿಗಿಯಲು ಸಹಾಯ ಮಾಡಿದೆ. ನನ್ನ ಮಟ್ಟಿಗೆ ನೃತ್ಯವೆಂಬುದು ಅಲೌಕಿಕ ಅನುಭವವೇ.  ಅದೊಂದು ಆಧ್ಯಾತ್ಮಿಕ ಪ್ರಯಾಣ.

ದಿನನಿತ್ಯದ ಲೌಕಿಕ ಬದುಕಿನಲ್ಲಿ ಕಾಣಲು ಸಾಧ್ಯವಿಲ್ಲದ ಯಾವುದೋ ಅಂಶವನ್ನು ನೃತ್ಯದ ಕಾರಣದಿಂದ – ನೃತ್ಯದ ಮೂಲಕ ನಾನು ಕಾಣುತ್ತೇನೆ. ಆದ್ದರಿಂದ ನೃತ್ಯವೆಂಬುದು ನನ್ನ ಪಾಲಿಗೆ ವರ. ಅದೃಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT