ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನಾಚಿಕೆಯ ಸಮಯ...

Last Updated 16 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಾಚಿಕೆಯಾಗುತ್ತಿರಬೇಕಲ್ಲ? ಕವಿ ಪ್ರಸೂನ್‌ ಜೋಶಿ ಅವರ ಹಿಂದಿ ಕವನದ ಶೀರ್ಷಿಕೆ ಇದೇ ಅರ್ಥ ಹೊರಡಿಸುತ್ತಿದೆ. ಕವನ ಹುಟ್ಟಿದ್ದು ಒಲಿಂಪಿಕ್‌ನಲ್ಲಿ ಭಾರತದ ಸಾಧನೆ ಕಂಡು.

ಅದಕ್ಯಾಕೆ ನಾಚಿಕೆಯಾಗ್ಬೇಕು? ಚಿನ್ನ ತರಲಿಲ್ಲ ನಮ್ಮ ಆಟಗಾರರು ಎಂದೆ? ಖಂಡಿತ ಅಲ್ಲ, ಇಷ್ಟೆಲ್ಲ ಸಾಧನೆ ತೋರಿ ಭಾರತೀಯರೆಲ್ಲ ಹೆಮ್ಮೆ ಪಡುವಂತೆ ಮಾಡಿದ ಸಿಂಧು, ಸಾಕ್ಷಿ, ದೀಪಾ ಈ ಹೆಣ್ಮಕ್ಕಳ ಸಾಮರ್ಥ್ಯ ನೋಡಿ ನಾಚಿಕೆಯಾಗಬೇಕು.

ಇತ್ತೀಚೆಗಷ್ಟೇ ಮುಕ್ತಾಯವಾದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಹೆಣ್ಮಕ್ಕಳ ಸಾಧನೆ ಗಮನ ಸೆಳೆದಿದೆ. ಜನರ ಕಣ್ಣು ಹೆಣ್ಮಕ್ಕಳ ಸಾಮರ್ಥ್ಯದತ್ತ ಹೊರಳಿವೆ. ಅದರಲ್ಲೂ ಆಟೋಟದಲ್ಲಿ ಪಾಲ್ಗೊಳ್ಳುವ ಹೆಣ್ಮಕ್ಕಳ ಕಡೆಗೆ ಹೆಮ್ಮೆಯ ನೋಟ ಈಗ.

ಆದರೆ ಪ್ರಸೂನ್‌ ಅವರ ಈ ಕವನ ಒಮ್ಮೆ ನಮ್ಮನ್ನು ನಾವು ಸರಿಯಾಗಿ ನೋಡಿಕೊಳ್ಳುವಂತೆ ಮಾಡಿದೆ. ಫೇಸ್‌ಬುಕ್‌ನಲ್ಲಿ ಕವನಕ್ಕೆ ವಾವ್‌ ವಾವ್‌ಗಳಷ್ಟೇ ಅಲ್ಲ, ಭಾವುಕ ಪ್ರತಿಕ್ರಿಯೆಗಳೂ ವ್ಯಕ್ತವಾದವು.

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂದ ದೇಶ ನಮ್ಮದು. ಆದರೆ ಪೂಜನೀಯ, ಆದರಣೀಯ ಸ್ಥಾನ ನೀಡಿ ಆದ್ಯತೆ ನೀಡುವುದಕ್ಕಿಂತಲೂ ಅವಕಾಶ ಕಲ್ಪಿಸಿದ್ದರೆ ಚೆನ್ನಾಗಿತ್ತು.  ಸಮಾನ ಅವಕಾಶ. ಅಷ್ಟೆ. ಸಮ ಸಮಕ್ಕೆ ಪ್ರತಿಸ್ಪರ್ಧಿಯಾಗಿ ಪಾಲ್ಗೊಳ್ಳಲು ಅಲ್ಲ. ತನ್ನದೇ ಆದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು.

ನಮ್ಮಲ್ಲಿ ಮದುವೆಯಾದ ಹೊಸತಿಗೆ ಕಾಲಿಗೆ ಬಿದ್ದ ದಂಪತಿಗೆ ಸಿಗುವ ಹಿರಿಯರ ಆಶೀರ್ವಾದ ಗಂಡುಮಗು ಹುಟ್ಟಲಿ ಎಂದೇ! ಅದೇ ಒಂಥರ ಒತ್ತಡವನ್ನೂ ಸೃಷ್ಟಿಸಿಬಿಡುತ್ತದೆ ಗರ್ಭಿಣಿಯಲ್ಲಿ.

ಅತ್ತೆಮನೆಯ, ಅಕ್ಕಪಕ್ಕದ ಜನರ, ಸಂಬಂಧಿಗಳ ನಿರೀಕ್ಷೆಯಂತೆ ಗಂಡಾಗದಿದ್ದರೆ ಎಂಬ ಆತಂಕ ಕಾಡುತ್ತದೆ. ಹಲವು ಭ್ರೂಣಗಳು ಮಗುವಾಗಿ ಭೂಮಿಗೆ ಬರುವುದೇ ಇಲ್ಲ ಎಷ್ಟೋ ಸಲ.

ಗರ್ಭ ಮೂಡತೊಡಗಿದಾಗಲೇ ಶುರು. ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ. ‘ಏನು ಪೇಢೆ ಯಾವಾಗ ಕೊಡ್ತೀರಿ?’ ಅಂತ ಕೇಳುವುದರಲ್ಲಿಯೇ ಒಂಥರ ಒತ್ತಾಸೆ ಇರುತ್ತದೆ.

ಧಾರವಾಡ ಕಡೆ ಮಗು ಹುಟ್ಟಿದಾಗ ಪೇಢೆ ಕೊಡುವುದೆಂದರೆ ಅದು ಗಂಡೇ ಆಗಿರಬೇಕು. ಹೆಣ್ಣು ಹುಟ್ಟಿದರೆ ಜಿಲೇಬಿ ಹಂಚುವುದು ವಾಡಿಕೆ. ಅಲ್ಲಿಂದಲೇ ಶುರು ಲಿಂಗತಾರತಮ್ಯ.

ಆಶೀರ್ವಾದವೂ ಪುರುಷರ ಮೇಲ್ಮೆ ಸಾರುತ್ತದೆ. ಬಹುಶಃ ಇದೇ ಕಾರಣಕ್ಕೆ ತಂದೆ–ತಾಯಿಯೂ ಮುಕ್ತವಾಗಿ ಸಂಭ್ರಮಿಸಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಸ್ವೀಕೃತಿ ದೊರೆಯುವುದು ಅಷ್ಟರಲ್ಲೇ ಇದೆ.

ಸಾಲಾಗಿ ಹೆಣ್ಣು ಹುಟ್ಟಿದರಂತೂ ಪಾಪ ಎಂಬ ಕನಿಕರದ ಮಾತೇ ಕೇಳಿಸುತ್ತದೆ ತಂದೆಗೆ. ಇಂತಹ ಒತ್ತಡಗಳಿರುವಾಗ ನಿರಾಸೆ ಸಹಜ. ಆ ತಂದೆ ದೇವರಿಗೆ ಒಂದು ಹೂ ಕಡಿಮೆ ಏರಿಸಿದರೂ ಅಸಹಜವೇನಲ್ಲ.

ಆಟ ಪಾಠ, ಉಡುಗೆ, ತೊಡುಗೆ, ಅಡುಗೆಮನೆಯಲ್ಲೂ ತಾರತಮ್ಯ ಇದ್ದದ್ದೇ. ಗಂಡುಮಕ್ಕಳಿಗೂ ಹೆಣ್ಣುಮಕ್ಕಳಿಗೂ ಬೆಳೆಸುವ ರೀತಿಯಲ್ಲಿ ಸಹಜವಾಗೇ ಸ್ವಲ್ಪವಾದರೂ ವ್ಯತ್ಯಾಸಗಳಿರುವುದು ಸಮಾಜದ ನಿರೀಕ್ಷೆಯಿಂದಾಗಿ.

ಹೊಸಿಲು ದಾಟುವ ಅನುಮತಿ, ಸಂಜೆ ದೀಪ ಹೊತ್ತಿದ ಮೇಲೆ ಹೊರಗಿರಬಾರದು ಎಂಬ ಕಟ್ಟಳೆಗಳೆಲ್ಲ ಹೆಣ್ಮಕ್ಕಳಿಗೆ. ಕುಲದೀಪಕ ಎಂಬ ಪದವೂ ಗಂಡುಮಗುವಿಗೇ ಮೀಸಲು. ದೀಪ ಹೊತ್ತಿಸುವ ಮನೆಮಗಳು ಏನಿದ್ದರೂ ಕತ್ತಲೆಯೇ.

ದೇಹರಚನೆಯಿಂದಾಗಿ ಆಕೆಯತ್ತ ಆಕರ್ಷಿತರಾಗಬಾರದು ಎಂಬ ಕಾರಣಕ್ಕೆ ದುಪಟ್ಟಾ, ಮುಸುಕು, ಸೆರಗುಗಳು. ಅಂದಗಾಣದಿರಲು ತಲೆಗೂದಲು ಮುಚ್ಚುವಂತೆ ಉಡುಗೆ ಇರುವುದೂ ಇದೆ. 

ದಿರಿಸು ಒಳಗಿನಿಂದಲೇ ಅವಳನ್ನು ಇರಿಯತೊಡಗಿರುತ್ತದೆ. ಆಟೋಟಗಳಿರಲಿ, ವಿಹಾರವಿರಲಿ, ನೀರಿನಲ್ಲಿ ಈಜುವುದಿರಲಿ ಅದಕ್ಕೆ ಸೂಕ್ತವಾಗುವ ಉಡುಗೆ ತೊಡಲೂ ಆಗದಂತೆ ಎಷ್ಟೋ ಕಡೆ ಅನೇಕ ನಿರ್ಬಂಧಗಳು ಈಗಲೂ ಇವೆ. ಫ್ರಾನ್ಸ್‌ನ ಸಮುದ್ರ ತೀರಗಳಲ್ಲಿ ಈಜುಡುಗೆ ಬುರ್ಕಿನಿ (ಬುರ್ಖಾ ಮತ್ತು ಬಿಕಿನಿ ಪದಗಳಿಂದ) ನಿಷೇಧಿಸಿದ್ದು ಇತ್ತೀಚೆಗೆ ಮಹತ್ವದ ಸುದ್ದಿಯಾಗಿತ್ತು.

ಹೆಣ್ಮಕ್ಕಳಿಗೇಕೆ ಹೆಚ್ಚಿನ ವಿದ್ಯೆ ಎನ್ನುವುದೂ ಬಹುಸಾಮಾನ್ಯ ಹೇಳಿಕೆಯೇ ಆಗಿತ್ತು. ಈಗಲೂ ಅದು ಬಹಳ ಕಡೆ ಶಾಲೆ ದಾಟಿ ಕಾಲೇಜಿಗೆ ಬಂದು ನಿಂತಿರಬಹುದಷ್ಟೆ. ಮುಂದೆ ಬೇಕಿದ್ದರೆ ಆಕೆಯ ಪತಿಯ ಮನೆಯವರು ಓದಿಸಿಕೊಳ್ಳಲಿ ಎಂಬ ಭಾವ ಬಹುತೇಕರಲ್ಲಿ.

ಆದರೂ ಹೆಣ್ಮಕ್ಕಳ ಶೈಕ್ಷಣಿಕ ಸಾಧನೆ ಕಂಡು ಶಾಲಾ ಕಾಲೇಜುಗಳು ನಾಚಬೇಕಿದೆ. ಗಣಿತ, ವಿಜ್ಞಾನಗಳಲ್ಲಿ ಆಸಕ್ತಿ, ಶಕ್ತಿ ಎರಡೂ ಇಲ್ಲ ಎಂಬ ಪೂರ್ವಗ್ರಹಗಳೇ ಅವಳ ಬದುಕು ನಿರ್ಧರಿಸುವ ಕಾಲವಿತ್ತು. ಬಹಳಷ್ಟು ಬದಲಾಗಿದೆ. ಕಲಿಕೆಯಲ್ಲಿ ಮುಂದು ಎಂಬ ಹೆಗ್ಗಳಿಕೆಯನ್ನು ಹೆಣ್ಮಕ್ಕಳು ಹೇಗೂ ಪಡೆದಾಗಿದೆ.

ಗಮನಿಸುವ ಹಾದಿ, ಗಮ್ಯಗಳಿಗೂ ನಾಚಿಕೆಯಾಗಬೇಕು ಇಂಥವರಿಗೇನಾ ನಾನು ಕ್ರಮಿಸಲು ನಿರಾಕರಿಸಿದುದು, ಮುಕ್ತವಾಗಿ ಇರದೇ ಇದ್ದುದು ಎಂದು.
ಜಾನಪದ ಕಲೆಯಿಂದ ಹಿಡಿದು ಆಧುನಿಕ ಸಿನಿಮಾ ಹಾಡುಗಳವರೆಗೂ ಹೆಣ್ಣು ಒಂದಿಲ್ಲೊಂದು ರೀತಿಯಲ್ಲಿ ಅಪಮಾನ, ಕಡೆಗಣನೆ ಅನುಭವಿಸಿದ ಉದಾಹರಣೆಗಳಿವೆ.

ರಾಜಕೀಯ ಕ್ಷೇತ್ರ, ಧಾರ್ಮಿಕ ವಿಧಿವಿಧಾನಗಳಲ್ಲಿ ಹೆಣ್ಮಕ್ಕಳಿಗೆ ಕೆಂಪುಹಾಸಿನ ಸ್ವಾಗತವೇನೂ ದೊರೆಯುತ್ತಿಲ್ಲ. ಆಕೆಯ ಕನಸುಗಳು ಈಗಾಗಲೇ ಸ್ಥಾಪಿತವಾದ ವಿಚಾರಗಳನ್ನು ಅನುಸರಿಸಿಯೇ ಇದ್ದರೆ ನಡೆ ಸರಾಗ.

ಇಲ್ಲವಾದರೆ ತುಸು ಹೋರಾಡಿಯೇ ಪಡೆಯಬೇಕು. ಹೆಣ್ಣಾಗಿ ಹುಟ್ಟಿರುವುದೇ ಆಕೆಯ ಪೂರ್ವಜನ್ಮದ ಕರ್ಮಫಲದಿಂದ. ಪುರುಷ ಉನ್ನತ ಮಟ್ಟದ ವ್ಯಕ್ತಿ. ಮಹಿಳೆ ಆತನಿಗಿಂತ ಕೀಳು. ಒಂದು ಧರ್ಮದ ಪ್ರಕಾರ ಆಕೆ ಪುರುಷನ ಎಲುಬಿನಿಂದ ಜನ್ಮತಳೆದವಳು. ಸಮ ಹೇಗಾದಾಳು? ಪುರುಷರು ಸ್ತ್ರೀಯರನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ.

ಈಗಲೂ ಬಹಳಷ್ಟು ದೇವಾಲಯಗಳಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ. ಕೆಲವು ಮತಗಳಲ್ಲಿ ಹೋದರೂ ಅಲ್ಲಿ ಅವರಿಗೇ ಪ್ರತ್ಯೇಕ ಸ್ಥಳ. ಕೆಲವು ಮತಗಳಲ್ಲಿ ಚೇತನದ ಪರಾಕಾಷ್ಠತೆಯ ಬೆಳವಣಿಗೆಗೆ ಆಕೆ ಪಾತ್ರಳಲ್ಲ ಎಂದೇ ನಿರ್ಧರಿಸಿದ್ದಾರೆ.

ಕೇವಲ ಹೆಣ್ಣುಮಕ್ಕಳೆಂಬ ಕಾರಣಕ್ಕೆ! ಹಾಗೂ ಆ ಮಟ್ಟಕ್ಕೆ ತಲುಪಬೇಕೆಂದರೆ ಒಂದು ನಿಯಮ ಪಾಲಿಸಲೇಬೇಕು... ಗಂಡಸಾಗಿ ಜನಿಸಬೇಕು! ಇದಕ್ಕೆ ಹೊರತಾದ ನಿದರ್ಶನಗಳೂ ಇವೆ. ಜ್ಞಾನೋದಯ ಪುರುಷರ ಏಕಾಧಿಪತ್ಯವಲ್ಲ. ಆದರೆ ಇವೆಲ್ಲವೂ ಸೂಕ್ಷ್ಮ ರೀತಿಯ ಅಪಮಾನಗಳು.

ಅಧಿಕಾರದ ವಲಯದಿಂದ ದೂರವಿರಿಸುವುದು; ಆಗುಹೋಗುಗಳಲ್ಲಿ ಅವಕಾಶ ನೀಡದೆ ಇರುವುದು; ವ್ಯಾವಹಾರಿಕ ಜೀವನದ ಅಂಗವಾಗಿ ಇರಲು ಬಿಡದೇ ಇರುವುದು; ಧರ್ಮದ ಆಯಾಮದಲ್ಲಿ ಭಾಗವಹಿಸಲು ಬಿಡದೇ ಇರುವುದು ಎಲ್ಲವೂ ನಯವಂಚನೆಗಳು.

ಸಮಾಜದ ರಚನೆ ಗಂಡಸರದು. ಇಂತಹ ಎಲ್ಲ ವಿಚಾರಗಳಿಗೂ ಅದಕ್ಕೆ ಕಾರಣಕರ್ತರಾದ ಎಲ್ಲರಿಗೂ ನಾಚಿಕೆಯಾಗಬೇಕು ಇದನ್ನು ಕಂಡು. ಎಲ್ಲ ಇಂತಹ ಸಮಸ್ಯೆಗಳನ್ನೂ ದಾಟಿ. ಇಂತಹ ವಾತಾವರಣ ಇನ್ನೂ ಜೀವಂತವಾಗಿರುವಾಗಲೂ ಇಲ್ಲೊಂದಿಷ್ಟು ಹುಡುಗಿಯರು ಎಲ್ಲ ಅಡೆ ತಡೆ ಮೀರಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಹೊರಟಿದ್ದಾರೆ.

ಹೆಣ್ಮಕ್ಕಳ ಸಾಧನೆಗೆ ನೆರವು ಹಲವರಿಂದ. ಖಂಡಿತ. ಆದರೆ ಸಾಧನೆಗೆ ಕಾರಣವೇ ಗಂಡಸು ಎಂಬಂತಹ ಮಾತುಗಳೂ ಕೇಳಿಬಂದಿವೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಮಕ್ಕಳು ಭಾಗವಹಿಸಿದ್ದರು.

ಸಾಧನೆಯೂ ಗಣನೀಯ. ಆದರೆ ಲಿಂಗಸಂಬಂಧಿ ಪೂರ್ವಗ್ರಹಗಳು ಸಂಪೂರ್ಣ ನಿವಾರಣೆ ಆಗಿವೆ ಅಂತೇನಿಲ್ಲ. ಹಂಗರಿಯ ಈಜುಪಟು ಕತಿಂಕಾ ಹೌಸ್ಜು ಕಬ್ಬಿಣದ ಮಹಿಳೆ ಎಂದೇ ಗುರುತಿಸಿಕೊಂಡವಳು. ಮಹಿಳೆಯರ 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ವಿಶ್ವದಾಖಲೆಯನ್ನೇ ಅಲುಗಿಸಿದಾಕೆ.

ಆದರೆ ಎನ್‌ಬಿಸಿಯಲ್ಲಿ ವೀಕ್ಷಕ ವಿವರಣೆ ನೀಡುವಾಗ ಡಾನ್‌ ಹಿಕ್ಸ್‌ ಆಕೆಯ ಪತಿ ಮತ್ತು ತರಬೇತುದಾರ ಶೇನ್‌ ಈ ಸಾಧನೆಗೆ ಜವಾಬ್ದಾರ ಎಂದು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ಬಹಳ ಟೀಕೆ ಎದುರಿಸಬೇಕಾಯಿತು. ಆದರೆ ಈಗಲೂ ಅನೇಕ ದೇಶಗಳಲ್ಲಿ ಹೆಣ್ಮಕ್ಕಳು ಒಲಿಂಪಿಕ್‌ ಕ್ರೀಡೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.

ಆದರೂ ಹಲವು ಅಡ್ಡಿ ಆತಂಕಗಳ ಮಧ್ಯೆ ಅಲ್ಜೀರಿಯಾದ ಓಟಗಾರ್ತಿ ಮೊದಲಬಾರಿ ಒಲಿಂಪಿಕ್‌ನಲ್ಲಿ ಸ್ವರ್ಣಪದಕ ಗೆದ್ದು ಕೊಟ್ಟದ್ದು ಇತಿಹಾಸ. ಒಲಿಂಪಿಕ್‌ ಕ್ರೀಡೆಗಳಲ್ಲಿ ಭಾಗವಹಿಸುವುದೇ ಸಾಧನೆ. ಅಂಥದರಲ್ಲಿ ಪದಕ ಗಳಿಕೆ ಕಡಿಮೆ ಸಾಧನೆಯೇನಲ್ಲ.

ದಾಡಸಿ ಅಥ್ಲೆಟಿಕ್‌ ಸಾಧನೆಗೆ, ಕೌಶಲಕ್ಕೆ ಮಹಿಳೆಯರು ಅಸಮರ್ಥರು ಎಂಬ ಆಫ್ಘಾನಿಸ್ಥಾನದ ಜನರ ನಂಬಿಕೆಯನ್ನು ಹುಸಿಗೊಳಿಸಿದ್ದಾಳೆ ಜೈನಾಬ್‌. ಸಾಬೀತುಪಡಿಸಲು ಯತ್ನಿಸುವ ಅವಳ ಈ ಸಾಹಸಕ್ಕೆ ಅವಳನ್ನು ಕೊಂದೇಬಿಡುವ ಸಾಧ್ಯತೆ ಇತ್ತು ಎಂದು ಅಲ್ಲಿನ ಗವರ್ನರೇ ಹೇಳಿದ್ದಾರೆ.

ಅಭ್ಯಾಸ ಕೂಡ ಮನೆಯ ಬಳಿಯೇ ಮಾಡಬೇಕಿತ್ತು ಆಕೆ. ತಾಲಿಬಾನ್‌ ಆಡಳಿತದ ಕಾಲದಲ್ಲಂತೂ ಜೋರಾಗಿ ನಕ್ಕರೂ ಮಹಿಳೆಯರು ಜೈಲು ಪಾಲಾಗಬೇಕಿತ್ತು. ಶಾಲೆಗೆ ಹೋದವರನ್ನು ಕೊಂದದ್ದಿದೆ.

ಒಬ್ಬರೇ ಮನೆಯ ಹೊರಗೆ ಹೋದರೆ ಹೊಡೆತ. ಆಟ ಆಡುವುದು ಕಾನೂನು ಬಾಹಿರ ಚಟುವಟಿಕೆ. ನಡೆಯುವಾಗ ಹೆಚ್ಚು ಶಬ್ದವಾಗುವಂತಿಲ್ಲ, ಅದೂ ಕಾನೂನಿಗೆ ವಿರುದ್ಧ. ಬುರ್ಖಾ ಹಾಕಲೇಬೇಕು. ತಾಲಿಬಾನ್‌ ಆಡಳಿತದ ನೆರಳಿನಿಂದ ಹೊರಬರುತ್ತಿರುವ ಆಫ್ಘಾನಿಸ್ಥಾನದಲ್ಲಿ ಹೊರಗೆ ಓಡುವುದು ಕ್ರಾಂತಿಕಾರಿ ನಡೆಯೇ.

ಇದ್ದುದರಲ್ಲೇ ಪ್ರಗತಿಪರರಾದ ಜೈನಾಬ್‌ಳ ಸಮುದಾಯದಲ್ಲಿ ಮಹಿಳಾ ಅಥ್ಲೀಟ್‌ ಎನ್ನುವುದನ್ನು ಅಪಮಾನಕರ ಎಂದೇ ತಳ್ಳಿಹಾಕುತ್ತಾರೆ. ಹೆಣ್ಮಕ್ಕಳ ತಂದೆಯರೂ ಮಕ್ಕಳಿಗೆ ಆಡಲು ಬಿಡದಂತೆ ಇಂತಹ ಅನಿವಾರ್ಯ ಸ್ಥಿತಿಗಳಿವೆ.

16 ತುಂಬುತ್ತಿದ್ದಂತೆ ಬ್ಯಾಸ್ಕೆಟ್‌ಬಾಲ್‌ ಟೀಮ್‌ನ ಎಲ್ಲರೂ ಮದುವೆ ಕಾರಣಕ್ಕೆ ಆಟ ಬಿಡುವುದು ಮಾಮೂಲಿ. ವಿವಾದಾತ್ಮಕ ಇಂತಹ ಸಮುದಾಯಗಳಲ್ಲಿ ಸಹ  ಸ್ಪೋರ್ಟ್ಸ್‌ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಜಾಗೃತಿ ಮೂಡಿಸುವ ಉದ್ದೇಶದ ‘ಫ್ರೀ ಟು ರನ್‌’ ಸಾಹಸಕ್ಕೆ ಕೈಹಾಕಿದೆ.

ಅದರ ಸಂಸ್ಥಾಪಕಿ ಸ್ಟೆಫನಿ ಕೇಸ್‌. ಅವರು ಆಫ್ಘಾನಿಸ್ಥಾನದ ಮಹಿಳೆ ಜೈನಾಬ್‌ ಅವರು 250 ಕಿ.ಮೀ.  ಅಲ್ಟ್ರಾ ಮ್ಯಾರಥಾನ್‌ ರೇಸ್‌ನಲ್ಲಿ ಭಾಗವಹಿಸುವಂತೆ ಮಾಡಿದ್ದು ರೋಮಾಂಚನಕಾರಿ.

ನಾಚಿಕೆಯಾಗಬೇಕು ಎಂದು ಧ್ವನಿಸುತ್ತಿವೆ ಪ್ರಸೂನ್‌ ಅವರ ಕವನದ ಸಾಲುಗಳು.
ನಾಚಿಕೆಯಾಗ್ತಿದೆಯಲ್ಲ?
ಆಕೆ ಹುಟ್ಟಿದಾಗ ಮುಕ್ತವಾಗಿ
ಸಂಭ್ರಮಿಸದ ಸಮಾಜಕ್ಕೆ?
ಆ ತಂದೆಗೆ
ಅವಳು ಹುಟ್ಟಿದಳೆಂದು ಒಂದು ದೀಪ ಕಡಿಮೆ
ಹೊತ್ತಿಸಿದುದಕ್ಕೆ?
ವಿಧಿಗಳು, ರೀತಿ ರಿವಾಜುಗಳು
ಬೇಡಿ ಬಾಗಿಲುಗಳಿಗೆ?
ಆ ಹಿರಿಯರಿಗೆ
ಅವಳ ಅಸ್ತಿತ್ವವನ್ನು
ಕೇವಲ ಅಂಧಕಾರದೊಂದಿಗೆ
ತಳುಕು ಹಾಕಿದವರಿಗೆ?
ಆ ದುಪಟ್ಟಾಗಳಿಗೆ
ಅವಳನ್ನು ಒಳಗಿನಿಂದ ಒಡೆದು
ಚೂರಾಗಿಸಿದ ಆ ದಿರಿಸುಗಳಿಗೆ
ಶಾಲೆ, ಕಚೇರಿ
ರಸ್ತೆ, ಗಮ್ಯಗಳಿಗೆ?
ಅವಳನ್ನೆಂದೂ ದೇಹದ ಆಚೆ ಅರ್ಥವೇ ಮಾಡಿಕೊಳ್ಳದ
ಆ ಶಬ್ದ, ಹಾಡುಗಳಿಗೆ?
ಆಕೆಯ ಕನಸುಗಳು ಪದೇ ಪದೇ ಅವಮಾನಿತವಾದ
ಆ ರಾಜಕೀಯ, ಧರ್ಮಕ್ಕೆ?
ನಾಚಿಕೆಯಾಗಬೇಕು
ಆಕೆಯ ರೆಕ್ಕೆ ಮುರಿದ...
ಅಂತಹ ಎಲ್ಲ ವಿಚಾರಗಳಿಗೂ
ಆಕೆ ಆಕಾಶದತ್ತ ನೋಡುವುದನ್ನು ತಡೆದ
ಅಂತಹುದೇ ಎಲ್ಲ ಯೋಚನೆಗಳಿಗೆ
ನಾಚಿಕೆಯಾಗಬೇಕು
ನಾಚಿಕೆಯಾಗಬೇಕು ಬಹುಶಃ ನಮ್ಮೆಲ್ಲರಿಗೂ
ಏಕೆಂದರೆ, ಪುಟ್ಟ ಬಾಲಕಿ ತನ್ನ ಮುಷ್ಟಿಯಲ್ಲಿ ಆ ದಿನಕರನನ್ನೇ ಹಿಡಿದು ಬಂದಾಗ
ಕಾಣಲಿಲ್ಲ ಆಕೆಯ ಬೆರಳುಗಳಾಚೆ ಇಣುಕಿದ ಆ ಪ್ರಖರ ಬೆಳಕು
ಆಕೆ ಹುಡುಗಿಯಾಗಿ ಇರಲೆಂದು ನೋಡುತ್ತಿದ್ದೆವಲ್ಲ
ಆಕೆಯ ಮುಷ್ಟಿಯಲ್ಲಿತ್ತು
ಮುಂಬರುವ ನಾಳೆ
ನಾವೆಲ್ಲ ನೋಡುತ್ತಿದ್ದುದು ಇಂದು ಆಗಿತ್ತು
ಆ ದಿನಕರನಂತೂ ಬಿಸಿಲು ಪಸರಿಸಬಯಸಿದವ
ಮಗಳಿಗೊ ಬೆಳಕು ಹರಿಯುವುದು ಬೇಕಿತ್ತು
ಅಂತೂ ಬೆಳಗಾಯಿತು.


*
ಚೇತನ ತನ್ನ ಇರವು ಸಶಕ್ತವಾಗಿ ಪ್ರಕಟಗೊಳ್ಳಲು ಕಾದೇ ಇರುತ್ತದಲ್ಲ. ತುಸು ಅವಕಾಶ ಸಿಕ್ಕರೂ ಸಾಕು, ಬೆಳಕು ಬೆರಳುಗಳ ಈಚೆ ಕಣ್ಣ ಪ್ರಭೆಯಲ್ಲಿ, ವ್ಯಕ್ತಿತ್ವದ ಕಾಂತಿಯಲ್ಲಿ ಕಂಡೇ ಕಾಣುತ್ತದೆ. ಹೌದು, ಆ ದಿನಕರನೂ ಬೆಳಗು ಬಯಸುವವ. ಸಂಕೋಚದ ಹಿಡಿಯ ಆಚೆ ಸೂರ್ಯನಷ್ಟೇ ಪ್ರಖರ ಚೆಲುವಿನ ಅಪಾರ ಬೆಳಕಿದೆ. ಬೆಳಗೇನೋ ಆಗಿದೆ.

ಆದರೆ ಒಂದೇ ಬೆಳಗಿಗೆ ಜಗ ನಿಲ್ಲದಲ್ಲ. ಬೆಳಗೀಗ ನಿತ್ಯದ ಹಾಡು. ಜಗವಿದು ನಿರಂತರ ಬೆಳಕಿನ ಸತತ ಅವತರಣಿಕೆ. ಅದೆಷ್ಟೋ ಮುಂಜಾವು ಕಂಡ ಕಣ್ಣುಗಳಿಗೂ ಹೊಸದೊಂದು ಬೆಳಗು ಕಾಣುವ ತವಕ. ಒಂದೊಂದು ಬೆಳಗಿನಲೂ ಭರವಸೆಯ ಬೆಳಕು ಜಗವ ಕಾಣಲು. ದೇಹದಾಚೆಯ ಚೇತನವ ಕಣ್ಣೆತ್ತಿ ನೋಡಲು.

ಒಶೋ ಹೇಳುವಂತೆ. ದೇಹರಚನೆಯಲ್ಲಿ ಮತ್ತು ಶಕ್ತಿ ಸಾಮರ್ಥ್ಯದಲ್ಲಿ ಮಾತ್ರ ಗಂಡಿಗೂ ಹೆಣ್ಣಿಗೂ ವ್ಯತ್ಯಾಸ. ಚೇತನದಲ್ಲಿ ಇಬ್ಬರೂ ಸಮಾನರು. ಪ್ರತಿಭೆಯೂ ಅಷ್ಟೇ. ಅವಕಾಶ ಇದ್ದರೆ ಪ್ರಕಟವಾಗುತ್ತದೆ.

ಪ್ರತಿಭೆಗೂ ಲೈಂಗಿಕ ಹಾರ್ಮೋನ್‌ಗೂ ಯಾವ ಸಂಬಂಧವೂ ಇಲ್ಲ. ಆದರೆ ಇತ್ತೀಚೆಗೆ ಐಡಬ್ಲ್ಯೂಪಿಆರ್‌ (ಇನ್‌ಸ್ಟಿಟ್ಯೂಟ್‌ ಫಾರ್‌ ವಿಮೆನ್ಸ್‌ ಪಾಲಿಸಿ ರಿಸರ್ಚ್‌) ಹೇಳಿದ್ದೇನು ಗೊತ್ತೆ? ಪ್ರಾಥಮಿಕ ಪೇಟೆಂಟ್‌ ಪಡೆದವರಲ್ಲಿ ಕೇವಲ ಶೇ. 8ರಷ್ಟು ಮಹಿಳೆಯರು ಇದ್ದಾರೆ.

ಈಗಿರುವ ಸ್ಥಿತಿ ನೋಡಿದರೆ ಮಹಿಳಾ ಸಂಶೋಧಕರು ಪೇಟೆಂಟ್‌ ಪಡೆಯುವಲ್ಲಿ ಪುರುಷ ಸಂಶೋಧಕರಿಗೂ ತಮಗೂ ಇರುವ ಸಂಖ್ಯಾ ವ್ಯತ್ಯಾಸ ಸರಿದೂಗಿಸಲು 2092ರವರೆಗೂ ಸಾಧ್ಯವಾಗಲಿಕ್ಕಿಲ್ಲ! ಮುಕ್ತವಾಗಿರಲು ಬಿಟ್ಟರೆ ತಾನೆ ಪ್ರತಿಭೆ ಅರಳುವುದು? ಸಂಪೂರ್ಣ ಸಾಮರ್ಥ್ಯ ಪ್ರಕಟಗೊಳ್ಳುವುದು?

ಅವಳ ದೇಹರಚನೆಯೇ ಅವಳ ಬಗೆಗಿನ ಸಮಾಜದ ಭಾವನೆ, ವಿಚಾರ ಪೂರ್ವಗ್ರಹಗಳನ್ನು ನಿಯಂತ್ರಿಸುವುದಿಲ್ಲ, ನಿರ್ದೇಶಿಸುವುದೂ ಇಲ್ಲ. ಸಮಾಜ, ಕುಟುಂಬ, ಪುರುಷರು, (ಈ ಮೊದಲೇ ಪುರುಷಪ್ರಧಾನ ಸಮಾಜದಲ್ಲಿ ಸಮಾಜದ ನಿರೀಕ್ಷೆಗೆ ತಕ್ಕಂತೆ ಬಾಳಿದ) ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇದೆಲ್ಲವನ್ನೂ ಅವಳಿಗೆ ಕೊಡುತ್ತಾರೆ.

ಹೆಣ್ಣು ಎಂಬ ಪರಿಕಲ್ಪನೆ ಜೈವಿಕವಾಗಿ ಹುಟ್ಟುವುದಿಲ್ಲ. ಅವಳನ್ನು ಸಮಾಜವೇ ಸಂರಚಿಸುತ್ತದೆ. ಹೆಣ್ಣುತನದ ಲಕ್ಷಣಗಳು, ಜನ್ಮಕ್ಕೆ, ದೇಹಕ್ಕೆ ಅಂಟಿಕೊಂಡು ಬಂದ ಬಂಧನವೇನಲ್ಲ. ದೇಹರಚನೆ ಪರಿಮಿತಿಯೂ ಅಲ್ಲ, ದೌರ್ಬಲ್ಯವೂ ಅಲ್ಲ.

ಆದರೆ ಗಂಡುಮಕ್ಕಳಂತೆ ಆಲೋಚಿಸಬೇಕು, ಆಡಬೇಕು ಎಂಬ ಒತ್ತಡ ನಿರ್ಮಾಣ ಆಗುತ್ತದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಮಕ್ಕಳು ಬಲಗಾಲಿಟ್ಟು ಆಗಿದೆ. ಆದರೆ ಹೆಣ್ಣಿನ ಚಟುವಟಿಕೆಯ ‘ಪುರುಷೀಕರಣ’ ಅಷ್ಟಾಗಿ ಒಪ್ಪತಕ್ಕ ವಿಚಾರವಲ್ಲ.

ಯೂನಿಸೆಕ್ಸ್‌ ಪರಿಕಲ್ಪನೆ ಕೂಡ ಬಹಮಟ್ಟಿಗೆ ಎಲ್ಲ ಕಾರ್ಯ ವಲಯಗಳಲ್ಲೂ ಹಾಸುಹೊಕ್ಕಿದೆ, ಕನಿಷ್ಠ ಪಕ್ಷ ಕೆಲಸಕ್ಕೆ ಸಂಬಂಧಿಸಿದಂತೆ ಅಂತೂ ಹೆಣ್ಣು ಎನ್ನುವ ಕಾರಣಕ್ಕೆ ಅವಳು ವಿನಾಯಿತಿ ನಿರೀಕ್ಷಿಸುವಂತಿಲ್ಲ, ಸಿಗುವುದೂ ಇಲ್ಲ. ಆದರೂ ಸಮಾನವೇತನ ಇನ್ನೂ ಬಹುರಾಷ್ಟ್ರೀಯ ಕಂಪೆನಿಗಳಲ್ಲೂ ಮರೀಚಿಕೆಯೇ.

ಅಷ್ಟಕ್ಕೂ ಪುರುಷರೊಂದಿಗಿನ ಸಮ ಸಮನಾದ ಆಕೆಯ ಓಟಕ್ಕೆ ಆ ಓಘಕ್ಕೆ ತಕ್ಕಂತೆ ಸಮಾಜದಲ್ಲಿ ಮಾರ್ಪಾಡು ನಡೆದಿಲ್ಲ. ಬೆಳಗು ಆಯಿತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT