ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ದೌರ್ಜನ್ಯ: ಅನಾಮಧೇಯ ಅಧಿಕಾರಿಯೊಬ್ಬನ ಆತ್ಮನಿವೇದನೆ

ವಿಮರ್ಶೆ
Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ


Blood on My Hands: Confessions of Staged Encounters
ಲೇ:
ಕಿಷಾಲಯ್ ಭಟ್ಟಾಚಾರ್ಜಿ
ಪ್ರ: ಹಾರ್ಪರ್‌ ಕಾಲಿನ್ಸ್‌ ಇಂಡಿಯಾ

***
Blood on My Hands: Confessions of Staged Encounters –  ಇದು ಈಶಾನ್ಯ ಭಾರತ ಮತ್ತು ಕಾಶ್ಮೀರಗಳಲ್ಲಿ ಕೌಂಟರ್–ಇನ್ಸರ್ಜೆನ್ಸಿ (ದಂಗೆ–ನಿಗ್ರಹ ಪ್ರತಿತಂತ್ರಗಳು) ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಸೇನಾಧಿಕಾರಿಯೊಬ್ಬರ ಸುದೀರ್ಘ ತಪ್ಪೊಪ್ಪಿಗೆ ಹೇಳಿಕೆ.

ದೇಶಭದ್ರತೆಯ ಹೆಸರಿನಲ್ಲಿ ಭಾರತದ ಸೇನಾಪಡೆಯ ಅಧಿಕಾರಿಗಣದ ಹಲವರು ಪ್ರಶಸ್ತಿ, ಬಡ್ತಿ ಮತ್ತು ಹಣದ ಬೆನ್ನುಹತ್ತಿ ವ್ಯವಸ್ಥಿತವಾಗಿ ನಡೆಸುತ್ತಿರುವ ಅಮಾಯಕರ ಕಗ್ಗೊಲೆ–ದರೋಡೆಗಳಿಗೆ ಸಾಕ್ಷಿಯಾಗಿದ್ದ ಭಾರತ ಸೇನೆಯ ಅನಾಮಧೇಯ ಅಧಿಕಾರಿಯೊಬ್ಬ, ಈ ದೇಶದ ಅತ್ಯಂತ ಪ್ರತಿಷ್ಠಿತ ಪತ್ರಕರ್ತರೊಬ್ಬರ ಎದುರು ಮಾಡಿಕೊಂಡ ಪಾಪನಿವೇದನೆ ಇದು.

ಇತ್ತೀಚಿನ ದಿನಗಳಲ್ಲಿ ಸೇನೆಯೂ ಸಹ ಇತರ ಸಂಸ್ಥೆಗಳಂತೆ ಭ್ರಷ್ಟತೆ–ದುಷ್ಟತೆಗೆ ಈಡಾಗಬಹುದಾದ ಒಂದು ಪ್ರಭುತ್ವದ ಅಂಗವೆಂಬ ಸಹಜ ಗ್ರಹಿಕೆಯನ್ನೂ ದೇಶದ್ರೋಹವೆನ್ನುವ ರಾಜಕಾರಣವೊಂದು ನಡೆದಿದೆ. ಈ ಹುಸಿ ದೇಶಪ್ರೇಮದ ರಾಜಕಾರಣವೇ ಸಂಘರ್ಷ ಪ್ರಾಂತ್ಯಗಳಲ್ಲಿ ದೇಶದ ಹೆಸರಿನಲ್ಲಿ ಬಂದೂಕಿನ ಸರ್ವಾಧಿಕಾರಕ್ಕೆ ಜನತೆಯ ಮೌನ ಸಮ್ಮತಿಯನ್ನು ರೂಢಿಸಿಕೊಟ್ಟಿದೆ.

ಭಾರತದ ಈ  ಮೌನವು ಈಶಾನ್ಯ ಭಾರತ ಮತ್ತು ಕಾಶ್ಮೀರಗಳಲ್ಲಿ ಮಾನ್ಯಗೊಳಿಸಿರುವ ಅಧಿಕೃತ ಹಿಂಸಾಚಾರಗಳ ರಕ್ತ ಹೆಪ್ಪುಗಟ್ಟಿಸುವಂಥ ವಿವರಗಳನ್ನು ಈ ಪುಸ್ತಕ ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಅನಾಮಧೇಯ ಅಧಿಕಾರಿಯು ತನ್ನ ನಿವೇದನೆಯಲ್ಲಿ, ಹೇಗೆ ಈ ಹಿಂಸಾಚಾರವು ಇಂದು ಬೃಹತ್ ಆರ್ಥಿಕ ವ್ಯವಹಾರವಾಗಿ, ಒಂದು ಮಾಫಿಯಾ ಆಗಿ ಬೆಳೆದುನಿಂತಿದೆ ಎಂಬ ಬಗ್ಗೆ ನೀಡುವ ಪುರಾವೆಗಳು ನಿಜವಾದ ದೇಶಭಕ್ತರು ಮತ್ತು ಪ್ರಜಾತಂತ್ರವಾದಿಗಳೆಲ್ಲರು ತಲ್ಲಣಿಸುವಂತೆ ಮಾಡುತ್ತದೆ.

ಆದ್ದರಿಂದಲೇ ಈ ದೇಶದ ಪ್ರಜಾಸತ್ತೆಯ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಅದರಲ್ಲೂ ಮೇನ್‌ಸ್ಟ್ರೀಮ್ ಭಾರತೀಯರೆಲ್ಲರೂ ಕಡ್ಡಾಯವಾಗಿ ಓದಲೇ ಬೇಕಾದ ಪುಸ್ತಕ ಇದಾಗಿದೆ.

ಇತ್ತೀಚೆಗೆ ಭಾರತದ ಸೇನಾಪಡೆಯ ಮುಖ್ಯಸ್ಥರಾದ ಜನರಲ್ ದಲ್ಬೀರ್ ಸಿಂಗ್ ಅವರು, ಮಾಜಿ ಜನರಲ್ ಮತ್ತು ಹಾಲಿ ಕೇಂದ್ರ ಮಂತ್ರಿ ವಿ.ಕೆ. ಸಿಂಗ್ ಅವರು ತಮ್ಮ ಬಡ್ತಿಯನ್ನು ತಡೆಯಲೆಂದೇ ತಮ್ಮ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು.

ಮಾಧ್ಯಮಗಳು ಸೇನಾ ಜನರಲ್ ಅವರು ಹೇಳಿದ್ದನ್ನೇ ಸತ್ಯವೆಂದು ಬಿಂಬಿಸುವ ವರದಿಗಾರಿಕೆಯಿಂದ ಹೊರಬಂದು, ಸ್ವತಂತ್ರ ತನಿಖಾ ವೃತ್ತಿಪರತೆಯಿಂದ ಆ ಅಫಿಡವಿಟ್ಟಿನ ವಿವರಗಳನ್ನು ವರದಿ ಮಾಡಿದ್ದರೂ ಈ ಪುಸ್ತಕದಲ್ಲಿರುವ ಸತ್ಯದ ಝಲಕು ಎಲ್ಲಾ ವರದಿಗಾರರಿಗೂ ದಕ್ಕುತ್ತಿತ್ತು.

ಜನರಲ್ ದಲ್ಬೀರ್ ಸಿಂಗ್ ಅವರ ಮೇಲಿದ್ದ ಆರೋಪ ಏನೆಂದರೆ – ಅವರು ಈಶಾನ್ಯ ಭಾರತದ ದೀಮಾಪುರ್‌ನ ಕಾರ್ಪ್–3ರ ಜನರಲ್  ಆಫೀಸರ್ ಕಮ್ಯಾಂಡಿಂಗ್ ಆಗಿದ್ದಾಗ, ಮಿಲಿಟರಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೇಜರ್ ರವಿ ಕಿರಣ್ ಅವರು ತಮ್ಮ ವಿಭಾಗದ ಸಹೋದ್ಯೋಗಿ ಸೇನಾಧಿಕಾರಿಗಳು ಮೂವರು ಅಮಾಯಕರನ್ನು ವಶದಲ್ಲಿಟ್ಟುಕೊಂಡು ವಿನಾಕಾರಣ ಕೊಂದುಹಾಕಿದ್ದಾರೆಂದೂ, ಮತ್ತದನ್ನು ಎನ್‌ಕೌಂಟರಿನಲ್ಲಿ ಮಿಲಿಟೆಂಟ್‌ಗಳ ಹತ್ಯೆಯೆಂದು ಸುಳ್ಳು ವರದಿ ನೀಡಿದ್ದಾರೆಂದು ದಲ್ಬೀರ್ ಸಿಂಗ್ ಅವರಿಗೂ, ಪೂರ್ವ ವಿಭಾಗದ ಸೇನಾ ಮುಖ್ಯಸ್ಥರಿಗೂ ಮತ್ತು ಅಂದಿನ ಸೇನಾ ಜನರಲ್ ಆಗಿದ್ದ ವಿ.ಕೆ. ಸಿಂಗ್ ಅವರಿಗೂ ಪತ್ರ ಬರೆದಿದ್ದರು.

ಎರಡು ವರ್ಷಗಳಾದರೂ ಅದರ ಬಗ್ಗೆ ಆ ತನಿಖೆಯೇ ನಡೆಯದಿದ್ದಾಗ, ವಿ.ಕೆ. ಸಿಂಗ್ ಅವರು ದಲ್ಬೀರ್ ಸಿಂಗ್ ಅವರಿಗೆ ಕಾರಣ ಕೋರಿ ನೋಟಿಸ್ ಜಾರಿ ಮಾಡಿದ್ದಲ್ಲದೆ, ಅವರನ್ನು ವಿಚಕ್ಷಣಾ ಪಟ್ಟಿಯಲ್ಲಿರಿಸಿದರು. ಜನರಲ್ ದಲ್ಬೀರ್ ಸಿಂಗ್ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಇದೆಲ್ಲವೂ ತನ್ನ ಬಡ್ತಿಯನ್ನು ತಡೆಯಲು ಆಗಿನ ಜನರಲ್ ವಿ.ಕೆ. ಸಿಂಗ್ ಹೂಡಿದ ತಂತ್ರವೆಂದು ವಾದಿಸಿದ್ದಾರೆ.

ಇದರಲ್ಲಿ ಯಾವ ಜನರಲ್ ಸರಿ ಯಾರು ತಪ್ಪೆಂದು ಕೋರ್ಟು ನಿರ್ಧರಿಸುತ್ತದೆ. ಆದರೆ ಅಮಾಯಕರ ಹತ್ಯೆ ಮಾಡಿ ಅದನ್ನು ಎನ್‌ಕೌಂಟರ್ ಎಂದು ತೋರಿಸಿದ ಸತ್ಯ ನಿರಾಕರಣೆಯಾಗಿಲ್ಲವೆಂಬುದು ನಾಗರಿಕ ಸಮಾಜಕ್ಕೆ ಅತಿ ಮುಖ್ಯವಾದದ್ದು.

ಪ್ರಕರಣದಲ್ಲಿರುವ ಈ ಸತ್ಯವನ್ನು ಯಾವ ಮಾಧ್ಯಮಗಳೂ ಬಯಲಿಗೆಳಯಲು ಹಿಂಜರಿದಾಗ, ಅದನ್ನು ಸಮಾಜದ ಎದುರು ಬಿಚ್ಚಿಟ್ಟಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಈಶಾನ್ಯ ಭಾರತದಲ್ಲಿ ರಾಷ್ಟ್ರೀಯ ಮಾಧ್ಯಮಗಳಿಗೆ ಪತ್ರಕರ್ತರಾಗಿ ಕೆಲಸ ಮಾಡಿರುವ ಕಿಷಾಲಯ್ ಭಟ್ಟಾಚಾರ್ಜಿ. ಅವರೇ ಈ ‘Blood on My hands’ ಕೃತಿಯ ಲೇಖಕರು.

ಮೂಲತಃ ಅಸ್ಸಾಮಿನವರಾದ ಕಿಷಾಲಯ್ ಭಟ್ಟಾಚಾರ್ಜಿ ಅವರು 18 ವರ್ಷಗಳ ಕಾಲ NDTVಗೆ ಈಶಾನ್ಯ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡಿದವರು. ಅಷ್ಟು ಮಾತ್ರವಲ್ಲ, ತಮ್ಮ ವರದಿಗಳಿಗೆ 2006ರಲ್ಲಿ ರಾಮನಾಥ ಗೊಯೆಂಕಾ ಪ್ರಶಸ್ತಿಯನ್ನು ಪಡೆದವರು.

ಎಲ್ಲಕ್ಕಿಂತ ಹೆಚ್ಚಾಗಿ 2011ರಿಂದ ದೇಶದ ರಕ್ಷಣಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೆಲಸ ಮಾಡುವ ಸ್ವಾಯತ್ತ ಸಂಸ್ಥೆಯಾದ Institute For Defence Studies and Analysis (IDSA) ನಲ್ಲಿ ಅಂತರಿಕಾ ಭದ್ರತೆ ವಿಷಯಗಳ ಅಧ್ಯಯನದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವವರು.

ಇವೆಲ್ಲವೂ ಈ ಪುಸ್ತಕದಲ್ಲಿರುವ ಸಂಗತಿಗಳ ಅಧಿಕೃತತೆಯನ್ನು ಇನ್ನಷ್ಟು ದೃಢೀಕರಿಸುತ್ತದಷ್ಟೆ. ಹೀಗಾಗಿಯೇ ಈವರೆಗೆ ಈ ಪುಸ್ತಕದಲ್ಲಿ ಬಯಲಾಗಿರುವ ಸಂಗತಿಗಳನ್ನು ಸೇನೆಯಾಗಲೀ ಸರ್ಕಾರವಾಗಲೀ ಪ್ರಶ್ನಿಸುವ ಸಾಹಸಕ್ಕೆ ಕೈಹಾಕಿಲ್ಲ. ಬದಲಿಗೆ ಯೋಜಿತ ಮೌನದಿಂದ ಈ ಪುಸ್ತಕದ ಮಹತ್ವವನ್ನೇ ಬದಿಗೆ ಸರಿಸುವ ಪ್ರಯಾಸ ನಡೆದಿದೆ. ಹಿಂಸೆಯ ಸಹಕಾರವಿಲ್ಲದೆ ಸುಳ್ಳು ಮಾನ್ಯಗೊಳ್ಳುವುದಿಲ್ಲ. ಸುಳ್ಳು ಬೆನ್ನಿಗಿಲ್ಲದೆ ಹಿಂಸೆಯೂ ಮಾನ್ಯಗೊಳ್ಳುವುದಿಲ್ಲ.

ಹಿಂಸೆ ಮತ್ತು ಸುಳ್ಳುಗಳ ಈ ರಾಜನೈತಿಕ ಸಹಕಾರದಲ್ಲಿ ಈಶಾನ್ಯ ಭಾರತದಲ್ಲಿ ಮತ್ತು ಕಾಶ್ಮೀರದಲ್ಲಿ ದೇಶ ರಕ್ಷಣೆಯ ಹೆಸರಿನಲ್ಲಿ ಒಂದು ‘Conflict Economy’ಯೇ ಸೃಷ್ಟಿಯಾಗಿದೆಯೆಂದು ಮತ್ತು ಅದು ದಂಗೆಯ ವಾತಾವರಣವಿಲ್ಲದಿದ್ದರೂ ಸರ್ಕಾರಿ ಪ್ರತಿದಂಗೆ ತಂತ್ರಗಳ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಪಟ್ಟಭದ್ರ ಹಿತಾಸಕ್ತಿಗಳನ್ನು ಸೇನೆಯಲ್ಲೂ ಆ ಸಮಾಜದಲ್ಲೂ ಸೃಷ್ಟಿಸಿದೆ ಎಂದು ಈ ಪುಸ್ತಕದಲ್ಲಿ ತಪ್ಪೊಪ್ಪಿಗೆ ಮಾಡಿಕೊಂಡಿರುವ ಅಧಿಕಾರಿ ಸ್ಪಷ್ಟಪಡಿಸುತ್ತಾರೆ.

ಪ್ರತಿದಂಗೆಗಾಗಿ ಕಾರ್ಯ ನಿಯೋಜನೆಗೊಳ್ಳುವ ಸೇನಾಪಡೆಗಳಿಗೆ ಮಿಲಿಟರಿ ಇಂಟೆಲಿಜೆನ್ಸ್ ವಿಭಾಗವು ತನ್ನ ಬಳಿ ಇರುವ ಆಯಾ ವಲಯದ ದಂಗೆಕೋರರ ಅಂದಾಜು ಸಂಖ್ಯೆ ಮತ್ತು ಪಟ್ಟಿಯನ್ನು ನೀಡುತ್ತದೆ.

ಹಾಗೂ ಅವರ ಕಾರ್ಯಕ್ಷಮತೆಯನ್ನು ಎಷ್ಟು ಮಿಲಿಟೆಂಟ್‌ಗಳನ್ನು ಕೊಲ್ಲಲಾಗಿದೆ, ಶರಣಾಗಿಸಲಾಗಿದೆ ಎನ್ನುವ ಸಂಖ್ಯೆಗಳ ಮೂಲಕ ಅಳೆಯಲಾಗುತ್ತದೆ. ಮತ್ತು ಪ್ರತಿ ಮಿಲಿಟೆಂಟ್ ಒಬ್ಬನ ಕೊಲೆಗೆ 5, ಶರಣಾಗತಿಗೆ 3 ಎಂಬಂತೆ ಅಂಕಗಳನ್ನು ನೀಡಲಾಗುತ್ತದೆ.

ಒಬ್ಬ ಅಧಿಕಾರಿಗೆ ಮತ್ತು ಒಂದು ತುಕಡಿಗೆ ಪ್ರಶಸ್ತಿ, ಬಡ್ತಿ ಇತ್ಯಾದಿಗಳು ಸಿಕ್ಕಬೇಕೆಂದರೆ ಅಂದಾಜು 300 ಅಂಕಗಳು ಬೇಕಾಗುತ್ತವೆ ಎಂದು ಈ ಅನಾಮಧೇಯ ಅಧಿಕಾರಿ ಲೇಖಕರಿಗೆ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷಕ್ಕೊಮ್ಮೆ ತುಕಡಿ ಮತ್ತು ಅಧಿಕಾರಿಗಳ ವಾರ್ಷಿಕ ಗುಪ್ತ ವರದಿ (ACR) ನೀಡಲಾಗುತ್ತದೆ.

ಅದಕ್ಕೆ ಮುಂಚಿನ ದಿನಗಳಲ್ಲೇ ಈ ವಲಯದಲ್ಲಿ ಎನ್‌ಕೌಂಟರ್‌ಗಳ ಸಂಖ್ಯೆಯೂ ಹೆಚ್ಚುತ್ತದೆ. ಅಮಾಯಕರನ್ನು ಮಿಲಿಟೆಂಟ್‌ಗಳೆಂದು ತೋರಿಸಿ ಬಡ್ತಿ–ವಿದೇಶಿ ನಿಯೋಜನೆಗಳನ್ನು ಪಡೆಯಲಾಗುತ್ತದೆ. ಆದ್ದರಿಂದಲೇ ಸ್ವಾರ್ಥಕ್ಕೆ ಅಮಾಯಕರನ್ನು ಕೊಲ್ಲಲೊಪ್ಪದ ಅಧಿಕಾರಿಗಳ ಮೇಲೆ ಮಾನಸಿಕ ಮತ್ತು ಔದ್ಯೋಗಿಕ ಒತ್ತಡಗಳನ್ನು ಸೃಷ್ಟಿಯಾಗುತ್ತವೆ.

ಬೇಕೆಂದಾಗ ಎನ್‌ಕೌಂಟರ್‌ಗೆ ಒಳಗಾಗಲು ಮಾನವ ಮಿಕಗಳನ್ನು ಸರಬರಾಜು ಮಾಡುವ ದೊಡ್ಡ ಮಾಫಿಯಾವನ್ನೇ ಸೇನಾಪಡೆಗಳು ಪೋಷಿಸುತ್ತಿವೆ ಎಂದು ಈ ಅಧಿಕಾರಿ ಪುರಾವೆಗಳೊಂದಿಗೆ ಹೇಳುತ್ತಾರೆ. ಈಶಾನ್ಯ ಭಾರತದಲ್ಲಿ ಹೀಗೆ ಮಾನವ ಮಿಕಗಳಾಗಿ ದೊಡ್ಡ ರೀತಿಯಲ್ಲಿ ಬಳಕೆಯಾಗುತ್ತಿರುವವರು ಬಡತನದ ಕಾರಣಕ್ಕೆ ಬದುಕು ಅರಸುತ್ತಾ ಭಾರತಕ್ಕೆ ಕಾನೂನುಬಾಹಿರವಾಗಿ ವಲಸೆ ಬರುತ್ತಿರುವ ಬಾಂಗ್ಲಾದೇಶದ ಮುಸ್ಲಿಂ ವಲಸೆಕೋರರು.

ಅವರನ್ನು ಮೋಸದಿಂದ ಈ ಜಾಲಕ್ಕೆ ಎಳೆತರುವ AK ಎಂಬ ಮುಸ್ಲಿಂ ಕಾಂಟ್ರಾಕ್ಟರ್‌ನ ಕಾರ್ಯಾಚರಣೆ ಮತ್ತು ಆತನಿಗೂ ಸೇನಾಧಿಕಾರಿಗಳಿಗೂ ಇರುವ ನೇರ ಸಂಬಂಧಗಳ ರೀತಿ ಓದುಗರನ್ನು ದಿಗ್ಭ್ರಾಂತಗೊಳಿಸುತ್ತದೆ. ಮಾನವ ಹಕ್ಕುಗಳ ಕಾರ್ಯಕರ್ತರ ಮತ್ತು ಪತ್ರಕರ್ತರ ಉಪಟಳ ಹೆಚ್ಚಾದ ಮೇಲೆ ಈ ಭಾವೀ ಮಿಲಿಟೆಂಟ್ ಮಿಕಗಳು ಕೊಲ್ಲುವ ಪ್ರದೇಶಕ್ಕೆ ಅಪರಿಚಿತರಾದಷ್ಟೂ ಒಳ್ಳೆಯದೆಂಬ ಪದ್ಧತಿಯನ್ನು ಅನುಸರಿಸಲಾಗುತ್ತದೆ.

ಹೀಗಾಗಿ ಬಾಂಗ್ಲಾದೇಶದಿಂದ ಕಾನೂನುಬಾಹಿರವಾಗಿ ವಲಸೆ ಬಂದ 12ರಿಂದ 24 ಗಂಟೆಯೊಳಗೆ ಈ ಅಮಾಯಕರು ಎನ್‌ಕೌಂಟರ್‌ಗೆ ಬಲಿಯಾಗುತ್ತಾರೆ. ಹೀಗಾಗಿಯೇ ಸರಿಯಾದ ವಿಳಾಸ ಮತ್ತು ಪುರಾವೆಗಳಿಲ್ಲದ ಯಾವುದೇ ವ್ಯಕ್ತಿ ಈ ಪ್ರದೇಶದಲ್ಲಿ ಎನ್‌ಕೌಂಟರ್‌ ಆಗಲು ಸೂಕ್ತ ಅಭ್ಯರ್ಥಿಯೆಂದು ಲೇಖಕರು ಹೇಳುತ್ತಾರೆ.
 
ಸೇನೆಯ ಪರಿಭಾಷೆಯಲ್ಲಿ ಮೂರು ಬಗೆಯ ಎನ್‌ಕೌಂಟರ್‌ಗಳಿವೆ. ಒಂದು ನಿಜವಾದ ಎನ್‌ಕೌಂಟರ್. ಇದರಲ್ಲಿ ಬಂದೂಕುಧಾರಿ ಸೇನಾಪಡೆಗಳಿಗೂ ಮತ್ತು ಬಂದೂಕುಧಾರಿ ಮಿಲಿಟೆಂಟ್‌ಗಳಿಗೂ ನಿಜವಾದ ಮುಖಾಮುಖಿ ಸಂಭವಿಸುತ್ತದೆ. ಇಂಥಾ ಮುಖಾಬಿಲೆಯಲ್ಲಿ ಸಾಮಾನ್ಯವಾಗಿ ಎರಡು ಕಡೆಯಲ್ಲೂ ಸಾವು–ನೋವುಗಳಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಎರಡು ಕಡೆಯಲ್ಲಿ ಸಾವು–ನೋವುಗಳಾದರೆ ಮಾತ್ರ ಅದು ನಿಜವಾದ ಎನ್‌ಕೌಂಟರ್.

ಎರಡನೆಯದು ಸುಳ್ಳು ಎನ್‌ಕೌಂಟರ್. ಇದರಲ್ಲಿ ಸಾಯುವವನು ನಿಜವಾದ ಮಿಲಿಟೆಂಟೇ. ಆದರೆ ಆತ/ಆಕೆ ಸೆರೆ ಸಿಕ್ಕಾಗ ನಿರಾಯುಧರಾಗಿರುತ್ತಾರೆ ಅಥವಾ ಶರಣಾಗಿರುತ್ತಾರೆ. ಅಗತ್ಯ ಬಿದ್ದಾಗ ಅವರನ್ನು ಸಾಯಿಸಿ ಅವರ ಬಳಿ ಬಂದೂಕು ಇರಿಸಿ, ನಿಜ ಎನ್‌ಕೌಂಟರ್ ಎಂದು ಹೇಳಲಾಗುತ್ತದೆ.

ಮೂರನೆಯದು ಅತ್ಯಂತ ಬರ್ಬರವಾದದ್ದು. ತಮ್ಮ ತುಕಡಿಯ ಟಾರ್ಗೆಟ್ ಅನ್ನು ಪೂರ್ಣಗೊಳಿಸಲು ಅಮಾಯಕರನ್ನು ಹಿಡಿದು ಚಿತ್ರಹಿಂಸೆ ಮಾಡಿ ಕೊಂದುಹಾಕುವುದು. ಇದನ್ನು ‘ಸ್ಟೇಜ್ಡ್ ಎನ್‌ಕೌಂಟರ್’ ಎಂದು ಹೇಳಲಾಗುತ್ತದೆ. ಇಂದು ಭಾರತದ ‘Conflict Zone’ಗಳಲ್ಲಿ ನಡೆಯುತ್ತಿರುವ ಶೇ 90ರಷ್ಟು ಎನ್‌ಕೌಂಟರ್‌ಗಳು ಈ ರೀತಿಯ ಸ್ಟೇಜ್ಡ್‌ ಎನ್‌ಕೌಂಟರ್ ಎಂದು ಅಧಿಕಾರಿ ಒಪ್ಪಿಕೊಳ್ಳುತ್ತಾರೆ.

2012ರಲ್ಲಿ ಮಣಿಪುರದ ನಾಗರಿಕ ಸಂಸ್ಥೆಯೊಂದು ರಾಜ್ಯದಲ್ಲಿ ನಡೆದ 1528 ಸುಳ್ಳು ಎನ್‌ಕೌಂಟರ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಹಾಕುತ್ತದೆ. ಅದರಂತೆ ಭಾರತದ ಉನ್ನತ ನ್ಯಾಯಪೀಠ ಈ ಪ್ರಕರಣಗಳನ್ನು ಪರಿಶೀಲಿಸಿ ವರದಿ ಮಾಡಲು ಮಾಜಿ ನ್ಯಾಯಾಧೀಶರಾದ ಕರ್ನಾಟಕದ ಸಂತೋಷ್ ಹೆಗಡೆಯವರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ನೇಮಕ ಮಾಡುತ್ತದೆ.

ಆ ಸಮಿತಿ ಮೊದಲ ಆರು ಪ್ರಕರಣಗಳನ್ನು ಪರಿಶೀಲಿಸಿ, ಆರೂ ಪ್ರಕರಣಗಳೂ ಸುಳ್ಳು ಎನ್‌ಕೌಂಟರ್ ಎಂದು ವರದಿ ಕೊಟ್ಟಿರುವುದನ್ನು ಲೇಖಕರು ಓದುಗರ ಗಮನಕ್ಕೆ ತರುತ್ತಾರೆ. ಅವುಗಳ ವಿವರವನ್ನು ನೋಡಿದರೆ ಅವರೆಲ್ಲರೂ ದುಡಿದು ಬದುಕುತ್ತಿದ್ದ 12–70 ವಯಸ್ಸಿನ ಕೂಲಿಗಳು, ಯುವಕ/ಯುವತಿಯರು, ಗೃಹಸ್ಥರು, ಗೃಹಿಣಿಯರು, ವಕೀಲರು, ಉಪಾಧ್ಯಾಯರುಗಳಂಥ ಅಮಾಯಕರು.

ಒಂದು ಪ್ರಕರಣದಲ್ಲಂತೂ ಹಲವಾರು ವರ್ಷಗಳಿಂದ ರೈಲ್ವೇ ಸ್ಟೇಷನ್ನಿನನಲ್ಲಿ ಕುಷ್ಠರೋಗದಿಂದ ನರಳುತ್ತಾ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನೊಬ್ಬನನ್ನು ಅಪಹರಿಸಿ ಉತ್ತರ ಅಸ್ಸಾಮಿನ ಹಳ್ಳಿಯೊಂದರಲ್ಲಿ ಬೋಡೋ ಉಗ್ರಗಾಮಿಯೆಂದು ಕೊಂದು ಬಿಸಾಕಿದ ಹೃದಯವಿದ್ರಾವಕ ಸಂಗತಿಯನ್ನೂ ದಾಖಲಿಸಲಾಗಿದೆ.

ಭಾರತದ ಸಾಮಾನ್ಯ ನಾಗರಿಕರು ಕೊಲೆ, ದರೋಡೆಗಳನ್ನು ಮಾಡಿದರೆ ಭಾರತದ ಅಪರಾಧ ಸಂಹಿತೆಯು 7 ವರ್ಷ ಕಾರಾಗೃಹ ಶಿಕ್ಷೆಯಿಂದ ಮರಣದಂಡನೆಯವರೆಗೆ ಶಿಕ್ಷೆ ನೀಡುತ್ತದೆ. ಆದರೆ ಘೋರ ಅಪರಾಧಗಳನ್ನು ಎಸಗುವ ಸೇನಾಪಡೆಗಳಿಗೆ ಈಶಾನ್ಯ ಭಾರತದಲ್ಲಿ ಮತ್ತು ಕಾಶ್ಮೀರದಲ್ಲಿ ಶೇ 95 ಪ್ರಕರಣಗಳಲ್ಲಿ ಯಾವ ಶಿಕ್ಷೆಯೂ ಆಗುವುದಿಲ್ಲ.

ಏಕೆಂದರೆ ಸೇನಾಪಡೆಗಳಿಗೆ ಈ ವಲಯದಲ್ಲಿ Armed Forces Special Powers Act (APSPA) ರಕ್ಷಣೆಯಿದೆ. ಈಶಾನ್ಯ ಭಾರತದಲ್ಲಿ ಅದು 1958ರಿಂದ ಜಾರಿಯಲ್ಲಿದ್ದರೆ, ಅದನ್ನು ಕಳೆದೆರಡು ದಶಕಗಳಿಂದ ಕಾಶ್ಮೀರಕ್ಕೂ ವಿಸ್ತರಿಸಲಾಗಿದೆ.

ಈ ಕಥನ ಸೇನೆಯ ವಿರೋಧಿಯೆಂಬಂತೆ ಬಿಂಬಿತಗೊಳ್ಳುವುದೇ? ಈ ಬರವಣಿಗೆ ದೇಶದ್ರೋಹಿ ಆಗಿಬಿಡುವುದಿಲ್ಲವೇ ಎಂಬ ಪ್ರಶ್ನೆಗಳನ್ನು ಪುಸ್ತಕ ಬರೆಯುವ ಮುನ್ನ ಕಿಶಾಲಯ್ ಭಟ್ಟಾಚಾರ್ಜಿ ಎದುರಿಸಿದ್ದಾರೆ.

ಆದರೆ ತಮ್ಮ ಎದುರು ನಿವೇದನೆ ಮಾಡಿಕೊಂಡ ಸೇನಾಧಿಕಾರಿಗಳು, ಉನ್ನತ ಸೇನಾಧಿಪತಿಗಳು, ಸರ್ಕಾರದ ಅಧಿಕಾರಿಗಳು ಹಲವರು ಈ ಪುಸ್ತಕ ಹೊರಬರಲೇಬೇಕು ಮತ್ತು ಸೇನೆಯಲ್ಲಿರುವ ಈ ಹೊಲಸು ಸರಿಯಾಗಲೇಬೇಕೆಂದು ಒತ್ತಡ ಹಾಕಿದ್ದರಿಂದಲೇ ಈ ಪುಸ್ತಕ ಬರೆಯುವ ಸಾಹಸ ಮಾಡಿದೆನೆಂದು ಲೇಖಕರು ಹೇಳುತ್ತಾರೆ.

ಎರಡನೇ ಮಹಾಯುದ್ಧದಲ್ಲಿ ಅಣುಬಾಂಬ್ ಹಾಕಿದ ಅಮೆರಿಕದ ಪೈಲಟ್ ಓಪನ್ ಹೈಮರ್ ತಾನು ಮಾಡಿದ ವಿನಾಶದಿಂದ ಅತ್ಯಂತ ದುಃಖಿತನಾಗಿರುವಾಗಲೇ ಅಧ್ಯಕ್ಷ ಟ್ರೂಮನ್ ಅವರನ್ನು ಭೇಟಿಯಾಗಿ – ‘Mr. President, I have blood on my hands’ ಎಂದು ಉದ್ಗರಿಸುತ್ತಾನೆ. ಈ ಪುಸ್ತಕ ಬರೆಯುವಾಗ ತನ್ನ ಮನಸ್ಸಿನಲ್ಲಿ ಇದೇ ಚಿತ್ರ ತಲೆಯಲ್ಲಿ ಓಡುತ್ತಿತ್ತು ಎಂದು ಲೇಖಕರು ಹೇಳುತ್ತಾರೆ.

ದೇಶಪ್ರೇಮವೆಂದರೆ ಅವಿಮರ್ಶಾತ್ಮಕವಾಗಿ ಸರ್ಕಾರವನ್ನು ಮತ್ತು ಪ್ರಭುತ್ವವನ್ನು ಒಪ್ಪಿಕೊಳ್ಳುವುದು ಎಂಬ ವಾದ ಅಬ್ಬರದಲ್ಲಿರುವ ಸಂದರ್ಭದಲ್ಲಿ ಸೇನೆಯೂ ಸಹ ಪ್ರಭುತ್ವದ ಒಂದು ಅಂಗ ಮತ್ತು ಅದರ ಅಪರಾಧಗಳನ್ನು ಸಹಿಸಿಕೊಳ್ಳುವುದೇ ನಿಜವಾದ ದೇಶದ್ರೋಹ ಎಂಬ ಗ್ರಹಿಕೆಯನ್ನು ಈ ಪುಸ್ತಕದ ಓದು ಕೊಡುತ್ತದೆ.

ಹೀಗಾಗಿ ಹಿಂಸೆಯಚಕ್ರ ಮುರಿಯಬೇಕೆಂದರೆ ನಾಗರಿಕ ಸಮಾಜ ಮೌನ ಮುರಿಯಬೇಕು. ಹಿಂಸಾಚಾರದ ವಿರುದ್ಧ ಸುಳ್ಳುಗಳ ವಿರುದ್ಧ ಧ್ವನಿ ಎತ್ತಬೇಕು. ಅದೇ ನಿಜವಾದ ದೇಶಪ್ರೇಮ. ಇದೇ ಈ ಪುಸ್ತಕದ ಸಾರಾಂಶ–ಸಂದೇಶ.
–ಶಿವಸುಂದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT