ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಸೇರ್ಪಡೆಯೇ ಹೆಗ್ಗುರಿ...

ಕಬಡ್ಡಿ
Last Updated 18 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ತಳಮಟ್ಟದಲ್ಲಿದ್ದ ಕಬಡ್ಡಿಯನ್ನು ಈಗ ವಿಶ್ವವೇ ನೋಡುವಂತೆ ಮಾಡಿದ್ದೇವೆ. ಜಾಗತಿಕ ಮನ್ನಣೆ ಹೊಂದಿರುವ ಈ ಕ್ರೀಡೆಯನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡುವ ಗುರಿ ನನ್ನದು. 2024ರ ವೇಳೆ ಗಾದರೂ ಕಬಡ್ಡಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಕೊಡಿಸಿ ನಂತರ ಕ್ರೀಡಾಡಳಿತದಿಂದ ವಿರಮಿಸುತ್ತೇನೆ’
ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ಸಂಸ್ಥಾಪಕ ಅಧ್ಯಕ್ಷ ಜನಾರ್ದನ ಸಿಂಗ್ ಗೆಹ್ಲೋಟ್‌ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತಿದು.

ಕ್ರೀಡಾಡಳಿತಗಾರನಾಗಿ ಹೆಸರು ಮಾಡಿರುವ ಗೆಹ್ಲೋಟ್‌ ಅವರು ಭಾರತ ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಅಧ್ಯಕ್ಷರಾಗಿ 28 ವರ್ಷ ಕೆಲಸ ಮಾಡಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ಮತ್ತೊಂದು ಕಬಡ್ಡಿ ವಿಶ್ವಕಪ್‌ಗೆ ಭಾರತ ಅಣಿಯಾಗುತ್ತಿದೆ. ಅಕ್ಟೋಬರ್‌ 7ರಿಂದ ಅಹಮದಾಬಾದ್‌ನಲ್ಲಿ ಟೂರ್ನಿ           ನಡೆಯಲಿದೆ.

ಭಾರತ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಅರ್ಜೆಂಟೀನಾ, ಇರಾನ್‌, ಥಾಯ್ಲೆಂಡ್‌, ಜಪಾನ್‌, ಅಮೆರಿಕ, ಪೋಲೆಂಡ್‌ ಮತ್ತು ಕೆನ್ಯಾ ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಈ ಮಹತ್ವದ ಟೂರ್ನಿಗಾಗಿ ಭಾರತ ಸಂಭಾವ್ಯ ತಂಡದ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್‌ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

*ಮತ್ತೊಂದು ವಿಶ್ವಕಪ್‌ ಸಮೀಪಿಸುತ್ತಿದೆ. ಸಂಘಟನೆಯ ತಯಾರಿ ಹೇಗೆ ನಡೆಯುತ್ತಿದೆ?
ಅಹಮದಾಬಾದ್‌ನಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಕಬಡ್ಡಿ ಆಯೋಜಿಸಿದ್ದೇವೆ. ನಮ್ಮ ತಂಡವೂ ಅಭ್ಯಾಸ ಆರಂಭಿಸಿದೆ. ಈ ಬಾರಿಯ ಟೂರ್ನಿಯನ್ನು ಆದಷ್ಟು ಜನಸ್ನೇಹಿಯಾಗಿ ರೂಪಿಸುತ್ತಿದ್ದೇವೆ. ಪಂದ್ಯ ನೋಡಲು ಜನರಿಗೆ ಉತ್ತಮ ಆಸನ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದಕ್ಕೆ ಒತ್ತು ಕೊಟ್ಟಿದ್ದೇವೆ.
*2004ರಿಂದ ಅನೇಕ ಸಲ ಪಂಜಾಬ್‌ನಲ್ಲಿಯೇ ಕಬಡ್ಡಿ ಟೂರ್ನಿ ಆಯೋಜಿಸಲು ಕಾರಣವೇನು. ಬೇರೆ ಕಡೆಯೂ ಟೂರ್ನಿ ನಡೆಸಬಹುದಿತ್ತಲ್ಲವೇ?
ಉತ್ತರ ಭಾರತದಲ್ಲಿ ಕಬಡ್ಡಿ ಬಗ್ಗೆ ಸಾಕಷ್ಟು ಒಲವಿದೆ. ಪಂದ್ಯ ವೀಕ್ಷಿಸಲು ಹೆಚ್ಚು ಜನ ಬರುತ್ತಾರೆ. ಆದ್ದರಿಂದ ಪಂಜಾಬ್‌ ಮತ್ತು ಹರಿಯಾಣದಲ್ಲಿಯೇ ಹೆಚ್ಚು ಸಲ ಕಬಡ್ಡಿ ನಡೆಸಿದ್ದೇವೆ. ಪ್ರತಿ ಬಾರಿ ಟೂರ್ನಿ ಆಯೋಜನೆಯಾದಾಗಲೂ ಈ ರೀತಿಯ ದೂರು ಕೇಳಿ ಬರುತ್ತದೆ. ಆದ್ದರಿಂದ ಈ ಸಲ ಗುಜರಾತ್‌ನಲ್ಲಿ  ವಿಶ್ವಕಪ್‌ ಆಯೋಜಿಸಿದ್ದೇವೆ.

*ಪ್ರೊ ಕಬಡ್ಡಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಆದ ಪರಿಣಾಮಗಳೇನು?
ಭಾರತ, ಪಾಕಿಸ್ತಾನ, ಇರಾನ್‌ ಮತ್ತು ಬಾಂಗ್ಲಾದೇಶ ತಂಡಗಳು ಮೊದಲಿನಿಂದಲೂ ಕಬಡ್ಡಿ ಆಡುವಲ್ಲಿ ಮತ್ತು ಟೂರ್ನಿಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿ ಪ್ರೊಕಬಡ್ಡಿ ನಡೆದಾಗ ಬೇರೆ ದೇಶಗಳಲ್ಲಿಯೂ ದಾಖಲೆಯ ಸಂಖ್ಯೆಯಲ್ಲಿ ಜನ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ದಕ್ಷಿಣ ಕೊರಿಯಾ ಪ್ರೊ ಲೀಗ್ ಮಾದರಿಯಲ್ಲಿಯೇ ಕಬಡ್ಡಿ ಟೂರ್ನಿ ನಡೆಸಲು ಮುಂದಾಗಿದೆ. ಪ್ರೊ ಕಬಡ್ಡಿ ಯಲ್ಲಿ ವಿದೇಶಿ ಆಟಗಾರರೂ ಪಾಲ್ಗೊಂಡಿರುವ ಕಾರಣ ಆ ಆಟಗಾರರ ದೇಶಗಳಲ್ಲಿಯೂ ಕಬಡ್ಡಿ ವೇಗವಾಗಿ ಬೆಳೆಯುತ್ತಿದೆ.

*ಪ್ರೊ ಕಬಡ್ಡಿಯಿಂದ ಕ್ರೀಡೆಯ ಖ್ಯಾತಿ ಹೆಚ್ಚಾಯಿತು. ಆದರೆ ಮೂಲ ಸೊಬಗು ಹಾಳಾಯಿತು ಎನ್ನುವ ದೂರು ಇದೆಯಲ್ಲಾ?
ಜನರ ನಿರೀಕ್ಷೆಗಳಿಗೆ ತಕ್ಕಂತೆ ನಾವೂ ಬದಲಾಗಬೇಕಲ್ಲವೇ. ಮೊದಲೆಲ್ಲಾ ಟೆಸ್ಟ್ ಕ್ರಿಕೆಟ್ ಪಂದ್ಯವೆಂದರೆ ಹೆಚ್ಚು ಜನ ನೋಡುತ್ತಿದ್ದರು. ಐಪಿಎಲ್‌, ಚಾಂಪಿಯನ್ಸ್‌ ಲೀಗ್‌ನಂಥ ಟ್ವೆಂಟಿ–20 ಮಾದರಿಗಳು ಬಂದ ಬಳಿಕ ಟೆಸ್ಟ್ ನೋಡುವವರ ಸಂಖ್ಯೆ ಕಡಿಮೆಯಾಯಿತು. ಶತಮಾನದ ಇತಿಹಾಸ ವಿರುವ ಟೆಸ್ಟ್‌ ಪರಿಸ್ಥಿತಿ ಈಗೇನಾಗಿದೆ ನೋಡಿ. ಅದೇ ಐಪಿಎಲ್‌ಗೆ ಇರುವ ಖ್ಯಾತಿ ಎಷ್ಟೆಂಬುದು ನಿಮಗೂ ಗೊತ್ತಲ್ಲವೇ.

ಪ್ರೊ ಕಬಡ್ಡಿ ಬಂದ ಬಳಿಕ ಈ ಕ್ರೀಡೆಯ ಸೊಗಸು ಹಾಳಾಗಿದೆ ಎಂದು ಸಾಕಷ್ಟು ಜನ ನನ್ನ ಮುಂದೆಯೇ ದೂರು ಹೇಳಿದ್ದಾರೆ. ದೇಶಿ ಕ್ರೀಡೆಗೆ ಹೈಟೆಕ್ ಸ್ಪರ್ಶ ಕೊಡದೇ ಹೋಗಿದ್ದರೆ ಈ ಕ್ರೀಡೆ ಯನ್ನು ಯಾರು ತಾನೆ ನೋಡುತ್ತಿದ್ದರು. ಹಳ್ಳಿಗಳಲ್ಲಿ ಕಬಡ್ಡಿ ಟೂರ್ನಿಗಳನ್ನು ಆಯೋಜಿಸಿದಾಗ ಗೆದ್ದವರಿಗೆ ಕೊಡಲು ಹಣವಿಲ್ಲದಂತ ಪರಿಸ್ಥಿತಿಯನ್ನೂ ನಾನು ನೋಡಿದ್ದೇನೆ. ಆದ್ದರಿಂದ ಈ ಕ್ರೀಡೆಯತ್ತ ಯಾರೂ ಆಸಕ್ತಿ ವಹಿಸುತ್ತಿರಲಿಲ್ಲ. ಅದೇ ಈಗ ಪ್ರೊಕಬಡ್ಡಿ ಟೂರ್ನಿಯಲ್ಲಿ ಆಡಲು ಸಾಕಷ್ಟು ಆಟಗಾರರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

*ಹಾಗಾದರೆ ಪ್ರೊ ಕಬಡ್ಡಿ ಲೀಗ್‌ನಿಂದಾಗಿ ಆಟಗಾರರಿಗೆ ಆದ ಲಾಭವೇನು?
ಕಬಡ್ಡಿ ಆಡುತ್ತಿದ್ದರೆ ಮೊದಲೆಲ್ಲಾ ಬ್ಯಾಂಕುಗಳು, ಖಾಸಗಿ ರಂಗದ ಕಂಪೆನಿಗಳು ಕರೆದು ನೌಕರಿ ಕೊಡುತ್ತಿದ್ದವು. ಇದರಿಂದ ಆಟಗಾರರ ಜೀವನಕ್ಕೂ ಭದ್ರತೆ ಸಿಗುತ್ತಿತ್ತು. ಇತ್ತೀಚಿನ ಹತ್ತಾರು ವರ್ಷಗಳಿಂದ ಕಂಪೆನಿಗಳು ಕ್ರೀಡಾಪಟುಗಳ ನೇಮಕವನ್ನೇ ಕಡಿಮೆ ಮಾಡಿವೆ. ಆದ್ದರಿಂದ ಯುವಕರು ಕ್ರೀಡಾಪಟು ವಾಗಲು ಹಿಂಜರಿಯುತ್ತಿದ್ದರು. ಅದೇ ಪ್ರೊ ಕಬಡ್ಡಿ ಯಿಂದ ಆಟಗಾರರಿಗೆ ಹಣ ಮತ್ತು ಕೀರ್ತಿ ಸಿಕ್ಕಿದೆಯಲ್ಲವೇ.

*ಸತತವಾಗಿ ಟೂರ್ನಿಗಳು ನಡೆದರೆ ಈ ಕ್ರೀಡೆ ಮೊದಲಿನ ಪ್ರಾಮುಖ್ಯತೆ ಉಳಿಸಿಕೊಳ್ಳಲು ಸಾಧ್ಯವೇ?
ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ಕೆಲ ಪ್ರಮುಖ ಟೂರ್ನಿಗಳನ್ನು ಮಾತ್ರ ಸಂಘಟಿಸುತ್ತದೆ. ನಡೆಯುವ ಎಲ್ಲಾ ಕಬಡ್ಡಿ ಟೂರ್ನಿಗಳು ಅಧಿಕೃತವಲ್ಲ. ಆ ರೀತಿಯ ಯಾವ ಟೂರ್ನಿಗಳು ಇದುವರೆಗೂ ನಡೆದಿಲ್ಲ.

*2014ರಲ್ಲಿ ನಡೆದ ಪಂಜಾಬಿ ಸರ್ಕಲ್‌ ಕಬಡ್ಡಿ ಟೂರ್ನಿ ಫೆಡರೇಷನ್‌ನ ಪರವಾನಗಿ ಪಡೆಯದೇ ನಡೆಸಲು ಹೇಗೆ ಸಾಧ್ಯ?
ಪಂಜಾಬ್‌ನಲ್ಲಿ ಸಾಂಪ್ರದಾಯಿಕವಾಗಿ ಸರ್ಕಲ್ ಕಬಡ್ಡಿ ನಡೆಯುತ್ತದೆ. ಕಬಡ್ಡಿ ಆಡುವ ರಾಷ್ಟ್ರಗಳನ್ನು ಆಹ್ವಾನಿಸಿ ಅಲ್ಲಿನ ಸರ್ಕಾರವೇ ಟೂರ್ನಿ ಆಯೋಜಿಸುತ್ತದೆ. ಇದಕ್ಕೆ ಫೆಡರೇಷನ್‌ ಅನುಮತಿ ಬೇಕಿಲ್ಲ.

*ಭಾರತ ಈ ಬಾರಿಯ ವಿಶ್ವಕಪ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯಿದೆಯೇ?
ವಿಶ್ವಕಪ್‌ ಟೂರ್ನಿಗಳ ಇತಿಹಾಸವನ್ನೊಮ್ಮೆ ನೋಡಿ. 2004ರಲ್ಲಿ ಟೂರ್ನಿ ಆರಂಭವಾದಾಗಿ ನಿಂದಲೂ ಭಾರತ ಒಮ್ಮೆಯೂ ಚಿನ್ನದ ಪದಕವನ್ನು ಬಿಟ್ಟುಕೊಟ್ಟಿಲ್ಲ. ಏಷ್ಯನ್‌ ಕ್ರೀಡಾಕೂಟದಲ್ಲಿಯೂ ಚಿನ್ನ ಜಯಿಸದೇ ಬಂದಿಲ್ಲ. ಬೇರೆ ರಾಷ್ಟ್ರಗಳಿಗೆ ಕಬಡ್ಡಿ ಪಾಠ ಹೇಳಿಕೊಟ್ಟ ದೇಶ ನಮ್ಮದು. ಆದ್ದರಿಂದ ಈ ಸಲವೂ ನಮ್ಮ ತಂಡವೇ ಪ್ರಶಸ್ತಿ ಜಯಿಸುವುದರಲ್ಲಿ ಅನುಮಾನವಿಲ್ಲ.

*ಈ ಬಾರಿ ಭಾರತದ ಅಂತಿಮ ತಂಡವನ್ನು ಆಯ್ಕೆ ಮಾಡುವುದು ಕಠಿಣವೆನಿಸುತ್ತದೆಯಲ್ಲವೇ?
ಹೌದು. ಪ್ರೊ ಕಬಡ್ಡಿ ಆರಂಭವಾಗುವ ಮೊದಲು ಯಾವುದೇ ಅಂತರರಾಷ್ಟ್ರೀಯ ಟೂರ್ನಿಗೂ ತಂಡವನ್ನು  ಸುಲಭವಾಗಿ ಆಯ್ಕೆ ಮಾಡಬಹುದಿತ್ತು. ಪ್ರೊ ಕಬಡ್ಡಿಯ ಬಳಿಕ ಆಟಗಾರರ ನಡುವೆ ಸ್ಪರ್ಧೆ ಹೆಚ್ಚಾಗಿದೆ. ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸುವುದೇ ಕಷ್ಟವಾಗಿದೆ. ಆದ್ದರಿಂದ ಉತ್ತಮ ಫಿಟ್‌ನೆಸ್‌ ಮತ್ತು ಸಾಮರ್ಥ್ಯ ಇದ್ದ ಆಟಗಾರರಿಗೆ ಮಾತ್ರ ಅವಕಾಶ ಲಭಿಸುತ್ತದೆ.

ಈ ಬಾರಿಯ ವಿಶ್ವಕಪ್ ಟೂರ್ನಿಗೆ ಭಾರತ ತಂಡ ತುಂಬಾ ಬಲಿಷ್ಠವಾಗಿರ ಲೇಬೇಕು. ಏಕೆಂದರೆ ಪ್ರೊ ಲೀಗ್‌ನಲ್ಲಿ ಆಡಿದ ವಿದೇಶಿ ಆಟಗಾರರು ತಮ್ಮ ದೇಶದ ತಂಡವನ್ನು ಪ್ರತಿನಿಧಿಸುತ್ತಾರೆ. ಅವರಿಗೆ ಭಾರತದ ಆಟಗಾರರ ಕೌಶಲ, ಸಾಮರ್ಥ್ಯ ಮತ್ತು ಯಾವ ವಿಭಾಗದಲ್ಲಿ ಬಲಿಷ್ಠ ಎನ್ನುವುದು  ಚೆನ್ನಾಗಿ ಗೊತ್ತಿದೆ. ಆದ್ದರಿಂದ ಟೂರ್ನಿಯೂ ರೋಚಕವಾಗಿರುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದೇವೆ.

*ಸುಮಾರು ಮೂರು ದಶಕಗಳ ಕಾಲ ಕಬಡ್ಡಿಗೆ ಸಂಬಂಧಿಸಿದ ಆಡಳಿತದಲ್ಲಿ ಕೆಲಸ ಮಾಡಿದ್ದೀರಿ. ಮುಂದೆ ನಿಮ್ಮ ಗುರಿ ಏನಿದೆ?
ದೇಶಿ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಇದು ಸಾಕಾರವಾಗಬೇಕಾದರೆ ಕಬಡ್ಡಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಸಿಗಬೇಕು. ಇದಕ್ಕಾಗಿ ಕಬಡ್ಡಿ ಆಡುವ ಬೇರೆ ರಾಷ್ಟ್ರಗಳ ಬೆಂಬಲವೂ ಬೇಕು. 

ಗೆಹ್ಲೋಟ್‌ ಬಗ್ಗೆ...
ಭಾರತ ಮತ್ತು ವಿಶ್ವದ ಕಬಡ್ಡಿಗೆ ಸಂಬಂಧಿಸಿದ ಆಡಳಿತದ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಜನಾರ್ದನ ಸಿಂಗ್ ಗೆಹ್ಲೋಟ್‌ ಅವರನ್ನು ಬಿಟ್ಟು ಮಾತನಾಡುವಂತೆಯೇ ಇಲ್ಲ.

ಭಾರತ ಕಬಡ್ಡಿ ಫೆಡರೇಷನ್‌ ಆರಂಭವಾಗಿ 43 ವರ್ಷಗಳು ಕಳೆದಿವೆ. ಇದರಲ್ಲಿ 28 ವರ್ಷ ಗೆಹ್ಲೋಟ್‌ ಅವರೇ  ಅಧ್ಯಕ್ಷರಾಗಿದ್ದಾರೆ. 2013ರ ವರೆಗೂ ಅವರೇ ಅಧ್ಯಕ್ಷರಾಗಿದ್ದರು. ಈಗ  ಫೆಡರೇಷನ್‌ನ ಆಜೀವ ಅಧ್ಯಕ್ಷರು.

ರಾಜಸ್ತಾನದ ಗೆಹ್ಲೋಟ್‌ ಅವರು 2004ರಲ್ಲಿ ಆರಂಭವಾದ  ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ನ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಏಷ್ಯನ್‌ ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಭಾರತ ಪಾಲ್ಗೊಳ್ಳಲು ಆರಂಭಿಸಿದ ವರ್ಷಗಳಲ್ಲಿ ಗೆಹ್ಲೋಟ್‌ ಆಟಗಾರರಾಗಿಯೂ ದೇಶವನ್ನು  ಪ್ರತಿನಿಧಿಸಿದ್ದಾರೆ. ಮಹಿಳಾ ವಿಶ್ವಕಪ್‌ ಟೂರ್ನಿಯನ್ನು ಹುಟ್ಟು ಹಾಕಿದ ಕೀರ್ತಿಯೂ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT