ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್ನರ್‌ಗಳ ಸರಣಿ...?

Last Updated 18 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಇರುವ ಇಬ್ಬರು ಕನ್ನಡಿಗರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಮತ್ತು ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರೇ ಆ ಇಬ್ಬರು ಕನ್ನಡಿಗರು. ಇವರಿಬ್ಬರೂ ತವರು ದೇಶದಲ್ಲಿ ಮೊದಲ ಸರಣಿ ಆಡಲಿದ್ದಾರೆ. ನ್ಯೂಜಿಲೆಂಡ್ ಎದುರಿನ ಸವಾಲು ಎದುರಿಸಲು ಸಿದ್ಧರಾಗಿದ್ದಾರೆ.

ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಶತಕ ದಾಖಲಿಸುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿರುವ ಕೆ.ಎಲ್. ರಾಹುಲ್ ಇದುವರೆಗೂ ಭಾರತದಲ್ಲಿ ನಡೆದ ಸರಣಿಯಲ್ಲಿ ಆಡಿಲ್ಲ. 2014ರಲ್ಲಿ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ಎರಡನೇ ಪಂದ್ಯ ದಲ್ಲಿಯೇ ಶತಕ ಬಾರಿಸಿದ್ದರು.

ಆದರೂ ಹೋದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮಹಾತ್ಮ ಗಾಂಧಿ–ನೆಲ್ಸನ್ ಮಂಡೇಲಾ ಸರಣಿಯಲ್ಲಿ ಅಂತಿಮ 11ರ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಬೆಂಗಳೂರಿನಲ್ಲಿಯೇ ನಡೆದಿದ್ದ ಪಂದ್ಯದಲ್ಲಿಯೂ ಅವರು 12ನೇ ಆಟಗಾರ ನಾಗಿದ್ದರು. ಆದರೆ, ಕಳೆದ 11 ತಿಂಗಳ ಅವಧಿಯಲ್ಲಿ ಅವರು ತಮ್ಮ ವರ್ಚಸ್ಸನ್ನು ಸಂಪೂರ್ಣ ಬದಲಾಯಿಸಿದ್ದಾರೆ.

ಐಪಿಎಲ್ ಟೂರ್ನಿ, ವೆಸ್ಟ್‌ ಇಂಡೀಸ್ ಪ್ರವಾಸ ಮತ್ತು ಅಮೆರಿಕದ ಟ್ವೆಂಟಿ–20 ಟೂರ್ನಿಗಳಲ್ಲಿ ರನ್‌ಗಳ ಹೊಳೆ ಹರಿಸಿ ತಂಡಕ್ಕೆ ಅನಿವಾರ್ಯವಾಗಿದ್ದಾರೆ. ಆದರೆ ಅವರು ಇಲ್ಲಿಯವರೆಗೂ ಆಡಿರುವ ಎಂಟು ಟೆಸ್ಟ್‌ಗಳು ವಿದೇಶಿ ನೆಲದಲ್ಲಿಯೇ ನಡೆದಿದ್ದವು. ಅವರ ಮೂರು ಟೆಸ್ಟ್‌ ಶತಕಗಳೂ ಕೂಡ ಹೊರದೇಶದಲ್ಲಿಯೇ (ಸಿಡ್ನಿ, ಕೊಲಂಬೊ, ಕಿಂಗಸ್ಟನ್) ದಾಖಲಾಗಿವೆ. ತವರು ನೆಲದಲ್ಲಿ ಅವರು ಶತಕ ಹೊಡೆಯುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ.

ಸೆಪ್ಟೆಂಬರ್ 22ರಂದು ಕಾನ್ಪುರದಲ್ಲಿ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಅವರನ್ನು ಬೆಂಚ್‌ನಲ್ಲಿ ಕೂರಿಸಲು ಯಾವುದೇ ಕಾರಣ ಆಯ್ಕೆದಾರರಿಗೆ ಸಿಗುವುದು ಕಠಿಣ. ಅವರ ಜೊತೆ ಇನಿಂಗ್ಸ್ ಆರಂಭಿಸಲು ಶಿಖರ್ ಧವನ್, ಮುರಳಿ ವಿಜಯ್ ಅಥವಾ ರೋಹಿತ್ ಶರ್ಮಾ ಅವರಲ್ಲಿ ಯಾರು ಅವಕಾಶ ಪಡೆಯುವರು ಎಂದು ಕಾದು ನೋಡಬೇಕು.

ವಿಶ್ವ ಶ್ರೇಷ್ಠ ಸ್ಪಿನ್ನರ್ ಆಗಿ ಹಲವಾರು ದಾಖಲೆ ಬರೆದಿರುವ ಅನಿಲ್ ಕುಂಬ್ಳೆ ಅವರು ಭಾರತ ತಂಡದ ಮುಖ್ಯ ಕೋಚ್ ಆದ ನಂತರ ತವರಿನಲ್ಲಿ ನಡೆಯುತ್ತಿರುವ ಮೊದಲ ಸರಣಿ ಇದು. ಅವರ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ಬಳಗವು ವಿಂಡೀಸ್‌ನಲ್ಲಿ ಸರಣಿ ಗೆದ್ದು ಬಂದಿದೆ. ಆದರೆ, ಪ್ರತಿಭಾವಂತ ಸ್ಪಿನ್ ಬೌಲರ್‌ಗಳೊಂದಿಗೆ ಬಂದಿಳಿದಿರುವ ಕಿವೀಸ್ ತಂಡದ ಎದುರು ತವರಿನಲ್ಲಿ ಸರಣಿ ಗೆಲ್ಲುವುದು ಕುಂಬ್ಳೆ ಅವರಿಗೆ ಮಹತ್ವದ ಸವಾಲು. ಅದಕ್ಕಾಗಿ ಅವರು ತಮ್ಮ ಅನುಭವವನ್ನು ಧಾರೆಯೆರೆಯಲು ಕಟಿಬದ್ಧರಾಗಿ ನಿಂತಿದ್ದಾರೆ.

ಸ್ಪಿನ್ ಕರಾಮತ್ತು
ಹೋದ ವರ್ಷ ಭಾರತದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಆರ್. ಅಶ್ವಿನ್, ಅಮಿತ್ ಮಿಶ್ರಾ ಮತ್ತು ರವೀಂದ್ರ ಜಡೇಜ ಅವರ ಸ್ಪಿನ್ ದಾಳಿಗೆ ಬಸವಳಿದಿತ್ತು. ಸ್ಫೋಟಕ ಬ್ಯಾಟ್ಸ್‌ಮನ್‌ ಎ.ಬಿ. ಡಿವಿಲಿಯರ್ಸ್, ಫಾಫ್ ಡು ಪ್ಲೆಸಿ, ಟೆಸ್ಟ್ ಪರಿಣತ ಹಾಶೀಮ್ ಆಮ್ಲಾ ಅವರಂತಹ ಘಟಾನುಘಟಿಗಳು ಪರದಾಡಿದ್ದರು. ಆದರೆ, ಸರಣಿಯ ಕೊನೆಯ ಪಂದ್ಯದಲ್ಲಿ ಆಮ್ಲಾ ಮತ್ತು ಎಬಿಡಿ ತಮ್ಮ ಎಚ್ಚರಿಕೆ ಆಟದ ಮೂಲಕ ಆತಿಥೇಯರನ್ನು ಸಾಕಷ್ಟು ಕಾಡಿದ್ದರು.

ಆ ಸರಣಿಯಲ್ಲಿ ಭಾರತ ಗೆದ್ದಿದ್ದರೂ ಎದುರಾಳಿಗಳ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿರಲಿಲ್ಲ. ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಉಳಿದವರಿಂದ ಹೇಳಿಕೊಳ್ಳುವಂತಹ ಸಾಧನೆ ಮೂಡಿಬಂದಿರಲಿಲ್ಲ. ಆದರೆ ಈಗ ಕೆ.ಎಲ್. ರಾಹುಲ್, ಪೂಜಾರ, ರಹಾನೆ, ಅಶ್ವಿನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರ ಪ್ರದರ್ಶನ ಇಲ್ಲಿಯೂ ಮುಂದುವರಿದರೆ ವಿರಾಟ್ ಮೇಲಿನ ಒತ್ತಡ ಕಡಿಮೆ ಯಾಗುವುದು ಖಚಿತ.

ಆದರೆ, ತಂಡಕ್ಕೆ ರೋಹಿತ್ ಶರ್ಮಾ ಮತ್ತು  ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಇಬ್ಬರೂ ಟೆಸ್ಟ್‌ ಮಾದರಿಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿಯೂ ಹೇಳಿಕೊಳ್ಳುವಂತಹ ಆಟವಾಡಿಲ್ಲ. ಆದರೆ, ಅನುಭವಿ ಆಟಗಾರ ಗೌತಮ್ ಗಂಭೀರ್, ಕರ್ನಾಟಕದ ಮಯಂಕ್ ಅಗರವಾಲ್,  ಭಾರತ ‘ಎ’ ತಂಡದಲ್ಲಿ ಆಡುತ್ತಿರುವ ಮನೀಷ್‌ ಪಾಂಡೆ, ಕರುಣ್ ನಾಯರ್ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಶರ್ಮಾ ಮತ್ತು ಧವನ್‌ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು  ಕೊನೆಯ ಅವಕಾಶ ನೀಡಲಾಗಿದೆ ಎಂದು ಮೂಲಗಳು ಹೇಳುತ್ತವೆ. ಈ ಅಂಶಗಳನ್ನು ಅಧ್ಯಯನ ಮಾಡಿಕೊಂಡು ಬಂದಿರುವ ‘ಬ್ಲ್ಯಾಕ್‌ಕ್ಯಾಪ್ಸ್‌’ ಬಳಗವು ಸುಲಭದ ತುತ್ತಾಗುವುದಿಲ್ಲ ಎಂಬ ಸಂದೇಶ ನೀಡಿದೆ. ಒಂದೆಡೆ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಿವೀಸ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಇನ್ನೊಂದೆಡೆ ತಮ್ಮ ಬಳಿಯೂ ಉತ್ತಮ ಸ್ಪಿನ್ನರ್‌ಗಳು ಇದ್ದಾರೆ ಎಂದು ಸವಾಲೊಡ್ಡಿದ್ದಾರೆ. ಮಾರ್ಕ್ ಕ್ರೇಗ್, ಸ್ಯಾಂಟನರ್, ಈಶ್ ಸೋಧಿ ಅವರ ಮೇಲೆ ಹೆಚ್ಚು ಭರವಸೆ ಇಟ್ಟಿದ್ದಾರೆ. ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಹೊಣೆ ಅವರ ಮೇಲಿದೆ.

ಫೀಲ್ಡಿಂಗ್ ವಿಷಯದಲ್ಲಿ ನ್ಯೂಜಿಲೆಂಡ್ ತಂಡವು ಭಾರತಕ್ಕಿಂತ ಚುರುಕಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಪ್ರವಾಸದಲ್ಲಿ ತನ್ನ ಕ್ಷೇತ್ರರಕ್ಷಣೆಯ ಚುರುಕುತನವನ್ನು ಮೆರೆದು ಬಂದಿದೆ.  ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಹೊರತುಪಡಿಸಿದರೆ ಉಳಿದವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸ್ವತಃ ಕೇನ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡುವ ಉತ್ಸಾಹದಲ್ಲಿದ್ದಾರೆ.

ಅದಕ್ಕಾಗಿಯೇ ಭಾರತಕ್ಕೆ ಬಂದಿಳಿದಾಗಿನಿಂದಲೂ ಸ್ಪಿನ್ ದಾಳಿಯ ಎದುರು ಬ್ಯಾಟಿಂಗ್ ಮಾಡುವ ಕೌಶಲಕ್ಕೆ ಸಾಣೆ ಹಿಡಿಯುತ್ತಿದ್ದಾರೆ. ನಿಧಾನಗತಿಯಲ್ಲಿ ಪುಟಿದೇಳುವ ಚೆಂಡು, ಚಕ್ಕನೆ ತಿರುವು ಪಡೆಯುವ ಪಿಚ್‌ಗಳಲ್ಲಿ ಮಂಡಿಯೂರಿ ಬ್ಯಾಟಿಂಗ್ ಮಾಡಲು ಸಾಕಷ್ಟು ಪರಿಣತಿ ಅವಶ್ಯಕ.

ಅದರಲ್ಲೂ ಉಷ್ಣಾಂಶ ಹೆಚ್ಚಿರುವ ಕಾನ್ಪುರ, ಕೋಲ್ಕತ್ತ ಮತ್ತು ಇಂದೋರ್‌ಗಳಲ್ಲಿ ದೈಹಿಕ ಕ್ಷಮತೆ ಕಾಪಾಡಿಕೊಂಡು ಆಡುವುದೂ ಒಂದು ಸವಾಲು. ಇದೇ ವರ್ಷದ ಫೆಬ್ರುವರಿಯಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿ ಆಡಿದ್ದ ಕಿವಿಸ್ ತಂಡಕ್ಕೆ ಇಲ್ಲಿಯ ವಾತಾವರಣದ ಪರಿಚಯ ಇದೆ. ಐಪಿಎಲ್‌ನಲ್ಲಿ ಆಡಿರುವ ಕೆಲವು ಆಟಗಾರರು ತಂಡದಲ್ಲಿರುವುದು ಕೂಡ ಪ್ಲಸ್‌ ಪಾಯಿಂಟ್.

ಆದರೆ, ಐದು ದಿನಗಳ ಟೆಸ್ಟ್‌ ಪಂದ್ಯವನ್ನು ಆಡುವುದು ವಿಭಿನ್ನ ಅನುಭವ. ಅದರಲ್ಲೂ ಭಾರತದಲ್ಲಿ ಟೆಸ್ಟ್‌ ನಡೆಯುವ ಪಿಚ್‌ ಗಳ ಗುಣಮಟ್ಟ ವಿದೇಶಿಯರ ಪಾಲಿಗೆ ಯಾವಾಗಲೂ ಸವಾಲು ಹಾಕುವಂತದ್ದು. ಕಿವೀಸ್ ತಂಡಕ್ಕೂ ಹಲವು ಬಾರಿ ಇಲ್ಲಿಂದ ಸೋಲಿನ ಕಹಿ ಹೊತ್ತು ನಡೆದಿದೆ. ಭಾರತದಲ್ಲಿ 31 ಟೆಸ್ಟ್ ಆಡಿರುವ ಕಿವೀಸ್ ಗೆದ್ದಿದ್ದು ಎರಡರಲ್ಲಿ ಮಾತ್ರ. 13 ಬಾರಿ ಸೋತಿದೆ. 16 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿರುವುದು ಗಮನಾರ್ಹ.
ಪಿಚ್‌ ವಿವಾದ

ಕಳೆದ ಬಾರಿಯ ಸರಣಿಯಲ್ಲಿ ಮೊಹಾಲಿ ಮತ್ತು ನಾಗಪುರದ ಪಿಚ್‌ಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಪಂದ್ಯದ ಮೊದಲ ದಿನದಿಂದಲೇ ದೂಳು ಹಾರಲು ಆರಂಭವಾಗಿದ್ದ ಅಂಗಳದಲ್ಲಿ ಆತಿಥೇಯ ಸ್ಪಿನ್ನರ್‌ಗಳು ಅಬ್ಬರಿಸಿದ್ದರು. ಇದು ಸಾಕಷ್ಟು ಟೀಕೆಗಳಿಗೂ ಕಾರಣವಾಗಿತ್ತು. ನಂತರ ಐಸಿಸಿಯು ನಾಗಪುರ ಕ್ರೀಡಾಂಗಣಕ್ಕೆ ಕಳಪೆ ಪಿಚ್ ಹಣೆಪಟ್ಟಿಯನ್ನೂ ಕಟ್ಟಿತ್ತು. ಇದರಿಂದಾಗಿ ಈ ಬಾರಿ ಪಿಚ್‌ ಸಿದ್ಧತೆಯನ್ನು ಎಚ್ಚರಿಕೆಯಿಂದ ಮಾಡುವ ಸಾಧ್ಯತೆ ಇದೆ.

ಸ್ಪಿನ್ನರ್‌ಗಳ ಸ್ವರ್ಗ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಇದರ ಸುಳಿವನ್ನು ಬಿಸಿಸಿಐ ನೀಡಿದೆ. ಹಸಿರು ಚಿಗುರು ಹೆಚ್ಚಿರುವ ಪಿಚ್‌ ಸಿದ್ಧ ಮಾಡಿಕೊಟ್ಟು ಪ್ರವಾಸಿ ತಂಡಕ್ಕೆ ಅಚ್ಚರಿ ಮೂಡಿಸಿತ್ತು.

’ನಮ್ಮ ದೇಶದ ಪಿಚ್‌ಗಳಂತೆಯೇ ಇದೆ. ವೇಗಿಗಳಿಗೆ ನೆರವು ನೀಡುವಂತೆ ಕಾಣುತ್ತಿದೆ’ ಎಂದು ಕಿವೀಸ್ ಬ್ಯಾಟ್ಸ್‌ಮನ್ ರಾಸ್ ಟೇಲರ್ ಹೇಳಿದ್ದರು. 
ಪ್ರವಾಸಿ ಬಳಗದ ಸ್ಪಿನ್ನರ್‌ಗಳಿಗೆ ಅಭ್ಯಾಸಕ್ಕೆ ಅವಕಾಶ ನೀಡದಿರುವ ತಂತ್ರಗಾರಿಕೆಯೂ ಬಿಸಿಸಿಐನ ನಡೆಯ ಹಿಂದೆ ಇರುವುದು ಗುಟ್ಟೇನಲ್ಲ.
ಆತ್ಮವಿಶ್ವಾಸದಲ್ಲಿ ನಾಯಕರು

ಎರಡೂ ತಂಡಗಳ ನಾಯಕರು  ವಿಶ್ವಾಸದ ಉತ್ತುಂಗದಲ್ಲಿದ್ದಾರೆ. ವಿಂಡೀಸ್ ಟೆಸ್ಟ್‌ ಸರಣಿಯಲ್ಲಿ ಗೆದ್ದಿರುವ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ಎದುರು ಜಯಿಸಿರುವ ಕೇನ್ ವಿಲಿಯಮ್ಸ್‌ ಈ ಸರಣಿಯಲ್ಲಿಯೂ ತಮ್ಮ ಮೇಲುಗೈ ಸಾಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

‘ಜಿಂಬಾಬ್ವೆ ಮತ್ತು ಆಫ್ರಿಕಾ ಸರಣಿಯ ವಿಷಯವೇ ಬೇರೆ. ಆದರೆ, ಭಾರತದಲ್ಲಿ ಟೆಸ್ಟ್ ಸರಣಿ ಆಡುವುದು ಅತ್ಯಂತ ಕಷ್ಟದ ಸವಾಲು. ಇಲ್ಲಿಯ ವಾತಾವರಣ, ಪಿಚ್‌ ಗುಣಮಟ್ಟ ಮತ್ತು ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳ ದಾಳಿಯನ್ನು ಎದುರಿಸುವುದು ಸುಲಭವಲ್ಲ’ ಎಂದು ಕೇನ್ ಹೇಳಿದ್ದಾರೆ.

‘ಟೆಸ್ಟ್ ಇರಲಿ, ಏಕದಿನ ಇರಲಿ ಗೆಲ್ಲುವುದೇ ಮುಖ್ಯ. ಫಲಿತಾಂಶವಿಲ್ಲದ ನಿರಸ ಡ್ರಾ ನನಗಿಷ್ಟವಿಲ್ಲ’ ಎಂದು ಹೇಳುವ ನಾಯಕ ವಿರಾಟ್ ತವರಿನಲ್ಲಿ ಮತ್ತೊಂದು ಸರಣಿ ವಿಜಯೋತ್ಸವ ಆಚರಿಸುವ ಛಲದಲ್ಲಿದ್ದಾರೆ.  ಯೋಜನೆಗೆ ತಕ್ಕಂತೆ ಆಡುವ ಯುವ ಮತ್ತು ಅನುಭವಿ ಆಟಗಾರರ ದಂಡು ಅವರ ಹಿಂದೆ ಇದೆ.

ಎರಡು ವರ್ಷಗಳ ಹಿಂದೆ ಕಿವೀಸ್‌ ತನ್ನ ತವರಿನಲ್ಲಿ 1–0ಯಿಂದ ಭಾರತಕ್ಕೆ ಸೋಲಿನ ರುಚಿ ತೋರಿಸಿತ್ತು. ಇದೀಗ ಸೇಡು ತೀರಿಸಿಕೊಳ್ಳಲು ಕೊಹ್ಲಿ ಬಳಗ ಸಿದ್ಧವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT