ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊ ಜಾಕ್‌ ಇಲ್ಲದ ಹೊಸ ಐಫೋನ್‌ 7

Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಹದಿವಯಸ್ಸಿನ ವ್ಯಕ್ತಿ ತನ್ನ ದೇಹದಲ್ಲಿ ಚಿತ್ರವಿಚಿತ್ರ ಬದಲಾವಣೆಗಳನ್ನು ಮಾಡಿಕೊಂಡಂತೆ ಐಫೋನ್ 7 ಹಿತಕರವಲ್ಲದ ಕೆಲವು ಲಕ್ಷಣಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ ಎನ್ನುವ ವಿಶ್ಲೇಷಣೆಗಳು ಈಗ ಕೇಳಿಬರುತ್ತಿವೆ.

ಹೆಡ್‌ಫೋನ್‌ ಜಾಕ್‌ ತೆಗೆದುಹಾಕಿರುವುದು ಪ್ರಮುಖ ಬದಲಾವಣೆ. ಇದರ ಜತೆಗೆ ಫಿಸಿಕಲ್‌ ಹೋಮ್‌ ಬಟನ್‌ ಬದಲಿಗೆ ವರ್ಚುವಲ್‌ ಬಟನ್‌ ಅಳವಡಿಸಲಾಗಿದೆ. ಫಿಸಿಕಲ್‌ ಬಟನ್‌ ಬದಲಿಗೆ ವರ್ಚುವಲ್‌ ಬಟನ್‌ ಅಳವಡಿಸಿರುವುದು ಹೊಸದೇನಲ್ಲ. ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿರುವ ಲೆನೆವೊ ಕಂಪೆನಿಯ ಮೊಟೊ ಜೆಡ್‌ ಮಾದರಿಯಲ್ಲಿಯೂ ವರ್ಚುವಲ್‌ ಹೋಮ್‌ ಬಟನ್‌ ಅಳವಡಿಸಲಾಗಿದೆ.

ಆದರೆ,  ಆಡಿಯೊ ಜಾಕ್‌ ತೆಗೆದುಹಾಕಿರುವುದಕ್ಕೆ ಗ್ರಾಹಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಆಡಿಯೊ ಜಾಕ್‌ ಇಲ್ಲದೆ ಐಫೋನ್‌ ಬಳಸಲು ಕಿರಿಕಿರಿ ಆಗುತ್ತಿದೆ ಎಂದು ದೂರುತ್ತಿದ್ದಾರೆ. ಹೊಸ ಫೋನ್‌ ಖರೀದಿಯ ವಿಚಾರ ಬಂದಾಗಲೂ ಆಡಿಯೊ ಜಾಕ್‌ ಗ್ರಾಹಕರಿಗೆ ಸಾಕಷ್ಟು ಗೊಂದಲ ಸೃಷ್ಟಿಸುತ್ತಿದೆ. ಆಡಿಯೊ ಜಾಕ್‌ನ ಪೋರ್ಟ್‌ಗೆ ನೀಡಲಾಗಿದ್ದ 3.5 ಮಿಲಿಮೀಟರ್‌ನಷ್ಟು ಸ್ಥಳವನ್ನು ಐಫೋನ್‌ 7ರಲ್ಲಿ ಕಾರ್ಯನಿರ್ವಹಣೆಗೆ ಬೇಕಾದ ಅತಿವೇಗದ ಚಿಪ್‌ಗಳನ್ನು ಅಳವಡಿಸಲು ಕಂಪೆನಿ ಬಳಸಿಕೊಂಡಿದೆ.

ಆದರೆ, ಆಡಿಯೊ ಜಾಕ್‌ ತೆಗೆದುಹಾಕಿರುವುದಕ್ಕೆ ಕಂಪೆನಿ ನೀಡುತ್ತಿರುವ ಸ್ಪಷ್ಟನೆಯೇ ಬೇರೆ. ವರ್ಚುವಲ್‌ ಮತ್ತು ನಿಸ್ತುಂತು ಜಗತ್ತಿನ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಹೊಸ ತಲೆಮಾರಿನ ಉಪಕರಣಗಳಲ್ಲಿ ಹಳೆಯ ಮಾದರಿಯ ಈ ತಂತ್ರಜ್ಞಾನ ಬಳಸುವುದು ಸರಿಯಲ್ಲ ಎನ್ನುತ್ತದೆ ಸಂಸ್ಥೆ. ಹಾಗೆ ನೋಡಿದರೆ ಆ್ಯಪಲ್‌ ಕಂಪೆನಿ ಐಫೋನ್‌ನಲ್ಲಿ ಬಳಸುತ್ತಿದ್ದ ಆಡಿಯೊ ಜಾಕ್‌ ದಶಕದ ಹಿಂದಿನ ತಂತ್ರಜ್ಞಾನ. ಈಗ ಜಾಕ್‌ ತೆಗೆದುಹಾಕಲಾಗಿದ್ದರೂ, ಈ  ಸ್ಥಳವನ್ನು ಇನ್ನಿತರ ಬಹು ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ಅಂದರೆ ಗ್ರಾಹಕರು ಸ್ಪೀಕರ್‌, ಇಯರ್‌ಪೋನ್‌, ಕ್ರೆಡಿಟ್‌ ಕಾರ್ಡ್‌ ರೀಡರ್‌ ಬಳಸಲು ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಹೊಸ ಐಫೋನ್‌ನಲ್ಲಿ ಒಂದೇ ಒಂದು ಪೋರ್ಟ್‌ ಮಾತ್ರ ಇದೆ. ಗ್ರಾಹಕರಿಗೆ ಅನುಕೂಲವಾಗಲು ಡೋಂಗಲ್‌ ಸೌಲಭ್ಯ ನೀಡಲಾಗಿದೆ. ಇದರ ಒಂದು ತುದಿಯಲ್ಲಿ ಕನೆಕ್ಟರ್‌ ಮತ್ತೊಂದು ತುದಿಯಲ್ಲಿ ಆಡಿಯೊ ಪೋರ್ಟ್‌ ಸೌಲಭ್ಯ ಇದೆ.

ಈ ಕನೆಕ್ಟರ್‌ಗೆ ಬಳಸಿಕೊಳ್ಳಲು ಒಂದು ಜತೆ ಇಯರ್‌ಬಡ್‌ ಕೂಡ ನೀಡಲಾಗಿದೆ. ಹೊಸ ಐಫೋನ್‌ 7 ಹಿಂದಿನ ಮಾದರಿಗಳಿಗಿಂತ ದೊಡ್ಡದಿದೆ. ಅಷ್ಟೇ ಅಲ್ಲ, ಹಳೆಯದಕ್ಕಿಂತಲೂ 2 ಗಂಟೆಗಳಷ್ಟು ಹೆಚ್ಚಿನ ಸಾಮರ್ಥ್ಯ ಹೊಂದಿರುವ ಬ್ಯಾಟರಿ ಅಳವಡಿಸಲಾಗಿದೆ. ಒಂದೇ ಒಂದು ಹನಿ ನೀರು ಕೂಡ ಒಳಪ್ರವೇಶಿಸದಂತೆ ಜಲನಿರೋಧಕ ತಂತ್ರಜ್ಞಾನದಡಿ ಹ್ಯಾಂಡ್‌ಸೆಟ್‌ ಅಭಿವೃದ್ಧಿಪಡಿಸಲಾಗಿದೆ.

ವೇಗದ ವಿಚಾರಕ್ಕೆ ಬಂದರೆ ಐಫೋನ್‌ 7 ಮತ್ತು 7 ಪ್ಲಸ್‌ ಹಿಂದಿನ ಮಾದರಿಗಳಿಗಿಂತ ಅದ್ಭುತವಾದ ವೇಗ ಹೊಂದಿದೆ. 2 ವರ್ಷಗಳ ಹಿಂದಿನ ಐಫೋನ್‌ 6 ಮಾದರಿಗಿಂತಲೂ ಇದರ ಕಾರ್ಯನಿರ್ವಹಣಾ ವೇಗ ಎರಡು ಪಟ್ಟು ಹೆಚ್ಚಿದೆ. ಐಫೋನ್‌ 6ಎಸ್‌ ಗಿಂತಲೂ ಶೇ 39ರಷ್ಟು ಮತ್ತು ಐಫೋನ್‌ 6 ಮಾದರಿಗಿಂತ ಶೇ 114ರಷ್ಟು ಕಾರ್ಯನಿರ್ವಹಣಾ ವೇಗವನ್ನು ಹೊಸ ಮಾದರಿ ಹೊಂದಿದೆ.  ಅಷ್ಟೇ ಅಲ್ಲ, ಕ್ಯಾಮೆರಾಗಳು  ಉಜ್ವಲವಾದ ಚಿತ್ರಗಳನ್ನು ತೆಗೆಯಬಲ್ಲವು.

ಐಫೋನ್‌ 7,  12 ಮೆಗಾಪಿಕ್ಸೆಲ್‌ ಸೆನ್ಸರ್‌ ಹೊಂದಿದೆ. ಜತೆಗೆ ಆಫ್ಟಿಕಲ್‌ ಇಮೇಜ್‌ ಸ್ಟೆಬಲೈಜೇಷನ್‌ ತಂತ್ರಜ್ಞಾನ ಇರುವುದರಿಂದ ಚಿತ್ರ ತೆಗೆಯುವಾಗ ಕೈ ನಡುಗಿದರೂ ಚಿತ್ರದ ಸ್ಪಷ್ಟತೆ ಕೆಡುವುದಿಲ್ಲ. ಜತೆಗೆ ಐಫೋನ್ 7 ಪ್ಲಸ್‌ನಲ್ಲಿ ಹಿಂಬದಿಯಲ್ಲಿ ಹೆಚ್ಚುವರಿಯಾಗಿ 1 ಕ್ಯಾಮೆರಾ ನೀಡಲಾಗಿದೆ. ಎರಡೂ ಕ್ಯಾಮೆರಾಗಳು ಜತೆಯಾಗಿ ಕಾರ್ಯನಿರ್ವಹಿಸುತ್ತವೆ. ಹೊಸ ವಿನ್ಯಾಸದಲ್ಲಿ ಬಾಳಿಕೆ ಸಾಮರ್ಥ್ಯ ಹೆಚ್ಚಿಸಲು ಆದ್ಯತೆ ನೀಡಲಾಗಿದೆ.

ಕಳೆದ ವರ್ಷ ಐಫೋನ್‌ 6 ಎಸ್‌ ಖರೀದಿಸಿದವರು ಈಗ ಹೊಸ ಮಾದರಿಗೆ ಬದಲಾಗುವ ಅಗತ್ಯವಿಲ್ಲ ಎನ್ನುತ್ತಾರೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ತಜ್ಞರು. ಆದರೆ, 2 ವರ್ಷದ ಹಿಂದಿನ ಐಫೋನ್‌ 6  ಗ್ರಾಹಕರು ಹೊಸ ಹ್ಯಾಂಡ್‌ಸೆಟ್‌ಗೆ ಬದಲಾಗಬಹುದು ಎನ್ನುವ ಸಲಹೆಯನ್ನೂ ಮುಂದಿಡುತ್ತಾರೆ. ಮಾರುಕಟ್ಟೆ ತಜ್ಞರ ಪ್ರಕಾರ ಎರಡು ಬಗೆಯ ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ.

ಮೊದಲನೆಯವರು 2 ವರ್ಷಕ್ಕೊಮ್ಮೆ ಹ್ಯಾಂಡ್‌ಸೆಟ್‌ ಬದಲಿಸುತ್ತಿರುತ್ತಾರೆ. ಇನ್ನು ಕೆಲವರು ತಮಗೆ ಅಗತ್ಯವಿರುವ ತಂತ್ರಜ್ಞಾನ ಬಂದರೆ ಮಾತ್ರ ಹೊಸ ಫೋನ್‌ ಖರೀದಿಸುತ್ತಾರೆ. ಐಫೋನ್‌ 7 ಕೂಡ ಇದೇ ಮಾರುಕಟ್ಟೆ ತಂತ್ರದೊಂದಿಗೆ ಬಿಡುಗೆಯಾಗಿದೆ. ಅಂದರೆ 2 ವರ್ಷದ ಹಿಂದಿನ ಐಫೋನ್‌6 ಗ್ರಾಹಕರಿಗೆ ಈಗ ಬದಲಾವಣೆಯ ಸಮಯ ಎನ್ನುತ್ತಿದೆ ಕಂಪೆನಿ.

(ನ್ಯೂಯಾರ್ಕ್‌ ಟೈಮ್ಸ್‌)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT