ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸಕ್ಕೆ ಎಷ್ಟೊಂದು ಮುಖವಾಡಗಳು!

Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮುದ್ದಾದ ಸಂಸಾರ. ಬಹುಕಾಲದ ತಪನದ ನಂತರ ಮಗುವಿನ ಜನನವಾಗಿರುತ್ತದೆ. ತಂದೆ ತಾಯಿಯರಿಗೋ ಬಹಳ ಮುದ್ದು, ಚೆನ್ನಾಗಿ ಬೆಳೆಸಬೇಕು; ವಿದ್ಯಾವಂತನಾಗಿ, ಕೀರ್ತಿವಂತನಾಗಬೇಕಂಬ ಸಹಜ ಆಸೆಗಳೆಲ್ಲವೂ ಅವರಿಗೆ ತುಸು ಹೆಚ್ಚಾಗಿಯೇ ಇದೆ. ಆದರೆ ತಾವು ಒಂದು ಬಗೆದರೆ, ದೈವವೇ ಒಂದು ಬಗೆಯುವುದು ಅಲ್ಲವೇ! ದುರದೃಷ್ಟವಶಾತ್ ಆ ಮಗು ಅಕಾಲಮರಣಕ್ಕೆ ತುತ್ತಾಗುತ್ತದೆ. ತಂದೆ ತನ್ನ ದುಃಖವನ್ನು ಭರಿಸಲಾಗದೆ ಹೋಗುತ್ತಾನೆ.

ಎಷ್ಟು ದುಃಖವಾದರೂ ಮುಂದಿನ ಕರ್ತವ್ಯವನ್ನಂತೂ ಮಾಡಬೇಕಷ್ಟೇ. ಬಂಧುಗಳೊಂದಿಗೆ ತನ್ನ ಕಂದಮ್ಮನನ್ನು ಹೊತ್ತು ಸ್ಮಶಾನಕ್ಕೆ ಬರುತ್ತಾನೆ. ಬಂಧುಗಳ ಅಳು ತಾರಕಕ್ಕೇರುತ್ತದೆ. ಬಯಸಿ ಪಡೆದ ಮಗು ಅಕಾಲಕ್ಕೆ ಕಾಲನ ವಶವಾದಾಗ ಆಗುವ ದುಃಖ ಕೂಡ ಗಾಢವಾದದ್ದೇ. ಚಿತೆಯ ಮೇಲಿಟ್ಟು ಮುಂದೇನು ಮಾಡಲಾಗದೆ ಮಾನವದನನಾಗಿ ಕುಳಿತುಬಿಡುತ್ತಾನೆ. ಮುದ್ದು ಮುಖದ ಕಂದ, ಪ್ರೀತಿಯ ಕುರುಹು ಅದನ್ನು ಶವ ಎಂದು ನಂಬುವುದಾದರೂ ಅವನ ಯೋಚನೆಗೆ ಮೀರಿದ್ದಾಗಿರುತ್ತದೆ.

ಈ ದುಃಖದ ಚೀರಾಟವನ್ನು ಕೇಳಿದ ಮುದಿಹದ್ದೊಂದು  ಅಲ್ಲಿದ್ದವರನ್ನು ಉದ್ದೇಶಿಸಿ ಹೇಳುತ್ತದೆ: ‘ನಿಮಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ನೀವಾದರೋ ಒಂದು ಮಗುವನ್ನು ಬಿಟ್ಟು ಹೋಗುವುದಕ್ಕೆ ಇಷ್ಟು ವ್ಯಸನ ಪಡುತ್ತಿದ್ದೀರಿ, ಈ ಮಹಾಸ್ಮಶಾನದಲ್ಲಿ ಇಂತಹ ಸಾವಿರಾರು ಜನರು ಆಗಿ ಹೋಗಿದ್ದಾರೆ. ಇಲ್ಲಿಗೆ ಶವದೊಡನೆ ಆಗಮಿಸಿ ಸತ್ತವರಿಗಾಗಿ ದುಃಖಿಸುವವವರೂ ಈ ಪ್ರಪಂಚದಿಂದ ನಿರ್ಗಮಿಸಿದ್ದಾರೆ. ದುಃಖಿಸುವುದರಲ್ಲಿ ಅರ್ಥವಾದರೂ ಏನಿದೆ? ಹೊರಡಿ, ನಿಮ್ಮ ಕರ್ತವ್ಯ ಮುಗಿಸಿ ಬೇಗ. ಭೂತಪ್ರೇತಗಳ ಸಂಚಾರವಾಗುವ ಮೊದಲು ನಿಮ್ಮ ಕೆಲಸ ಮುಗಿಸಿ’.

ಮುದಿಹದ್ದಿನ ಉಪದೇಶ ಕೇಳಿದ ಮಗುವಿನ ಸಂಬಂಧಿಗಳು ಅದನ್ನು ಅನುಮೋದಿಸುವಂತೆ ನಿಧಾನವಾಗಿ ಕಾರ್ಯಪ್ರವೃತ್ತರಾಗತೊಡಗಿದರು. ಅಷ್ಟು ಹೊತ್ತಿಗೆ ತನ್ನ ಗೂಡಿನಿಂದ ನರಿಯೊಂದು ಬಂದು ಉದ್ಘೋಷಿಸಿತು: ‘ ಎಲೈ ಮೂರ್ಖರೆ! ನಿಮಗೆ ಹೃದಯವಾದರೂ ಇದೆಯೇ? ಒಣಹುಲ್ಲಿನ ಚಿತೆಯ ಮೇಲೆ ಕಂದಮ್ಮನನ್ನು ಮಲಗಿಸಿ ಹೊರಟಿದ್ದೀರಲ್ಲಾ? ಪಶುಪಕ್ಷಿಗಳೂ ನಿಮ್ಮಂತೆ ನಿಷ್ಕಾರುಣ್ಯದಿಂದ ನಡೆದುಕೊಳ್ಳುವುದಿಲ್ಲ. ಮನುಷ್ಯರಾದರೋ ಭಾವನೆ ಉಳ್ಳವರೆಂದು ಲೋಕ ಹೇಳುವುದು ಕೇಳಿದ್ದೆ . ಆದರೆ ಅದು ಸುಳ್ಳಾಯಿತು. ನಿಮಗೆ ಕರುಣೆ, ಪ್ರೀತಿ ಏನಾದರೂ ಇದ್ದಲ್ಲಿ ಗಟ್ಟಿಯಾಗಿ ದುಃಖಿಸಿ, ನಿಮ್ಮ ವಂಶ ಬೆಳಗಬೇಕಿದ್ದ ಈ ಮಗು ಮತ್ತೆ ಎದ್ದು ಬರಬಹುದು. ಪ್ರೀತಿಯ ಶಕ್ತಿಯಾದರೂ ಅಂಥದ್ದೇ.’
ಬಂಧುಗಳ ಗೊಂದಲ ಹೆಚ್ಚಾಯಿತು.

ಮುದಿಹದ್ದು ‘ಅಯ್ಯೋ ಮೂರ್ಖತನವೇ! ಚೈತನ್ಯರಹಿತವಾಗಿ ಮರದ ತುಂಡಿನಂತೆ ಬಿದ್ದಿರುವ ಈ  ಜಡವಸ್ತುವಿನಲ್ಲಿ ಎಂಥ ಪ್ರೇಮ? ಈ ಅಲ್ಪಮತಿಯಾದ ನರಿಯ ಮಾತಿಗೆ ಬೆಲೆ ಕೊಡುವ ನಿಮ್ಮ ಬುದ್ಧಿಶಕ್ತಿ ಗಮನಿಸಿದರೆ ಕನಿಕರವಾಗುತ್ತದೆ. ಈ ಅರ್ಥಹೀನ ಗೋಳಾಟಕ್ಕೆ ಈ ಮಹಾಸ್ಮಶಾನದಲ್ಲಿ ಕವಡೆ ಕಾಸಿನ ಬೆಲೆಯಿಲ್ಲವಷ್ಟೆ. ಪ್ರತಿಯೊಬ್ಬ ಮನುಷ್ಯನೂ ಅವನ ಕರ್ಮಕ್ಕೆ ಅವನೇ ಹೊಣೆ. ಅದರ ಫಲವನ್ನು ಅವನೇ ಉಣ್ಣುತ್ತಾನೆ, ಸಿಹಿಯೋ ಕಹಿಯೋ, ಅದಕ್ಕೆ ನಿಮ್ಮ ಬಾಧ್ಯತೆ ಏನೂ ಇಲ್ಲವಷ್ಟೆ. ಇನ್ನು ತಡಮಾಡಬೇಡಿ ಇಲ್ಲಿಂದ ಹೊರಡಿ’.

ಆಗ ನರಿ ‘ನಿಮ್ಮ ಕಂದಮ್ಮನ ಮೇಲಿರುವ ಪ್ರೀತಿಯಿಂದ ಉಂಟಾದ ಅಗಲಿಕೆಯ ದುಃಖದ ಪಾವಿತ್ರ್ಯತೆ,  ಈ ಅಲ್ಪಮತಿ ಹದ್ದಿನ ಮಾತುಗಳಿಂದ ನಷ್ಟವಾಗಿದೆ. ನಿಮ್ಮ ದುಃಖ ನೋಡಿ ನನಗೇ ಮರುಗುವಂತಾಯಿತು ಎಂದಾದರೆ ನಿಮಗಾದರೂ ಹೇಗೆ ನಿಷ್ಕಾರುಣ್ಯವಾಗಿ ಹೊರಟುಹೋಗಲು ಸಾಧ್ಯವಾದೀತು? ಬಯಸುವುದಷ್ಟೇ ಮುಖ್ಯವಲ್ಲ, ಬಯಸಿದ್ದನ್ನು ಛಲದಿಂದ ಸಾಧಿಸುವುದು ಧೀರರ ಲಕ್ಷಣ, ಸಂಜೆಯ ತನಕ ಕಾಯಿರಿ, ನಿಮ್ಮ ಮಗು ನಿಮಗೆ ಸಿಕ್ಕರೂ ಸಿಕ್ಕೀತು. ಪ್ರಯತ್ನದಿಂದ ನೀವು ಕಳೆದುಕೊಳ್ಳುವುದೇನೂ ಇಲ್ಲವಷ್ಟೇ!’ ಎಂದಿತು.

ಇದಕ್ಕೆ ಪ್ರತಿಕ್ರಿಯೆಯಾಗಿ ಹದ್ದು ‘ನೂರಾರು ವರ್ಷಗಳು ಬದುಕಿರುವ ನಾನು, ಇಲ್ಲಿಯವರೆಗೂ  ಈ ಮಹಾಸ್ಮಶಾನಕ್ಕೆ ಬಂದವರು ಹಿಂತಿರುಗಿದ್ದು ನೋಡಿಯೇ ಇಲ್ಲ. ಈ ನರಿಯ ವದರುವಿಕೆಗೆ ಕಿವಿ ಕೊಟ್ಟು ಆಗುವುದೇನು ? ನಿಮ್ಮ ಬುದ್ಧಿಗೆ ಕವಿದಿರುವ ಮಂಕುತನವನ್ನು ಹೋಗಲಾಡಿಸಿ ಕರ್ತವ್ಯ ಪ್ರವೃತ್ತರಾಗಿ’ ಎಂದಿತು.

ನರಿ ‘ಮುದಿಹದ್ದಿನ ಶುಷ್ಕ ಉಪದೇಶಕ್ಕೆ ಮರುಳಾಗಿ ನಿಮ್ಮ ಮಗುವನ್ನು ಬಿಟ್ಟುಹೋಗುವುದು ಎಂಥ ದುರಂತ.  ರಾಜರ್ಷಿ ಶ್ವೇತನ ಸತ್ತ ಮಗು ಜೀವಂತವಾದ ಕಥೆ ಕೇಳಿಲ್ಲವೇ? ಸಾಧ್ಯವೆಂದರೆ ಸಾಧ್ಯ, ಇಲ್ಲವಾದಲ್ಲಿ ಅದು ಅಸಾಧ್ಯವಷ್ಟೇ. ಹೆತ್ತಮಗುವಿನ ಮೇಲಿನ ಪ್ರೀತಿ ಇಷ್ಟು ಶಿಥಿಲವಾದ ಈ ಲೋಕದಲ್ಲಿ ನಾನೇಕಾದರೂ ಇದ್ದೇನೋ ಎಂದು ಜುಗುಪ್ಸೆಯಾಗುತ್ತಿದೆ’ ಎಂದು ಮರುಗಿತು!

ಬಂಧುಗಳು ಎರಡೂ ವಾದಗಳನ್ನು ಕೇಳಿ ನಿರ್ಧರಿಸಲಾಗದೆ ವಿಷಣ್ಣರಾಗಿ, ಅಪ್ರತಿಭರಾಗಿ ನಿಂತುಬಿಟ್ಟರು. ಆಗ ಭಗವಾನ್ ಶಂಕರ ಪ್ರತ್ಯಕ್ಷನಾಗಿ ಮಗುವನ್ನು ಉಳಿಸಿಕೊಟ್ಟ. ಹಾಗೆಯೇ ಹದ್ದು ಮತ್ತು ನರಿಯ ಹಸಿವು ನಿವಾರಣೆಯಾಗಲಿ ಎಂಬ ವರವನ್ನೂ ಪ್ರಸಾದಿಸಿದ.

* * *
ಇದು ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ಹೇಳಿದ ಕಥೆ; ಗೃಧ್ರ -ಗೋಮಾಯು ಸಂವಾದ ಎಂದು ಪ್ರಸಿದ್ಧ.  ಸತ್ತ ಮನುಷ್ಯ ಮತ್ತೆ ಬದುಕಿದ ಉದಾಹರಣೆ ಇದೆಯೇ?  ಎಂಬ ಪ್ರಶ್ನೆಗೆ ಉತ್ತರವಾಗಿ ಈ ಕಥೆ ಅಲ್ಲಿ ಬಂದಿದೆ. ಕಥೆಯ ಧ್ವನಿ ಆ ಪ್ರಶ್ನೆ ಬಯಸುವ ಉತ್ತರದಾಚೆಗಿನ ಎಷ್ಟೋ ವಿಚಾರಗಳನ್ನು ತಿಳಿಸುತ್ತದೆ. ಇಂದಿನ ಪರಿಸರಕ್ಕೂ ಅನ್ವಯಿಸಬಹುದು. ಹದ್ದು ಮತ್ತು ನರಿ ಅವುಗಳ ವಾದಸರಣಿಯಿಂದ ಸಾಧಿಸಲಿಕ್ಕೆ ಹೊರಟಿರುವ ಕೆಲಸದ ಉದ್ದೇಶ ಏನು ಎಂಬುದು ಇಲ್ಲಿ ವಿಚಾರಾರ್ಹ.

ಮುದಿ ಹದ್ದಿಗೆ ಕಣ್ಣು ಕಾಣುವುದಿಲ್ಲ, ಸಂಜೆಯ ಕತ್ತಲಾದಂತೆ ತನಗೆ ಆಹಾರ ಇಲ್ಲವಾಗುವುದೇನೋ ಎಂಬ ದುಗುಡದಲ್ಲಿ ಆ ಮಗುವಿನ ಬಂಧುಗಳನ್ನು ಸಾಗಹಾಕುವ ಹುನ್ನಾರ ಅದರದ್ದು. ಸಂಜೆಯ ತನಕ ಇವರೆಲ್ಲರೂ ಇಲ್ಲೇ ಇದ್ದು ನಂತರ ತೆರಳಿದರೆ ಹೆಣ ತನ್ನದು ಎಂಬ ಲೆಕ್ಕಾಚಾರ ನರಿಯದ್ದು. ಹದ್ದಿನ ತಾತ್ವಿಕತೆ, ನರಿಯ ಜೀವನಪ್ರೀತಿಯ ಬೋಧನೆ – ಈ ಎರಡಕ್ಕೂ ಮೂಲವಾಗಿರುವುದು ಹೆಣದ ಮಾಂಸ!  ಕಥೆಯಲ್ಲೇನೋ ಶಂಕರ ವರವನ್ನಿತ್ತು ಹದ್ದು–ನರಿಗಳ  ಹಸಿವನ್ನು ತೀರಿಸಿದ. ಆದರೆ ಈ ಉಪಾಖ್ಯಾನದ ಧ್ವನಿ ಇಂದಿನ ಸಮಾಜದ ಎಷ್ಟೋ ಅಡ್ಡದಾರಿಗಳಿಗೆ ಹಿಡಿದ ಕನ್ನಡಿಯಂತಿದೆ. 

ಉದಾಹರಣೆಗೆ, ಸಿರಿಯಾದೇಶದಲ್ಲಿ ಐಸಿಸ್ ವಿರುದ್ಧ ಅಸ್ಸಾದ್ ಎಂಬ ಸರ್ವಾಧಿಕಾರಿಯನ್ನು ಬೆಂಬಲಿಸುವ ರಷ್ಯಾ ಒಂದೆಡೆಯಾದರೆ, ಅಸ್ಸಾದ್ ಪದಚ್ಯುತಿಗೆ ಆಗ್ರಹಿಸಿ ಐಸಿಸ್ ವಿರುದ್ಧ ನಿಂತಿರುವ ಬಂಡುಕೋರ ಉಗ್ರಗಾಮಿಗಳ ಪಡೆಯನ್ನು ಮಾತ್ರ ಬೆಂಬಲಿಸುವ ಅಮೆರಿಕ ಮತ್ತೊಂದೆಡೆ.  ಇವರೆಡು ದೇಶಗಳ ಕಾರ್ಯತಂತ್ರದ ಉದ್ದೇಶವಾದರೂ ಸಿರಿಯಾದ ಶಾಂತಿ ಮಾತ್ರವೇ ? ಅಸ್ಸಾದ್ ಉರುಳಿದರೆ ಸಿರಿಯಾದ ಮೇಲಿನ ಹಿಡಿತ ಅಮೆರಿಕಾದ ಪಾಲಾಗುತ್ತದೆ;  ಅಸ್ಸಾದ್ ಉಳಿದರೆ ಅವನು ರಷ್ಯಾದ ಭಂಟನಾಗಿಯೇ ಉಳಿಯುತ್ತಾನೆ. ಎರಡೂ ರಾಷ್ಟ್ರಗಳಿಗಿರುವ ದೃಷ್ಟಿ ತೈಲಸಂಪತ್ತಿನ ಮೇಲೆ ಎಂಬುದು ಸಾಮಾನ್ಯರಿಗೂ ವೇದ್ಯವಾಗುವ ಸಂಗತಿ. ಸಾವಿರಾರು ವರ್ಷಗಳ ಹಿಂದೆ ಹೇಳಲ್ಪಟ್ಟ ಈ ಕಥೆಯಲ್ಲೂ ಇಂಥದೇ ಅಂಶ ಧ್ವನಿಸಿದೆ.

ಇಂದು ಮೌಲ್ಯದ ಹೆಸರಲ್ಲಿ ಹೊರಡುವ ಸಂದೇಶ, ಅಧ್ಯಾತ್ಮದ ಹೆಸರಲ್ಲಿ ಸಿಗುವ ಉಪದೇಶ, ಶಿಕ್ಷಣದ ಹೆಸರಲ್ಲಿ ನಡೆಯುವ ಕಾಳಜಿ –  ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ರಾಷ್ಟ್ರಗಳ ಮಟ್ಟದಲ್ಲಿ ಈ ರೀತಿ ವೈಚಾರಿಕತೆ ಭ್ರಷ್ಟವಾಗಿರುವುದು ಒಂದಾದರೆ, ಸಾಂಸ್ಥಿಕ ಮಟ್ಟದಲ್ಲಿ, ವೈಯುಕ್ತಿಕ ಮಟ್ಟದಲ್ಲಿಯೂ ಈ ರೋಗ ವ್ಯಾಪಿಸಿದೆ. ಈ ರೋಗಕ್ಕೆ ಬಲಿಯಾಗದವನೇ ನಿಜವಾದ ವಿವೇಕಿ; ಸಜ್ಜನ.

- ಎನ್‌.ಪಿ.ಸಾಯಿಗಣೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT