ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಮೌಲ್ಯ ಸಮಾಜದಲ್ಲಿ ನೋಡಾ...

Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಅವರು ಬಿಡಿ ತೂಕದ ವ್ಯಕ್ತಿ, ಅವರ ಮಾತಿಗಿರುವ ಬೆಲೆ ಸಾಧಾರಣವಾದದ್ದಲ್ಲ, He commands respect. ಹೀಗೆ ಕೆಲವರ ಮಾತಿನ ಬಗ್ಗೆ ಮಾತ್ರ ನಾವು ಮಾತನಾಡಿಕೊಳ್ಳುತ್ತೇವೆ. ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಾವು ಓರ್ವ ವ್ಯಕ್ತಿಗೆ ಕೊಡುತ್ತಿರುವ  ಬೆಲೆ ಆತನಿಗಿರುವ ದುಡ್ಡು, ಸಂಪತ್ತಿಗಿಂತ ಮಿಗಿಲಾಗಿ ಅವನ ನಡವಳಿಕೆಗೆ. ಆ ನಡವಳಿಕೆಯಲ್ಲಿ ಕಪಟವಿಲ್ಲದೆ, ನಿಸ್ಪೃಹತೆಯಿದ್ದರೆ, ಗೌರವ ತಾನಾಗಿಯೇ ಸಲ್ಲುತ್ತದೆ.

ಆದರೆ ಈ ವ್ಯಕ್ತಿತ್ವಕ್ಕಿರುವ ಮೌಲ್ಯವನ್ನು ತೂಗುವುದು ಸಾಧ್ಯವೇ? ಅದಕ್ಕಿರುವ ಅಳತೆಗೋಲಾದರೂ ಯಾವುದು? ಇದು ಬಹು ಕ್ಲಿಷ್ಟವಾದ ಪ್ರಶ್ನೆ. ನ್ಯಾಯಾಧೀಶರ ಆದೇಶಗಳಲ್ಲೂ ಹಲವು ಬಾರಿ, ಹತ್ತುಸಾವಿರ ರೂಪಾಯಿ ದಂಡ, ತಪ್ಪಿದರೆ ಒಂದು  ವರ್ಷ ಸಜೆ ಎಂದು ಇರುವುದನ್ನು ನೋಡಿರುತ್ತೇವೆ. ಹಾಗಾದರೆ ಆ ವ್ಯಕ್ತಿಯ ಒಂದು ವರ್ಷದ ಸ್ವಾತಂತ್ರ್ಯಕ್ಕಿರುವ ಬೆಲೆ ಹತ್ತುಸಾವಿರ ಎಂದು ತೀರ್ಮಾನಿಸಬಹುದು? ಈ ಸಮಸ್ಯೆಗಳು ನಮ್ಮನ್ನು ಇಂದು ಮಾತ್ರ ಬಾಧಿಸುತ್ತಿಲ್ಲ. ಇವು  ಬಹು ಪ್ರಾಚೀನವಾದ ಪ್ರಶ್ನೆಗಳು.

ಆಯುರ್ವೇದದಲ್ಲೂ ಪ್ರಸಿದ್ಧರಾಗಿರುವ ಹಲವು ಋಷಿಗಳ ಪಟ್ಟಿಯಲ್ಲಿ ಚ್ಯವನನೂ ಒಬ್ಬ. ಬುದ್ಧಿ ಮತ್ತು ಶಕ್ತಿವರ್ಧನೆಗೆ ಎಂದು ಪ್ರಸಿದ್ಧವಾಗಿರುವ ಚ್ಯವನಪ್ರಾಶದ ಸೂತ್ರವನ್ನು ತಯಾರಿಸಿದ ಇವನ ಜೀವನದಲ್ಲೂ, ವ್ಯಕಿಯ ಮೌಲ್ಯನಿಷ್ಕರ್ಷೆ ಮಾಡುವುದು ಹೇಗೆ ಎಂಬುದರ ಕುರಿತಾದ ಸ್ವಾರಸ್ಯಕಾರಿ ಕಥೆಯಿದೆ.

ಒಮ್ಮೆ ಚ್ಯವನಮಹರ್ಷಿ ಒಂದು ನದೀತಟದಲ್ಲಿ ಕುಳಿತು ತಪಸ್ಸು ಮಾಡುತ್ತಾ ತನ್ನ ದೇಹವನ್ನೇ ಮರೆತಿದ್ದನು. ಆಗ ಒಮ್ಮೆ ಪ್ರವಾಹ ಬಂದು, ಚ್ಯವನಮಹರ್ಷಿ ಕೊಚ್ಚಿಕೊಂಡು ಹೋದಾಗಲೂ ತನ್ನ ಮೈಮೇಲೆ ಪ್ರಜ್ಞೆಯೇ ಇರಲಿಲ್ಲ. ಆತನ ಶರೀರ ಕೊಚ್ಚಿಕೊಂಡು ಹೋಗಿ ಇನ್ಯಾವುದೂ ದಡದಲ್ಲಿ ಬಿದ್ದು ಪಾಚಿ ಕಟ್ಟಿಕೊಂಡಿತು. ಅದು ಮತ್ತೆ ಹಾಗೆ ನದಿಯಲ್ಲಿ ಹರಿದು ಬೆಸ್ತರು ಹಾಕಿದ್ದ ಬಲೆಯಲ್ಲಿ ಸಿಕ್ಕಿಕೊಂಡಿತು. ಇದ್ಯಾವುದೋ ವಿಚಿತ್ರ ಪ್ರಾಣಿ, ಮೀನು ಮೊಸಳೆ ಯಾವುದೇ ಜಾತಿಗೆ ಸೇರಿರುವುದಲ್ಲವಲ್ಲ ಎಂದು ಬೆಸ್ತರಿಗೆ ಆಶ್ಚರ್ಯ.

ಆ ಬೆಸ್ತರು, ಅವರ ಗುಂಪಿನ ಮುಖಂಡನನ್ನು ಕರೆದರು. ಅವನು ಚ್ಯವನರ ದೇಹಕ್ಕೆ ಅಂಟಿರುವ ಪಾಚಿಯನ್ನು ಉಜ್ಜಿ ತೊಳೆಯುವಂತೆ ಹೇಳಿದ. ಆ ಪಾಚಿಯೆಲ್ಲ ಹೋದಮೇಲೆ, ಅದು ಓರ್ವ ಮನುಷ್ಯ ದೇಹ, ಅವನು ಜೀವಂತವಾಗಿದ್ದಾನೆ ಎಂದು ತಿಳಿಯಿತು. ಅವನ ಮೈಮೇಲಿದ್ದ ಬಟ್ಟೆ ಮತ್ತು ಜಟೆಯಿಂದ ಅವನು ಒಬ್ಬ ಋಷಿ ಇರಬೇಕೆಂದು ಯೋಚಿಸಿದರು. ಆ ಬೆಸ್ತರ ಮುಖಂಡ ರಾಜನಾದ ನಹುಷನಿಗೆ ವಿಷಯ ತಿಳಿಸಿದ. ನಹುಷ, ತನ್ನ ಪರಿವಾರದೊಂದಿಗೆ ಬೆಸ್ತರ ಕೇರಿಗೆ ಧಾವಿಸಿದ. ಅಲ್ಲಿ ನಹುಷ, ಚ್ಯವನನನ್ನು ಪ್ರಶ್ನಿಸಿ ಅವನ ವೃತ್ತಾಂತವೆಲ್ಲಾ ತಿಳಿದುಕೊಂಡ.

ಆಗ ನಹುಷ, ಚ್ಯವನನ್ನು ಅರಮನೆಗೆ ಆಗಮಿಸಬೇಕಾಗಿ ಕೇಳಿಕೊಂಡ. ಈಗ ಚ್ಯವನ ಒಂದು ಧರ್ಮಸೂಕ್ಷ್ಮವನ್ನು ಎತ್ತಿದ. ‘ನೋಡು ರಾಜ, ನಾನು ಈಗ ಈ ಬೆಸ್ತರ ಸ್ವತ್ತು. ನಾನು ನಿನ್ನ ಅರಮನೆಗೆ ಬರಬೇಕಾದರೆ, ನನ್ನ ಬೆಲೆಯನ್ನು ಇವರಿಗೆ ಕೊಟ್ಟು ನನ್ನನ್ನು ಬಿಡಿಸಿಕೊ’ ಎಂದ. ಚ್ಯವನಮಹರ್ಷಿಯ ಬೆಲೆಯನ್ನು ನಿರ್ಧರಿಸುವುದು ಹೇಗೆ? ಸರಿ, ನಹುಷನು, ಚ್ಯವನನ ತೂಕಕ್ಕೆ ಸಮನಾದ ಚಿನ್ನವನ್ನು ಕೊಡುವುದಾಗಿ ಹೇಳಿದ. ಚ್ಯವನಮಹರ್ಷಿ ನಕ್ಕು, ‘ಹಾಗಾದರೆ ನನ್ನ ಬೆಲೆ ಕೇವಲ ಅಷ್ಟೇಯೇ?’ ಎಂದ. ನಹುಷನಿಗೆ ದಾರಿ ಕಾಣದಾಯಿತು.

ಹಾಗಾದರೆ ನನ್ನ ರಾಜ್ಯದ ಸಂಪತ್ತಿನ ಅರ್ಧದಷ್ಟು ನೀಡುತ್ತೇನೆ ಎಂದ. ಚ್ಯವನನಿಗೆ ಸಮಾಧಾನವಾಗಲಿಲ್ಲ. ‘ನನ್ನ ಬೆಲೆ ಅದಕ್ಕಿಂತಲೂ ಹೆಚ್ಚು ರಾಜ!’ ನಹುಷ, ‘ಹಾಗಾದರೆ ನನ್ನ ರಾಜ್ಯದ ಸಕಲ ಸಂಪತ್ತನ್ನೂ ನೀಡುತ್ತೇನೆ ’ಎಂದು ಹೇಳಿಯೇಬಿಟ್ಟ. ಚ್ಯವನ ಜಗ್ಗಲಿಲ್ಲ, ‘ನನ್ನ ಬೆಲೆ ಅದಕ್ಕಿಂತಲೂ ಹೆಚ್ಚು’ – ಮತ್ತೆ ತಗಾದೆ ತೆಗೆದ. ಈಗ ನಹುಷನಿಗೆ ಕಕ್ಕಾಬಿಕ್ಕಿಯಾಯಿತು. ನಹುಷ ಕೈಮುಗಿದು, ‘ಮಹರ್ಷಿ, ಹಾಗಾದರೆ ನಿಮ್ಮ ಬೆಲೆ ಎಷ್ಟೆಂದು ದಯವಿಟ್ಟು ತಿಳಿಸಿ’ – ಮನವಿ ಮಾಡಿದ. ಆಗ ಚ್ಯವನ ‘ಜ್ಞಾನಿಗಳ ಬೆಲೆಯನ್ನು ವಸ್ತುಗಳಿಂದ ಅಳೆಯಲು ಸಾಧ್ಯವಿಲ್ಲ. ಈ ಬೆಸ್ತನಿಗೆ ಒಂದು ಹಸುವನ್ನು ದಾನವಾಗಿ ನೀಡು, ಆಗ ನೀನು ಅವನಿಗೆ ನನ್ನ ಬೆಲೆ ತೆತ್ತಂತಾಗುತ್ತದೆ’ ಎಂದ. ಸಮಾಧಾನಗೊಂಡ ನಹುಷ, ಒಂದು ಹಸುವನ್ನು ಕೊಟ್ಟು, ಚ್ಯವನಮಹರ್ಷಿಯನ್ನು ಕರೆದುಕೊಂಡು ಅರಮನೆಗೆ ಹೊರಟ.

ಇಲ್ಲಿ ನಾವು ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ, ಹಸುವಿಗಿರುವ ಪಾವಿತ್ರ್ಯವನಲ್ಲ, ಬದಲಿಗೆ ಅದಕ್ಕಿರುವ ಉಪಯುಕ್ತತೆ ಮತ್ತು ತನ್ಮೂಲಕ ಹಸುವಿಗೆ ದೊರಕಿರುವ ಮೌಲ್ಯವನ್ನು. ಚ್ಯವನಮಹರ್ಷಿಯ ಜ್ಞಾನವನ್ನು ಯಾವ ಹಣದಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ, ಆದರೆ ಅವನ ಜ್ಞಾನವನ್ನು ಹಸುವಿಗಿರುವ ಮೌಲ್ಯದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

ಈಗ ನಮಗೆ ಮತ್ತೆ ಎದುರಾಗುವ ಪ್ರಶ್ನೆ, ಓರ್ವ ವ್ಯಕ್ತಿಗೆ ಇರುವ ಮೌಲ್ಯ ಎಷ್ಟು. ಮೇಲ್ನೋಟಕ್ಕೆ ಇದೊಂದು  ಸಾಧಾರಣ ಪ್ರಶ್ನೆಯಂತೆ ಕಂಡರೂ, ತತ್ತ್ವಶಾಸ್ತ್ರದ ಮಟ್ಟದಲ್ಲಿ ಚರ್ಚಿಸಬಹುದಾದ ವಿಷಯ. ಇಡೀ ಭೂಮಿಯಲ್ಲಿ ಇರುವುದು ಕೇವಲ ಒಬ್ಬನೇ (ಒಬ್ಬಳೇ ) ಎಂದಾದರೆ, ಆಗ ಆ ವ್ಯಕ್ತಿಗೆ ಯಾವ ಬೆಲೆಯೂ ಇರಲು ಸಾಧ್ಯವಿಲ್ಲ. ಏಕೆಂದರೆ, ಅವನ ಮೌಲ್ಯವನ್ನು ಅಳೆಯಲು ಅಳತೆಗೋಲೇ ಇರುವುದಿಲ್ಲ. ಹಾಗಾದರೆ ವ್ಯಕ್ತಿಯ ಮೌಲ್ಯ ಸಾಪೇಕ್ಷವಾದದ್ದು ಎಂದು ತೀರ್ಮಾನಿಸಬಹುದು.

ಹಾಗಾದರೆ ವ್ಯಕ್ತಿಯ ಶೈಕ್ಷಣಿಕ ಅರ್ಹತೆಯಿಂದ  ಅವನ ಮೌಲ್ಯ ವೃದ್ಧಿಸುತ್ತದೆಯೇ ಎಂಬುದು ನಮ್ಮನ್ನು ಕಾಡುವ ಮುಂದಿನ ಪ್ರಶ್ನೆ. ಇದಕ್ಕೆ ಉತ್ತರ ಹೌದೆಂದು ತೋರಿದರೂ, ಅದನ್ನು ಸೂಕ್ಷ್ಮವಾಗಿ ಪರಾಮರ್ಶಿಸಿದಾಗ, ಶೈಕ್ಷಣಿಕ ಅರ್ಹತೆಯ ಮಿತಿ ತಿಳಿಯುತ್ತದೆ. ಉದಾಹರಣೆಗೆ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿರುವವನ ಜ್ಞಾನವು ಭೌತಿಕಶಾಸ್ತ್ರದ ಪ್ರಯೋಗಾಲಯದಲ್ಲಿ ಯಾವುದೇ ಕೆಲಸಕ್ಕೆ ಬಾರದು. ಹಾಗೆಯೇ, ಗಣಿತಜ್ಞನ ಜ್ಞಾನ ತತ್ತ್ವಶಾಸ್ತ್ರದ ವಿದ್ಯಾರ್ಥಿಗೆ ಕಿಂಚಿತ್ತೂ ಸಹಾಯಕ್ಕೆ ಬರಲಾರದು. ಇದರಿಂದ ಶೈಕ್ಷಣಿಕ ಅರ್ಹತೆಗಿರುವ ಸೀಮಿತ ಬೆಲೆ ಸ್ಪಷ್ಟವಾಗುತ್ತದೆ.

ಹಾಗಾದರೆ, ಶೈಕ್ಷಣಿಕ ಅರ್ಹತೆಗಿಂತಲೂ ಮುಖ್ಯವಾದದ್ದು ಮತ್ತು ಮೌಲ್ಯವೃದ್ಧಿಗೆ ಕಾರಣವಾದದ್ದು ಯಾವುದು ಎಂದು ಪ್ರಶ್ನೆ ಹಾಕಿದಾಗ,  ಕೌಶಲ (Skill) ಎಂದು ತಿಳಿಯುತ್ತದೆ.

ಹೀಗೆಂದು ತಿಳಿಯಲು, ಒಬ್ಬ ಬಡಗಿಯನ್ನು ತೆಗೆದುಕೊಳ್ಳೋಣ. ಓರ್ವ ಬಡಗಿ ಮಾಡುವ ಖುರ್ಚಿ ಅಥವಾ ಮೇಜು, ಯಾವುದೇ ಬೇಧವಿಲ್ಲದೆ ಸಮಾನವಾಗಿ ಎಲ್ಲರಿಗೂ ಒಂದೇ ರೀತಿಯ ಉಪಯೋಗಕ್ಕೆ ಬರುವ ವಸ್ತು. ಅಂತೆಯೇ ಒಬ್ಬ ನುರಿತ ವಾಹನಚಾಲಕ ದೇಶದ ಪ್ರಧಾನಿಯಿಂದ ಹಿಡಿದು ಗುಮಾಸ್ತನವರೆಗೆ ಎಲ್ಲರನ್ನೂ ಸುರಕ್ಷಿತವಾಗಿ, ಒಂದೆಡೆಯಿಂದ ಮತ್ತೊಂದೆಡೆಗೆ ಕರೆದೊಯ್ಯಬಲ್ಲ. ಇದರಿಂದ ನಮಗೆ ತಿಳಿಯುತ್ತದೆ, ವ್ಯಕ್ತಿಯ ಮೌಲ್ಯವೃದ್ಧಿಯಾಗುವುದು ಶೈಕ್ಷಣಿಕ ಅರ್ಹತೆಯಿಂದಲ್ಲ, ಬದಲಾಗಿ ಸಮಾಜಮುಖಿಯಾಗಿರುವ, ಎಲ್ಲರ ಉಪಯೋಗಕ್ಕೂ ಬರುವ ಕೌಶಲದಿಂದ.

ನಮ್ಮಲ್ಲಿ ಅಂತರ್ಗತವಾಗಿರುವ ಕೆಲವು ಕೌಶಲಗಳಿದ್ದರೆ, ಕಲಿತು ಅಭ್ಯಸಿಸಬಹುದಾದ ಇನ್ನೂ ಹಲವು ಕೌಶಲಗಳಿರುತ್ತವೆ. ಮುಖ್ಯವಾಗಿ, ನಾವು ನಮ್ಮಲ್ಲಿರುವ ಕೌಶಲವನ್ನು ಗುರುತಿಸಿಕೊಳ್ಳಬೇಕಾದದ್ದು ಅತ್ಯಗತ್ಯ. ಇದನ್ನು ಗುರುತಿಸಿಕೊಂಡಮೇಲೆ, ಆತ್ಮವಿಶ್ವಾಸದಿಂದ ಅವುಗಳನ್ನು ಉಪಯೋಗಿಸಿ, ಆತ್ಮಸಂತೋಷ ಮತ್ತು ಸಮಾಜೋದ್ಧಾರಕ್ಕಾಗಿ ದುಡಿಯಬೇಕು. ಇಲ್ಲಿ ಆತ್ಮವಿಶ್ವಾಸವೇ ಕೀಲಿಕೈ. ನಮ್ಮಲ್ಲಿರುವ ಕೌಶಲಗಳ ಬಗ್ಗೆ ಕೀಳರಿಮೆ ತಾಳದೆ, ಅದರಿಂದ ಇತರರಿಗೆ ಆಗುವ ಉಪಯೋಗವಾದರೂ ಎಷ್ಟರ ಮಟ್ಟಿನದು ಎಂದು ಯೋಚಿಸದೆ ಮುನ್ನುಗುವುದು ಅಗತ್ಯ. ಹೀಗೆ ಮಾಡುವಾಗ ಸಾಧಾರಣವಾಗಿ ಎಲ್ಲರಿಗೂ ಎದುರಾಗುವುದು, ನಮ್ಮ ಸುತ್ತಮುತ್ತಲಿನ ಸಮಾಜದಿಂದ ಸತತವಾಗಿ ಬರುವ ಋಣಾತ್ಮಕ ಸಲಹೆಗಳು ಮತ್ತು ಅಭಿಪ್ರಾಯಗಳು.

ನಮ್ಮ ಯೋಜನೆಗಳಿಗೆ ಸಮಾಜದಿಂದ ಪ್ರೋತ್ಸಾಹ ದೊರಕಬೇಕು ಎಂದು ಹಂಬಲಿಸುವುದು ದಡ್ಡತನ. ವಿಜ್ಞಾನಿ ಮತ್ತು ಸಾವಿರಾರು ಅನ್ವೇಷಣಗಳನ್ನು ಮಾಡಿದ್ದ ಥಾಮಸ್ ಆಲ್ವಾ ಎಡಿಸನ್ ಬಾಲ್ಯದಲ್ಲಿ ಮಂದವಿದ್ಯಾರ್ಥಿ; ಅವನಿಂದ ಶಾಲೆಯಲ್ಲಿ ಏನನ್ನೂ ಕಲಿಯಲು ಸಾಧ್ಯವಿಲ್ಲ ಎಂದು ಆತನ ಶಿಕ್ಷಕರು ತೀರ್ಮಾನಿಸಿದ್ದರು. ಆದರೆ ಅವನ ಸಾಧನೆಯನ್ನು ಸಮಾಜ ನಂತರ ಗುರುತಿಸಿ ಸಂಭ್ರಮಿಸಿತು. ಇದು ಇನ್ನೂ ಹಲವು ಸಾಧಕ ಜೀವನದಲ್ಲಿಯೂ ಸತ್ಯ.

ನಮ್ಮಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಗುರುತಿಸಿ, ಅವನ್ನು ಸರಿಯಾದ ಹಾದಿಯಲ್ಲಿ ಉಪಯೋಗಿಸಿ, ಸಮಾಜಮುಖಿಯಾದರೆ, ಲೋಕದ ದೃಷ್ಟಿಯಲ್ಲಿ ನಮ್ಮ ಮೌಲ್ಯ ವೃದ್ಧಿಸುವುದರಲ್ಲಿ ಅನುಮಾನವಿಲ್ಲ. ಆದರೆ ಇದಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುವ ಸಾಧನ ಇಚ್ಛಾಶಕ್ತಿ. ಅದಕ್ಕೇ ಗಾಂಧೀಜಿ ಹೇಳುತ್ತಿದ್ದುದು: ‘Strength does not come from physical capacity. It comes from an indomitable will’ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT