ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಹ್ವಾ ಚಾಪಲ್ಯ ತಣಿಸಿದ ಬಾರ್ಬಿಕ್ಯೂ

ರಸಾಸ್ವಾದ
Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸಂಜೆ ಸೋನೆ, ಮಬ್ಬು ಬೆಳಕು, ಕಾವೇರಿ ಪ್ರತಿಭಟನೆಯಿಂದ ನಗರ ಸ್ವಲ್ಪ ಸುಸ್ತಾದಂತೆ ಕಂಡರೂ ಸಂಚಾರ ದಟ್ಟಣೆ ಮಾತ್ರ ಕಡಿಮೆಯಾಗಿರಲಿಲ್ಲ.
ರಸ್ತೆಗಿಳಿದ ಮೇಲೆ ಕ್ಯಾಬ್‌ ಆದರೇನು, ಬಸ್‌ ಹತ್ತಿದರೇನು ಎಂದುಕೊಂಡು ನಿಂತೆ. ಪುಣ್ಯಕ್ಕೆ ಆಟೊ ಸಿಕ್ಕಿತು. ಸೇಂಟ್‌ ಮಾರ್ಕ್ಸ್‌ ರಸ್ತೆಯ ವಿಳಾಸ ಕೊಟ್ಟು ಸುಮ್ಮನೆ ಕೂತೆ.

ಮಂಕಾಗಿದ್ದ ಮನಸು–ದೇಹಕ್ಕೆ ‘ದ ಓಪನ್ ಬಾಕ್ಸ್‌’ ರೆಸ್ಟೊರೆಂಟ್‌ನ ಬಾರ್ಬಿಕ್ಯೂ ಆಹಾರ ಶ್ರೇಣಿ ಸ್ವಾದಾನಂದ ನೀಡಿತು.

ರೆಸ್ಟೊರೆಂಟ್‌ ತಲುಪಿದ ಕೂಡಲೇ ಎದುರಾದವರು ಮ್ಯಾನೇಜರ್ ಉದಯ್. ಆತ್ಮೀಯವಾಗಿ ಬರಮಾಡಿಕೊಂಡು ರೆಸ್ಟೊರೆಂಟ್‌ನ ವೈಶಿಷ್ಟ್ಯ ವಿವರಿಸಿದರು. ತರಕಾರಿ, ಪ್ರಾನ್, ಮೀನು, ಕೋಳಿ, ಮಟನ್, ಬೀಫ್‌ನ ಬಗೆಬಗೆ ಆಹಾರ ಶ್ರೇಣಿಯ ಬಾರ್ಬಿಕ್ಯೂ ಮೆನು ವಿಶೇಷ ರುಚಿಯಿಂದ ಕೂಡಿತ್ತು.

ತರಕಾರಿ ಗ್ರಿಲ್
ಮಿಶ್ರ ತರಕಾರಿಗಳು ಮತ್ತು ಆಪ್ರಿಕಾಟ್ ಹಣ್ಣು ಸಮವಾಗಿ ಬೆಂದು, ಕ್ರಂಚಿಯಾಗಿ  ಇತ್ತು. ಈ ತರಕಾರಿ ಗ್ರಿಲ್ ಉತ್ತಮ ಸ್ಟಾರ್ಟರ್. ಸಾಲ್ಟೆಡ್ ಚೀಸ್‌ನೊಂದಿಗೆ ಹಗುರವಾದ ಮಸಾಲೆಗಳಿಂದ ಅದ್ದಿದ ಆಪ್ರಿಕಾಟ್ ಹಣ್ಣಿನ ಗ್ರಿಲ್‌ನೊಂದಿಗೆ  ಇದ್ದ ಕ್ರೀಮ್‌ ಸಾಸ್ ಸೂಕ್ತವಾಗಿ ಹೊಂದಿಕೊಂಡು ರುಚಿ ಹೆಚ್ಚಿಸಿತು.

ಅಣಬೆ, ದೊಡ್ಡಮೆಣಸಿನಕಾಯಿ, ಎಳೆ ಜೋಳವನ್ನು ಬಾರ್ಬಿಕ್ಯೂನ ವಿಶೇಷ ಸಾಸ್‌ನೊಂದಿಗೆ ಅದ್ದಿ ಗ್ರಿಲ್ ಮಾಡಿದ್ದ ತಿನಿಸಿನೊಂದಿಗೆ ವೆನಿಗರ್‌ನಲ್ಲಿ ನೆನೆಹಾಕಿದ ಕ್ಯಾರೆಟ್ ಉಪ್ಪಿನಕಾಯಿ ಇತ್ತು. ಈ ಖಾದ್ಯದ ಗ್ರಿಲ್‌ಗೆ ಬಾರ್ಬಿಕ್ಯೂ ಸಾಸ್ ಅನ್ನು ನವಿರಾಗಿ ಹೊಂದಿಸಿ ತಿನ್ನುವಾಗ ತನ್ಮಯತೆ ನೀಡಿತು. ಕ್ಯಾರೆಟ್ ಉಪ್ಪಿನಕಾಯಿ ಹೆಚ್ಚು ಸೂಕ್ತ ಎನಿಸಲಿಲ್ಲ.

ಚೀಸ್ ಮತ್ತು ಆಪ್ರಿಕಾಟ್ ಹಣ್ಣಿನ ಗ್ರಿಲ್ ಕೂಡ ತೆಳುವಾದ ಮಸಾಲೆಯೊಂದಿಗೆ ಬೆರೆತು ಕ್ರೀಂ ಸಾಸ್‌ನೊಂದಿಗೆ ತಿನ್ನಲು ರುಚಿಯಾಗಿತ್ತು.
ತರಕಾರಿಯ ಈ ಎರಡು ಖಾದ್ಯಗಳು ಎಣ್ಣೆ ಅಂಶವಿಲ್ಲದ ಆರೋಗ್ಯ ಪೂರ್ಣ ಮತ್ತು ರುಚಿಕಟ್ಟಾಗಿತ್ತು. ಈ ಮಿಶ್ರ ತರಕಾರಿ ಗ್ರಿಲ್‌ಗೆ ₹300.

ಕೋಳಿ ಮಾಂಸದ ಗ್ರಿಲ್
ಕೋಳಿ ಮಾಂಸದ ಎರಡೂ ಗ್ರಿಲ್‌ ಖಾದ್ಯಗಳು ಪೇಲವವಾಗಿ ಇದ್ದವು. ಮೊದಲ ಗ್ರಿಲ್ ಚಿಕನ್, ಜೇನು ಮತ್ತು ಕೆಂಪು ಮೆಣಸಿನಕಾಯಿ ಸಾಸ್ ಜೊತೆ ಬಡಿಸಲಾಯಿತು. ಒಂದಿಷ್ಟು ಬಾರ್ಬಿಕ್ಯೂ ಮಸಾಲೆಯೊಂದಿಗೆ ಕೋಳಿ ಮಾಂಸವನ್ನು ಹಲವು ಗಂಟೆ ನೆನೆಸಿ ಗ್ರಿಲ್ ಮಾಡಲಾಗಿತ್ತು. ಅದರ ಮೇಲೆ ಈ ಮಸಾಲೆ ರುಚಿ ಇದ್ದು ಒಳ ಭಾಗ ಸಪ್ಪೆಯಾಗಿತ್ತು. ಮಸಾಲೆ  ಇಷ್ಟಪಡುವವರಿಗೆ ಈ ಚಿಕನ್ ಹಿಡಿಸುವುದಿಲ್ಲ. ಹೊರ ಮೈಗೆ ಖಾರದ ಲೇಪನವಿತ್ತಾದರೂ, ಒಳಗೆ ಸಪ್ಪೆ ಮತ್ತು ಹಸಿಹಸಿ ಎನಿಸುತ್ತಿತ್ತು.

ಮತ್ತೊಂದು ಕಬಾಬ್ ಚಿಕನ್ ಗ್ರಿಲ್‌ ಸ್ವಾದಿಷ್ಟವಾಗಿದ್ದರೂ ಕೋಳಿ ತಿಂದ ಮಜಾ ಕೊಡಲಿಲ್ಲ. ಆದರೂ ಬಾರ್ಬಿಕ್ಯೂ ಮಸಾಲೆಯಿಂದ ರುಚಿಯಾಗೇ ಇತ್ತು. ತಿನ್ನುವ ಅನುಭವ ಧ್ಯಾನದಂತೆ, ತಿನ್ನುತ್ತಾ ಹೋದಂತೆ ಕೋಳಿ ರುಚಿ ಮೈ ಮನ ಆವರಿಸಿಕೊಂಡು, ರುಚಿಯಲ್ಲಿ ಮುಳುಗಬೇಕು. ಆದರೆ ಕಬಾಬ್ ಮೊದಲ ತುತ್ತಿಗಷ್ಟೆ ಇಷ್ಟವಾಗಿ ತಿನ್ನುತ್ತಾ ಹೋದಂತೆ ಸಾಕು ಎನಿಸಿತು. ಇದರೊಂದಿಗೆ ಇದ್ದ ಬಿಸಿಬಿಸಿ ನಾನ್ ತಿಂದ ಕೂಡಲೇ ಕರಗುತ್ತಿತ್ತು. ಚಿಕನ್ ಗ್ರಿಲ್ ಬೆಲೆ ₹350.

ಕುರಿ ಮಾಂಸದ ಗ್ರಿಲ್
ಮಟನ್ ಗ್ರಿಲ್ ಮತ್ತು ಟೊಮೆಟೊ ಸಲಾಡ್‌ನೊಂದಿಗೆ ಇದ್ದ ಮಟನ್ ಗ್ರಿಲ್ ಅದ್ಭುತವಾಗಿತ್ತು. ಸ್ವಾದಿಷ್ಟ ಮಟನ್ ಮತ್ತು ಅದರ ಕೊಬ್ಬಿನ ಸಾರ ಗ್ರಿಲ್‌ನಿಂದ ಬೆಂದು    ಮತ್ತಷ್ಟು ತಿನ್ನಲು ಪ್ರಚೋದಿಸಿತು.

ಹೆಚ್ಚುವರಿ ಕೊಬ್ಬು ಗ್ರಿಲ್‌ನಲ್ಲೇ ಕರಗಿಹೊಗುವುದರಿಂದ ಸಾಧಾರಣ ಫ್ರೈಗಿಂತ ಗ್ರಿಲ್ ವಿಧಾನದ ಮಟನ್ ಹೆಚ್ಚು ಆರೋಗ್ಯಪೂರ್ಣ. ಇದಕ್ಕೂ ತೆಳುವಾದ ಮಸಾಲೆ ಇತ್ತು. ಸ್ವಲ್ಪ ಖಾರ ಹೆಚ್ಚಿದ್ದರೆ ಚೆನ್ನಾಗಿರೋದು. ಮಟನ್ ಗ್ರಿಲ್ ಬೆಲೆ ₹400

ಸಮುದ್ರ ಆಹಾರ
ಬಾರ್ಬಿಕ್ಯೂ ಆಹಾರ ಶ್ರೇಣಿಯಲ್ಲಿ ಹೆಚ್ಚು ಇಷ್ಟವಾಗಿದ್ದು ಮೀನಿನ ಖಾದ್ಯ. ಗ್ರಿಲ್ ಆದ ಮೀನಿನ ಒಳಗೆಲ್ಲಾ ಮಸಾಲೆ ರುಚಿ ಬೆರೆತು ತಿಂದ ಕೂಡಲೆ ರುಚಿಯನ್ನು ಎಚ್ಚರಿಸುತ್ತಿತ್ತು. ಇದರೊಂದಿಗೆ ಇದ್ದ ಕಿತ್ತಳೆ ಹಣ್ಣಿನ ಗ್ರಿಲ್ ಅನ್ನು ಮೀನಿನೊಂದಿಗೆ ಹರಡಿಕೊಂಡು ತಿನ್ನುವಾಗ ಮೂಲ ಮೆಕ್ಸಿಕನ್ ಆಹಾರದ ನೆನಪು ನಾಲಿಗೆ ಮೇಲೆ ಅಲೆಯಾದವು.

ಮುಟ್ಟಿದರೆ ಬೀಳುವಂತೆ ಕೋಮಲೆಯಾಗಿದ್ದ ಮೀನು ಒಡಲ ತುಂಬ ಸ್ವಾದವನ್ನು ತುಂಬಿಕೊಂಡು ತಿಂದವರ ಜಿಹ್ವೆ ತಣಿಸಿತು.
ಮೀನಿನ ಗ್ರಿಲ್ ಬೆಲೆ ₹ 400. ಮೀನಿನೊಂದಿಗೆ ಇದ್ದ ಮತ್ತೊಂದು ಸಮುದ್ರ ಆಹಾರ ಪ್ರಾನ್ ಗ್ರಿಲ್‌. ಈ ಗ್ರಿಲ್‌ನೊಂದಿಗೆ ಬಡಿಸಿದ್ದ ಗ್ರಿಲ್ಡ್‌ ಚೆರಿ ಟೊಮಾಟೊ, ಪೈನಾಪಲ್‌ನ ಸಲಾಡ್ ಪ್ರಾನ್‌ಗಿಂತ ಚೆನ್ನಾಗಿತ್ತು. ಚರ್ಮದ ಅಲರ್ಜಿ ಇರುವವರು ಪ್ರಾನ್ ಗ್ರಿಲ್ ತಿನ್ನುವ ಮುಂಚೆ ಸ್ವಲ್ಪ ಯೋಚಿಸಬೇಕು. ಪ್ರಾನ್ ಗ್ರಿಲ್ ಬೆಲೆ ₹400

ಬೀಫ್ ಗ್ರಿಲ್
ತರಿಯಾದ ಮಸಾಲೆ ಮತ್ತು ಹರ್ಬ್ಸ್‌ಗಳಿಂದ ಬೀಫ್ ಮತ್ತೊಂದಿಷ್ಟು ಹೊತ್ತು ನೆನೆಯಬೇಕಿತ್ತು. ಬೀಫ್‌ ತುಂಡುಗಳು ಚಿಕ್ಕದಿದ್ದರೂ ಮಸಾಲೆ ಮಾಂಸದೊಳಗೆ ಹಿಡಿಯುತ್ತಿತ್ತು.

ಒಟ್ಟಾರೆ ಬೀಫ್ ಸರಿಯಾಗಿ ಗ್ರಿಲ್ ಆಗದೆ ಒಳಗೆ ಹಸಿಯಾಗಿ ಇತ್ತು. ಇದರೊಂದಿಗೆ ಬಡಿಸಿದ ಆಲೂಗೆಡ್ಡೆ ತುಂಡುಗಳು ಬೀಫ್ ಗ್ರಿಲ್‌ಗಿಂತ ರುಚಿಯಾಗಿತ್ತು. ಬೀಫ್ ಗ್ರಿಲ್ ಬೆಲೆ ₹400

ರೆಸ್ಟೊರೆಂಟ್ : ದ ಓಪನ್ ಬಾಕ್ಸ್‌

ವಿಳಾಸ: ದ ಓಪನ್ ಬಾಕ್ಸ್‌, 4ನೇ ಮಹಡಿ, ಹಾಲ್ಸೋನ್ ಕಾಂಪ್ಲೆಕ್ಸ್‌, ಸೇಂಟ್. ಮಾರ್ಕ್ಸ್‌ ರಸ್ತೆ. ಬುಕಿಂಗ್‌ಗೆ 080 41290055

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT