ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಕಸ ಶಕ್ತಿಯ ಜಿ63

Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮರ್ಸಿಡೆಸ್‌ ಬೆಂಜ್ ತನ್ನ ಪರ್ಫಾರ್ಮೆನ್ಸ್‌ ವಾಹನಗಳನ್ನು ಎಎಂಜಿ ಬ್ರಾಂಡ್ ಅಡಿ ಮಾರಾಟ ಮಾಡುತ್ತದೆ. ಇದರ ಅಡಿ ಕೂಪ್, ಸ್ಪೋರ್ಟ್ಸ್‌ ಕಾರ್ ಮತ್ತು ಎಸ್‌ಯುವಿ ಸಹ ಇದೆ. ಇವುಗಳಲ್ಲಿ ಗಮನ ಸೆಳೆಯುವುದು ಎಸ್‌ಯುವಿ. ಎಎಂಜಿ ಎಸ್‌ಯುವಿಗಳಿಗೆ ಜಿವ್ಯಾಗನ್ ಎಂದು ಸಂಕ್ಷಿಪ್ತವಾಗಿ ಜಿಎಂದು ಕರೆಯಲಾಗುತ್ತದೆ. ಅಂತಹ ಎಸ್‌ಯುವಿಗಳಲ್ಲಿ ಒಂದಾದ ಜಿ63 ಗಮನಾರ್ಹವಾದುದು. ಜಿ63ಗಿಂತಲೂ ಜಿ65 ರಕ್ಕಸ ಎಸ್‌ಯುವಿ. ಈಚೆಗೆ ಪುಣೆಯಲ್ಲಿರುವ ಕಂಪೆನಿಯ ಜೋಡಣಾ ಘಟಕಕ್ಕೆ ಭೇಟಿ ನೀಡಿದ್ದಾಗ ಜಿ63 ಅನ್ನು ಚಲಾಯಿಸುವ ಅವಕಾಶ ದೊರೆತಿತ್ತು.

ಜಿ63ಯನ್ನು ಕಂಪೆನಿ 2013ರಲ್ಲೇ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಅದರ ಹೊಸ ಅವತರಣಿಕೆಯನ್ನು ಈ ವರ್ಷ ಬಿಡುಗಡೆ ಮಾಡಿದೆ. ಜಿವ್ಯಾಗನ್ ಎಸ್‌ಯುವಿಗಳನ್ನು 1970ರಿಂದಲೂ ತಯಾರು ಮಾಡಲಾಗುತ್ತಿದೆ. ಜರ್ಮನ್‌ ಸೇನೆಗೆ ಎಂದು ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ನಂತರದ ದಿನಗಳಲ್ಲಿ ಅವನ್ನು ಮುಕ್ತಮಾರುಕಟ್ಟೆಗೂ ಬಿಡುಗಡೆ ಮಾಡಲಾಗಿತ್ತು. ಭಾರತದಲ್ಲೂ ತೀರಾ ಹಳೆಯದಾದ ಜಿವ್ಯಾಗನ್‌ಗಳು ಸಾಕಷ್ಟಿವೆ.

ನೋಟದಲ್ಲಿ 40 ವರ್ಷದ ಜಿವ್ಯಾಗನ್‌ಗೂ ಈಗಿನ ಜಿ63ಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಥಟ್ಟನೆ ನೋಡಿದರೆ ಮಹೀಂದ್ರಾ ಬೊಲೆರೊ, ಟಾಟಾ ಸುಮೊ ಮತ್ತು ಫೋರ್ಸ್‌ ಟೆಂಪೊ ಟ್ರಾಕ್ಸ್‌ನಂತೆ ಜಿ63 ಕಾಣುತ್ತದೆ. ಆದರೆ ನಿಜಕ್ಕೂ ಈ ಎಲ್ಲಾ ಎಂಯುವಿಗಳ ವಿನ್ಯಾಸದ ಹಿಂದಿನ ಪ್ರೇರಣೆ ಜಿವ್ಯಾಗನ್.

ನೋಡಲು ಜಿ63 ಗಟ್ಟಿಮುಟ್ಟಾಗಿ ಕಾಣುತ್ತದೆ. ಜತೆಗೆ ನಿಜಕ್ಕೂ ಗಟ್ಟಿಮುಟ್ಟಾಗಿದೆ. ಅದರ ಡೋರ್‌ಗಳನ್ನು ತಳ್ಳಿಬಿಟ್ಟರೆ ಮುಂದೆ ಹೋಗುವುದಿಲ್ಲ. ಬದಲಿಗೆ ಅದು ಲಾಕ್ ಆಗುವವರೆಗೂ ಅಕ್ಷರಶಃ ಬಲವಾಗಿ ನೂಕಬೇಕು. ಅಷ್ಟು ತೂಕದ ಡೋರ್‌ಗಳವು. ಹಿಂದಿನ ಡೋರ್‌ ಅಂತೂ ಏಳೆಂಟು ಮಣದಷ್ಟು ಭಾರವಾಗಿದೆ. ಹೀಗಿದ್ದ ಮೇಲೆ ಇಡೀ ವಾಹನದ ತೂಕವೂ ಭಾರಿ ಇರಬೇಕಲ್ಲ, ಜಿ63 3.3 ಟನ್ ತೂಗುತ್ತದೆ. ಅದರ ಡೋರ್‌ಗಳನ್ನು ತೆಗೆದು ಹಾಕುವಾಗ ಅದರ ತೂಕ ಅನುಭವಕ್ಕೆ ಬರುತ್ತದೆ.

ಇಷ್ಟು ತೂಕದ ಎಸ್‌ಯುವಿಯನ್ನು ಚಲಾಯಿಸಲು ಪ್ರಚಂಡ ಶಕ್ತಿಯ ಎಂಜಿನ್‌ ಬೇಕು. ಇದರಲ್ಲಿ 5.5 ಲೀಟರ್‌, ಅಂದರೆ 5,500 ಸಿಸಿ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ಇದೆ. ಅದಕ್ಕೆ ಅವಳಿ ಟರ್ಬೊಗಳನ್ನು ಅಳವಡಿಸಲಾಗಿದೆ. ಈ ಎಂಜಿನ್ ಭರ್ತಿ 536 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಜತೆಗೆ 760 ಎನ್‌ಎಂ ಟಾರ್ಕ್‌ ಉತ್ಪಾದಿಸುತ್ತದೆ.

3.3 ಟನ್‌ ತೂಗುವ ಜಿ63ಯನ್ನು ಈ ಎಂಜಿನ್‌ 0ಯಿಂದ 100 ಕಿ.ಮೀ/ಗಂಟೆ ವೇಗಕ್ಕೆ ಕೇವಲ 5.6 ಸೆಕೆಂಡ್‌ನಲ್ಲಿ ಮುಟ್ಟಿಸುತ್ತದೆ. ಎಂಜಿನ್‌ನ ಶಕ್ತಿ ಅದನ್ನು ಚಾಲೂ ಮಾಡಿದಾಕ್ಷಣ ಅನುಭವಕ್ಕೆ ಬರುತ್ತದೆ. ಪಾರ್ಕಿಂಗ್‌ ಮೋಡ್‌ನಲ್ಲಿ ಥ್ರೋಟಲ್ ಒತ್ತಿದಾಕ್ಷಣ ಎಂಜಿನ್ ಆರ್ಭಟಿಸುತ್ತದೆ. ಇಡೀ ವಾಹನ ನಡುಗುತ್ತದೆ. ಇದು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ವಾಹನ. ಹೀಗಾಗಿ ಥ್ರೋಟಲ್‌ ಒತ್ತುವುದೇ ಬೇಡ.

ಬ್ರೇಕ್‌ ಬಿಟ್ಟಾಕ್ಷಣ... ಐಡಲ್ ಎಂಜಿನ್‌ ಸ್ಪೀಡ್‌ನಲ್ಲೇ ಜಿ63 ನುಗ್ಗುತ್ತದೆ. ಇನ್ನು ಥ್ರೋಟಲ್‌ ಒತ್ತಿದರೆ ವೇಗ ಪಡೆದುಕೊಳ್ಳುತ್ತದೆ. ಬಲವಾಗಿ ಒತ್ತಿದರೆ ಜಿಗಿದಂತೆ ಭಾಸವಾಗುತ್ತದೆ. ಆದರೆ ಇದೇ ವರ್ಗದ ರೇಂಜ್‌ರೋವೆರ್ ಮತ್ತಿತರ ಎಸ್‌ಯುವಿಗಳು ಮತ್ತಷ್ಟು ಶಕ್ತಿಶಾಲಿ ಎಂಬುದು ಗಮನಾರ್ಹ. ಸುರಕ್ಷತೆ ದೃಷ್ಟಿಯಿಂದ ಜಿ63ಯ ವೇಗವನ್ನು 220 ಕಿ.ಮೀಗೆ ಮಿತಿಗೊಳಿಸಲಾಗಿದೆ.

ಇದರಲ್ಲಿ ಬರೋಬ್ಬರಿ 20 ಇಂಚಿನ ಟೈರ್‌ಗಳಿವೆ. ಆದರೆ ಗ್ರೌಂಡ್‌ ಕ್ಲಿಯರೆನ್ಸ್ ಕೇವಲ 217 ಎಂ.ಎಂ. ಇಷ್ಟು ಶಕ್ತಿಶಾಲಿ ಎಸ್‌ಯುವಿಗೆ ಇದೊಂದು ಕೊರತೆಯೇ ಸರಿ.

ಎಸ್‌ಯುವಿ ಎಂದಮೇಲೆ 4 ವ್ಹೀಲ್‌ ಡ್ರೈವ್‌ ಸವಲತ್ತು ಇದ್ದೇ ಇರಬೇಕು. ಜತೆಗೆ ಲೋ ಗಿಯರ್‌ ಆಯ್ಕೆಯೂ ಇದೆ. ಆದರೆ ಗಮನ ಸೆಳೆಯುವುದು. ಡಿಫರೆನ್ಷಿಯಲ್‌ ಲಾಕ್‌ಗಳು. ಇದು ಪಕ್ಕಾ ಆಫ್‌ ರೋಡ್‌ ಚಾಲನೆಯ ಸವಲತ್ತು. ಕೆಸರಿನಲ್ಲಿ ಅಥವಾ ಮರಳಿನಲ್ಲಿ ಹಿಡಿತ ಸಿಗದೆ ಚಕ್ರ ನಿಂತಲ್ಲೇ ತಿರುಗುತ್ತಿದ್ದರೆ, ಅದನ್ನು ಲಾಕ್‌ ಮಾಡಿ ಶಕ್ತಿಯನ್ನು ಬೇರೆ ಚಕ್ರಕ್ಕೆ ವರ್ಗಾಯಿಸುವ ತಂತ್ರಜ್ಞಾನವಿದು. ಆಫ್‌ರೋಡ್‌ ವಾಹನಗಳಲ್ಲಿ ಹೆಚ್ಚೆಂದರೆ ಒಂದು ಡಿಫರೆನ್ಷಿಯಲ್ ಲಾಕ್ ಇರುತ್ತದೆ. ಆದರೆ ಜಿ63ಯಲ್ಲಿ 3 ಡಿಫರೆನ್ಷಿಯಲ್‌ಗಳಿವೆ. ಹಿಂಬದಿ, ಮುಂಬದಿ ಮತ್ತು ಸೆಂಟರ್‌ ಡಿಫರೆನ್ಷಿಯಲ್‌ಗಳಿಗೆ ಲಾಕ್‌ಗಳಿವೆ.


ಇದರೆ ವಿನ್ಯಾಸ ಕ್ಲಾಸಿಕ್ ಆಗೇ ಇದೆ. ಒಳ ವಿನ್ಯಾಸವೂ ಇದಕ್ಕೆ ಹೊರತಲ್ಲ. 6 ಲಕ್ಷದ ಜೀಪ್‌ಗಳಲ್ಲಿ ಡ್ಯಾಶ್‌ಬೋರ್ಡ್‌ಗಳಲ್ಲಿ ಹಿಡಿ (ಗ್ರಾಬ್‌ರೇಲ್) ಇರುತ್ತದೆ. ಇದರಲ್ಲೂ ಅಂಥದ್ದೇ ಗ್ರಾಬ್‌ ರೇಲ್ ಇದೆ. ಡೋರ್‌ ಹಿಡಿಗಳು, ಪ್ಯಾಡ್‌ಗಳು ಕ್ಲಾಸಿಕ್ ಆಗೇ ಇವೆ. ಮನರಂಜನೆಗೆ ಮುಂಬದಿಯಲ್ಲಿ ಒಂದು, ಹಿಂಬದಿಯಲ್ಲಿ ಎರಡು ಟಿಎಫ್‌ಟಿ ಪರದೆಗಳಿವೆ. ಉಳಿದಂತೆ ಒಳಭಾಗದಲ್ಲಿ ಸಾಧಾರಣ ಜೀಪ್‌ನಂತೆ ಭಾಸವಾಗುತ್ತದೆ. ಜಿವ್ಯಾಗನ್‌ನಲ್ಲಿ ಕಚ್ಚಾ ಮತ್ತು

ಗಡಸು ಅನುಭವ ನೀಡುವ ಸಲುವಾಗಿಯೇ ಮೂಲ ವಿನ್ಯಾಸವನ್ನು  ಉಳಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಇದರ ಆನ್‌ ರೋಡ್‌ ಬೆಲೆ 2.4 ಕೋಟಿ ದಾಟುತ್ತದೆ. ಇಷ್ಟೇ ಬೆಲೆಯಲ್ಲಿ ಇನ್ನೂ ಅತ್ಯುತ್ತಮ ಎಸ್‌ಯುವಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಜಿವ್ಯಾಗನ್‌ ಹೊಂದಿರುವ ಖ್ಯಾತಿ ಮತ್ತು ಎಎಂಜಿ ಬ್ರಾಂಡ್‌ ಇಮೇಜ್‌ ಮತ್ತು ಅದರ ಗಡಸು ನೋಟಕ್ಕಾಗಿ ಅದನ್ನು ಕೊಳ್ಳುವವರು ಇನ್ನೂ ಇದ್ದಾರೆ. 

ಒಂದು ಎಂಜಿನ್‌ ಒಬ್ಬ ವ್ಯಕ್ತಿ
ಪ್ರತಿ ಜಿವ್ಯಾಗನ್‌ನ ಎಂಜಿನ್‌ ಅನ್ನು ಒಬ್ಬರೇ ಎಂಜಿನಿಯರ್‌ ಜೋಡಿಸುತ್ತಾರೆ. ಹೀಗಾಗಿ ಈ ಎಂಜಿನ್‌ಗಳು 'ಹ್ಯಾಂಡ್‌ಮೇಡ್'. ಇಂತಹ 128 ಎಂಜಿನಿಯರ್‌ಗಳು ಜಿ ವ್ಯಾಗನ್‌ಗಾಗಿ ದುಡಿಯುತ್ತಿದ್ದಾರೆ. ಅವರು ಜೋಡಿಸಿದ ಎಂಜಿನ್‌ನ ಕವಚದ ಮೇಲೆ ಅವರ ಸಹಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT