ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನದ ಮಹತ್ವ

ಬೆಳದಿಂಗಳು
Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸಂವಹನದ ವಿಷಯ ಬಂದಾಕ್ಷಣ ಎಲ್ಲರೂ ಪರಿಣಾಮಕಾರಿಯಾಗಿ ಮಾತನಾಡುವುದರ ಬಗ್ಗೆ ಹೇಳುತ್ತಾರೆ. ಪರಿಣಾಮಕಾರಿಯಾಗಿ ಬರೆಯುವುದು ಹೇಗೆ ಎಂದು ಕಲಿಸಲು ಮುಂದಾಗುತ್ತಾರೆ. ಮಾತು ಅಥವಾ ಬರಹ ಪರಿಣಾಮಕಾರಿಯಾಗುವುದಕ್ಕೆ ಬಹಳ ಮುಖ್ಯ ಅಂಶವೊಂದಿದೆ. ಅದರ ಬಗ್ಗೆ ನಾವು ಯಾವತ್ತೂ ಆಲೋಚಿಸಿರುವುದೇ ಇಲ್ಲ. ಗದ್ದಲದ ಈ ಕಾಲಘಟ್ಟದಲ್ಲಂತೂ ಅದು ಎಲ್ಲರಿಗೂ ಮರೆತು ಹೋಗಿದೆ.

ಮಾತು ಸೋಲುತ್ತಿರುವುದು, ಬರಹ ಪೇಲವವಾಗುತ್ತಿರುವುದು ಇದೇ ಕಾರಣಕ್ಕೆ ಎಂಬುದು ನಮಗೆ ಅರ್ಥವೂ ಆಗುತ್ತಿಲ್ಲ. ಮಾತಿಗೊಂದು ತೂಕ ಬರುವುದಕ್ಕೆ ಮೌನದ ಅಗತ್ಯವಿದೆ. ಅರ್ಥಾತ್ ಮೌನವೆಂಬುದು ಕೇವಲ ಮಾತಿನ ಇಲ್ಲದಿರುವಿಕೆ ಅಷ್ಟೇ ಅಲ್ಲ. ಮೌನ ತನ್ನಷ್ಟಕ್ಕೆ ತಾನೇ ಒಂದು ಹೇಳಿಕೆ.

ಒಂದು ಅಭಿವ್ಯಕ್ತಿ. ಇದನ್ನು ಅರ್ಥ ಮಾಡಿಕೊಂಡವರು ಬಹಳ ಕಡಿಮೆ. ಗಾಂಧೀಜಿ ಮೌನ ವ್ರತ ಆಚರಿಸುತ್ತಿದ್ದುದರ ಬಗ್ಗೆ ನಮಗೆ ಗೊತ್ತು. ಎಲ್ಲಾ ಧರ್ಮಗಳಲ್ಲಿಯೂ ಮೌನ ವ್ರತದ ಪರಿಕಲ್ಪನೆಗಳಿವೆ. ವ್ರತನಿಷ್ಠರು ಕೇವಲ ಮಾತಿನ ಉಪವಾಸ ಮಾಡುತ್ತಿರುತ್ತಾರೆ ಎಂಬುದು ವ್ರತದ ಅಸಂಪೂರ್ಣ ಗ್ರಹಿಕೆ.

ಇದನ್ನು ಇನ್ನೊಂದು ಬಗೆಯಲ್ಲಿ ವಿವರಿಸಲೂ ಸಾಧ್ಯವಿದೆ. ಮಾತಿನ ಮಧ್ಯೆ ಇರುವ ಸಣ್ಣ ಸಣ್ಣ ಮೌನಗಳಲ್ಲಿ ಸಾಧ್ಯವಾಗುವ ಸಂವಹನವನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಭಾಷಣಗಳಲ್ಲಿ ಬಳಸುತ್ತಿದ್ದ ಬಿಡುವುಗಳನ್ನು ಇಲ್ಲಿ ಉದಾಹರಣೆಯಾಗಿ ಪರಿಗಣಿಸಬಹುದು. ಹೇಳಿದ ವಿಚಾರವೊಂದು ಕೇಳುಗನ ಮನಸ್ಸಿನೊಳಕ್ಕೆ ಇಳಿಯುವುದಕ್ಕೆ ಬೇಕಿರುವ ಸಮಯವನ್ನು ಅವರು ಒದಗಿಸುತ್ತಿದ್ದರೆ. ಈ ಬಿಡುವುಗಳಿಲ್ಲದೆ ಹೋದರೆ ಆ ಮಾತುಗಳು ಕೇಳುಗನ ಮನದಾಳಕ್ಕೆ ಇಳಿಯದೆ ಹೋಗಿಬಿಡುತ್ತಿದ್ದವು.

ಮಹಾಭಾರತಕ್ಕೆ ಲಿಪಿಕಾರನಾಗಿದ್ದ ಗಣೇಶನಿಗೆ ವ್ಯಾಸರು ಹೇಳುವ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೂ ಇದು ಅರ್ಥವಾಗುತ್ತದೆ. ನನ್ನ ನುಡಿಯನ್ನು ಅರ್ಥೈಸಿ ಲಿಪಿಗೆ ಇಳಿಸು ಎನ್ನುವ ವ್ಯಾಸರ ಹೇಳಿಕೆಯಲ್ಲಿ ಮೌನದ ಅಂಶವಿದೆ. ಸೊಲ್ಲಿನಿಂದ ಸೊಲ್ಲಿಗೆ ಬೇಕಿರುವ ಅವಕಾಶ ಸೃಷ್ಟಿಸಿಕೊಳ್ಳಲು ವ್ಯಾಸರು ಇದನ್ನು ಹೇಳಿದರು ಎನ್ನುವುದು ಕೇವಲ ಮೇಲ್ಪದರದ ಹೇಳಿಕೆಯಾಗಿಬಿಡುತ್ತದೆ. ಲಿಪಿಕಾರನಿಗೂ ಕವಿಗೂ ನಡುವಣ ಮೌನದ ಸಮಯವದು. ಇಬ್ಬರ ಮನಸ್ಸಿನೊಳಗೂ ಕಾವ್ಯ ಜನಿಸುತ್ತಿದ್ದ ಹೊತ್ತದು.

ಇವೆಲ್ಲವೂ ತಾತ್ವಿಕ ವಿಚಾರಗಳು. ಇಷ್ಟೆಲ್ಲಾ ಸಂಕೀರ್ಣಗೊಳಿಸದೆ ನಿತ್ಯದ ಬದುಕನ್ನು ನೋಡಿದರೂ ಮೌನದ ಮಹತ್ವ ನಮಗೆ ಅರಿವಾಗುತ್ತದೆ. ನಾವು ಆಡಿದ ಮಾತಿಗೆ ಯಾವ ಪ್ರತಿಕ್ರಿಯೆಯೂ ಬಾರದೇ ಇರುವ ಕೆಲವು ಕ್ಷಣಗಳಿರುತ್ತವೆ. ಇವುಗಳನ್ನು ಮತ್ತೊಮ್ಮೆ ಪರಿಶೀಲಿಸಿದರೆ ಆ ಮೌನದ ಅರ್ಥಗಳು ಹೊಳೆದು ಬಿಡುತ್ತವೆ. ಈ ಮೌನವನ್ನು ಗ್ರಹಿಸಲಾರದಷ್ಟು ಅಹಂಕಾರಿಗಳಾಗಿದ್ದರಷ್ಟೇ ನಮಗೆ ಅದು ಅರ್ಥವಾಗದೇ ಉಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT