ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬೆಯಾಡುವ ಚಹಾ

ಅರಿವು ಹರಿವು
Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಜಗತ್ತಿನ ಕೋಟ್ಯಂತರ ಜನರ ಬಹು ದೊಡ್ಡ ದೌರ್ಬಲ್ಯ (ವೀಕ್‌ನೆಸ್‌) ಎಂದರೆ ‘ಚಹಾ’ ಉರುಫ್‌ ‘ಟೀ’! ಅದಿಲ್ಲದಿದ್ದರೆ ಅವರಿಲ್ಲ. ಬೆಳಿಗ್ಗೆ ಎದ್ದು ಒಂದು ಕಪ್‌ ‘ಟೀ’ ಸೇವಿಸದೇ ಅವರ ದಿನಚರಿ ಆರಂಭವಾಗುವುದೇ ಇಲ್ಲ. ಟೀ ಇಲ್ಲ ಅಂದರೆ ಆ ದಿನವಿಡೀ ಏನೋ ಕಳೆದುಕೊಂಡಿರುವ ಭಾವ ಅವರನ್ನು ಆವರಿಸುತ್ತದೆ.
ಕೇಳಿದರೆ ನಗು ಬರಬಹುದು. ಆದರೆ ಇದು ನಿಜ.

ಬಹುತೇಕರಿಗೆ ಬೆಳಗಿನ ಶೌಚ ಸರಿಯಾಗಿ ಆಗಲು ಟೀ ಕುಡಿಯಲೇ ಬೇಕು! ಒಂದು ದಿನ ಬೆಳಿಗ್ಗೆ ಟೀ ಸಿಗಲಿಲ್ಲ ಎಂದಿಟ್ಟುಕೊಳ್ಳಿ. ಅಂದು ಚಹಾ ಪ್ರಿಯರ  ಚಡಪಡಿಕೆ ಹೇಳತೀರದು. ಕೆಲವರಿಗೆ ಕಡು (ಸ್ಟ್ರಾಂಗ್‌) ಚಹಾ, ಇನ್ನು ಕೆಲವರಿಗೆ ತೆಳು (ಲೈಟ್‌) ಚಹಾ, ಮತ್ತೂ ಕೆಲವರಿಗೆ ಕಪ್ಪು ಚಹಾ (ಹಾಲು ಹಾಕದ್ದು), ಇನ್ನೂ ಕೆಲವರಿಗೆ ನಿಂಬೆ ಚಹಾ (ಲೈಮ್ ಟೀ) ಇಷ್ಟ. ಯಾವುದೋ ಒಂದು. ಆದರೆ ಚಹಾ ಬೇಕೇ ಬೇಕು. ಆಧುನಿಕ ಜಗತ್ತಿನಲ್ಲಿ ಕುಡಿಯುವ ಸಂಸ್ಕೃತಿಯನ್ನು (ಮದ್ಯ ಅಲ್ಲ) ಹುಟ್ಟು ಹಾಕಿದ ಕೀರ್ತಿ ಚಹಾಕ್ಕೆ ಸಲ್ಲುತ್ತದೆ. ಪೇಯಗಳ ಪೈಕಿ ಹೆಚ್ಚು ಜನರು ಇಷ್ಟಪಡುವುದು ಚಹಾವನ್ನೇ.

ಇಂತಿಪ್ಪ ಚಹಾದ ಮೂಲ ಚೀನಾ. ಜಗತ್ತಿಗೆ ಚಹಾದ ಸ್ವಾದವನ್ನು ಹರಡಿದ ಶ್ರೇಯ ಚೀನಿಯರದ್ದು. ಚೀನಿಯರ ಜೀವನಕ್ಕೆ ಬೇಕಾದ ಅತಿ ಅವಶ್ಯಕ ಏಳು ವಸ್ತುಗಳಲ್ಲಿ  (ಉರುವಲು, ಅಕ್ಕಿ, ಎಣ್ಣೆ, ಉಪ್ಪು, ಸಾಂಬಾರು, ವಿನೆಗರ್‌ ಮತ್ತು ಚಹಾ) ಚಹಾ ಕೂಡ ಒಂದು. ಚಹಾದ ಬಳಕೆ ಆರಂಭಕ್ಕೆ ಸಂಬಂಧಿಸಿದಂತೆ ಚೀನಾದಲ್ಲಿ ಕಥೆಯೊಂದು ಚಾಲ್ತಿಯಲ್ಲಿದೆ.

ಅದು ಹೀಗಿದೆ: ಕ್ರಿ.ಪೂ 2737ರಲ್ಲಿ ಚಕ್ರವರ್ತಿ ಶೆನ್‌ ನಂಗ್‌, ಕೆಮೆಲಿಯ ಜಾತಿಗೆ ಸೇರಿದ ಮರದ ನೆರಳಿನಲ್ಲಿ ಕುಳಿತು ಬಿಸಿ ನೀರು ಕುಡಿಯುತ್ತಿದ್ದಾಗ ಎಲೆಯೊಂದು ನೀರ ಕಪ್‌ಗೆ ಬಿತ್ತು. ಆಗ ನೀರಿನ ಬಣ್ಣ ಬದಲಾಯಿತು, ಸುವಾಸನೆಯೂ ಬಂತು. ಕಾಣಲು ಆಕರ್ಷಕವಾಗಿದ್ದ ಆ ನೀರಿನ ರುಚಿಯನ್ನು  ಪರೀಕ್ಷಿಸಿದ. ಅದರ ರುಚಿ ಅವನಿಗೆ ವಿಶಿಷ್ಟ ಎನಿಸಿತು.

ಚಹಾ ಅಧಿಕೃತವಾಗಿ ಬಳಕೆಗೆ ಬಂದಿದ್ದು ನೈರುತ್ಯ ಚೀನಾದಲ್ಲಿ. ಶಾಂಗ್‌ ಆಡಳಿತ ವಂಶದ ಕಾಲದಲ್ಲಿ (ಕ್ರಿ.ಪೂ 1750–ಕ್ರಿ.ಪೂ 1027) ಇದು ಪ್ರಚಾರಕ್ಕೆ ಬಂತು. ಆರಂಭದಲ್ಲಿ ಔಷಧಿಯ ಉದ್ದೇಶಕ್ಕೆ ಇದನ್ನು ಬಳಸಲಾಗುತ್ತಿತ್ತು. ಪುರಾತನ ಚೀನಾದಲ್ಲಿ ಇದನ್ನು ಔಷಧೀಯ ಪೇಯವನ್ನಾಗಿ ಬಳಸುತ್ತಿದ್ದರು ಎಂಬುದಕ್ಕೆ ಲಿಖಿತ ದಾಖಲೆಗಳೂ ಸಿಗುತ್ತವೆ. ಕ್ರಿ.ಶ 3ನೇ ಶತಮಾನದಲ್ಲಿ ಹುವಾ ಟುವೊ ಎಂಬಾತ ತನ್ನ ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಿದ್ದಾನೆ.

ಚೀನಾದಿಂದಾಗಿ ಏಷ್ಯಾ ಖಂಡದ ಇತರ ರಾಷ್ಟ್ರಗಳಿಗೆ ಚಹಾ ಬೇಗ ಹರಡಿತು. ಪ್ರಪಂಚದ ಇತರ ಭಾಗಗಳಿಗೆ ಟೀಯ ಪರಿಚಯವಾಗಿದ್ದು 16ನೇ ಶತಮಾನದಲ್ಲಿ. ಪೋರ್ಚುಗೀಸ್‌ನ ಧರ್ಮಗುರುಗಳು ಮತ್ತು ವ್ಯಾಪಾರಿಗಳಿಗೆ ಚೀನಾದಲ್ಲಿ ಇದನ್ನು ನೀಡಲಾಯಿತು. ನಂತರ ಇವರು ಚಹಾದ ಸ್ವಾದವನ್ನು ಯುರೋಪಿನಾದ್ಯಂತ ಪಸರಿಸಿದರು.

1638ರಲ್ಲಿ ರಷ್ಯಾಕ್ಕೆ ಇದರ ಪರಿಚಯವಾಯಿತು. ಚೀನಾದಲ್ಲಿ ಆ ವೇಳೆಗಾಗಲೇ ವಾಣಿಜ್ಯ ಉದ್ದೇಶಕ್ಕೆ ಚಹಾ ಗಿಡಗಳನ್ನು ಬೆಳೆಯಲಾಗುತ್ತಿತ್ತು. ಚಹಾವನ್ನು ಖರೀದಿಸುವುದಕ್ಕಾಗಿ ರಷ್ಯಾ ಚೀನಾದೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತು. ಚಹಾಕ್ಕೆ ಜನಪ್ರಿಯತೆಯನ್ನು ತಂದುಕೊಟ್ಟವರು ಬ್ರಿಟಿಷರು. 17ನೇ ಶತಮಾನದಲ್ಲಿ ಚಹಾ ಬ್ರಿಟನ್‌ಗೆ ಕಾಲಿಟ್ಟಿತು. 1662ರ ಹೊತ್ತಿಗೆ ಚಹಾ ಉಪಹಾರದೊಂದಿಗೆ ಸೇವಿಸುವ ಪಾನೀಯವಾಗಿ ಬದಲಾಯಿತು. ಮೇಲ್ವರ್ಗದವರೇ ಹೆಚ್ಚಾಗಿ ಚಹಾ ಸೇವಿಸುತ್ತಿದ್ದರು.

ಭಾರತದಲ್ಲಿ...
ನಮ್ಮ ದೇಶದಲ್ಲೂ ಚಹಾ ಪ್ರಿಯರ ಸಂಖ್ಯೆ ಕಡಿಮೆ ಏನಲ್ಲ. ವಿಶ್ವದ ಚಹಾ ಉತ್ಪಾದಕ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಕ್ರಿ.ಪೂ 750ರ ಅವಧಿಯಲ್ಲೇ ಇಲ್ಲಿನ ಜನ ಚಹಾ ಸೇವಿಸುತ್ತಿದ್ದರು ಎಂದು ಹೇಳುತ್ತದೆ ಇತಿಹಾಸ.

ದೇಶದ ಈಶಾನ್ಯ ಭಾಗದಲ್ಲಿದ್ದ ನೀಲಗಿರಿ ಬೆಟ್ಟಗಳಲ್ಲಿ ಚಹಾವನ್ನು ಹೆಚ್ಚಾಗಿ ಬೆಳೆಸಲಾಗುತ್ತಿತ್ತು. ಆ ಭಾಗದ ಸ್ಥಳೀಯ ಜನರು ಚಹಾ ಗಿಡದಿಂದ ಎಲೆಯನ್ನು ಕಿತ್ತು ನೀರಿಗೆ ಹಾಕಿ ಕುದಿಸಿ ಚಹಾ ಮಾಡುತ್ತಿದ್ದರಂತೆ. ವಿವಿಧ ರೀತಿಯ ಚಹಾವನ್ನು ತಯಾರಿಸುತ್ತಿದ್ದರು. ಆ ಕಾಲದಲ್ಲಿಯೇ ಡಾರ್ಜಿಲಿಂಗ್‌ ಚಹಾ ಜನಪ್ರಿಯವಾಗಿತ್ತು.

16ನೇ ಶತಮಾನದಲ್ಲಿ ಇಲ್ಲಿನ ಜನರು ಚಹಾ ಎಲೆ, ಬೆಳ್ಳುಳ್ಳಿ ಮತ್ತು ಎಣ್ಣೆಯನ್ನು ಬಳಸಿ ವಿಶಿಷ್ಟ ಆಹಾರವನ್ನು ಸಿದ್ಧಪಡಿಸುತ್ತಿದ್ದರು. ಭಾರತದಲ್ಲೂ ಇದು ಔಷಧೀಯ ಸಸ್ಯವಾಗಿತ್ತು. ಬ್ರಿಟಿಷರ ಆಳ್ವಿಕೆ ಆರಂಭವಾದ ಬಳಿಕ ಚಹಾ ಬೆಳೆಗೆ ಅವರು ಹೆಚ್ಚು ಒತ್ತು ನೀಡಿದರು. ಚಹಾ ಬೆಳೆಯಲ್ಲಿ ಚೀನಾದ ಏಕಸ್ವಾಮ್ಯವನ್ನು ಮುರಿಯಲು ಈಸ್ಟ್‌ ಇಂಡಿಯಾ ಕಂಪೆನಿಯು 19ನೇ ಶತಮಾನದಲ್ಲಿ ಅಸ್ಸಾಂನಲ್ಲಿ  ತೋಟವನ್ನು  ಬೆಳೆಸಿತು.

1920ರವರೆಗೆ ಚಹಾ ಭಾರತದಲ್ಲಿ ಅಷ್ಟೇನು ಜನಪ್ರಿಯವಾಗಿರಲಿಲ್ಲ. ಭಾರತೀಯ ಚಹಾ ಮಂಡಳಿಯು ಚಹಾದ ಬಗ್ಗೆ ಹೆಚ್ಚು ಹೆಚ್ಚು ಜಾಹೀರಾತುಗಳನ್ನು ನೀಡಿ ಅದರ ಸೇವನೆಗೆ ಉತ್ತೇಜನ ನೀಡಿತು. ನಂತರವಷ್ಟೇ ಸಾಮಾನ್ಯ ಜನರ ನಡುವೆ ಇದು ಜನಪ್ರಿಯವಾಯಿತು.

ಈಗ ಮಾರುಕಟ್ಟೆಯಲ್ಲಿ ನೂರಕ್ಕೂ ಹೆಚ್ಚು ಬಗೆಯ ಚಹಾ ಲಭ್ಯವಿದೆ. ಇದರಲ್ಲಿ ಬಹುತೇಕ ಟೀ ಬಗೆಯನ್ನು ನಾವು ಕಂಡಿಲ್ಲ, ಕೇಳಿಲ್ಲ. ಈಗೀಗ ಚಹಾ ಗಿಡ ಮಾತ್ರವಲ್ಲದೇ ಬೇರೆ ಸಸ್ಯ ಜನ್ಯ ಉತ್ಪನ್ನಗಳಿಂದಲೂ ಟೀ ತಯಾರಿಸಲಾಗುತ್ತದೆ. ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಅಡಿಕೆ ಚಹಾ ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ನೈಸರ್ಗಿಕವಾಗಿ ಲಭ್ಯವಿದ್ದ ಸಸ್ಯವೊಂದು ವಾಣಿಜ್ಯ ಬೆಳೆಯಾಗಿ ಜಗತ್ತಿನಾದ್ಯಂತ ಹರಡಿ ಕೋಟ್ಯಂತರ ಜನರ ಜೀವನದ ಭಾಗವಾಗಿ ಬದಲಾಗುವ ಕಲ್ಪನೆಯೇ ಊಹೆಗೆ ನಿಲುಕದ್ದು. ಆದರೆ ಚಹಾದ ವಿಷಯದಲ್ಲಿ ಅದು ನಿಜವಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT