ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಹೈದರ ಹೆಜ್ಜೆ ಗೆಜ್ಜೆಯ ನಂಟು

Last Updated 21 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರೋಹಿತ್ ಲಹಕೆ ಸೈಬರ್ ಸೆಂಟರ್‌ನ ಕೆಲಸವನ್ನು ಸ್ನೇಹಿತನೊಬ್ಬನಿಗೆ ಹಚ್ಚಿ ಆತುರಾತುರದಿ ತಯಾಬ್ ಖಾನ್‌ನ ತಳ್ಳುಗಾಡಿಯತ್ತ ಬರುತ್ತಾನೆ. ಖಾನ್ ಇನ್ನೂ ಅಲ್ಲೇ ಇದ್ದಾನೆ.

‘ಏ ತೆಂಗಿನ್ ಕಾಯ್ ಮಾರಿದ್ ಸಾಕ್ ಬಾರೋ’ ಎಂದು ದೂರದಿಂದ ಕೂಗು ಹಾಕುವನು. ‘ಆ ರಹಾ ಹ್ಞೂ’ ತಯಾಬ್ ಖಾನ್ ಗಡಿಬಿಡಿಯಲ್ಲಿ ಹೊರಡಲು ಅಣಿಯಾಗುತ್ತಾನೆ.

‘ಏ ಕಿದರ್ ಜಾ ರಹೇ ಹೋ’ ಅವನಪ್ಪ ತುಸು ಕೋಪದಲ್ಲಿ ರೇಗುತ್ತಾರೆ. ‘ಅಭೀ ಆವೂಂಗಾ’ ಎಂದು ತಯಾಬ್ ರೋಹಿತ್ ಜತೆಗೂಡಿ ಎತ್ತಲೋ ಓಡುತ್ತಾನೆ. ಇತ್ತ ಅವರಪ್ಪ ಸರಿಯಾಗಿ ಕೆಲಸ ಕಾರ್ಯ ಮಾಡದೆ ಮಗ ಕಾಲಹರಣ ಮಾಡುತ್ತಿದ್ದಾನೆಂದು ಗೊಣಗುತ್ತಾರೆ. ಕಾರಣ ತಯಾಬ್ ಹೋದರೆ ಮರುದಿನ ಮುಂಜಾವೋ, ಮಧ್ಯಾಹ್ನವೋ, ಯಾವಾಗ ವಾಪಸ್ ಆಗುತ್ತಾನೆ ಗೊತ್ತಿಲ್ಲ.

ರೋಹಿತ್ ಮನೆಯಲ್ಲಿಯೂ ಅವನ ಅಮ್ಮನದೂ ಅದೇ ದೂರು. ಆದರೆ ‘ನೋಡುತ್ತಿರು ಒಂದು ದಿನ ಸಾಧಿಸುತ್ತೇನೆ. ಆಗ ನೀನೇ ಮೆಚ್ಚುತ್ತೀಯ’ ಎಂದು ಅಮ್ಮನಿಗೆ ಹಾರಿಕೆ ಉತ್ತರ ಕೊಟ್ಟು ಅಲ್ಲಿಂದ ಹಾರಿದ್ದಾನೆ. ದಿನವಿಡೀ ಮೆಕಾನಿಕಲ್ ಕೆಲಸ ಮಾಡುತ್ತಿದ್ದ ಯಲ್ಲೇಶ, ಅಂಗಡಿ ಮಾಲೀಕನ ಮನ ಒಲಿಸಿ, ಒಂದೆರಡು ಗಂಟೆ ವಿನಾಯಿತಿ ಪಡೆದಿದ್ದಾನೆ. ಇವನೂ ತಯಾಬ್, ರೋಹಿತ್ ಹಿಡಿದ ದಾರಿಯನ್ನೇ ಹಿಡಿಯುತ್ತಾನೆ.

ಐಐಟಿ ಮುಗಿಸಿ ಖಾಸಗಿ ಕಾಲೇಜಿನಲ್ಲಿ ಸಣ್ಣ ನೌಕರಿ ಹಿಡಿದ ಮಹೇಶ್ ಕಟಬುಗೋಳ್, ತನ್ನ ಪಾಲಿನ ಕೆಲಸ ಮುಗಿಸಿ, ಎದ್ದೆನೋ ಬಿದ್ದೆನೋ ಎಂದು ಓಡುತ್ತಾನೆ.

ಇವರೆಲ್ಲರೂ ಧಾವಂತದಲ್ಲಿ ಓಡುವುದು ಬೆಳಗಾವಿಯ ಅಂಬೇಡ್ಕರ್ ಭವನಕ್ಕೆ. ಅದಾಗಲೇ ಆದರ್ಶ, ರಾಜ್ ಇಂಗಳೆ, ಓಂಕಾರ್ ಇಂಗಳೆ, ಶ್ರವಣ ನಾಗರಾಳಿ ಹಾಜರಾಗಿದ್ದಾರೆ. ಇವರೂ ಅಪ್ಪ ಅಮ್ಮನ ಮನ ಒಲಿಸಿ ಬಂದಿದ್ದಾರೆ. ಹಾಗೂ ಗೊಣಗಿದರೆ, ‘ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಸಾಕಲ್ಲವೋ. ಚೆನ್ನಾಗಿ ಓದುತ್ತೇವೆ’ ಎಂದು ವಾಗ್ದಾನ ನೀಡಿದ್ದಾರೆ. ಇವರೆಲ್ಲರೂ ನಿತ್ಯದ ಕೆಲಸ, ಓದನ್ನು ಮೊಟಕುಗೊಳಿಸಿ ಬರುವುದು ಕಿರಣ್ ಕಾಂಬ್ಳೆಯನ್ನು ನೋಡಲೆಂದು.

ಕಿರಣ್ ಕಾಂಬ್ಳೆ ಜೊತೆಗೆ ಉಳಿದ ಒಂಬತ್ತು ಜನ ಪ್ರತಿನಿತ್ಯ ನೃತ್ಯ ಅಭ್ಯಸಿಸುತ್ತಾರೆ. ಕಿರಣ್ ಇವರ ತಂಡದ ನಾಯಕ. ಮೀನು ಮಾರುವುದು, ಆಫೀಸಿನಲ್ಲಿ ಕಸ ತೆಗೆಯುವುದು ಇವರ ಕಾಯಕ. ಇವರು ಆದಷ್ಟು ಬೇಗ ಕೆಲಸ ಮುಗಿಸಿ ಹಾಜರಿರುತ್ತಾರೆ. ಮೀನು ಮಾರಿ ಅಂಬೇಡ್ಕರ್ ಭವನದತ್ತ ಬರುವಾಗ ದಾರಿಯುದ್ದಕ್ಕೂ ಅವರ ಇಡೀ ದೇಹ ತಾಳ-ಮೇಳಕ್ಕೆ ತಕ್ಕ ಹೆಜ್ಜೆ ಯಾವುದೆಂದು ಯೋಚಿಸುತ್ತಿರುತ್ತದೆ.

ಇವರ ತಂಡ ಹುಟ್ಟಿದ್ದು ಅಚಾನಕ್ಕಾಗಿ! ಕಿರಣ್‌ಗೆ ನೃತ್ಯವೆಂದರೆ ಎಲ್ಲಿಲ್ಲದ ಗೀಳು. ಅವರೊಳಗೇ ನೃತ್ಯ ಮಿಳಿತಗೊಂಡಂತೆ ಭಾಸವಾಗುತ್ತದೆ. ಗಣೇಶನ ಉತ್ಸವ ಕಾರ್ಯಕ್ರಮದಲ್ಲೋ, ರಾಜ್ಯೋತ್ಸವ ಕಾರ್ಯಕ್ರಮದಲ್ಲೋ, ಇಲ್ಲವೇ ಇನ್ನಾವುದೋ ಊರಿನ ಉತ್ಸವದಲ್ಲಿ ಕಿರಣ್ ನೃತ್ಯ ಪ್ರದರ್ಶನ ಕಂಡು ಅವರಂತೇ ನೃತ್ಯ ಕಲಿಯಬೇಕೆಂಬ ಆಸೆಪಟ್ಟು ಅವರೊಟ್ಟಿಗೆ ಉಳಿದವರೂ ಸೇರಿಕೊಂಡರು. ‘ಗಣಪತಿ ಹಬ್ಬ ಇತ್‌ರೀ, ಅಲ್ಲಿ ಕಿರಣ್ ಸರ್ ಡಾನ್ಸ್ ಮಾಡ್ತಿದ್ರು. ಭಾಳಾ ಹಿಡಿಸ್ತು. ನನಗೂ ಕುಣಿತ ಅಂದ್ರೆ ಇಷ್ಟ. ಹೋಗಿ ಮಾತಾಡಿಸಿದೆ, ನನಗೂ ಕುಣಿತ ಕಲಿಸ್ತೀನಿ ಅಂದ್ರು. ಯಾವ ಫೀಸು ತಗೊಳಿಲ್ಲರೀ. ಫ್ರೀಯಾಗಿ ಹೇಳಿಕೊಟ್ರು’ ಎನ್ನುತ್ತಾರೆ ಮಹೇಶ್ ಕಟಬುಗೋಳ್.

‘ಒಂದ್‌ ಕಡೆ ಡಾನ್ಸ್ ಮಾಡ್ತಿದ್ರು. ಹೋಗಿ ಮಾತಾಡಿಸಿದೆ. ನನಗೂ ಡಾನ್ಸ್ ಇಷ್ಟ ಅಂದೆ. ಬಾ ಸೇರ್ಕೊ ಅಂದ್ರು’ ಎಂದು ಕಿರಣ್‌ರ ತಂಡ ಸೇರಿದ್ದು ಹೇಗೆಂದು ವಿವರಿಸುತ್ತಾರೆ ಯಲ್ಲೇಶ್.

ರಾಜ್, ಓಂಕಾರ್, ಶ್ರವಣ ಎಂಟು –ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. ಶ್ರವಣ ಇಡೀ ತಂಡದಲ್ಲಿರುವ ಏಕೈಕ ಹುಡುಗಿ. ಬಿಡುವಿನ ವೇಳೆಯಲ್ಲಿ ಎಲ್ಲರೂ ಸೇರಿ ಅದೇ ಅಂಬೇಡ್ಕರ್ ಭವನದಲ್ಲಿ ನೃತ್ಯ ಅಭ್ಯಾಸ ಮಾಡುತ್ತಿರುತ್ತಾರೆ. ಈ ತಂಡಕ್ಕೆ ಮೂರರ ಪ್ರಾಯ. ಕಿರಣ್‌ರ ಪ್ರತಿಭೆ ಮೆಚ್ಚಿ ಸ್ಥಳೀಯರು ಭವನದ ಒಂದು ಕೋಣೆಯನ್ನು ಇವರ  ನೃತ್ಯಾಭ್ಯಾಸಕ್ಕೆ ಬಿಟ್ಟುಕೊಟ್ಟಿದ್ದಾರೆ.

24ರ ಹರೆಯದ ಕಿರಣ್ ಓದಿದ್ದು, ದ್ವಿತೀಯ ಪಿಯುಸಿ. ಇವರ ಅಮ್ಮ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ‘ಐದನೇ ಕ್ಲಾಸ್ ಓದುವಾಗಲೇ ಕೆಲಸಕ್ಕೆ ಹೋಗಲು ಶುರು ಮಾಡಿದೆ. ಶಾಲೆಗೂ ಹೋಗುತ್ತಿದ್ದೆ. ಕೆಲಸವನ್ನೂ ಮಾಡುತ್ತಿದ್ದೆ. ಎಂಟನೇ ಕ್ಲಾಸ್‌ಗೆ ಬಂದ ಮೇಲೆ ಅಮ್ಮನನ್ನು ಯಾವ ಕೆಲಸಕ್ಕೂ ಕಳುಹಿಸಲಿಲ್ಲ. ಬಡತನ ಇತ್ತು, ದುಡಿಯಲೇಬೇಕಿತ್ತು. ಹೇಗೋ ಪಿಯುಸಿ ತನಕ ಓದಿದೆ’ ಎನ್ನುತ್ತಾರೆ ಕಿರಣ್.

ಕಿರಣ್‌ಗೆ ನೃತ್ಯದ ಕುರಿತು ಆಸಕ್ತಿ ಮೂಡಿದ್ದು ಹೇಗೆಂದು ಕೇಳಿದರೆ, ‘ಅದೇನೋ ಗೊತ್ತಿಲ್ಲ ಚಿಕ್ಕಂದಿನಿಂದಲೂ ಡಾನ್ಸ್ ಅಂದರೆ ಇಷ್ಟ. ಮನೆಯಲ್ಲಿ ಡಾನ್ಸ್ ಮಾಡಿದರೆ ಅಮ್ಮ ಬೈಯುತ್ತಿದ್ದರು. ನಮ್ಮದು ಪುಟ್ಟ ಮನೆ, ಕಿಷ್ಕಿಂದೆಯಂಥ ಕೋಣೆ. ಸೌದೆ, ಅಡುಗೆ ಸಾಮಾನುಗಳನ್ನು ಕೋಣೆಯ ಹೊರಗಿಟ್ಟು ನೃತ್ಯ ಅಭ್ಯಾಸ ಮಾಡಬೇಕಿತ್ತು. ಜೊತೆಗೆ ಮನೆಯಲ್ಲಿ ಟಿ.ವಿ ಇರಲಿ, ಟೇಪ್ ರೆಕಾರ್ಡರ್ ಸಹ ಇರಲಿಲ್ಲ.

ಸ್ನೇಹಿತರ ಮನೆಯ ಟಿ.ವಿ, ಅಕ್ಕ-ಪಕ್ಕದ ಮನೆಯ ಟಿ.ವಿಯಲ್ಲಿ ನೃತ್ಯ ಕಾರ್ಯಕ್ರಮ ನೋಡಿ ಬಂದು, ಮನೆಯಲ್ಲಿ ಅದನ್ನು ಅಭ್ಯಸಿಸಲು ಪ್ರಯತ್ನಿಸುತ್ತಿದ್ದೆ. ಆಗೆಲ್ಲ ಶಾಲೆಯಲ್ಲಿ ಯಾವ ಕಾರ್ಯಕ್ರಮವೂ ಇರುತ್ತಿರಲಿಲ್ಲ. ಶಾಲೆಯ ಮೇಡಂ ಹತ್ತಿರ ಕಾರ್ಯಕ್ರಮ ಇಡಿ, ಕುಣಿಯುತ್ತೇನೆ ಎಂದು ಕೇಳುತ್ತಿದ್ದೆ’ ಎಂದು ಕಿರಣ್ ನೆನಪಿಸಿಕೊಳ್ಳುತ್ತಾರೆ.

ಒಬ್ಬೊಬ್ಬರಾಗಿ ಇವರ ಸಂಗ ಸೇರಿದ್ದಾಯಿತು. ತಂಡ ರೂಪುಗೊಂಡಿತು. ಹಬ್ಬ–ಹರಿದಿನ, ಉತ್ಸವಗಳಲ್ಲಿ ಆಗಾಗ ಇವರ ತಂಡ ನೃತ್ಯ ಪ್ರದರ್ಶನ ನೀಡುತ್ತಿತ್ತು. ಒಂದು ದಿನ ‘ಡಾನ್ಸ್ ಕರ್ನಾಟಕ ಡಾನ್ಸ್’ ಆಡಿಷನ್ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ಕಿರಣ್ ತಮ್ಮ ತಂಡದೊಂದಿಗೆ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದರು. ಅಹರ್ನಿಶಿ ನೃತ್ಯಾಭ್ಯಾಸ ಮಾಡಿದರು. ಹುಬ್ಬಳ್ಳಿಯಲ್ಲಿ ಆಡಿಷನ್ ನೀಡಿದರು. ಮುಂದಿನ ಹಂತಕ್ಕೆ ಆಯ್ಕೆಯಾಗುವ ವಿಶ್ವಾಸದಿಂದ ಕಾದರು.

ಇವರೊಟ್ಟಿಗೆ ಪ್ರದರ್ಶನ ನೀಡಿದ ಇತರ ತಂಡಗಳಿಗೆ ಮೆಗಾ ಆಡಿಷನ್‌ಗಾಗಿ ಕರೆ ಬಂದರೂ ಇವರಿಗೆ ಯಾವ ಕರೆಯೂ ಬರಲಿಲ್ಲ. ಆಗ ತಂಡದ ಪ್ರತಿಯೊಬ್ಬರೂ ಚಡಪಡಿಸಿದರು. ಉಳಿದ ತಂಡದವರನ್ನು ವಿಚಾರಿಸಿದರು. ಕಾರ್ಯಕ್ರಮಕ್ಕೆ ಸಂಬಂಧ ಪಟ್ಟವರನ್ನೂ ಒಂದು ಮಾತು ಕೇಳಿದರು. ‘ಇನ್ನೂ ಫೋನ್ ಬಂದಿಲ್ವೆ, ಬರುತ್ತೆ ಕಾಯಿರಿ. ಡೋಂಟ್ ವರಿ’ ಎಂಬ ಉತ್ತರ ಬಂದಿತ್ತು.

ಆ ಇಡೀ ದಿನ ಅಭ್ಯಾಸ ಮಾಡದೆ ನಡುವೆ ಫೋನ್ ಇಟ್ಟು, ಸುತ್ತ ವೃತ್ತಾಕಾರದಲ್ಲಿ ಕುಳಿತು, ಕರೆಗಾಗಿ ಕಾದರು. ಯಾವುದೇ ಕರೆ ಬಂದರೂ ಮೆಗಾ ಆಡಿಷನ್‌ಗೆ ಕರೆ ಎಂದೇ ತಿಳಿಯುತ್ತಿದ್ದರು. ಅನಾಮಧೇಯ ಕರೆ ಬರಲಿ, ಮತ್ಯಾರೇ ಕರೆ ಮಾಡಲಿ ಕಾತರದಿಂದ ಕರೆ ಸ್ವೀಕರಿಸುತ್ತಿದ್ದರು. ಸಂಜೆವರೆಗೂ ಹೀಗೆ ಮುಂದುವರೆಯಿತು. ಮನಸ್ಸಿನಲ್ಲಿ ಅದೆಂಥದೋ ಕಾತರ, ಭಯ, ಮೂಲೆಯಲ್ಲೆಲ್ಲೋ ಸಣ್ಣ ವಿಶ್ವಾಸದ ಎಳೆ...

ಸಂಜೆ ಹೊತ್ತಿಗೆ ಬಂದ ಕರೆ ಮೆಗಾ ಆಡಿಷನ್‌ಗೆ ಆಮಂತ್ರಣ ನೀಡಿತ್ತು. ಸೊರಗಿದ ಮುಖಗಳಲ್ಲಿ ಉತ್ಸಾಹ ಒತ್ತರಿಸಿ ಬಂತು. ಕೂಡಲೇ ಎದ್ದು ಮತ್ತೆ ಅಭ್ಯಾಸದಲ್ಲಿ ನಿರತರಾದರು. ಬೆಂಗಳೂರಿನಲ್ಲಿ ಮೆಗಾ ಆಡಿಷನ್. ಬೆಳಗಾವಿಯಿಂದ ಬೆಂಗಳೂರು ತಲುಪಲು ಬೇಕಾದ ಹಣವನ್ನು ಇತರರ ಸಹಾಯದಿಂದ ಹೊಂದಿಸಿ ಹೊರಡಲಣಿಯಾದರು. ತಂಡದ ಪ್ರತಿಯೊಬ್ಬರೂ ಮೊದಲ ಬಾರಿಗೆ ಬೆಂಗಳೂರು ನೋಡುತ್ತಿದ್ದಾರೆ. ಜೊತೆಗೆ ಮೊದಲ ಬಾರಿಗೆ ಬೃಹತ್ ವೇದಿಕೆ ಮೇಲೆ ಪ್ರದರ್ಶನ.

‘ಊರಿನ ಉತ್ಸವಗಳಲ್ಲಿ, ಸಣ್ಣ–ಪುಟ್ಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆವು. ಆದರೆ ಅಲ್ಲಿ ಸಾಗರದಂತೆ ನೆರೆದ ಜನರೆದುರು, ದೊಡ್ಡ ವೇದಿಕೆ ಹತ್ತುವಾಗ ಕೈ-ಕಾಲುಗಳಲ್ಲಿ ನಡುಕ ಹುಟ್ಟಿತು. ಕಿರಣ್ ಸರ್ ಧೈರ್ಯ ಹೇಳಿದರು. ಮ್ಯೂಸಿಕ್ ಹಾಕುತ್ತಿದ್ದಂತೆ ವಿಶ್ವಾಸದಿಂದ ನೃತ್ಯ ಮಾಡಿದೆವು’ ಎನ್ನುತ್ತಾನೆ ಆದರ್ಶ.
ಕಾರ್ಯಕ್ರಮಕ್ಕೆ ಆಯ್ಕೆಯಾದ ನಂತರ ತಂಡದ ಪ್ರತಿಯೊಬ್ಬರೂ ಅಹರ್ನಿಶಿ ದುಡಿದರು. ದಿನಕ್ಕೆ ಒಂದೆರಡು ಗಂಟೆಗಳ ಕಾಲ ನಿದ್ರೆಯಷ್ಟೇ. ‘ಬೆಳಗಾವಿ ಎಕ್ಸ್‌ಪ್ರೆಸ್’ ಡೇಂಜರ್ ಜೋನ್‌ಗೆ ಬಂದಾಗಲೆಲ್ಲ ಮತ್ತೆ ಫೀನಿಕ್ಸ್‌ನಂತೆ ಪುಟಿದೇಳುವ ಅವರ ಆತ್ಮವಿಶ್ವಾಸ ನಿಜಕ್ಕೂ ಅದ್ಭುತ!

ಪ್ರತಿವಾರ ಹೊಸ ಪರಿಕಲ್ಪನೆಯೊಂದಿಗೆ ವೇದಿಕೆಯಲ್ಲಿ ಸಜ್ಜಾಗಿ ನಿಲ್ಲಬೇಕು. ಕಿರಣ್ ಮೂರ್ನಾಲ್ಕು ತಿಂಗಳು ತಪಸ್ಸೆಂಬಂತೆ ತಮ್ಮನ್ನು ತೊಡಗಿಸಿಕೊಂಡರು. ‘ನಮ್ಮ ತಂಡದಲ್ಲಿ ಪ್ರತಿಯೊಬ್ಬರೂ ಶ್ರಮಿಸಿದ್ದಾರೆ, ನಾವೆಲ್ಲರೂ ಹೆಚ್ಚೆಂದರೆ ದಿನಕ್ಕೆ ಒಂದೆರಡು ಗಂಟೆ ನಿದ್ರೆ ಮಾಡುತ್ತಿದ್ದೆವು. ನಿದ್ರೆಯಲ್ಲೂ ಕೈ-ಕಾಲು ಆಡಿಸುತ್ತ ಕನವರಿಸುತ್ತಿದ್ದೆವು’ ಎನ್ನುತ್ತಾರೆ ಕಿರಣ್.

‘ಟಿ.ವಿ ಶೋ ಎಂದರೇನು ಗೊತ್ತಿರಲಿಲ್ಲ. ಡಾನ್ಸ್‌ ತರಗತಿಗೆ ಹೋಗಿ ನೃತ್ಯ ಕಲಿತವರಿದ್ದರು. ಅವರ ನಡುವೆ ಗೆಲ್ಲುವುದು ಕಷ್ಟ ಎಂದು ಕೆಲವೊಮ್ಮೆ ಅನ್ನಿಸಿದ್ದುಂಟು. ಕಿರಣ್ ಸರ್ ನಮ್ಮಿಂದ ಆಗುತ್ತದೆ ಮಾಡೋಣ ಎನ್ನುತ್ತಿದ್ದರು. ಅವರು ಹೇಳಿದ ಹಾಗೆ ಶೋ ಗೆದ್ದೆವು’ ಎಂದು ಗಣೇಶ್ ಹೇಳುವಾಗ ಅಂದುಕೊಂಡಿದ್ದನ್ನು ಸಾಧಿಸಿದ್ದೇವೆಂಬ ಭಾವ ಅವರಲ್ಲಿತ್ತು.

ನಮ್ಮ ತಂಡದವರ ಸಂಪೂರ್ಣ ಸಹಕಾರ ಇಲ್ಲದಿದ್ದರೆ ಏನೂ ಆಗುತ್ತಿರಲಿಲ್ಲ ಎಂದು ಕಿರಣ್ ಹೇಳುತ್ತಾರೆ. ಕಿರಣ್ ಸರ್ ಅವರಿಂದಲೇ ಈ ಹಂತ ತಲುಪಿದೆವೆಂದು ತಂಡದ ಸದಸ್ಯರು ಗುರುವಿಗೆ ಸಲಾಮ್ ಎನ್ನುತ್ತಾರೆ. 

‘ಕೆಲಸ ಕಾರ್ಯ ಬಿಟ್‌ ಬೆಳ್ಳಂಬೆಳಿಗ್ಗೆ ಕುಣಿತಾ ಅಂತ ಶುರು ಮಾಡ್ತಿದ್ದ. ಇದರಿಂದ ಯಾರಿಗೆ ಪ್ರಯೋಜನ ಅಂತ ಬೈತಿದ್ದೆ, ಹೊಡೆದಿದ್ದೆ. ನೋಡು ಮುಂದೊಂದಿನ ಅನ್ನುತ್ತಿದ್ದ. ಈಗ ಭಾಳ ಖುಷಿ ಆಗೈತಿ’ ಎನ್ನುವಾಗ ಕಿರಣ್‌ರ ಅಮ್ಮ ನಿರ್ಮಲ ಅವರ ಕಣ್ಣಾಲಿಗಳು ಒದ್ದೆಯಾದವು.

ರೋಹಿತ್, ಗಣೇಶ, ಯಲ್ಲೇಶ, ಮಹೇಶ ಇವರೆಲ್ಲರೂ ಅರ್ಧಕ್ಕೇ ಶಾಲೆ ಬಿಟ್ಟವರು. ಕಾರಣ ಮನೆಯ ಆರ್ಥಿಕ ಪರಿಸ್ಥಿತಿ. ಮೂರ್ನಾಲ್ಕು ಸಾವಿರ ಸಂಬಳ ದುಡಿಯುವ ಇವರೊಳಗಿದ್ದ ತುಡಿತವೊಂದೇ ಆಸರೆಯಾಗಿತ್ತು.

‘ಬೆಳಗಾವಿ ಎಕ್ಸ್‌ಪ್ರೆಸ್’ ‘ಡಾನ್ಸ್ ಕರ್ನಾಟಕ ಡಾನ್ಸ್’ ಸ್ಪರ್ಧೆ ಗೆದ್ದಾಗ ಬೆಳಗಾವಿಯಲ್ಲಿ ಅಕ್ಷರಶಃ ಜಾತ್ರೆಯ ಸಂಭ್ರಮ! ಮೊದಲ ಬಾರಿಗೆ ಯುವಕರು ಜಿಲ್ಲೆಗೆ ಹೆಸರು ತಂದಿದ್ದಾರೆಂಬ ಸಂತೋಷ. 

ಕಿರಣ್ ಮತ್ತು ತಂಡದವರನ್ನು ಈಗ ಇಡೀ ಕರ್ನಾಟಕ ಗುರುತಿಸುತ್ತಿದೆ. ಹೋದಲ್ಲೆಲ್ಲ ಆಟೋಗ್ರಾಫ್, ಫೋಟೊಗ್ರಾಫ್ ಕೇಳುತ್ತಾರೆ. ಇವರು ಈಗ ಬೆಳಗಾವಿಯಲ್ಲಿ ನೃತ್ಯ ತರಗತಿ ತೆರೆದಿದ್ದಾರೆ. ಶೋ ಮುಗಿದ ಎರಡೇ ವಾರಗಳಲ್ಲಿ ನೃತ್ಯ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನೂರು ಮೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT