ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೇಂಜರ್ ಜೋನ್’ ಎಂಬ ಸ್ವಾನುಭವ

Last Updated 22 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ತಲೆಯಲ್ಲಿ ಸಿನಿಮಾ ಹುಳು ಬಿಟ್ಟುಕೊಂಡು, ಗಾಂಧಿನಗರಕ್ಕೆ ಬಂದು ಛಾಪು ಮೂಡಿಸಿದವರು ಅನೇಕರಿದ್ದಾರೆ. ಆ ಸಾಲಿಗೆ ದೇವರಾಜ್ ಕುಮಾರ್ ಹೊಸ ಸೇರ್ಪಡೆ. ‘ಡೇಂಜರ್ ಜೋನ್’ ಎಂಬ ಹಾರರ್ ಮಿಶ್ರಿತ ಥ್ರಿಲ್ಲರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿರುವ ದೇವರಾಜ್, ಚೊಚ್ಚಲ ಚಿತ್ರದಲ್ಲೇ ಭದ್ರ ನೆಲೆ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

‘ಡೇಂಜರ್ ಜೋನ್’ ಬಹುತೇಕ ಹೊಸಬರ ಚಿತ್ರ. ಸಿನಿಮಾದ ‘ಶ್ರೀಗಂಧ ದೇವತೆ’ ಎಂಬ ಹಾಡು ಬಿಡುಗಡೆಗೆ ಮುಂಚೆಯೇ ಗಮನ ಸೆಳೆದಿದೆ. ಯೂಟ್ಯೂಬ್‌ನಲ್ಲಿ ಹಾಡನ್ನು ಇದುವರೆಗೆ 33 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಈ ಸಂಖ್ಯೆ 25 ಲಕ್ಷ ಮುಟ್ಟಿದ್ದಾಗ ಅದಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಸಂಭ್ರಮ ಹಂಚಿಕೊಂಡಿತ್ತು. ಹಾಡಿನಂತೆ ಚಿತ್ರವೂ ಜನರಿಗೆ ಹಿಡಿಸಲಿದೆ ಎಂಬ ನಂಬಿಕೆ ದೇವರಾಜ್ ಅವರದು.

ಸೊರಬದವರಾದ ದೇವರಾಜ್, ದೂರದರ್ಶನದಲ್ಲಿ ಪ್ರತಿ ಭಾನುವಾರ ಪ್ರಸಾರವಾಗುತ್ತಿದ್ದ ಚಲನಚಿತ್ರಗಳನ್ನು ನೋಡಿ, ಅದರತ್ತ ಆಕರ್ಷಣೆಗೊಂಡು ಬೆಂಗಳೂರು ಬಸ್ಸು ಹತ್ತಿದವರು. ಗಾಂಧಿನಗರದ ಗಲ್ಲಿಗಳಲ್ಲಿ ಚಪ್ಪಲಿ ಹರಿಯುವವರೆಗೆ ಕೆಲಸಕ್ಕಾಗಿ ಅಲೆದಾಡಿ, ಕಡೆಗೆ ಉಪೇಂದ್ರ ನಿರ್ದೇಶನದ ‘H2O’ ಚಿತ್ರದ ಪ್ರೊಡಕ್ಷನ್‌ ತಂಡದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡರು. ನಂತರ ಪೂರಿ ಜಗನ್ನಾಥ್ ಕನ್ನಡದ ‘ಯುವರಾಜ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾಗ, ಆಕಸ್ಮಿಕವಾಗಿ ಅವರಿಗೂ ಸಹಾಯಕನಾಗುವ ಅವಕಾಶ ಸಿಕ್ಕಿತು.

‘ಮಲೆನಾಡಿನವನಾದರೂ ತೆಲುಗು ಗೊತ್ತಿತ್ತು. ಕೆಲ ಪ್ರೊಡಕ್ಷನ್‌ ಹೌಸ್‌ಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾಗ, ಪರಿಚಯಸ್ಥರೊಬ್ಬರು ಬಂದು, ‘ಪೂರಿ ಅವರಿಗೆ ತೆಲುಗು ಬಲ್ಲ ಸಹಾಯಕನೊಬ್ಬ ಬೇಕಾಗಿದ್ದಾನೆ. ನಿನಗೂ ತೆಲುಗು ಗೊತ್ತಲ್ಲ. ಅವರ ಬಳಿ ಬಿಡುತ್ತೇನೆ. ಇದರಿಂದ ನಿನಗೂ ಅನುಕೂಲವಾಗುತ್ತದೆ’ ಎಂದು ಕರೆದೊಯ್ದು ಪರಿಚಯಿಸಿದರು. ಮಾರನೇಯ ದಿನವೇ ಕೆಲಸಕ್ಕೆ ಬರುವಂತೆ ಹೇಳಿದರು’ ಎಂದು ದೇವರಾಜ್ ಪೂರಿ ಜತೆ ಆರಂಭವಾದ ಸಖ್ಯವನ್ನು ನೆನಪಿಸಿಕೊಳ್ಳುತ್ತಾರೆ.

‘ಪೂರಿ ಅವರಿಗೆ ಛತ್ರಿ ಹಿಡಿಯುತ್ತಲೇ ಅವರ ನಿರ್ದೇಶನದ ವರಸೆಯನ್ನು ಗ್ರಹಿಸುತ್ತಿದ್ದೆ. ನಂತರದ ‘ಅಪ್ಪು’ ಸೇರಿದಂತೆ ಮೂರ್ನಾಲ್ಕು ಚಿತ್ರಗಳವರೆಗೆ ಅವರ ಜೊತೆಗಿನ ಪಯಣ ಮುಂದುವರಿಯಿತು. ಆಗಲೇ ನನ್ನಲ್ಲಿ ನಿರ್ದೇಶನದ ಕನಸು ಚಿಗುರೊಡೆದಿದ್ದು. ಅಲ್ಲದೆ, ಸಹಾಯಕನಾಗಿದ್ದಾಗ ಸಿಗುತ್ತಿದ್ದ ಸಂಬಳ ಹೊಟ್ಟೆಪಾಡಿಗೂ ಸಾಕಾಗುತ್ತಿರಲಿಲ್ಲ. ಹಾಗಾಗಿ ಚಿತ್ರರಂಗದಲ್ಲಿ ಯಾವುದಾದರೂ ಒಂದು ಕಸುಬನ್ನು ಮೊದಲು ಕಲಿಯಬೇಕು ಎಂದು ತೀರ್ಮಾನಿಸಿ ಮೇಕಪ್‌ನತ್ತ ಗಮನಹರಿಸಿದೆ’ ಎನ್ನುತ್ತಾರೆ ಅವರು.

ಚಂದನವನದಲ್ಲಿ ಹದಿಮೂರು ವರ್ಷ ಮೇಕಪ್‌ಮ್ಯಾನ್ ಆಗಿ ಅನೇಕ ನಟ–ನಟಿಯರನ್ನು ತೆರೆಯ ಮೇಲೆ ಚೆಂದಗಾಣಿಸಿರುವ ಅವರು, ಮೇಕಪ್ ಜತೆಗೆ ನಿರ್ದೇಶನದ ಕಲೆಗಳನ್ನು ಕಲಿತಿದ್ದಾರೆ. ಅದರ ಫಲವೇ ‘ಡೇಂಜರ್‌ ಜೋನ್’.

ನೈಜ–ಕಾಲ್ಪನಿಕ
‘ಚಿತ್ರದ ಕಥೆ ಹುಟ್ಟಿದ್ದೇ ವಿಚಿತ್ರವಾಗಿದೆ. ಸ್ವತಂತ್ರ ನಿರ್ದೇಶನಕ್ಕೆ ಸಜ್ಜಾಗಿ ಕಥೆಯೊಂದರ ಎಳೆಗಳನ್ನು ಜೋಡಿಸುತ್ತಿದ್ದಾಗ, ಆಗಷ್ಟೆ ಬಿಡುಗಡೆಯಾಗಿದ್ದ ಕನ್ನಡದ ಹಾರರ್ ಚಿತ್ರವೊಂದನ್ನು ವೀಕ್ಷಿಸಿ ಮನೆಗೆ ಬಂದೆ. ಆ ಚಿತ್ರ ನಮ್ಮೂರಿನಲ್ಲಿದ್ದ ದೆವ್ವದ ಪ್ರದೇಶವೊಂದರ ಕಥೆಯನ್ನು ನೆನಪಿಗೆ ತಂದಿತು. ಆಗಲೇ ನಾನೂ ಯಾಕೆ ಒಂದು ಹಾರರ್ ಮಿಶ್ರಿತ ಥ್ರಿಲ್ಲರ್ ಚಿತ್ರ ಮಾಡಬಾರದು ಎಂದು ನಿರ್ಧರಿಸಿದೆ’ ಎಂದು ದೇವರಾಜ್ ಕಥೆ ಹುಟ್ಟಿದ ಬಗೆಯನ್ನು ವಿವರಿಸುತ್ತಾರೆ.

‘ನಮ್ಮೂರಿನ ದೆವ್ವದ ಕಥೆಯ ಎಳೆಯನ್ನಿಟ್ಟುಕೊಂಡೇ ನೈಜತೆ ಹಾಗೂ ಕಾಲ್ಪನಿಕತೆ ಎರಡನ್ನೂ ಸೇರಿಸಿ ಚಿತ್ರಕಥೆ ಬರೆದೆ. ಸ್ನೇಹಿತರಾದ ಸ್ವಾಗತ್ ಗೌಡ ಮತ್ತು ರಾಮು ನನ್ನ ಕನಸಿಗೆ ಬಂಡವಾಳ ಹೂಡಲು ಮುಂದೆ ಬಂದರು’ ಎಂದು ಗೆಳೆಯರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.

‘ಹಾರರ್ ಸಿನಿಮಾ ಎಂದರೆ ಹೀಗೂ ಇರುತ್ತಾ ಎಂದು ಪ್ರೇಕ್ಷಕರು ಉದ್ಗರಿಸುವಂತಹ ಕಥೆ ಇದು. ಕಡೆಯವರೆಗೆ ಕುತೂಹಲ ಕಾಯ್ದುಕೊಳ್ಳುವ ಜತೆಗೆ, ಸಿನಿಮಾ ಮುಗಿದ ಮೇಲೆ ಪ್ರೇಕ್ಷಕರು ಅರೆಕ್ಷಣ ಮೂಕರಾಗುವಂತೆ ಕಾಡುತ್ತದೆ. ಕುತೂಹಲಿ ಯುವ ಪತ್ರಕರ್ತರು ಸುದ್ದಿಯ ಜಾಡು ಹಿಡಿದು ಡೇಂಜರ್ ಜೋನ್‌ಗೆ ಹೋಗುತ್ತಾರೆ. ಅಲ್ಲಿರುವ ದುಷ್ಟಶಕ್ತಿಯಿಂದ ಹೇಗೆ ತಪ್ಪಿಸಿಕೊಂಡು ಬರುತ್ತಾರೆ ಎಂಬುದೇ ಚಿತ್ರದ ಕಥೆ’ ಎಂದು ಅವರು ಚಿತ್ರದ ತಿರುಳನ್ನು ಬಿಚ್ಚಿಡುತ್ತಾರೆ.

ಚಿತ್ರಕ್ಕೆ ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಂಡಿರುವ ಅವರು, ‘ಇಂತಹ ಕಥೆಗೆ ಸ್ಟಾರ್‌ಗಿರಿ ಬೇಕಿಲ್ಲ. ಅಲ್ಲದೆ, ಹೊಸ ಮುಖಗಳ ಮೂಲಕ ಕಥೆ ಹೇಳಿದಾಗ ನಿರ್ದೇಶಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಾನೆ’ ಎಂಬ ಸಮರ್ಥನೆ ಅವರದು. ಅಲ್ಲದೆ, ಇದುವರೆಗೆ ಪ್ರೇಕ್ಷಕರ ಮೆದುಳಲ್ಲಿ ಖಳನಾಗಿ ಅಚ್ಚಾಗಿದ್ದ ನಟ ಉದಯ್ ಅವರನ್ನು ಹೊಸ ಗೆಟಪ್‌ನಲ್ಲಿ ತೋರಿಸಿದ್ದಾರೆ. ಚಿತ್ರದ ಹೈಲೈಟ್ ಹಾಡಿನಲ್ಲೂ ಅವರೇ ಇರುವುದು ವಿಶೇಷ.

ಚಿತ್ರತಂಡಕ್ಕೂ ಹಾರರ್ ಅನುಭವ
ದೆವ್ವದ ಕಥೆ ‘ಡೇಂಜರ್ ಜೋನ್’ ಆಗಿ ತೆರೆ ಮೇಲೆ ತರುವಾಗ ಚಿತ್ರತಂಡಕ್ಕೂ ಹಾರರ್ ಅನುಭವಗಳಾಗಿವೆಯಂತೆ. ‘ಶೂಟಿಂಗ್ ಮುಗಿಸಿ ಹೊರಟಿದ್ದ ಚಿತ್ರತಂಡದ ಮೂವರಿದ್ದ ಕಾರು ತಾವರೆಕೆರೆ ಬಳಿ ಅಪಘಾತಕ್ಕೀಡಾಯಿತು. ಕಾರು ನಜ್ಜುಗುಜ್ಜಾದರೂ, ಅವರು ಮಾತ್ರ ಅಚ್ಚರಿಯ ರೀತಿಯಲ್ಲಿ ಬದುಕುಳಿದರು. ಅಲ್ಲದೆ, ನಾನು ಒಂಟಿಯಾಗಿದ್ದಾಗೆಲ್ಲ ಯಾರೋ ಕರೆದ ಹಾಗೆ, ಹತ್ತಿರದಿಂದ ಮಾತನಾಡಿಸಿದಂತೆ ಆಗುತ್ತಿತ್ತು.

ಚೆನ್ನೈನಲ್ಲಿ ಡಿಟಿಎಸ್‌ಗೆ ಸಂಬಂಧಿಸಿದ ಕೆಲಸ ಮಾಡುವಾಗ ಒಬ್ಬನೇ ಚಿತ್ರ ನೋಡುತ್ತಿದ್ದೆ. ಆಗಲೂ ಇದ್ದಕ್ಕಿದ್ದಂತೆ ಯಾರೊ ಕರೆದಂತಾಗಿ ಬೆಚ್ಚಿಬಿದ್ದಿದ್ದೆ. ಇಂತಹ ಅನೇಕ ಅನುಭವಗಳು ನನಗಷ್ಟೇ ಅಲ್ಲ, ಚಿತ್ರತಂಡದವರಿಗೂ ಆಗಿದೆ’ ಎನ್ನುತ್ತಾರೆ ದೇವರಾಜ್.

‘ಚಿತ್ರೀಕರಣದ ಸಂದರ್ಭದಲ್ಲಿ ಆದ ಅನುಭವಗಳು, ದೈವ ಶಕ್ತಿ ಇರುವಂತೆ ಅದಕ್ಕೆ ವಿರುದ್ಧವಾದ ಒಂದು ಶಕ್ತಿ ಇದ್ದೇ ಇರುತ್ತದೆ ಎಂಬ ಮಾತನ್ನು ನೆನಪಿಸಿತು. ಆದರೂ, ಭಂಡ ಧೈರ್ಯ ಮಾಡಿ ಚಿತ್ರವನ್ನು ಮುಗಿಸಿದೆವು’ ಎನ್ನುವ ದೇವರಾಜ್, ಲೋಕೇಶ್ ಮತ್ತು ಚಿಕ್ಕಣ್ಣ ಅಭಿನಯದ ‘ಗೋಲ್‌ಮಾಲ್ ಬ್ರದರ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT