ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯ ವಿನ್ಯಾಸಕಿ

Last Updated 22 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಡಿಸೈನರ್‌ ಆಗುವ ಗುರಿ ಹೊತ್ತು ಬಂದ ನಟಿ ದೀಪ್ತಿ ಮನ್ನೆ ಈಗ ತ್ರಿಭಾಷಾ ನಟಿ. ಎರಡು ವರ್ಷದ ಅವಧಿಯಲ್ಲಿ ಅವರು ಈಗಾಗಲೇ ಐದಾರು ಸಿನಿಮಾಗಳಿಗೆ ಬಣ್ಣಹಚ್ಚಿದ್ದಾಗಿದೆ. ಅನಿರೀಕ್ಷಿತವಾಗಿ ಒಲಿದುಬಂದ ಅವಕಾಶವನ್ನು ತಮ್ಮದಾಗಿಸಿಕೊಂಡರೂ ಅವರು ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಈಗಲೂ ದೀಪ್ತಿ ಅವರ ಒಲವು ಇರುವುದು ವಿನ್ಯಾಸದ ಕ್ಷೇತ್ರದತ್ತಲೇ.

ದಾವಣಗೆರೆ ಮೂಲದವರಾದ ದೀಪ್ತಿ ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಬಿ.ಎಸ್ಸಿ ಮಾಡುವ ಸಲುವಾಗಿ ಬೆಂಗಳೂರಿಗೆ ಕಾಲಿಟ್ಟವರು. ನಟನೆ ಅವರ ಆಸಕ್ತಿಯ ಕ್ಷೇತ್ರವಲ್ಲ. ಚಿತ್ರಮಂದಿರದ ಮೆಟ್ಟಿಲು ಹತ್ತುತ್ತಿದ್ದದ್ದೂ ತೀರಾ ಕಡಿಮೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಸ್ತ್ರವಿನ್ಯಾಸಗಳಿಗೆ ಅವರೇ ರೂಪದರ್ಶಿ.

ಕಾಲೇಜೊಂದರ ವಸ್ತ್ರವಿನ್ಯಾಸ ಸ್ಪರ್ಧೆಯ ವೇಳೆ ದೀಪ್ತಿ ಅವರನ್ನು ನೋಡಿದ ನಾರಾಯಣ ರೆಡ್ಡಿ ಎಂಬುವವರು ತಮಿಳು ಸಿನಿಮಾಕ್ಕೆ ಶಿಫಾರಸು ಮಾಡಿದರು. ಸಂಯೋಜಕರೊಬ್ಬರ ಮೂಲಕ ತಮಿಳು ಚಿತ್ರದ ಆಫರ್‌ ಹುಡುಕಿಕೊಂಡು ಬಂದಿತು.

‘ಚಿತ್ರರಂಗ ಕೆಡುಕಿನದ್ದಲ್ಲ’ ಎಂದು ಪೋಷಕರಿಗೆ ಧೈರ್ಯ ಹೇಳಿ ಒಲಿಸಿದ ಅವರು, ನಟಿಸಲು ಮುಂದಾದರು. ಹೀಗೆ ಅವರು ಮೊದಲು ಬಣ್ಣ ಹಚ್ಚಿದ ಚಿತ್ರ ‘ಯೆವಾನ್‌’ ಇನ್ನೂ ತೆರೆಕಾಣಬೇಕಿದೆ.

ನಟನೆಯಲ್ಲದೆ, ಕ್ಯಾಮೆರಾ ಮತ್ತು ಬೆಳಕಿನ ಕುರಿತು ಕೊಂಚವೂ ತಿಳಿವಳಿಕೆ ಹೊಂದಿರದಿದ್ದರೂ ದೀಪ್ತಿ ಹೆಚ್ಚು ಕಷ್ಟಪಡಲಿಲ್ಲ. ಅವರೇ ಹೇಳಿಕೊಳ್ಳುವಂತೆ ಅವರಲ್ಲಿ ಗ್ರಹಿಕೆಯ ಸಾಮರ್ಥ್ಯ ಹೆಚ್ಚು. ಪುಸ್ತಕ ವ್ಯಾಮೋಹಿಯಾದ ಅವರು, ಪುಸ್ತಕದಲ್ಲಿನ ಘಟನೆಗಳನ್ನು ಮನಸಲ್ಲೇ ಕಲ್ಪಿಸಿಕೊಳ್ಳುವ ಸ್ವಭಾವದವರು. ಇವು ಅಭಿನಯವನ್ನು ಒಲಿಸಿಕೊಳ್ಳಲು ನೆರವಾದವು.

ಆರಂಭದಲ್ಲಿ ಇತರೆ ನಟಿಯರ ನಟನೆಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ನಟನೆಯ ಕೆಲವು ಸಂಗತಿಗಳನ್ನು ಅರಿತುಕೊಂಡರು. ಉಳಿದಂತೆ ಆ ಚಿತ್ರತಂಡ ಹೇಳಿದ್ದು – ‘ನೀವು ನಿಜ ಜೀವನದಲ್ಲಿ ಈ ಘಟನೆಗಳಿಗೆ ಪ್ರತಿಕ್ತಿಯಿಸುತ್ತೀರೋ ಹಾಗೆಯೇ ಸಹಜವಾಗಿ ಪ್ರತಿಕ್ರಿಯಿಸಿ’ ಎಂದು. ‘ಯೆವಾನ್‌’ ಚಿತ್ರದಲ್ಲಿ ಮೇಕಪ್ ಇಲ್ಲದ ‘ರಾ’ ಪಾತ್ರ ಅವರದು.

ಅವರ ಎರಡನೆಯ ಮತ್ತು ಕನ್ನಡದ ಮೊದಲ ಚಿತ್ರ ‘ಹಿಂಗ್ಯಾಕೆ’. ಬಿಡುಗಡೆಯಾದ ಏಕೈಕ ಚಿತ್ರ ಕೂಡ. ಸತ್ಯಜಿತ್ ನಿರ್ದೇಶನದ ಈ ಚಿತ್ರದಲ್ಲಿ ಅವರು ತಮಿಳಿನಲ್ಲಿ ಕಲಿತ ಅನುಭವವನ್ನು ಪ್ರಯೋಗಿಸಿದರು. ಒಳ್ಳೆಯ ಮನಸಿನವರಿದ್ದ ಉತ್ತಮ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಅವರದು.

ಚಿತ್ರದ ಕಲಾವಿದರ ಬಳಗದಲ್ಲಿ ಇವರೊಬ್ಬರೇ ಕಿರಿಯ ನಟಿ. ಹೀಗಾಗಿ ಅನುಭವಿಗಳ ಸಾಂಗತ್ಯದಲ್ಲಿ ಕಲಿತಿದ್ದು ಸಾಕಷ್ಟು. ದೀಪ್ತಿ ಅವರ ನಟನಾ ಕೌಶಲವನ್ನು ತೆಲುಗಿನವರು ಸಹ ಮೆಚ್ಚಿಕೊಂಡಿದ್ದಾರಂತೆ. ಸಹಜ ಅಭಿನಯ ನೀಡುವ, ಪಾತ್ರವನ್ನು ಜೀವಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಅವರು.

ಬೇರೆ ನಟಿಯರನ್ನು ನೋಡಿ ಕಲಿಯಬಹುದು. ಆದರೆ ನಕಲು ಮಾಡಬಾರದು. ಒಬ್ಬೊಬ್ಬ ನಟಿಯರದ್ದು ಒಂದೊಂದು ಶೈಲಿ ಇರುತ್ತದೆ. ನಕಲು ಮಾಡಿದವರು ಯಾರೂ ಯಶಸ್ಸು ಕಂಡಿಲ್ಲ. ನನಗೆ ನನ್ನದೇ ಸ್ವಭಾವ ಇದೆ, ಶೈಲಿ ಇದೆ. ಅದನ್ನೇ ನಟನೆಯಲ್ಲೂ ಮುಂದುವರಿಸಿದೆ. ನಟಿಸಬೇಕು ಎಂದು ಪ್ರಯತ್ನಿಸಿಲ್ಲ. ಸಹಜತೆಯನ್ನೇ ಅಭಿವ್ಯಕ್ತಿಸುತ್ತೇನೆ ಎನ್ನುತ್ತಾರೆ ದೀಪ್ತಿ.

ಈಗ ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಅವರ ಮೂಲ ಗುರಿ ವಸ್ತ್ರ ವಿನ್ಯಾಸವೇ. ನಾಯಕರ ಸಿನಿಮಾ ಪಯಣಕ್ಕೆ ವಯಸ್ಸಿನ ಮಿತಿ ಇಲ್ಲ. ಆದರೆ ನಾಯಕಿಯರು ಗ್ಲಾಮರ್ ಕಳೆದುಕೊಂಡಂತೆ ಚಿತ್ರರಂಗಕ್ಕೆ ಬೇಡವಾಗುತ್ತಾರೆ. ಭವಿಷ್ಯದ ಈ ಪರಿಸ್ಥಿತಿಯನ್ನು ಎದುರಿಸಲು ಫ್ಯಾಷನ್ ಡಿಸೈನಿಂಗ್‌ ಅನ್ನೂ ಜತೆಯಲ್ಲಿಯೇ ತೆಗೆದುಕೊಂಡು ಹೋಗುತ್ತೇನೆ ಎನ್ನುತ್ತಾರೆ. ಸ್ನೇಹಿತರ ಜತೆಗೂಡಿ ಬೊಟಿಕ್‌ ಒಂದನ್ನೂ ಅವರು ಆರಂಭಿಸಿದ್ದಾರೆ. ಈಗ ಸಿನಿಮಾಗಳ ಒತ್ತಡದಿಂದ ಅದರತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ.

ವಿನ್ಯಾಸ ಕ್ಷೇತ್ರಕ್ಕೆ ಆದ್ಯತೆ ನೀಡಿದರೂ ಅವರು ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಚಿತ್ರಕ್ಕಾಗಿ ಸಾಕಷ್ಟು ಹೋಂವರ್ಕ್‌ ಮಾಡುತ್ತಾರೆ. ಎರಡು ಪುಟಗಳಷ್ಟು ದೊಡ್ಡದಾದ ಸ್ಕ್ರಿಪ್ಟ್‌ ನೀಡಿದರೂ ಓದಿಕೊಂಡು ಕಂಠಪಾಠ ಮಾಡುತ್ತಾರೆ. ಒಪ್ಪಿಕೊಂಡ ಕೆಲಸವನ್ನು ಶೇ 100ರಷ್ಟು ಬದ್ಧತೆಯೊಂದಿಗೆ ಕೆಲಸ ಮಾಡುವ ಜಾಯಮಾನ ಅವರದಂತೆ.

ಯಾವ ಭಾಷೆಗೆ ಹೋದರೂ ಎಲ್ಲಿಂದ ಬಂದಿರುವುದು ಎಂದು ಕೇಳುವುದಿಲ್ಲ. ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ನೋಡುತ್ತಾರೆ. ಸೆಟ್‌ನಲ್ಲಿ ಶಿಸ್ತಿನಿಂದ ಇರುವುದು ಮುಖ್ಯ ಎನ್ನುವ ದೀಪ್ತಿ, ತಮ್ಮ ಎತ್ತರದ ನಿಲುವು ತಮಗೆ ವರದಾನವಾಗಿ ಪರಿಣಮಿಸಿದೆ ಎಂದು ಹೇಳುತ್ತಾರೆ.

ಬಹುತಾರಾಗಣದ ‘ನಮ್ಮೂರ ಹೈಕ್ಳು’ ಚಿತ್ರದಲ್ಲಿ ಸಹ ಅವರು ಪ್ರಮುಖ ಪಾತ್ರ ಪಡೆದುಕೊಂಡಿದ್ದಾರೆ. ಕನ್ನಡ–ತೆಲುಗು ಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ವೈಷು’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ಇದುವರೆಗೂ ಬಂದಿರುವ ಆಫರ್‌ಗಳಿಗಿಂತ ತಿರಸ್ಕರಿಸಿರುವ ಚಿತ್ರಗಳೇ ಹೆಚ್ಚು. ನಾನು ಅದೃಷ್ಟದಿಂದ ಸಿನಿಮಾ ರಂಗಕ್ಕೆ ಬಂದವಳೇ ಹೊರತು, ನಟಿಯಾಗಲೇಬೇಕು ಎಂಬ ಆಸೆಯಿಂದ ಬಂದವಳಲ್ಲ. ಹೀಗಾಗಿ ನನ್ನ ಪಾತ್ರ ಮತ್ತು ಚಿತ್ರದ ಕಥೆಗೆ ಆದ್ಯತೆ ನೀಡುತ್ತೇನೆ. ಆಯ್ಕೆಯಲ್ಲಿ ಯಡವಟ್ಟಾಗಿದ್ದಿದೆ. ಕೇಳಿದ ಕಥೆಯೇ ಒಂದಾಗಿದ್ದರೆ, ಸಿನಿಮಾದ ಕಥೆ ಇನ್ನೊಂದು ರೀತಿಯದ್ದಾಗಿರುತ್ತದೆ ಎನ್ನುವುದು ಅನುಭವಕ್ಕೆ ಬಂದಿದೆ. ‘ನಮ್ಮೂರ ಹೈಕ್ಳು’ ಚಿತ್ರದ ಬಳಿಕ ಕಥೆಗೆ ಪ್ರಾಮುಖ್ಯ ನೀಡುತ್ತಿದ್ದೇನೆ ಎನ್ನುತ್ತಾರೆ ದೀಪ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT