ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಭಾವುಕ ಆಸರೆಯಷ್ಟೇ ಸಾಲದು ಆರ್ಥಿಕ ಭದ್ರತೆಯೂ ಬೇಕು...

Last Updated 22 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕನ್ನಡದ ಪ್ರಯೋಗಶೀಲ ನಿರ್ದೇಶಕರಲ್ಲಿ ಒಬ್ಬರಾದ ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್ ಮನಸುಗಳು’ ತನ್ನ ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿರುವ ಸಿನಿಮಾ. ತಮ್ಮ ಚಿತ್ರದ ನೆಪದಲ್ಲಿ ಈ ಹೊತ್ತಿನ ಕನ್ನಡ ಚಿತ್ರರಂಗದ ಸ್ಥಿತಿಗತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

*ನಿಮ್ಮ ನಿರ್ದೇಶನದ ‘ಬ್ಯೂಟಿಫುಲ್ ಮನಸುಗಳು’ ಚಿತ್ರ ಎಲ್ಲಿಯವರೆಗೆ ಬಂದಿದೆ?
ಕೊನೆಯ ಹಂತದ ಕೆಲಸಗಳು ನಡೆದಿದೆ. ಇನ್ನು ಎರಡು ವಾರಗಳಲ್ಲಿ ಹಾಡುಗಳ ಸೀಡಿ ಬಿಡುಗಡೆ ಮಾಡಲಿದ್ದೇವೆ. ಆ ನಂತರ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತೇವೆ. ಶೀಘ್ರದಲ್ಲೇ ಸುಂದರ ಮನಸುಗಳನ್ನು ಪ್ರೇಕ್ಷಕರಿಗೆ ಕೊಡುವ ಉದ್ದೇಶದಿಂದ ಎಲ್ಲ ಚಟುವಟಿಕೆಗಳೂ ಸಾಕಷ್ಟು ಚುರುಕಾಗಿಯೇ ನಡೆಯುತ್ತಿವೆ.

*ಮತ್ತದೇ ಪ್ರೇಮಕಥೆ ಆಯ್ಕೆ ಮಾಡಿಕೊಳ್ಳಲು ಕಾರಣ?
ಪ್ರೇಮ, ಹಾಸ್ಯ, ಕ್ರೈಂ – ಇವೆಲ್ಲ ಕಥೆಗಳಲ್ಲ. ಇವುಗಳು ಒಂದು ಭಾಷೆ. ಈ ಪ್ರೇಮ ಎಂಬ ಭಾಷೆಯ ಮೂಲಕ ಇನ್ನೇನೋ ಕಥೆ ಹೇಳಲು ಹೊರಟಿದ್ದೇನೆ ಅಷ್ಟೇ. ಅಂದಹಾಗೆ ‘ಬ್ಯೂಟಿಫುಲ್ ಮನಸುಗಳು’ ಕಥೆಯು ಸತ್ಯ ಘಟನೆಯಿಂದ ಸ್ಫೂರ್ತಿ ಪಡೆದಿರುವಂಥದು. ಸಂಬಂಧಗಳಲ್ಲಿನ ಸೂಕ್ಷ್ಮತೆಗಳು, ಗಂಡುಹೆಣ್ಣಿನ ಸಾಮಾಜಿಕ ವ್ಯಾಪ್ತಿ, ಇವತ್ತಿನ ಸಾಮಾಜಿಕ ಅಭಿವ್ಯಕ್ತಿಯ ಸ್ವಾತಂತ್ರ್ಯವು ಪ್ರೇಮವನ್ನು – ಅದರಲ್ಲೂ ಮುಖ್ಯವಾಗಿ ಹೆಣ್ಣನ್ನು ಹೇಗೆ ಪ್ರತಿನಿಧಿಸಿದೆ ಮತ್ತು ಗ್ರಹಿಸುತ್ತಿದೆ ಎಂಬ ಆಲೋಚನೆ ಇದರಲ್ಲಿದೆ. ಸಮಾಜದ ಅನೇಕ ಬೆಳವಣಿಗೆಗಳ ಜೊತೆ ಪ್ರೀತಿ ಮತ್ತು ಪ್ರೇಮದ ನಾಟಕೀಯತೆ ಹಾಗೂ ನಿಷ್ಠುರತೆಯನ್ನು ತೋರಿಸುವ ಪ್ರಯತ್ನವೆಲ್ಲವೂ ಈ ಮೂಲಕ ಸಾಗಿದೆ. ಹೀಗಾಗಿ ಇದು ಬರೀ ಪ್ರೇಮಕಥೆಯೇನೂ ಅಲ್ಲ. ಅದರಾಚೆ ಇನ್ನೇನೋ ಇದೆ...

*ಈಗೆಲ್ಲ ಜನಪ್ರಿಯವಾಗಿರುವ ಹಾರರ್–ಥ್ರಿಲ್ಲರ್‌ಗಳ ಮಧ್ಯೆ ಪ್ರೇಮಕಥೆ ನೋಡಬಯಸುವವರು ಇದ್ದಾರಾ?
ಹಾಸ್ಯ, ಅಶ್ಲೀಲ, ತಂತ್ರಗಾರಿಕೆಯ ವೈಭವ, ಸಾಮಾಜಿಕ ಜವಾಬ್ದಾರಿಯ ಚಿತ್ರಗಳು ಮತ್ತು ವಿಡಂಬನಾತ್ಮಕ ಚಿತ್ರಗಳು – ಇವೆಲ್ಲವೂ ನಮ್ಮಲ್ಲಿ ಗೆದ್ದಿವೆ; ಅಂದರೆ ಜನಪ್ರಿಯಗೊಂಡಿವೆ. ಹಾರರ್ ಆಗಲಿ ಥ್ರಿಲ್ಲರ್ ಆಗಲಿ ಅಥವಾ ಹೊಸಬರಾಗಲಿ ಹಳಬರಾಗಲಿ ಒಂದು ಸಿನಿಮಾವನ್ನು ನೋಡುವ ಪ್ರೇಕ್ಷಕನಿಗೆ ಅತ್ಯುತ್ತಮ ಅನುಭವವನ್ನು ಕಟ್ಟಿಕೊಟ್ಟರೆ ಅದು ನಿಜಕ್ಕೂ ಚಿತ್ರದ ಯಶಸ್ಸು ಎಂದು ನಾನು ಭಾವಿಸುತ್ತೇನೆ. ‘ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಪ್ರೇಮಕಥೆಯ ಮೂಲಕ ಒಂದು ಅನುಭವದ ಅರಿವು ಹಾಗೂ ಹೊಸ ಆಲೋಚನೆಗಳ ಮೂಲಕ ಚಿಂತನೆಗೆ ಹಚ್ಚುವ ಪ್ರಯತ್ನ ಮಾಡಿದ್ದೇನೆ.

*ಈಗ ಗಾಂಧಿನಗರದಲ್ಲಿ ಹೊಸಬರ ಅಲೆ ಚೆನ್ನಾಗಿಯೇ ಗೋಚರಿಸುತ್ತಿದೆ. ಇದಕ್ಕೆ ಪ್ರೇಕ್ಷಕನ ಅಭಿರುಚಿ ಬದಲಾಗಿದ್ದು ಕಾರಣವೇ ಅಥವಾ ಸಿನಿಮಾ ವ್ಯಾಕರಣ ಬದಲಾಗಿದೆಯೇ?
ನಾನೂ ಸಿನಿಮಾಗೆ ಬಂದಾಗ ಯಾವುದೇ ಅನುಭವದ ಜೊತೆ ಬಂದವನಲ್ಲ. ರಂಗಭೂಮಿ ಬಿಟ್ಟರೆ ಚಿತ್ರರಂಗದ ಯಾವುದೇ ಅನುಭವ ಇರಲಿಲ್ಲ. ಆದ್ದರಿಂದಲೇ ಹೆಚ್ಚು ತಾಜಾತನದಿಂದ ಆಲೋಚನೆ ಮಾಡಲು ಸಾಧ್ಯವಾಯಿತು ಎಂದು ಚಿತ್ರರಂಗದಲ್ಲಿ ನುರಿತವರು ನನಗೆ ಹೇಳಿದ್ದಾರೆ. ಹೀಗಾಗಿ ಅನುಭವಕ್ಕಿಂತ ಇಲ್ಲಿ ಆಯಾ ಸಾಮಾಜಿಕ ಪರಿಸ್ಥಿತಿಯ ಮೇರೆಗೆ ಪ್ರೇಕ್ಷಕ ಹೇಗೆಲ್ಲಾ ಬದಲಾಗಿದ್ದಾನೆ ಎಂಬ ವರ್ತಮಾನದ ಪ್ರಜ್ಞೆ ಇರಬೇಕು. ಇದು ನಾನು ಕಂಡುಕೊಂಡ ಸತ್ಯ. ಸಿನಿಮಾದ ವ್ಯಾಕರಣ ಬದಲಾಗಿಲ್ಲ. ಪ್ರಯೋಗಗಳು ಹೆಚ್ಚು ಹೆಚ್ಚು ನಡೆಯಬಹುದು ಅಷ್ಟೇ. ನಿರ್ದೇಶಕನು ಎರಡು ರೀತಿಯಲ್ಲಿ ಸಿನಿಮಾ ಕಟ್ಟುವ ಪ್ರಯತ್ನ ಮಾಡುತ್ತಾನೆ. ಟ್ರೆಂಡ್ ಅನುಸರಿಸಿ ಪ್ರೇಕ್ಷಕನನ್ನು ರಂಜಿಸಲು ಸಿನಿಮಾ ಮಾಡುವುದು ಹಾಗೂ ತನ್ನ ಅನುಭವಕ್ಕೆ ದಕ್ಕಿದ ಯಾವುದೋ ಒಂದು ಆಲೋಚನೆ ತೀವ್ರವಾಗಿ ಕಾಡಿ ಅದನ್ನು ಪ್ರೇಕ್ಷಕನಿಗೆ ದಾಟಿಸಲು ಮಾಡುವ ಪ್ರಯತ್ನ ಇನ್ನೊಂದು. ಇವೆರಡನ್ನೂ ಮುಂದಿಟ್ಟುಕೊಂಡು ನೋಡುವುದಾದರೆ, ಕನ್ನಡ ಚಿತ್ರರಂಗದಲ್ಲಿ ಈಗ ಗೆಲ್ಲುತ್ತಿರುವ ಹೊಸಬರ ಪ್ರಯತ್ನಕ್ಕೆ ಮುಖ್ಯ ಕಾರಣವೆಂದರೆ, ಪ್ರೇಕ್ಷಕರಲ್ಲೂ ಅನೇಕ ವರ್ಗಗಳು ಉಂಟಾಗಿರುವುದು. ಅಂದರೆ ಮಾಲ್ ಸಿನೆಮಾಗಳ ಪ್ರೇಕ್ಷಕ ಒಂದು ವರ್ಗವಾದರೆ, ಸಿಂಗಲ್ ಸ್ಕ್ರೀನ್ ಪ್ರೇಕ್ಷಕ ಇನ್ನೊಂದು ವರ್ಗ. ಹೀಗಾಗಿ ಎಲ್ಲರಿಗೂ ಇಲ್ಲಿ ಸ್ಥಾನ ಸಿಗುತ್ತಿದೆ.

*‘ಬುಲೆಟ್ ಬಸ್ಯ’ ಜಯತೀರ್ಥ ಮಾಡಬೇಕಿದ್ದ ಸಿನಿಮಾ ಅಲ್ಲ ಎಂಬ ಅಭಿಪ್ರಾಯ ಹೆಚ್ಚೇ ಎಂಬಷ್ಟು ಕೇಳಿಬಂತು?!
ಒಬ್ಬ ನಿರ್ದೇಶಕ ಲವ್ ಸ್ಟೋರಿ ಮೂಲಕ ಒಂದೊಳ್ಳೆಯ ಚಿತ್ರವನ್ನು ಕೊಡುತ್ತಾನೆ ಎಂದುಕೊಳ್ಳಿ. ಅವನ ಸಾಮರ್ಥ್ಯ ಅಷ್ಟೇ ಎಂದು ತೀರ್ಮಾನಿಸುವುದು ಮತ್ತು ಅವನು ಅಂಥದ್ದೇ ಚಿತ್ರಗಳನ್ನು ಮಾತ್ರ ಮಾಡಬೇಕು ಎಂಬ ನಿರೀಕ್ಷೆಗೆ ಬರುವುದು ಆತನ ಕ್ರಿಯಾಶೀಲತೆಗೆ ಹಾಕಿಕೊಳ್ಳುವ ಚೌಕಟ್ಟು. ಈ ನಿಟ್ಟಿನಲ್ಲಿ ನನಗೆ ‘ಬುಲೆಟ್ ಬಸ್ಯ’ದಂಥಾ ಪ್ರಯೋಗ ಖುಷಿ ಕೊಟ್ಟಿದೆ ಮತ್ತು ಅದು ನನಗೆ ‘ಬ್ಯೂಟಿಫುಲ್ ಮನಸುಗಳು’ ತರಹದ ಸಂವೇದನಾತ್ಮಕ ಸಿನಿಮಾ ಮಾಡಲು ಆರ್ಥಿಕವಾಗಿ ಶಕ್ತಿಯನ್ನು ಕಟ್ಟಿಕೊಟ್ಟಿದೆ. ಬದುಕಿಗೆ ಬರೀ ಭಾವುಕ ಆಸರೆ ಸಿಕ್ಕರೆ ಮಾತ್ರ ಸಾಲದು; ಆರ್ಥಿಕ ಭದ್ರತೆಯೂ ಇರಬೇಕಲ್ಲವೇ?

*ಮುಂದಿನ ಚಿತ್ರದ ಕುರಿತು ಏನೇನು ತಯಾರಿ ನಡೆಸಿದ್ದೀರಿ?
ಕ್ಯಾಪ್ನೋ ಫೋಬಿಯಾ ಕಾಯಿಲೆ ಇರುವ ಪಾತ್ರಗಳನ್ನು ಮುಂದಿಟ್ಟುಕೊಂಡು ಕಥೆ ಮಾಡಿಕೊಂಡಿದ್ದೇನೆ. ಇದು ಮರ್ಡರ್ ಮಿಸ್ಟರಿ ಜೋನರ್‌ಗೆ ಸೇರಲಿದೆ. ಇದೂ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ಮಾಡಿಕೊಂಡಿರುವ ಕಥೆ. ಬಹುತೇಕ ಹೊಸ ಕಲಾವಿದರೇ ಇರುತ್ತಾರೆ. ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ. ‘ಬ್ಯೂಟಿಫುಲ್ ಮನಸುಗಳು’ ಬಿಡುಗಡೆಯ ನಂತರ ಹೊಸ ಚಿತ್ರದ ಪ್ರಕ್ರಿಯೆ ಶುರುವಾಗಲಿದೆ.

*ಈ ಮಧ್ಯೆ ರಂಗಭೂಮಿ ಚಟುವಟಿಕೆಯಲ್ಲೂ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದೀರಿ?
ಓಹ್! ರಂಗಭೂಮಿ ನನ್ನ ಮಾತೃಭೂಮಿಯ ಹಾಗೆ. ನನ್ನ ಜೀವನದ ಬಹುಭಾಗವನ್ನು ಅಲ್ಲಿಯೇ ಕಳೆದಿದ್ದೇನೆ. ಆಗಾಗ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸುವುದು ನನಗೆ ಸಂತೋಷ ಮತ್ತು ಸ್ಫೂರ್ತಿಯನ್ನು ಕೊಡುತ್ತದೆ. ವಾಸ್ತವವಾಗಿ ‘ಬ್ಯೂಟಿಫುಲ್ ಮನಸುಗಳು’ ಚಿತ್ರದ ಕೊನೆಯ ಹಂತದ ಕೆಲಸಗಳು ಬಾಕಿ ಇದ್ದು, ಮುಂದಿನ ಚಿತ್ರದ ಕಥೆಯಲ್ಲಿಯೂ ಕೆಲಸ ನಡೆಯುತ್ತಿದೆ. ಹೀಗಾಗಿ ರಂಗಭೂಮಿಯಲ್ಲಿ ಅಷ್ಟೊಂದು ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT