ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಾಯಿಯ ಜೊತೆಗಾತಿ

Last Updated 22 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಇಂದು ತೆರೆಗೆ ಬರುತ್ತಿರುವ ‘ಸಿಪಾಯಿ’ ನಟಿ ಶ್ರುತಿ ಹರಿಹರನ್ ಅವರ ವೃತ್ತಿಬದುಕಿನ ಮೂರನೇ ಚಿತ್ರವಾಗಿದ್ದರೂ ಬಿಡುಗಡೆ ಆಗುತ್ತಿರುವುದು ಏಳನೇ ಚಿತ್ರವಾಗಿ. ಈವರೆಗೆ ಬಿಡುಗಡೆ ಆದ ಅವರ ಆರು ಚಿತ್ರಗಳಲ್ಲಿ ಎರಡು ಮೂರು ಸಿನಿಮಾಗಳು ಎರಡು ವರ್ಷ ಪೂರೈಸಿಯೇ ತೆರೆಕಂಡಿರುವುದು. ‘ಸಿಪಾಯಿ’ ಕೂಡ ಸೆಟ್ಟೇರಿ ಹತ್ತಿರ ಹತ್ತಿರ ಎರಡು ವರ್ಷವೇ ಆಗಿದೆ. ಸಿನಿಮಾ ಬಿಡುಗಡೆ ಆಗುವುದು ತಡವಾಗಿದೆ ಎಂದರೂ ಅವರೇನೂ ಖಾಲಿ ಕೂತವರಲ್ಲ. ಸಾಲು ಸಾಲು ಸಿನಿಮಾಗಳನ್ನು ಅವರು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ.

‘ಲೂಸಿಯಾ’ ಮತ್ತು ‘ದ್ಯಾವ್ರೆ’ ನಂತರ ಶ್ರುತಿ ಸಹಿ ಮಾಡಿದ್ದು ‘ಸಿಪಾಯಿ’ ಚಿತ್ರಕ್ಕೆ. ‘ಲೂಸಿಯಾ’ಕ್ಕೆ ಕೆಲಸ ಮಾಡಿದವರೇ ಈ ಚಿತ್ರದ ಬಹುತೇಕ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ತನ್ನ ಪಾತ್ರದಲ್ಲಿ ಅಭಿನಯಕ್ಕೆ ತೀವ್ರವಾದ ಅವಕಾಶ ಇರದಿದ್ದರೂ ಪರಿಚಿತ ಚಿತ್ರತಂಡ ಎಂಬ ಕಾರಣಕ್ಕೆ ಅವರು ‘ಸಿಪಾಯಿ’ಯ ಭಾಗವಾದರು. ಹೊಸ ತಂಡದೊಂದಿಗೆ ಹೊಂದಿಕೊಳ್ಳಲು ಸಮಯಬೇಕು. ಪರಿಚಿತ ತಂಡದೊಂದಿಗೆ ಕೆಲಸ ಸರಳವಾಗುತ್ತದೆ ಎಂದುಕೊಳ್ಳುತ್ತಲೇ, ಮತ್ತೊಂದು ಅವಕಾಶ ಸಿಕ್ಕ ಖುಷಿಯಲ್ಲಿ ‘ಸಿಪಾಯಿ’ ಜೊತೆ ಸೇರಿಕೊಂಡರು.

ಚಿತ್ರದ ನಿರ್ದೇಶಕ ರಜತ್‌ಮಯೀ ‘ಲೂಸಿಯಾ’ ಸಿನಿಮಾದಲ್ಲಿ ಪವನ್ ಕುಮಾರ್ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದವರು. ಆಗ ಶ್ರುತಿ ಅವರನ್ನು ಆ ಚಿತ್ರಕ್ಕೆ ನಾಯಕಿಯಾಗಿ ಮಾಡುವುದು ಬೇಡವೇ ಬೇಡ ಎಂದು ಅವರು ವಾದಿಸಿದ್ದರು. ಆದರೆ ಸಿನಿಮಾ ಆಗುತ್ತಿದ್ದಂತೆ ಶ್ರುತಿ ಅವರಿಂದ ನಟನೆ ತೆಗೆಸಬಹುದು ಎಂಬ ನಂಬಿಕೆ ಬಂದ ಕಾರಣ ಅವರು ತಮ್ಮ ನಿರ್ದೇಶನದ ಚೊಚ್ಚಿಲ ಚಿತ್ರಕ್ಕೆ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ತಮಾಷೆ ಎಂದರೆ ‘ಸಿಪಾಯಿ’ಗೆ ನಾಯಕಿ ಹುಡುಕಲು ರಜತ್‌ಮಯೀ ಅವರಿಗೆ ಶ್ರುತಿ ಅವರೇ ಸಹಾಯ ಮಾಡುತ್ತಿದ್ದುದು.

‘ಸಿಪಾಯಿ’ಯ ಪಾತ್ರದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎನ್ನುವ ಶ್ರುತಿ, ‘ಈ ಚಿತ್ರದಲ್ಲಿ ಕಾಲೇಜು ಹುಡುಗಿ ಪಾತ್ರ ನನ್ನದು. ಪಾತ್ರದಲ್ಲಿ ಹೆಚ್ಚೇನೂ ಏರಿಳಿತ ಇಲ್ಲ. ನಟಿಯಾಗಿ ಚಿತ್ರದ ಬಗೆಗೆ ತೀವ್ರ ನಿರೀಕ್ಷೆಗಳೇನೂ ಇಲ್ಲ. ಆದರೆ ಒಂದು ಸಂದರ್ಭದಲ್ಲಿ ನನ್ನ ಪಾತ್ರಕ್ಕೆ ತಿರುವು ಸಿಗುತ್ತದೆ. ಅಲ್ಲಿಂದ ಮುಂದೆ ಹೊಸ ಪಯಣವೇ ಶುರುವಾಗುತ್ತದೆ’ ಎನ್ನುತ್ತಾರೆ. ಇಡೀ ಚಿತ್ರದಲ್ಲಿ ಒಂದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೀಗೆ ಸ್ವಭಾವ ಮತ್ತು ನೋಟದಲ್ಲಿ ಬದಲಾವಣೆ ಇರುವುದು ಅವರಿಗೆ ಖುಷಿ.

ಚಿತ್ರದ ಬಿಡುಗಡೆ ತಡವಾಗಿದ್ದರೂ ಅದರಿಂದ ಯಾವ ತೊಂದರೆಯೂ ಇಲ್ಲ ಎನ್ನುತ್ತಾರೆ ಶ್ರುತಿ. ಒಬ್ಬ ವರದಿಗಾರ ಸುದ್ದಿಯನ್ನು ಓದುಗರಿಗೆ/ವೀಕ್ಷಕರಿಗೆ ತಲುಪಿಸಲು ಎಷ್ಟು ರಿಸ್ಕ್ ತೆಗೆದುಕೊಳ್ಳುತ್ತಾನೆ, ಅದರ ಹಿಂದೆ ಎಷ್ಟು ಸಂಶೋಧನೆ ಇರುತ್ತದೆ ಎಂಬುದು ಚಿತ್ರದ ಕಥೆ. ಹಾಗಾಗಿ ಈ ಕಥೆ ಯಾವ ಕಾಲಕ್ಕೂ ಹಳೆಯದು ಎನ್ನಿಸಿಕೊಳ್ಳುವುದಿಲ್ಲ ಎಂದು ನಂಬುವ ಅವರು, ದೇಶದ ಗಡಿಯಲ್ಲಿ ನಿಂತು ದೇಶ–ನಾಗರಿಕರ ರಕ್ಷಣೆಗೆ ಸೈನಿಕ ಹೋರಾಡುವುದು ಮತ್ತು ಒಂದು ವ್ಯವಸ್ಥೆಯಲ್ಲಿ ಇದ್ದುಕೊಂಡು ಅದನ್ನು ತಿದ್ದುವ ಸಲುವಾಗಿ ಹೋರಾಡುವುದು ಎರಡನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟುನೋಡುತ್ತಾರೆ.

‘ಈಚೆಗೆ ಕಮರ್ಷಿಯಲ್ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಅದರ ವಸ್ತು ನಿರೂಪಣೆಯಲ್ಲಿ ಗಟ್ಟಿತನ ಕಳೆದುಕೊಳ್ಳುತ್ತಿವೆ. ಆದರೆ ಈ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳ ಜೊತೆಗೆ ಹೇಳಲು ಹೊರಟ ವಿಚಾರದಲ್ಲೂ ಸ್ಪಷ್ಟತೆ ಇದೆ’ ಎನ್ನುತ್ತಾರೆ. ‘ಚಿತ್ರಕಥೆಯಲ್ಲಿ ವಿಶೇಷವಿದೆ’ ಎಂದವರು ಪ್ರೇಕ್ಷಕರನ್ನು ಪ್ರೀತಿಪೂರ್ವಕವಾಗಿ ಚಿತ್ರಮಂದಿರಕ್ಕೆ ಆಹ್ವಾನಿಸುತ್ತಾರೆ.

ಇಂದು ತಾವಿರುವ ಎತ್ತರ ಮತ್ತು ಸ್ಥಾನದಲ್ಲಿ ನಿಂತು ಒಮ್ಮೆ ಹಿಂತಿರುಗಿ ನೋಡಿದರೆ ಅವರಿಗೆ ತಮ್ಮ ವೃತ್ತಿಬದುಕಿನಲ್ಲಿ ತೆಗೆದುಕೊಂಡ ಅನೇಕ ತಪ್ಪು ನಿರ್ಧಾರಗಳು ಕಣ್ಣಿಗೆ ಕಟ್ಟುತ್ತವೆ. ಹಾಗಿದ್ದರೂ ವೃತ್ತಿ ಜೀವನದಲ್ಲಿ ತೃಪ್ತರಾಗಿರುವ ಅವರು ‘ತಾನು ಅದೃಷ್ಟಶಾಲಿ’ ಎನ್ನುತ್ತಾರೆ. ‘ನನ್ನ ಆಪ್ತ ವಲಯದಲ್ಲೇ ನನಗಿಂತ ಒಳ್ಳೆಯ ಪ್ರತಿಭಾನ್ವಿತರಿದ್ದಾರೆ. ಆದರೆ ಅವರಿಗೆ ಇನ್ನೂ ಸೂಕ್ತ ಅವಕಾಶ ಸಿಕ್ಕಿಲ್ಲ. ಹಾಗಾಗಿ ನಾನು ಸರಿಯಾದ ಸಂದರ್ಭಕ್ಕೆ ಸೂಕ್ತ ಜಾಗದಲ್ಲಿ ಇದ್ದೆನೇನೋ’ ಎಂದು ಮಂದಹಾಸ ಬೀರುತ್ತಾರೆ.

ಸಿನಿಮಾ ಅಭಿನಯದ ಜೊತೆಗೆ ನಿರ್ದೇಶನ–ಛಾಯಾಗ್ರಹಣದ ಬಗೆಗೂ ಕುತೂಹಲಿ ಆಗಿರುವ ಅವರು, ಆ ಕ್ಷೇತ್ರಗಳ ಕುರಿತು ಜ್ಞಾನಾರ್ಜನೆ ಮಾಡುತ್ತಲೇ ಇರುತ್ತಾರೆ. ಮುಂದೊಂದು ದಿನ ಸಿನಿಮಾ ನಿರ್ದೇಶನ ಮಾಡುವ ಯೋಚನೆಯಲ್ಲಿಯೂ ಇದ್ದಾರೆ.
ಸಾಲು ಸಾಲು ಸಿನಿಮಾ

ಶ್ರುತಿ ಕೈಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಆದರೆ ಸತೀಶ್ ಪ್ರಧಾನ್ ನಿರ್ದೇಶನದ ‘ಮಾದ ಮತ್ತು ಮಾನಸಿ’ ಸಿದ್ಧವಾಗಿ ಆರೆಂಟು ತಿಂಗಳೇ ಕಳೆದರೂ ಬಿಡುಗಡೆಗೆ ಮುಹೂರ್ತ ಕೂಡಿ ಬಂದಿಲ್ಲ. ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್ ಮನಸುಗಳು’ ಈಗಷ್ಟೇ ಚಿತ್ರೀಕರಣೋತ್ತರ ಕೆಲಸಗಳನ್ನು ಪೂರೈಸುತ್ತಿದೆ. ಇವೆಲ್ಲ ಚಿತ್ರೀಕರಣ ಮುಗಿಸಿರುವ ಸಿನಿಮಾಗಳಾದರೆ ‘ಉರ್ವೀ’, ‘ಉಪೇಂದ್ರ ಮತ್ತೆ ಬಾ’, ‘ಆರ್ಯಮೌರ್ಯ’, ‘ಹ್ಯಾಪಿ ನ್ಯೂ ಇಯರ್’ – ಹೀಗೆ ಪಟ್ಟಿ ಬೆಳೆಯುತ್ತದೆ.

‘ಉರ್ವೀ’ ಬಗ್ಗೆ ಕೇಳಿದರೆ ಮೈಯೆಲ್ಲ ಉತ್ಸಾಹ ತುಂಬಿಕೊಂಡು ಮಾತನಾಡುತ್ತಾರೆ ಅವರು. ‘ಈ ಚಿತ್ರದಲ್ಲಿ ಮೂವರು ಸ್ತ್ರೀಯರ ಕಥೆಯನ್ನು ಒಟ್ಟಿಗೆ ತರಲು ಪ್ರಯತ್ನಿಸಿರುವ ನಿರ್ದೇಶಕ ಪ್ರದೀಪ್ ವರ್ಮಾ ಹೆಣ್ಣಿನ ಮನಸನ್ನು ಅರಿತು, ಸಮಾಜ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಬಗೆಗೆ ಸಾಕಷ್ಟು ತಿಳಿದುಕೊಂಡು ಚಿತ್ರಕಥೆ ರೂಪಿಸಿದ್ದಾರೆ’ ಎನ್ನುತ್ತಾರೆ. ಮಹಿಳಾ ಪ್ರಧಾನವಾಗಿರುವ ‘ಉರ್ವೀ’ ಬಗ್ಗೆ ಶ್ರುತಿಗೆ ಅಪಾರ ನಿರೀಕ್ಷೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಕನ್ನಡ ಚಿತ್ರರಂಗದಲ್ಲಿ ಮುಂದೆ ನಟಿಯರಿಗೂ ಒಳ್ಳೆಯ ಕಾಲ ಆರಂಭವಾಗಲಿದೆ ಎಂದು ಭವಿಷ್ಯ ನುಡಿಯುತ್ತಾರೆ.

ಲೋಕನಾಥ್ ನಿರ್ದೇಶನದ ‘ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ಉಪೇಂದ್ರ ಅವರೊಂದಿಗೆ ನಟಿಸುವುದೇ ಶ್ರುತಿ ಅವರಿಗೆ ಸಿಕ್ಕ ಭಾಗ್ಯ. ಎಮೋಷನಲ್ ಫ್ಯಾಮಿಲಿ ಡ್ರಾಮಾದಲ್ಲಿ ಗ್ರಹಿಣಿಯಾಗಿ ಕಾಣಿಸಿಕೊಳ್ಳಲಿರುವ ಅವರು, ಚಿತ್ರದಲ್ಲಿ ಉಪೇಂದ್ರ ಅವರ ಪತ್ನಿ. ಗಂಡ ಹೆಂಡತಿಯ ನಡುವೆ ಏನೇ ಸಮಸ್ಯೆ ಬಂದರೂ ಅಂತಿಮವಾಗಿ ಅವರನ್ನು ಒಂದಾಗಿಸುವವರು ಕುಟುಂಬದವರೇ ಎಂಬುದು ಚಿತ್ರದ ಕಥೆ. ಸಂಬಂಧ, ಭಾವನೆಗಳೇ ಚಿತ್ರದ ಹುರುಳು. ಉಪೇಂದ್ರ ಇಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಸಂಚಾರಿ ವಿಜಯ್ ಅವರೊಂದಿಗೆ ‘ಆರ್ಯಮೌರ್ಯ’ ಚಿತ್ರದಲ್ಲೂ ಶ್ರುತಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಅವರು ಹಳೆಯ ಕಾಲದ ನಟಿಯರಿಂದ ಪ್ರೇರಿತರಾಗಿ ನಟಿಸುತ್ತಿದ್ದಾರೆ. ‘ನಾವು ಇಂದಿನ ಹೆಣ್ಣು ಮಕ್ಕಳು ತುಂಬಾ ಮಾಡರ್ನ್ ಆಗಿದ್ದೇವೆ, ಗಂಡು ಮಕ್ಕಳಂತೆಯೇ ಆಡುತ್ತೇವೆ. ಆದರೆ ಈ ಚಿತ್ರದಲ್ಲಿ ಹಳೆಯ ಕಾಲದಲ್ಲಿನ ನಾಯಕಿಯರ, ಪಕ್ಕಾ ಹೆಣ್ತನದ ದೇಹಭಾಷೆ ಇರುತ್ತದೆ’ ಎನ್ನುತ್ತಾರೆ. ಪನ್ನಗಾಭರಣ ನಿರ್ದೇಶನದಲ್ಲಿ ಇದೇ ವಾರ ಸೆಟ್ಟೇರಿದ ‘ಹ್ಯಾಪಿ ನ್ಯೂ ಇಯರ್’ನಲ್ಲೂ ಶ್ರುತಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT