ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನಿ ಘೇವಾರ್‌ ಸ್ವಾದ

ರಸಾಸ್ವಾದ
Last Updated 22 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಧ್ಯಾಹ್ನದ ಉರಿಬಿಸಿಲಲ್ಲೂ ಹೆಬ್ಬಾಳದ ಹೊವಾರ್ಡ್‌ ಜಾನ್ಸನ್‌ ಹೋಟೆಲ್‌ ಕಟ್ಟಡ ತಣ್ಣಗೆ ನಿಂತಿತ್ತು. ಪ್ರತಿಷ್ಠಿತ ಕಂಪೆನಿಗಳ ಉದ್ಯೋಗಿಗಳು ಹಾಗೂ ವಿದೇಶಿ ಅತಿಥಿಗಳನ್ನೇ ಹೆಚ್ಚಾಗಿ ಆಕರ್ಷಿಸುವ ಈ ಹೋಟೆಲ್‌ ರಾಜಸ್ತಾನಿ ಆಹಾರೋತ್ಸವ ‘ಪದ್ರೊ ಮಾರೊ ದೇಸ್‌’ ಆಯೋಜಿಸಿದೆ.

ಹೆಚ್ಚಾಗಿ ಯುರೋಪಿಯನ್‌ ಆಹಾರೋತ್ಸವವನ್ನು ಆಯೋಜಿಸುತ್ತಿದ್ದ ಹೊವಾರ್ಡ್‌ ಜಾನ್ಸನ್‌ ಮುಂದಿನ ತಿಂಗಳು ಹೊಸ ಮೆನುವನ್ನು ಪರಿಚಯಿಸುವ ತವಕದಲ್ಲಿದೆ. ಹೀಗಾಗಿ ಜನರು ಎಂಥ ಆಹಾರವನ್ನು ಇಷ್ಟಪಡುತ್ತಾರೆ ಎಂದು ಕಂಡುಕೊಳ್ಳುವ ಪ್ರಾಯೋಗಿಕ ಪ್ರಯತ್ನವಾಗಿ ರಾಜಸ್ತಾನಿ ಆಹಾರೋತ್ಸವ ಆಯೋಜಿಸಿದೆ.

ಹೋಟೆಲ್‌ ಒಳಗೆ ಕಾಲಿಡುತ್ತಿದ್ದಂತೆ ವಿಶಾಲವಾದ ಪ್ರಾಂಗಣ, ಒಪ್ಪವಾಗಿ ಜೋಡಿಸಿಟ್ಟ ಪೀಠೋಪಕರಣಗಳು ಗಮನ ಸೆಳೆಯುತ್ತವೆ. ಹದವಾದ ಸಂಗೀತ ಸ್ವಾಗತ ಕೋರುತ್ತದೆ. ಕುಳಿತ ಕೆಲವೇ ನಿಮಿಷದಲ್ಲಿ ರಾಜಸ್ತಾನಿ ಥಾಲಿ ಎದುರಾಯಿತು. ಮೊದಲ ನೋಟಕ್ಕೆ ಕಾಣಿಸಿದ್ದು ಎರಡು ಬಣ್ಣದ ರೋಟಿ. ಮೆಣಸಿನಕಾಯಿ ಪಲ್ಯ, ಮಸಾಲೆ ಸೇರಿಸಿದ ಹೂಕೋಸು, ಪನ್ನೀರ್‌, ದಾಲ್‌.

ದೇಶಿ, ವಿದೇಶಿ ಜನರಿಂದ ಪ್ರಖ್ಯಾತಗೊಂಡ ಹೊವಾರ್ಡ್‌ ಜಾನ್ಸನ್‌ ಹೋಟೆಲ್‌ ಎಂದ ಕೂಡಲೇ ಪಾಶ್ಚಾತ್ಯ ಶೈಲಿ ಮನಸಿನಲ್ಲಿ ತಳುಕು ಹಾಕಿಕೊಳ್ಳುತ್ತದೆ. ತಟ್ಟೆಯಲ್ಲಿದ್ದ ಒಂದೊಂದೇ ಆಹಾರವನ್ನು ಚಮಚ ಹಿಡಿದು ಬಾಯಲ್ಲಿಟ್ಟೆ.

ಪನೀರ್‌ ಅಜ್ವಾನಿ ಟಿಕ್ಕಿ, ಸೌತೆಕಾಯಿ ಸಲಾಡ್‌, ಪನೀರ್‌ ಜೋಧ್‌ಪುರಿ, ಅರ್ಬಿ ಹರಾ ಪ್ಯಾಜ್‌, ಕೇರ್‌ ಸಾಂಗ್ರಿ, ಮೋಹನ ಘಟ್ಟಾ ಕರ್ರಿ, ದಾಲ್‌ ಲಸೂನಿ, ಮಕಾಯ್‌ ಪಲಾವ್‌, ಬಾಟಿ/ಮಕಾಯ್‌ ರೋಟಿ ಎಲದಕ್ಕೂ ವಿಭಿನ್ನ ರುಚಿಯ ಮೆರುಗಿತ್ತು.

ಅತಿಯಾದ ಕಾರವೂ ಇಲ್ಲದೆ, ಸಪ್ಪೆಯೂ ಎನಿಸದ ರಾಜಸ್ತಾನಿ ಆಹಾರದ ರುಚಿ ನಾಲಿಗೆ ಚಪ್ಪರಿಸುವಂತೆ ಮಾಡಿತು. ಜೋಳ, ಗೋಧಿ ರೋಟಿಯ ಜೊತೆ ಒಂದೊಂದೇ ಸಬ್ಜಿಗಳನ್ನು (ಪಲ್ಯ) ಮೆಲ್ಲುತ್ತಾ ಹೋದರೆ ರಾಜಸ್ತಾನಿ ಆಹಾರ ಪ್ರಿಯರ ವಿಭಿನ್ನ ಅಭಿರುಚಿ ತಿಳಿಯುತ್ತದೆ.

ರಾಜಸ್ತಾನಿ ಆಹಾರವನ್ನು ಇದೇ ಮೊದಲಿಗೆ ಮೆಲ್ಲುತ್ತಿದ್ದರಿಂದ ಯಾವುದರ ಜೊತೆಗೆ ಏನು ನೆಂಜಿಕೊಳ್ಳಬೇಕು ಎಂಬ ಗೊಂದಲದಲ್ಲೇ ಮನಸ್ಸು ಹೊಯ್ದಾಡಿತು. ಅದೇ ಸಮಯಕ್ಕೆ ಬಂದ ಹೋಟೆಲ್‌ನ ಮುಖ್ಯ ಬಾಣಸಿಗ ದೇವ್‌ ಭೋಸ್‌ ಮಾತಿಗಿಳಿದರು.

‘ನೋಡಿ, ನಾನು ಯುರೋಪಿಯನ್‌ ಆಹಾರಗಳ ತಯಾರಿಕೆಯಲ್ಲಿ ಪ್ರಾವಿಣ್ಯತೆ ಪಡೆದಿದ್ದೇನೆ. ಈ ಹೋಟೆಲ್‌ನಲ್ಲಿ ಅನೇಕ ಬಾರಿ ಯುರೋಪಿಯನ್‌ ಉತ್ಸವಗಳನ್ನೇ ಆಯೋಜಿಸಿದ್ದೆವು. ಆದರೆ ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಬಹು ಆಯ್ಕೆ ಇದೆ.

ಆಯಾ ರಾಜ್ಯದ ವಿಶೇಷ ಅಡುಗೆ ಮಾಡುವ ಮನಸು ಮಾಡಿದೆವು. ಇದು ನನಗೂ ಆಹಾರ ವೈವಿಧ್ಯವನ್ನು, ಜನರ ಅಭಿರುಚಿಯನ್ನು ಅರಿತುಕೊಳ್ಳಲು ಒಳ್ಳೆಯ ಅವಕಾಶ. ರಾಜಸ್ತಾನದಲ್ಲಿ ಚಳಿಯೂ ಜಾಸ್ತಿ, ಬಿಸಿಲೂ ಹೆಚ್ಚು. ಹೀಗಾಗಿ ಅವರು ರೂಢಿಸಿಕೊಂಡಿರುವ ಆಹಾರ ಕ್ರಮವೂ ವಿಭಿನ್ನ.

ರಾಜಸ್ತಾನಿ ಆಹಾರ ಎಂದರೆ ಅದಕ್ಕೆ ಸಾಸಿವೆ ಎಣ್ಣೆಯನ್ನೇ ಜಾಸ್ತಿ ಬಳಸಬೇಕು. ಹಾಗೆಯೇ ರಾಜಸ್ತಾನಿ ಸಾಂಪ್ರದಾಯಿಕ ತಿಂಡಿಗಳನ್ನು ಕೈಯಲ್ಲೇ ತಿನ್ನಬೇಕು’ ಎಂದು ಪಾಶ್ಚಾತ್ಯ ವ್ಯಾಮೋಹದಲ್ಲಿ ನಾನು ಚಮಚ ಹಿಡಿದ ಬಗೆಯನ್ನು ನಾಜೂಕಾಗಿ ವಿರೋಧಿಸಿದ್ದರು ದೇವ್‌.

ತಟ್ಟೆಯಲ್ಲಿ ಬಡಿಸಲಾಗಿದ್ದ ಖೇರ್‌ ಸಾಂಗ್ರಿ ವಿಶೇಷವಾಗಿತ್ತು. ರಾಜಸ್ತಾನದಲ್ಲಿ ಬೆಳೆಯುವ ಒಂದು ರೀತಿಯ ಸೊಪ್ಪು ಇದು. ಮರುಭೂಮಿ ಪ್ರದೇಶವಾದ್ದರಿಂದ ಇಲ್ಲಿ ಆಹಾರಗಳನ್ನು ಶೇಖರಿಸಿಡುವ ವಿಧಾನವೂ ವಿಶಿಷ್ಟ.

ಕತ್ತರಿಸಿ, ಒಣಗಿಸಿ ಬಹುಕಾಲ ಇಡಬಹುದಾದ ಈ ಸೊಪ್ಪನ್ನು ದೇವ್‌ ಆಹಾರೋತ್ಸವಕ್ಕಾಗಿ ಎಂದೇ ತರಿಸಿದ್ದರು. ಒಣಗಿದ ಸೊಪ್ಪನ್ನು ನೀರಿನಲ್ಲಿ ನೆನೆಸಿ ಅದಕ್ಕೆ ಎಲ್ಲ ರೀತಿಯ ಮಸಾಲೆಯನ್ನು ಬೆರೆಸಿ ತಯಾರಿಸಲಾಗಿದ್ದ ಖೇರ್‌ ಸಾಂಗ್ರಿ ರುಚಿ ವಿಶೇಷವಾಗಿತ್ತು. ದಾಲ್‌ ತುಸು ಹುಳಿ ಎನಿಸಿತು. ಅರ್ಬಿ ಹರಾ ಪ್ಯಾಸ್‌ ವಿಶೇಷ ರುಚಿ ಇತ್ತು. ಇದು ಕೆಸುವಿನಗಡ್ಡೆಯಿಂದ ತಯಾರಿಸಿದ ಸ್ವಾದಿಷ್ಟ ತಿನಿಸು.

ಕೆಂಪು ಮೆಣಸಿನ ಕಾಯಿ, ಸೌತೆಕಾಯಿ, ಕ್ಯಾರೆಟ್‌ ಅನ್ನು ಉದ್ದವಾಗಿ ಕತ್ತರಿಸಿ ಅದನ್ನು ವೃತ್ತಾಕಾರದಲ್ಲಿ ಕತ್ತರಿಸಿದ ಈರುಳ್ಳಿಯಲ್ಲಿ ಪೋಣಿಸಿ ನೀಡಿದ ಸೌತೆಕಾಯಿ ಸಲಾಡ್‌ ನೋಡಲು ಮಜವಾಗಿತ್ತು. ಉಪ್ಪು ಕಾರ ಇಲ್ಲದ ಈ ಸಲಾಡ್‌ ಹಸಿ ತರಕಾರಿ ಪ್ರಿಯರಿಗಷ್ಟೇ ಇಷ್ಟವಾಗಬಹುದು. ಪ್ರಾರಂಭದಲ್ಲಿ ನೀಡಿದ ಕಲ್ಲಂಗಡಿ ಜ್ಯೂಸ್‌ ತಾಜಾ ಆಗಿತ್ತು.

ಅಂದಹಾಗೆ ರಾಜಸ್ತಾನಿ ಥಾಲಿ ಮೆಲ್ಲುತ್ತಿದ್ದಂತೆ ಲಸ್ಸಿ ತಂದುಕೊಟ್ಟರು. ಮಜ್ಜಿಗೆಗೆ ಹದವಾಗಿ ಸಕ್ಕರೆ ಬೆರೆಸಲಾಗಿತ್ತು. ‘ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ರಾಜಸ್ತಾನದಲ್ಲಿ ತುಂಬ ಜನಪ್ರಿಯ’ ಎಂದರು ಮಾರುಕಟ್ಟೆ ವ್ಯವಸ್ಥಾಪಕ ಅನಿರ್ಬಾನ್‌ ದೆ ಮುನ್ಶಿ.

ರವೆಗೆ ತುಪ್ಪ, ಸ್ವಲ್ಪ ಸಕ್ಕರೆ ಹಾಕಿ ಹುರಿದಂತಿದ್ದ ಚುರ್ಮಾ ಅಷ್ಟೊಂದು ಸ್ವಾದ ಎನಿಸಲಿಲ್ಲ. ಆದರೆ ಊಟ ಮುಗಿಯುತ್ತಿದ್ದಂತೆ ಘೆವಾರ್‌ ಅನ್ನು ಬಟ್ಟಲಲ್ಲಿ ತಂದಿಟ್ಟರು. ‘ಇದು ರಾಜಸ್ತಾನಿ ಸ್ಪೆಶಲ್’ ಎಂದು ದೇವ್‌ ಮಾತು ಮುಗಿಸುವುದರ ಒಳಗೆ ನನ್ನ ಕೈಯಲ್ಲಿದ್ದ ಚಮಚ ಅದರ ರುಚಿಯನ್ನು ನೋಡಲು ಮುಂದಾಗಿತ್ತು.

ಹೆಬ್ಬೆರಳು, ತೋರು ಬೆರಳೆರೆಡನ್ನೂ ಮುಂದೆ ಚಾಚಿ ‘ಹೀಗೆ ಹಿಡಿದು ತಿಂದರೆ ಮಾತ್ರ ಘೇವಾರ್‌ ನಿಮಗೆ ಇಷ್ಟವಾಗುತ್ತದೆ’ ಎಂದರು. ಅಂತೆಯೇ ಘೇವಾರ್‌ ಸವಿದೆ, ತುಂಬಾ ರುಚಿಯಾಗಿತ್ತು. ಮೇಲೆ ಸುರಿದ ಬೆಣ್ಣೆಯೂ ಘೇವಾರ್‌ನೊಂದಿಗೆ ಸೇರಿಕೊಂಡು ಬಾಯಲ್ಲಿ ನೀರೂರಿಸಿತು. ಮತ್ತೆ ಮತ್ತೆ ತಿನ್ನಬೇಕು ಎನಿಸುವಷ್ಟು– ಎಂದೂ ಮರೆಯಲಾಗದ ಸ್ವಾದ ಘೇವಾರ್‌ ಹೊಂದಿದೆ. ಈಗ ಅದನ್ನು ನೆನೆಸಿಕೊಂಡರೂ ಬಾಯಿ ನೀರೂರುತ್ತದೆ.

ಅಂದ ಹಾಗೆ ರಾಜಸ್ತಾನಿ ಥಾಲಿಯ ಸ್ವಾದದ ಹಿಂದೆ ಚೌಕಿ ದಾನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಗಿರಿರಾಜ್‌ ರಮೋಲಾ ಕೈಚಳಕವಿದೆ. ರಾಜಸ್ತಾನಿ ಆಹಾರೋತ್ಸವದಲ್ಲಿ ನಿತ್ಯವೂ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಥಾಲಿ ಲಭ್ಯ. ವಿದೇಶಿ ಅತಿಥಿಗಳು ಹೋಟೆಲ್‌ನಲ್ಲಿದ್ದು ರಾಜಸ್ತಾನಿ ಥಾಲಿಯನ್ನು ಅವರು ತುಂಬಾ ಇಷ್ಟಪಟ್ಟು ಸವಿಯುತ್ತಿದ್ದಾರಂತೆ.

ರೆಸ್ಟೊರೆಂಟ್‌: ಹೊವಾರ್ಡ್‌ ಜಾನ್ಸನ್‌ ಹೋಟೆಲ್‌
ವಿಶೇಷತೆ: ರಾಜಸ್ತಾನಿ ಥಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT