ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯೆಂಬ ಜೂಜಿಗೆ ಪರ್ಯಾಯ ಬೆಳೆಯೇ ಜವಾಬು

ಕಾವೇರಿ ಜಲ ವಿವಾದ: ಪರ್ಯಾಯವೇನು?
Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರಾಜ್ಯದ ಬಹುಪಾಲು ಕೃಷಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ.  ಮಳೆಯ ಪ್ರಮಾಣದಲ್ಲಿ ಆಗುವ ವ್ಯತ್ಯಯ ಕೃಷಿಕರ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಬಲ್ಲದು. ಹಾಗಾಗಿಯೇ ಕೃಷಿಯನ್ನು ‘ಮಳೆಯ ಜೊತೆಗಿನ ಜೂಜು’ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವುದು ಸಾಮಾನ್ಯ ವಿದ್ಯಮಾನ ಎಂಬಂತಾಗಿದೆ.

ಹವಾಮಾನ ವೈಪರೀತ್ಯ ಹೇಗೆ ಸಂಕಷ್ಟವನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈ ವರ್ಷದ ಪರಿಸ್ಥಿತಿ ಉತ್ತಮ ಉದಾಹರಣೆ. ಹವಾಮಾನ ತಜ್ಞರ ಮುನ್ಸೂಚನೆ ಪ್ರಕಾರ ಈ ವರ್ಷ ಒಳ್ಳೆಯ ಮಳೆಯಾಗಬೇಕಿತ್ತು. ಜೂನ್‌, ಜುಲೈನಲ್ಲಿ ಮಳೆಯಾಯಿತು. ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆಯೂ ಸಿಕ್ಕಿತ್ತು. ಎರಡು ವರ್ಷಗಳಲ್ಲಾದ ನಷ್ಟ ತುಂಬಿಕೊಳ್ಳಲು ಮುಂದಾದ ರೈತರು ಅರೆ ನೀರಾವರಿ ಪ್ರದೇಶದಲ್ಲೂ ಕೃಷಿಗೆ ಸಿದ್ಧತೆ ಮಾಡಿಕೊಂಡರು.

ದಕ್ಷಿಣ ಕರ್ನಾಟಕದ ಮಳೆಯಾಶ್ರಯದ ಪ್ರದೇಶ ಹಾಗೂ  ನೀರಾವರಿ ಆಶ್ರಯದ ಪ್ರದೇಶಗಳಲ್ಲಿ ಬಿತ್ತನೆಯೂ ಭರ್ಜರಿಯಾಗಿಯೇ ನಡೆಯಿತು. ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಆಗಸ್ಟ್‌ನಲ್ಲಿ ಶೇಕಡ 90ರಷ್ಟು ಮಳೆ ಕೊರತೆಯಾಗಿದೆ. ಮೊದಲು ರೈತರನ್ನು ಹುರಿದುಂಬಿಸಿದ ಸರ್ಕಾರ ನಂತರ ‘ನೀರು ನೀಡಲು ದುಸ್ತರವಾಗುತ್ತದೆ’ ಎಂದು ಕೈಚೆಲ್ಲಿತು. ಈಗ ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ.

‘ಮಳೆ ಕೊರತೆ ಇರುವುದು ಮೊದಲೇ ಗೊತ್ತಾದರೆ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಿದೆ. ಏಕಾಏಕಿ ಎದುರಾಗುವ ಮಳೆ ಕೊರತೆಯಿಂದ ಉಂಟಾಗುವ ಸಂಕಷ್ಟವನ್ನು ಸಂಪೂರ್ಣ ತಪ್ಪಿಸಲು ಸಾಧ್ಯವಿಲ್ಲ. ರೈತರು ಧೈರ್ಯಗುಂದದೇ ಇದ್ದರೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ದಾರಿ ಇದೆ. ಈಗಾಗಲೇ ಬೆಳೆದ ಬೆಳೆಯಲ್ಲಿ ಸ್ವಲ್ಪ ಪ್ರಮಾಣವನ್ನಾದರೂ ಉಳಿಸಿಕೊಳ್ಳಲು ಸಾಧ್ಯವಿದೆ’ ಎಂದು ಸಲಹೆ ನೀಡುತ್ತಾರೆ ಕೃಷಿ ತಜ್ಞರು.

‘ಮಳೆ ಕೊರತೆ ಆಗಲಿದೆ ಎಂಬ ಬಗ್ಗೆ ನಿಖರ ಮುನ್ಸೂಚನೆ ಸಿಕ್ಕರೆ  ಪರ್ಯಾಯ ಬೆಳೆ ವಿನ್ಯಾಸ ಮಾಡಬಹುದು. ಅರೆ ನೀರಾವರಿ ಬೆಳೆಗಳನ್ನು ಬೆಳೆಯಬಹುದು. ಇವುಗಳ ಬಿತ್ತನೆ ಬೀಜವನ್ನು ಮುಂಚೆಯೇ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ಯಾವ ಬಗೆಯ ಪರ್ಯಾಯ ಬೆಳೆ ಬೆಳೆಯಬೇಕು ಎಂಬುದನ್ನು  ಮೇ ತಿಂಗಳಲ್ಲೇ ನಿರ್ಧಾರ ಮಾಡಬೇಕು’ ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಒಣಬೇಸಾಯ ವಿಭಾಗದ ಸಹಪ್ರಾಧ್ಯಾಪಕ ಡಾ. ತಿಮ್ಮೇಗೌಡ. 

‘ಜೂನ್‌  ಜುಲೈನಲ್ಲಿ ಮಳೆ ಅಭಾವ ಎದುರಾದಾಗ ರಾಗಿ, ಜೋಳ, ಶೇಂಗಾ ಬೆಳೆಯಬಹುದು. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡರೆ ರಾಗಿ ಹೆಚ್ಚು ಸೂಕ್ತ. ಇದಕ್ಕೆ ಸ್ವಲ್ಪ ನೀರು ಕೊಟ್ಟರೆ ಸಾಕು. ಆ ಬಳಿಕವೂ ನಿರೀಕ್ಷಿತ ಮಳೆ ಬಾರದಿದ್ದರೆ ಸಿರಿಧಾನ್ಯ (ಸಾಮೆ, ಬರಗು, ಆರಕ, ಊದಲು ಮುಂತಾದವು) ಬೆಳೆಗಳನ್ನು ಬೆಳೆಯಬಹುದು.  ವರ್ಷಪೂರ್ತಿ ಮಳೆ ಆಗದಿದ್ದರೂ ಹುರುಳಿ ಬೆಳೆಯಬಹುದು. ಈ ಬೆಳೆಗೆ ಒಂದೆರಡು ಮಳೆ ಬಿದ್ದರೂ ಸಾಕಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಈಗಾಗಲೇ ಕಬ್ಬು ಬೆಳೆದಿರುವಲ್ಲಿ ಪರ್ಯಾಯ ಬೆಳೆ ಕಷ್ಟ. ಕಬ್ಬು ಬೆಳೆಯನ್ನು ಸ್ವಲ್ಪ ಪ್ರಮಾಣದಲ್ಲಾದರೂ ಉಳಿಸಿಕೊಳ್ಳಬೇಕಾದರೆ ಅದಕ್ಕೆ ನೀರುಣಿಸುವ ಪದ್ಧತಿ ಬದಲಾಯಿಸಬೇಕು. ಈಗ ಬಳಸುವ ನೀರಿಗಿಂತ ಶೇ 50ರಷ್ಟು ನೀರು ಕಡಿಮೆ ಉಣಿಸಿದರೂ ಕಬ್ಬನ್ನು ಉಳಿಸಬಹುದು.  ಕಬ್ಬಿಗೆ ನೀರು ಹಾಯಿಸುವ ಬದಲು, ಮಣ್ಣಿನೊಳಗೆ  ತೂತು ಮಾಡಿದ ಪೈಪು ಹಾಕಿ ಅದಕ್ಕೆ ನೀರು ಬಿಡಬಹುದು. ಸಾಲು ಬಿಟ್ಟು ಸಾಲು ನೀರು ಹಾಯಿಸಬಹುದು. ವಾರಕ್ಕೊಮ್ಮೆ ನೀರು ಕೊಡುವ ಬದಲು 12 ದಿನಕ್ಕೊಮ್ಮೆ ಕೊಡಬೇಕು. ಇದರಿಂದ ಇಳುವರಿ ಸ್ವಲ್ಪ ಕಡಿಮೆ ಆಗಬಹುದು. ಆದರೆ, ಈಗ ಇರುವ ನೀರನ್ನೆಲ್ಲ ಕೊಟ್ಟು  ಕೊನೆ ಹಂತದಲ್ಲಿ ನೀರಿಲ್ಲದೆ ಬೆಳೆ ಪೂರ್ತಿ ನಷ್ಟವಾಗುವುದು ತಪ್ಪುತ್ತದೆ’ ಎನ್ನುತ್ತಾರೆ ಡಾ. ತಿಮ್ಮೇಗೌಡ. 

‘ಸಾಮಾನ್ಯವಾಗಿ ರೈತರು ಎಲ್ಲ ಬೆಳೆಗಳಿಗೆ ಯೂರಿಯಾ ಜಾಸ್ತಿ ಬಳಸುತ್ತಾರೆ. ಇದರಿಂದ ಎಲೆ ಮತ್ತು ಕಾಂಡದ ಬೆಳವಣಿಗೆ ಜಾಸ್ತಿ ಆಗುತ್ತದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಗಿಡಗಳಿಗೆ ಯೂರಿಯಾ ಬದಲು ಸಮತೋಲಿತ ಗೊಬ್ಬರ ಕೊಡಬೇಕು. ಪೊಟಾಷಿಯಂ ಅಂಶವನ್ನು ಶಿಫಾರಸು ಮಾಡಿದ್ದಕ್ಕಿಂತ ಶೇಕಡ 25ರಷ್ಟು ಜಾಸ್ತಿ ಕೊಡಬೇಕು. ಗಿಡಕ್ಕೆ ಬರವನ್ನು ತಡೆಯುವ ಶಕ್ತಿಯನ್ನು ಪೊಟಾಷ್ ನೀಡುತ್ತದೆ’ ಎನ್ನುತ್ತಾರೆ ಅವರು. 

ಬೆಳೆಗೆ ನೀರುಣಿಸುವಾಗಲೂ ಜಾಣತನ ಪ್ರದರ್ಶಿಸಬೇಕು. ಸಂದಿಗ್ಧ ಹಂತದಲ್ಲಿ ನೀರು ಕೊಟ್ಟರೆ ಬೆಳೆ ಉಳಿಸಿಕೊಳ್ಳಬಹುದು. ತೆಂಡೆ ಒಡೆಯುವ ಹಂತದಲ್ಲಿ (ಪೈರು ಕವಲು ಬಿಡುವುದು) ದ್ವಿದಳ ಧಾನ್ಯಗಳಿಗೆ ಶಾಖೆ ಒಡೆಯುವ ಹಂತ, ಹೂಬಿಡುವ ಹಂತ, ಕಾಳು ಕಚ್ಚುವ ಹಂತದಲ್ಲಿ ನೀರು ಹೆಚ್ಚು ಅವಶ್ಯ. ಈ ಹಂತದಲ್ಲಿ ನೀರಿನ ಕೊರತೆ ಆದರೆ ಇಳುವರಿ ನಷ್ಟ ಜಾಸ್ತಿ. ಇದ್ದ ನೀರನ್ನು ಈ ಹಂತದಲ್ಲಿ ಬಳಸಬೇಕು’ ಎಂದು ಅವರು ವಿವರಿಸುತ್ತಾರೆ.

‘ರೈತರು ಪರ್ಯಾಯ ಬೆಳೆ ಬೆಳೆಯುವುದಾದರೆ ಅದಕ್ಕೆ ಬೇಕಾದ ಬಿತ್ತನೆ ಬೀಜವನ್ನು ಪೂರೈಸಲು ಕೃಷಿ ಇಲಾಖೆ ಸಿದ್ಧ ಇದೆ. ಅರೆ ನೀರಾವರಿ ಬೆಳೆಗಳ ಬಿತ್ತನೆ ಬೀಜದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ’ ಎಂದು ಹೇಳುತ್ತಾರೆ ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್‌.

‘ನಾವು ಮಳೆ ಕೊರತೆಯನ್ನು ಎದುರಿಸಲು ವರ್ಷದ ಆರಂಭದಲ್ಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ. ರೈತರು ಹೆಚ್ಚಾಗಿ ಅಧಿಕ ನೀರಾವರಿಯನ್ನು ಬಯಸುವ ಭತ್ತದ ಬೆಳೆಯನ್ನೇ ನೆಚ್ಚಿಕೊಳ್ಳುತ್ತಾರೆ. ಮಳೆ ಕಡಿಮೆ ಇರುವಾಗ ಪರ್ಯಾಯ ಬೆಳೆಯನ್ನು ಬೆಳೆಯುವಂತೆ ಅವರಿಗೆ ಮನವರಿಕೆ ಮಾಡುವುದು ಕಷ್ಟ’ ಎಂದು ಅಳಲು ತೋಡಿಕೊಳ್ಳುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

‘ಸಂಕಷ್ಟದ ಪರಿಸ್ಥಿತಿ ಎದುರಿಸಲು ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತಾಗಬಾರದು.   ಕೃಷಿಕರಿಗೆ ಮನವರಿಕೆ ಮಾಡುವ ಜವಾಬ್ದಾರಿಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಹಿಸಿಕೊಳ್ಳಬೇಕು’ ಎಂಬುದು ಕೃಷಿ ವಿಜ್ಞಾನಿಗಳ ಸಲಹೆ.

ಮಳೆ ಆಧರಿಸಿ ಬರಗಾಲ ನಿರ್ಧರಿಸಿ
‘ವಾರ್ಷಿಕ ಮಳೆ ಪ್ರಮಾಣ ಆಧರಿಸಿ ಬರಗಾಲವನ್ನು ನಿರ್ಧರಿಸುವುದು ಅವೈಜ್ಞಾನಿಕ. ಪ್ರತಿ ತಿಂಗಳು ಬೀಳುವ ಮಳೆ ಪ್ರಮಾಣ ಆಧರಿಸಿ ಬರವನ್ನು ನಿರ್ಧರಿಸಬೇಕು.

ಬೆಳೆಗೆ ಕೇವಲ ನೀರಿದ್ದರೆ ಸಾಲದು, ಅದರ ಜತೆಗೆ ಬೆಳಕು ಹಾಗೂ ಉಷ್ಣಾಂಶ ಕೂಡ ಅನುಕೂಲಕರವಾಗಿರಬೇಕು. ದಕ್ಷಿಣ ಕರ್ನಾಟಕದಲ್ಲಿ ಭತ್ತವೇ ಪ್ರಮುಖ  ಬೆಳೆ. ಇಲ್ಲಿನ ಕೃಷಿ ಶೇ 70ರಷ್ಟು ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಭತ್ತದ ಫಸಲು ಚೆನ್ನಾಗಿ ಬರಬೇಕಾದರೆ  ಅಕ್ಟೋಬರ್‌ ಒಳಗೆ ಹೂಬಿಟ್ಟು, ಕಾಳುಕಟ್ಟುವ ತಳಿ ಬಳಸಬೇಕು. ಡಿಸೆಂಬರ್‌ ಒಳಗೆ  ಕಟಾವು ಮುಗಿಯಬೇಕು. ಹಿಂಗಾರು ಮಳೆಯ ಅವಧಿಯಲ್ಲಿ  ಉಷ್ಣಾಂಶ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ಕಾಳು ಕಟ್ಟುವುದಿಲ್ಲ. ಭತ್ತ ಜೊಳ್ಳು ಆಗುತ್ತದೆ.
- ಡಾ. ನಾಗರಾಜು, ಪ್ರಾಧ್ಯಾಪಕ, ಬೇಸಾಯ ವಿಜ್ಞಾನ ವಿಭಾಗ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ನಿಖರ ಮುನ್ಸೂಚನೆ ಅಸಾಧ್ಯ
‘ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಹವಾಮಾನ ಮುನ್ಸೂಚನೆಯಲ್ಲಿ ನಿಖರತೆ ಇರುವುದಿಲ್ಲ. ಉಷ್ಣಾಂಶ, ಹವಾಮಾನಕ್ಕೆ  ಸಂಬಂಧಿಸಿದ ಇತರ ಅಂಶಗಳಲ್ಲಾಗುವ ಸಣ್ಣ ವ್ಯತ್ಯಾಸವೂ ಹವಾಮಾನ ಮುನ್ಸೂಚನೆ ಮೇಲೆ ಪ್ರಭಾವ ಬೀರುತ್ತದೆ.
- ಡಾ. ತಿಮ್ಮೇಗೌಡ, ಸಹಪ್ರಾಧ್ಯಾಪಕ, ಒಣಬೇಸಾಯ ವಿಭಾಗ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಯೋಜನೆ ಅಗತ್ಯ
ರೈತರು ಮಳೆ ಕೊರತೆಯಿಂದ ನಷ್ಟಕ್ಕೆ ಗುರಿಯಾದಾಗ ಅವರಿಗೆ ಪರಿಹಾರ ನೀಡುವುದಕ್ಕೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ದುಡ್ಡಿನ ರೂಪದಲ್ಲಿ ಪರಿಹಾರ ಸಾಧ್ಯವಿಲ್ಲದಿದ್ದರೂ, ಪರ್ಯಾಯ ಬೆಳೆ ಬೆಳೆಯಲು ಬಿತ್ತನೆ ಬೀಜ ಹಾಗೂ ಅದಕ್ಕೆ ಬೇಕಾದ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು
- ಡಾ. ಟಿ.ಶೇಷಾದ್ರಿ, ಬೇಸಾಯ ವಿಜ್ಞಾನ ಪ್ರಾಧ್ಯಾಪಕ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಅಣೆಕಟ್ಟು ತುಂಬದು
ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ಬೀಳುವ ಮಳೆ ನೀರು ಭೂಮಿಯಲ್ಲಿ ಇಂಗುತ್ತದೆ. ಅಣೆಕಟ್ಟೆಗೆ ನೀರಿನ ಹರಿವು ಜಾಸ್ತಿ ಆಗುವುದು ಆಗಸ್ಟ್‌ ತಿಂಗಳಲ್ಲಿ.  ಈ ಬಾರಿ ಜೂನ್‌ ಜುಲೈನಲ್ಲಿ ಮಳೆ ಆಗಿದೆ. ಆದರೆ ಆಗಸ್ಟ್‌ನಲ್ಲಿ ಶೇ 90ರಷ್ಟು ಮಳೆ ಕೊರತೆ ಆಗಿದ್ದರಿಂದ ಕೆಆರ್‌ಎಸ್‌ ತುಂಬಲಿಲ್ಲ ಎನ್ನುತ್ತಾರೆ ಕೃಷಿ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT