ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯೋ ಗರ್ಭ ನಿಲ್ಲುತ್ತಿಲ್ಲ...

Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸತತ ಮೂರು ಬಾರಿ ಗರ್ಭಪಾತವಾದ ನಂತರವೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾಗುವುದನ್ನು ‘ಮರುಕಳಿಸುವ ಗರ್ಭಪಾತ’ ಎನ್ನುತ್ತಾರೆ. ಇಂಥ ಸಂದರ್ಭದಲ್ಲಿ ಕೂಲಂಕಷ ತಪಾಸಣೆ ಮತ್ತು ಪರೀಕ್ಷೆಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

ಶೇ. 1ರಿಂದ 2ರಷ್ಟು ಮಹಿಳೆಯರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ಶೇ. 60ರಷ್ಟು ಗರ್ಭಸ್ರಾವಗಳು ಅನಿಯಮಿತವಾಗಿ ಸಂಭವಿಸುತ್ತವೆ. ಗರ್ಭಕಟ್ಟುವ ಸಂದರ್ಭದಲ್ಲಿ ಭ್ರೂಣವು ಸ್ವೀಕರಿಸುವ ವಂಶವಾಹಿಗಳಲ್ಲಿರುವ ವರ್ಣತಂತುಗಳ ವೈಪರೀತ್ಯ ಇಂಥ ಅನಪೇಕ್ಷಿತ ಬೆಳವಣಿಗೆಗೆ ಮುಖ್ಯ ಕಾರಣ.

ವಂಶವಾಹಿ ಸಮಸ್ಯೆಗೆ ನಿರ್ದಿಷ್ಟ ಕಾರಣ ಎಂಬುದಿಲ್ಲ. ವೈದ್ಯಕೀಯ ವಿಜ್ಞಾನವೂ ಇಂಥದ್ದೇ ಕಾರಣದಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪತ್ತೆ ಮಾಡಿಲ್ಲ. ತುಸು ವಯಸ್ಸಾದ ನಂತರ ವಂಶಾಭಿವೃದ್ಧಿಗಾಗಿ ಯತ್ನಿಸುವ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಮರುಕಳಿಸುವ ಗರ್ಭಪಾತದ ಸಮಸ್ಯೆಯಿಂದ ಬಳಲುವ ಕೆಲ ಪ್ರಕರಣಗಳಲ್ಲಿ, ಗಂಡು ಅಥವಾ ಹೆಣ್ಣಿಗೆ ವಂಶವಾಹಿ ಸಮಸ್ಯೆ ಇರುವುದು ಪತ್ತೆಯಾಗಿದೆ. ವಂಶವಾಹಿಯ ಒಂದು ವರ್ಣತಂತು ಮತ್ತೊಂದು ವರ್ಣತಂತುವಿನೊಂದಿಗೆ ಬೆಸೆದುಕೊಂಡಿರುತ್ತದೆ. ಇದನ್ನು ಸ್ಥಾನಪಲ್ಲಟ ಸಮಸ್ಯೆ (ಟ್ರಾನ್ಸ್‌ಲೊಕೇಶನ್) ಎಂದು ಗುರುತಿಸುತ್ತಾರೆ.

ಸ್ಥಾನಪಲ್ಲಟದ ಸಮಸ್ಯೆ ಎದುರಿಸುತ್ತಿರುವವರ ದೇಹಸ್ಥಿತಿಯಲ್ಲಿ ಕಾಯಿಲೆಯ ಯಾವುದೇ ಲಕ್ಷಣ ಗೋಚರಿಸುವುದಿಲ್ಲ. ಆದರೆ ಅವರ ದೇಹದಿಂದ ಬಿಡುಗಡೆಯಾಗುವ ಅಂಡಾಣುಗಳು ಅಥವಾ ವೀರ್ಯಾಣುಗಳಲ್ಲಿ ವಂಶವಾಹಿಗಳು ವೈಪರಿತ್ಯದ ವರ್ಣತಂತುಗಳನ್ನು ಹೊಂದಿರುತ್ತವೆ. ಭ್ರೂಣವು ಅತಿ ಹೆಚ್ಚು ಅಥವಾ ಅತಿ ಕಡಿಮೆ ವಂಶವಾಹಿ ಅಂಶಗಳನ್ನು ಸ್ವೀಕರಿಸಿದರೆ ಸರಿಯಾಗಿ ಬೆಳವಣಿಗೆ ಹೊಂದದೆ, ಗರ್ಭಪಾತ ಸಂಭವಿಸುತ್ತದೆ.

ಜನನಾಂಗದ ಸಮಸ್ಯೆ
ಹುಟ್ಟಿನಿಂದಲೇ ಇರುವ ಜನನಾಂಗದ ಕೆಲವು ಸಮಸ್ಯೆಗಳೂ ಮರುಕಳಿಸುವ ಗರ್ಭಪಾತಕ್ಕೆ ಕಾರಣವಾಗುತ್ತವೆ. ವಿಭಜಿತ ಗರ್ಭಾಶಯವು ಇಂಥ ಸಮಸ್ಯೆಗೆ ಸಾಮಾನ್ಯ ಕಾರಣ ಎನಿಸಿದೆ. ನವಿರಾದ ಪೊರೆಯು ಗರ್ಭಾಶಯವನ್ನು ವಿಭಜಿಸಿದ್ದರೆ ಗರ್ಭ ನಿಲ್ಲುವುದು ಕಷ್ಟ.

ಅಶರ್‌ಮನ್ ಸಿಂಡ್ರೋಮ್‌ ಸಹ ಮರುಕಳಿಸುವ ಗರ್ಭಪಾತಕ್ಕೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮಹಿಳೆಗೆ ತಾನು ಗರ್ಭವತಿ ಎಂದು ಅರಿವಾಗುವ ಮೊದಲೇ ಗರ್ಭಾಶಯದಲ್ಲಿ ಅಂಟು ಮತ್ತು ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಗರ್ಭಾಶಯದಲ್ಲಿ ಕೆಲವೊಮ್ಮೆ ಹುಣ್ಣು ಅಥವಾ ಬೇಡದ ಜೀವಕೋಶಗಳು ಬೆಳೆಯುತ್ತವೆ. ಇದೂ ಗರ್ಭಪಾತಕ್ಕೆ ಕಾರಣವಾಗಬಲ್ಲದು.

ದೈಹಿಕ ಸಮಸ್ಯೆಗಳು
ಮಹಿಳೆಯರ ದೇಹದಲ್ಲಿ ಕಂಡುಬರುವ ಕೆಲ ಸಮಸ್ಯೆಗಳೂ ಮರುಕಳಿಸುವ ಗರ್ಭಪಾತಕ್ಕೆ ಕಾರಣವಾಗುತ್ತವೆ. ಆ್ಯಂಟಿಫೋಸ್‌ಫೋಲಿಪಿಡ್‌ ಸಿಂಡ್ರೋಮ್ (ಎಪಿಎಸ್) ಅಂಥದ್ದರಲ್ಲಿ ಒಂದು. ಇದು ದೇಹದ ಸ್ವಯಂಪ್ರೇರಿತ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಕೆಯ ದೇಹವು ರಕ್ತದ ಹೆಪ್ಪುಕಟ್ಟುವಿಕೆಗೆ ಕಾರಣವಾಗುವ ಪ್ರತಿವಿಷವನ್ನು (ಆ್ಯಂಟಿಬಾಡಿ) ಅಸ್ವಾಭಾವಿಕವಾಗಿ ಉತ್ಪಾದಿಸುತ್ತದೆ. ಎಪಿಎಸ್ ಸಮಸ್ಯೆಯಿಂದ ಭ್ರೂಣಗಳ ಸಾವು ಮತ್ತು ಗರ್ಭಪಾತ ಸಂಭವಿಸುತ್ತದೆ.

ಡಯಾಬಿಟಿಸ್ ಮೆಲ್ಲಿಟಸ್ ಎಂಬ ಮತ್ತೊಂದು ರೋಗವೂ ಮರುಕಳಿಸುವ ಗರ್ಭಪಾತಕ್ಕೆ ಕಾರಣ. ಈ ಸಮಸ್ಯೆ ಎದುರಿಸುವ ಮಹಿಳೆಯರ ರಕ್ತದಲ್ಲಿ ಗ್ಲೂಕೋಸ್ ಎಂಬ ಸಕ್ಕರೆಯ ಪ್ರಮಾಣ ವಿಪರೀತ ಹೆಚ್ಚಾಗಿರುತ್ತದೆ. ಸಕ್ಕರೆ ಕಾಯಿಲೆ ಅನುಭವಿಸುತ್ತಿರುವ, ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಗರ್ಭಪಾತದ ಆತಂಕ ಎದುರಿಸುತ್ತಾರೆ.

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಲ್ಲಿಯೂ ಮರುಕಳಿಸುವ ಗರ್ಭಪಾತ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

(ಮುಂದಿನ ವಾರ: ಮರುಕಳಿಸುವ ಗರ್ಭಪಾತಕ್ಕೆ ಗಂಡಸರು ಎಷ್ಟು ಕಾರಣ?)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT