ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನಮ್ಮ ನಿಮ್ಮ ಹೃದಯದ ವಿಷಯ

ಸೆ.29 ವಿಶ್ವ ಹೃದಯ ದಿನ
Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ರವಿಗೆ 45 ವರ್ಷ. ಆಫೀಸಿನ ಕೆಲಸವನ್ನು ಮುಗಿಸಿ ಸಂಜೆ ಮನೆಗೆ ಹಿಂದಿರುಗುತ್ತಲೇ ಏಕೋ ಎದೆಯುರಿಯಾಗುತ್ತಿದೆ ಎಂದು ಮನೆಯವರಿಗೆ ತಿಳಿಸಿದ. ಅದು ಆಸಿಡಿಟಿಯ ಕಾರಣ ಇರಬಹುದೆಂದು ಮನೆಮದ್ದನ್ನು ತೆಗೆದುಕೊಂಡ. ಬೆಳಿಗ್ಗೆಯಾದರೂ ಎದೆಯುರಿ ಶಮನವಾಗದ ಕಾರಣ ವೈದ್ಯರಲ್ಲಿ ತಪಾಸಣೆಗೆಂದು ಹೋದಾಗ ತಿಳಿದದ್ದು, ಹಿಂದಿನ ರಾತ್ರಿಯೇ ಒಂದು ಪುಟ್ಟ ಹೃದಯಾಘಾತಕ್ಕೆ ಒಳಗಾಗಿದ್ದನೆಂದು.

ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿ ಆಂಜಿಯೋಗ್ರಾಮ್ ಪರೀಕ್ಷೆ ಮಾಡಿದ ನಂತರ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡುವುದರ ಮೂಲಕ ಮುಚ್ಚಿದ್ದ ರಕ್ತನಾಳಗಳನ್ನು ತೆರವುಗೊಳಿಸಲಾಯಿತು. ಅದೃಷ್ಟವಶಾತ್ ರವಿಯು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದದ್ದರಿಂದ ಜೀವಕ್ಕೇನೂ ಅಪಾಯವಾಗಲಿಲ್ಲ. ಆದರೆ ಅನೇಕ ಬಾರಿ ಇಂಥ ಸಂದರ್ಭವನ್ನು ಉದಾಸೀನ ಮಾಡಿದ ಜನರು ಸಾವನ್ನಪ್ಪುವ ಸಾಧ್ಯತೆ ಇದೆ.

ಪ್ರತಿವರ್ಷದ  ಸೆಪ್ಟೆಂಬರ್ 29ರಂದು  ವರ್ಲ್ಡ್ ಹಾರ್ಟ್ ಡೇ (World Heart Day) ಎಂದು ಆಚರಿಸಲಾಗುತ್ತಿದೆ. ಬನ್ನಿ, ಈ ಸಂದರ್ಭದಲ್ಲಿ  ಪುಟ್ಟ ಹೃದಯದ ಬಗ್ಗೆ ಸ್ವಲ್ಪ ಜಾಗೃತಿ ಮೂಡಿಸಿಕೊಳ್ಳೋಣ. ನಮ್ಮ ಹೃದಯ ಎಡಮುಷ್ಟಿಯಷ್ಟು ಚಿಕ್ಕದಾದರೂ, ಇದರ ಕಾರ್ಯ ಮಾತ್ರ ಅಗಾಧ. ಮನುಷ್ಯನ ಜೀವವೇ ಇದರಲ್ಲಿ ಅಡಗಿರುತ್ತದೆ. ಹುಟ್ಟಿನಿಂದ ಸಾಯುವವರೆಗೂ ಮನುಷ್ಯನ ಹೃದಯ ವಿಶ್ರಾಂತಿಯಿಲ್ಲದೆ ದುಡಿಯುತ್ತದೆ. ಇದು ನಿಮಿಷಕ್ಕೆ 70-80 ಬಾರಿ ಲಬ್ ಡಬ್ ಎಂದು ಬಡಿಯುತ್ತ ದೇಹದ ಪ್ರತಿಯೊಂದು ಅಂಗಾಂಗಕ್ಕೂ ಶುದ್ಧರಕ್ತವನ್ನು ಒದಗಿಸುತ್ತದೆ.

ಹೃದಯದ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಕಾಣಬರುವುದು - ಹೃದಯಾಘಾತ ಮತ್ತು ಅದಕ್ಕೆ ಸಂಬಂಧಿತ ಕಾಯಿಲೆಗಳು (Coronary Heart Disease), ಹುಟ್ಟಿನಿಂದಲೇ ಬರುವ  ಹೃದಯದ ಕಾಯಿಲೆ (Congenital Heart Disease); ಉದಾಹರಣೆಗೆ ಹೃದಯದಲ್ಲಿ ರಂಧ್ರ, ಸಂಧಿವಾತರೋಗಕ್ಕೆ ಸಂಬಂಧಪಟ್ಟ ಕವಾಟಗಳ ತೊಂದರೆ (Rheumatic Heart Disease), ರಕ್ತದ ಏರೋತ್ತಡ. ಈ ಮೇಲೆ ತಿಳಿಸಿರುವ ಹೃದಯದ ಕಾಯಿಲೆಗಳಲ್ಲಿ ಅತಿಮುಖ್ಯವಾದುದು ಹೃದಯಾಘಾತ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು.

ಪಾಶ್ಚಾತ್ಯ ದೇಶಗಳಲ್ಲಿ ಹೃದಯ ಕಾಯಿಲೆಯ ಕಾರಣಗಳ ಅರಿವು ಜನರಲ್ಲಿ ಹೆಚ್ಚಾಗಿರುವುದರಿಂದ ಈ ಕಾಯಿಲೆಯಿಂದ ಉಂಟಾಗುವ ತೊಂದರೆಗಳು ಇಳಿಮುಖವಾಗುತ್ತಿವೆ. ಆದರೆ ಭಾರತ ದೇಶದಲ್ಲಿ ಹೃದಯಾಘಾತಕ್ಕೆ ಒಳಪಡುವ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮೊದಲೆಲ್ಲಾ ನಮ್ಮ ದೇಶದಲ್ಲಿ ಸಂಸಾರದ ಹೊರೆ ಹೊತ್ತಿರುವ ಮಧ್ಯಮ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ ಈಗ 25-30 ವಯಸ್ಸಿನಲ್ಲಿರುವ ಯುವಜನತೆಯಲ್ಲಿಯೂ ಒಂದು ಪಿಡುಗಾಗಿ ಕಾಣಿಸಿಕೊಳ್ಳಹತ್ತಿದೆ.

ಅನೇಕರು ಕುಳಿತು ಮಾಡುವ ಕೆಲಸಗಳಲ್ಲೇ ಹೆಚ್ಚು ನಿರತರಾಗಿದ್ದು (sedentary lifestyle), ಜಂಕ್–ಫುಡ್‌ನ ದಾಸರಾಗಿ, ಸಮಯದ ಅಭಾವದಿಂದ ಅಥವಾ ಸೋಮಾರಿತನದಿಂದ ವ್ಯಾಯಾಮಕ್ಕೂ ಸಮಯವಿಲ್ಲದೆ ತಮ್ಮ ಆರೋಗ್ಯವನ್ನು ಕಡೆಗಣಿಸಿಕೊಂಡು ಬದುಕುತ್ತಿದ್ದಾರೆ. ಈ ಕಾಯಿಲೆ ಗಂಡಸರಲ್ಲಿ ಹೆಚ್ಚು ಎನಿಸಿದರೂ ಸಾಕಷ್ಟು ಪ್ರಮಾಣದಲ್ಲಿ ಹೆಂಗಸರಲ್ಲೂ ಕಾಣಿಸಿಕೊಳ್ಳುತ್ತಿದೆ. ಇದರಿಂದ ಅವರ ಸಂಸಾರಗಳು ತೊಂದರೆಗೀಡಾಗುತ್ತವೆ.

ಮಾನವ ಹೃದಯದ ರಕ್ತನಾಳಗಳ ಪದರಗಳಲ್ಲಿ ಕೊಬ್ಬು (cholesterol) ಶೇಖರಣೆಗೊಂಡು ರಕ್ತನಾಳಗಳು ಗಡುಸಾಗಿ ಕಿರಿದಾಗುವುದರಿಂದ ಹೃದಯಾಘಾತ ಉಂಟಾಗುತ್ತದೆ. ಹೃದಯಾಘಾತಕ್ಕೆ ಅನೇಕ ಕಾರಣಗಳಿವೆ. ಬೀಡಿ–ಸಿಗರೇಟ್‌ಗಳ ಸೇದುವಿಕೆ (Smoking), ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವುದು, ಮಧುಮೇಹ (Diabetes), ರಕ್ತದ ಏರೊತ್ತಡ (High BP), ಸ್ಥೂಲ ಶರೀರ(obesity), ವ್ಯಾಯಾಮ ಇಲ್ಲದಿರುವುದು, ದೈಹಿಕ ಹಾಗೂ ಮಾನಸಿಕ ಒತ್ತಡಗಳು ಹಾಗೂ ಅನುವಂಶಿಕ ಕಾರಣಗಳು.

ಈ ಆಧುನಿಕ ಜೀವನಶೈಲಿ ಮತ್ತು ಒತ್ತಡದ ಬದುಕು ಮನುಷ್ಯನ ಹೃದಯಕ್ಕೆ ಹೊರೆಯಾಗುತ್ತಿದೆ. ಆದ್ದರಿಂದ ಹೃದಯಾಘಾತ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಬಲ್ಲ ಮುನ್ನೆಚ್ಚರಿಕೆಯ ಕ್ರಮಗಳಿಗೆ ಪ್ರಾಮುಖ್ಯ ನೀಡಬೇಕು. ಹೀಗಾಗಿ ಪ್ರತಿಯೊಬ್ಬರೂ 25 ವರ್ಷ ದಾಟುತ್ತಿದ್ದಂತೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ.

ಪ್ರಥಮ ಚಿಕಿತ್ಸೆ
ಯಾವುದೇ ವ್ಯಕ್ತಿಗೆ ಎದೆನೋವು ಕಾಣಿಸಿಕೊಂಡು ವಿಶ್ರಾಂತಸ್ಥಿತಿಯಲ್ಲಿಯೂ ನೋವುಶಮನವಾಗದಿದ್ದಲ್ಲಿ ಕೂಡಲೇ ವೈದ್ಯರ ಬಳಿ ಹೋಗುವುದು ಸೂಕ್ತ. Aspirin ಮಾತ್ರೆಯು ಮನೆಯಲ್ಲಿ ಲಭ್ಯವಿದ್ದಲ್ಲಿ ತೆಗೆದುಕೊಳ್ಳಬಹುದು. ಯಾರಿಗಾದರೂ ಎದೆನೋವು ಬಂದು ಪ್ರಜ್ಞಾಹೀನರಾಗಿ ಕೆಳಗೆ ಬಿದ್ದಲ್ಲಿ ಪ್ರಥಮ ಚಿಕಿತ್ಸೆ ಅವಶ್ಯ. ಅವರ ಎದೆಯ ಮೇಲೆ ಒಂದು ಬಾರಿ ಗುದ್ದಿ, ನಂತರ ನಿಮಿಷಕ್ಕೆ 100-120 ಬಾರಿಯಂತೆ ಎದೆಯ ಮಧ್ಯಭಾಗದಲ್ಲಿ ಜೋರಾಗಿ ಒತ್ತುತ್ತಿರಬೇಕು (Cardio Pulmonary Resuscitation-CPR).

ಇದರಿಂದ ಮೆದುಳು ಮತ್ತು ಹೃದಯಕ್ಕೆ ರಕ್ತಸಂಚಾರವಾಗಿ ಹೃದಯ ಪುನಃ ಚಾಲನೆಗೊಂಡು ರೋಗಿಯು ಎಚ್ಚರಗೊಳ್ಳುವ ಸಾಧ್ಯತೆಯಿರುತ್ತದೆ. ಇದನ್ನು ಆಂಬುಲೆನ್ಸ್ ವಾಹನ ಬರುವವರೆಗೂ ನಡೆಸಿದಲ್ಲಿ ರೋಗಿ ಬದುಕುಳಿಯುವ ಸಾಧ್ಯತೆ ಇರುತ್ತದೆ. ಈ ಸನ್ನಿವೇಶ ಯಾರಿಗೆ ಯಾವಾಗಲಾದರೂ ಬರಬಹುದು. ಆದ್ದರಿಂದ ಈ ಪ್ರಥಮ ಚಿಕಿತ್ಸೆಯನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಇದರ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಪಠ್ಯಕ್ರಮದ ಮೂಲಕ ಹಾಗೂ ಸಾಧ್ಯವಾದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ತಿಳಿವಳಿಕೆ ಮೂಡಿಸಬೇಕು.

ಹೃದಯಾಘಾತ ಆದಾಗ
ಹೃದಯಾಘಾತದ ಮೊದಲಿನ ಕೆಲವು ಗಂಟೆಗಳಲ್ಲಿ ಜೀವಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಅದನ್ನು ತಪ್ಪಿಸಲು ಆದಷ್ಟು ಬೇಗ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವುದು ಆವಶ್ಯ. ಇತ್ತೀಚಿನ ದಿನಗಳಲ್ಲಿ, ಆಸ್ಪತ್ರೆಯಲ್ಲಿ ಕಾರ್ಡಿಕ್‌ ಕ್ಯಾಥ್‌ಲ್ಯಾಬ್‌ (cardiac cathlab) ಸೌಕರ್ಯವಿದ್ದಲ್ಲಿ, ರೋಗಿಗೆ ತುರ್ತಾಗಿ ಕರೋನರಿ ಆಂಜಿಯೋಪ್ಲಾಸ್ಟಿ (Primary PTCA) ಮಾಡಿ ರಕ್ತಸಂಚಾರ ಸರಿಹೊಂದುವಂತೆ ಮಾಡುವುದು ಮೊದಲ ಆದ್ಯತೆಯಾಗಿರುತ್ತದೆ.

ಇದು ಸಾಧ್ಯವಾಗದ ಸಂದರ್ಭದಲ್ಲಿ ಹೊಸದಾಗಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಔಷಧವನ್ನು (thrombolytic therapy) ರಕ್ತನಾಳಗಳ ಮುಖಾಂತರ ಮೊದಲ ಆರು ಗಂಟೆಗಳ ಒಳಗೆ ಕೊಟ್ಟರೆ ಬಹಳ ಉಪಯೋಗವಾಗುವುದು. ಇದಾದ ನಂತರ ರೋಗಿಯನ್ನು cardiac cathlab ಸೌಕರ್ಯವಿರುವ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗಾಗಿ ಕಳುಹಿಸಿಕೊಡಬಹುದು.

ಈ ಮೇಲೆ ಹೇಳಿದ ಚಿಕಿತ್ಸೆಗಳನ್ನು  ಹೃದಯಾಘಾತವಾದ ಮೊದಲೆರಡು ಗಂಟೆಗಳ ಒಳಗಾಗಿ ಕೊಟ್ಟಲ್ಲಿ ಹೃದಯಾಘಾತದಿಂದ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು. ಈ ಸಮಯವನ್ನು ವೈದ್ಯರು ‘golden hours’ ಎಂದು ಕರೆಯುತ್ತಾರೆ. ಈ ಕಾರಣದಿಂದ ಆದಷ್ಟೂ ಬೇಗ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡುವುದು ಅತ್ಯವಶ್ಯ. ಇದು ಸಾಧ್ಯವಾಗದಿದ್ದಲ್ಲಿ, 6ರಿಂದ 12 ಗಂಟೆಗಳ ಒಳಗಾಗಿಯಾದರೂ ಈ ಚಿಕಿತ್ಸೆಯನ್ನು ಕೊಡಿಸಲು ಪ್ರಯತ್ನಿಸಬೇಕು.

ಸಾಮಾನ್ಯ ಹೃದಯ ತಪಾಸಣೆ
ತುರ್ತು ಚಿಕಿತ್ಸೆಯ ಅಗತ್ಯವಿಲ್ಲದ ಸಮಯದಲ್ಲಿ ಒಬ್ಬ ವ್ಯಕ್ತಿಯು ಹೃದಯಬೇನೆಯ ತಪಾಸಣೆಗೆ ವೈದ್ಯರಲ್ಲಿಗೆ ಬಂದಾಗ, ಮೊದಲು ಎಲೆಕ್ಟ್ರೋಕಾರ್ಡಿಯೋಗ್ರಾಮ್(ECG), ಎಕೋಕಾರ್ಡಿಯೋಗ್ರಾಮ್ (ECHO) ಹಾಗೂ ಟ್ರೆಡ್ ಮಿಲ್ ಟೆಸ್ಟ್ (Treadmill Test) ಮತ್ತು ರಕ್ತಪರೀಕ್ಷೆಗಳನ್ನು  ಮಾಡಲಾಗುತ್ತದೆ. ನಂತರ ಸೂಕ್ತ ಔಷಧಗಳನ್ನು ಕೊಡಲಾಗುತ್ತದೆ.   ಕಾಯಿಲೆಯ ತೀವ್ರತೆ ಹೆಚ್ಚಿದ್ದಲ್ಲಿ ಕರೋನರಿ ಆಂಜಿಯೋಗ್ರಾಮ್ (Coronary Angiogram) ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಸಲಹೆ ಕೊಡಲಾಗುತ್ತದೆ.

ಕರೋನರಿ ಆಂಜಿಯೋಗ್ರಾಮ್ (Coronary Angiogram)
ಈ ಪ್ರಕ್ರಿಯೆಯಲ್ಲಿ ಹೃದಯದ ರಕ್ತನಾಳಗಳ ಚಿತ್ರಣವನ್ನು (Coronary Angiogram) ತೆಗೆಯಲಾಗುತ್ತದೆ. ಇದರಲ್ಲಿ ತೊಡೆಯ ಅಥವ ಕೈಯ ಮುಖ್ಯ ರಕ್ತನಾಳದೊಳಕ್ಕೆ ಪ್ಲಾಸ್ಟಿಕ್ ನಳಿಕೆಯೊಂದನ್ನು(catheter) ತೂರಿಸಿ, ಕ್ಷ-ಕಿರಣದ (X -Ray)  ಸಹಾಯದಿಂದ ವೀಕ್ಷಿಸುತ್ತ, ಹೃದಯವನ್ನು ತಲುಪಿ ರಕ್ತನಾಳಗಳ ಚಿತ್ರಣವನ್ನು  ಕ್ಷ-ಕಿರಣ ಬಳಸಿ  ತೆಗೆಯುತ್ತಾರೆ. ಈ ರೀತಿಯಲ್ಲಿ ಹೃದಯದ ರಕ್ತನಾಳಗಳು ಎಲ್ಲಿ, ಎಷ್ಟರ ಮಟ್ಟಿಗೆ ಕಿರಿದಾಗಿವೆ ಎನ್ನುವುದು ಚಿತ್ರಿತವಾಗಿ ಹೃದಯದ ರಕ್ತನಾಳಗಳ ಒಳಗಿನ ಅಡಚಣೆಯ ತೀವ್ರತೆಯನ್ನು  ಅಳೆಯಲು ಸಾಧ್ಯವಾಗುತ್ತದೆ. ಇದನ್ನು ಕೂಲಂಕಷವಾಗಿ ಪರೀಕ್ಷಿಸಿದ ನಂತರ ಹೃದಯರೋಗತಜ್ಞರು ಮುಂದಿನ ಸಲಹೆ ನೀಡುತ್ತಾರೆ.

ರಕ್ತನಾಳಗಳ ಅಡಚಣೆಗಳು ಹೆಚ್ಚಿಲ್ಲದಿದ್ದಲ್ಲಿ ಔಷಧಿಗಳಿಂದಲೇ ಚಿಕಿತ್ಸೆ ನೀಡುತ್ತಾರೆ. ಹೆಚ್ಚು ಅಡೆತಡೆಗಳಿವೆ ಎಂದು ಗೊತ್ತಾದಲ್ಲಿ, ಕರೋನರಿ ಆಂಜಿಯೋಪ್ಲಾಸ್ಟಿ (PTCA) ಪ್ರಕ್ರಿಯೆ ಅಥವಾ ಕರೋನರಿ ಬೈಪಾಸ್(CABG) ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಒಬ್ಬ ರೋಗಿಗೆ ಯಾವ ವಿಧಾನ ಸೂಕ್ತ ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ.

ಕರೋನರಿ ಆಂಜಿಯೋಪ್ಲಾಸ್ಟಿ(Percutaneous Transluminal Coronary Angioplasty-PTCA): ಪ್ರಪಂಚದಲ್ಲಿ ಮೊಟ್ಟಮೊದಲ ಬಾರಿಗೆ ಕರೋನರಿ ಆಂಜಿಯೋಪ್ಲಾಸ್ಟಿಯನ್ನು 1977ರಲ್ಲಿ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ, ಕಿರಿದಾಗಿರುವ ಅಥವಾ ಮುಚ್ಚಿಹೋಗಿರುವ ಹೃದಯದ ರಕ್ತನಾಳಗಳನ್ನು ಬಲೂನ್‌ನಿಂದ (balloon) ಹಿಗ್ಗಿಸಿ, ರಕ್ತನಾಳಗಳು ಪುನಃ ಕಿರಿದಾಗದಂತೆ ಆ ಜಾಗದಲ್ಲಿ ಒಂದು ಪೆನ್ನಿನ ರೀಫಿಲ್‌ನ ಸ್ಪ್ರಿಂಗ್‌ಗೆ ಹೋಲುವ ಸ್ಟೆಂಟ್‌ಗಳನ್ನು (Stent) ಅಳವಡಿಸುತ್ತಾರೆ.

ಈ ರೀತಿ ಚಿಕಿತ್ಸೆ ಪಡೆದ ರೋಗಿಗಳು ವೈದ್ಯರು ಹೇಳಿದ ಔಷಧಗಳನ್ನು ಚಾಚೂ ತಪ್ಪದೆ ಎಚ್ಚರ ವಹಿಸಿ ತೆಗೆದುಕೊಳ್ಳಬೇಕು. ಏನೇ ಬದಲಾವಣೆ ಮಾಡಿಕೊಳ್ಳಬೇಕೆಂದರೂ ಹೃದ್ರೋಗತಜ್ಞರ ಸಲಹೆ ಪಡೆಯಲೇಬೇಕು. ಈ ಎಚ್ಚರಿಕೆ ತೆಗೆದುಕೊಳ್ಳದಿದ್ದಲ್ಲಿ ಪುನಃ ಹೃದಯಾಘಾತವಾಗಿ ಜೀವಾಪಾಯದ ಸಂಭವವಿರುತ್ತದೆ.

ರಕ್ತಸಂಚಾರದ ಅಡಚಣೆಯನ್ನು ನಿವಾರಿಸಲು ಕಿರಿದಾಗಿರುವ ಹೃದಯದ ರಕ್ತನಾಳಗಳನ್ನು ಹಿಗ್ಗಿಸುವುದು (Angioplasty) ಒಂದು ಕ್ರಮವಾದರೆ, ರಕ್ತನಾಳಗಳಿಗೆ ಬೇರೆ ರಕ್ತನಾಳಗಳನ್ನು ಜೋಡಿಸಿ, ಹೃದಯಕ್ಕೆ ಪರ್ಯಾಯ ರಕ್ತಚಲನೆ ರೂಪಿಸುವುದು (Bypass Surgery) ಇನ್ನೊಂದು ಚಿಕಿತ್ಸಾಕ್ರಮ.

ಹೃದಯಾಘಾತ/ಆಂಜಿಯೋಪ್ಲಾಸ್ಟಿ/ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ: ಆಸ್ಪತ್ರೆಯಿಂದ ಮನೆಗೆ ಕಳುಹಿಸಿದ ನಂತರ ರೋಗಿಯು ತನ್ನ ದೈಹಿಕ ಚಟುವಟಿಕೆಗಳನ್ನು ಕ್ರಮೇಣವಾಗಿ ಶುರುಮಾಡಿಕೊಳ್ಳಬಹುದು. ಆನಂತರ ವೈದ್ಯರ ಸಲಹೆ ಪಡೆದು ಲಘು ವ್ಯಾಯಾಮ, ಯೋಗಾಭ್ಯಾಸಗಳನ್ನು ಮಾಡಬಹುದು. ತೀವ್ರ ಸ್ವರೂಪದ ವ್ಯಾಯಾಮ, ಓಡುವುದು, ಭಾರ ಎತ್ತುವುದು ಮುಂತಾದ ಶ್ರಮದ ಕೆಲಸಗಳನ್ನು ಮಾಡಬಾರದು.

ಇಲ್ಲದ ಚಿಂತೆಗಳನ್ನು ಹಚ್ಚಿಕೊಂಡು ಮನಸ್ಸನ್ನು ಉದ್ವೇಗ, ಆತಂಕಗಳಿಗೆ ಒಳಪಡಿಸುವುದು ಸರಿಯಲ್ಲ; ಶಾಂತಮನಸ್ಕರಾಗಿರುವುದು ಹೃದಯಕ್ಕೆ ಶ್ರೇಯಸ್ಕರ.

ಊಟದಲ್ಲಿ ಹಿತಮಿತವಾಗಿದ್ದು ಸೊಪ್ಪು, ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಜಿಡ್ಡಿನ/ಕರಿದ ಪದಾರ್ಥಗಳನ್ನು ವರ್ಜಿಸಬೇಕು. ಧೂಮಪಾನ ಹಾಗೂ ಕುಡಿತವನ್ನು ನಿಲ್ಲಿಸಬೇಕು. ಕೆಲವು ಕಾಲದವರೆಗೆ ವಾಹನ ಚಾಲನೆ ಮಾಡದಿದ್ದರೆ ಒಳಿತು. ನಂತರದ ದಿನಗಳಲ್ಲಿ ಪುನಃ ಎದೆನೋವು ಬಂದಲ್ಲಿ ಕೂಡಲೇ ವೈದ್ಯರಲ್ಲಿಗೆ ಹೋಗುವುದು ಮೊದಲ ಆದ್ಯತೆಯಾಗಬೇಕು. ಈ ರೋಗಿಗಳು ತುರ್ತು ಸನ್ನಿವೇಶಕ್ಕೆ ಬೇಕಾಗುವಂಥ, ನಾಲಿಗೆ ಕೆಳಗೆ ಇಟ್ಟುಕೊಳ್ಳುವ ‘Sorbitrate’ ಮಾತ್ರೆಯನ್ನು ಯಾವಾಗಲೂ ತಮ್ಮ ಜೊತೆ ಇಟ್ಟುಕೊಂಡಿರಬೇಕು.

ಕಾಯಿಲೆ ಬಂದ ನಂತರ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಎಷ್ಟು ಮುಖ್ಯವೋ, ಕಾಯಿಲೆ ಬಾರದಂತೆ ಮೇಲೆ ಹೇಳಿರುವ ಮುನ್ನೆಚ್ಚರಿಕೆ ಕ್ರಮಗಳನ್ನುಅನುಸರಿಸುವುದು ಅಷ್ಟೇ ಮುಖ್ಯ. ಈಗ ಹೇಳಿ, ನೀವು ನಿಮ್ಮ ಹೃದಯವನ್ನು ಜೋಪಾನ ಮಾಡುತ್ತೀರಲ್ಲವೆ?! ಏಕೆಂದರೆ ಇದು ನಮ್ಮೆಲ್ಲರ ಹೃದಯದ ವಿಷಯ.

ಬೈಪಾಸ್ ಶಸ್ತ್ರಚಿಕಿತ್ಸೆ (Coronary Artery Bypass Surgery-CABG)

ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಪ್ರಪಂಚದಲ್ಲಿ ಪ್ರಥಮ ಬಾರಿ 1960ರಲ್ಲಿ ಹಾಗೂ ಭಾರತದಲ್ಲಿ 1975ರಲ್ಲಿ ಮಾಡಲಾಯಿತು. ಈ ಬೈಪಾಸ್ ಶಸ್ತ್ರಚಿಕಿತ್ಸೆ ಎಂದರೇನು?  ನಗರಗಳ ರಸ್ತೆಗಳಲ್ಲಿ ವಾಹನಗಳು ಓಡಾಡಲು ಇರುವ ಅಡಚಣೆಗಳನ್ನು ತಪ್ಪಿಸಲು ಊರ ಹೊರವಲಯದಲ್ಲಿ ಬೈಪಾಸ್ ದಾರಿಗಳನ್ನು ನಿರ್ಮಿಸಿರುವುದು ಎಲ್ಲರಿಗೂ ತಿಳಿದ ವಿಷಯ.

ಅದೇ ರೀತಿ ಹೃದಯದ ರಕ್ತನಾಳಗಳಲ್ಲಿ ರಕ್ತಸಂಚಾರಕ್ಕೆ ಅಡಚಣೆ ಉಂಟಾದಾಗ, ಬೇರೆ ರಕ್ತನಾಳಗಳ ಮುಖಾಂತರ ರಕ್ತಸಂಚಾರ ಆಗುವಂತೆ ಮಾಡುವುದೇ ‘ಬೈಪಾಸ್’ ಶಸ್ತ್ರಚಿಕಿತ್ಸೆ. ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಲು ಬೇಕಾದ ರಕ್ತನಾಳಗಳನ್ನು ರೋಗಿಯ ಎದೆಮೂಳೆಯ ಹಿಂಭಾಗದಲ್ಲಿರುವ ಶುದ್ಧರಕ್ತನಾಳ, ಕೈಗಳಲ್ಲಿರುವ ಶುದ್ಧರಕ್ತನಾಳಗಳ ಭಾಗ, ಇವು ಸಾಕಾಗದೆ ಇದ್ದಾಗ ಕಾಲುಗಳಲ್ಲಿರುವ ಅಶುದ್ಧ ರಕ್ತನಾಳಗಳನ್ನು (leg veins) ಉಪಯೋಗಿಸುತ್ತಾರೆ.

ಈ ಮೇಲೆ ಹೇಳಿರುವ ಎರಡೂ ಚಿಕಿತ್ಸಾ ವಿಧಾನಗಳಲ್ಲಿ ಕಾಯಿಲೆಯಿಂದ ಉಂಟಾದ ಅಡಚಣೆಗಳನ್ನು ನಿವಾರಿಸಲಾಗುತ್ತದೆಯೇ ಹೊರತು ರೋಗದ ಮೂಲಕಾರಣವನ್ನು ಸರಿಪಡಿಸಲಾಗುವುದಿಲ್ಲ. ಇದಕ್ಕಾಗಿ ರೋಗಿ ತನ್ನ ಜೀವನಶೈಲಿಯನ್ನು ಸೂಕ್ತ ರೀತಿಯಲ್ಲಿ ಮಾರ್ಪಡಿಸಿಕೊಳ್ಳುವುದು ಅತ್ಯವಶ್ಯ. ದುರದೃಷ್ಟವಶಾತ್ ರೋಗಿಗೆ ಕಾಯಿಲೆ ಮರುಕಳಿಸಿದಲ್ಲಿ, ಮೇಲೆ ಹೇಳಿರುವ ಚಿಕಿತ್ಸಾ ವಿಧಾನಗಳನ್ನು ಮತ್ತೊಮ್ಮೆ ಮಾಡಿಸಿಕೊಳ್ಳುವ ಸಾಧ್ಯತೆ ಬರಬಹುದು.

ಹೃದಯಾಘಾತ ಹೇಗೆ?
ಹೃದಯದ ರಕ್ತನಾಳಗಳು ಗಡುಸಾಗಿ ಕಿರಿದಾದಾಗ, ಅವುಗಳಲ್ಲಿ ರಕ್ತಚಲನೆ ಕಡಿಮೆಯಾಗುತ್ತದೆ. ವ್ಯಕ್ತಿಯ ವಿಶ್ರಾಂತಸ್ಥಿತಿಯಲ್ಲಿ ಹೃದಯಕ್ಕೆ ಹರಿದುಬರುವ ರಕ್ತದ ಪ್ರಮಾಣ ಸಾಕಷ್ಟಿದ್ದರೂ, ಅವನು ಕಾರ್ಯನಿರತನಾದಾಗ  ಅಥವಾ ಶ್ರಮದ ಕೆಲಸ ಮಾಡುವಾಗ ಅದಕ್ಕೆ ತಕ್ಕಷ್ಟು ರಕ್ತಚಲನೆಯಾಗದೆ ಎದೆನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಆಂಜೈನ (Angina) ಎಂದು ಕರೆಯುತ್ತಾರೆ.

ವಿಶ್ರಾಂತಿ ತೆಗೆದುಕೊಂಡ ಕೆಲವೇ ನಿಮಿಷಗಳಲ್ಲಿ ಎದೆನೋವು ಕಡಿಮೆಯಾಗುತ್ತದೆ. ಕೆಲವರಿಗೆ ಇದು ದವಡೆನೋವು ಅಥವಾ ಎಡಗೈ ನೋವಿನ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಈ ತೊಂದರೆ ಎದೆಉರಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ‘ಆಸಿಡಿಟಿ’ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ.

ಕಾಯಿಲೆಯ ತೀವ್ರತೆ ಹೆಚ್ಚಾದಾಗ, ವಿಶ್ರಾಂತಿಯಲ್ಲಿದ್ದಾಗಲೇ ನೋವು ಕಾಣಿಸಿಕೊಳ್ಳಬಹುದು. ಇಂಥ ಸಂದರ್ಭದಲ್ಲಿ ರಕ್ತನಾಳ ಪೂರ್ತಿಯಾಗಿ ಮುಚ್ಚಿಹೋಗಿ, ರಕ್ತಚಲನೆ ಸ್ತಬ್ಧವಾಗುತ್ತದೆ. ಆಗ ರೋಗಿಗೆ ಮೈಯೆಲ್ಲಾ ಬೆವರಬಹುದು, ತಲೆತಿರುಗಿ ಸುಸ್ತಾಗಬಹುದು, ಉಸಿರಾಡಲು ಕಷ್ಟಪಡಬಹುದು. ಇದೇ ಹೃದಯಾಘಾತ. ಅಂಥ ಸಮಯದಲ್ಲಿ ರೋಗಿ ಇದ್ದಕ್ಕಿದ್ದಂತೆ ಮರಣ ಹೊಂದಲೂಬಹುದು.

-ಡಾ.ಕೆ.ಎಚ್. ಶ್ರೀನಿವಾಸ್, ಧಾರಿಣಿ ಎಚ್. ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT