ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಕ್ಕೆ ಕೊಟ್ಟು ಹಾರಲು ಬಿಟ್ಟು...

ನಿನ್ನಂಥ ಅಪ್ಪ ಇಲ್ಲ
Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಎದೆ ತುಂಬಿ ಹಾಡಿದೆನು
ಅಂದು ನಾನು...

ಈ ಹಾಡೆಂದರೆ ಅಪ್ಪನಿಗೆ ತುಂಬಾ ಇಷ್ಟ. ಆಗಾಗ್ಗೆ ಆ ಹಾಡನ್ನು ಕೇಳುತ್ತಿದ್ದರು. ಸಂಗೀತದ ಬಗ್ಗೆ ಅವರಿಗೆ ಹೆಚ್ಚಾಗಿ ತಿಳಿದಿರಲಿಲ್ಲವಾದರೂ ನಮ್ಮಲ್ಲಿನ ಸಂಗೀತಾಸಕ್ತಿಯನ್ನು ಪೊರೆದವರು ಅವರು.

ನನ್ನ ತಂದೆ ಮಾಲೂರು ಸೀತಾರಾಮ್‌ರಾವ್ ದತ್ತಾತ್ರೇಯ. ಎಲ್ಲರೂ ಅವರನ್ನು ಪ್ರೀತಿಯಿಂದ ‘ಗೋವಾ ದತ್ತು’ ಎಂದು ಕರೆಯುತ್ತಿದ್ದರು. ನಾಟಕದ ನಂಟನ್ನೇ ನೆಚ್ಚಿಕೊಂಡವರು ಅವರು. ನಮ್ಮ ತಂದೆಯ ಮೂಲ ಮಾಲೂರು. ಆದರೆ ನನ್ನ ತಂದೆ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಮದುವೆ ನಂತರ ಗೋವಾದಲ್ಲಿ ನೆಲೆಸಿದ್ದರು. ಆದ್ದರಿಂದಲೇ ಅವರಿಗೆ ‘ಗೋವಾ ದತ್ತು’ ಎನ್ನುತ್ತಿದ್ದರು.

ಮಧ್ಯಮ ವರ್ಗದ ಕುಟುಂಬ ನಮ್ಮದು. ತಂದೆ–ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ನಮ್ಮ ತಾಯಿ ಗೌರಿ ಸಂಗೀತವನ್ನು ಕಲಿಯುತ್ತಿದ್ದ ದಿನಗಳವು. ನಮ್ಮ ತಂದೆಗೆ ಸಂಗೀತದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೂ ಸಂಗೀತ ಕಾರ್ಯಕ್ರಮಗಳು ನಡೆಯುವ ಕಡೆಗೆಲ್ಲಾ ನನ್ನನ್ನೂ ನನ್ನ ತಂಗಿಯನ್ನೂ ಕರೆದುಕೊಂಡು ಹೋಗುತ್ತಿದ್ದರು. ಕಾರ್ಯಕ್ರಮ ಮುಗಿಯುವವರೆಗೆ ಹೊರಗೆ ಹೋಗಿ, ಮುಗಿದಾಕ್ಷಣ ಬಂದು ನಮ್ಮನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತಿದ್ದರು. ಆ ದಿನಗಳು ಇಂದಿಗೂ ನೆನಪಿನಲ್ಲಿವೆ.

ಅಪ್ಪ ತುಂಬಾ ಸೌಕರ್ಯಗಳ ನಡುವೆಯೇನೂ ಬೆಳೆದವರಲ್ಲ. ತುಂಬಾ ಕಷ್ಟ ಕಂಡವರು. ಅವರಿಗೆ ಐದು ಜನ ಒಡಹುಟ್ಟಿದವರು. ಓದುವುದಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ತಾವೇ ದುಡಿಮೆಗೆ ಇಳಿದರು. ಬೆಳಿಗ್ಗೆ ಮನೆಗಳಿಗೆ ಪತ್ರಿಕೆ ಹಾಕುತ್ತಾ, ಅಲ್ಲಿ ಇಲ್ಲಿ ಕೆಲಸ ಮಾಡಿ ಓದುತ್ತಾ, ತಮ್ಮ ಕುಟುಂಬಕ್ಕೂ ನೆರವಾದವರು. ಆದ್ದರಿಂದ ಅಪ್ಪನಿಗೆ ಕಷ್ಟ ಎಂದರೇನು ಎಂದು ತಿಳಿದಿತ್ತು. ಆ ಅನುಭವಗಳ ನೆಲೆಯಲ್ಲೇ ಅವರು ಬದುಕನ್ನು ಅರ್ಥೈಸಿಕೊಂಡವರು; ನಮಗೂ ಅರ್ಥೈಸಿದವರು.

ಸಾಮಾನ್ಯವಾಗಿ ಅಪ್ಪ ಎಂದರೆ ಅತಿ ಕಟ್ಟುನಿಟ್ಟು ಅಥವಾ ಅತಿ ಮುದ್ದು ಮಾಡುವವರು ಇರುತ್ತಾರೆ. ಆದರೆ ನಮ್ಮಪ್ಪ ಇವೆರಡು ವರ್ಗಕ್ಕೂ ಸೇರುವುದಿಲ್ಲ. ಅತಿ ಎನಿಸುವಂಥ ಮುದ್ದೂ ತೋರಲಿಲ್ಲ. ಹಾಗೆಂದು ತೀರಾ ಕಠಿಣವಾಗಿಯೂ ಇರಲಿಲ್ಲ. ನಮ್ಮ ಸ್ವಾತಂತ್ರ್ಯವನ್ನು ನಮಗೇ ಕೊಟ್ಟುಬಿಟ್ಟಿದ್ದರು. ಹೆಣ್ಣು ಮಕ್ಕಳೆಂದು ನಮಗೆ ಕಟ್ಟುಪಾಡು ಹಾಕಲಿಲ್ಲ. ನನ್ನನ್ನು, ನನ್ನ ತಂಗಿ ಶ್ವೇತಾಳನ್ನು ಗಂಡು ಮಕ್ಕಳಂತೆಯೇ ಬೆಳೆಸಿದರು.

ಅಪ್ಪ ಒಂದು ಮಾತನ್ನು ಯಾವಾಗಲೂ ಹೇಳುತ್ತಿದ್ದರು: ‘ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಬೇಕು. ನಿಮ್ಮ ಜೀವನದ ಸಂಪೂರ್ಣ ಜವಾಬ್ದಾರಿ ನಿಮ್ಮದೇ. ತಪ್ಪುಗಳಿಗೂ, ಸರಿಗಳಿಗೂ ನಿಮ್ಮ ನಿರ್ಧಾರಗಳೇ ಕಾರಣ’.

ಈ ಮಾತುಗಳನ್ನು ಹೇಳುವಾಗ ಅವರು ಸ್ವಲ್ಪ ಕಠಿಣ ಎನ್ನಿಸುತ್ತಿದ್ದರೂ ಆ ಮಾತುಗಳ ಹಿಂದೆ ಅವರ ಕಾಳಜಿಯೂ ತುಂಬಿರುತ್ತಿತ್ತು. ಈಗ ನೆನೆಸಿಕೊಂಡರೆ, ಆ ಮಾತು ಅದೆಷ್ಟು ದೊಡ್ಡ ಮಟ್ಟದಲ್ಲಿ ನಮಗೆ ಉಪಯೋಗಕ್ಕೆ ಬರುತ್ತಿದೆ ಎಂಬುದು ಅರ್ಥವಾಗುತ್ತಿದೆ.

ಚಿಕ್ಕ ವಯಸ್ಸಿನಿಂದಲೂ ಅಷ್ಟೆ. ‘ನಿನಗೆ ಏನು ಬೇಕೋ ಎಷ್ಟು ಬೇಕೋ ಅಷ್ಟು ಓದು. ಇಷ್ಟ ಇಲ್ಲ ಎಂದರೆ ಬಿಡು, ಆದರೆ ಯಾವುದೇ ಫಲಿತಾಂಶಕ್ಕೂ ನೀನೇ ಜವಾಬ್ದಾರಳು ಎಂಬುದನ್ನು ನೆನಪಿನಲ್ಲಿಡು. ನಿನಗೆ ತೊಂದರೆಯಾದರೆ ಅಂತಿಮವಾಗಿ ಅದು ನಿನ್ನ ನಿರ್ಧಾರವೇ’ ಎನ್ನುತ್ತಿದ್ದರು. ಈ ಮಾತುಗಳೇ ನಮ್ಮಲ್ಲಿ ಸ್ವತಂತ್ರ್ಯ ಮನೋಭಾವ ಹುಟ್ಟಿಕೊಳ್ಳಲು ಕಾರಣವಾಯಿತು.

ಯಾವುದೇ ವಿಷಯದಲ್ಲೂ ಅವರು ಒತ್ತಾಯ ಮಾಡಿದವರಲ್ಲ. ಹೀಗೇ ಮಾಡಬೇಕು, ಹಾಗೇ ಮಾಡಬೇಕು ಎಂದು ನಮ್ಮಿಬ್ಬರ ಮೇಲೆ ಎಂದಿಗೂ ಒತ್ತಾಯ ಹೇರಲಿಲ್ಲ. ‘ಎಲ್ಲ ನಿನ್ನ ಕೈಯಲ್ಲೇ ಇದೆ. ನಿನ್ನ ಜೀವನ ರೂಪಿಸಿಕೊಳ್ಳಲು ನಿನ್ನಿಂದ ಮಾತ್ರ ಸಾಧ್ಯ’ ಎನ್ನುತ್ತಿದ್ದರು.

ಚಿಕ್ಕಂದಿನಲ್ಲಿಯೇ ನನ್ನಲ್ಲಿನ ಸಂಗೀತದ ಆಸಕ್ತಿಯನ್ನು ಗುರುತಿಸಿ ಅದು ಚಿಗುರಲು ಅನುವು ಮಾಡಿಕೊಟ್ಟವರು ಅವರು. ಯಾವುದೇ ಕಾರ್ಯಕ್ರಮವಿರಲಿ, ಅಹೋರಾತ್ರಿ ಸಂಗೀತವಿರಲಿ, ಹಿಂದೆ ಮುಂದೆ ನೋಡದೇ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು.  ದೊಡ್ಡ ದೊಡ್ಡ ಸಂಗೀತಗಾರರನ್ನು ನೋಡಲು, ಸಂಗೀತವನ್ನು ಕಲಿಯಲು ಅವರಿಂದಲೇ ಅವಕಾಶವಾಗಿದ್ದು. ಸಂಗೀತ ನಮಗೆ ದಕ್ಕುವಂತೆ ಮಾಡಿದ್ದು ಅವರೇ ಎನ್ನಬಹುದು. ಅವರು ನಿರ್ಲಕ್ಷ್ಯ ವಹಿಸಿದ್ದಿದರೆ ನಾನು ಸಂಗೀತಕ್ಷೇತ್ರದಲ್ಲಿ ಏನೊಂದು ಸಾಧನೆ ಮಾಡಲೂ ಸಾಧ್ಯವಾಗುತ್ತಿರಲಿಲ್ಲ ಎನ್ನಿಸುತ್ತದೆ.

ಅಪ್ಪ ಕೊಟ್ಟ ಸ್ವಾತಂತ್ರ್ಯ ನನ್ನಲ್ಲಿ ತಂದ ಬದಲಾವಣೆ ಅಪಾರ. ಮಕ್ಕಳ ನಿರ್ಧಾರಗಳನ್ನು, ಜೀವನವನ್ನು ತಾವೇ ರೂಪಿಸಿಕೊಳ್ಳುವ ಸ್ವಾತಂತ್ರ್ಯ ಕೊಡುವ ಪೋಷಕರು ತುಂಬ ಕಡಿಮೆ; ತೀರಾ ಅಪರೂಪ. ಅಂಥ ಅಪರೂಪದವರ ಪಟ್ಟಿಯಲ್ಲಿ ಅಪ್ಪ ನಿಲ್ಲುತ್ತಾರೆ. ನಮ್ಮ ಆಯ್ಕೆಗಳ ಬಗ್ಗೆ ಸದಾ ಜಾಗರೂಕವಾಗಿರುವಂತೆ ಎಚ್ಚರಿಸುತ್ತಲೇ ಇದ್ದವರು ಅವರು. ನಮ್ಮ ಆಯ್ಕೆಗಳೆಡೆಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ರೀತಿಯನ್ನೂ ಕಲಿಸಿದವರು ಅವರೇ.

ನನ್ನ ತಂದೆ ನಮ್ಮಿಂದ ಏನೂ ಬಯಸಿದವರಲ್ಲ. ನೀನು ಇದೇ ವೃತ್ತಿಗೆ ಸೇರಬೇಕು ಎಂದು ಅವರಿಂದ ಒಂದು ದಿನವೂ ಒಂದು ಮಾತೂ ಬರಲಿಲ್ಲ. ನನ್ನನ್ನು ಮತ್ತು ತಂಗಿಯನ್ನು ಮೈದಾನಕ್ಕೆ ಕರೆದುಕೊಂಡು ಹೋಗಿ ಆಡಿಸುತ್ತಿದ್ದರು. ದಿನವೂ ರನ್ನಿಂಗ್, ವ್ಯಾಯಾಮ ಮಾಡಿಸುತ್ತಿದ್ದರು. ಬಹುಶಃ ಅವರಿಗೆ ನಮ್ಮನ್ನು ಕ್ರೀಡೆಯಲ್ಲಿ ಬೆಳೆಸುವ ಮನಸ್ಸಿತ್ತೋ ಏನೋ ಗೊತ್ತಿಲ್ಲ. ಆದರೆ ಬಾಯಿ ಬಿಟ್ಟು ಎಂದಿಗೂ ಅದನ್ನು ಹೇಳಿಕೊಂಡಿರಲಿಲ್ಲ.

ಅಪ್ಪ ಮುಂಗೋಪಿಯಾಗಿದ್ದವರು. ಅನ್ನಿಸಿದ್ದನ್ನು ನೇರ ನುಡಿಯುತ್ತಿದ್ದರು. ಮುಖದಲ್ಲೊಂದು, ಮನಸ್ಸಿನಲ್ಲೊಂದು ಇಟ್ಟುಕೊಂಡವರಲ್ಲ. ಅವು ಅವರನ್ನು ಕಠಿಣ ಎಂದು ಬಿಂಬಿಸುತ್ತಿದ್ದರೂ ಅವರೊಳಗೆ ಸಾಧು ಸ್ವಭಾವದ ಅಪ್ಪ ಸದಾ ಕಾಣುತ್ತಿದ್ದರು.

ಸಹಜ ಸುಂದರ ದಾಂಪತ್ಯ ಅಪ್ಪ ಅಮ್ಮನದ್ದು. ಆಗಾಗ ಜಗಳ, ಆಗಾಗ ನಗು, ಆಗಾಗ ತಮಾಷೆ – ಎಲ್ಲ ರಸಗಳೂ ಸೇರಿದ್ದ ಸಂಸಾರ. ಅಪರೂಪಕ್ಕೊಮ್ಮೆ ಅಪ್ಪ ಅಡುಗೆ ಮಾಡುತ್ತಿದ್ದರು. ತಾವು ಮಾಡಿದ ಅಡುಗೆಯನ್ನು ತುಂಬಾ ಹೊಗಳಿಕೊಳ್ಳುತ್ತಿದ್ದರು. ಮಗುವಿನಂತೆ ಉತ್ಸಾಹದಿಂದ ಅವರ ಪಾಕಶಾಸ್ತ್ರದ  ಪ್ರಾವೀಣ್ಯವನ್ನು ಹೇಳಿಕೊಳ್ಳುತ್ತಿದ್ದರು.

ಚಟ್ನಿ, ಸಾರು ಮಾಡಿ ಅದರ ಗುಣಗಾನ ಮಾಡುತ್ತಿದ್ದರು; ಹಾಸ್ಯ ಮಾಡುತ್ತಿದ್ದರು. ನನ್ನ ಮದುವೆ ನಂತರವೂ ಯಾವಾಗಲಾದರೂ ಅಡುಗೆ ಮಾಡಿದಾಗ, ನನ್ನನ್ನೂ ಅರುಣ್ ಅವರನ್ನೂ ಊಟಕ್ಕೆ ಕರೆಯುತ್ತಿದ್ದರು. ನಾವೆಲ್ಲರೂ ನಗುತ್ತಾ ಊಟದ ರುಚಿ ನೋಡುತ್ತಿದ್ದೆವು. ಈಗಲೂ ಚಟ್ನಿಪುಡಿ, ಸಾರು ತಿನ್ನುವಾಗ ಒಮ್ಮೆ ನೆನಪಿಗೆ ಬಂದು ಹೋಗುತ್ತಾರೆ.

ನನ್ನ ತಂದೆ ಕಲಿಸಿದ್ದು ನೂರಾರು ಪಾಠಗಳು. ಅಪ್ಪ, ಒಂದು ಕೆಲಸವನ್ನು ಹಿಡಿದರೆ ಬಿಡುತ್ತಿರಲಿಲ್ಲ, ಒಮ್ಮೆ ನಿರ್ಧರಿಸಿದರೆ ಆಯಿತು, ಅದನ್ನು ಅರ್ಧದಲ್ಲೇ ಕೈಬಿಟ್ಟ ಉದಾಹರಣೆಗಳೇ ಇಲ್ಲ. ಕೆಲಸದ ಬಗ್ಗೆ ಅವರಲ್ಲಿ ಇದ್ದಂಥ ಶಿಸ್ತು, ಬದ್ಧತೆ ಅಚ್ಚರಿ ತರುವಂಥದ್ದು. ಅದನ್ನು ಅವರ ಒಡನಾಡಿಗಳು ಇಂದಿಗೂ ನೆನೆಸಿಕೊಳ್ಳುತ್ತಾರೆ. ಜೊತೆಗೆ ಅವರು ಲೆಕ್ಕದಲ್ಲಿ ತುಂಬಾ ಮುಂದು. ಲೆಕ್ಕದ ವಿಷಯವನ್ನು ಮಾತ್ರ ಇಂದಿಗೂ ನಾನು ಅವರನ್ನು ಅನುಸರಿಸಲು ಸಾಧ್ಯವಾಗಿಲ್ಲ.

ನಮ್ಮ ತಂದೆಗೂ ರಂಗಭೂಮಿಗೂ ಅಪಾರ ನಂಟು. ರಂಗಭೂಮಿಯಲ್ಲಿ ಸೃಜನಶೀಲವಾಗಿದ್ದವರು. ಟಿ.ವಿ. ಅಸೋಸಿಯೇಷನ್‌ ಹಾಗೂ ‘ಅಭಿನಯ ತರಂಗ’ ನಾಟಕ ಶಾಲೆಯ ಟ್ರೆಷರರ್ ಆಗಿದ್ದರು. ಸಾಕಷ್ಟು ಮೆಗಾ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗಳು, ಧಾರಾವಾಹಿಗಳು, ನಾಟಕಗಳು... ಹೀಗೆ ಅವರ ಕಾರ್ಯವ್ಯಾಪ್ತಿ ದೊಡ್ಡದಿತ್ತು. ಪ್ರೊಡಕ್ಷನ್‌ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಂಡವರು.

ಅವರಿಗೆ ಅಭಿನಯದಲ್ಲಿ ಆಸಕ್ತಿ ಇದ್ದರೂ ನಮ್ಮ ಶಿಕ್ಷಣದ ಕಾರಣ ಅವರು ಎಷ್ಟೋ ವರ್ಷ ನಟನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರಲಿಲ್ಲ. ಕೆಲಸ ಮಾಡುತ್ತಿದ್ದರಿಂದ, ನಾವೆಲ್ಲಾ ಓದು ಮುಗಿಸುವವರೆಗೂ ಕಾದು, ‘ಮಾಯಾಮೃಗ’ ಧಾರಾವಾಹಿಯಲ್ಲಿ ನಾನು ಅಭಿನಯಿಸಲು ಆರಂಭಿಸಿದ ಮೇಲೆ ಅವರೂ ಕೆಲಸ ಬಿಟ್ಟು ನಟನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು. ನಟನೆಯಲ್ಲಿ ನನ್ನನ್ನೂ ಪ್ರೋತ್ಸಾಹಿಸಿದರು.

ಅಪ್ಪನಲ್ಲಿ ಗಮನಿಸಿದ ಮತ್ತೂ ಒಂದು ವಿಶೇಷ ಗುಣವೆಂದರೆ, ಅವರ ಔದಾರ್ಯ. ಗೋವಾದಲ್ಲಿದ್ದಾಗ ಯಾರೇ ಬೆಂಗಳೂರಿನಿಂದ ಬಂದರೂ, ಅವರು ರಂಗಭೂಮಿ ಕಲಾವಿದರಾಗಿದ್ದರೆ, ನಮ್ಮ ಮನೆಯಲ್ಲೇ ಆತಿಥ್ಯ ಗ್ಯಾರಂಟಿ ಇರುತ್ತಿತ್ತು. ನಮ್ಮ ತಂದೆಯೇ ಅವರನ್ನು ನೋಡಿಕೊಳ್ಳುತ್ತಿದ್ದರು.

ಕನ್ನಡದ ಸಂಗೀತ ಕಲಾವಿದರು, ರಂಗಭೂಮಿ, ಸಿನಿಮಾ ಕಲಾವಿದರು, ಯಾರೇ ಬಂದರೂ ನಮ್ಮ ತಂದೆ ವಿಶೇಷವಾಗಿ ಆತಿಥ್ಯ ನೀಡುತ್ತಿದ್ದರು, ಅವರಿಗೆಂದು ಓಡಾಡಿ ಕಾರ್ಯಕ್ರಮ ಏರ್ಪಾಟು ಮಾಡುತ್ತಿದ್ದರು. ಅವಶ್ಯವಿರುವ ಎಲ್ಲ ಕೆಲಸಗಳನ್ನೂ ಮಾಡಿಕೊಡುತ್ತಿದ್ದರು. ಅವರಲ್ಲಿ ಕಲೆಯ ಬಗ್ಗೆ ಅಂಥ ಅಭಿಮಾನ ತುಂಬಿತ್ತು. ಅದನ್ನು ನೆನೆಸಿಕೊಂಡರೆ ಅಪ್ಪನ ಬಗ್ಗೆ ಅಭಿಮಾನ ತುಂಬಿ ಬರುತ್ತದೆ.

ನನ್ನ ತಂದೆಗೆ ಕ್ರಿಕೆಟ್ ಎಂದರೂ ಬಲು ಪ್ರೀತಿ. ಗೋವಾ ರಣಜಿ ಕ್ರಿಕೆಟ್ ಟೀಮ್‌ನ ಮ್ಯಾನೇಜರ್ ಕೂಡ ಆಗಿದ್ದರು. ಸದಾ ಚಟುವಟಿಕೆಯಿಂದಿರುತ್ತಿದ್ದ, ಬಿಡುವೇ ಇಲ್ಲದೇ ದುಡಿಯುತ್ತಿದ್ದವರು ಅವರು.

ನನ್ನ ಮದುವೆ ವಿಷಯದಲ್ಲೂ ಅಷ್ಟೆ; ವಿಶಾಲ ದೃಷ್ಟಿಕೋನ ಹೊಂದಿದ್ದರು. ಒಂದು ಚೌಕಟ್ಟಿನಲ್ಲಿ ಎಂದಿಗೂ ನಮ್ಮನ್ನು ಕಟ್ಟಿ ಹಾಕಿದವರಲ್ಲ. ಜಾತಿ, ಧರ್ಮ ಇವೆಲ್ಲ ಅವರ ಮನಸ್ಸಿನಲ್ಲಿ ಎಂದಿಗೂ ಸುಳಿಯಲಿಲ್ಲ. ‘ಯಾರನ್ನಾದರೂ ಮದುವೆಯಾಗು, ಆದರೆ ವರದಕ್ಷಿಣೆ ಮಾತ್ರ ಕೊಡೋದಿಲ್ಲ. ಅದು ಅತಿ ಕೆಟ್ಟ ಪದ್ಧತಿ.  ವರದಕ್ಷಿಣೆ ಕೇಳುವಂಥ ಹುಡುಗನನ್ನು ಆಯ್ಕೆ ಮಾಡಿಕೊಂಡರೆ ಅದು ನಿನಗೇ ಬಿಟ್ಟಿದ್ದು’ ಎಂದು ನಿಷ್ಠುರವಾಗೇ ಹೇಳಿದ್ದರು. ನನ್ನ, ಅರುಣ್ ಪ್ರೀತಿಯನ್ನು ಖುಷಿಯಿಂದಲೇ ಒಪ್ಪಿದರು.

ಅಪ್ಪ, ನಮ್ಮ ಬದುಕಿಗೆ ಬೇಲಿಗಳನ್ನು ಹಾಕಲಿಲ್ಲ, ನಮ್ಮ ಆಲೋಚನೆಗಳನ್ನು ಎಂದಿಗೂ ವಿರೋಧಿಸಿದವರಲ್ಲ. ನಮ್ಮನ್ನು ಶಿಸ್ತಿನಿಂದ ಬೆಳೆಸಿದವರು, ನಮ್ಮ ಆಸೆಗಳಿಗೆ ಬೆನ್ನೆಲುಬಾಗಿ ನಿಂತವರು, ಮೌಲ್ಯದೊಂದಿಗೆ ಬದುಕಿದವರು. ಅವರು ಹಚ್ಚಿಟ್ಟು ಹೋದ ನೆನಪೆಂಬ ದೀಪ ಎದೆಯಲ್ಲಿ ಇಂದಿಗೂ ಹಾಗೇ ಬೆಳಗುತ್ತಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT